ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ: ತನ್ನ ನಿಲುವನ್ನು ಬದಲಿಸಿಕೊಂಡ ಚೀನಾ! » Dynamic Leader
November 23, 2024
ವಿದೇಶ

ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ: ತನ್ನ ನಿಲುವನ್ನು ಬದಲಿಸಿಕೊಂಡ ಚೀನಾ!

ಬೀಜಿಂಗ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಲ್ಲಿ ಮೌನವಾಗಿದ್ದ ಚೀನಾ ಇದೀಗ ತನ್ನ ನಿಲುವನ್ನು ಬದಲಿಸಿದ್ದು, “ಇಸ್ರೇಲ್ ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ” ಎಂದು ಹೇಳಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ 18ನೇ ದಿನವೂ ಮುಂದುವರಿದಿದೆ. ಈ ದಾಳಿಯ ಪ್ರಾರಂಭದಿಂದಲೂ, ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ದೇಶಗಳು ಇಸ್ರೇಲನ್ನು ಬೆಂಬಲಿಸುತ್ತಾ ಹಮಾಸ್ ಹೋರಾಟಗಾರರನ್ನು ಖಂಡಿಸುತ್ತಾ ಬಂದಿವೆ. ಆದರೆ ಈ ವಿಚಾರದಲ್ಲಿ ಚೀನಾ ಯಾರನ್ನೂ ಬೆಂಬಲಿಸದೆ ದೂರವೇ ಉಳಿದಿತ್ತು.

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ಯಾಲೆಸ್ತೀನ್ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಅರಬ್ ರಾಷ್ಟ್ರಗಳು ಮತ್ತು ಈಜಿಪ್ಟ್ ಜೊತೆ ಸೇರಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಅಮಾಯಕರನ್ನು ಕೊಂದ ಹಮಾಸ್ ಭಯೋತ್ಪಾದಕರನ್ನು ಖಂಡಿಸಬೇಕು ಎಂದು ಅಮೆರಿಕಾ ಸಂಸದರು ಚೀನಾವನ್ನು ಒತ್ತಾಯಿಸುತ್ತಾ ಬಂದರು. ಇಸ್ರೇಲ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿತ್ತು.

ಇದರ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, “ಪ್ರತಿಯೊಂದು ರಾಷ್ಟ್ರಕ್ಕೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಅದೇ ಸಮಯದಲ್ಲಿ, ನಾವು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಮುಗ್ಧ ಜನರನ್ನು ರಕ್ಷಿಸಬೇಕು. ಯುದ್ಧದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅಲ್ಲಿ ಪರಿಸ್ಥಿತಿ ಕೆಟ್ಟಿರುವುದು ಬೇಸರವಾಗಿದೆ. ಅಮಾಯಕರು ಸಂಕಷ್ಟಕ್ಕೆ ಸಿಲುಕಿರುವುದನ್ನು ನಾನು ಖಂಡಿಸುತ್ತೇನೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ವಿರುದ್ಧವೂ ಪ್ರತಿಭಟಿಸುತ್ತೇನೆ” ಎಂದು ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇದೇ 26 ರಿಂದ 28 ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹಮಾಸ್ ಸಂಘಟನೆಯನ್ನು ಚೀನಾ ಖಂಡಿಸಿರುವುದು ಗನಾರ್ಹ.

Related Posts