ಬೆಂಗಳೂರು: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಹಠಾತ್ ಕಾರು ಸ್ಫೋಟ ನಿಜಕ್ಕೂ ದುಃಖಕರ ಕ್ಷಣ ಎಂದು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೊನ್ನೆ (10-11-2025) ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರೊಂದು ಭೀಕರ ಶಬ್ದದೊಂದಿಗೆ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಹತ್ತಿರದ ಒಂದು ವಾಹನ ನಾಲ್ಕು ಮೋಟಾರ್ ಸೈಕಲ್ ಬೆಂಕಿಗೆ ಆಹುತಿಯಾದವು. ಈ ಅನಿರೀಕ್ಷಿತ ಘಟನೆಯು ಆ ಪ್ರದೇಶದಲ್ಲಿ ನಿಂತಿದ್ದವರನ್ನು ಮತ್ತು ರಸ್ತೆಯಲ್ಲಿ ಸಾಗುತ್ತಿದ್ದವರನ್ನು ಬೆಚ್ಚಿಬೀಳಿಸಿತು. ಈ ಭೀಕರ ಘಟನೆಯಲ್ಲಿ ಇದುವರೆಗೂ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಗುರುತುಗಳು ತಕ್ಷಣಕ್ಕೆ ಲಭ್ಯವಿಲ್ಲ. 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ಡಿ.ಕೆ.ಮೋಹನ್ ಬಾಬು ಅವರು ತಮ್ಮ ‘ಎಕ್ಸ್’ ಸಾಮಾಜಿಕ ಜಾಲತಾಣ ಸೈಟ್ ನಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ, “ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಹಠಾತ್ ಕಾರು ಸ್ಫೋಟ ನಿಜಕ್ಕೂ ದುಃಖಕರ ಕ್ಷಣ. ಈ ದುರಂತ ಘಟನೆಯಲ್ಲಿ ಅಮಾಯಕರ ಜೀವಗಳು ಬಲಿಯಾಗಿ, ಅನೇಕರು ಗಾಯಗೊಂಡಿದ್ದು, ಸಂತ್ರಸ್ತ ಕುಟುಂಬಗಳೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇವೆ” ಎಂದು ಹೇಳಿದ್ದಾರೆ.













