ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2023 » Page 2 of 7 » Dynamic Leader
October 23, 2024
Home 2023 February (Page 2)
ರಾಜಕೀಯ

ಚಿತ್ರದುರ್ಗ: ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪವನ್ನು ತಳ್ಳಿಹಾಕಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಈ ವರೆಗೆ ಬಿಜೆಪಿಯವರು ಯಾಕೆ ಕಣ್ಮುಚ್ಚಿ ಕುಳಿತಿದ್ದರು ಎಂದು ಪ್ರಶ್ನಿಸಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ನಮ್ಮ ಅಧಿಯಲ್ಲಿ ಆಗಿದ್ದರೆ ತನಿಖೆ ನಡೆಸಬೇಕಿತ್ತು. ಯಾಕೆ ಸುಮ್ಮನಿದ್ದೀರಿ? ನಾನೇನಾದರೂ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾಗಿದ್ದರೆ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಯಾಕೆ ತನಿಖೆ ಮಾಡಿಸಿಲ್ಲ? ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಬಾಯಿಯಲ್ಲಿ ಕಡುಬು ಹಾಕಿಕೊಂಡು ಕೂತಿದ್ದಿರಾ’? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಡಿ.ಕೆ.ರವಿ

ಇದರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, “ಬಿಜೆಪಿ ನಾಯಕರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಈಗ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ, ಪ್ರತಿ ಬಾರಿ ಸರ್ಕಾರದ ವಿರುದ್ಧ ಆರೋಪ ಮಾಡಿದಾಗ ನಮ್ಮತ್ತ ಬೆರಳು ತೋರಿಸುವುದು ಅವರಿಗೆ ಚಾಳಿಯಾಗಿದೆ. ನಮ್ಮ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬಂದಾಗೆಲ್ಲ ಅದಕ್ಕೆ ಆಧಾರಗಳು ಇಲ್ಲದೆ ಇದ್ದರೂ ತಕ್ಷಣ ತನಿಖೆಗೆ ಆದೇಶ ನೀಡುತ್ತಿದ್ದೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಮತ್ತು ಡಿವೈಎಸ್‌ಪಿ ಗಣಪತಿಯವರ ಆತ್ಮಹತ್ಯೆ, ಅಕ್ರಮ ಲಾಟರಿ ಪ್ರಕರಣ, ಪರೇಶ್ ಮೇಸ್ತಾ ಸಾವು, ಸೌಜನ್ಯ ಕೊಲೆ ಪ್ರಕರಣವೂ ಹೀಗೆ 8 ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದೆ. ಡಿ.ಕೆ.ರವಿ, ಗಣಪತಿ, ಪರೇಶ್ ಮೇಸ್ತಾ ಸೇರಿದಂತೆ ಹೆಚ್ಚಿನ ಪ್ರಕರಣಗಳಲ್ಲಿ ಸಿಬಿಐ ‘ಬಿ ರಿಪೋರ್ಟ್’ ನೀಡಿದೆ. ಒಂದೇ ಒಂದು ಪ್ರಕರಣದಲ್ಲಿಯೂ ನಮ್ಮನ್ನು ದೋಷಿ ಮಾಡಿಲ್ಲ.

Justice H.S. Kempanna

ಅರ್ಕಾವತಿ ಬಡಾವಣೆಯಲ್ಲಿ ರೀ ಡೂ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಕೂಡಲೇ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ಮಾಡಿದ್ದೆ. ನನ್ನಿಂದ ಒಂದು ಗುಂಟೆ ಜಾಗ ಕೂಡಾ ಡಿನೋಟಿಫಿಕೇಶನ್ ಆಗಿಲ್ಲ ಎಂದು ಕೆಂಪಣ್ಣ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ರೀ ಡೂ ಮಾಡಲು ಹೇಳಿದ್ದು ರಾಜ್ಯ ಹೈಕೋರ್ಟ್. ನ್ಯಾಯಾಲಯದ ಆದೇಶವನ್ನಷ್ಟೇ ನಮ್ಮ ಸರ್ಕಾರ ಪಾಲಿಸಿದೆ. ಎಲ್ಲಿಯೂ ಡಿನೋಟಿಫಿಕೇಷನ್ ನಡೆದಿಲ್ಲ. ನ್ಯಾಯಮೂರ್ತಿ ಕೆಂಪಣ್ಣನವರೇ ಇದನ್ನು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಕೆಂಪಣ್ಣನವರ ವರದಿಯ ಅಧ್ಯಯನ ಮಾಡಲು ಐಎಎಸ್ ಅಧಿಕಾರಿ ವಿಜಯಭಾಸ್ಕರ್ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಿದ್ದೆ. ಆ ಸಮಿತಿ ವರದಿ ನೀಡುವ ಸಮಯದಲ್ಲಿ ಚುನಾವಣೆ ಎದುರಾದ ಕಾರಣ ಆ ವರದಿಯ ಮೇಲೆ ಕ್ರಮಕೈಗೊಳ್ಳಲಾಗಲಿಲ್ಲ. ಈಗ ರೀಡೂ ಮಾಡಲಾಗಿದೆ ಎಂದು ಆರೋಪ ಮಾಡುವವರು ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಮತ್ತು ವಿಜಯಭಾಸ್ಕರ್ ಸಮಿತಿ ನೀಡಿರುವ ವರದಿಯ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ? ನಾಲ್ಕು ವರ್ಷಗಳಿಂದ ಬಾಯಿ ಮುಚ್ಚಿಕೊಂಡು ಕೂತವರು ಈಗ ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ.

ನ್ಯಾಯಮೂರ್ತಿ ಕೆಂಪಣ್ಣ ಹಾಗೂ ವಿಜಯಭಾಸ್ಕರ್ ಅವರ ಸಮಿತಿ ನೀಡಿರುವ ವರದಿಗಳು ಸರ್ಕಾರದ ಕೈಯಲ್ಲಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ವಿಧಿಸಿ. ನಿಮ್ಮ ಅಕ್ರಮಗಳನ್ನು ಮುಚ್ಚಿಹಾಕಲು ಸುಳ್ಳು ಆರೋಪಗಳನ್ನು ಮಾಡಬೇಡಿ. ಎಸಿಬಿ ರಚನೆ ಮಾಡಿ ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದೇವೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಆಗಿನ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಮಗ ಮನೆಯಲ್ಲಿಯೇ ಕೂತು ಆರೋಪಿ ಅಧಿಕಾರಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂಬ ಆರೋಪ ಇತ್ತು. ಲೋಕಾಯುಕ್ತರ ವಿರುದ್ಧವೇ ಆರೋಪ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತದ ಕಾರ್ಯದ ಮೇಲೆ ಕಣ್ಣಿಡಲು ಎಸಿಬಿ ರಚನೆ ಮಾಡಿದ್ದೇವೆಯೇ ಹೊರತು ಅದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ಎಸಿಬಿ ಅಸ್ತಿತ್ವದಲ್ಲಿರುವುದು ಕೇವಲ ಕರ್ನಾಟಕದಲ್ಲಿ ಅಲ್ಲ, ಬಿಜೆಪಿ ಆಡಳಿತ ಇರುವ ಗುಜರಾತ್, ಮಧ್ಯಪ್ರದೇಶ, ಹರ್ಯಾಣ ಮೊದಲಾದ ರಾಜ್ಯಗಳಲ್ಲಿ ಇವೆ. ಅಲ್ಲಿ ಯಾಕೆ ಬಿಜೆಪಿ ಎಸಿಬಿಗೆ ವಿರುದ್ಧವಾಗಿ ಮಾತನಾಡುವುದಿಲ್ಲ? ಇಲ್ಲಿ ಎಸಿಬಿಯನ್ನು ಮುಚ್ಚಿ ಲೋಕಾಯುಕ್ತಕ್ಕೆ ಪೂರ್ಣ ಅಧಿಕಾರ ನೀಡಲು ಕಾರಣ ಹೈಕೋರ್ಟ್ ಆದೇಶವೇ ಹೊರತು, ಬಿಜೆಪಿ ಅಲ್ಲ” ಎಂದು ಕಿಡಿಕಾರಿದ್ದಾರೆ.

ದೇಶ ರಾಜ್ಯ

ಅರುಣ್ ಜಿ.,

ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ತಮ್ಮಿಷ್ಟದ ವಿಭಾಗದಲ್ಲಿ ಸಾಧಿಸಿ, ಹೆಸರು ಮಾಡಬೇಕು ಎನ್ನುವ ತುಡಿತವಿರುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಿ, ವೇಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಬೆಂಗಳೂರಿನ ಸ್ಟ್ರಾಂಗೆಸ್ಟ್ ವುಮೆನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದವರು, ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ, ಮೆಡಲ್ ಗಳನ್ನು ಪಡೆದಿದ್ದವರು ಅಶ್ವಿನಿ ಬಸವರಾಜು.

ಅಥ್ಲೆಟಿಕ್ ನಲ್ಲಿ ಸಾಧನೆಯ ಮೆಟ್ಟಿಲೇರುವ ಹೊತ್ತಿಗೆ ಅಶ್ವಿನಿ ಮನಸ್ಸಿನಲ್ಲಿ ತಾನು ಹಾಡುಗಾರ್ತಿಯಾಗಬೇಕು ಎನ್ನುವ ಬಯಕೆ ಚಿಗುರೊಡೆದಿತ್ತು. ಅಜ್ಜಿ ಯಶೋಧಾ ಜೊತೆ ಪೂಜಾ ಕಾರ್ಯಕ್ರಮಗಳಲ್ಲಿ ಕೂತು ಸಾಯಿಬಾಬಾ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಕ್ರಮೇಣ ಸಂಗೀತದ ಗುಂಗು ಹತ್ತಿತ್ತು. ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿ ‘ಮರೆಯುವೆನು ನಿನಗಾಗಿ’ ಎನ್ನುವ ಆಲ್ಬಂ ಸಾಂಗ್ ಅನ್ನು ಹೊರತಂದಿದ್ದರು. ನಂತರ ಮತ್ತೊಂದು ಫೀಲಿಂಗ್ ಸಾಂಗ್ ಕೂಡಾ ಲೋಕಾರ್ಪಣೆಗೊಂಡಿತು. ಇವೆಲ್ಲದರ ಜೊತೆಗೆ ಸಂಗೀತ ಗುರು ಚಂದ್ರಕಾಂತ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದ ಅಶ್ವಿನಿ ಬಸವರಾಜು ಈ ಬಾರಿ ಹೊಸದೊಂದು ಪ್ರಯತ್ನ ಮಾಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ಶುರುವಾಗಿದ್ದು ‘ದೇವ ದೇವ ಮಹದೇವ’ ಹಾಡು.

ಜನಪದ ಶೈಲಿಯ ಈ ಹಾಡಿಗೆ ಮಯೂರ್ ಅಂಬೆಕಲ್ಲು ಸಂಗೀತ, ಮಯೂರ್ ನೈಗ ಸಾಹಿತ್ಯವಿದೆ. ಮಹದೇಶ್ವರ ಬೆಟ್ಟದಲ್ಲಿ ಈ ವಿಡಿಯೋ ಆಲ್ಬಂ ಅನ್ನು ಚಿತ್ರೀಕರಿಸಲಾಗಿದೆ. ಶಿವರಾತ್ರಿಯ ಈ ಸುಸಂದರ್ಭದಲ್ಲಿ ದೇವ ದೇವ ಮಹದೇವ ಹಾಡನ್ನು ಖ್ಯಾತ ಚಿತ್ರಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದ್ದಾರೆ. ‘ಭಕ್ತಿಗೀತೆ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ದೇವ ದೇವ ಮಹದೇವ ಹಾಡಿನ ಮೂಲಕ ಮಹದೇಶ್ವರನ ಖಂಡಕಾವ್ಯವನ್ನು, ಮಹಾಪುರುಷನ ಇತಿಹಾಸವನ್ನು ಒಂದೇ ಹಿಡಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅಶ್ವಿನಿ ಅವರ ಧ್ವನಿಯನ್ನು ಕೇಳುತ್ತಿದ್ದರೆ ಅವರಿಗೆ ಉತ್ತಮ ಭವಿಷ್ಯವಿದೆ ಅನ್ನೋದು ಗೊತ್ತಾಗುತ್ತದೆ’ ಎಂದಿದ್ದಾರೆ ನಾಗೇಂದ್ರ ಪ್ರಸಾದ್.

ಬೆಂಗಳೂರಿನ ರಾಮಸಂದ್ರ ಗ್ರಾಮದಲ್ಲಿ ಹುಟ್ಟಿ ಬೆಳೆದು, ಸೇಂಟ್ ಫಿಲೋಮಿನಾ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ಶೇಷಾದ್ರಿಪುರಂ ವಿದ್ಯಾ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದು, ಪ್ರಸ್ತುತ  ಹೆಸರಾಂತ  ಐಟಿ ಕಂಪನಿಯಲ್ಲಿ ಉದ್ಯೋಗಕ್ಕಿರುವ ಅಶ್ವಿನಿ ಬಸವರಾಜು ಅವರಿಗೆ ಗಾಯಕಿಯಾಗಿಯೇ ಪೂರ್ಣ ಪ್ರಮಾಣದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಬಯಕೆಯಿದೆ. ಬಹುಶಃ ದೇವ ದೇವ ಮಹದೇವ ಆಲ್ಬಂ ಸಾಂಗ್ ಇವರ ಅಪೇಕ್ಷೆಯನ್ನು ಈಡೇರಿಸಬಹುದು.

ದೇಶ ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು.

ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೊಸ ಕಾನೂನನ್ನು ಜಾರಿ ಗೊಳಿಸುತ್ತಾರೆ ಎಂದು ತಾನು ನಂಬಿರುವುದಾಗಿ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ಛತ್ತೀಸ್‌ಗಢದ ರಾಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆಯು ಟೈಂ ಬಾಂಬ್‌ನಂತಿದೆ. ಅದರ ಸ್ಪೋಟ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಹೊಸ ಕಾನೂನಿನ ಅಗತ್ಯವಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ನಗರಗಳು ಮತ್ತು ಹಳ್ಳಿಗಳು ಎಂಬ ಭೇದವಿಲ್ಲದೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಡೆಯಬೇಕಾದರೆ ಜನಸಂಖ್ಯಾ ನಿಯಂತ್ರಣ ಕಾನೂನು ತರಬೇಕಿದೆ. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನವೇ ಜನಸಂಖ್ಯೆಯನ್ನು ನಿಯಂತ್ರಿಸಬಹುದಾದ ಕಾನೂನನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಾರಿಗೊಳಿಸುತ್ತಾರೆ ಎಂದು ನಾನು ನಂಬಿದ್ದೇನೆ.

ಈ ಕ್ರಮಗಳು ಹಿಂದೂಗಳನ್ನು ಮಾತ್ರವಲ್ಲದೆ ಭವಿಷ್ಯದಲ್ಲಿ ಬಿಜೆಪಿಯ ಮತಗಳನ್ನೂ ಸಹ ರಕ್ಷಿಸುತ್ತದೆ. ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಅದನ್ನು ನಾವು ಹಿಂದೂ ರಾಜಕೀಯ ರಾಷ್ಟ್ರವಾಗಿ ಮರುಸ್ಥಾಪಿಸಲು ಬಯಸುತ್ತೇವೆ. ಭಾರತವು ಹಿಂದೂ ಬಹುಸಂಖ್ಯಾತ ರಾಷ್ಟ್ರ, ಭಾರತದಲ್ಲಿ ಎಲ್ಲಿಯೂ ಹಿಂದೂಗಳು ಅಸುರಕ್ಷಿತರಾಗಲು ನಾವು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

ಚೀನಾ:
ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಒತ್ತಾಯಿಸುವ ಮೊದಲು ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಒಮ್ಮೆ ಚೀನಾ ದೇಶದ ಇಂದಿನ ಪರಿಸ್ಥಿತಿಯನ್ನು ಗಮನಿಸಬೇಕು. ಬಿಬಿಸಿಯ ವರದಿಯ ಪ್ರಕಾರ, ಚೀನಾದ ಜನಸಂಖ್ಯೆಯು 60 ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿತವನ್ನು ಖಂಡಿದೆ. ರಾಷ್ಟ್ರೀಯ ಮಕ್ಕಳ ಜನನ ಪ್ರಮಾಣ ಹಿಂದೆಂದೂ ಇಲ್ಲದಂತೆ ಪ್ರತಿ ಸಾವಿರ ಜನರಿಗೆ 6.77ಕ್ಕೆ ಇಳಿಕೆಯಾಗಿದೆ. 2022ರಲ್ಲಿ ಚೀನಾದ ಜನಸಂಖ್ಯೆ 141.18 ಕೋಟಿ. ಇದು ಹಿಂದಿನ ವರ್ಷ 2021ಕ್ಕೆ ಹೋಲಿಸಿದರೆ 8.5 ಲಕ್ಷ ಕಡಿಮೆಯಾಗಿದೆ.

ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಚೀನಾ ಸರ್ಕಾರವು ಅಳವಡಿಸಿಕೊಂಡ ನೀತಿಗಳಿಂದಾಗಿ ಅಲ್ಲಿ ಜನನ ಪ್ರಮಾಣವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಲೇ ಇದೆ. ಮಂಗಳವಾರ ಚೀನಾದ ನ್ಯಾಷನಲ್ ಬ್ಯೂರೊ ಆಫ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2021 ರಲ್ಲಿ ಶೇ.7.52 ರಷ್ಟಿದ್ದ ಮಕ್ಕಳ ಜನನ ಪ್ರಮಾಣವು 2022ರಲ್ಲಿ ಇಳಿಮುಖವಾಗಿದೆ. ಇದಕ್ಕೂ ಮೊದಲು ಚೀನಾ ಸರ್ಕಾರ ನೀಡಿದ ಅಂಕಿ ಅಂಶಗಳು ಚೀನಾದಲ್ಲಿ ಜನಸಂಖ್ಯೆ ಬಿಕ್ಕಟ್ಟು ಎದುರಾಗಬವುದು ಎಂದಿದೆ. ದೀರ್ಘಾವಧಿಯ ಆಧಾರದ ಮೇಲೆ ನೋಡುವುದಾದರೆ, ಚೀನಾದ ಕಾರ್ಮಿಕ ಶಕ್ತಿ ಕುಗ್ಗಲಿದೆ. ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾದಂತೆ, ಆರೋಗ್ಯ ಮತ್ತು ಔಷಧದಂತಹ ಇತರ ಸಾಮಾಜಿಕ ಭದ್ರತಾ ಯೋಜನೆಗಳ ಮೇಲಿನ ಹೊರೆ ಹೆಚ್ಚಾಗುತ್ತದೆ.

‘ಈ ಪ್ರವೃತ್ತಿ ಮುಂದುವರಿಯುತ್ತದೆ ಮತ್ತು ಕೊರೋನಾ ದುರಂತದ ನಂತರ ಇನ್ನಷ್ಟು ಹದಗೆಡಬಹುದು’ ಎಂದು ಆರ್ಥಿಕ ಗುಪ್ತಚರ ಸೇವೆಯ ಮುಖ್ಯ ಅರ್ಥಶಾಸ್ತ್ರಜ್ಞ ಯು ಕ್ಸು ಹೇಳಿದ್ದಾರೆ. 2023ರಲ್ಲಿ ಚೀನಾದ ಜನಸಂಖ್ಯೆಯು ಮತ್ತಷ್ಟು ಕುಸಿಯುತ್ತದೆ ಎಂದು ನಂಬುವ ತಜ್ಞರಲ್ಲಿ ಅವರೂ ಒಬ್ಬರು. ‘ಯುವಕರ ನಿರುದ್ಯೋಗ ಸಮಸ್ಯೆ ಮತ್ತು ನಿರೀಕ್ಷಿತ ಆದಾಯದ ಕೊರತೆಯು ಮದುವೆ ಮತ್ತು ಮಕ್ಕಳಂತಹ ಭವಿಷ್ಯದ ಯೋಜನೆಗಳನ್ನು ಮುಂದೂಡುತ್ತಿದೆ. ಇದು ಮಗುವಿನ ಜನನವನ್ನು ಕಡಿಮೆ ಮಾಡುತ್ತದೆ’,ಎಂದೂ ಅವರು ಹೇಳಿದ್ದಾರೆ.

ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು 1979ರಲ್ಲಿ ಪರಿಚಯಿಸಲಾದ ವಿವಾದಾತ್ಮಕ ‘ಒಂದು ಕುಟುಂಬ ಒಂದು ಮಗು’ ಕಾರ್ಯಕ್ರಮದಿಂದಾಗಿ ಚೀನಾದ ಪ್ರಸ್ತುತ ಜನಸಂಖ್ಯೆ ಕುಸಿತವನ್ನು ಖಂಡಿದೆ. ಈ ನೀತಿಯನ್ನು ಉಲ್ಲಂಘಿಸಿದ ಕುಟುಂಬಗಳಿಗೆ ದಂಡ ವಿಧಿಸಲಾಯಿತು; ಅತಿರೇಕದಲ್ಲಿ ಕೆಲಸವನ್ನೂ ಕಿತ್ತುಕೊಳ್ಳಲಾಯಿತು.ನಂತರ ‘ಒಂದು ಕುಟುಂಬ ಒಂದು ಮಗು’ ಎಂಬ ನೀತಿಯನ್ನು ಚೀನಾ ಸರ್ಕಾರವು 2016ರಲ್ಲಿ ರದ್ದುಗೊಳಿಸಿತು. ಮತ್ತು ದಂಪತಿಗಳು 2 ಮಕ್ಕಳನ್ನು ಹೊಂದಲು ಅವಕಾಶವನ್ನೂ ಕಲ್ಪಿಸಿಕೊಟ್ಟಿತು. ಇತ್ತೀಚಿನ ವರ್ಷಗಳಲ್ಲಿ ಇಳಿಮುಖವಾಗುತ್ತಿರುವ ಜನನ ಪ್ರಮಾಣವನ್ನು ನಿಗ್ರಹಿಸುವ ಸಲುವಾಗಿ ಚೀನಾ ಸರ್ಕಾರವು ತೆರಿಗೆ ವಿನಾಯಿತಿಗಳು, ಮಾತೃತ್ವ ಆರೈಕೆ ಮತ್ತು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹವನ್ನೂ ನೀಡುತ್ತಿದೆ.

ಆದರೂ ಚೀನಾ ಸರ್ಕಾರದ ಪ್ರಯತ್ನಗಳು ಫಲ ನೀಡುತ್ತಿಲ್ಲ. ಹೀಗಾಗಿ ಮಕ್ಕಳ ಜನನ ಪ್ರಮಾಣ ಹೆಚ್ಚಾಗುತ್ತಿಲ್ಲ. ಮಕ್ಕಳನ್ನು ಹೆರುವುದನ್ನು ಉತ್ತೇಜಿಸುವ ಸರ್ಕಾರದ ಪ್ರಕಟಣೆಗಳಲ್ಲಿ, ಮಕ್ಕಳ ಆರೈಕೆ ಸೇರಿದಂತೆ ಕೆಲಸ ಮಾಡುವ ಮಹಿಳೆಯರ ಹೊರೆಯನ್ನು ಕಡಿಮೆ ಮಾಡುವ ಹಾಗೂ ಮಗುವಿನ ಶಿಕ್ಷಣವನ್ನು ಬೆಂಬಲಿಸುವ ಯಾವುದೇ ಕ್ರಮಗಳಿಲ್ಲದಿರುವುದು ಇದಕ್ಕೆ ಕಾರಣವೆಂಬುದು ತಜ್ಞರ ಅಬಿಪ್ರಾಯವಾಗಿದೆ. ಆದರೆ ಜನಸಂಖ್ಯೆಯ ಬಿಕ್ಕಟ್ಟನ್ನು ಎದುರಿಸಲು ಚೀನಾ ಸಾಕಷ್ಟು ಮಾನವ ಸಂಪನ್ಮೂಲ ಮತ್ತು ಸಮಯವನ್ನು ಹೊಂದಿದೆ ಎಂದು ಹೇಳುತ್ತಿದೆ. ಮಕ್ಕಳ ಜನನ ಪ್ರಮಾಣ ಹೆಚ್ಚಾಗದೆ ಹೀಗೆ ಮುಂದುವರಿಯುತ್ತಿದ್ದರೆ, ಮುಂದಿನ ದಿನಗಳಲ್ಲಿ ಚೀನಾ ಬಹುದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ.

ಸಂಘಪರಿವಾರ:
ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಮಾತಿನಂತೆ ಹಿಂದೂಗಳನ್ನು ಮಾತ್ರವಲ್ಲದೆ ಭವಿಷ್ಯದಲ್ಲಿ ಬಿಜೆಪಿಯ ಮತಗಳನ್ನೂ ರಕ್ಷಣೆ ಮಾಡಲಿಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತಂದು ಚೀನಾ ಎದುರಿಸುತ್ತಿರುವ ಸಂಕಷ್ಟವನ್ನು ಭವಿಷ್ಯದಲ್ಲಿ ಭಾರತವೂ ಎದುರಿಸಬೇಕೆ? ಕೇಂದ್ರ-ರಾಜ್ಯ ಸರ್ಕಾರಗಳಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಲಿಯಿರುವ ಉದ್ದೆಗಳನ್ನು ಭರ್ತಿ ಮಾಡಲು ಸರ್ಕಾರಗಳು ಮುಂದಾಗುತ್ತಿಲ್ಲ. ಹೊಸದಾಗಿ ಉದ್ಯೋಗಗಳು ಸೃಷ್ಠಿ ಯಾಗುತ್ತಿಲ್ಲ. ದಿನದಿಂದ ದಿನಕ್ಕೆ ನಿರುದ್ಯೋಗದ ಸಮಸ್ಯೆ ಮಿತಿಮೀರುತ್ತಿದೆ. ತಳ ಸಮುದಾಯದ ವಿದ್ಯಾವಂತರು ಸ್ವಯಂ ಉದ್ಯೋಗ, ಸಣ್ಣ ವ್ಯಾಪಾರ ಅಥವಾ ಖಾಸಗಿ ವಲಯವನ್ನು ಅವಲಂಬಿಸಬೇಕಾದ ಪರಿಸ್ಥಿತಿಗೆ ನೂಕಲ್ಪಟ್ಟಿದ್ದಾರೆ. ದೇಶದಲ್ಲಿ ಬಡತನ ಜೀವಂತವಾಗಿರುವುದಕ್ಕೆ ಉಚಿತ ಪಡಿತರ ವಿತರಣೆಯೇ ಸಾಕ್ಷಿ. ಅಸ್ಪೃಶ್ಯತೆ ಇನ್ನೂ ಜೀವಂತವಿದೆ. ದಲಿತ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳು ಕಸಿದುಕೊಳ್ಳಲಾಗುತ್ತಿದೆ.  ಮಹಿಳೆಯರಿಗೆ ಸುರಕ್ಷತೆ ಇಲ್ಲ. ಮಹಿಳೆ ಮೇಲಿನ ಅತ್ಯಾಚಾರ ಕಡಿಮೆಯಾಗುತ್ತಿಲ್ಲ. ಇದೆಲ್ಲದರ ಬಗ್ಗೆ ಅಕ್ಕರೆಯಿಲ್ಲದವರು ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರಲು ಹೊರಟಿರುವುದು ಅಪಹಾಸ್ಯ. 

ಡಾ.ತೋಳ್.ತಿರುಮಾವಳವನ್: ಎಂ.ಪಿ.
ಕೋಲಾರ ಜಿಲ್ಲೆ ಮಾಲೂರಿನ ಹೋಂಡಾ ಕ್ರೀಡಾಂಗಣದಲ್ಲಿ ಸ್ಯಾಮ್ ಆಡಿಯೋಸ್ ವತಿಯಿಂದ ಹಮ್ಮಿಕೊಂಡಿದ್ದ ದೇಶದ ಮೊಟ್ಟ ಮೊದಲ ಬಾಬ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಬರಹಗಳು ಹಾಗೂ ಭಾಷಣಗಳ ಮೊದಲ ಸಂಪುಟದ ಧ್ವನಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ “ವಿಡುದಲೈ ಚಿರುತೈಗಳ್” ಪಕ್ಷದ ನಾಯಕ ಹಾಗೂ ತಮಿಳುನಾಡಿನ ಶಿವಗಂಗೈ ಸಂಸದ ಡಾ.ತೋಳ್.ತಿರುಮಾವಳವನ್, ‘ಭಾರತ ದೇಶ ಇಂದು ಅಪಾಯದಲ್ಲಿದೆ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಸಂವಿಧಾನವೂ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ರಕ್ಷಣೆ ಮಾಡಲು ಈ ದೇಶದ ಬಹುಸಂಖ್ಯಾತ ಅಹಿಂದ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವ ಪ್ರತಿಪಾದಕರು ಅನಿವಾರ್ಯವಾಗಿ ಇಂದು ಒಂದಾಗಬೇಕು’ ಸಂವಿಧಾನ ಅಪಾಯದಲ್ಲಿರುವ ಕಾರಣ ಸಾಮಾಜಿಕ ನ್ಯಾಯವೂ ಅಪಾಯದಲ್ಲಿದೆ ಎಂದರು. ತಿರುಮಾವಳವನ್ ಮಾತು ನಮಗೆ ಅರ್ಥವಾಗಿದ್ದರೆ ಅದುವೇ ಸತ್ಯ.

ಸಿನಿಮಾ

ಅರುಣ್ ಜಿ.,

ಎಲ್ಲ ಸಿನಿಮಾಗಳೂ ಕೆಜಿಎಫ್ಫು, ಕಾಂತಾರಾನೇ ಆಗಲು ಸಾಧ್ಯವಿಲ್ಲ. ಒಂದೊಂದು ಸಿನಿಮಾದಲ್ಲೂ ಒಂದೊಂದು ಬಗೆಯ ಕಂಟೆಂಟ್ ಇರುತ್ತದೆ. ಉತ್ತಮ ಸಿನಿಮಾ ಅನ್ನಿಸಿದಾಗ ಅದನ್ನು ಜನ ಮೆಚ್ಚಿ ನೋಡಿದಾಗಲೇ ಅವು ಹಿಟ್ ಅನ್ನಿಸಿಕೊಳ್ಳೋದು. ಬರುವ ಎಲ್ಲ ಸಿನಿಮಾಗಳೂ ಗುಣಮಟ್ಟ ಹೊಂದಿರೋದಿಲ್ಲ ಅನ್ನೋದೂ ನಿಜ. ಆದರೆ ಅಲ್ಲೊಂದು ಇಲ್ಲೊಂದು ಕ್ವಾಲಿಟಿ ಚಿತ್ರಗಳು ಬಂದಾಗ ಅದನ್ನು ಪ್ರೋತ್ಸಾಹಿಸಬೇಕಿರುವುದು ಬರಿಯ ಪ್ರೇಕ್ಷಕರ ಜವಾಬ್ದಾರಿ ಮಾತ್ರವಲ್ಲ, ಇಂಡಸ್ಟ್ರಿ ಕೂಡಾ ಸಾಥ್ ನೀಡಬೇಕು.

ಎಲ್ಲೋ ಕೆಲವು ಸಿನಿಮಾಗಳಿಗೆ ಕಿಚ್ಚ, ರಕ್ಷಿತ್ ಶೆಟ್ಟರ ಥರದವರು ಬಂದು ಕೈ ಹಿಡಿದ ಉದಾಹರಣೆಗಳಿವೆ. ಅದನ್ನು ಬಿಟ್ಟು ಕನ್ನಡದ ಬೇರೆ ಯಾವ ಹೀರೋಗಳೂ ಗುಣಮಟ್ಟದ ಸಿನಿಮಾಗಳು ಬಂದಾಗ ಅದರ ಬೆನ್ನಿಗೆ ನಿಂತು ಗೆಲ್ಲಿಸಿದ್ದು ಕಡಿಮೆ. ತಾವಾಯಿತು, ತಮ್ಮ ಪಾಡಾಯಿತು, ಯಾರು ಗೆದ್ದರೆಷ್ಟು? ಬಿಟ್ಟರೆಷ್ಟು ಎನ್ನುವ ಮನಸ್ಥಿತಿಯ ಸ್ಟಾರುಗಳೇ ಇಲ್ಲಿ ಹೆಚ್ಚು! ಸದ್ಯ ಕನ್ನಡದಲ್ಲಿ ದೊಡ್ಡಟ್ಟಿ ಬೋರೇಗೌಡ ಎನ್ನುವ ಸಿನಿಮಾವೊಂದು ತೆರೆ ಕಂಡಿದೆ. ನಿಜಕ್ಕೂ ಈ ನೆಲದ ಘಮಲಿನ ಸಿನಿಮಾ ಅದು. ಗ್ರಾಮಾಂತರ ಪ್ರದೇಶಗಳಲ್ಲಿ ಒಬ್ಬ ಬಡವ ಒಂದು ಮನೆ ಕಟ್ಟಿಸೋದು ಎಷ್ಟು ಕಷ್ಟ? ಸಣ್ಣದೊಂದು ಗೂಡು ಕಟ್ಟಲು ಈ ವ್ಯವಸ್ಥೆ ಹೇಗೆಲ್ಲಾ ಸತಾಯಿಸಿಬಿಡುತ್ತದೆ… ಅದರ ಜೊತೆಗೆ ಎದುರಾಗುವ ಕೌಟುಂಬಿಕ ಸಮಸ್ಯೆಗಳನ್ನೆಲ್ಲಾ ಸೇರಿಸಿ ನಿರ್ದೇಶಕ ಕೆ.ಎಂ.ರಘು ಚೆಂದದ ಸಿನಿಮಾವೊಂದನ್ನು ರೂಪಿಸಿದ್ದಾರೆ.

ಈ ಹಿಂದೆ ತರ್ಲೆ ವಿಲೇಜ್ ಮತ್ತು ಪರಸಂಗ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದವರು ರಘು. ಪರಸಂಗ ಸಿನಿಮಾದ ʻಮರಳಿಬಾರದೂರಿಗೆ ನಿನ್ನ ಪಯಣʼ ಹಾಡು ಇವತ್ತಿಗೂ ಎಲ್ಲೆಂದರಲ್ಲಿ ಕೇಳಿಸುತ್ತಲೇ ಇರುತ್ತದೆ. ದೊಡ್ಡಟ್ಟಿ ಬೋರೇಗೌಡ ಸಿನಿಮಾದಲ್ಲೂ ಬಹುತೇಕ ಹೊಸ ಮುಖಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಪ್ರಯತ್ನ ಮಾಡಿದ್ದಾರೆ. ಈ ಚಿತ್ರ ತೆರೆಗೆ ಬಂದಿದೆ. ನೋಡಿದವರೆಲ್ಲಾ ಮೆಚ್ಚಿ ಮಾತಾಡಿದ್ದಾರೆ. ವಿಮರ್ಶಕರು ಕೂಡಾ ಅಪಾರವಾಗಿ ಇಷ್ಟ ಪಟ್ಟಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಯಾವೊಬ್ಬ ಸ್ಟಾರ್ ಗಳೂ ಈ ಸಿನಿಮಾವನ್ನು ಪ್ರೋತ್ಸಾಹಿಸಿಲ್ಲ ಅಂತಾ ನಿರ್ದೇಶಕ ರಘು ಬೇಸರಿಸಿಕೊಂಡಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ಬಿಟ್ಟು  ತಮ್ಮ ಆಂತರ್ಯದ ನೋವನ್ನು ಬಹಿರಂಗಗೊಳಿಸಿದ್ದಾರೆ.

ದೇಶ ರಾಜ್ಯ

ನವದೆಹಲಿ: ಅದಾನಿ ಸಮೂಹದ ವಿರುದ್ಧ ಫೋರ್ಬ್ಸ್ ನಿಯತಕಾಲಿಕೆ ಮತ್ತೊಂದು ಭ್ರಷ್ಟಾಚಾರದ ಆರೋಪವನ್ನು ಮಾಡಿದೆ. ಅದಾನಿ ಸಮೂಹದ ಷೇರು ಮಾರುಕಟ್ಟೆ ವಂಚನೆ ಕುರಿತು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿತ್ತು. ಈ ಹಿನ್ನಲೆಯಲ್ಲಿ ಗೌತಮ್ ಅದಾನಿ ಅವರ ಹಿರಿಯ ಸಹೋದರ ವಿನೋದ್ ಅದಾನಿ, ಸಿಂಗಾಪುರದ ಕಂಪನಿಗಳ ಮೂಲಕ ರಷ್ಯಾದ ಬ್ಯಾಂಕ್‌ಗಳಿಂದ ಸಾಲ ಪಡೆದು ದುಷ್ಕೃತ್ಯ ಎಸಗಿದ್ದಾರೆ ಎಂದು ಫೋರ್ಬ್ಸ್ ನಿಯತಕಾಲಿಕೆ ಆರೋಪಿಸಿದೆ.

ಅದಾನಿ ಸಮೂಹದೊಂದಿಗೆ ಸಂಬಂಧಿಸಿದ ವಿದೇಶಿ ಸಂಸ್ಥೆಗಳು ವಿನೋದ್ ಅದಾನಿಯ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದುಬೈ, ಸಿಂಗಾಪುರ್, ಇಂಡೋನೇಷಿಯಾ ಮುಂತಾದ ದೇಶಗಳಿಂದ ಅದಾನಿ ಸಮೂಹದೊಂದಿಗೆ ಸಂಪರ್ಕದಲ್ಲಿರುವ ಇತರ ಸಂಸ್ಥೆಗಳ ಅಂತರರಾಷ್ಟ್ರೀಯ ವ್ಯಾಪಾರವನ್ನು ವಿನೋದ್ ಅದಾನಿ ನೋಡಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ನೆಲಸಿ ವ್ಯಾಪಾರ ಮಾಡದ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿನೋದ್ ಅದಾನಿ, ಸಿಂಗಾಪುರ್ ಮೂಲದ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾದ ‘ಪಿನಾಕಲ್’ ಅನ್ನು ರಹಷ್ಯವಾಗಿ ನಿಯಂತ್ರಿಸುತ್ತಿದ್ದಾರೆ. ಈ ಕಂಪನಿಯ ಮೂಲಕ, ವಿನೋದ್ ಅಧಾನಿ 2020ರಲ್ಲಿ ರಷ್ಯಾದ ವಿಟಿಬಿ ಬ್ಯಾಂಕ್‌ನಿಂದ 2,100 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ. ಪಿನಾಕಲ್ ಮೂಲಕ ಪಡೆದ 2,100 ಕೋಟಿ ರೂಪಾಯಿಗಳಲ್ಲಿ 2,000 ಕೋಟಿ ರೂಪಾಯಿಗಳನ್ನು ಹೆಸರಿಸದ ಷೇರುಗಳಿಗೆ ಮೀಸಲಿಡಲಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ರಷ್ಯಾದ ಬ್ಯಾಂಕ್‌ನಿಂದ ಸಾಲಕ್ಕೆ ಗ್ಯಾರಂಟರುಗಳಾಗಿ ‘ಆಫ್ರೋ ಏಷ್ಯಾ’ ಮತ್ತು ‘ವರ್ಲ್ಡ್‌ವೈಡ್’ ಸಂಸ್ಥೆಗಳನ್ನು ಪಿನಾಕಲ್ ಸೂಚಿಸಿದೆ. ಮೇಲಿನ ಎರಡೂ ಕಂಪನಿಗಳು ಅದಾನಿ ಸಮೂಹದ ಷೇರುದಾರರ ಒಡೆತನದಲ್ಲಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಅದಾನಿ ಸಮೂಹದ ಷೇರು ಮಾರುಕಟ್ಟೆ ವಂಚನೆ ಕುರಿತು ಕೆಲವು ದಿನಗಳ ಹಿಂದೆ ಅಮೆರಿಕ ಮೂಲದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿತ್ತು. ಇದು ಅದಾನಿ ಸಮೂಹಕ್ಕೆ ಬಾರಿ ಹಿನ್ನಡೆಯನ್ನು ಉಂಟು ಮಾಡಿರುವ ಹಿನ್ನಲೆಯಲ್ಲಿ ಫೋರ್ಬ್ಸ್ ನಿಯತಕಾಲಿಕೆ ಮಾಡಿರುವ ಆರೋಪ ಹೆಚ್ಹು ವಿವಾದಕ್ಕೆ ಕಾರಣವಾಗಿದೆ.

ದೇಶ ರಾಜ್ಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮುಂಬೈ: ಮಹಾರಾಷ್ಟ್ರದಲ್ಲಿ, ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಂಟಿಯಾಗಿ ಸೇರಿ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿದವು. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.

ಈ ಹಿನ್ನಲೆಯಲ್ಲಿ ಶಿವಸೇನೆಯ ಹಿರಿಯ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ ಕೆಲವು ಶಾಸಕರು ಬಂಡಾಯವೆದ್ದು  ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆದರು. ಇದರ ಪರಿಣಾಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರ ಪತನವಾಯಿತು.

ನಂತರ ಏಕನಾಥ್ ಶಿಂಧೆ ನೇತೃತ್ವದ 40 ಶಿವಸೇನೆ ಶಾಸಕರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರವನ್ನು ರಚಿಸಿದರು. ಏಕನಾಥ್ ಶಿಂಧೆ ಮರಾಠಾ ಮುಖ್ಯಮಂತ್ರಿಯಾದರು. ನಂತರ ಶಿಂಧೆ ಬಣದವರು ಶಿವಸೇನೆ ಪಕ್ಷದ ಹೆಸರು, ಪಕ್ಷದ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ತಮ್ಮದೆಂದು ಪ್ರತಿಪಾದಿಸಿದರು. ಪಕ್ಷದ ಬಹುಪಾಲು ಸಂಸದರು, ಶಾಸಕರು ತಮ್ಮ ಪರ ಇರುವುದರಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತಮ್ಮ ತಂಡಕ್ಕೆ ನೀಡಬೇಕೆಂದು ಶಿಂಧೆ ಆಗ್ರಹಿಸಿದರು. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರವನ್ನೂ ಸಲ್ಲಿಸಿದರು. ಇದಕ್ಕೆ ಉದ್ಧವ್ ಠಾಕ್ರೆ ಕಡೆಯವರು ಆಕ್ಷೇಪ ವ್ಯಕ್ತಪಡಿಸಿ, ನಿಜವಾದ ಶಿವಸೇನೆ ನಾವೇ ಎಂದು ಚುನಾವಣಾ ಆಯೋಗದಲ್ಲಿ ವಾದ ಮಂಡಿಸಿದರು.

ಎರಡೂ ಕಡೆಯ ವಿವರಣೆಗಳು, ದಾಖಲೆಗಳು ಮತ್ತು ಪಕ್ಷದ ನಿಯಮಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗ, ಶಿವಸೇನೆ ಪಕ್ಷದ ಹೆಸರು, ಪಕ್ಷದ ಚಿಹ್ನೆ ಬಿಲ್ಲು ಮತ್ತು ಬಾಣವನ್ನು ಏಕನಾಥ್ ಶಿಂಧೆ ಬಣಕ್ಕೆ, ಉದ್ಧವ್ ಠಾಕ್ರೆ ತಂಡಕ್ಕೆ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಎಂಬ ಹೆಸರನ್ನು ಮತ್ತು ಟಾರ್ಚ್ (ಜ್ಯೋತಿ) ಚಿಹ್ನೆಯನ್ನು ನೀಡಿ ಆದೇಶಿಸಿದೆ.

ಶಿವಸೇನ ಪಕ್ಷದ ಹೆಸರನ್ನು, ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿರುವುದಕ್ಕೆ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿಯೂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಇಂದು ತಮ್ಮ ಮನೆಯ ಮುಂದೆ ಜಮಾಯಿಸಿದ್ದ ಬೆಂಬಲಿಗರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ‘ಪ್ರಧಾನಿ ಮೋದಿಗೆ ಚುನಾವಣಾ ಆಯೋಗವು ಗುಲಾಮವಾಗಿದೆ. ಹಿಂದೆಂದೂ ಮಾಡದ ಕೆಲಸವನ್ನು ಅದು ಮಾಡಿದೆ. ಬೆಂಬಲಿಗರು ತಾಳ್ಮೆಯಿಂದಿರಬೇಕು. ಮುಂಬೈ ಸ್ಥಳೀಯ ಚುನಾವಣೆಗೆ ನಾವು ತಯಾರಿಯಾಗಬೇಕು. ಪಕ್ಷದ ಚಿಹ್ನೆ ಕಳವಾಗಿದೆ. ಕಳ್ಳರಿಗೆ ತಕ್ಕ ಪಾಠವನ್ನು ಕಲಿಸಬೇಕು’ ಎಂದರು.

ಬೆಂಗಳೂರು ರಾಜಕೀಯ

ವರದಿ: ಮಂಜುಳಾ ರೆಡ್ಡಿ

ಬೆಂಗಳೂರು: ಮಾಲೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಆರ್.ವಿ.ಭೂತಪ್ಪ ಬೆಂಗಳೂರಿನಲ್ಲಿ ಪತ್ರಿಕಾ ಘೋಷ್ಟಿ ನಡೆಸಿ, ಸುಮಾರು ವರ್ಷಗಳಿಂದ ಮಾಲೂರು ಜನರ ಸೇವೆಯಲ್ಲಿ ತೊಡಗಿರುವ ಸ್ಥಳೀಯನಾದ ನನಗೆ, ಈ ಬಾರಿ ಬಿಜೆಪಿ ಪಕ್ಷದಿಂದ ವಿಧಾನಸಭಾ  ಟಿಕೆಟ್ ಕೊಡಬೇಕೆಂದು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಮೂಲತಃ ಮಾಲೂರು ತಾಲೂಕಿನ ರಾಜೇನಹಳ್ಳಿ ಗ್ರಾಮದವನಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ ಅವರ ರಾಜ್ಯಾಡಳಿತವನ್ನು ಮತ್ತು ದೇಶ, ನಾಡಿನ ಬಗ್ಗೆ ಅವರಿಗಿರುವ ಗೌರವ, ಮುಂದಾಲೋಚನೆ, ಅಭಿವೃದ್ಧಿ ಮಂತ್ರ ಇವೆಲ್ಲವನ್ನು ನೋಡಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದಿದ್ದೇನೆ. ಕ್ಷೇತ್ರದ ಜನರ ನಾಡಿಮಿಡಿತ ಏನೆಂಬುದು ನನಗೆ ಗೊತ್ತಿದೆ. ಅಲ್ಲಿನ ಸಮಸ್ಯೆಗಳೇನು ಅವುಗಳಿಗೆ ಯಾವ ರೀತಿ ಪರಿಹಾರ ಕೊಡಬೇಕೆಂಬುದನ್ನು ನಾನು ಈಗಾಗಲೇ ಯೋಚಿಸಿದ್ದೀನಿ. ಬಿಜೆಪಿ ಪಕ್ಷದಿಂದ ನಾಲ್ಕು ಜನರು ಆಕಾಂಕ್ಷಿಗಳಿದ್ದಾರೆ ಆದರೆ ಅವರೆಲ್ಲ ಹೊರ ಕ್ಷೇತ್ರಗಳಿಂದ ಬಂದವರು. ನನಗೆ ಪಕ್ಷ ಟಿಕೆಟ್ ಕೊಟ್ಟರೆ ನೂರಕ್ಕೆ ನೂರರಷ್ಟು ಗೆದ್ದು ಬರುತ್ತೇನೆ’ ಎಂದರು.

‘ಮಾಲೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೇ. ತಾಲ್ಲೂಕಿನಲ್ಲಿ ರಸ್ತೆ, ಆಸ್ಪತ್ರೆ, ಸಾರಿಗೆ ಯಾವುದು ಸರಿ ಇಲ್ಲ. ಹಾಲಿ ಶಾಸಕರು ಅಭಿವೃದ್ಧಿಯ ಕಡೆ ಗಮನಹರಿಸದೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಾನು ಬಿಜೆಪಿ ಪಕ್ಷದಿಂದ ಆಯ್ಕೆಯಾದರೆ, ನೀರಾವರಿ, ರೈತರ ಸಮಸ್ಯೆ ಸೇರಿದಂತೆ ಎಲ್ಲವನ್ನು ಬಗೆಹರಿಸುತ್ತೇನೆ’ ಎಂದು ಆಶ್ವಾಸನೆ ಕೊಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬೆನಗಟ್ಟ ರವಿ, 15 ವರ್ಷಗಳಿಂದ ರಾಜಕೀಯ ಪಕ್ಷಗಳನ್ನು ನೋಡುತ್ತಾ ಬಂದಿದ್ದೇನೆ. ತಾಲ್ಲೂಕಿನಲ್ಲಿ ಮಂಜುನಾಥಗೌಡರು ಬಿಟ್ಟರೆ ಬೇರೆ ಯಾವ ಶಾಸಕರು ತಾಲೂಕಿನ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರಿಲ್ಲದೆ ಆಹಾಕಾರ ಎದ್ದಿದೆ. ಸದ್ಯ ಇರುವ ಕಾಂಗ್ರೆಸ್ ಪಕ್ಷದ ಶಾಸಕ ನಂಜೇಗೌಡ ಅವರಿಗೆ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಸಹಕಾರ ನೀಡಿತು. ಅದನ್ನು ಉಪಯೋಗಿಸುವಕೊಳ್ಳುವ ಜಾಣ್ಮೆ, ತಿಳುವಳಿಕೆ, ಅವರಿಗಿಲ್ಲ. ಅವರ ಹೋಬಳಿಗೆ ಮಾತ್ರ ಅವರು ಎಂಎಲ್ಎ. ಉಳಿದ ಕ್ಷೇತ್ರಗಳನ್ನು ಕಡೆಗಣಿಸಿ ತಾರತಮ್ಯ ಮೆರೆಯುತ್ತಿದ್ದಾರೆ’ ಎಂದು ದೂರಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೋಮಶೇಖರ್. ಆರ್‌.ಸಿ.ವೆಂಕಟಗಿರಿಯಪ್ಪ, ಆರ್.ಎಂ.ಚಂದ್ರೇಗೌಡ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

ಬೆಂಗಳೂರು

ಕಸದ ರಾಶಿಯನ್ನು ವಿಲೇವಾರಿ ಮಾಡದ ಹೊಂಬೇಗೌಡ ನಗರ ವಾರ್ಡ್ ಎಇಇ ಪ್ರದೀಪ್ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲು ದಸಂಸ ನಿರ್ಧಾರ!

ಬೆಂಗಳೂರು: ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಹೊಂಬೇಗೌಡ ನಗರ, (ವಾರ್ಡ್ 145) ಸಿದ್ದಯ್ಯ ರಸ್ತೆ, ಫ್ಯಾಮಿಲಿ ಕೋರ್ಟ್ ಸಮೀಪದಲ್ಲಿರುವ ರಸ್ತೆಯ ಎರಡೂ ಕಡೆ, ಬಿದ್ದಿರುವ ಕಸದ ರಾಶಿಯಿಂದ ಸಾರ್ವಜನಿಕರು ಮುಕ್ತವಾಗಿ ಓಡಾಡಲು ಬಹಳ ತೊಂದರೆ ಪಡುತ್ತಿದ್ದಾರೆ.

ಸುಮಾರು 5 ಅಡಿ ಎತ್ತರಕ್ಕೆ ಬಿದ್ದಿರುವ ಈ ಕಸದ ರಾಶಿಯನ್ನು ಕೂಡಲೇ ವಿಲೇವಾರಿ ಮಾಡಿ, ಸಾರ್ವಜನಿಕರು ಮುಕ್ತವಾಗಿ ಓಡಾಡಲು ಅನುವು ಮಾಡಿಕೊಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಂ.ಸುಬ್ರಮಣಿ, ಸಹಾಯಕ ಕಾರ್ಯಪಾಲಕ ಅಭಿಯಂತಕರಾದ ಪ್ರದೀಪ್ ಅವರಿಗೆ ಹಲವು ಬಾರಿ ದೂರು ನೀಡಿದ್ದಾರೆ. ‘ಬಂದು ನೋಡುವುದಾಗಿ, ಮಾಡಿಕೊಡುವುದಾಗಿ ಹೇಳುತ್ತಾರೆ ಹೊರೆತು, ಇಲ್ಲಿಯವರೆಗೆ ಒಮ್ಮೆಯಾದರೂ ಸ್ಥಳಕೆ ಬಂದು ನೋಡಿಯೇ ಇಲ್ಲ. ಇದರ ಬಗ್ಗೆ ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಅವರ ಗಮನಕ್ಕೆ ತಂದರೂ ಯಾವ ಪ್ರಯೋಜನವು ಆಗುತ್ತಿಲ್ಲ’. ಎಂದು ಎಂ.ಸುಬ್ರಮಣಿ ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಸುದಾಮನಗರ ವಾರ್ಡ್ (118) ಸಿಕೆಸಿ ಗಾರ್ಡನ್, ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿಯೂ ಇದೇ ರೀತಿ ಕಸ-ಕಡ್ಡಿಗಳು ವಿಲೇವಾರಿ ಆಗದೆ ಗುಡ್ಡೆಕಟ್ಟಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನಾನುಕೂಲ ಆಗುತ್ತಿದೆ. ಎಇಇ ಪ್ರದೀಪ್ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಂದಾಗಿದೆ.

ಸಾರ್ವಜನಿಕ ಉದ್ದೇಶದಿಂದ ಕೇಳುತ್ತಿರುವ ಈ ಸ್ವಚ್ಚತಾ ಕಾರ್ಯವನ್ನು ಮಾಡಿಕೊಡಲು ಬಿಬಿಎಂಪಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ನಾಚಿಕೆಗೇಡು.

ಸಿನಿಮಾ

ಅರುಣ್ ಜಿ.,

ಪ್ರೇಮಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ಅಭಿನಯದ ಈ ಚಿತ್ರ ಫೆಬ್ರವರಿ 24 ರಂದು ಬಿಡುಗಡೆ!

ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಉತ್ತಮ ಕಂಟೆಂಟ್ ವುಳ್ಳ ಜೂಲಿಯೆಟ್‌ 2 ಚಿತ್ರ ಸಹ ಫೆಬ್ರವರಿ 24ರಂದು ಬಿಡುಗಡೆಯಾಗುತ್ತಿದೆ. ಪ್ರೇಮಪೂಜ್ಯಂ ಚಿತ್ರದ ಖ್ಯಾತಿಯ ಬೃಂದಾ ಆಚಾರ್ಯ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

‘ಜೂಲಿಯೆಟ್ 2 ಮಹಿಳಾ ಪ್ರಧಾನ ಚಿತ್ರ. ತೊಂದರೆಗೆ ಸಿಲುಕಿದ ಹೆಣ್ಣುಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ? ಎಂಬುದು ಪ್ರಮುಖ ಕಥಾಹಂದರ. ಸಾಮಾನ್ಯವಾಗಿ “ಜೂಲಿಯೆಟ್‌” ಎಂದ ತಕ್ಷಣ ಪ್ರೇಮಕಥೆ ಅಂದುಕೊಳ್ಳುವುದು ವಾಡಿಕೆ. ಆದರೆ ಇದು ಲವ್ ಸ್ಟೋರಿ ಅಲ್ಲ‌. ಇಲ್ಲಿ ರೋಮಿಯೋ ಇರುವುದಿಲ್ಲ.

ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ. ಎಂಬುದನ್ನು ಸಿನಿಮಾ ಮೂಲಕ ಹೇಳ ಹೊರಟ್ಟಿದ್ದೇವೆ. ಹಾಡುಗಳು ಹಾಗೂ ಟ್ರೇಲರ್ ಮೂಲಕ ನಮ್ಮ ಚಿತ್ರ ಜನರ ಮನ ತಲುಪಿದೆ. ಅಪ್ಪ – ಮಗಳ ಬಾಂಧವ್ಯದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಇದು ನನ್ನ ಪ್ರಥಮ ಚಿತ್ರ. ನೋಡಿ ಹಾರೈಸಿ’ ಎಂದರು ನಿರ್ದೇಶಕ ವಿರಾಟ್ ಬಿ ಗೌಡ.

‘ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಜೂಲಿಯೆಟ್‌ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೊಂದು ವಿಭಿನ್ನ ಕಥೆ ಎನ್ನಬಹುದು. ಮಹಿಳೆ ಅಬಲೆಯಲ್ಲ; ಸಬಲೆ. ಎಂದು ನಿರ್ದೇಶಕರು ಹೇಳ ಹೊರಟ್ಟಿದ್ದಾರೆ‌. ತಂದೆ-ಮಗಳ ಬಾಂಧವ್ಯದ ಸನ್ನಿವೇಶಗಳು ಮನ ಮಿಡಿಯತ್ತದೆ. ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ‌ ಮರೆಯಲು ಅಸಾಧ್ಯ. ಎಲ್ಲರೂ ಬೆವರು ಸುರಿಸಿ ಚಿತ್ರ‌ ಮಾಡಿದ್ದೇವೆ ಎನ್ನುತ್ತಾರೆ. ನಾವು ರಕ್ತ ಸುರಿಸಿ ಸಿನಿಮಾ ಮಾಡಿದ್ದೇವೆ ಎನ್ನಬಹುದು. ಏಕೆಂದರೆ ಕಾಡಿನಲ್ಲಿ ಜಿಗಣೆಗಳು ಅಷ್ಟು ಕಾಟ ಕೊಟ್ಟಿದೆ’ ಎಂದು ನಾಯಕಿ ಬೃಂದಾ ಆಚಾರ್ಯ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಬೃಂದಾ ಆಚಾರ್ಯ

ಚಿತ್ರದಲ್ಲಿ ಅಭಿನಯಿಸಿರುವ ಶ್ರೀಕಾಂತ್ ಹಾಗೂ ರಾಯ್ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣವಿದೆ. ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಿನಿಮಾ

ಅರುಣ್ ಜಿ.,

ಅನೇಕ ಗಣ್ಯರ ಸಮ್ಮುಖದಲ್ಲಿ, ಚೆನ್ನೈ ನಗರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು “ನಮಾಮಿ ನಮಾಮಿ” ಹಾಡು.

ಇಡೀ ಭಾರತಾದ್ಯಂತ ಬಿಡುಗಡೆಗೂ ಮುಂಚೆಯೇ ಎಲ್ಲರ ಗಮನ ಸೆಳೆದಿರುವ ಆರ್.ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ಹಾಗೂ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಶೇಷಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದಿಂದ ಮಹಾಶಿವರಾತ್ರಿಗೆ ಮಹಾಶಿವನನ್ನು ಕೊಂಡಾಡುವ “ನಮಾಮಿ ನಮಾಮಿ” ಎಂಬ ಸುಮಧುರ ಗೀತೆ ಬಿಡುಗಡೆಯಾಗಿದೆ. ಕಿನಾಲ್ ರಾಜ್ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಖ್ಯಾತ ನಟಿ ಶ್ರೇಯಾ ಶರಣ್ ಈ ಹಾಡಿನಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 

ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಿತು. ಸಾಕಷ್ಟು ಗಣ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಚಿತ್ರ ಸಾಗಿ ಬಂದ ಬಗ್ಗೆ ಹಾಗೂ ಹಾಡಿನ ಕುರಿತು ಮಾಹಿತಿ ನೀಡಿದ ನಿರ್ದೇಶಕ ಆರ್.ಚಂದ್ರು, “ಕಬ್ಜ”  ಚಿತ್ರದ ಹಾಡುಗಳನ್ನು ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹೋದ ಕಡೆ ಚಿತ್ರದ ಕುರಿತು ಕೇಳಿಬರುತ್ತಿರುವ ಪ್ರಶಂಸನೀಯ ಮಾತುಗಳಿಗೆ ಮನ ತುಂಬಿ ಬಂದಿದೆ. ನನ್ನ ತಂಡಕ್ಕೆ ಹಾಗೂ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

“ಕಬ್ಜ” ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಶಿವನನ್ನು ಆರಾಧಿಸುವ ಈ ಹಾಡು ಬಹಳ ಮಧುರವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು ನಟಿ ಶ್ರೇಯಾ ಶರಣ್.

ಶ್ರೀ.ಸಿದ್ದೇಶ್ವರ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ “ಕಬ್ಜ” ಚಿತ್ರದ ಟೀಸರ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಕಮರ್ಷಿಯಲ್ ಹಾಡೊಂದು ಲೋಕಾರ್ಪಣೆಯಾಗಲಿದೆ.

ಪ್ರಪಂಚದಾದ್ಯಂತ ಅಭಿಮಾನಿಗಳು ಕಾಯುತ್ತಿರುವ “ಕಬ್ಜ” ಚಿತ್ರ ಮಾರ್ಚ್ 17 ರಂದು (ಪನೀತ್ ರಾಜಕುಮಾರ್ ಜನ್ಮದಿನದಂದು) ಅದ್ದೂರಿಯಾಗಿ ಬಿಡುಗಡೆಯಾಗಲಿದೆ.