ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2023 » Page 3 of 7 » Dynamic Leader
November 21, 2024
Home 2023 February (Page 3)
ದೇಶ ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

‘ಭಾರತದಂತಹ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಲು ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೋರೋಸ್ 100 ಬಿಲಿಯನ್ ಡಾಲರ್ ನಿಧಿಯನ್ನು ರಚಿಸಿದ್ದಾರೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಸಮೂಹವನ್ನು ಅಮೆರಿಕ ಸಂಸ್ಥೆ ಹಿಂಡೆನ್‌ಬರ್ಗ್ ಆರ್ಥಿಕ ಅಕ್ರಮಗಳ ಆರೋಪ ಮಾಡಿತ್ತು. ಇದರಿಂದ ಅದಾನಿ ಸಮೂಹದ ಮೌಲ್ಯ 100 ಶತಕೋಟಿ ಡಾಲರ್ ನಷ್ಟು ಕುಸಿತಾವನ್ನು ಖಂಡಿತು. ಈ ಹಿನ್ನಲೆಯಲ್ಲಿ ಹಂಗೇರಿಯ ಅಮೆರಿಕದ ಉದ್ಯಮಿ ಜಾರ್ಜ್ ಸೋರೋಸ್ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಅಂತರರಾಷ್ಟ್ರೀಯ ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೋರೋಸ್, ಇತ್ತೀಚಿನ ಅದಾನಿ ಸಮೂಹದ ಬಿಕ್ಕಟ್ಟನ್ನು ಪ್ರಸ್ತಾಪ ಮಾಡಿದ ಅವರು, ‘ಬಹುಕೋಟ್ಯಾಧಿಪತಿ ಕಂಪನಿಗಳ ವಿರುದ್ಧ ವಂಚನೆ ಮತ್ತು ಷೇರು ವಂಚನೆ ಆರೋಪಗಳ ಕುರಿತು ವಿದೇಶಿ ಹೂಡಿಕೆದಾರರು ಮತ್ತು ಸಂಸತ್ತಿನ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕು’ ಎಂದು ಹೇಳಿದರು.

‘ಅದಾನಿಯ ವ್ಯಾಪಾರ ಸಾಮ್ರಾಜ್ಯದಲ್ಲಿನ ಗೊಂದಲವು, ಹೂಡಿಕೆಗೆ ಭಾರತ ಉತ್ತಮ ಸ್ಥಳವಾಗಿದೆ ಎಂಬ ವಿಶ್ವಾಸವನ್ನು ಅಲುಗಾಡಿಸಿದೆ ಮತ್ತು ಇದು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುಜ್ಜೀವನಕ್ಕೆ ಅವಕಾಶವನ್ನು ಸೃಷ್ಟಿಸುತ್ತದೆ’ ಎಂದು ಹಂಗೇರಿಯಲ್ಲಿ ವಾಸಿಸುವ ಅಮೇರಿಕನ್ ಉದ್ಯಮಿ ಜಾರ್ಜ್ ಸೋರೋಸ್ ಹೇಳಿದ್ದಾರೆ.

ಇದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿಯ ಹಿರಿಯ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘ಜಾರ್ಜ್ ಸೋರೋಸ್ ಪ್ರಧಾನಿ ನರೇಂದ್ರ ಮೋದಿಯನ್ನು ಮಾತ್ರ ದೂಷಿಸಿಲ್ಲ, ಅವರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೂಷಿಸಿದ್ದಾರೆ. ಭಾರತದಂತಹ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಲು 100 ಬಿಲಿಯನ್ ಡಾಲರ್‌ಗಳ ನಿಧಿಯನ್ನು ಅವರು ರಚಿಸಿದ್ದಾರೆ’ ಎಂದು ಆಪಾದಿಸಿದ ಸ್ಮೃತಿ ಇರಾನಿ,

‘ಅಂತಾರಾಷ್ಟ್ರೀಯ ಉದ್ಯಮಿ ಜಾರ್ಜ್ ಸೋರೋಸ್ ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸುವ ತನ್ನ ಉದ್ದೇಶವನ್ನು ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿಯಂತಹ ನಾಯಕರನ್ನು ಗುರಿಯಾಗಿಸಲು ಅವರು ಶತಕೋಟಿ ಡಾಲರ್‌ಗೂ ಹೆಚ್ಚು ಹಣವನ್ನು ನೀಡಿದ್ದಾರೆ ಎಂಬುದು ಅವರ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯನ್ನು ಹಲವು ಬಾರಿ ಟೀಕಿಸಬಹುದು, ಆದರೆ ಭಾರತದ ಮೇಲಿನ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

ಅದೇ ರೀತಿ, ಸೊರೊಸ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ಪ್ರಧಾನಿ-ಸಂಬಂಧಿತ ಅದಾನಿ ಹಗರಣವು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುಜ್ಜೀವನವನ್ನು ಉಂಟುಮಾಡುತ್ತದೆಯೇ ಎಂಬುದು ಸಂಪೂರ್ಣವಾಗಿ ಕಾಂಗ್ರೆಸ್, ಪ್ರತಿಪಕ್ಷಗಳು ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದೆ. ಜಾರ್ಜ್ ಸೋರೋಸ್ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸೋರೋಸ್ ಅವರಂತಹವರು ನಮ್ಮ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನೂ ನಮ್ಮ ನೆಹರೂವಿನ ಪರಂಪರೆ ಖಾತ್ರಿಪಡಿಸುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಸಿನಿಮಾ

ಅರುಣ್ ಜಿ.,

ದೃವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್. ಎ.ಪಿ. ಅರ್ಜುನ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ವಾಸವಿ ಎಂಟರ್ ಪ್ರೈಸಸ್ ಅಡಿಯಲ್ಲಿ ಉದಯ್ ಕೆ.ಮೆಹ್ತಾ ಅವರು ನಿರ್ಮಿಸುತ್ತಿರುವ 9ನೇ ಚಿತ್ರ ಇದಾಗಿದೆ. ಮಾರ್ಟಿನ್ ಚಿತ್ರದ ಪ್ಯಾನ್ ಇಂಡಿಯಾ ಟೀಸರ್ ಇದೇ ತಿಂಗಳ 23 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು, 

ಮೊದಲು ಮಾತನಾಡಿದ ನಿರ್ಮಾಪಕ ಉದಯ್ ಕೆ.ಮೆಹ್ತಾ ‘ಕಳೆದ ಆಗಸ್ಟ್ 15ಕ್ಕೆ ನಮ್ಮ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದರೊಂದಿಗೆ ಚಿತ್ರವನ್ನು ಆರಂಭಿಸಿದೆವು. ಈಗಾಗಲೇ ಚಿತ್ರದ ಟಾಕಿ ಪೋರ್ಷನ್ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಫೆಬ್ರವರಿ 23 ರಂದು ವಿಐಪಿ ಅಭಿಮಾನಿಗಳಿಗೋಸ್ಕರ ಪೇಯ್ಡ್ ಪ್ರೀಮಿಯರ್ ಟೀಸರ್ ಪ್ರದರ್ಶನವನ್ನು ವೀರೇಶ್  ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೇವೆ. ಹಾಗಂತ ಇದರಿಂದ ಹಣ ಮಾಡುವ ಉದ್ದೇಶವಿಲ್ಲ, ಚಿತ್ರಮಂದಿರದಲ್ಲಿ ಹೆವಿ ಕ್ರೌಡ್ ಆಗಬಾರದೆಂಬ ಉದ್ದೇಶ ನಮ್ಮದು. ಇದರಿಂದ ಬಂದ ಹಣವನ್ನು ಗೋಶಾಲೆಗೆ ಕೊಡುತ್ತಿದ್ದೇವೆ. ಅಲ್ಲದೆ ಅದೇ ದಿನ ಸಂಜೆ ತಮ್ಮ ಮೊಬೈಲ್‌ಗಳಲ್ಲೇ ಅಭಿಮಾನಿಗಳು ಮಾರ್ಟಿನ್ ಟೀಸರ್ ನೋಡಬಹುದು. ಅಲ್ಲದೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿರುವುದರಿಂದ ಬೇರೆ ಭಾಷೆಗಳ ಮಾದ್ಯಮದವರನ್ನು ಆಹ್ವಾನಿಸಿ ಪ್ಯಾನ್ ಇಂಡಿಯಾ ಪ್ರೆಸ್‌ಮೀಟ್ ಮಾಡುತ್ತಿದ್ದೇವೆ. ಆರಂಭದಲ್ಲಿ ನಮ್ಮ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಆಗುತ್ತೆ ಅಂದುಕೊಂಡಿರಲಿಲ್ಲ, ಬರುಬರುತ್ತಾ ದೊಡ್ಡದಾಗುತ್ತಾ ಹೋಯಿತು’ ಎಂದು ಹೇಳಿದರು.

ನಿರ್ದೇಶಕ ಎ.ಪಿ.ಅರ್ಜುನ್ ಮಾತನಾಡುತ್ತ ‘ಮಾರ್ಟಿನ್ ನಮ್ಮ ಕನ್ನಡದ ಸಿನಿಮಾ. ಮೊದಲು ನಮ್ಮವರ ಜೊತೆ ಮಾಹಿತಿ ಹಂಚಿಕೊಂಡು ನಂತರ ಬೇರೆಯವರ ಮುಂದೆ ಹೋಗುತ್ತಿದ್ದೇವೆ. ಇದು ಎಲ್ಲಾ ಕಡೆಗೂ ಸಲ್ಲುವ ಯೂನಿವರ್ಸಲ್ ಕಥೆಯಾಗಿದ್ದರಿಂದ, ಬೇರೆ ಬೇರೆ ಭಾಷೆಗಳಲ್ಲಿ ನಿರ್ಮಿಸಿದ್ದೇವೆ. ಕಳೆದ 2021ರ ಸೆಪ್ಟೆಂಬರ್‌ನಲ್ಲಿ ಚಿತ್ರ ಆರಂಭವಾಯಿತು. ಇಷ್ಟುದಿನ, ಈ ಮಟ್ಟದಲ್ಲಿ ಆಗುತ್ತೆ ಅಂದ್ಕೊಂಡಿರಲಿಲ್ಲ, ಹೈದರಾಬಾದ್‌ ನಲ್ಲಿ ಸೆಟ್ ಹಾಕಿ 45 ದಿನ ಶೂಟ್ ಮಾಡಿದೆವು. ವೈಜಾಕ್‌ನಲ್ಲಿ ಚೇಸ್‌ಸೀನ್ 20 ದಿನಗಳವರೆಗೆ ಆಯಿತು, ಜೊತೆಗೆ ಆಗಾಗ ಬರುತ್ತಿದ್ದ ಮಳೆಯಿಂದಲೂ ತಡವಾಯಿತು. ಇನ್ನು ಕಾಶ್ಮೀರದಲ್ಲಿ 25 ದಿನ  ಅಲ್ಲದೆ ಮುಂಬೈನಲ್ಲಿ ಚೇಸಿಂಗ್ ಸೀನ್  ಚಿತ್ರೀಕರಣ ಮಾಡಿಕೊಂಡು ಬಂದೆವು. ಒಂದೊಂದು ಕಡೆ ಶೂಟ್ ಮಾಡಿಕೊಂಡು ಬಂದಾಗಲೂ ಒಂದಷ್ಟು ದಿನ ಗ್ಯಾಪ್ ಬೇಕಾಯಿತು. ಚಿತ್ರದಲ್ಲಿ ದ್ರುವ ಅವರಿಗೆ ತುಂಬಾ ಗೆಟಪ್ ಇದೆ, ನನ್ನ ಕೆರಿಯರ್‌ನಲ್ಲೇ ಅತಿದೊಡ್ಡ ಪವರ್ ಪ್ಯಾಕ್ಡ್ ಚಿತ್ರವಿದು. ವಿಶೇಷವಾದ ಮೋಕೋಬೋಟ್ ಕ್ಯಾಮೆರಾದಲ್ಲಿ 52 ದಿನ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಿಸಿದ್ದೇವೆ. ರಾಮ್ ಲಕ್ಷ್ಮಣ್ ಆಕ್ಷನ್ ಹಾಗೂ ರವಿವರ್ಮಾ ಚೇಸಿಂಗ್ ಸೀನ್ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಪರೀಕ್ಷೆಗಳು, ಐಪಿಎಲ್, ಚುನಾವಣೆ ಮುಗಿದ ನಂತರ ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

ನಾಯಕ ದ್ರುವ ಮಾತನಾಡಿ ’23ರ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ನಮ್ಮ ಚಿತ್ರದ ಟೀಸರ್ ರಿಲೀಸಾಗುತ್ತಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ಈವರೆಗೆ ಮಾಡಿದ್ದಕ್ಕಿಂತ ಬೇರೆ ಥರನೇ ಇದೆ. ಇಡೀ ಸಿನಿಮಾದಲ್ಲಿ  ತುಂಬಾ ಕಡಿಮೆ ಡೈಲಾಗ್ ಇದ್ದು,  ಆಕ್ಷನ್ ಸೀನ್ ಜಾಸ್ತಿ ಇರುತ್ತದೆ’ ಎಂದು ಹೇಳಿದರು. ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಕ್ಯಾಮೆರಾ ವರ್ಕ್ ಬಗ್ಗೆ ಮಾಹಿತಿ ನೀಡಿದರು. ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಮಣಿ ಶರ್ಮಾ ಅವರ ಸಂಗೀತ ಸಂಯೋಜನೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಕಾಶ್ಮೀರದ ಮೈನಸ್ 7 ಡಿಗ್ರೀ ತಾಪಮಾನ ಇರುವ ಲೊಕೇಶನ್‌ಗಳಲ್ಲಿ ಆಕ್ಷನ್‌ಸೀನ್ ಚಿತ್ರೀಕರಿಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದ ಹೈಲೈಟ್.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ರಷ್ಯಾ-ಉಕ್ರೇನ್ ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳುವ ನಿರೀಕ್ಷೆಯಿದೆ!

ಮಾರ್ಚ್ ಮೊದಲ ವಾರದಲ್ಲಿ ಈ ಸಂಬಂಧ ಅಧಿಸೂಚನೆ ಹೊರಬೀಳುವ ಸಾದ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಫೆಬ್ರವರಿ 25 ರಂದು ಪೂರ್ವ ಯುರೋಪಿಯನ್ ದೇಶವಾದ ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ಪ್ರಾರಂಭಿಸಿತು. ಯುದ್ಧ ಪ್ರಾರಂಭಿಸಿ ಒಂದು ವರ್ಷವು ಹತ್ತಿರವಾಗುತ್ತಿದ್ದರೂ ಯುದ್ಧವು ನಿಂತಪಾಡಿಲ್ಲ. ಈ ಯುದ್ಧದಿಂದ ದೊಡ್ಡ ಹಾನಿಯೇ ಎದುರಾಗಿದೆ. ಈ ಯುದ್ಧವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿತು. ಕಚ್ಚಾ ತೈಲ ಮತ್ತು ಆಹಾರ ಉತ್ಪನ್ನಗಳ ಅಂತರರಾಷ್ಟ್ರೀಯ ವಿತರಣೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿತು. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ದ್ವನಿಗೂಡಿಸಿದರೂ ಈ ವಿಷಯದಲ್ಲಿ ಭಾರತವು ತಟಸ್ಥವಾಗಿ ಉಳಿದುಕೊಂಡಿತು.

ಪ್ರಧಾನಿ ನರೇಂದ್ರ ಮೋದಿಯವರು ಯುದ್ಧವನ್ನು ಕೊನೆಗಾಣಿಸುವಂತೆ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಎರಡೂ ದೇಶಗಳನ್ನು ಒತ್ತಾಯಿಸುತ್ತ ಬಂದರು. ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತಕತೆಯನ್ನೂ ನಡೆಸಿದರು.

ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಸಮೂಹವಾದ ‘G-20’ ನ ಅಧ್ಯಕ್ಷ ಸ್ಥಾನವನ್ನು ಭಾರತ ಈ ವರ್ಷ ವಹಿಸಿಕೊಂಡಿದೆ. ಈ ವರ್ಷದ ಸಮ್ಮೇಳನವು ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿದೆ. ‘ಉಕ್ರೇನ್-ರಷ್ಯಾ ಯುದ್ಧವನ್ನು ತಡೆಯಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ’ ಎಂದು ಅಮೆರಿಕ ಸೇರಿದಂತೆ ಇತರ ದೇಶಗಳು ಹೇಳಿಕೊಂಡು ಬರುತ್ತಿವೆ. ಅವರ ಸಾಮೀಪ್ಯವನ್ನು ಬಳಸಿ, ಯುದ್ಧವನ್ನು ನಿಲ್ಲಿಸಲು ಪುಟಿನ್ ಅವರನ್ನು ಒತ್ತಾಯಿಸುವಂತೆ ವಿಶ್ವ ನಾಯಕರು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರವಾದ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಚರ್ಚಿಸುವ ಸಭೆ ಇತ್ತೀಚೆಗೆ ರಷ್ಯಾದಲ್ಲಿ ನಡೆಯಿತು. ಇದರಲ್ಲಿ ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು. ನಂತರ ಅವರು ಪುಟಿನ್ ಅವರೊಂದಿಗೆ ಖಾಸಗಿ ಮಾತುಕತೆ ನಡೆಸಿದ್ದರು. ಇದು ಜಾಗತಿಕವಾಗಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಹಿನ್ನಲೆಯಲ್ಲಿ ರಷ್ಯಾ ನಂತರ ಅಜಿತ್ ದೋವಲ್ ಕಳೆದ 10 ದಿನಗಳಿಂದ ಅಮೆರಿಕ, ಜರ್ಮನಿ, ಫ್ರಾನ್ಸ್ ಸೇರಿದಂತೆ ಎಂಟು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ವಿಶೇಷ ಸಂದೇಶವನ್ನು ಆ ದೇಶದ ನಾಯಕರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರ್ಚ್ ಮೊದಲ ವಾರದಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಘೋಷಣೆಯೊಂದನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ ಎಂಬ ಸುದ್ದಿ ಹೊಸದಿಲ್ಲಿಯ ಅಧಿಕಾರ ವಲಯದಲ್ಲಿ ಹರಿದಾಡುತ್ತಿದೆ. ಇದಕ್ಕಾಗಿ ಮೊದಲ ವಾರದಲ್ಲಿ ಪ್ರಧಾನಿ ಮೋದಿ ರಷ್ಯಾ ಪ್ರವಾಸ ಮಾಡಬಹುದು ಅಥವಾ ಪುಟಿನ್ ಭಾರತಕ್ಕೆ ಬರಬಹುದು ಎನ್ನಲಾಗುತ್ತಿದೆ. ಭಾರತವು G-20 ನಾಯಕತ್ವವನ್ನು ವಹಿಸಿಕೊಂಡ ನಂತರ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಮೂಲಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಪ್ರಭಾವ ಇನ್ನೂ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ದೇಶ ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಆದಾಯ ತೆರಿಗೆ ತನಿಖೆಯ ನಡುವೆ ಅಮೆರಿಕ ಬಿಬಿಸಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

2002ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕೋಮು ಗಲಭೆ ನಡೆದು, ದೇಶಾದ್ಯಂತ ಭಾರೀ ಕೋಲಾಹಲ ಉಂಟಾಯಿತು. ಆ ಗಲಭೆಯಲ್ಲಿ ಮೋದಿಯೂ ಶಾಮೀಲಾಗಿದ್ದರು ಎಂದು ಆರೋಪಿಸಿ ಪ್ರಕರಣಗಳು ದಾಖಲಾದವು.

ಭಾರತೀಯ ರಾಜಕೀಯ ವಲಯದಲ್ಲಿ ಬಾರಿ ಗದ್ದಲವನ್ನು ಉಂಟುಮಾಡಿದ ಆ ಘಟನೆಯನ್ನು ಆದರಿಸಿ, ಬಿಬಿಸಿ ಸಾಕ್ಷ್ಯಚಿತ್ರವನ್ನು ತಯಾರಿಸಿ ಅದನ್ನು ಇತ್ತೀಚಗೆ ಎರಡು ಭಾಗಗಳಾಗಿ ಬಿಡುಗಡೆ ಮಾಡಿತು. ಇದರಿಂದ ಕೆಂಡಾಮಂಡಲವಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು, ಬಿಬಿಸಿಯ ಸಾಕ್ಷ್ಯಚಿತ್ರವನ್ನು ಖಂಡಿಸಿ ಅದನ್ನು ಭಾರತದಲ್ಲಿ ನಿಷೇಧ ಮಾಡಿತು. ಇದನ್ನು ದೇಶಾದ್ಯಂತ ಇರುವ ವಿರೋಧ ಪಕ್ಷಗಳು ಒಕ್ಕೊರಲಿನಿಂದ ಖಂಡಿಸಿ, ಪ್ರತಿಭಟನೆಯನ್ನು ಮಾಡಿತು. ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ನಿಷೇಧವನ್ನು ಧಿಕ್ಕರಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿತ್ತು.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆದಾಯ ತೆರಿಗೆ ಇಲಾಖೆ, ಏಕಾಏಕಿಯಾಗಿ ದೇಶದಲ್ಲಿರುವ ಬಿಬಿಸಿ ಕಛೇರಿಗಳ ಮೇಲೆ ದಾಳಿಯನ್ನು ನಡೆಸುತ್ತಿದೆ. ಮುಂಬೈ ಮತ್ತು ದೆಹಲಿ ಕಚೇರಿಗಳಲ್ಲಿ ಎರಡನೇ ದಿನವೂ ನಡೆಸುತ್ತಿರುವ ಈ ದಾಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, “ಅಮೆರಿಕ ಯಾವಾಗಲೂ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮದ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಅಂತರರಾಷ್ಟ್ರೀಯ ಹಕ್ಕುಗಳು ಪ್ರಜಾಪ್ರಭುತ್ವಕ್ಕೆ ಮೂಲಭೂತವಾಗಿವೆ” ಎಂದು ಹೇಳಿದ್ದಾರೆ.

“ಭಾರತದಲ್ಲಿನ ಬಿಬಿಸಿ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ತನಿಖೆಯ ಬಗ್ಗೆ ತನಗೆ ತಿಳಿದಿದೆ” ಎಂದು ಹೇಳಿದ ಅವರು, “ವಿಶ್ವದಾದ್ಯಂತ ಸ್ವತಂತ್ರವಾದ ಮಾಧ್ಯಮ ಚಟುವಟಿಕೆಯನ್ನು ಬೆಂಬಲಿಸುವುದಾಗಿ ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮಾಧ್ಯಮಗಳ ಚಟುವಟಿಕೆ ಬಹಳ ಮುಖ್ಯ” ಎಂದು ಅವರು ತಿಳಿಸಿದ್ದಾರೆ.

ಸಿನಿಮಾ

ಅರುಣ್ ಜಿ.,

ವರ್ಷಗಳ ಕಾಲ ಪ್ರೇಮಿಗಳಾಗಿದ್ದು ಇತ್ತೀಚಿಗಷ್ಟೆ ದಂಪತಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ವ್ಯಾಂಲಂಟೈನ್ ಡೇನ ಈ ಬಾರಿ ವಿಶೇಷವಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಒಂದು ಪ್ರೇಮಕತೆಗಳ ಪುಸ್ತಕವನ್ನು ಲೋಕಾರ್ಪಣೆ ಮಾಡುವುದರ ಮೂಲಕ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ “ಪ್ರೇಮಪತ್ರದ ಆಫೀಸು ಮತ್ತು ಅವಳು” ಎಂಬ ವಿಶಿಷ್ಟ ಶೀರ್ಷಿಕೆಯ ಕಥಾ ಸಂಕಲನವನ್ನು ಅವರಿಬ್ಬರೂ ಬಿಡುಗಡೆ ಮಾಡಿದ್ದಾರೆ. ಲೇಖಕ ಶಿವಕುಮಾರ ಮಾವಲಿ, ಪ್ರಕಾಶಕಿ ಪ್ರೇಮ ಶಿವಕುಮಾರ ಜೊತೆಗೂಡಿ ಇಬ್ಬರೂ ಪ್ರೇಮ ಪುಸ್ತಕವೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ವಾಲಂಟೈನ್ ದಿನಗಳ ನೆನಪು ಮಾಡಿಕೊಂಡರು.

ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನ ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು. 

ಹರಿಪ್ರಿಯ, ”ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ” ಎಂದು ಹೇಳಿದರೆ, ವಸಿಷ್ಠ ಸಿಂಹ, “ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು. ಮಾವಲಿ ಪಬ್ಲಿಕೇಶನ್ ಪ್ರಕಟಮಾಡುತ್ತಿರುವ ಈ ಕಥಾ ಸಂಕಲನವನ್ನು ಹೆಚ್ಚು ಜನ ಓದಲಿ ಮತ್ತು ಇಂಥ ಅನೇಕ ಪುಸ್ತಕಗಳು ಅವರಿಂದ ಮೂಡಿ ಬರಲಿ ಎಂದು ಆಶಿಸಿದರು.

‘ಇಷ್ಟು ವರ್ಷಗಳಿಗಿಂತ ಈ ಬಾರಿ ನಮ್ಮ ವ್ಯಾಲಂಟೈನ್ ಡೇ ವಿಶೇಷವಾಗಿ ಆಯಿತು, ಪ್ರೇಮಪುಸ್ತಕವೊಂದು ನಮ್ಮಿಂದ ಬಿಡುಗಡೆ ಆಗುವಂತಾಯಿತು’ ಎಂದು ಹರಿಪ್ರಿಯ ಹೇಳಿದರು. 

‘ದೇವರು ಅರೆಸ್ಟ್ ಆದ’ ಮತ್ತು ‘ಟೈಪಿಸ್ಟ್ ತಿರಸ್ಕರಿಸಿದ ಕತೆ’ ಎಂಬ ಕತಾ ಸಂಕಲನಗಳ ಮೂಲಕ ಹೊಸ ರೀತಿಯ ಕತೆಗಳನ್ನು ಪರಿಚಯಿಸಿದ ಶಿವಕುಮಾರ ಮಾವಲಿಯವರ ‘ಸುಪಾರಿ ಕೊಲೆ’ ನಾಟಕ ಒಂದು ಪತ್ತೇದಾರಿ ಮಾದರಿಯ ನಾಟಕವಾಗಿದ್ದರೆ, ಇತ್ತೀಚಿಗೆ ಪ್ರದರ್ಶನಗೊಂಡ ಅವರ ‘ಒಂದು ಕಾನೂನಾತ್ಮಕ ಕೊಲೆ’ ನಾಟಕವು, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿಕೊಂಡು ಸಶಕ್ತವಾಗಿ ರಾಜಕೀಯ ವಿಡಂಬನೆ ಮಾಡುವ ನಾಟಕವಾಗಿದೆ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರ ಬದುಕಲ್ಲಿ ನಡದ ಘಟನೆಯಾಧಾರಿತ ಕಾದಂಬರಿ ‘LTTE Murthy Calling’ ಇತ್ತೀಚಿಗಷ್ಟೆ ತಮಿಳಿಗೆ ಅನುವಾದಗೊಂಡಿದೆ.

ಈಗ ಅವರ ಹೊಸ ಕತಾ ಸಂಕಲನ “ಪ್ರೇಮಪತ್ರದ ಆಫೀಸು ಮತ್ತು ಅವಳು” ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗುತ್ತಿರುವ ಮೊದಲ ಪುಸ್ತಕವಾಗಿದೆ. ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸಿನಿಮಾ

ಅರುಣ್, ಜಿ.,

ಎರಡು ಲಕ್ಷಕ್ಕೆ ಮಾರಾಟವಾಯಿತು ಚಿತ್ರದ ಮೊದಲ ಟಿಕೆಟ್!!

ಶೀರ್ಷಿಕೆ, ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಕನ್ನಡಿಗರ ಮನ‌ ತಲುಪಿರುವ “ಕಡಲ ತೀರದ ಭಾರ್ಗವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಾಜಿ ಉಪ ಮಹಾಪೌರರಾದ ಮೋಹನ್ ರಾಜು,  “ನೀರ್ ದೋಸೆ” ಚಿತ್ರದ ನಿರ್ಮಾಪಕರಾದ ಪ್ರಸನ್ನ ಹಾಗೂ “ಗಜಾನನ ಗ್ಯಾಂಗ್” ಚಿತ್ರದ ನಿರ್ಮಾಪಕರಾದ ನಾಗೇಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ಮಾರ್ಚ್ 3 ನೇ ತಾರೀಖು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಮೊದಲ ಟಿಕೆಟ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು. ಅತಿಥಿಯಾಗಿ ಆಗಮಿಸಿದ್ದ ಮೋಹನ್ ರಾಜು ಅವರು 2 ಲಕ್ಷ ರೂಪಾಯಿ ನೀಡಿ ಈ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು.

ಭಾರೀ ಬೆಲೆಗೆ ಟಿಕೆಟ್ ಮಾರಾಟವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ನಿರ್ಮಾಪಕರಾದ ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ಮೊದಲ ಟಿಕೆಟ್ ಮಾರಾಟದಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡುವುದಾಗಿ ತಿಳಿಸಿದ್ದಾರೆ.  

ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲ್ಲುತ್ತಿದೆ. ಅದರಲ್ಲೂ “ಕ” ಹೆಸರಿನಿಂದ ಆರಂಭವಾಗುವ “ಕೆ.ಜಿ.ಎಫ್”, “ಕಾಂತಾರ” ಚಿತ್ರಗಳು ಭರ್ಜರಿ ಯಶಸ್ಸು ಕಂಡಿದೆ. ಅದೇ “ಕ” ಅಕ್ಷರದಿಂದ ಆರಂಭವಾಗುವ “ಕಡಲ ತೀರದ ಭಾರ್ಗವ” ಕೂಡ ಪ್ರಚಂಡ ಯಶಸ್ಸು ಕಾಣಲಿ ಎಂದು ಮೋಹನ್ ರಾಜು ಹಾರೈಸಿದರು. ‌

ಚಿತ್ರದಲ್ಲಿ ಕಡಲ ತೀರದಲ್ಲಿ ವಾಸಿಸುವ ಭಾರ್ಗವನಾಗಿ ನಾನು ಅಭಿನಯಿಸಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ. ಅಧಿಕ ಮೊತ್ತ ಕೊಟ್ಟು ಟಿಕೆಟ್ ಖರೀದಿಸಿದ ಮೋಹನ್ ರಾಜು ಅವರಿಗೆ ಹಾಗೂ ಚಿತ್ರಕ್ಕೆ ಸಹಕಾರ ‌ನೀಡಿದ್ದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದರು ನಟ – ನಿರ್ಮಾಪಕ ಪಟೇಲ್ ವರುಣ್ ರಾಜು.

ನಾನು ಭರತ್ ಎಂಬ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ಮನತುಂಬಿ ಬಂದಿದೆ ಎಂದು ನಾಯಕ‌ ಭರತ್ ಗೌಡ ತಿಳಿಸಿದರು.

ಚಿತ್ರದ ಒಂದು ಸನ್ನಿವೇಶದ ಮೂಲಕ ಮಾತು ಪ್ರಾರಂಭಿಸಿದ ನಿರ್ದೇಶಕ ಪನ್ನಗ ಸೋಮಶೇಖರ್, ಇದು ಹಿರಿಯ ಸಾಹಿತಿ ಶಿವರಾಮ ಕಾರಂತರ ಜೀವನ್ನಾಧಾರಿತ ಚಿತ್ರವಲ್ಲ. ಕಡಲ ತೀರದಲ್ಲಿ ವಾಸಿಸುವ ನಮ್ಮ ನಾಯಕನ ಹೆಸರು ಭಾರ್ಗವ ಎಂದರು.

ಸಮಾರಂಭದಲ್ಲಿ ಹಾಜರಿದ್ದ ಅತಿಥಿಗಳು ಹಾಗೂ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

ರಾಜಕೀಯ

ವರದಿ: ರಾಮು, ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮತ್ತು ರಾಯಚೂರು ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡಿತ್ತಿದ್ದ ಎರಡು ಗುಂಪುಗಳ ಮೇಲೆ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ. ಅಕ್ರಮ ಮರಳು ದಂದೆಯ ಸಾಗಾಟದ ನಿಖರವಾದ ಮಾಹಿತಿ ಪಡೆದ ರಾಯಚೂರು ಉಪ ವಿಭಾಗಧಿಕಾರಿ ಯಂಗ್ ಡೈನಾಮಿಕ್ ಆಫೀಸರ್ ರಜನಿಕಾಂತ್ ರವರು ದಾಳಿ ಮಾಡಿ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.

ಫೆಬ್ರವರಿ 12 ರಂದು ರಾತ್ರಿ  10-30ಕ್ಕೆ ಮಾನ್ವಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮದ್ಲಾಪುರ ಗ್ರಾಮದ ಹತ್ತಿರದ ತುಂಗ ಬದ್ರಾ ನದಿಯಲ್ಲಿ ಮತ್ತು ಫೆಬ್ರವರಿ 1 ರಂದು ರಾಯಚೂರು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ  ಕೃಷ್ಣ ನದಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಿಸುತ್ತಿದ್ದ ಲಾರಿಗಳನ್ನು ಹಿಡಿದು ತಪಾಸಣೆ ಮಾಡಿ, ನಿಯಮವಳಿಗಳ ಪ್ರಕಾರ ದೂರು ದಾಖಲಿಸಿಕೊಂಡು ದಂಡ ವಿದಿಸಿರುವ ಸಂಗತಿ ತಿಳಿದು ಬಂದಿದೆ.

ಈ ನದಿಗಳ  ವ್ಯಾಪ್ತಿಯಲ್ಲಿ  ಮರಳು ಸಾಗಾಣಿಕೆ ಬಹು ಹಿಂದಿನಿಂದಲೂ ನಡೆಯುತ್ತಿರುವ ಕಳ್ಳ ದಂದೆಯಾಗಿದೆ. ಇದೀಗ ರಾಯಚೂರು ಉಪ ವಿಭಾಗಧಿಕಾರಿ ಯಾದ ರಜನಿಕಾಂತ್ ಅವರು ಮಾಡಿರುವ ದಾಳಿಯನ್ನು ರಾಯಚೂರು ಜಿಲ್ಲೆಯ ನಾಗರಿಕರು ಶ್ಲಾಘಿಸಿದ್ದಾರೆ.

ಸಿನಿಮಾ

ಅರುಣ್ ಜಿ.,

ದುಡ್ಡೊಂದಿದ್ರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಎನ್ನುವ ಮನಸ್ಥಿತಿಯ ಹುಡುಗರು. ಹಣ ಎಲ್ಲರ ಅವಶ್ಯಕತೆ, ಅನಿವಾರ್ಯತೆ ನಿಜ. ಹಾಗಂತ ಅದನ್ನು ಹೇಗೆ ಬೇಕಾದರೂ ಹಾಗೆ ಸಂಪಾದಿಸಿಬಿಡಲು ಸಾಧ್ಯವಿಲ್ಲವಲ್ಲಾ? ಒಳ್ಳೇ ಮಾರ್ಗಗಳನ್ನು ಕಂಡು ಹಿಡಿದುಕೊಂಡು ಶ್ರಮವಹಿಸಿ ಸಂಪಾದಿಸಬೇಕು. ಹಣ ಮಾಡುವ ಧಾವಂತಕ್ಕೆ ಬಿದ್ದು ಯಾವ್ಯಾವುದೋ ದಾರಿಯಲ್ಲಿ ದುಡಿದರೆ ಅದೂ ಒಂದು ಬದುಕು ಅನ್ನಿಸಿಕೊಳ್ಳುತ್ತಾ? ದುಡ್ಡಿನ ಕುರಿತು ನಾನಾ ಮಜಲುಗಳನ್ನು ತೆರೆದು ತೋರಿಸುವ ಸಿನಿಮಾ ʻರೂಪಾಯಿʼ.

ಎಲ್ಲೆಲ್ಲಿಂದಲೋ ಬಂದು ಒಂದು ಕಡೆ ಸೇರಿದವರ ಮನಸ್ಥಿತಿ, ಪರಿಸ್ಥಿತಿಗಳು ಬೇರೆಯದ್ದೇ ಆಗಿರುತ್ತದೆ. ಆದರೆ ಎಲ್ಲರ ಅಗತ್ಯ ಮಾತ್ರ ದುಡ್ಡು. ಇವರೊಂದಿಗೆ ದೊಡ್ಡ ಮಟ್ಟದ ಹಣ ಕೂಡಾ ಜರ್ನಿ ಮಾಡುತ್ತಿರುತ್ತದೆ. ಆದರೆ ಅದು ಇವರಿಗೆ ಗೊತ್ತೇ ಇರೋದಿಲ್ಲ. ಆ ಹಣವನ್ನು ಇನ್ಯಾರೋ ಬೆನ್ನಟ್ಟಿರುತ್ತಾರೆ. ಮನುಷ್ಯ ಹಣದ ಹಿಂದೆ ಓಡೋದನ್ನು ಇಲ್ಲಿ ರೂಪಕಗಳ ಮೂಲಕ ಬಿಚ್ಚಿಟ್ಟಿದ್ದಾರೆ. ಬದುಕಿನ ಅನಿವಾರ್ಯಗಳಿಗಾಗಿ ದೇಹವನ್ನೇ ಬಂಡವಾಳ ಮಾಡಿಕೊಂಡ ಹೆಣ್ಣುಮಕ್ಕಳ ಕತೆ ಕೇಳಿರ್ತೀವಿ. ನೀವಿಲ್ಲಿ ಗಂಡು ವೇಶ್ಯೆಯನ್ನೂ ನೋಡಬಹುದು. ಒಟ್ಟಾರೆ ಜೀವನದ ವಾಸ್ತವಗಳನ್ನು ಅಷ್ಟೇ ತಮಾಷೆ ರೀತಿಯಲ್ಲಿ ಅನಾವರಣಗೊಳಿಸಿರುವ ಸಿನಿಮಾ ರೂಪಾಯಿ!

ವಿಜಯ್ ಜಗದಾಲ್ ಮೊದಲ ಬಾರಿಗೆ ನಟಿಸಿ, ನಿರ್ದೇಶಿಸಿರುವ ಸಿನಿಮಾ ‘ರೂಪಾಯಿ’. ಆದರೆ ಇದು ಇವರ ಮೊದಲ ಸಿನಿಮಾ ಅಂತಾ ಅನ್ನಿಸೋದೇ ಇಲ್ಲ.  

‘ರೂಪಾಯಿ’ ಒಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆ. ‘ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದು, ಹಣದ ಮೌಲ್ಯದ ಕುರಿತು ನಗುವಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ನಗಿಸುವುದಕ್ಕೆ ಯಾವುದೇ ಪ್ರತ್ಯೇಕ ಪಾತ್ರಗಳಿಲ್ಲ. ಸನ್ನಿವೇಶಗಳೇ ನಗು ತರಿಸುತ್ತದೆ. ಸಡನ್ನಾಗಿ ಹಣ ಸಿಕ್ಕಿಬಿಟ್ಟರೆ ಸಂಬಂಧಗಳು ಹೇಗೆ ಹದಗೆಡುತ್ತವೆ ಎನ್ನುವ ವಿಚಾರದೊಂದಿಗೆ ಕ್ರಿಕೆಟ್ ಹಗರಣದ ಎಳೆಯೂ ಇಲ್ಲಿ ಬಂದು ಹೋಗುತ್ತದೆ. 

ವಿಜಯ್ ಜಗದಾಲ್ ಜೊತೆಗೆ ಕೃಷಿ ತಾಪಂಡ, ಯಶ್ವಿಕ್, ‘ಮೈತ್ರಿ’ ಜಗದೀಶ್, ಶಂಕರ್ ಮೂರ್ತಿ, ರಾಮ್ ಚಂದನ್, ಚಂದನಾ ರಾಘವೇಂದ್ರ, ಪ್ರಮೋದ್ ಶೆಟ್ಟಿ, ರಾಕ್ಲೈನ್ ಸುಧಾಕರ್, ಮೋಹನ್ ಜನೇಜ ಮುಂತಾದವರು ಪಾತ್ರಕ್ಕೆ ಹೇಗೆ ಬೇಕೋ ಹಾಗೆ ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಅವರ ಸಂಗೀತ, ಆರ್.ಡಿ.ನಾಗಾರ್ಜುನ್ ಅವರ ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಅವರ ಸಂಕಲನ ಕೂಡಾ ಅಚ್ಚುಕಟ್ಟಾಗಿದೆ.

ಸಿನಿಮಾ ರೇಟಿಂಗ್: 3.5/5

ಸಿನಿಮಾ

ಅರುಣ್ ಜಿ.,

ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ್ ಬೇಲೂರು ಸಂಸ್ಥೆಯಡಿ ನಿರ್ಮಿಸಿರುವ ಪ್ರಥಮ ಚಿತ್ರ “1 RAಬರಿ ಕಥೆ”. ಇತ್ತೀಚೆಗಷ್ಟೆ ತನ್ನ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿರುವ ಚಿತ್ರತಂಡ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 

ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಂಥ ಪಕ್ಕಾ ಮಾಸ್ ಕಮರ್ಷಿಯಲ್ ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್, ಸಸ್ಪೆನ್ಸ್-ಥ್ರಿಲ್ಲರ್, ಸೆಂಟಿಮೆಂಟ್ ಕಥಾಹಂದರ ಒಳಗೊಂಡಿರುವ ‘ಒನ್ ರಾಬರಿ ಕಥೆ’ ಚಿತ್ರಕ್ಕೆ ಗೋಪಾಲ್ ಹಳ್ಳೇರ್ ಹೊನ್ನಾವರ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಬಹುತಾರಾಗಣ ಒಳಗೊಂಡ ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್ ಗೌಡ ನಾಯಕನಾಗಿ ನಟಿಸಿದರೆ, ಹೊಸ ಪ್ರತಿಭೆ ರಿಷ್ವಿ ಭಟ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ನಿರ್ಮಾಪಕ  ಬೇಲೂರಿನ ಸಂತೋಷ್ ನಾಗೇನಹಳ್ಳಿ  ಅವರು ನಿರ್ಮಾಣದ ಜೊತೆಗೆ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಸುಂದರ್ ರಾಜ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ್ ಕೆ.ಆರ್.ಪೇಟೆ, ತಬಲಾನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ.ಮಠ್, ನವೀನ್ ಪಡೀಲ್, ಸಂಜು ಬಸಯ್ಯ ಮತ್ತು  ಕಿರುತೆರೆ ಹಾಗೂ ಮಜಾ ಟಾಕೀಸ್ ನ ಹಲವಾರು ಕಲಾವಿದರು ನಟಿಸಿದ್ದಾರೆ.

ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ ಮತ್ತು ಸಿಂದನೂರಿನ ರವಕುಂದದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಪ್ರಕಾಶ್ ಜಿ. ಅವರ ಸಂಭಾಷಣೆ, ಸಂತೋಷ್ ನಾಗೇನಹಳ್ಳಿ, ಪ್ರಕಾಶ್ ಅವರ ಸಾಹಿತ್ಯ, ಡಿರೆಂಟ್ ಡ್ಯಾನಿ ಅವರ ಸಾಹಸ, ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜಿವರೆಡ್ಡಿ ಅವರ ಸಂಕಲನ, ಶ್ರೀವತ್ಸ ಅವರ  ಸಂಗೀತ ಮತ್ತು ಚಾಮರಾಜ್, ರೋಹಿತ್ ಅರುಣ್ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.

ಸಿನಿಮಾ

ಅರುಣ್ ಜಿ.,

ಲಂಕಾಸುರ ಚಿತ್ರದ “ಮಾಡರ್ನ್ ಮಹಾಲಕ್ಷ್ಮಿ” ಹಾಡನ್ನು ಖ್ಯಾತ ಸಿನಿಮಾ ನಟಿ ಮಾಲಾಶ್ರೀ ಬಿಡುಗಡೆ ಮಾಡಿದರು.

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಹಾಗೂ ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ “ಲಂಕಾಸುರ” ಚಿತ್ರಕ್ಕಾಗಿ “ಬಹದ್ದೂರ್”  ಚೇತನ್ ಕುಮಾರ್ ಬರೆದಿರುವ “ಮಾಡರ್ನ್ ಮಹಾಲಕ್ಷ್ಮಿ” ಹಾಡನ್ನು ಖ್ಯಾತ ನಟಿ ಮಾಲಾಶ್ರೀ ಬಿಡುಗಡೆ ಮಾಡಿದ್ದಾರೆ. A2 music ಮೂಲಕ ಈ ಹಾಡು ಬಿಡುಗಡೆಯಾಗಿದೆ.  ಇತ್ತೀಚಿಗೆ ಅದ್ದೂರಿಯಾಗಿ ನಡೆದ ಈ ಹಾಡು ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

‘ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಮಾಲಾಶ್ರೀ ಹಾರೈಸಿದರು.

‘ನಾನು ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ “ಮಾದೇಶ” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ.‌ “ಲಂಕಾಸುರ” ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ ನಿರ್ಮಾಪಕರು ಆಗಿದ್ದಾರೆ ಒಳ್ಳೆಯದಾಗಲಿ’ ಎಂದರು ನಟಿ ಶೃತಿ.

ನಟ ಶ್ರೀನಗರ ಕಿಟ್ಟಿ‌, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸೇರಿದಂತೆ ಅನೇಕ ಗಣ್ಯರು ತಮ್ಮ ಮಾತುಗಳ ಮೂಲಕ ಶುಭ ಕೋರಿದರು. ‘ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ನೋಡಿ ಹಾರೈಸಿ’ ಎಂದರು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್.

‘ಕೊರೋನ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ “ಲಂಕಾಸುರ” ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೆವು. ಟೀಸರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ, ಲೋಗೊ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾನು ಆಭಾರಿ. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ‌. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ‌. ನೋಡಿ ಪ್ರೋತ್ಸಾಹ ನೀಡಿ’ ಎಂದರು ನಾಯಕ  ವಿನೋದ್ ಪ್ರಭಾಕರ್.

‘ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ. “ಮಾರ್ಡನ್ ಮಹಾಲಕ್ಷ್ಮಿ” ಹಾಡನ್ನು ನಾನೇ ಹಾಡಿದ್ದೇನೆ’ ಎಂದು ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹೇಳಿದರು.

ನಿರ್ದೇಶಕ ಪ್ರಮೋದ್ ಕುಮಾರ್, ಛಾಯಾಗ್ರಾಹಕ ಸುಜ್ಞಾನ್, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಮುಂತಾದವರು “ಲಂಕಾಸುರ” ಚಿತ್ರದ ಕುರಿತು ಮಾತನಾಡಿದರು.