ಮಣಿಪುರ: ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ವಿಶ್ವಸಂಸ್ಥೆ; ತಿರಸ್ಕರಿಸಿದ ಭಾರತ!
ನವದೆಹಲಿ: ಮಣಿಪುರದ ಮೇಲಿನ ವಿಶ್ವಸಂಸ್ಥೆಯ ಆರೋಪಗಳನ್ನು ತಳ್ಳಿಹಾಕಿದ ಭಾರತ, ಅವು “ಅನಗತ್ಯ, ಸುಳ್ಳು ಮತ್ತು ಊಹೆಗಳನ್ನು ಆಧರಿಸಿವೆ” ಎಂದು ಹೇಳಿದ್ದು, ಅಲ್ಲಿ ಶಾಂತಿ ನೆಲೆಸಿರುವುದಾಗಿಯೂ ಹೇಳಿದೆ.
ಮಣಿಪುರದ ಪರಿಸ್ಥಿತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯ ವಿಶೇಷ ಸಮಿತಿಯು ಪ್ರಕಟಿಸಿದ ವರದಿಯಲ್ಲಿ, “ಮಣಿಪುರದಲ್ಲಿ ತೀವ್ರ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮನೆಗಳನ್ನು ಸುಡುವುದು, ಜನರನ್ನು ಸ್ಥಳಾಂತರಿಸುವುದು, ಲೈಂಗಿಕ ಕಿರುಕುಳ, ತೊಂದರೆ ಮುಂತಾದ ತೀವ್ರ ಸಂಕಷ್ಟದಲ್ಲಿ ಜನ ಬದುಕುತ್ತಿದ್ದಾರೆ” ಎಂದು ಹೇಳಿದೆ.
ಅದಕ್ಕೆ ಪ್ರತ್ಯುತ್ತರ ನೀಡಿರುವ ಭಾರತ, “ಮಣಿಪುರದಲ್ಲಿ ಶಾಂತಿ ಮತ್ತು ಸ್ಥಿರತೆ ಇದೆ. ಇದನ್ನು ಮುಂದುವರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿಶ್ವಸಂಸ್ಥೆಯ ಅಭಿಪ್ರಾಯಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಈ ಅಭಿಪ್ರಾಯ ತಪ್ಪಾಗಿದೆ. ಊಹೆಯ ಆಧಾರದ ಮೇಲೆ ನಿರ್ಧರಿಸಲಾಗಿದೆ. ಇದು ಅನಗತ್ಯವಾದದ್ದು. ಮಣಿಪುರದ ಪರಿಸ್ಥಿತಿ ಮತ್ತು ಭಾರತ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿಶ್ವಸಂಸ್ಥೆ ಅರ್ಥ ಮಾಡಿಕೊಳ್ಳುತ್ತಿಲ್ಲ.” ಎಂದು ಹೇಳಿದೆ.