ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು!
ಮೈಸೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ಸ್ವಂತ ಲಾಭಕ್ಕೆ ಹೊರತು ಜನರ ಹಾಗೂ ನಾಡಿನ ಹಿತದೃಷ್ಟಿಯಿಂದ ಅಲ್ಲ ಎಂದು ಇಂದು (ಸೆ.26) ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಬಂದ್ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ನ್ಯಾಯಾಲಯ ಯಾವುದೇ ಸಭೆ, ಮೆರವಣಿಗೆಯನ್ನು ನಡೆಸಬಾರದು, ಪ್ರತಿಭಟನೆ ಮಾಡಬಾರದು ಎಂದು ಹೇಳಿದೆ. ನಾವು ನಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವಾಗ ಇತರರ ಮೂಲಭೂತ ಹಕ್ಕುಗಳನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.
ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಆದೇಶ ಮಾಡಲಾಗಿದೆ. ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಡಿಎಂಕೆ ‘ಬಿ ಟೀಮ್’ ಎಂಬ ಬಿಜೆಪಿ ಆರೋಪ ರಾಜಕೀಯಪ್ರೇರಿತವಾದುದ್ದು. ಡಿಎಂಕೆ ತಮಿಳುನಾಡಿನವರು. ಬಿಜೆಪಿ ಪಕ್ಷ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅವರನ್ನು ಏನೆಂದು ಹೇಳಬೇಕು? ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸಂತೋಷದ ವಿಷಯ. ಅದನ್ನು ನಾನು ಸ್ವಾಗತಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಸುಳ್ಳು ಎಂದರು.
ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ
ರಾಜ್ಯ ಸರ್ಕಾರ ಈ ರಾಜ್ಯದ ರೈತರ ಹಾಗೂ ರಾಜ್ಯದ ಹಿತರಕ್ಷಣೆಗೆ ಯಾವತ್ತೂ ಹಿಂದೆ ಬಿದ್ದಿಲ್ಲ; ಬೀಳುವುದೂ ಇಲ್ಲ. ನಮಗೆ ಅಧಿಕಾರ ಮುಖ್ಯವಲ್ಲ; ರಾಜ್ಯದ ಜನರ ಹಿತ ಮುಖ್ಯ. ಇದರಲ್ಲಿ ನಾವು ಬಲವಾದ ನಂಬಿಕೆ ಇಟ್ಟುಕೊಂಡಿರುವವರು. ಜನರು ಬಂದ್ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಬಂದ್, ಮೆರವಣಿಗೆ, ಪ್ರತಿಭಟನೆ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಪ್ರತಿಭಟನೆ ಮಾಡುವವರು ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಸಂಕಷ್ಟ ಸೂತ್ರ ರೂಪಿಸಲು ನಾವು ಒತ್ತಡ ಹೇರುತ್ತಿದ್ದೇವೆ. ಏಕೆಂದರೆ, ಮಳೆ ಕೈಕೊಟ್ಟ ಸಂದರ್ಭದಲ್ಲಿ ಎರಡೂ ಕಡೆ ಸಂಕಷ್ಟ ಶುರುವಾಗುತ್ತದೆ. ಅಂಥ ಸಂದರ್ಭದಲ್ಲಿ ನಾವು ಸಂಕಷ್ಟ ಹಂಚಿಕೊಳ್ಳಬೇಕು. ಇಂತಹ ಸನ್ನಿವೇಶದಲ್ಲಿ ನೀರು ಹಂಚಿಕೆಯ ವಿಚಾರದಲ್ಲಿ ಸಂಕಷ್ಟ ಸೂತ್ರವಿರಬೇಕು. ಮತ್ತೊಂದು ಪರಿಹಾರವೆಂದರೆ, ಮೇಕೆದಾಟು ಯೋಜನೆ ಅನುಷ್ಠಾನ. ಈ ಜಲಾಶಯವಿದ್ದಿದ್ದರೆ 67 ಟಿಎಂಸಿ ನೀರು ಇರುತ್ತಿದ್ದು, ಅಲ್ಲಿ ನೀರಿದ್ದರೆ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತಿತ್ತು. ಈ ಜಲಾಶಯದಿಂದ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು ಎಂಬುದನ್ನು ಒತ್ತಿ ಹೇಳಿದರು.
ಕೇಂದ್ರದ ತಜ್ಞರು ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆಯನ್ನು ವಾಸ್ತವವಾಗಿ ಪರಿಶೀಲಿಸುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಜನತಾದಳದ ವರಿಷ್ಠರಾದ ದೇವೇಗೌಡರು, ಈ ಬಗ್ಗೆ ಭೇಟಿಯಾಗಿದ್ದು, ಕೇಂದ್ರದೊಂದಿಗೆ ಅವರ ಹೊಸ ಸ್ನೇಹದಿಂದ ಪರಿಹಾರ ದೊರೆಯಬಹುದೇ ನೋಡಬೇಕಿದೆ. ರಾಜ್ಯ ಸರ್ಕಾರ ಪರಿಹಾರ ಸೂತ್ರ ಕೋರಿ ಬರೆದಿರುವ ಪತ್ರಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ, ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.
ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪ್ರಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸಂಕಷ್ಟದ ಸಮಯದಲ್ಲಿ ಆ ರಾಜ್ಯಕ್ಕೆ ನೀರು ಬಿಡುವ ಪ್ರಮಾಣ ತಿಳಿಸುವ ಸಂಕಷ್ಟ ಸೂತ್ರ ಇನ್ನೂ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಸೌಹಾರ್ದ ಇತ್ಯರ್ಥಕ್ಕೆ ಬರುವುದೇ ಉತ್ತಮ. ಆದ್ದರಿಂದ ಕಾವೇರಿ ವಿವಾದದ ಇತ್ಯರ್ಥಕ್ಕೆ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. ಕಾವೇರಿ ವಿಷಯದ ವಾದಮಂಡನೆಗೆ ಮೊದಲಿನಿಂದಲೂ ಇರುವ ಕಾನೂನೂ ತಂಡವೇ ಈಗಲೂ ಇದ್ದು, ಎಲ್ಲ ಪಕ್ಷದ ಸರ್ಕಾರದ ಅವಧಿಯಲ್ಲಿ ಇದ್ದ ತಂಡವೇ ಆಗಿದೆ ಎಂದು ಪ್ರತಿಕ್ರಿಯಿಸಿದರು.