ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
January 2023 » Page 4 of 5 » Dynamic Leader
November 23, 2024
Home 2023 January (Page 4)
ವಿದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ಸರ್ಕಾರ ನಡೆಸಿದ ಯುದ್ಧದ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಹಿಂದ ರಾಜಪಕ್ಸೆ ಸೇರಿದಂತೆ ನಾಲ್ವರು ಕೆನಡಾ ಪ್ರವೇಶಿಸುವುದನ್ನು ಕೆನಡಾ ಸರ್ಕಾರ ನಿಷೇಧಿಸಿದೆ. 1983 ರಿಂದ 2009 ರವರೆಗೆ ಎಲ್‌ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಶಸ್ತ್ರ ಯುದ್ಧ ನಡೆದಿತ್ತು. 2009ರಲ್ಲಿ ಶ್ರೀಲಂಕಾ ಸರ್ಕಾರವು ಎಲ್‌ಟಿಟಿಇ ನಾಯಕ ಪ್ರಭಾಕರನ್ ಯುದ್ಧದ ಉತ್ತುಂಗದ ಸಮಯದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರು ಎಂದು ಘೋಷಿಸಿತು.

‘ಯುದ್ಧದ ಸಮಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಮಹಿಂದ ರಾಜಪಕ್ಸೆ ಭಾಗಿಯಾಗಿದ್ದಾರೆ ಎಂದು ಅನೇಕ ಮಾನವ ಹಕ್ಕುಗಳ ಆಯೋಗಗಳು ಶ್ರೀಲಂಕಾ ಸರ್ಕಾರವನ್ನು ಆರೋಪಿಸಿತ್ತು. ಈ ಹಿನ್ನಲೆಯಲ್ಲಿ ಕೆನಡಾದ ವಿಶೇಷ ಆರ್ಥಿಕ ಕ್ರಮಗಳ ಕಾಯ್ದೆಯಡಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಮಹಿಂದ ರಾಜಪಕ್ಸೆ ಸೇರಿದಂತೆ ನಾಲ್ವರ ಪ್ರವೇಶಕ್ಕೆ ಕೆನಡಾ ಸರ್ಕಾರ ನಿರ್ಬಂಧಗಳನ್ನು ವಿಧಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ನಿನ್ನೆ ಘೋಷಿಸಿದ್ದಾರೆ.

Melanie Joly, Minister of Foreign Affairs, Canada

‘ಮತ್ತು ವಿಶೇಷ ಆರ್ಥಿಕ ಕ್ರಮಗಳ ಕಾಯಿದೆಯಡಿ, ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಮತ್ತು ಪೌರತ್ವ ಹಾಗೂ ನಿರಾಶ್ರಿತರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಕೆನಡಾಕ್ಕೆ ಪ್ರವೇಶಿಸದಂತೆ ಅವರನ್ನು ನಿರ್ಬಂಧಿಸಬಹುದು’ ಎಂದು ಮೆಲಾನಿ ಜೋಲಿ ಹೇಳಿದರು.

ಶ್ರೀಲಂಕಾದಲ್ಲಿ ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಜನರು ನರಳುತ್ತಿರುವುದನ್ನು ಮತ್ತು ಆಡಳಿತಗಾರರು ಪಲಾಯನ ಮಾಡುತ್ತಿರುವುದನ್ನು ಈ ಜಗತ್ತೆ ವಿಶ್ಮಯದಿಂದ ನೋಡಿದೆ. ಈ ಪರಿಸ್ಥಿತಿಯಲ್ಲಿ ಕೆನಡಾ ಸರ್ಕಾರದ ಈ ಘೋಷಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

‘ಕೆನಡಾ ಸರ್ಕಾರವು ಶ್ರೀಲಂಕಾವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕಳೆದ ನಾಲ್ಕು ದಶಕಗಳಿಂದಲೂ ಶ್ರೀಲಂಕಾದ ಜನರು ಸಶಸ್ತ್ರ ಸಂಘರ್ಷಗಳು, ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಿಂದಾಗಿ ಅಪಾರವಾಗಿ ಬಳಲುತ್ತಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನ್ಯಾಯವನ್ನು ಕಾಪಾಡಲು ಕೆನಡಾ ಬದ್ಧವಾಗಿದೆ’.

‘ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಅಂತಾರಾಷ್ಟ್ರೀಯ ಶಿಕ್ಷೆಯನ್ನು ತರಲು ಕೆನಡಾ ಇಂದು ನಿರ್ಣಾಯಕ ಕ್ರಮ ಕೈಗೊಂಡಿದೆ. ದೇಶೀಯ ಬಿಕ್ಕಟ್ಟನ್ನು ಪರಿಹರಿಸಲು ಅಂತಾರಾಷ್ಟ್ರೀಯ ನೆರವಿನ ಮೂಲಕ ಶಾಂತಿ ಮತ್ತು ಅಭಿವೃದ್ಧಿಗೆ ಶ್ರೀಲಂಕಾದ ಮಾರ್ಗವನ್ನು ಬೆಂಬಲಿಸಲು ಕೆನಡಾ ಸಿದ್ಧವಾಗಿದೆ’. ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1,800 ಸಿ.ಆರ್‌.ಪಿ.ಎಫ್. ಸಿಬ್ಬಂದಿಯನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚಾಗಲು ಕಾರಣವೇನು?

ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಘಟನೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರವು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 1,800 ಸೈನಿಕರನ್ನು ಹೆಚ್ಚುವರಿಯಾಗಿ ಅಲ್ಲಿಗೆ ಕಳುಹಿಸಿಕೊಟ್ಟಿದೆ.

ಕಳೆದ ಕೆಲವು ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಜಿಲ್ಲೆಗಳಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಅರೆಸೇನಾ ಪಡೆಗಳು ಮಾತ್ರವಲ್ಲದೆ ಮಕ್ಕಳು ಸೇರಿದಂತೆ ಅಮಾಯಕ ನಾಗರಿಕರು ಸಹ ಸಾವನ್ನಪ್ಪಿದ್ದಾರೆ.

2023ರ ಮೊದಲ ದಿನ, ಜನವರಿ 1 ರಂದು, ಸುಮಾರು 7 ಗಂಟೆಗೆ, ರಾಜೌರಿಯಲ್ಲಿ ಒಂದು ಭಯಾನಕ ಘಟನೆ ನಡೆಯಿತು. ಅಲ್ಲಿನ ಅರಣ್ಯದಿಂದ ಬಂದೂಕು ಹಿಡಿದು ಬಂದ ಇಬ್ಬರು ಭಯೋತ್ಪಾದಕರು ಅಲ್ಲಿದ್ದ ಮೂರು ಮನೆಗಳಿಗೆ ನುಗ್ಗಿ ನಾಲ್ವರು ಅಮಾಯಕ ನಾಗರಿಕರನ್ನು ಕೊಂದು ಹಾಕಿದರು. ಮನೆಯೊಳಗಿದ್ದವರ ಆಧಾರ್ ಕಾರ್ಡ್ ಪರಿಶೀಲಿಸಿ ಅವರ ಧರ್ಮವನ್ನು ಪತ್ತೆ ಹಚ್ಚಿ ಗುಂಡಿಕ್ಕಿ ಕೊಂದಿದ್ದಾರೆ.

ಹತ್ತು ನಿಮಿಷಗಳಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಿದ್ದ ದುಷ್ಕರ್ಮಿಗಳು, ಅಪ್ಪರ್ ಡ್ಯಾಂಗ್ರಿಯ ಮನೆಯೊಂದರಲ್ಲಿ ಇದ್ದವರ ಮೇಲೆಯೂ ಗುಂಡನ್ನು ಹಾರಿಸಿದ್ದಾರೆ. ನಂತರ 25 ಮೀಟರ್ ದೂರ ಕ್ರಮಿಸಿ ಅಲ್ಲಿದ್ದ ನಾಗರಿಕರ ಮೇಲೆಯೂ ಗುಂಡನ್ನು ಹೊಡೆದಿದ್ದಾರೆ. ನಂತರ ಮತ್ತೊಂದು ಮನೆಯವರ ಮೇಲೆಯೂ ಗುಂಡನ್ನು ಹಾರಿಸಿದ್ದಾರೆ. ಆ ದಾಳಿಯಲ್ಲಿ 10 ಮಂದಿಗೆ ಗುಂಡು ತಗಲಿರುತ್ತದೆ.

ಅವರನ್ನು ರಾಜೌರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗಮಧ್ಯೆಯೇ ಮೂವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳನ್ನು ವಿಮಾನದಲ್ಲಿ ಜಮ್ಮುವಿಗೆ ರವಾನಿಸಲಾಗಿರುತ್ತದೆ. ಅವರಲ್ಲಿದ್ದ ಒಬ್ಬರು ಕೂಡ ಮೃತಪಟ್ಟಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಭಯೋತ್ಪಾದಕರ ಬಂಧನಕ್ಕೆ ಸೇನೆ ಮತ್ತು ಅರೆಸೇನಾ ಪಡೆಗಳು ಶೋಧ ಆರಂಭಿಸಿದೆ ಎಂದು ಹೆಚ್ಚುವರಿ ಡಿಜಿಪಿ ತಿಳಿಸಿದ್ದಾರೆ.

ಮನೋಜ್ ಸಿನ್ಹಾ

ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳು ಸಾರ್ವಜನಿಕರಲ್ಲಿ ಭೀತಿಯನ್ನು ಮೂಡಿಸಿದೆ. ಈ ದಾಳಿಯ ವಿರುದ್ಧ ವರ್ತಕರು, ಸಂಘಟನೆಗಳು ಸೇರಿದಂತೆ ವಿವಿಧ ಪಕ್ಷಗಳು ಪ್ರತಿಭಟನೆಗಳನ್ನು ನಡೆಸುತ್ತಿವೆ. ಪ್ರಕ್ಷುಬ್ಧ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ಜನರು ಪಾಕಿಸ್ತಾನ ಮತ್ತು ಭಯೋತ್ಪಾದಕರನ್ನು ಖಂಡಿಸಿ ಘೋಷಣೆಗಳನ್ನು ಹಾಕಿದ್ದಾರೆ. ಅದೇ ಸಮಯದಲ್ಲಿ, ಸಾರ್ವಜನಿಕರನ್ನು ಭಯೋತ್ಪಾದಕರಿಂದ ರಕ್ಷಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದ ಲೆಫ್ಟಿನೆಂಟ್ ಗವರ್ನರ್ ಆಡಳಿತದ ವಿರುದ್ಧವೂ ಘೋಷಣೆಗಳನ್ನು ಹಾಕಲಾಯಿತು ಎಂದು ವರದಿಗಳು ತಿಳಿಸುತ್ತಿವೆ.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ರಾಜಕೀಯ ಪಕ್ಷಗಳು ಸಹ ಖಂಡಿಸಿವೆ. ‘ಕೇಂದ್ರಾಡಳಿತ ಪ್ರದೇಶದ ಆಡಳಿತವು ಕಾಶ್ಮೀರದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಭಯೋತ್ಪಾದಕರ ದಾಳಿಯಿಂದ ಸಹಜ ಸ್ಥಿತಿಗೆ ಭಂಗ ಬಂದಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಹಿನ್ನಲೆಯಲ್ಲಿಯೇ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 1,800 ಸಿ.ಆರ್‌.ಪಿ.ಎಫ್. ಸಿಬ್ಬಂದಿಯನ್ನು ಪ್ರಕ್ಷುಬ್ಧ ಪ್ರದೇಶಗಳಿಗೆ ಕಳುಹಿಸಿ ಕೊಡುವ ನಿರ್ಧಾರವನ್ನು ಮಾಡಿತು.

2019ರಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಆ ನಂತರ ಅಲ್ಲಿ ಚುನಾವಣೆಯನ್ನೂ ನಡೆಸಲಿಲ್ಲ. ಅಲ್ಲಿ ಲೆಫ್ಟಿನೆಂಟ್ ಗವರ್ನರ್ ಮೂಲಕ ಆಡಳಿತ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿರುವ ಮನೋಜ್ ಸಿನ್ಹಾ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನು ಅಲ್ಲಿನ ರಾಜಕೀಯ ಪಕ್ಷಗಳು ನಿರಂತರವಾಗಿ ಟೀಕಿಸಿಕೊಂಡು ಬರುತ್ತಿದೆ. ‘ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದು ರಾಜಕೀಯ ಪಕ್ಷಗಳು ಮುಕ್ತವಾಗಿ ಕಾರ್ಯನಿರ್ವಹಿಸುವಂತಹ ವಾತಾವರಣ ಸೃಷ್ಠಿಯಾದರೆ ಮಾತ್ರ ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗುತ್ತವೆ’ ಎಂದು ಪ್ರತಿಪಕ್ಷಗಳ ಮುಖಂಡರುಗಳು ಹೇಳುತ್ತಿದ್ದಾರೆ.

ಕ್ರೈಂ ರಿಪೋರ್ಟ್ಸ್ ದೇಶ

ದೆಹಲಿ: ದೆಹಲಿಯಲ್ಲಿ ಕಳ್ಳನೊಬ್ಬ ಪೊಲೀಸ್ ಕಾನ್‌ಸ್ಟೆಬಲ್‌ ಗೆ 12 ಬಾರಿ ಇರಿದಿರುವ ಘಟನೆ ಸಂಚಲನವನ್ನು ಮೂಡಿಸಿದೆ.

ರಾಜಸ್ಥಾನದ ಸಿಕರ್ ಪ್ರದೇಶದವರಾದ ಶಂಬು ದಯಾಳನಿಗೆ ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಈತ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಜನವರಿ 4ರಂದು ಆ ಪ್ರದೇಶದ ಕೊಳೆಗೇರಿಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ‘ಅನೀಶ್ ಎಂಬುವನು ತನ್ನ ಪತಿಯ ಫೋನನ್ನು ಕಿತ್ತುಕೊಂಡು ನಮಗೆ ಬೆದರಿಕೆ ಹಾಕಿದ್ದಾನೆ’ ಎಂದು ದೂರ ನೀಡಿದ್ದರು.

ದೂರನ್ನು ಸ್ವೀಕರಿಸಿದ ಪೊಲೀಸ್ ಅಧಿಕಾರಿ, ಕಾನ್ ಸ್ಟೇಬಲ್ ಶಂಬು ದಯಾಳ್ ಅವರನ್ನು ದುರುದಾರ ಮಹಿಳೆಯೊಂದಿಗೆ ಕಳುಹಿಸಿ ಅನೀಶನನ್ನು ಬಂಧಿಸುವಂತೆ ಸೂಚಿಸಿದ್ದರು. ಸಂತ್ರಸ್ತೆಯ ಜೊತೆಗಿದ್ದ ಶಂಬು ದಯಾಳ್ ಸ್ಥಳಕ್ಕೆ ಆಗಮಿಸಿದ್ದು, ಮಹಿಳೆ ಅನೀಶನನ್ನು ಗುರುತಿಸಿದ್ದಾಳೆ. ಪೊಲೀಸ್ ಪೇದೆ ಅನೀಶ್‌ನನ್ನು ಹಿಡಿದು ಬೆದರಿಸಿ ಕದ್ದ ಫೋನನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಆತನನ್ನು ಬಂಧಿಸಿ ಪಶ್ಚಿಮ ದೆಹಲಿಯ ಮಾಯಾಪುರಿ ಮಾರುಕಟ್ಟೆಯ ಮೂಲಕ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಆಗ ಕಳ್ಳ ಅನೀಶ್ ತನ್ನ ಶರ್ಟ್ ನಲ್ಲಿ ಬಚ್ಚಿಟ್ಟಿದ್ದ ಚಾಕುವನ್ನು ತೆಗೆದು ಶಂಬು ದಯಾಳ್ ಗೆ ಇರಿಯಲು ಆರಂಭಿಸಿದ್ದಾನೆ. ಅಲ್ಲಿ ನೆರೆದಿದ್ದ ಜನರ ಮಧ್ಯೆಯೇ ಅನೀಶ್ 12 ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಕಾನ್‌ಸ್ಟೆಬಲ್‌ಗೆ ಎದೆ ಮತ್ತು ಹೊಟ್ಟೆಯಲ್ಲಿ ಗಂಭೀರ ಗಾಯಗಳಾಗಿವೆ.

ಈ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ಪೊಲೀಸ್ ಅನೀಶನನ್ನು ಹಿಡಿದು ಬಂಧಿಸಿದ್ದಾರೆ. ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದ ಶಂಬು ದಯಾಳ್ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಭಾನುವಾರ ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಕಾನ್ ಸ್ಟೇಬಲ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಲ್ಲಿ ಕೇಂದ್ರ ಸರ್ಕಾರಿ ವಕೀಲರ ಮೇಲೆ ಗಂಭೀರವಾದ ಪ್ರಶ್ನೆಗಳನ್ನು ಮಾಡಿದ ತಮಿಳುನಾಡು ಸರ್ಕಾರಿ ಹಿರಿಯ ವಕೀಲ ವಿಲ್ಸನ್.

‘ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವು ರಾಜಕೀಯ ಪ್ರೇರಿತವಾದದ್ದು’ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ.

ಬಿಜೆಪಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ದೇಶಾದ್ಯಂತ ಬಲವಂತದ ಮತಾಂತರದ ವಿರುದ್ಧ ಬಲವಾದ ಕಾನೂನು ಜಾರಿಗೆ ಒತ್ತಾಯಿಸಿ ಸಲ್ಲಿಸಿದ ಅರ್ಜಿಯು ನೆನ್ನೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಡಿ.ರವಿಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.

ಆಗ ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ವಿಲ್ಸನ್ ಮತ್ತು ವಕೀಲ ಕುಮನನ್ ತಮ್ಮ ವಾದವನ್ನು ಮಂಡಿಸಿದರು.

‘ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ದೇಶದ್ರೋಹದ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಷಯವನ್ನು ಸಂಪರ್ಕಿಸುತ್ತಿದ್ದಾರೆ ಮತ್ತು ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ಬಿಜೆಪಿಯ ಹಿರಿಯ ವಕ್ತಾರರಾಗಿರುವುದರಿಂದ ಈ ಪ್ರಕರಣವು ರಾಜಕೀಯ ಪ್ರೇರಿತವಾದದ್ದು’ ಎಂದು ವಾದವನ್ನು ಮುಂದಿಟ್ಟರು.

‘ಈ ಪ್ರಕರಣದ ಮನವಿಯ ಸಾರದಲ್ಲಿ, ಅಶ್ವಿನಿ ಉಪಾಧ್ಯಾಯ ಹೆಚ್ಚಾಗಿ ತಮಿಳುನಾಡಿನತ್ತ ಗಮನಸೆಳೆದಿದ್ದಾರೆ ಆದ್ದರಿಂದ ನಮ್ಮ ವಾದಗಳನ್ನು ಆಲಿಸದೆಯೇ ನ್ಯಾಯಾಲಯವು ಈ ಪ್ರಕರಣವನ್ನು ಹೇಗೆ ಮುಂದುವರಿಸಾಲು ಸಾಧ್ಯ? ಎಂಬ ಪ್ರಶ್ನೆಯನ್ನೂ ಪೀಠದ ಮುಂದಿಟ್ಟರು. 

ನ್ಯಾಯಮೂರ್ತಿ ಎಂ.ಆರ್.ಶಾ ಮಧ್ಯಪ್ರವೇಶಿಸಿ, ‘ಈ ಪ್ರಕರಣದಲ್ಲಿ ರಾಜಕೀಯವನ್ನು ತರಬಾರದು ಮತ್ತು ಅರ್ಜಿದಾರರು ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುವುದರಿಂದ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ವಕೀಲ ವಿಲ್ಸನ್, ‘ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ಸಂಪೂರ್ಣ ರಾಜಕೀಯ ಉದ್ದೇಶದಿಂದ ಈ ಪ್ರಕರಣವನ್ನು ಮುಂದುವರಿಸಿದ್ದಾರೆ. ಆದ್ದರಿಂದಲೇ ತಮಿಳುನಾಡು ಸರಕಾರ ಈ ವಿಷಯವನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಿದೆ’ ಎಂದರು.

‘ತಮಿಳುನಾಡಿನಲ್ಲಿ 2002ರಲ್ಲಿ ಧಾರ್ಮಿಕ ಮತಾಂತರ ತಡೆಗೆ ಕಾನೂನನ್ನು ತಂದರೂ 2006ರಲ್ಲಿ ರಾಜ್ಯ ವಿಧಾನಸಭೆ ಅದನ್ನು ರದ್ದುಗೊಳಿಸಿತ್ತು’ ಎಂದು ವಾದವನ್ನು ಮುಂದುವರಿಸಿದರು.

‘ಈ ವಿಚಾರದಲ್ಲಿ ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ತಮಿಳುನಾಡು ಕುರಿತು ಹೇಳಿದ್ದೆಲ್ಲವೂ ಹಸಿ ಸುಳ್ಳು. ಕಡ್ಡಾಯ ಧಾರ್ಮಿಕ ಮತಾಂತರದ ಬಗ್ಗೆ ನಿರ್ಧರಿಸಲು ರಾಜ್ಯ ಶಾಸಕಾಂಗಕ್ಕೆ ಸಂಪೂರ್ಣ ಅಧಿಕಾರವಿದೆ. ಕಾನೂನು ರೂಪಿಸಲು ರಾಜ್ಯ ಶಾಸಕಾಂಗಕ್ಕೆ ಸುಪ್ರೀಂ ಕೋರ್ಟ್ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ರಾಜ್ಯದ ಹಕ್ಕನ್ನು ಪುನರುಚ್ಚರಿಸಿದರು.

ಮುಂದುವರಿದು ಮಾತನಾಡಿದ ವಿಲ್ಸನ್, ‘ತಮಿಳುನಾಡಿಗೆ ಯಾವ ಯಾವ ಕಾನೂನುಗಳು ಸೂಕ್ತ ಎಂಬುದು ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಜನರ ಅಗತ್ಯತೆಗಳು ಶಾಸಕಾಂಗದಲ್ಲಿ ತಿಳಿದುಕೊಂಡು ಪ್ರತಿಫಲಿಸುತ್ತದೆ. ಮತ್ತು ಇಂತಹ ಚಟುವಟಿಕೆಗಳ ಮೂಲಕ ರಾಜ್ಯದ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಮನಗಾಣಬೇಕು’ ಎಂದು ಅವರು ಒತ್ತಿ ಹೇಳಿದರು.

ನಂತರ ನ್ಯಾಯಾಧೀಶರು, ‘ಈ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಅಭಿಪ್ರಾಯ ಮತ್ತು ನಿಲುವು ಏನು?’ ಎಂದು ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ವಿಲ್ಸನ್ ಅವರನ್ನು ಪ್ರಶ್ನಿಸಿದರು.

ಅದಕ್ಕೆ ತಮಿಳುನಾಡು ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಹಿರಿಯ ವಕೀಲ ವಿಲ್ಸನ್, ‘ಈ ವಿಚಾರದಲ್ಲಿ ಜನರಿಗೆ ಏನು ಬೇಕು ಎಂಬುದನ್ನು ಜನರೇ ತೀರ್ಮಾನಿಸಲಿ ಎಂಬುದೇ ನಮ್ಮ ನಿಲುವು’ ಎಂದರು. ಈ ಪ್ರಕರಣದಲ್ಲಿ ನ್ಯಾಯಾಲಯವು ತಮ್ಮ ಅಭಿಪ್ರಾಯವನ್ನು ಕೇಳ ಬೇಕು ಎಂದೂ ಅವರು ಒತ್ತಿ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ‘ಈ ವಿಷಯವು ತುಂಬಾ ಗಂಭೀರವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಮಾರ್ಗದರ್ಶನವೂ ಬೇಕು’ ಎಂದು ತಿಳಿಸಿದರು.

ಆ ಸಮಯದಲ್ಲಿ ಕೇಂದ್ರ ಸರ್ಕಾರದ ಮುಖ್ಯ ವಕೀಲ ವೆಂಕಟರಮಣಿ ಅವರು ಸದರಿ ಪ್ರಕರಣಕ್ಕೆ ಹಾಜರಾಗಿ ಸಹಾಯ ಮಾಡಬೇಕೆಂದು ನ್ಯಾಯಮೂರ್ತಿಗಳು ಕೇಳಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ವಕೀಲ ವಿಲ್ಸನ್ ಮಾತನಾಡಿ, ‘ಪ್ರಕರಣದ ಶೀರ್ಷಿಕೆಯನ್ನು ಬದಲಾಯಿಸಬೇಕು’ ಎಂಬ ಯೋಚನೆಯನ್ನು ನ್ಯಾಯ ಪೀಠದ ಮುಂದಿಟ್ಟರು. 

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಿಂದ ‘ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ’ ಎಂಬುದಾಗಿ ಪ್ರಕರಣದ ಶೀರ್ಷಿಕೆಯನ್ನು ಬದಲಾಯಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಮುಂದುವರಿದ ನ್ಯಾಯಮೂರ್ತಿಗಳು, ‘ಒಬ್ಬರು ತಾನು ಯಾವ ಧರ್ಮವನ್ನು ಅನುಸರಿಸಬೇಕೆಂಬುದು ಅವರವರ ಮೂಲಭೂತ ಹಕ್ಕು. ಅದೇ ಸಂದರ್ಭದಲ್ಲಿ ಬಲವಂತದಿಂದ ಒಬ್ಬರನ್ನು ಮತಾಂತರ ಗೊಳಿಸುವುದು ಬೇರೆಯದಾಗಿದೆ. ಹೀಗಿರುವಾಗ ಒಬ್ಬರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದರೆ ಏನು ಮಾಡಬಹುದು? ಹೀಗಾಗದಂತೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು?’ ಎಂದು ನ್ಯಾಯಮೂರ್ತಿಗಳು ಕೇಂದ್ರ ಸರಕಾರದ ಮುಖ್ಯ ವಕೀಲರನ್ನು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಅಭಿಯೋಜಕರು, ಪ್ರಕರಣದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುವುದಾಗಿ ಕೋರ್ಟಿಗೆ ತಿಳಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಲಾಯಿತು.

ದೇಶ ಬೆಂಗಳೂರು ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

ಬೆಂಗಳೂರು: ಭಾರತದಲ್ಲಿ 3700 ಅಣೆಕಟ್ಟುಗಳು ಅಪಾಯದಲ್ಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದ್ದು ಸಂಚಲನ ಮೂಡಿಸಿದೆ.

2050 ರ ವೇಳೆಗೆ ಭಾರತದ 3,700 ಅಣೆಕಟ್ಟುಗಳು ತಮ್ಮ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.25 ರಷ್ಟನ್ನು ಕಳೆದುಕೊಳ್ಳುವ ಸಾದ್ಯತೆಯಿದೆ. ಮತ್ತು ಹೂಳು ತುಂಬುವುದರಿಂದ ಈ ಅಪಾಯ ಬರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

50 ವರ್ಷಕ್ಕಿಂತ ಹಳೆಯದಾದ ಅಣೆಕಟ್ಟುಗಳು ತಮ್ಮ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.30 ರಷ್ಟನ್ನು ಕಳೆದುಕೊಳ್ಳುತ್ತವೆ ಮತ್ತು ಪ್ರಪಂಚದಾದ್ಯಂತದ ಸುಮಾರು 50,000 ಅಣೆಕಟ್ಟುಗಳು ಹೂಳು ತುಂಬುವಿಕೆಯಿಂದಾಗಿ ತಮ್ಮ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.13 ರಿಂದ ಶೇ.19 ರಷ್ಟು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಪರಿಸರ ಮತ್ತು ಆರೋಗ್ಯ ಕೇಂದ್ರ ವಿಶ್ವವಿದ್ಯಾನಿಲಯ ವಿಶ್ವಾದ್ಯಂತ ಅಸ್ತಿತ್ವದಲ್ಲಿರುವ ಅಣೆಕಟ್ಟುಗಳ ಭವಿಷ್ಯವನ್ನು ಪರಿಶೀಲಿಸಿ ಅಧ್ಯಯನವುನ್ನು ನಡೆಸಿದೆ. ದೊಡ್ಡ ಅಣೆಕಟ್ಟುಗಳು ಮತ್ತು ಜಲಾಶಯಗಳು ವಿದ್ಯುತ್ ಮತ್ತು ಕುಡಿಯುವ ನೀರನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ಈ ಜಲಾಶಯಗಳೆಲ್ಲವೂ ಏಕಕಾಲದಲ್ಲಿ ಪರಿಣಾಮ ಬೀರುತ್ತವೆ ಎಂದೂ ಅಧ್ಯಯನವು ಬಹಿರಂಗಪಡಿಸಿದೆ.

ಹೂಳುಗಳ ಶೇಖರಣೆಯಿಂದಾಗಿ ಭಾರತದಲ್ಲಿರುವ 3,700 ಅಣೆಕಟ್ಟುಗಳು 2050ರ ವೇಳೆಗೆ ಒಟ್ಟು ಸಂಗ್ರಹಣೆಯಲ್ಲಿ ಶೇ.26 ರಷ್ಟುನ್ನು ಕಳೆದುಕೊಳ್ಳುತ್ತವೆ. ಇದು ಭವಿಷ್ಯದ ನೀರಿನ ಭದ್ರತೆ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯನ್ನು ದುರ್ಬಲಗೊಳಿಸುವಂತೆ ಮಾಡುತ್ತದೆ ಎಂದು ವಿಶ್ವಸಂಸ್ಥೆಯ ಹೊಸ ಅಧ್ಯಯನವು ಎಚ್ಚರಿಕೆಯನ್ನು ನೀಡಿದೆ.

ನೀರು, ಪರಿಸರ ಮತ್ತು ಆರೋಗ್ಯದ ಕುರಿತು ವಿಶ್ವಸಂಸ್ಥೆಯ ವಿಶ್ವವಿದ್ಯಾಲಯವು ನಡೆಸಿದ ಅಧ್ಯಯನದ ಪ್ರಕಾರ, 150 ದೇಶಗಳಲ್ಲಿನ 47,403 ದೊಡ್ಡ ಅಣೆಕಟ್ಟುಗಳಲ್ಲಿ 6,316 ಶತಕೋಟಿ ಘನ ಮೀಟರ್ ನೀರಿನ ಸಂಗ್ರಹವು ಕಡಿಮೆಯಾಗುತ್ತದೆ. ಮತ್ತು 2050ರ ವೇಳೆಗೆ 4,665 ಶತಕೋಟಿ ಘನ ಮೀಟರ್ ನೀರಿನ ಸಂಗ್ರದಲ್ಲಿ ಶೇ.26ರಷ್ಟು ನೀರಿನ ಸಂಗ್ರಹವು ನಷ್ಟವಾಗುತ್ತದೆ ಎಂದು ಅದು ಅಂದಾಜಿಸಿದೆ.

ಭಾರತ ಮಾತ್ರವಲ್ಲದೆ ಚೀನಾ, ಇಂಡೋನೇಷ್ಯಾ, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳಲ್ಲಿ ಅಣೆಕಟ್ಟುಗಳ ಜಲಾಶಯದ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

2022 ರ ಹೊತ್ತಿಗೆ, ಏಷ್ಯಾ-ಪೆಸಿಫಿಕ್ ಪ್ರದೇಶ ಮತ್ತು ಪ್ರಪಂಚವು ತಮ್ಮ ಹೆಚ್ಚುವರಿ ಶೇಖರಣಾ ಸಾಮರ್ಥ್ಯದಲ್ಲಿ ಶೇ.13 ರಷ್ಟನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲಿನ ಈ ಭೂಭಾಗದ ಜನಸಂಖ್ಯೆ ಶೇ.60ರಷ್ಟು ಇರುವುದರಿಂದ ನೀರು ಮತ್ತು ಆಹಾರ ಭದ್ರತೆಯನ್ನು ಉಳಿಸಿಕೊಳ್ಳಲು ನೀರಿನ ಸಂರಕ್ಷಣೆ ನಿರ್ಣಾಯಕವಾಗಿದೆ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.

ಭಾರತದ 3,700 ಪ್ರಮುಖ ಅಣೆಕಟ್ಟುಗಳು 2050 ರ ವೇಳೆಗೆ ತಮ್ಮ ಆರಂಭಿಕ ಒಟ್ಟು ಸಂಗ್ರಹಣೆಯಲ್ಲಿ ಸರಾಸರಿಯಾಗಿ ಶೇ.26ರಷ್ಟು ಕಳೆದುಕೊಳ್ಳುತ್ತವೆ ಎಂದು ವಿಶ್ವಸಂಸ್ಥೆ ಹೇಳಿದೆ. ಭಾರತ ಮಾತ್ರವಲ್ಲದೆ ವಿಶ್ವದ ಅತ್ಯಂತ ಅಣೆಕಟ್ಟುಗಳನ್ನು ಹೊಂದಿರುವ ಚೀನಾ ರಾಷ್ಟ್ರದ ಅಣೆಕಟ್ಟುಗಳು ಕೂಡ 2050ರ ಹೊತ್ತಿಗೆ ತಮ್ಮ ಸಂಗ್ರಹದ ಶೇ.10ರಷ್ಟನ್ನು ಕಳೆದುಕೊಳ್ಳುತ್ತದೆ.

ನೀರಿನ ಸಂಗ್ರಹಣೆಯ ಮೂಲಸೌಕರ್ಯವು ಅಭಿವೃದ್ಧಿಗೆ ನಿರ್ಣಾಯಕವಾಗಿರುವುದರಿಂದ, ಪ್ರಮುಖ ಅಣೆಕಟ್ಟುಗಳು ಮತ್ತು ಜಲಾಶಯಗಳನ್ನು ಜಲವಿದ್ಯುತ್, ಪ್ರವಾಹ ನಿಯಂತ್ರಣ ಮತ್ತು ನೀರಾವರಿ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ದುರಸ್ತಿ ಮಾಡಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಹೂಳು ಸಂಗ್ರಹವಾಗುವುದನ್ನು ತಡೆಯಲು ಪ್ರಯತ್ನಿಸಬೇಕು ಎಂದು ಅಧ್ಯಯನದ ಫಲಿತಾಂಶಗಳು ಸೂಚಿಸುತ್ತವೆ.

ಬೆಂಗಳೂರು ರಾಜಕೀಯ ರಾಜ್ಯ

ಮಂಜುಳಾ ರೆಡ್ಡಿ, ವರದಿಗಾರರು

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗೆ ಸಿಗುತ್ತಿರುವ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಹಿಂದುಳಿದ ಅಲೆಮಾರಿ ಬುಡುಕಟ್ಟುಗಳಿಗೂ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ / ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ.

ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶಿವಾನಂದ ಲಕ್ಷ್ಮಣ ಪಾಚಂಗಿ ಹಾಗೂ ಟಿ.ವಿ.ಗೋಪಲಕೃಷ್ಣ ‘ಅಲೆಮಾರಿ / ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯದವರು ಒಟ್ಟು 46 ಜಾತಿಗಳಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿದವರಾಗಿರುತ್ತಾರೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಮ್ಮ 46 ಜಾತಿಗಳು ಬರುತ್ತಿದ್ದವು. ತದನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ  ವರ್ಗಾಯಿಸಲಾಯಿತು. ಸರ್ಕಾರದ ಆದೇಶ ಪ್ರಕಾರ ನಾವುಗಳು ಬುಡಕಟ್ಟು ಜನಾಂಗದವರಾಗಿದ್ದು, ಈಗ ಬುಡಕಟ್ಟು ಇಲಾಖೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನಮ್ಮ 46 ಜಾತಿಗಳನ್ನು ಸರ್ಕಾರ ಬುಡಕಟ್ಟು ಕಲ್ಯಾಣ ಇಲಾಖೆಗೆ ವರ್ಗಾಯಿಸಬೇಕೆಂದು ಮನವಿ ಮಾಡಿದರು. ನಮ್ಮ 46 ಜಾತಿಗಳು ಎಲ್ಲಾ ರಂಗಗಳಲ್ಲಿಯೂ ಹಿಂದುಳಿದಿರುವ ಕಾರಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗೆ ಸಿಗುತ್ತಿರುವ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನಮಗೂ ನೀಡಬೇಕೆಂದು ಒತ್ತಾಯಿಸಿದರು.

ಶಿವಾನಂದ ಲಕ್ಷ್ಮಣ ಪಾಚಂಗಿ ಮಾತನಾಡುತ್ತಾ ‘ಹಿಂದುಳಿದ ಅಲೆಮಾರಿ ಬುಡಕಟ್ಟುಗಳ ನಿಗಮಗಳಿಗೆ ಅಧ್ಯಕ್ಷರನ್ನಾಗಿ ಅಲೆಮಾರಿ ಬುಡಕಟ್ಟು ಸಮುದಾಯದವರನ್ನು ನೇಮಕ ಮಾಡುತ್ತಿಲ್ಲ. ಸರ್ಕಾರ ಮುಂದಿನ ದಿನಗಳಲ್ಲಿ ಈ ರೀತಿಯ ಅನ್ಯಾಯಗಳಾಗದಂತೆ ನ್ಯಾಯ ಒದಗಿಸಿಕೊಡಬೇಕೆಂದು ಬೇಸರ ವ್ಯಕ್ತಪಡಿಸಿದರು. ಅಲೆಮಾರಿ ನಿಗಮಕ್ಕೆ ಕೇವಲ ಆರು ಕೋಟಿ ಮಾತ್ರ ಬಿಡುಗಡೆಗೊಳಿಸಿದ್ದು, ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಇದರಿಂದ ಬಹಳ ತೊಂದರೆಯಾಗಿದೆ.

ಈ ಹಿಂದೆ ನೂರು ಕೋಟಿಗಳಷ್ಟು ಅನುದಾನ ಪಡೆಯುತ್ತಿದ್ದಾಗಲೂ ಹಿಂದುಳಿದ ಅಲೆಮಾರಿ ಬುಡಕಟ್ಟುಗಳಿಗೆ ಸರಿಯಾದಸೌಲಭ್ಯಗಳು ದೊರೆಯುತ್ತಿರಲಿಲ್ಲ. ಈ ಅನುದಾನವನ್ನು ಇನ್ನೂ ಹೆಚ್ಚು ಮಾಡದೆ, ಅನುದಾನವನ್ನು ಕಡಿತಗೊಳಿಸಿರುವುದು ಎಷ್ಟು ಸರಿ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದರಿಂದ 46 ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಕೂಡಲೇ ಸರ್ಕಾರ ಸರಿಪಡಿಸಬೇಕೆಂದು ಒತ್ತಾಯ ಮಾಡಿದರು.

ಪತ್ರಿಕಾ ಘೋಷ್ಠಿಯಲ್ಲಿ ಟಿ.ವಿ.ಗೋಪಾಲಕೃಷ್ಣ, ಪಾಚಂಗಿ, ಆರ್.ರಂಗಪ್ಪ, ಶ್ರೀರಾಮಕೃಷ್ಣ, ಪ್ರಕಾಶ್ ಬೈಲಪತ್ತರ್, ಸುನಿಲ್ ಕಾಂತ ಹೇಳವರ್, ಚಿದಾನಂದಪ್ಪ, ಜಯಲಕ್ಷ್ಮಿ, ಗಿರಿಯಪ್ಪ ಜಿ.ಗೊಲ್ಲರ್ ಮುಂತಾದವರು ಉಪಸ್ಥಿತಿಯಿದ್ದರು

ಬೆಂಗಳೂರು ರಾಜಕೀಯ ರಾಜ್ಯ

ಮಂಜುಳಾ ರೆಡ್ಡಿ, ವರದಿಗಾರರು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾರವಾರದ ಅಂಕೋಲಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗಂಗಾಧರ ನಾಗೇಶ ಭಟ್ಟರನ್ನು ಪರಿಗಣಿಸಬೇಕೆಂದು ದೈವಜ್ಞ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಮಹೇಶ್ ಶೇಟ್ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಿಜೆಪಿಯನ್ನು ಒತ್ತಾಯಿಸಿದರು.

‘ಬೆಂಗಳೂರು ದೈವಜ್ಞ ಯುವಕ ಸಂಘದ ಅಧ್ಯಕ್ಷ ಮಹೇಶ್ ಶೇಟ್, ದೈವಜ್ಞ ಬ್ರಾಹ್ಮಣರು ತಮ್ಮ ಸಾಧನೆಯ ಮೂಲಕ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ದೈವಜ್ಞ ಬ್ರಾಹ್ಮಣ ಸಮಾಜದವರು ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಕೇಂದ್ರದ ಒಬಿಸಿ ಮತ್ತು ರಾಜ್ಯದ 2 ಎ ಪಂಗಡದಲ್ಲಿ ನಮ್ಮ ಸಮಾಜವನ್ನು ಸೇರಿಸಿರುತ್ತಾರೆ. ಇಲ್ಲಿಯವರಗೆ ಯಾವುದೇ ರಾಜಕೀಯ ಪಕ್ಷಗಳು ಹಾಗೂ ನಮ್ಮನ್ನು ಆಳಿದ ಸರ್ಕಾರಗಳು ದೈವಜ್ಞ ಸಮಾಜಕ್ಕೆ ಹೇಳಿಕೊಳ್ಳುವಂತಹ ಯಾವುದೇ ಸ್ಥಾನಮಾನಗಳನ್ನು ನೀಡಿಲ್ಲ.

ದೈವಜ್ಞ ಬ್ರಾಹ್ಮಣರು ಜನಸಂಘ ಕಾಲದಿಂದಲೂ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿರುತ್ತಾರೆ. ದೈವಜ್ಞ ಬ್ರಾಹ್ಮಣರು ಕಾರಣಿಭೂತರಾಗಿರುವುದು ರಾಜಕೀಯ ಪಕ್ಷಗಳಿಗೆ ಗೊತ್ತಿರುವ ವಿಚಾರವೇ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಬೆಂಗಳೂರಿನ ಅನೇಕ ಮತ ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದೈವಜ್ಞರು ಪ್ರಭಾವಶಾಲಿಗಳಾಗಿದ್ದಾರೆ. ಅದರ ಲಾಭವನ್ನು ಬಿಜೆಪಿ ಪಕ್ಷವು ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಬೇಡಿಕೆಯಾಗಿದೆ.

ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೈವಜ್ಞ ಬ್ರಾಹ್ಮಣ ಸಮುದಾಯದವರಾದ ಗಂಗಾಧರ ಭಟ್ಟರನ್ನು ಉತ್ತರ ಕನ್ನಡ ಭಾಗದ ಕಾರವಾರ ಅಂಕೋಲಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಒಕ್ಕೂಟವು ತೀರ್ಮಾನಿಸಿದೆ. ಮತ್ತು ಅವರಿಗೆ ತನು, ಮನ, ಧನ ನೀಡುವ ನಿರ್ಧಾರವನ್ನೂ ತೆಗೆದುಕೊಂಡಿದೆ. ಅದಕ್ಕೆ ಬಿಜೆಪಿ ಪಕ್ಷವು ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಬೇಕೆಂದು ಕರ್ನಾಟಕ ರಾಜ್ಯದ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಒಕ್ಕೂಟವು ಆಗ್ರಹಿಸುತ್ತಿದೆ’ ಎಂದು ಪತ್ರಿಕಾ ಗೋಷ್ಠಿಯಲ್ಲಿ ದೈವಜ್ಞ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಮಹೇಶ್ ಶೇಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉದಯ ರಾಯಕಾರ್, ಮೋಹನ್ ಪಲಕರ್, ಪ್ರೇಮ ಮೂರ್ತಿ, ವಿವೇಕಾನಂದ ಬೈಕೇನಿಕರ್ ಮುಂತಾದವರು ಇದ್ದರು. 

ದೇಶ ರಾಜಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು

ತಮಿಳುನಾಡು: ತಮಿಳುನಾಡು ವಿಧಾನಸಭೆಯು ಸಾಮಾನ್ಯವಾಗಿ ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಪ್ರಾರಂಭಿಸುತ್ತದೆ. ಅದರಂತೆ ಇಂದು (ಜನವರಿ 9) ಬೆಳಗ್ಗೆ 10 ಗಂಟೆಗೆ ರಾಜ್ಯಪಾಲ ಆರ್.ಎನ್.ರವಿ ಭಾಷಣದೊಂದಿಗೆ ವರ್ಷದ ಮೊದಲ ಸಭೆ ಆರಂಭವಾಯಿತು.

ಸಭಾಧ್ಯಕ್ಷರು ಎಂ.ಅಪ್ಪಾವು ಹಾಗೂ ಕಾರ್ಯದರ್ಶಿ ಕೆ.ಶ್ರೀನಿವಾಸನ್ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಇದಾದ ಬಳಿಕ ರಾಜ್ಯಪಾಲರಿಗೆ ಪೊಲೀಸ್ ಪರೇಡ್ ಗೌರವ ಸಲ್ಲಿಸಲಾಯಿತು. ಬೆಳಗ್ಗೆ 10 ಗಂಟೆಗೆ ಸರಿಯಾಗಿ ರಾಜ್ಯಪಾಲರು ವಿಧಾನಸಭೆಯಲ್ಲಿ ಭಾಷಣ ಆರಂಭಿಸಿದರು. ಅವರು ಭಾಷಣ ಮಾಡುವಾಗ ಸಾಮಾಜಿಕ ನ್ಯಾಯ, ಸ್ವಾಭಿಮಾನ, ಸಮಗ್ರ ಅಭಿವೃದ್ಧಿ, ಸಮಾನತೆ, ಮಹಿಳಾ ಹಕ್ಕುಗಳು, ಧಾರ್ಮಿಕ ಸೌಹಾರ್ದತೆ, ವೈವಿಧ್ಯತೆ, ಪೆರಿಯಾರ್, ಅಂಬೇಡ್ಕರ್, ಕಾಮರಾಜ್, ಅಣ್ಣಾದುರೈ, ಎಂ.ಕರುಣಾನಿಧಿ, ದ್ರಾವಿಡ ಮಾದರಿ ಆಡಳಿತ, ತಮಿಳುನಾಡು ಶಾಂತಿ ಉದ್ಯಾನದಂತಹ ಪದಗಳನ್ನು ಹೇಳಲು ನಿರಾಕರಿಸಿದರು.

ಭಾಷಣ ಆರಂಭವಾಗುತ್ತಿದ್ದಂತೆ ಡಿಎಂಕೆ ಮಿತ್ರಪಕ್ಷಗಳು “ಗೊ ಬ್ಯಾಕ್ ಗವರ್ನರ್” ಎಂಬ ಘೋಷಣೆಗಳನ್ನು ಕೂಗಿದರು. ರಾಜ್ಯಪಾಲರ ಭಾಷಣದ ನಂತರ ಅದರ ತಮಿಳು ಆವೃತಿಯನ್ನು ಸಭಾಧ್ಯಕ್ಷರು ಎಂ.ಅಪ್ಪಾವು ವಾಚಿಸಿದರು. ಅಪ್ಪಾವು ಅದನ್ನು ಓದುತ್ತಿರುವಾಗ ಮದ್ಯ ಪ್ರವೇಶಿಸಿದ ಪ್ರತಿಪಕ್ಷಗಳು ‘ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಸರಿಯಾಗಿ ಓದಲಿಲ್ಲ’ ಎಂದು ಆರೋಪ ಮಾಡಿದವು.

ಅಪ್ಪಾವು ಮಾತು ಮುಗಿಸಿದ ಬಳಿಕ ಎದ್ದು ನಿಂತ ಮುಖ್ಯಮಂತ್ರಿ ಸ್ಟಾಲಿನ್, ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಸರಿಯಾಗಿ ಓದಲಿಲ್ಲ ಎಂದು ಅಪಾದಿಸಿದರು. ರಾಜ್ಯಪಾಲರು ಓದಿದ ಭಾಗಗಳನ್ನು ಟಿಪ್ಪಣಿಗಳಲ್ಲಿ ಸೇರಿಸಬಾರದು ಎಂಬ ಗೊತ್ತುವಳಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಮಂಡಿಸಿದರು. ಮುಖ್ಯಮಂತ್ರಿ ಗೊತ್ತುವಳಿಯನ್ನು ಸಭೆಯಲ್ಲಿ ಮಂಡಿಸುತ್ತಿರುವಾಗಲೇ ರಾಜ್ಯಪಾಲರು ವಿಧಾನಸಭೆಯಿಂದ ಹೊರನಡೆದರು. ರಾಜ್ಯಪಾಲರು ತೆರಳಿದನಂತರ ಮುಖ್ಯಮಂತ್ರಿಗಳು ಮಂಡಿಸಿದ ಗೊತ್ತುವಳಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ವಿಧಾನಸಭೆ ಕಲಾಪ ಮುಗಿದ ಬಳಿಕ ರಾಷ್ಟ್ರಗೀತೆ ಮೊಳಗಿದಾಗ ರಾಜ್ಯಪಾಲರು ಸದನದಲ್ಲಿ ಇರಲಿಲ್ಲ ಎಂಬುದು ಗಮನಾರ್ಹ. ಭಾಷಣವನ್ನು ಅನುಮೋದಿಸಿದ ನಂತರ ಅದನ್ನು ಬದಲಾಯಿಸಿ ಸದನದಲ್ಲಿ ಓದುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಕಲಾಪದ ಸಂಸ್ಕೃತಿಯಲ್ಲ. ಐತಿಹಾಸಿಕವಾದ ದ್ರಾವಿಡ ಚಳುವಳಿಯನ್ನು ಕಟ್ಟಿ, ಬ್ರಾಹ್ಮಣ್ಯಕ್ಕೆ ಸೆಡ್ಡು ಹೊಡೆದು ‘ಸನಾತನ ರೋಗಕ್ಕೆ ದ್ರಾವಿಡವೇ ಮದ್ದು’ ಎಂಬ ನಂಬಿಕೆಯನ್ನು ದಕ್ಷಿಣ ಭಾರತೀಯರಿಗೆ ನೀಡಿರುವ ತಮಿಳುನಾಡು ವಿಧಾನ ಸಭೆಯಲ್ಲಿ ಸಾಮಾಜಿಕ ನ್ಯಾಯ, ಸ್ವಾಭಿಮಾನ, ಸಮಗ್ರ ಅಭಿವೃದ್ಧಿ, ಸಮಾನತೆ, ಮಹಿಳಾ ಹಕ್ಕುಗಳು, ಧಾರ್ಮಿಕ ಸೌಹಾರ್ದತೆ, ವೈವಿಧ್ಯತೆ, ಪೆರಿಯಾರ್, ಅಂಬೇಡ್ಕರ್, ಕಾಮರಾಜ್, ಅಣ್ಣಾದುರೈ, ಎಂ.ಕರುಣಾನಿಧಿ, ದ್ರಾವಿಡ ಮಾದರಿ ಆಡಳಿತ, ತಮಿಳುನಾಡು ಶಾಂತಿ ಉದ್ಯಾನದಂತಹ ಪದಗಳನ್ನು ಹೇಳಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದರೆ ಇವರು ಎಂತಹ ಉಗ್ರ ಸನಾತನವಾದಿಯಾಗಿರಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಿ.

‘ರಾಜ್ಯಪಾಲರು ಇಂತಹ ಹಲವಾರು ಸಮಸ್ಯೆಗಳನ್ನು ದಿನನಿತ್ಯ ಸೃಷ್ಟಿಸುತ್ತಿರುವುದು ನಿಜಕ್ಕೂ ನನಗೆ ನೋವು ತಂದಿದೆ’ ಎಂದು ವಿಧಾನಸಭೆ ಸಭಾಪತಿ ಅಪ್ಪಾವು ಹೇಳಿರುವುದು ಗಮನಾರ್ಹವಾದದ್ದು.

‘ರಾಜ್ಯಪಾಲ ಆರ್.ಎನ್.ರವಿ ಉಗ್ರ ಸನಾತನವಾದಿ, ದ್ರಾವಿಡ ವಿರೋಧಿ, ಬಿಜೆಪಿ ಏಜೆಂಟ್’ ಎಂದೆಲ್ಲ ತಮಿಳುನಾಡು ಜನರು ಹೇಳುವುದು ಸರಿಯಾಗಿಯೇ ಇದೆ ಎಂಬುದನ್ನು ಇಂದಿನ ನಡವಳಿಕೆ ನಮಗೆ ತೋರಿಸಿಕೊಟ್ಟಿದೆ.

ದೇಶ ರಾಜಕೀಯ ರಾಜ್ಯ

ಡಿ.ಸಿ.ಪ್ರಕಾಶ್, ಸಂಪಾದಕರು

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗುತ್ತಿದ್ದಂತೆ, ಯಾತ್ರೆಗಳು ನಡೆಯದ ರಾಜ್ಯಗಳಲ್ಲಿ ಕಾಂಗ್ರೆಸ್ ಘಟಕಗಳು ರಾಷ್ಟ್ರೀಯ ನಾಯಕರುಗಳ ನಿರ್ದೇಶನದಂತೆ ರಾಜ್ಯಾದ್ಯಂತ ಯಾತ್ರೆಗಳನ್ನು ನಡೆಸುತ್ತಿವೆ. ಭಾರತ್ ಜೋಡೋ ಯಾತ್ರೆಯ ಮುಂದುವರಿದ ಭಾಗವಾಗಿ, ಕಾಂಗ್ರೆಸ್ ಪಕ್ಷವು ಜನವರಿ 26 ರಿಂದ ಎರಡು ತಿಂಗಳ ಅವಧಿಯ ‘ಹಾತ್ ಸೇ ಹಾತ್ ಜೋಡೋ’ (ಕೈ ಜೋಡಿಸೋಣ) ಅಭಿಯಾನವನ್ನು ಅಂತಿಮಗೊಳಿಸಿದೆ. ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ಮುದಳುತ್ವದಲ್ಲಿ ಈ ಯಾತ್ರೆಗಳು ನಡೆಯಲಿವೆ.

ಈ ಯಾತ್ರೆಯ ಒಂದು ಭಾಗವು, ಎಲ್ಲಾ ಗ್ರಾಮ ಪಂಚಾಯತಿಗಳು ಮತ್ತು ಮತದಾನದ ಚಾವಡಿಗಳನ್ನು ಒಳಗೊಂಡಿರುವ, ಕ್ಷೇತ್ರ ಮಟ್ಟದಲ್ಲಿ ನಡೆಯುವ ಪ್ರಯಾಣವಾಗಿರುತ್ತದೆ. ಈ ಯಾತ್ರೆಯ ಕುರಿತ ರಾಹುಲ್ ಗಾಂಧಿಯ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧದ ಅಪರಾಧಪತ್ರಿಕೆಯಾಗಿ ಎಲ್ಲಡೆಯು ವಿತರಿಸಲಾಗುವುದು. ಪ್ರತಿ ರಾಜ್ಯದಲ್ಲೂ ಮಹಿಳಾ ಯಾತ್ರೆಗಳನ್ನು ಸಂಘಟಿಸಿ ಪ್ರಿಯಾಂಕಾ ಗಾಂಧಿಯೇ ಅದನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.

ಬಿಹಾರ ಕಾಂಗ್ರೆಸ್ ಮುಖಂಡ ಅಖಿಲೇಶ್ ಪ್ರಸಾದ್ ಸಿಂಗ್, ಬಂಕಾ ಜಿಲ್ಲೆಯ ಐತಿಹಾಸಿಕವಾದ ಮಂದರ್ ಮಲೆನಾಡಿನಿಂದ ಬುದ್ಧ ಗಯಾವರೆಗೆ 1,250 ಕಿ.ಮೀ., ರಾಜ್ಯಮಟ್ಟದ ಕಾಂಗ್ರೆಸ್ ಯಾತ್ರೆಯನ್ನು ಗುರುವಾರ ಪ್ರಾರಂಭಿಸಿದ್ದಾರೆ.

ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮುಖಂಡ ಆದಿರ್ ರಂಜನ್ ಚೌದ್ರಿಕೂಡ ಯಾತ್ರೆಯನ್ನು ಆಯೋಜಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 800 ಕಿ.ಮೀ., ದೂರದ ಯಾತ್ರೆಯನ್ನು ಅವರು ಮುನ್ನಡೆಸಲಿದ್ದಾರೆ. ಕೆಲವು ದಿನಗಳ ಹಿಂದೆ ಗಂಗಾ ಸಾಗರದ ದಕ್ಷಿಣ ತುದಿಯಿಂದ ಡಾರ್ಜಿಲಿಂಗ್ ವರೆಗೆ ನಡಿಗೆ ಪ್ರಯಾಣ ನಡೆಸಿದ್ದರು.

ಅಸ್ಸಾಂನ ಪೂರ್ವ ಭಾಗದಲ್ಲಿ, ಪಶ್ಚಿಮ ಬಂಗಾಳ-ಅಸ್ಸಾಂ ಗಡಿಯಲ್ಲಿ ತುಪ್ರಿ ಜಿಲ್ಲೆಯ ಕೋಲಕ್ಕಂಜ್ ನಿಂದ ರಾಜ್ಯದ ಪೂರ್ವ ಪ್ರದೇಶದಲ್ಲಿರುವ ಸದಿಯಾ ವರೆಗೆ, ರಾಜ್ಯಾದ್ಯಂತ 835 ಕಿಲೋಮೀಟರ್ ವರೆಗೆ ಒಂದು ಕಠಿಣವಾದ ತಂಡವನ್ನು ರಚಿಸಿಕೊಂಡು ಕಾಂಗ್ರೆಸ್ ಮುಖಂಡ ಭೂಪೇನ್ ಕುಮಾರ್ ಭೋರ ಕೆಲವು ದಿನಗಳ ಹಿಂದೆ ಯಾತ್ರೆಯನ್ನು ಮುಗಿಸಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲ ನಾಯಕರು ಒಂದೇ ಬಸ್‌ ಹತ್ತಲಿದ್ದು, ಯಾತ್ರೆಯುದ್ದಕ್ಕೂ ಆಯೋಜಿಸಲಾಗುತ್ತಿರುವ ಸಮಾವೇಶಗಳಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌ ಪಕ್ಷ, ಜನವರಿ 11 ರಿಂದ ‘ಪ್ರಜಾ ಧ್ವನಿ’ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆಗಳನ್ನು ಕೈಗೊಂಡಿದೆ.

‘ಪ್ರಜಾ ಧ್ವನಿ’ ಯಾತ್ರೆಗಾಗಿಯೇ ಸಕಲ ಸೌಲಭ್ಯ ಹೊಂದಿರುವ ಎರಡು ಬಸ್‌ಗಳನ್ನು ವಿಶೇಷವಾಗಿ ನಿರ್ಮಿಸಲಾಗಿದ್ದು, ತಲಾ 40 ಜನ ನಾಯಕರನ್ನು ಒಳಗೊಂಡ ಎರಡು ಬಸ್‌ಗಳು ಜನವರಿ 11ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿವೆ. ಈ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲೂ ಬೃಹತ್‌ ಸಮಾವೇಶ ನಡೆಯಲಿದ್ದು, ಸಾರ್ವಜನಿಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈಗಾಗಲೇ ಪಕ್ಷ ಸೂಚನೆಯನ್ನು ನೀಡಿದೆ.

ಭಾರತದಲ್ಲಿ ರಾಹುಲ್ ಗಾಂಧಿ ಮಾತ್ರ (ಭಾರತ್ ಜೋಡೋ) ಯಾತ್ರೆ ನಡೆಸುತ್ತಿಲ್ಲ. ಬಿಜೆಪಿಯ ಜನವಿರೋಧಿ, ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ, ಜಿಲ್ಲೆ ಜಿಲ್ಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಕಾಂಗ್ರೆಸ್ ಪಕ್ಷವು ಜನಸಾಮಾನ್ಯರೊಂದಿಗೆ ಸೇರಿ ಯಾತ್ರೆಗಳನ್ನು ನಡೆಸುತ್ತಿರುವುದು ವಿಶೇಷ.  

ದೇಶ

ತಮಿಳುನಾಡು: ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜಾತಿವಾರು ಅಂಕಿಅಂಶಗಳ ಅಗತ್ಯವಿದೆ. ಹಾಗಾಗಿ ಜಾತಿವಾರು ಜನಗಣತಿ ನಡೆಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಪಿ.ಎಂ.ಕೆ. ಸಂಸ್ಥಾಪಕ ಡಾ.ರಾಮದಾಸ್ ತಮ್ಮ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಮೊನ್ನೆ ಬಿಹಾರದಲ್ಲಿ ಜಾತಿವಾರು ಜನಗಣತಿ ಆರಂಭವಾಗುತ್ತಿದ್ದಂತೆ ಅವರು ಈ ಬೇಡಿಕೆ ಇಟ್ಟಿದ್ದಾರೆ.

ಅವರು ನಿನ್ನೆ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ, “ಬಿಹಾರದಲ್ಲಿ ಜಾತಿವಾರು ಜನಗಣತಿ ಆರಂಭವಾಗಿದೆ. ಈ ಸಮೀಕ್ಷೆಯ ಮೂಲಕ ಒಟ್ಟು 12.7 ಕೋಟಿ ಜನರ ವಿವರಗಳನ್ನು ಸಂಗ್ರಹಿಸಲಾಗುವುದು. ಭಾರತದ ಸುದೀರ್ಘ ಸಾಮಾಜಿಕ ನ್ಯಾಯ ಉಪಕ್ರಮವನ್ನು ನಡೆಸುತ್ತಿರುವ ಬಿಹಾರ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು! ಬಿಹಾರದಲ್ಲಿ ಜಾತಿವಾರು ಜನಗಣತಿಯನ್ನು 45 ದಿನಗಳ ಎರಡು ಹಂತಗಳಲ್ಲಿ ನಡೆಸಲಾಗುವುದು. ಒಟ್ಟು 5 ಲಕ್ಷಕ್ಕೂ ಹೆಚ್ಚು ಗಣತಿದಾರರು ಇದರಲ್ಲಿ ಭಾಗವಹಿಸಲಿದ್ದಾರೆ. ಜಾತಿ, ಶಿಕ್ಷಣ, ಆರ್ಥಿಕತೆ ಸೇರಿದಂತೆ ಎಲ್ಲ ವಿವರಗಳನ್ನು ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಿದ್ದಾರೆ!

ಜಾತಿವಾರು ಜನಗಣತಿಯ ಅಸಾಧ್ಯತೆಯನ್ನು ನಿವಾರಿಸಿದ ಎರಡನೇ ರಾಜ್ಯ ಬಿಹಾರ. ಕರ್ನಾಟಕ ಈಗಾಗಲೇ ಜಾತಿವಾರು ಜನಗಣತಿ ನಡೆಸಿದೆ. ಜಾತಿವಾರು ಜನಗಣತಿ ಸಾಧ್ಯ ಎಂಬುದು ಇದರಿಂದ ದೃಢಪಟ್ಟಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜಾತಿವಾರು ಅಂಕಿಅಂಶಗಳ ಅಗತ್ಯವಿದೆ. ಆದ್ದರಿಂದ 2021ರ ಜನಗಣತಿಯನ್ನು ಜಾತಿವಾರು ಜನಗಣತಿ ಮಾಡಲು ಕೇಂದ್ರ ಸರಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು ಅವರು ಟ್ವಿಟರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.