ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
January 2023 » Page 3 of 5 » Dynamic Leader
November 21, 2024
Home 2023 January (Page 3)
ದೇಶ

ಹೊಸದಿಲ್ಲಿ: ಕಾಶ್ಮೀರದಲ್ಲಿ ಭಾರತ ಜೋಡೋ ಯಾತ್ರೆ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲವೆಡೆ ಪಾದಯಾತ್ರೆಯನ್ನು ತಪ್ಪಿಸಿ, ವಾಹನದಲ್ಲಿ ಹೋಗುವಂತೆ ಕೇಂದ್ರ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ ಎಂಬ ವರದಿಗಳು ಹೊರಬಿದ್ದಿವೆ. ರಾಹುಲ್ ಗಾಂಧಿ ಅವರ ಪ್ರಯಾಣದ ಮಾರ್ಗ ಮತ್ತು ರಾತ್ರಿಯ ವಾಸ್ತವ್ಯದ ಭದ್ರತಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ವರ್ಷ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಿಂದ ಭಾರತ ಜೋಡೋ ಯಾತ್ರೆ ಆರಂಭಿಸಿದ್ದರು. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ. ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಪಂಜಾಬ್, ಹರಿಯಾಣ ಮುಂತಾದ ಹಲವು ರಾಜ್ಯಗಳಲ್ಲಿ ಯಾತ್ರೆ ಕೈಗೊಂಡಿರುವ ಅವರು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ.

ಜನವರಿ 19ರಂದು ರಾಹುಲ್ ಗಾಂಧಿ ಲಕ್ಕನ್‌ಪುರ ಪ್ರವೇಶಿಸಲಿದ್ದಾರೆ. ರಾತ್ರಿ ಅಲ್ಲೇ ಇದ್ದು ಮರುದಿನ ಬೆಳಗ್ಗೆ ಕಥುವಾಗೆ ಹೊರಡುತ್ತಾರೆ. ನಂತರ ರಾತ್ರಿ ಚಟ್ವಾಲ್ ನಲ್ಲಿ ತಂಗುತ್ತಾರೆ. ಜನವರಿ 21 ರಂದು ಬೆಳಿಗ್ಗೆ ಹೀರಾನಗರದಿಂದ ಡ್ಯೂಕರ್ ಹವೇಲಿ ವರೆಗೆ ಪಾದಯಾತ್ರೆ ನಡೆಯಲಿದೆ. ಜನವರಿ 22 ರಂದು ವಿಜಯಪುರದಿಂದ ಸತ್ವಾರಿಗೆ ಪಾದಯಾತ್ರೆ ಮುನ್ನಡೆಯಲಿದೆ.

ಜನವರಿ 25 ರಂದು ರಾಹುಲ್ ಗಾಂಧಿ ಅವರು ಕಾಶ್ಮೀರದ ಬನಿಹಾಲ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ, ನಂತರ ಅನಂತನಾಗ್ ಜಿಲ್ಲೆಯ ಮೂಲಕ ಪ್ರಯಾಣಿಸಿ 2 ದಿನಗಳಲ್ಲಿ ಶ್ರೀನಗರವನ್ನು ತಲುಪಲಿದ್ದಾರೆ. ಶ್ರೀನಗರಕ್ಕೆ ಭೇಟಿ ನೀಡಿದಾಗ ರಾಹುಲ್ ಅವರ ಜೊತೆಯಲ್ಲಿ ಅತ್ಯಂತ ಸೀಮಿತ ಸಂಖ್ಯೆಯ ಜನರು ಮಾತ್ರ ಭಾಗವಹಿಸಬೇಕೆಂದು ಭದ್ರತಾ ಸಂಸ್ಥೆಗಳು ಸೂಚಿಸಿರುವುದಾಗಿ ಹೇಳಲಾಗುತ್ತಿದೆ.

ಕೆಲ ರಸ್ತೆಗಳು ಉದ್ವಿಗ್ನವಾಗಿರುವುದು ಗೊತ್ತಿರುವುದರಿಂದ ಮೆರವಣಿಗೆ ಮಾಡುವ ಬದಲು ಕಾರಿನಲ್ಲಿ ಹೋಗುವಂತೆ ರಾಹುಲ್ ಗಾಂಧಿಗೆ ಸೂಚಿಸಲಾಗಿದೆಯಂತೆ.

ಜನವರಿ 30 ರಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದ್ದು, ಅಲ್ಲಿ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಪೂರ್ಣಗೊಳ್ಳಲಿದೆ.

ಈ ಸಭೆಯಲ್ಲಿ ಆಮ್ ಆದ್ಮಿ ಪಕ್ಷ, ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ, ವೈಎಸ್‌ಆರ್ ಕಾಂಗ್ರೆಸ್, ಬಿಜು ಜನತಾ ದಳ, ಅಕಾಲಿದಳ, ಎಐಎಡಿಎಂಕೆ ಮತ್ತು ಓವೈಸಿ ಅವರ ಎಐಎಂಐಎಂಗೆ ಆಹ್ವಾನ ನೀಡಬಾರದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯ ಸುರಕ್ಷತೆಗೆ ಸಂಬಂಧಿಸಿದ ಸೂಚನೆಗಳು ಬಿಡುಗಡೆ ಮಾಡಲಾಗಿದೆ.

Z+ ಭದ್ರತೆ: ರಾಹುಲ್ ಗಾಂಧಿಗೆ ಈಗ Z+ ವರ್ಗದ ಭದ್ರತೆ ನೀಡಲಾಗಿದೆ. ಅದರಂತೆ 8 ರಿಂದ 9 ಕಮಾಂಡೋಗಳು ದಿನದ 24 ಗಂಟೆಯೂ ಅವರ ಸುತ್ತ ಕಾವಲು ಕಾಯಲಿದ್ದಾರೆ. ಕಳೆದ ತಿಂಗಳು ರಾಹುಲ್ ಗಾಂಧಿ ಅವರು ತಮ್ಮ ಯಾತ್ರೆಯ ಮಾರ್ಗದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂಬುದು ಗಮನಾರ್ಹ.

ದೇಶ

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಆಮ್ ಆದ್ಮಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕರು ಇಂದು ದೆಹಲಿ ವಿಧಾನಸಭೆಗೆ ಮಾಸ್ಕ್ ಧರಿಸಿ ಆಕ್ಷಿಜೆನ್ ಸಿಲಿಂಡರ್ ನೊಂದಿಗೆ ಬಂದಿದ್ದರು.

ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಅನೇಕ ಜನರು ಉಸಿರಾಟದ ತೊಂದರೆ ಮತ್ತು ಹೃದಯದ ತೊಂದರೆಗಳಿಂದ ಬಳಲುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ದೆಹಲಿ ವಿಧಾನಸಭೆ ನಡೆಯಿತು. ಆಗ ಬಿಜೆಪಿ ಶಾಸಕರು ಮುಖ ಕವಚದೊಂದಿಗೆ ಕೈಯಲ್ಲಿ ಸಣ್ಣ ಆಮ್ಲಜನಕ ಸಿಲಿಂಡರ್ ಹಿಡಿದು ವಿಧಾನಸಭೆಗೆ ಬಂದು ಕೋಲಾಹಲವನ್ನು ಎಬ್ಬಿಸಿದರು.

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದನ್ನುಖಂಡಿಸಲು ಸಿಲಿಂಡರ್ ಸಮೇತ ವಿಧಾನಸಭೆಗೆ ಬಂದಿರುವುದಾಗಿ ಅವರು ಹೇಳಿದರು.

ದೆಹಲಿಯ ಸಮೀಪವಿರುವ ಪಂಜಾಬ್ ರಾಜ್ಯದಲ್ಲಿ ಕೋಲುಗಳನ್ನು ಸುಡುವುದರಿಂದ ವಾಯುಮಾಲಿನ್ಯ ಪರಿಸ್ಥಿತಿಯು ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ನಡೆದುಕೊಂಡು ಹೋಗಲು ಸಹ ಸಾಧ್ಯವಿಲ್ಲ. ಕೋಲು ಸುಡುವುದರಿಂದ ವಾಯು ಗುಣಮಟ್ಟ ಸೂಚ್ಯಂಕ (AQI) ಮಟ್ಟಕ್ಕೆ ಏರಿಕೆಯಾಗಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿಯ ಗಾಳಿಯ ಗುಣಮಟ್ಟ ಪ್ರತಿವರ್ಷವು ಅಪಾಯಕಾರಿ ಮಟ್ಟ ತಲುಪುತ್ತದೆ. ದೆಹಲಿಯ ಸುತ್ತಲಿನ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲಿ ಗೋಧಿ ಬೆಳೆದ ನಂತರ ಹುಲ್ಲುಗಳನ್ನು ಸುಡುವುದರಿಂದ, ಸಾರಿಗೆಯಿಂದ ಹೊರಸೂಸುವಿಕೆ, ಇತರ ಕೈಗಾರಿಕೆಗಳ ಹೊರಗಿನ ಕಲ್ಲಿದ್ದಲು ಸ್ಥಾವರಗಳು, ತೆರೆದ ಜಾಗದಲ್ಲಿ ಕಸವನ್ನು ಸುಡುವುದು ಮತ್ತು ಧೂಳಿನಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ.

ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಬಿಜೆಪಿಯವರ ಆರೋಪವಾಗಿದೆ. ಅದಕ್ಕಾಗಿ ಈ ರೀತಿಯ ವಿನೂತನವಾದ, ಜನರ ಗಮನ ಸೆಳೆಯುವ ಗುರುತರವಾದ ಪ್ರತಿಭಟನೆಗಳನ್ನು ಬಿಜೆಪಿ ಪಕ್ಷವು ಮಾಡುತ್ತಿದೆ.

ಬೆಂಗಳೂರು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್  ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರನ್ನು ಆರಂಭಿಸಿದ್ದಾರೆ. ಮತದಾರರನ್ನು ಸೆಳೆಯಲು ಹೊಸ ಭರವಸೆಗಳನ್ನು ನೀಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂಬ ಭರವಸಯೆನ್ನು ನೀಡಿ ರಾಜ್ಯದ ಜನರಿಗೆ ಅಚ್ಚರಿಯನ್ನು ಕೊಟ್ಟರು. ಇದೀಗ ಗೃಹಿಣಿಯರಿಗೆ ಮಾಸಿಕ 2,000 ರೂ ನೀಡುವುದಾಗಿ ಪ್ರಿಯಾಂಕಾ ಗಾಂಧಿ ಮೂಲಕ ರಾಜ್ಯದ ಮಹಿಳೆಯರಿಗೆ ವಾಗ್ದಾನ ಮಾಡಿದ್ದಾರೆ.   

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರು ಅರಮನೆ ಮೈದಾನದಲ್ಲಿ ‘ನಾ ನಾಯಕಿ’ ಎಂಬ ಶೀರ್ಷಿಕೆಯಡಿ ಇಂದು ಮಹಿಳಾ ಸಮಾವೇಶವನ್ನು ಆಯೋಜಿಸಿತ್ತು. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಅಭ್ಯುದಯಕ್ಕಾಗಿ ಮನೆಯ ಮುಖ್ಯಸ್ಥರಿಗೆ ತಿಂಗಳಿಗೆ 2000 ಹಾಗೂ ವರ್ಷಕ್ಕೆ 24000 ರೂಪಾಯಿ ನೀಡುವುದಾಗಿ ಭರವಸೆ ನೀಡಿದರು.

‘ಗ್ರಹ ಲಕ್ಷ್ಮಿ’ ಎಂಬ ಈ ಯೋಜನೆಯಡಿ 1.5 ಕೋಟಿ ಮನೆಯ ಮುಖ್ಯಸ್ಥರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ’ ಎಂದು ಕರ್ನಾಟಕ ಕಾಂಗ್ರೆಸ್ ಸಮಿತಿ ಹೇಳಿಕೊಂಡಿದೆ. ಪ್ರತಿ ಮನೆಯ ಮುಖ್ಯಸ್ಥರಿಗೂ ದೊರೆಯುವ ಈ ಆರ್ಥಿಕ ನೆರವು ಬೆಲೆ ಏರಿಕೆ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಹೊರೆಯಿಂದ ಹೊರಬರಲು ನೆರವಾಗಲಿದೆ ಎನ್ನಲಾಗುತ್ತಿದೆ. ‘ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ’ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕರ್ನಾಟಕದ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಈಗಾಗಲೇ ಭರವಸೆ ನೀಡಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಎರಡನೇ ಭರವಸೆ ಇಂದು ಬಿಡುಗಡೆಯಾಗಿದೆ.

‘2008 ರಿಂದ 2015ರ ತನಕ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಇಂತಹ ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೊಲಿಸಿದ್ದರು. ಬಿಜೆಪಿಯು ಇದನ್ನೆಲ್ಲ ‘ಸುಳ್ಳು ಭರವಸೆಗಳು’ ಎಂದು ಹೇಳುತ್ತಿರುವುದನ್ನು ಯಾರೂ ನಂಬಲು ಸಾಧ್ಯವಿಲ್ಲ’ ಎಂಬ ಮಾತುಗಳು ಜನರಲ್ಲಿ ಪ್ರಭಲವಾಗಿ ಕೇಳಿಬರುತ್ತಿದೆ.  

ದೇಶ

‘ಆಡಳಿತಾರೂಢ ಬಿಜೆಪಿ ಪಕ್ಷವು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ತಮ್ಮ ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದೆ’ ಎಂದು ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ನೇಮಕವನ್ನು ಕೊಲಿಜಿಯಂ ಮುಖಾಂತ ಮಾಡಲಾಗುತ್ತದೆ. ಕೊಲಿಜಿಯಂನಲ್ಲಿರುವ ನ್ಯಾಯಾಧೀಶರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಹೊಸ ನ್ಯಾಯಾಧೀಶರನ್ನು ನೇಮಕ ಮಾಡುತ್ತದೆ. ಅದರಂತೆ ದೇಶದ ವಿವಿಧ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದಾಗಿ ಹಲವು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕವಾಗುತ್ತಿಲ್ಲ.

ಇದರಿಂದ ನ್ಯಾಯಾಂಗ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಬೆಳಕಿಗೆ ಬಂದಿತು. ಹಾಗಾಗಿಯೇ ‘ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕಡೆಗಣಿಸಿದ್ದರು’ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಮುಖ್ಯನ್ಯಾಯಮೂರ್ತಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸದೇ ಇರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂಬುದು ಗಮನಾರ್ಹ.

ಈ ಹಿನ್ನಲೆಯಲ್ಲಿ ಕಳೆದ ನವೆಂಬರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೊಲಿಜಿಯಂ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದರು. ‘ಕೊಲಿಜಿಯಂ ಪದ್ಧತಿಯು ಮೂಲಭೂತವಾಗಿ ದೋಷಪೂರಿತವಾಗಿದೆ’ ಎಂದು ಟೀಕಿಸಿದ ಅವರು, ‘ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ತಮಗೆ ತಿಳಿದಿರುವ ವಕೀಲರನ್ನು ನ್ಯಾಯಾಧೀಶರನ್ನಾಗಿ ನಾಮನಿರ್ದೇಶನ ಮಾಡುತ್ತಾರೆ ಮತ್ತು ಅದೇ ರೀತಿ ತಮಗೆ ತಿಳಿದಿರುವ ನ್ಯಾಯಾಧೀಶರನ್ನು ಬಡ್ತಿಗೆ ಶಿಫಾರಸು ಮಾಡುತ್ತಾರೆ’ ಎಂದು ಆರೋಪಿಸಿದ್ದಾರೆ.

ತರುವಾಯ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಕೂಡ ‘ನ್ಯಾಯಾಂಗವು ಸಂಸತ್ತನ್ನು ನಿಯಂತ್ರಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ‘ಆಡಳಿತಾರೂಢ ಬಿಜೆಪಿ ಪಕ್ಷವು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದೆ’ ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್, ‘ನ್ಯಾಯಾಂಗವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆ. ಮತ್ತೊಂದು ಕಡೆ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ರಚನೆಯಾಗುವ ಪರಿಸ್ಥಿತಿಯನ್ನು ಸೃಷ್ಠಿಸುವ ಪ್ರಯತ್ನವನ್ನೂ ಮಾಡುತ್ತಿದೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಪ್ರಕರಣದಲ್ಲಿ ಕೇಶವಾನಂದ ಭಾರತಿ ಅವರ ತೀರ್ಪಿನಲ್ಲಿ ಹೇಳಲಾದ ಮೂಲಭೂತ ರಚನೆಯ ತತ್ವವು ಪ್ರಸ್ತುತ ಕಾಲದಲ್ಲಿ ಬಹಳ ಮುಖ್ಯವಾಗಿದೆ. ಉನ್ನತ ನ್ಯಾಯಾಂಗದ ನೇಮಕಾತಿಗಳ ಬಗ್ಗೆ ಸರ್ಕಾರವು ಅಂತಿಮವಾಗಿ ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ರೂಪದಲ್ಲಿ ಪರೀಕ್ಷೆಗೆ ಒಳಗಾಗುವ ಪರಿಸ್ಥಿತಿಯನ್ನು ಸೃಷ್ಟಿಸಲು ಅವರು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾರೆ. ಕಾನೂನು ಸಚಿವರಿಗೆ ನ್ಯಾಯಾಲಯಗಳ ಕಾರ್ಯವೈಖರಿ ಬಗ್ಗೆ ಅರಿವಿಲ್ಲ. ನ್ಯಾಯಾಲಯದ ಕಾರ್ಯವಿಧಾನಗಳ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ.

ಸರ್ಕಾರವು ಎಲ್ಲ ಸಂಸ್ಥೆಗಳನ್ನು (ಸಿಬಿಐ, ಇಡಿ, ಐಟಿ ಮುಂತಾದ) ತಮ್ಮ ವಶಕ್ಕೆ ತೆಗೆದುಕೊಂಡಿದೆ. ನ್ಯಾಯಾಂಗವು ಸ್ವಾತಂತ್ರ್ಯದ ಕೊನೆಯ ಭದ್ರಕೋಟೆಯಾಗಿದೆ. ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕವನ್ನು ಮಾಡುವ ಅಂತಿಮ ನಿರ್ದಾರದ ಅಧಿಕಾರವನ್ನು ಸರ್ಕಾರಕ್ಕೆ ಬಿಟ್ಟರೆ, ಸರ್ಕಾರವು ಈ ಸಂಸ್ಥೆಗಳನ್ನು ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಸಿದ್ಧಾಂತದೊಂದಿಗೆ ಶಾಮೀಲಾಗಿರುವ ವ್ಯಕ್ತಿಗಳಿಂದ ತುಂಬಿಸುತ್ತಾರೆ.

ಅವರು ಸ್ವಾಧೀನಪಡಿಸಿಕೊಂಡಿರುವ ಈ ಸಂಸ್ಥೆಗಳು ಸರ್ಕಾರದ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿವೆ ಅಥವಾ ಅವರಿಗೆ ತಿಳಿದಿರುವ ಕಾರಣಗಳಿಗಾಗಿ ಅವರು ಸರ್ಕಾರವನ್ನು ಮೆಚ್ಚಿಸಲು ಬಯಸುತ್ತಾರೆ ಎಂದು ನಾವು ಭಾವಿಸುತ್ತೇವೆ.

ಮೂಲಭೂತ ರಚನಾತ್ಮಕ ಸಿದ್ಧಾಂತವು ಎಷ್ಟು ಮುಖ್ಯವಾದದ್ದು ಎಂಬುದನ್ನು, ನಮ್ಮ ಜೀವನಕ್ಕೆ ಮೂಲಭೂತವಾದ ವಾಕ್ ಸ್ವಾತಂತ್ರ್ಯ, ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯದಂತಹ ಸಂವಿಧಾನದ ಅಂಶಗಳನ್ನು ಪ್ರಸ್ತಾಪಿಸಿದ ಕೇಶವಾನಂದ ಭಾರತಿಯ ತೀರ್ಪು ಇಂತಹ ಸಮಯದಲ್ಲಿ ಎಷ್ಟು ಸರಿಯಾಗಿದೆ ಎಂಬುದು ನಮಗೆ ಅರಿವಾಗುತ್ತಿದೆ’ ಎಂದು ಅವರು ಹೇಳಿದರು.

ದೇಶ

ನವದೆಹಲಿ: ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರಿಗೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹಾಲಿ ವಿಐಪಿ ಹಜ್ ಕೋಟಾವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಅವರ ಪ್ರಕಾರ, ‘ಪ್ರಧಾನಿ ಮೋದಿ ಅವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹಜ್‌ನಲ್ಲಿ ವಿಐಪಿ ಕೋಟಾವನ್ನು ಕೊನೆಗೊಳಿಸುವ ಮತ್ತು ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯವನ್ನು ಪ್ರಸ್ತಾಪಿಸಿದ್ದರು.

ಯುಪಿಎ ಆಡಳಿತದಲ್ಲಿ ಹಜ್‌ಗೆ ಸಂಬಂಧಿಸಿದಂತೆ ವಿಐಪಿ ಸಂಸ್ಕೃತಿ ಜಾರಿಗೆ ಬಂದಿತ್ತು. ಅದರ ಅಡಿಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಹಜ್ ಸಮಿತಿ ಮತ್ತು ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಎಲ್ಲರಿಗೂ ವಿಶೇಷ ಕೋಟಾವನ್ನು ನೀಡಲಾಯಿತು’ ಎಂದು ಅವರು ಹೇಳಿದರು.

‘ಇದನ್ನು 2012 ರಲ್ಲಿ ಪ್ರಾರಂಭಿಸಿದಾಗ, ಈ ವಿಶೇಷ ಕೋಟಾದ ಅಡಿಯಲ್ಲಿ ಸುಮಾರು 5,000 ಸೀಟುಗಳಿದ್ದವು ಮತ್ತು ಈ ವಿಶೇಷ ವರ್ಗದ ಸೀಟುಗಳನ್ನು ಸರ್ಕಾರದಲ್ಲಿ ಯಾರೋ ತಿಳಿದಿರುವವರ ಶಿಫಾರಸ್ಸಿನ ಮೇರೆಗೆ ನೀಡಲಾಗಿತ್ತು’ ಎಂದೂ ಅವರು ಹೇಳಿದರು.

‘ಮತ್ತು ಯಾವುದೇ ವಲಯದಲ್ಲಿ ಅಂತಹ ವಿಶೇಷ ವರ್ಗೀಕರಣವಿದ್ದರೆ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಲು ಪ್ರಧಾನಿ ಬಯಸುತ್ತಿದ್ದಾರೆ’ ಎಂದು ಇರಾನಿ ಹೇಳಿದರು.

‘ಪ್ರಧಾನಿಯವರ ನಿರ್ಧಾರಗಳನ್ನು ಪ್ರತಿಬಿಂಬಿಸುವ ಸಂಪೂರ್ಣ ಹಜ್ ನೀತಿಯನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು’ ಎಂದೂ ಅವರು ಹೇಳಿದರು.

ವಿದೇಶ

ಶ್ರೀಲಂಕಾ: ಶ್ರೀಲಂಕಾ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಇತರರಿಗೆ ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಶ್ರೀಲಂಕಾದಲ್ಲಿ ಏಪ್ರಿಲ್ 21, 2019 ರಂದು ನಡೆದ ಭಯೋತ್ಪಾದಕ ಬಾಂಬ್ ದಾಳಿಯಲ್ಲಿ 269 ಜನರು ಸಾವನ್ನಪ್ಪಿದರು ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

2019ರ ಏಪ್ರಿಲ್ 21ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಾಕಷ್ಟು ಗುಪ್ತಚರ ಮಾಹಿತಿ ಲಭ್ಯವಿದ್ದರೂ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೂಲಭೂತ ಹಕ್ಕುಗಳ ಅರ್ಜಿಗಳ ತೀರ್ಪು ಇಂದು ಪ್ರಕಟವಾಯಿತು.

ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಇತರರ ವಿರುದ್ಧ ಸಲ್ಲಿಕೆಯಾಗಿದ್ದ ಮೂಲಭೂತ ಹಕ್ಕುಗಳ ಅರ್ಜಿಗಳ ತೀರ್ಪನ್ನು ಇಂದು ಪ್ರಕಟಿಸುವುದಾಗಿ ಹೈಕೋರ್ಟ್ ಇದೇ ಜನವರಿ 5ರಂದು ಪ್ರಕಟಿಸಿತ್ತು. ಅದರಂತೆ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಪ್ಳಗೊಂಡ ವಿಭಾಗೀಯ ನ್ಯಾಯಪೀಠವು ಇಂದು ತೀರ್ಪು ಪ್ರಕಟಿಸಿತು.

ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ, ಮಾಜಿ ಪೊಲೀಸ್ ಮಹಾನಿರೀಕ್ಷಕ ಪೂಜಿತ್ ಜಯಸುಂದರ, ರಾಷ್ಟ್ರೀಯ ಗುಪ್ತಚರ ವಿಭಾಗದ ಮಾಜಿ ನಿರ್ದೇಶಕ ಸಿಸಿರ ಮೆಂಡಿಸ್ ಮತ್ತು ರಾಜ್ಯ ಗುಪ್ತಚರ ವಿಭಾಗದ ಮಾಜಿ ನಿರ್ದೇಶಕ ನಿಲಂತ ಜಯವರ್ಧನ ಅವರು ಈಸ್ಟರ್ ಭಾನುವಾರದ ದಾಳಿಯನ್ನು ತಡೆಯಲು ವಿಫಲರಾಗಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಲಾಗಿದೆ. ಅಲ್ಲದೆ ಸಂತ್ರಸ್ತರಿಗೆ ಪರಿಹಾರವನ್ನು ನೀಡುವಂತೆಯೂ ನ್ಯಾಯಾಲಯ ತಮ್ಮ ಆದೇಶದಲ್ಲಿ ಸೂಚಿಸಿದೆ.

ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ 100 ಮಿಲಿಯನ್, ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋಗೆ 50 ಮಿಲಿಯನ್, ಮಾಜಿ ಪೊಲೀಸ್ ಮಹಾನಿರೀಕ್ಷಕ ಪೂಜಿತ್ ಜಯಸುಂದರ ಮತ್ತು ರಾಷ್ಟ್ರೀಯ ಗುಪ್ತಚರ ಸೇವೆಯ ಮಾಜಿ ಮುಖ್ಯಸ್ಥ ನೀಲಂತ ಜಯವರ್ಧನ ಅವರಿಗೆ 75 ಮಿಲಿಯನ್ ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸಿಸಿರ ಮೆಂಡಿಸ್ ಸಂತ್ರಸ್ತರಿಗೆ 10 ಮಿಲಿಯನ್ ರೂಪಾಯಿ ಪರಿಹಾರ ನೀಡಬೇಕೆಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ದೇಶ ವಿದೇಶ

ನೆವಾರ್ಕ್: ಲಾಸವನ್ನು ಅಂಗೀಕರಿಸುವ ಸಲುವಾಗಿ ಜನವರಿ 11 ರಂದು ಯುನೈಟೆಡ್ ಸ್ಟೇಟ್ಸ್ ನೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಯುನೈಟೆಡ್ ಕೈಲಾಸ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ನ್ಯೂಜೆರ್ಸಿ ನೆವಾರ್ಕ್ ನಗರದಲ್ಲಿ ಜಂಟಿಯಾಗಿ “ದ್ವಿಪಕ್ಷೀಯ ನೀತಿ ಸಂಹಿತೆ ಒಪ್ಪಂದ”ಕ್ಕೆ ಸಹಿ ಮಾಡುವ ಸಂಬ್ರಮವು ನಡೆಯಿತು. ವಿಶ್ವಸಂಸ್ಥೆಯ ಕೈಲಾಶದ ಖಾಯಂ ರಾಯಭಾರಿ ವಿಜಯಪ್ರಿಯಾ ನಿತ್ಯಾನಂದ, ಮೇಯರ್ ಬರಾಕಾ, ಉಪಮೇಯರ್ ಡೆಫ್ರೀಟಾಸ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯೂಜೆರ್ಸಿಯ ಕೈಲಾಸದ ಪ್ರತಿನಿಧಿಗಳೂ ಉಪಸ್ಥಿತರಿದ್ದರು. ಅಮೆರಿಕದ ನೆವಾರ್ಕ್ ನಗರದೊಂದಿಗಿನ ಒಪ್ಪಂದದಲ್ಲಿ, ಸಮುದಾಯವೊಂದರ ಅಭಿವೃದ್ಧಿಗೆ ಅಗತ್ಯವಾದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆ ಪ್ರಾರಂಭ, ವಿಪತ್ತು, ಹವಾಮಾನ ಬದಲಾವಣೆ, ಇತ್ಯಾದಿಗಳ ಪರಿಣಾಮಗಳನ್ನು ಎದುರಿಸಲು ಪರಸ್ಪರ ಸಹಾಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು, ಹಿಂಸೆ, ಬಡತನ, ಅನಕ್ಷರತೆ ಮುಂತಾದ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ನೆವಾರ್ಕ್ ನಗರವು ಅಮೇರಿಕಾದ ನ್ಯೂಜೆರ್ಸಿ ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ ಮತ್ತು ನ್ಯೂಯಾರ್ಕ್ ಮೆಟ್ರೋಪಾಲಿಟನ್ ಪ್ರದೇಶದ ಎರಡನೇ ಅತಿದೊಡ್ಡ ನಗರವಾಗಿದೆ. 2020ರ ಯುನೈಟೆಡ್ ಸ್ಟೇಟ್ಸ್ ಜನಗಣತಿಯ ಪ್ರಕಾರ, ನಗರದ ಜನಸಂಖ್ಯೆಯು 311,549 ಆಗಿರುತ್ತದೆ. ಇದು ದೇಶದ 66ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆಯೂ ಆಗಿದೆ.

ನೆವಾರ್ಕ್ ಅಮೆರಿಕದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಪ್ಯಾಸಾಯಿಕ್ ನದಿಯ ಮುಖಭಾಗದಲ್ಲಿರುವುದರಿಂದ ಈ (ಇದು ನೆವಾರ್ಕ್ ಕೊಲ್ಲಿಗೆ ಸಂಗಮವಾಗುತ್ತದೆ) ನಗರವು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಬಂದರಿನ ಅವಿಭಾಜ್ಯ ಅಂಗವಾಗಿತ್ತದೆ. ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯುನೈಟೆಡ್ ಸ್ಟೇಟ್ಸ್‌ನ ಮೊದಲ ಪುರಸಭೆಯ ವಾಣಿಜ್ಯ ವಿಮಾನ ನಿಲ್ದಾಣವಾಗಿದೆ ಮತ್ತು ಇಂದು ಇದು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಇಂತಹ ಐತಿಹಾಸಿಕವಾದ ಅಮೆರಿಕಾದ ನೆವಾರ್ಕ್ ನಗರದಲ್ಲಿ ಕೈಲಾಸವನ್ನು ಅಂಗೀಕರಿಸುವ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಮಾಡಿರುವುದು ವಿಶೇಷ ಮತ್ತು ಆಶ್ಚರ್ಯವು ಕೂಡ!

ಬೆಂಗಳೂರು

ಮಂಜುಳಾ ರೆಡ್ಡಿ, ವರದಿಗಾರರು

ಬೆಂಗಳೂರು: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಉಪಾಧ್ಯಕ್ಷರಾದ ಶ್ರೀ.ಬಿ.ಎಸ್.ಉಮೇಶ್ ರವರಿಂದ ನೆನ್ನೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಪತ್ರಿಕಾ ಘೋಷ್ಠಿಯನ್ನು ಉದ್ದೆಶಿಸಿ ಮಾತನಾಡಿ ಅವರು, ದಿನಾಕ: 01-04-2006ಕ್ಕೂ ಮೊದಲು ನೇಮಕವಾಗಿ ದಿನಾಂಕ: 01-04-2006ರ ನಂತರ ಅನುದಾನಕ್ಕೊಳಪ್ಪಟ್ಟ ನೌಕರರ ಅನುದಾನಕ್ಕೂ ಪೂರ್ವದ ಸೇವೆಯನ್ನು ಪಿಂಚಣಿಗೆ ಪರಿಗಣಿಸಿ, ನಿವೃತ್ತಿಯಾದ ದಿನಾಂಕದಂದು ವೇತನ ನಿಗದಿಪಡಿಸಿ “ಹಳೆಯ ನಿವೃತ್ತಿ ಪಿಂಚಣಿ” ಯೋಜನೆ ನೀಡಬೇಕು. ಈಗಾಗಲೇ ಬರಿಗೈಯಲ್ಲಿ ನಿವೃತ್ತಿ ಹೊಂದಿರುವ ಕುಟುಂಬಗಳಿಗೆ ಈ ಸೌಲಭ್ಯವನ್ನು ಈ ಕೂಡಲೇ ಜಾರಿಗೆ ತರಬೇಕು.

ಅನುದಾನಿತ ಶಾಲೆ ಕಾಲೇಜುಗಳಲ್ಲಿ ದಿನಾಂಕ: 01-04-2006ರ ನಂತರ ನೇಮಕ ಹೊಂದಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ “ನಿಶ್ಚಿತ ಪಿಂಚಿಣಿ ಸೌಲಭ್ಯ” ನೀಡಬೇಕು. ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯವಿಲ್ಲದೇ ಅನುದಾನಿತ ನೌಕರರಿಗೂ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಅದಕ್ಕಾಗಿ ದಿನಾಂಕ: 14-01-2023 ಮತ್ತು 15-01-2023 ರಂದು ಬೆಂಗಳೂರ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಳೇ ನಿಶ್ಚಿತ ಪಿಂಚಿಣಿ ಯೋಜನೆ ಜಾರಿ ಮಾಡಬೇಕೆಂದು‌ ಒತ್ತಾಯಿಸಿ ಮತ್ತು “ಅನಿರ್ಧಿಷ್ಟ ಅವಧಿ ಧರಣಿ ಮುಷ್ಕರದ 100 ನೇ ದಿನದ ಪ್ರಯುಕ್ತವಾಗಿ ಕುಟುಂಬ ಪರಿವಾರ ಸಮೇತ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ಮಾಡುತ್ತೇವೆ’ ಎಂದು ಉಮೇಷ್ ಅವರು ಸರ್ಕಾರಕ್ಕೆ ಹೆಚ್ಚರಿಕೆ ನೀಡಿದರು.

ದೇಶ

ದೆಹಲಿ: 10 ದಿನಗಳೊಳಗೆ 164 ಕೋಟಿ ರೂಪಾಯಿ ಪಾವತಿಸದಿದ್ದರೆ ಪಕ್ಷದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಆಮ್ ಆದ್ಮಿ ಪಕ್ಷಕ್ಕೆ ನೋಟಿಸ್ ಜಾರಿಮಾಡಲಾಗಿದೆ. ಇದರಿಂದ ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

‘ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ಆಮ್ ಆದ್ಮಿ ಪಕ್ಷ ರಾಜಕೀಯ ಜಾಹೀರಾತುಗಳಿಗೆ ಹಣ ಸುರಿದಿದೆ’ ಎಂದು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಆರೋಪಿಸಿದ್ದಾರೆ. ಸಕ್ಸೇನಾ ಅವರು ಡಿಸಂಬರ್ 20ರಂದು ಪತ್ರವೊಂದನ್ನು ಬರೆದು ಕೂಡಲೇ 97 ಕೋಟಿ ಪಾವತಿಸುವಂತೆ ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್, ‘ರಾಜ್ಯಪಾಲರಿಗೆ ಇಂತಹ ಪತ್ರ ಕಳುಹಿಸುವ ಅಧಿಕಾರವಿಲ್ಲ’ ಎಂದು ಉತ್ತರಿಸಿದ್ದರು.

ಈ ಹಿನ್ನಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಸಚಿವಾಲಯ 10 ದಿನದೊಳಗೆ 164 ಕೋಟಿ ರೂಪಾಯಿ ಪಾವತಿಸದಿದ್ದರೆ ಪಕ್ಷದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ಜಾರಿಮಾಡಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಆಯ್ಕೆಯಾದ ಸಚಿವರು ಮತ್ತು ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.

ಮದ್ಯ ನೀತಿ ಹಾಗೂ ಭ್ರಷ್ಟಾಚಾರದ ದೂರುಗಳ ಬೆನ್ನಲ್ಲೇ ಮತ್ತೆ 164 ಕೋಟಿ ರೂಪಾಯಿ ಸಮಸ್ಯೆ ಭುಗಿಲೆದ್ದು ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ದೇಶ ವಿದೇಶ

ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾದ ಭಾರತೀಯ ಕೆಮ್ಮು ಔಷಧಿಗಳ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ವಿರೋಧ!

ಉತ್ತರ ಪ್ರದೇಶದ ನೋಯ್ಡಾ ಮೂಲದ ಮೆರಿಯನ್ ಬಯೋಟೆಕ್ ಕಂಪನಿಯು ತಯಾರಿಸಿದ ಕೆಮ್ಮಿನ ಔಷಧಿ ‘ಡಾಕ್-1 ಮ್ಯಾಕ್ಸ್’ ಸೇವನೆಯಿಂದ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯವು ಆರೋಪವನ್ನು ಮಾಡಿದೆ. ಅಲ್ಲದೆ, ಈ ಔಷಧದಲ್ಲಿ ಎಥಿಲೀನ್ ಗ್ಲೈಕಾಲ್ ಎಂಬ ರಾಸಾಯನಿಕ ಅಂಶ ಇರುವುದನ್ನು ಪರೀಕ್ಷೆಗೊಳಪಡಿಸಿದ ಸಂದರ್ಭದಲ್ಲಿ ದೃಢಪಟ್ಟಿದೆ ಎಂದು ಸಚಿವಾಲಯವು ಆರೋಪ ಮಾಡಿದೆ.

ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ತಂಡವು ‘ಮರಿಯನ್ ಬಯೋಟೆಕ್’ ತಯಾರಿಸಿದ ‘ಡಾಕ್-1 ಮ್ಯಾಕ್ಸ್’ ಮತ್ತು ‘ಆಂಬ್ರೊನಾಲ್’ ಎಂಬ ಎರಡು ಕೆಮ್ಮು ಔಷಧಿಗಳನ್ನು ಅಧ್ಯಯನ ಮಾಡಿ, ‘ಕೆಮ್ಮಿನ ಎರಡೂ ಔಷಧಿಗಳಲ್ಲಿ ಅಧಿಕ ಪ್ರಮಾಣದ ಎಥಿಲೀನ್ ಗ್ಲೈಕಾಲ್ ರಾಸಾಯನಿಕ ಅಂಶವಿರುವುದರಿಂದ ಎರಡೂ ಔಷಧಗಳು ಮಕ್ಕಳ ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ದೃಢಪಟ್ಟಿದೆ’ ಎಂದು ಪ್ರಕಟಿಸಿದೆ.

ಈಗಾಗಲೇ ಕಳೆದ ಅಕ್ಟೋಬರ್‌ನಲ್ಲಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹರಿಯಾಣದ ಸೋನಿಪತ್‌ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ಸ್‌ ನಲ್ಲಿ ಅನುಮಾನಾಸ್ಪದವಾಗಿ ತಯಾರಿಸಲಾದ ನಾಲ್ಕು ಕೆಮ್ಮಿನ ಔಷಧಿಗಳು ಇದಕ್ಕೆ ಕಾರಣವಾಗಿರಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ.

ಭಾರತದಲ್ಲಿ ತಯಾರಿಸುವ ಕೆಮ್ಮು ಔಷಧಿಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಸಂಸ್ಥೆಯು ವಿಶ್ವವನ್ನು ಕೇಳಿಕೊಂಡಿದೆ. ಈ ಘಟನೆಯಿಂದ ಜಾಗತಿಕವಾಗಿ ಭಾರತೀಯ ಔಷಧಗಳ ಖ್ಯಾತಿಯ ಮೇಲೆ ನಕಾರಾತ್ಮಕವಾದ ಪರಿಣಾಮವನ್ನು ಬೀರಿರುತ್ತದೆ.