ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2023 » Page 4 of 7 » Dynamic Leader
November 22, 2024
Home 2023 February (Page 4)
ದೇಶ ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ತಂಜಾವೂರು: ತಂಜೂರು ಮುಲ್ಲಿವಾಯ್ಕಾಲ್ ಸ್ಮಾರಕ ಭವನದಲ್ಲಿ ಇಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಳ ನೆಡುಮಾರನ್ ತುರ್ತು ಪತ್ರಿಕಾ ಘೋಷ್ಟಿ ನಡೆಸಿ, ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ ಎಂಬ ಸುದ್ಧಿಯನ್ನು ಕೊಟ್ಟು ಎಲ್ಲರನ್ನು ಆಶ್ಚರ್ಯ ಪಡೆವಂತೆ ಮಾಡಿದರು.

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ಅವರು ಶೀಘ್ರದಲ್ಲೇ ಹೊರಬರಲಿದ್ದಾರೆ ಎಂದು ನಾನು ಪ್ರಪಂಚದಾದ್ಯಂತ ಇರುವ ತಮಿಳರಿಗೆ ಇದರ ಮೂಲಕ ತಿಳಿಯಪಡಿಸಲು ಬಯಸುತ್ತೇನೆ’. ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಳ ನೆಡುಮಾರನ್ ಘೋಷಣೆ ಮಾಡಿದರು.

‘ಎಲ್‌ಟಿಟಿಇ ನಾಯಕ ಪ್ರಭಾಕರನ್ ಜೀವಂತವಾಗಿದ್ದಾರೆ. ಪ್ರಭಾಕರನ್ ಆರೋಗ್ಯವಾಗಿರುವುದು ಶ್ರೀಲಂಕಾ (ಈಳಂ) ತಮಿಳರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಪ್ರಭಾಕರನ್ ಬಗ್ಗೆ ಅಂದಿನ ರಾಜಪಕ್ಸೆ ಸರ್ಕಾರ ಹಾಗೂ ಇತರರಿಂದ ತಪ್ಪು ಮಾಹಿತಿಯನ್ನು ಹಬ್ಬಿಸಲಾಯಿತು. ಅವರು ಶೀಘ್ರದಲ್ಲೇ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾದ ಸಮಗ್ರ ಯೋಜನೆಯನ್ನು ಘೋಷಿಸಲಿದ್ದಾರೆ. ಜಗತ್ತಿನಾದ್ಯಂತ ಇರುವ ತಮಿಳರು ಇದನ್ನು ಬೆಂಬಲಿಸಬೇಕು.

ಪ್ರಭಾಕರನ್ ಕುಟುಂಬದೊಂದಿಗೆ ನಾನು ಸಂಪರ್ಕದಲ್ಲಿ ದ್ದೇನೆ. ಅವರ ಅನುಮತಿಯ ಮೇರೆಗೆ, ಅವರ ಮೂಲಕ ತಿಳಿದ ವಿಷಯಗಳನ್ನು ಇಲ್ಲಿ ತಿಳಿಸುತ್ತಿದ್ದೇನೆ.

ಅವರು ಎಲ್ಲಿದ್ದಾರೆ, ಯಾವಾಗ ಬರುತ್ತಾರೆ ಎಂಬ ಕುತೂಹಲ ನಿಮಗಷ್ಟೇ ಅಲ್ಲ, ನನಗೂ ಮತ್ತು ಪ್ರಪಂಚದಾದ್ಯಂತ ಇರುವ ತಮಿಳರಿಗೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಶೀಘ್ರದಲ್ಲೇ ಅವರು ಹೊರಹೊಮ್ಮುತ್ತಾರೆ. ಪ್ರಭಾಕರನ್ ಪತ್ನಿ ಹಾಗೂ ಪುತ್ರಿ ಕೂಡ ಸುರಕ್ಷಿತವಾಗಿದ್ದಾರೆ. ಸರಿಯಾದ ಸಮಯಕ್ಕೆ ಜನರ ಮುಂದೆ ಬರುತ್ತಾರೆ. ಪ್ರಭಾಕರನ್ ಎಲ್ಲಿದ್ದಾರೆ ಎಂಬುದನ್ನು ಸದ್ಯಕ್ಕೆ ಪ್ರಕಟಿಸಲು ಸಾಧ್ಯವಿಲ್ಲ. ತಮಿಳುನಾಡು ಸರ್ಕಾರ ಮತ್ತು ಜನರು ಪ್ರಭಾಕರನ್ ಅವರಿಗೆ ಬೆಂಬಲವಾಗಿರಬೇಕು. ಶ್ರೀಲಂಕಾದಲ್ಲಿ ರಾಜಪಕ್ಸೆ ಆಡಳಿತ ಅಂತ್ಯಗೊಂಡಿರುವುದರಿಂದ ನಾವು ಈ ಘೋಷಣೆ ಮಾಡುತ್ತಿದ್ದೇವೆ.

ರಾಜಪಕ್ಸೆಯನ್ನು ಅಧಿಕಾರಕ್ಕೆ ತಂದ ಅದೇ ಸಿಂಹಳೀಯರು ಈಗ ಅವರನ್ನು ದೇಶದಿಂದ ಓಡಿಸುತ್ತಿದ್ದಾರೆ. ಇದಕ್ಕಿಂತ ಉತ್ತಮ ವಾತಾಕಾರಣ ಬೇರೊಂದು ಇರಲು ಸಾದ್ಯವಿಲ್ಲ. ಚೀನಾ ಶ್ರೀಲಂಕಾದಲ್ಲಿ ಆಳವಾಗಿ ನೆಲೆಯೂರುವ ಮೂಲಕ ಭಾರತದ ವಿರುದ್ಧ ಕೆಲಸ ಮಾಡುತ್ತಿದೆ ಇದನ್ನು ತಡೆಯಬೇಕಾಗಿದೆ.’ ಅದಕ್ಕೆ ಶ್ರೀಲಂಕಾದಲ್ಲಿ ಪ್ರತ್ಯೇಕವಾದ ತಮಿಳು ರಾಷ್ಟ್ರ ರಚನೆ ಆಗಬೇಕು. ಇಂದಿನ ಸನ್ನಿವೇಶದಲ್ಲಿ ಇದು ಅನಿವಾರ್ಯವೂ ಆಗಿದೆ.’ ಎಂದರು.  

ಸಿನಿಮಾ

ಅರುಣ್ ಜಿ.,

ಈ ಜಗತ್ತಿರುವುದೇ ಹೀಗೆ ಇಲ್ಲಿ ಯಾರನ್ನೂ ಒಳ್ಳೆಯವರು ಅಥವಾ ಕೆಟ್ಟವರು ಅಂಥಾ ಒಂದೇ ಏಟಿಗೆ ಏಳಿಬಿಡಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತವೆ. ಬರಿಯ ಒಳ್ಳೆಯತನ, ಪ್ರಾಮಾಣಿಕತೆ ವ್ಯಕ್ತಿಯೊಬ್ಬನನ್ನು ನೋಡುಗರ ದೃಷ್ಟಿಯಲ್ಲಿ ಬೇರೆಯದ್ದೇ ರೀತಿಯಲ್ಲಿ ಚಿತ್ರಿಸಿಬಿಡುತ್ತದೆ. ಹಾಗೆಯೇ, ವ್ಯಸನಕ್ಕೆ ಬಿದ್ದ ವ್ಯಕ್ತಿ ಎಂಥ ಹೀನ ಕೆಲಸ ಮಾಡಲು ಕೂಡಾ ಮುಂದಾಗುತ್ತಾನೆ. ಯಾವತ್ತಾದರೊಂದು ದಿನ ಮುಖವಾಡ ಕಳಚಿಬೀಳುತ್ತದೆ ಅನ್ನೋ ಭಯದಲ್ಲಿ ಬದುಕುವುದಕ್ಕಿಂತಾ ಗೌರವಯುತವಾಗಿ ಬಾಳ್ವೆ ನಡೆಸೋದು ಉತ್ತಮ…

ʻಲಾಂಗ್ ಡ್ರೈವ್ʼ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿದೆ. ಈ ಚಿತ್ರದಲ್ಲೂ ಇಂಥ ಅನೇಕ ವಿಚಾರಗಳಿವೆ. ಪ್ರೀತಿಗೆ ಬಿದ್ದ ಜೋಡಿ ಲಾಂಗ್ ಡ್ರೈವ್ ಹೊರಟಿರುತ್ತದೆ. ಅಲ್ಲಿ ಎದುರಾಗುವ ಘಟನೆಗಳು ಹುಡುಗನ ಬಗ್ಗೆ ಹುಡುಗಿಯ ಮನಸ್ಸಿನಲ್ಲಿ ಕೀಳು ಭಾವನೆ ಮೂಡಿಸುತ್ತದೆ. ಹಾಗೆಂದು ಹುಡುಗ ಅವಳ ಹತ್ತಿರ ಅನುಚಿತವಾಗಿ ವರ್ತಿಸಿರುವುದಿಲ್ಲ. ʻತನ್ನನ್ನು ಈತ ರಕ್ಷಿಸಲಾರʼ ಎನ್ನುವಂತಾ ಮನಸ್ಥಿತಿಗೆ ದೂಡುತ್ತದಷ್ಟೇ. ಇದೇ ಕಾರಣಕ್ಕೆ ಆಕೆ `ಒಂದು ಹುಡುಗೀನ ಇಷ್ಟ ಪಡೋದು ಗಂಡಸ್ತನ ಅಲ್ಲ. ಅವಳನ್ನು ಮದುವೆಯಾಗಿ ಮಗು ಕೊಡೋದು ಗಂಡಸ್ತನ ಅಲ್ಲ. ಇಷ್ಟ ಪಟ್ಟೋಳು ಒಂದು ಹುಡುಗನ ಜೊತೆ ಬರ್ತಾಳೆ ಅಂದ್ರೆ, ಅವನ ಮೇಲಿಟ್ಟಿರೋ ನಂಬಿಕೆಯಿಂದ….’ ಅಂತಾ ಕಮೆಂಟು ಮಾಡುತ್ತಾಳೆ. ಕಣ್ಣೀರಿಡುತ್ತಾ ಹೊರಟುಬಿಡುತ್ತಾಳೆ. ಅಲ್ಲಿ ನಡೆದ ಆ ಘಟನೆ ಯಾವುದು? ಅದಕ್ಕೆ ಯಾರು ಕಾರಣ? ಹುಡುಗಿಯ ಮುಂದೆ ತನ್ನ ಇಮೇಜು ಹಾಳು ಮಾಡಿಕೊಂಡ ಹುಡುಗ ಮುಂದೆ ಏನೆಲ್ಲಾ ಮಾಡುತ್ತಾನೆ…? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡ ಕಥೆ ಲಾಂಗ್ ಡ್ರೈವ್ನಲ್ಲಿದೆ.

ಸಾಮಾನ್ಯಕ್ಕೆ ಅನ್ಯಾಯಕ್ಕೊಳಗಾದವರು ಸೇಡು ತೀರಿಸಿಕೊಳ್ಳೋದು, ದುಷ್ಟನನ್ನು ಶಿಕ್ಷಿಸಿ ಹೀರೋ ಆಗೋದು ಬಹುತೇಕ ಎಲ್ಲ ಸಿನಿಮಾಗಳಲ್ಲೂ ಇರುತ್ತವೆ. ಅದನ್ನು ಮೀರಿ ಬೇರೊಂದು ಪ್ರಯತ್ನ ಈ ಚಿತ್ರದಲ್ಲಾಗಿದೆ. ಅದೆಷ್ಟು ಹೊಸತನದಿಂದ ಕೂಡಿದೆಯೆಂದರೆ ಈ ಚಿತ್ರದಲ್ಲಿ ಹೀರೋ ಯಾರು? ವಿಲನ್ ಯಾರು ಎನ್ನುವ ಗೊಂದಲ ಸೃಷ್ಟಿಸುವ ಮಟ್ಟಿಗೆ! ಅದೇನೇ ಇರಲಿ, ತಪ್ಪು ಮಾಡಿದವನಿಗೆ ಪರಿವರ್ತನೆಗೊಳ್ಳಲು ಅವಕಾಶ ಕೊಡಬೇಕು ಅನ್ನೋದನ್ನು ಈ ಸಿನಿಮಾದ ಕಂಟೆಂಟು ಪ್ರತಿಪಾದಿಸಿದೆ. ವಿಕಾಸ್ ವಸಿಷ್ಟ ಸಂಗೀತ ನೀಡಿರುವ ಮಾಯಾವಿಯೇ ಹಾಡು ಅದ್ಭುತವಾಗಿದೆ. ಜೀವನ್ ಚೆಂದಚೆಂದ ಪದಗಳನ್ನು ಪೋಣಿಸಿದ್ದಾರೆ. ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಸಿಕ್ಕಿರುವ ಸೀಮಿತ ಸೌಲಭ್ಯದಲ್ಲಿ ಅಚ್ಚುಕಟ್ಟಾದ ಕೆಲಸ ಮಾಡಿ ತೋರಿಸಿದ್ದಾರೆ. 

ಅರ್ಜುನ್ ಯೋಗಿ, ಸುಪ್ರಿತಾ ಸತ್ಯನಾರಾಯಣ್ ನಟನೆ ಇಷ್ಟವಾಗುತ್ತದೆ. ತೇಜಸ್ವಿನಿ ಶೇಖರ್ ಎಂಟ್ರಿ ಕೊಟ್ಟಮೇಲೆ ಚಿತ್ರಕತೆಯ ಲಯ ಪಡೆಯುತ್ತದೆ. ಅಷ್ಟು ಸಹಜವಾಗಿ ಈಕೆ ಅಭಿನಯಿಸಿದ್ದಾರೆ. ಲಾಂಗ್ ಡ್ರೈವ್ ನಲ್ಲಿ ಹೆಚ್ಚು ಸ್ಕೋರ್ ಮಾಡುವುದು ವಿಲನ್ ನಂತೆ ಎಂಟ್ರಿ ಕೊಟ್ಟು ಹೀರೋ ಲೆವೆಲ್ಲು ತಲುಪುವ ಶಬರಿ ಮಂಜು. ಸ್ವತಃ ನಿರ್ಮಾಪಕರೂ ಆಗಿರುವ ಶಬರಿ ಮಂಜು ಕನ್ನಡದಲ್ಲಿ ಉತ್ತಮ ಪೋಷಕ ಕಲಾವಿದನಾಗಿ ನಿಲ್ಲೋದು ನಿಜ. ಜಿಮ್ ಕೀರ್ತೀ ಕಡಿಮೆ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ನೆನಪಿನಲ್ಲುಳಿಯುವ ಪಾತ್ರ ಮಾಡಿದ್ದಾರೆ. ಈತ್ತೀಚೆಗೆ ಬರುತ್ತಿರುವ ಉತ್ತಮ ಹಾಸ್ಯ ಕಲಾವಿದರ ಲಿಸ್ಟಿಗೆ ಜಿಮ್ ಕೀರ್ತಿ ಕೂಡಾ ಸೇರಿಕೊಂಡಿದ್ದಾರೆ. ಹಾಗಂತಾ ಕೀರ್ತಿ ಬರೀ ಕಾಮಿಡಿ ಪಾತ್ರಕ್ಕಷ್ಟೇ ಸೂಟ್ ಆಗುತ್ತಾರಂತೇನೂ ಇಲ್ಲ. ಯಾವುದೇ ಪಾತ್ರ ಕೊಟ್ಟರೂ ಅದನ್ನು ದಕ್ಕಿಸಿಕೊಳ್ಳುವ ಶಕ್ತಿ ಇವರಲ್ಲಿದೆ. ಬಲ ರಾಜ್ ವಾಡಿ ಅವರನ್ನು ನಿರ್ದೇಶಕರು ಇನ್ನೂ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಿತ್ತು. ನಿರ್ದೇಶಕ ಶ್ರೀರಾಜ್ ಈ ಹಿಂದೆ ರವಿ ಶ್ರೀವತ್ಸ ಗರಡಿಯಲ್ಲಿ ಬೆಳೆದವರು. ʻಲಾಂಗ್ ಡ್ರೈವ್ʼ ನೋಡಿದರೆ ಶ್ರೀರಾಜ್ ಶ್ರೀವತ್ಸರ ಯಾವ ಛಾಯೆಯನ್ನು ಅನುಕರಿಸಿದಂತೆ ಕಾಣಿಸಿಲ್ಲ. ಬದಲಿಗೆ ತಮ್ಮದೇ ಹೊಸ ಶೈಲಿಯನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಲವ್ ಕಂ ಥ್ರಿಲ್ಲರ್ ಜಾನರಿನ ʻಲಾಂಗ್ ಡ್ರೈವ್ʼನಲ್ಲಿ ವಿಪರೀತ ತಿರುವು, ಭಯಾನಕ ದೃಶ್ಯಗಳನ್ನು ತುರುಕಿಲ್ಲ.  ಸಣ್ಣದೊಂದು ಕತೆಯನ್ನು ಎಷ್ಟು ಸರಳವಾಗಿ ಹೇಳಿ ಮುಗಿಸಬೇಕೋ ಅದನ್ನಷ್ಟೇ ಮಾಡಿದ್ದಾರೆ.

ಸಿನಿಮಾ ರೇಟಿಂಗ್: 3.5/5

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು.

ಅದಾನಿ ಸಮೂಹದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಇತ್ತೀಚಗೆ ವರದಿಯೊಂದನ್ನು ಪ್ರಕಟಿಸಿತು. ಆ ವರದಿಯಲ್ಲಿ, ‘ಭಾರತೀಯ ಸಂಸ್ಥೆಯಾದ ಅದಾನಿ ಸಮೂಹವು ಕಳಪೆಯಾಗಿ ಷೇರು ನಿರ್ವಹಣೆ ಮಾಡಿರುವುದಕ್ಕೆ ಹಾಗೂ ಖಾತೆಯಲ್ಲಿ ವಂಚನೆ ಮಾಡಿರುವುದಕ್ಕೆ ಅಗತ್ಯವಾದ ಆದಾರಗಳನ್ನು ಸಂಗ್ರಹಿಸಿ, ನಮ್ಮ ಎರಡು ವರ್ಷಗಳ ತನಿಖೆಯ ಫಲಿತಾಂಶಗಳನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ. ಅದಾನಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ ಕಳೆದ ಮೂರು ವರ್ಷಗಳಲ್ಲಿ 100 ಬಿಲಿಯನ್ ನಿವ್ವಳ ಮೌಲ್ಯವನ್ನು ಸಂಗ್ರಹಿಸಿದ್ದಾರೆ.

ಅದಾನಿ ಸಮೂಹದ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಡಜನ್‌ಗಟ್ಟಲೆ ಜನರೊಂದಿಗೆ ಮಾತನಾಡುವ ಮೂಲಕ ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮತ್ತು ಸುಮಾರು ಅರ್ಧ ಡಜನ್ ದೇಶಗಳಿಗೆ ನೇರವಾಗಿ ಭೇಟಿ ನೀಡಿ, ಇದರ ಬಗ್ಗೆ ಸುಧೀರ್ಘವಾಗಿ ಅಧ್ಯಯನ ನಡಸಲಾಗಿದೆ’ ಎಂದು ಹೇಳಿತು.

ಅದಾನಿ ಸಮೂಹವು ಇದ್ನನ್ನು ನಿರಾಕರಿಸಿತು. ಮತ್ತೊಂದೆಡೆ, ಈ ವಿಚಾರದಲ್ಲಿ ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯ ಮಾಡುತ್ತಿರುವ ವಿರೋಧ ಪಕ್ಷಗಳು, ಇದರಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಸಂಬಂಧವಿದೆ ಎಂದೂ ಆರೋಪಿಸಿತು. ಇದರಿಂದಾಗಿ ಸಂಸತ್ತಿನ ಕಲಾಪಗಳು ನಡೆಯದೆ ಹಲವಾರು ಬಾರಿ ಮುಂದೂಡಲ್ಪಟ್ಟಿತು.

ಈ ನಡುವೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಕುರಿತು ನೀಡಿರುವ ಹೇಳಿಕೆಯಲ್ಲಿ, ‘ಪ್ರಧಾನಿ ನರೇಂದ್ರ ಮೋದಿಯವರು ಅದಾನಿ ಸಮೂಹದ ಎಲ್ಲಾ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಆ ನಂತರ ಆ ಆಸ್ತಿಗಳನ್ನು ಹರಾಜು ಮಾಡಿ, ಆ ಹಣದಿಂದ ಅದಾನಿ ಸಮೂಹದಲ್ಲಿ ಹಣ ಕಳೆದುಕೊಂಡವರಿಗೆ ಸಹಾಯ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೂ ಅದಾನಿಗೂ ಸಂಬಂಧವೇ ಇಲ್ಲ ಎಂಬಂತೆ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಅನೇಕ ಕಾಂಗ್ರೆಸ್ಸಿಗರು ಅದಾನಿ ಸಂಪರ್ಕದಲ್ಲಿದ್ದಾರೆ ಎಂಬುದು ನನಗೆ ಗೊತ್ತು. ನನಗೆ ಕಾಂಗ್ರೆಸ್ ಬಗ್ಗೆ ಕಾಳಜಿ ಇಲ್ಲ. ಬಿಜೆಪಿಯ ಪ್ರಾಮಾಣಿಕತೆ ನೆಲೆಯೂರಬೇಕೆಂದು ನಾನು ಬಯಸುತ್ತೇನೆ’ ಎಂದು ತಿಳಿಸಿಳಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಂಸದ ಸ್ಥಾನ ನೀಡದ ಬಿಜೆಪಿ ಹಾಗೂ ಪ್ರಧಾನಿ ಮೋದಿಯ ವಿರುದ್ಧ ಅಸಮಾಧಾನವಿದೆ. ಆದ್ದರಿಂದ ಅದಾನಿ ವಿಚಾರವನ್ನು ಮೋದಿಯ ತಲೆಗೆ ಕಟ್ಟುತ್ತಿದ್ದಾರೆ. ಎಂದು ಕೆಲವು ಹಿರಿಯ ನಾಯಕರು ಹೇಳುತ್ತಿದ್ದಾರೆ. ಇವರಿಗೆ ನಿಜವಾಗಿಯೂ ಅದಾನಿ ಸಮೂಹದ ಎಲ್ಲಾ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಆ ಆಸ್ತಿಗಳನ್ನು ಹರಾಜು ಹಾಕಿ, ಆ ಹಣದಿಂದ ಅದಾನಿ ಸಮೂಹದಲ್ಲಿ ಹಣ ಕಳೆದುಕೊಂಡವರಿಗೆ ಸಹಾಯ ಮಾಡಬೇಕು ಎಂಬ ಮನಸ್ಸಿದ್ದರೆ, ತಾಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿರುದ್ಧ ಪ್ರಕರಣ ದಾಖಲುಮಾಡಿದಂತೆ ಅದಾನಿಯ ವಿರುದ್ಧವೂ ಪ್ರಕರಣ ದಾಖಲು ಮಾಡಬೇಕು. ಆಗ ನಿಜವಾದ ಅಪರಾಧಿ ಯಾರೆಂದು ಜಗತ್ತಿಗೆ ಗೊತ್ತಾಗುತ್ತದೆ. ಮತ್ತು ಸುಬ್ರಮಣಿಯನ್ ಸ್ವಾಮಿಯ ಉದ್ದೇಶವೂ ಈಡೇರುತ್ತದೆ. ಅದನ್ನು ಬಿಟ್ಟು ‘ಪ್ರಧಾನಿ ನರೇಂದ್ರ ಮೋದಿಯವರು ಅದಾನಿ ಸಮೂಹದ ಎಲ್ಲಾ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಹೇಳುವ ಸುಬ್ರಮಣಿಯನ್ ಸ್ವಾಮಿಯ ನಡೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಈ ಪ್ರಕರಣದಿಂದ ರಕ್ಷಣೆ ಮಾಡಲಿಕ್ಕಾಗಿಯೆ? ಅಥವಾ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವುದಕ್ಕಾಗಿಯೆ? ಎಂದು ಅನುಮಾನ ಮೂಡುತ್ತದೆ.

ಹಿಂಡೆನ್‌ಬರ್ಗ್ ವರದಿಯನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಇದೀಗ ಪ್ರಕಟಿಸಿದೆ. ಸೆಬಿ ಕೂಡ ತನಿಖೆಗೆ ಕರೆ ನೀಡಿದೆ. ಆದ್ದರಿಂದ ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಎಂಬುದೇ ನಮ್ಮ ಅಭಿಪ್ರಾಯವಾಗಿದೆ.

ಸಿನಿಮಾ

ಅರುಣ್ ಜಿ.,

ಬೆಂಗಳೂರು: ಸೈನ್ಸ್‌ ಜೊತೆಗೆ ಹಾರರ್‌, ಥ್ರಿಲ್ಲರ್‌ ಅಂಶಗಳನ್ನು ಹೊಂದಿಸೋದು ಕಷ್ಟ. ಇಂಥ ಸಿನಿಮಾಗಳು ಕನ್ನಡದಲ್ಲಿ ಬಹಳ ಅಪರೂಪವಾಗುತ್ತಿವೆ. ಈ ಹೊತ್ತಲ್ಲಿ ಜ್ಞಾನದ ಜೊತೆಗೆ ಕಲ್ಪನೆಯನ್ನು ಬೆಸುಗೆ ಹಾಕಿ ದೃಶ್ಯದ ಮೂಲಕಗ ತೆರೆಗೆ ಬಂದಿರುವ ಚಿತ್ರ ಡಿಸೆಂಬರ್ 24.

ʻನವಜಾತ ಶಿಶುಗಳ ಮರಣʼ ಎನ್ನುವ ಸುದ್ದಿಗಳನ್ನು ಆಗಾಗ ನೋಡುತ್ತಿರುತ್ತೇವಲ್ಲಾ? ಒಂದೇ ಏಟಿಗೆ ಅದಕ್ಕೆ ಕಾರಣ ಮತ್ತು ಪರಿಹಾರವನ್ನು ಎರಡನ್ನೂ ಹುಡುಕುವ ಪ್ರಯತ್ನ ಮಾಡಿರುವ ಸಿನಿಮಾ ಇದು. 2015 ರಿಂದ 2019ರ ನಡುವೆ ಹುಲಿಯೂರು ದುರ್ಗ ಸುತ್ತಮುತ್ತ ಹಲವಾರು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುವ ನೈಜ ಘಟನೆಯನ್ನು ಇಟ್ಟುಕೊಂಡು ತಯಾರಾದ ಹಾರರ್, ಥ್ರಿಲ್ಲರ್ ಚಿತ್ರ ಡಿಸೆಂಬರ್ 24

ಆಗತಾನೆ ಹುಟ್ಟಿದ ಮಕ್ಕಳು ಉಸಿರಾಟದ ಸಮಸ್ಯೆಯಿಂದ ಇದ್ದಕ್ಕಿದ್ದಹಾಗೆ ಸಾವನ್ನಪ್ಪುತ್ತಿರುವ ಘಟನೆಗೆ ಸಂಬಂಧಿಸಿದಂತೆ ನಡೆಯುವ ಘಟನೆಗಳನ್ನಿಟ್ಟುಕೊಂಡು ನಾಗರಾಜ್ ಎಂಜಿ ಗೌಡ ಅವರು  ಡಿಸೆಂಬರ್ 24 ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪಕ್ಕಾ ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಾಯಕ ಅಜಯ್ (ಅಪ್ಪು ಬಡಿಗೇರ್) ತನ್ನ ಅಕ್ಕನ ಮಗು ಹುಟ್ಟಿದ ಕೂಡಲೇ ಉಸಿರಾಟ ನಿಲ್ಲಿಸಿದ ಘಟನೆಯಿಂದ ವಿಚಲಿತನಾದಾಗ ಆತನ ಸ್ನೇಹಿತರೆಲ್ಲ ದೈರ್ಯ ತುಂಬುತ್ತಾರೆ. ಅವರೆಲ್ಲ ಮೆಡಿಕಲ್ ಓದುತ್ತಿರುವ ಗೆಳೆಯರು. ಹೇಗಾದರೂ ಮಾಡಿ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಹಿಡಿಯಬೇಕೆಂದು ಸಾಕಷ್ಟು ಸರ್ಚ್ ಮಾಡಿದಾಗ ಉಡದ ಮೊಟ್ಟೆ, ಅದರಲ್ಲೂ  ಅದು ಕಾವು ಕೊಟ್ಟಿರುವ ಮೊಟ್ಟೆಯಿಂದ ಈ ಸಮಸ್ಯೆಗೆ ಔಷಧವನ್ನು ತಯಾರಿಸಬಹುದೆಂದು ತಿಳಿಯುತ್ತದೆ. ಅದನ್ನು ನಂಬಿದ ಈ ಎಂಟು ಜನ ವಿದ್ಯಾರ್ಥಿಗಳು ಉಡದ ಮೊಟ್ಟೆಯನ್ನರಸಿಕೊಂಡು ಕಾಡಿಗೆ ಬರುತ್ತಾರೆ. ಇಲ್ಲಿ ‘ಡಿಸೆಂಬರ್ 24’ ಉಡ ತಾನಿಟ್ಟ ಮೊಟ್ಟೆಗೆ ಕಾವು ಕೊಡುವ ದಿನ. ಅದೇ ಚಿತ್ರದ ಶೀರ್ಷಿಕೆಯಾಗಿದೆ.

ಅಜಯ್, ಕಾವ್ಯ (ಭೂಮಿಕಾ ರಮೇಶ್) ಸೇರಿದಂತೆ ಗೆಳೆಯರೆಲ್ಲ ಒಂದು ದಟ್ಟ ಕಾಡಿಗೆ ಬಂದು ಅಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಗ್ಯಾಂಗ್ ಲೀಡರ್ (ಅನಿಲ್ ಗೌಡ್ರು) ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಗ್ಯಾಂಗ್ನೊಂದಿಗೆ ಹೊಡೆದಾಟ ನಡೆಸಿ ಹೇಗೋ ತಪ್ಪಿಸಿಕೊಂಡು ಬಂದ ಈ ಸ್ನೇಹಿತರಿಗೆ ತಾವು ಹುಡುಕುತ್ತಿದ್ದ  ಮೊಟ್ಟೆಗಳು ಕೊನೆಗೂ ಸಿಗುತ್ತವೆ. ಮೊಟ್ಟೆ ಸಿಕ್ಕ ಖುಷಿಯಲ್ಲೆ ಆ ಕಾಡಿಂದ ಹೊರಹೋಗಬೇಕೆನ್ನುವ ಹೊತ್ತಿಗೆ ಕತ್ತಲಾಗಿ ಒಂದು ಹಾಳು ಮನೆಯೊಳಗೆ ಸೇರಿಕೊಳ್ಳುತ್ತಾರೆ. ಆ ಮನೆ ಭೂತಬಂಗ್ಲೆ ಎಂದೇ ಆ ಭಾಗದಲ್ಲಿ ಹೆಸರುವಾಸಿಯಾಗಿರುತ್ತದೆ, ಆ ಮನೆಯೊಳಗೆ ಹೋದ ಯಾರೊಬ್ಬರೂ ಇದುವರೆಗೆ ಬದುಕಿಬಂದ ಉದಾಹರಣೆಗಳಿಲ್ಲ. ಅಂಥಾ ಸಾವಿನ ಮನೆಯೊಳಗೆ ಹೋದ ಇವರನ್ನು ಆರಂಭದಿಂದಲೂ ಗಮನಿಸುತ್ತಿದ್ದ ಸ್ಥಳೀಯ ಫಾರೆಸ್ಟ್ ಆಫೀಸರ್ (ಆನಂದ್ ಪಟೇಲ್ ಹುಲಿಕಟ್ಟೆ) ಆ ವಿದ್ಯಾರ್ಥಿಗಳನ್ನು ಅಲ್ಲಿಂದ ರಕ್ಷಿಸಿ ಹೊರತರುತ್ತಾರೆ. ಆ ಮನೆಯಲ್ಲಿ  ಅಂಥಾದ್ದೇನಿದೆ, ಅಲ್ಲಿ ಹೋದವರು ಯಾಕೆ ಬದುಕಿ ಬರೋದಿಲ್ಲ, ಇದಕ್ಕೆಲ್ಲ ಉತ್ತರ ಬೇಕೆಂದರೆ ನೀವೆಲ್ಲ ಒಮ್ಮೆ ಥೇಟರ್ಗೆ ಹೋಗಿ  ಡಿಸೆಂಬರ್ 24 ಚಿತ್ರವನ್ನು ವೀಕ್ಷಿಸಲೇಬೇಕು.

ಇಲ್ಲಿ ಭಾಗ್ಯಲಕ್ಷ್ಮಿ ಖ್ಯಾತಿಯ ಭೂಮಿಕಾ ರಮೇಶ್ ನಾಯಕಿಯಾಗಿ ತನ್ನ ಮುಗ್ಧ ಅಭಿನಯದ ಮೂಲಕ ನೋಡುಗರಿಗೆ ಇಷ್ಟವಾಗುತ್ತಾರೆ.  ನಾಯಕನಾಗಿ ಅಪ್ಪು ಬಡಿಗೇರ್ ತನ್ನ ಸಹಜಾಭಿನಯದಿಂದಲೇ ಗಮನ ಸೆಳೆಯುತ್ತಾರೆ. ಉಳಿದಂತೆ ರವಿ ಕೆ.ಆರ್.ಪೇಟೆ, ಜಗದೀಶ್, ದಿವ್ಯಆಚಾರ್, ಸಾಗರ್ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಛಾಯಾಗ್ರಾಹಕ ವಿನಯ್ಗೌಡ ಅವರ ಕ್ಯಾಮೆರಾದಲ್ಲಿ ದಾಂಡೇಲಿ ಫಾರೆಸ್ಟ್ ಅತ್ಯದ್ಭುತವಾಗಿ  ಸೆರೆಯಾಗಿದೆ. ಫ್ರೆಂಡ್ಷಿಪ್ಗೆ ಹೆಚ್ಚು ಪ್ರಾಮುಖ್ಯತೆ ಇರುವ ಕಥೆ ಇದಾಗಿದ್ದು, ಇದೇ ಕಾರಣಕ್ಕೆ ಚಿತ್ರ ನೋಡುಗರಿಗೂ ಇಷ್ಟವಾಗುತ್ತದೆ. ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಅವರ ಸಂಗೀತದಲ್ಲಿ ಮೂಡಿಬಂದಿರುವ  ಹಾಡುಗಳು ಒಮ್ಮೆ ಕೇಳಲು ಅಡ್ಡಿಯೇನಿಲ್ಲ. ಹಿನ್ನೆಲೆ ಸಂಗೀತ ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು.  ನಿರ್ದೇಶಕ ನಾಗರಾಜ್ ಎಂ.ಜಿ. ಗೌಡ ಅವರ ಮೊದಲ ಪ್ರಯತ್ನ ಎಂಬ ಕಾರಣಕ್ಕೆ,  ಮೊದಲ ಚಿತ್ರದಲ್ಲೇ ಹೊಸತನದ ಕಥೆ ಹೇಳಿರುವ ಶೈಲಿಯನ್ನು ಮೆಚ್ಚಬೇಕು.  ಇನ್ನು ಈ ಚಿತ್ರಕ್ಕೆ  ರಘು ಎಸ್, ಮಂಜು ಡಿ.ಟಿ, ಸಿದ್ದಮ್ಮ ಕಂಬಾರ್, ಮಹಂತೇಶ್ ನೀಲಪ್ಪ ಚೌಹಾಣ್ ಹಾಗೂ ವಿ.ಬೆಟ್ಟೇಗೌಡ ಇವರೆಲ್ಲ ಸೇರಿ ಬಂಡವಾಳ ಹಾಕಿದ್ದು, ಇವರೆಲ್ಲರೂ ರೈತರೆನ್ನುವುದು ಇಲ್ಲಿ ವಿಶೇಷ.

ಸಿನಿಮಾ ರೇಟಿಂಗ್: 3.5/5

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬೆಂಗಳೂರು: ‘ಅದಾನಿ ಗ್ರೂಪ್ ಕಂಪೆನಿಗಳು ಅಕ್ರಮಗಳಲ್ಲಿ ತೊಡಗಿವೆ’ ಎಂದು ಹಿಂಡೆನ್‌ಬರ್ಗ್ ವರದಿ ಮಾಡಿದ ನಂತರ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ತೀವ್ರ ಕುಸಿತವನ್ನು ಅನುಭವಿಸಿದವು. ಇದು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ ಎಂದು ವಿರೋಧ ಪಕ್ಷಗಳು ಹಾಗೂ ಆರ್ಥಿಕ ತಜ್ಞ್ಯರೆಲ್ಲ ಕಳವಳ ವ್ಯಕ್ತ ಪಡಿಸುತ್ತಿದ್ದಾರೆ. ವಿರೋಧಪಕ್ಷಗಳ ಒಕ್ಕೊರಳಿನ ಒತ್ತಾಯದಿಂದ ಸಂಸತ್ ನಲ್ಲಿ ಕಲಾಪಗಳು ನಡೆಯದೆ ಹಲವಾರು ಬಾರಿ ಮುಂದೂಡಲ್ಪಟ್ಟವು.

ಈ ಹಿನ್ನಲೆಯಲ್ಲಿ ಫೆಬ್ರವರಿ 8 ರಂದು ಸುಮಾರು 9 ಗಂಟೆಗಳ ಕಾಲ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅದಾನಿಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ, ನೆಹರು ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು. ‘ನೆಹರೂ ವಂಶಸ್ಥರೇಕೆ ಅವರ ಉಪನಾಮ ಬಳಸಲ್ಲ’ ಎಂಬುದನ್ನು ಒಂದು ವಿಷಯವಾಗಿ ಮುನ್ನಲೆಗೆ ತಂದು, ಬಿಜೆಪಿ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಲು ಲೇವಡಿ, ಹಾಸ್ಯ ಚಟಾಕಿ ಹಾರಿಸುತ್ತಾ ಕಾಲ ಕಳೆದರು. ದೇಶವಿರುವ ಪರಿಸ್ಥಿತಿಯಲ್ಲಿ ಮೋದಿಗೆ ಹಾಷ್ಯತನ ಬೇಕೆ? ಎಂಬುದನ್ನು ಜನ  ಕೇಳುತ್ತಿದ್ದಾರೆ. ಭಾರತೀಯ ಪದ್ಧತಿಯಂತೆ – ಪ್ರಪಂಚದ ಪದ್ಧತಿಯಂತೆ ಗಂಡು ಮಕ್ಕಳ ಕುಟುಂಬದ ಹೆಸರೇ ಮುಂದುವರಿಯುತ್ತದೆ. ನೆಹರೂಗೆ ಮಗನಿರಲಿಲ್ಲ. ಇಂದಿರಾ ಒಬ್ಬಳೇ ಮಗಳು. ಆದ್ದರಿಂದ ಅವರ ಪತಿ ಫಿರೋಜ್ ಗಾಂಧಿಯ ಹೆಸರನ್ನು ಉಪನಾಮವಾಗಿ ಬಳಸುತ್ತಿದ್ದಾರೆ. ಇದು ಪ್ರಧಾನಿಗೆ ಗೊತ್ತಿಲ್ಲವೇ?

2014ರಲ್ಲಿ ಅದಾನಿ ಪುತ್ರನ ವಿವಾಹವಾಗಿತ್ತು. ಈ ಮದುವೆಗೆ ಜಗತ್ತಿನಾದ್ಯಂತ ಕ್ಲಾಸ್ ಒನ್ ಶ್ರೀಮಂತರೆಲ್ಲ ಬಂದು ಹೋದರು. ಆದರೆ, ನರೇಂದ್ರ ಮೋದಿಯವರು ಮಾತ್ರ ಮೂರು ದಿನಗಳು ಅಲ್ಲಿಯೇ ಉಳಿದು, ಅದಾನಿ ಪುತ್ರನ ವಿವಾಹದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆದರೆ, ಮೋದಿ ಅವರ ತಾಯಿ ಇತ್ತೀಚೆಗೆ ನಿಧನರಾದಾಗ, ಅವರು ಕೆಲವೇ ಗಂಟೆಗಳಲ್ಲಿ ಅವರ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿ ಹೊರನಡೆದರು. ಪ್ರದಾನಿ ಮೋದಿಗೆ ತಾಯಿಗಿಂತ ದೇಶ ಸೇವೆಯೇ ದೊಡ್ಡದು ಎಂಬಂತೆ ಅಂದು ಬಿಂಬಿಸಲಾಯಿತು. ಆದರೆ, ಮೋದಿಗೆ ತನ್ನ ತಾಯಿಗಿಂತ, ಈ ದೇಶದ ಸೇವೆಗಿಂತ; ಅದಾನಿ ಪುತ್ರನ ವಿವಾಹವೇ ಅಂದು ಮುಖ್ಯವಾಗಿತ್ತು ಎಂಬುದನ್ನು ಇನ್ನು ಯಾರೂ ಮರೆತಿಲ್ಲ.    

‘ಮೂವತ್ತು ವರ್ಷಗಳಿಂದ ಕುಟುಂಬದೊಂದಿಗೆ ಇರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು. ಹಾಗಾದರೆ, ಇಷ್ಟು ವರ್ಷ ಅಮ್ಮನನ್ನು ಸಾಕುತ್ತಿದ್ದ ಅಣ್ಣನೂ ಸೇರಿದಂತೆ ಜೊತೆಯಲ್ಲಿ ಹುಟ್ಟಿದವರು ಬಂದು ಶಾಸ್ತ್ರೋಕ್ತವಾಗಿ ನಡೆದುಕೊಂಡಿರಬೇಕು ಅಲ್ಲವೇ? ಆದರೆ, ಅಂದು ನಾವು ಮೋದಿಯನ್ನು ಮಾತ್ರ ನೋಡುತ್ತಿದ್ದೆವು. ಪ್ರಧಾನಿಯ ತಾಯಿಯ ಸಾವನ್ನು ಹಾಗೂ ಪ್ರಧಾನಿಯನ್ನು ಲೈವ್ ಟೆಲಿಕಾಸ್ಟ್ ಮಾಡಿ, ತಮ್ಮ ಟಿ.ಆರ್.ಪಿ.ಯನ್ನು ಹೆಚ್ಚಿಸಿಕೊಂಡ ಮಾದ್ಯಮಗಳು, ಪ್ರಧಾನಿ ನರೇಂದ್ರ ಮೋದಿಗೆ ತಾಯಿಗಿಂತ ಈ ದೇಶ ಸೇವೆಯೇ ದೊಡ್ಡದು ಎಂಬಂತೆ ಬಿಂಬಿಸಿದವು. 

ಸಂಸತ್ತಿನಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, ನೀವು (ಮೋದಿ) ಇಸ್ರೇಲ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಅದಾನಿ ವ್ಯವಹಾರವನ್ನು ಪಡೆಯುತ್ತಾರೆ. ಹಾಗಾದರೆ ನಿಮ್ಮ ಮತ್ತು ಅದಾನಿ ನಡುವೆ ಏನಿದೆ? ಎಂಬುದನ್ನು ಈ ದೇಶಕ್ಕೆ ತಿಳಿಸಿಕೊಡಿ ಎಂದು ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನೆ ಮಾಡುತ್ತಾರೆ. ಸಂಸದ ರಾಹುಲ್ ಗಾಂಧಿಯ ಈ ಗುರುತರವಾದ ಪ್ರಶ್ನೆಗೆ (ಆರೋಪಕ್ಕೆ) ಮೋದಿಯವರು ತಕ್ಕ ಉತ್ತರ ನೀಡುತ್ತಾರೆ ಎಂದು ಈ ದೇಶವೇ ಎದುರು ನೋಡುತ್ತಿರುವಾಗ, ಸಂಸತ್ತಿನಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ಭಾಷಣ ಮಾಡಿದ ಮೋದಿ, ವಿರೋಧ ಪಕ್ಷಗಳನ್ನು ಲೇವಡಿಯಿಂದ, ಹಾಸ್ಯ ಹಾಗೂ ಉಡಾಫೆಯ ಮಾತುಗಳಿಂದ ತಿವಿದು, ವಿರೋಧ ಪಕ್ಷಗಳ ಗುರುತರವಾದ ಆರೋಪಗಳನ್ನು ದಿಕ್ಕು ತಪ್ಪಿಸಿ, ಪ್ರಶ್ನೆ ಮಾಡಿದವರನ್ನೇ ಅಪರಾಧಿಯನ್ನಾಗಿಸುವ ಪ್ರಯತ್ನವನ್ನು ಮಾಡಿದರು.

‘ದೇಶಭಕ್ತಿಯೇ ಕಿಡಿಗೇಡಿಗಳ ಕೊನೆಯ ಆಶ್ರಯ ತಾಣ’ ಎಂಬ ಸ್ಯಾಮ್ಯುಯೆಲ್ ಜಾನ್ಸನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು, ಮೋದಿ ಸರ್ಕಾರ ಅಧಿಕಾರ ವರ್ಗದೊಂದಿಗೆ ಕೈಜೋಡಿಸಿ, ತನ್ನ ತಪ್ಪುಗಳನ್ನು ಯಾರೂ ಪ್ರಶ್ನಿಸದಂತೆ ಮುಚ್ಚಿಹಾಕಲು, ತನ್ನ ಅಕ್ರಮಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ದೇಶಭಕ್ತಿ, ರಾಷ್ಟ್ರೀಯ ಭದ್ರತೆ ಹಾಗೂ ರಾಷ್ಟ್ರದ ಅಭಿವೃದ್ಧಿಯ ಸುಳ್ಳು ವಿಚಾರಗಳನ್ನು ಮುಂದಿಡುವುದು ಈಗ ಅವರಿಗೆ ವಾಡಿಕೆಯಾಗಿದೆ.

ದೇಶ

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಪ್ರೇಮಿಗಳ ದಿನದಂದು ಹಸು ಅಪ್ಪಿಕೊಳ್ಳುವ ದಿನವನ್ನು ಆಚರಿಸುವ ವಿವಾದಾತ್ಮಕ ಘೋಷಣೆಯನ್ನು ಹಿಂಪಡೆದಿದೆ.

ದೆಹಲಿ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಫೆಬ್ರವರಿ 14 ಅನ್ನು ಹಸು ಹಗ್ಗಿಂಗ್ ದಿನವನ್ನಾಗಿ ಆಚರಿಸುವ ವಿವಾದಾತ್ಮಕ ಘೋಷಣೆಯನ್ನು ಕೈಬಿಟ್ಟಿದೆ. ಫೆಬ್ರವರಿ 14 ರಂದು ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಕಳೆದ ಬುಧವಾರ ಪ್ರೇಮಿಗಳ ದಿನವನ್ನು “ಹಸು ಹಗ್ಗಿಂಗ್ ಡೇ” ಎಂದು ಆಚರಿಸಬೇಕೆಂದು ಘೋಷಿಸಿತ್ತು.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಈ ಹಿಂದೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಆ ದಿನದಂದು ತಾಯಿ ಗೋವಿನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಗೋ ಪ್ರೇಮಿಗಳು ಇದನ್ನು ಹಸುವಿನ ಹಗ್ಗಿಂಗ್ ದಿನವನ್ನಾಗಿ ಆಚರಿಸಬಹುದು. ಹಸುಗಳನ್ನು ತಬ್ಬಿಕೊಳ್ಳುವುದರಿಂದ ಭಾವನಾತ್ಮಕ ಸಂಬಂಧ ಹೆಚ್ಚುತ್ತದೆ. ವೈಯಕ್ತಿಕ ಸಂತೋಷ ಮತ್ತು ಕುಟುಂಬ ಸಂತೋಷ ಹೆಚ್ಚಾಗುತ್ತದೆ. ಹಾಗಾಗಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತೊಲಗಿಸಿ ನಮ್ಮ ಪರಂಪರೆಯನ್ನು ಉಳಿಸೋಣ’ ಎಂದು ಹೇಳಿತ್ತು.

ಈ ಘೋಷಣೆಗೆ ದೇಶಾದ್ಯಂತ ತೀವ್ರ ಖಂಡನೆಗೆ ಗುರಿಯಾಯಿತು. ಈ ಘೋಷಣೆಯನ್ನು ಅಪಹಾಸ್ಯ ಮಾಡುವ ಹಲವಾರು ಟೀಕೆಗಳು, ಖಂಡನೆಗಳು ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲಾಯಿತು.

ಈ ಹಿನ್ನಲೆಯಲ್ಲಿ ಅಧಿಸೂಚನೆಯನ್ನು ಕೈಬಿಡುವುದಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಇಂದು ತಿಳಿಸಿದೆ. ಈ ಕುರಿತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹೊರಡಿಸಿರುವ ಹೇಳಿಕೆಯಲ್ಲಿ, ಪಶುಸಂಗೋಪನಾ ಸಚಿವಾಲಯದ ಸೂಚನೆಗಳನ್ನು ಅನುಸರಿಸಿ ನಾವು ಗೋಹತ್ಯೆ ದಿನದ ಅಧಿಸೂಚನೆಯನ್ನು ಹಿಂಪಡೆಯುತ್ತಿದ್ದೇವೆ ಎಂದು ಅದು ಹೇಳಿದೆ.

ದೇಶ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳ ಉತ್ಪಾದನೆಯಲ್ಲಿ ಲಿಥಿಯಂ ಖನಿಜವು ಪ್ರಮುಖ ಕಚ್ಚಾ ವಸ್ತುವಾಗಿದೆ. ಸೆಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಡಿಜಿಟಲ್ ಕ್ಯಾಮೆರಾಗಳು ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳಲ್ಲಿ ಲಿಥಿಯಂ, ನಾನ್-ಫೆರಸ್ ಲೋಹವು ಮುಖ್ಯ ಅಂಶವಾಗಿದೆ. ಇಲ್ಲಿಯವರೆಗೆ ಭಾರತವು ಚೀನಾ ಮತ್ತು ಹಾಂಕಾಂಗ್‌ನಂತಹ ದೇಶಗಳಿಂದ ಲಿಥಿಯಂ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಈ ಹಿನ್ನಲೆಯಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಲಿಥಿಯಂ ಖನಿಜವನ್ನು ಕಂಡುಹಿಡಿಯಲಾಗಿದೆ. ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ದೇಶದ ಖನಿಜ ಸಂಪನ್ಮೂಲಗಳನ್ನು ಗುರುತಿಸಲು ವಿವಿಧ ಸಮೀಕ್ಷೆಗಳನ್ನು ನಡೆಸುತ್ತದೆ.

ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಿದ ಸಂಶೋಧನೆಯಲ್ಲಿ ಲಿಥಿಯಂ ಖನಿಜ ಇರುವುದು ಪತ್ತೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರೈಸಿ ಜಿಲ್ಲೆಯ ಸಲಾಲ್-ಹೈಮಾನಾ ಪ್ರದೇಶದಲ್ಲಿ ನಡೆಸಿದ ಸಂಶೋಧನೆಯಲ್ಲಿ ಲಿಥಿಯಂ ಖನಿಜಗಳ ಉಪಸ್ಥಿತಿಯನ್ನು ಪತ್ತೆಹಚ್ಚಲಾಗಿದೆ. ಈ ಪ್ರದೇಶದಲ್ಲಿ ಒಟ್ಟು 5.9 ಮಿಲಿಯನ್ ಟನ್ ಲಿಥಿಯಂ ಅದಿರು ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಲ್ಲಿ ಲಿಥಿಯಂ ಖನಿಜಗಳ ಬೃಹತ್ ನಿಕ್ಷೇಪಗಳ ಆವಿಷ್ಕಾರವು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಕಚ್ಚಾ ವಸ್ತುಗಳಾದ ಲಿಥಿಯಂ ಬ್ಯಾಟರಿಗಳ ಉತ್ಪಾದನೆಗೆ ಅವಕಾಶಗಳನ್ನು ನೀಡುತ್ತದೆ.

IN A FIRST IN COUNTRY, 5.9 MILLION TONNES LITHIUM DEPOSITS FOUND IN J-K

New Delhi: The union Government on Thursday said that 5.9 million tonnes of lithium reserves have been found for the first time in the country in Jammu and Kashmir.

Lithium is a non-ferrous metal and is one of the key components in EV Batteries.

“Geological Survey of India for the first time established lithium inferred resource (G3) of 5.9 million in the Salal- Haimana area of the Reasi District of Jammu and Kashmir,” the Ministry of Mines Said on Thursday.

If further that 51 mineral blocks including Lithium and Gold were handed over to respective state government .

“Out of these 51 mineral blocks, 5 blocks pertain to gold and other blocks pertain to commodities like potash, molybdenum, Base metals etc. spread across 11 states of Jammu and Kashmir (UT), Andhra Pradesh, Chhattisgarh, Gujarat, Jharkhand, Karnataka, Madhya Pradesh, Odisha, Rajasthan, Tamilnadu and Telangana,” the ministry added.               

ರಾಜಕೀಯ

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್, ಜಾತ್ಯತೀತ ಜನತಾದಳ ಮತ್ತು ಆಮ್ ಆದ್ಮಿ ಪಕ್ಷಗಳು ಕಣದಲ್ಲಿವೆ.

ಈ ಹಿನ್ನಲೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ, ಆಡಳಿತವನ್ನು ಉಳಿಸಿಕೊಳ್ಳಲು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಅದರಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕರ್ನಾಟಕ ಚುನಾವಣಾ ಉಸ್ತುವಾರಿಯಾಗಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಸಹ ಉಸ್ತುವಾರಿಯಾಗಿ ನೇಮಿಸಿ ಘೋಷಣೆ ಮಾಡಿದರು.

ಈ ಬಗ್ಗೆ ತಮಿಳುನಾಡು ಬಿಜೆಪಿ ಕಡೆಯಿಂದ ವಿಚಾರಿಸಿದಾಗ, ‘ಕರ್ನಾಟಕದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು, ಬಿಜೆಪಿ ವರಿಷ್ಟರು ಶತಪ್ರಯತ್ನ ಪಡುತ್ತಿದ್ದಾರೆ. ಇದಕ್ಕಾಗಿ ನಾನಾ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ರಾಜ್ಯದ ಚುನಾವಣಾ ಉಸ್ತುವಾರಿಯಾಗಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಯನ್ನು ಅವರ ಕೆಳಗೆ ನೇಮಿಸಿದೆ. ಇದು ಅಣ್ಣಾಮಲೈ ಅವರನ್ನು ಶೀಘ್ರದಲ್ಲೇ ಅಧ್ಯಕ್ಷ ಸ್ಥಾನದಿಂದ ಅಥವಾ ತಮಿಳುನಾಡಿನಿಂದ ಸ್ಥಳಾಂತರಿಸುವ ಸೂಚನೆಯಾಗಿದೆ’ ಎಂದು ಅವರು ಹೇಳುತ್ತಿದ್ದಾರೆ.

ಅನುಭವವಿಲ್ಲದ, ರಾಜಕೀಯ ತಂತ್ರಗಾರಿಕೆ ಗೊತ್ತಿಲ್ಲದ ಮಾಜಿ ಐಪಿಎಸ್ ಅಧಿಕಾರಿ ‘ಶಾರ್ಟ್ ಟೆಂಪರ್’ ಅಣ್ಣಾಮಲೈಯನ್ನು ಇಲ್ಲಿಗೆ ಏಕೆ ಸಹ ಉಸ್ತುವಾರಿಯಾಗಿ ನೇಮಿಸುತ್ತಿದ್ದಿರಿ ಎಂದು ಕರ್ನಾಟಕ ಬಿಜೆಪಿಯವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ತಮಿಳುನಾಡು ರಾಜಕೀಯದಲ್ಲಿ ತನ್ನನ್ನು ಉತ್ಸಾಹಿಯಾಗಿ ತೋರಿಸಿಕೊಳ್ಳುತ್ತಿದ್ದ ಅಣ್ಣಾಮಲೈಕೂಡ ತಮ್ಮನ್ನು ಏಕೆ ಕರ್ನಾಟಕಕ್ಕೆ ಸಹ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ ಎಂಬ ಗೊಂದಲದಲ್ಲಿ ಇದ್ದಾರೆ.

ಸಿನಿಮಾ

ಅರುಣ್ ಜಿ.,

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆ. ಶಿವಣ್ಣ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾಗಿದೆ ಈ ಚಿತ್ರ. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ 125ನೇ ಸಿನಿಮಾ ಒಂದು ಕಡೆಯಾದ್ರೆ, ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಹೀಗೆ ಸಾಕಷ್ಟು ವಿಶೇಷತೆಯೊಂದಿಗೆ ತೆರೆಕಂಡ ಈ ಚಿತ್ರ ದೊಡ್ಮನೆ ಅಭಿಮಾನಿಗಳ ಮನಗೆದ್ದಿತ್ತು.

ದೊಡ್ಮನೆ ಅಭಿಮಾನಿಗಳಲ್ಲಿ, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ವೇದ’ ಚಿತ್ರ ಕಳೆದ ವರ್ಷ ಡಿಸೆಂಬರ್ 23ರಂದು ತೆರೆಕಂಡಿತ್ತು. ಎ.ಹರ್ಷ ಹಾಗೂ ಶಿವಣ್ಣ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರದಲ್ಲಿ ದೊಡ್ಮನೆ ಅಭಿಮಾನಿ ಬಳಗ ಹಾಗೂ ಪ್ರೇಕ್ಷಕ ಪ್ರಭುಗಳ ಮನಗೆದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸೂಪರ್ ಸಕ್ಸಸ್ ಕಂಡಿದ್ದು ಹಿಟ್ ಲಿಸ್ಟ್ ಸೇರಿದೆ. ಇದೀಗ ಒಟಿಟಿ ಪ್ರೇಕ್ಷಕರ ಮನಗೆಲ್ಲಲು ‘ವೇದ’ ಚಿತ್ರ ರೆಡಿಯಾಗಿದ್ದು ಫೆಬ್ರವರಿ 10ಕ್ಕೆ ಜೀ5ನಲ್ಲಿ ಬಿಡುಗಡೆಯಾಗುತ್ತಿದೆ.

ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ‌ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

ದೇಶ

ವರದಿ: ರಾಮು, ನೀರಮಾನ್ವಿ

ರಾಯಚೂರು: ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ನಾಳೆ ಫೆಬ್ರವರಿ 10 ರಂದು ಶ್ರೀ.ಯಲ್ಲಮ್ಮ ದೇವಿಯ ಜಾತ್ರೆಯು ಬಹಳ ಅದ್ದೂರಿಯಾಗಿ ನಡೆಯಲಿದೆ.

ಪ್ರತಿವರ್ಷವು ಈ ಜಾತ್ರೆಯ ಹೆಸರಿನಲ್ಲಿ ಅದಿಕಾರಿಗಳು ಟೆಂಡರ್ ಕರೆಯುತ್ತಾರೆ. ಆದರೆ, ಟೆಂಡರ್ ನಿಯಮಗಳು ಎಲ್ಲಿಯೂ ಪಾಲನೆ ಆಗುತ್ತಿಲ್ಲ. ಜಾತ್ರೆಗೆ ಬರುವ ಭಕ್ತಾದಿಗಳಿಂದ ಅಕ್ರಮವಾಗಿ ಒಂದಕ್ಕೆ ಎರಡು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದು ದೊಡ್ಡ ದರೋಡೆಯಾಗಿದೆ. ಈ ವಿಷಯದ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕಿನ ಆಡಳಿತಕ್ಕೆ ಗೊತ್ತಿದ್ದರು, ಗುತ್ತಿಗೆದಾರರಿಗೆ ಅಕ್ರಮವಾಗಿ ಸಹಾಯ ಮಾಡುತ್ತಿದ್ದಾರೆ. ಶ್ರೀ.ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ನಡೆಯುವ ಈ ಕರಾಳ ದಂದೆಯಲ್ಲಿ, ಜಿಲ್ಲಾ ಮತ್ತು ತಾಲ್ಲೂಕಿನ ಅಧಿಕಾರಿಗಳಿಗೂ ಪಾಲು ಕೊಡುತ್ತೇವೆ ಎಂದು ಗುತ್ತಿಗೆದಾರರು ರಾಜಾರೋಷವಾಗಿ ಹೇಳಿಕೊಂಡು ತಿರುಗಾಡುವುದೇ ಇದಕ್ಕೆ ಸಾಕ್ಷಿಯಾಗಿದೆ. ಈ ಅಕ್ರಮ ದಂದೆ ಪ್ರತಿವರ್ಷವು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಯಾರು?

ಪ್ರತಿವರ್ಷ ಯಲ್ಲಮ್ಮನ ದೇವಸ್ಥಾನಕ್ಕೆ ಕಾಣಿಕೆಯಾಗಿ ಬರುವ ಲಕ್ಷಾಂತರ ರೂಪಾಯಿಗಳು ಖಜಾನೆಯಲ್ಲಿ ಜಮಾವಣೆಯಾಗುತ್ತಿದ್ದರು, ಇಲ್ಲಿ ಶೌಚಾಲಯ, ತಂಗುದಾಣ, ಕುಡಿಯುವ ನೀರಿನ ಸೌಲಭ್ಯಗಳು ಮರೀಚಿಕೆಯಾಗಿದೆ. ಸ್ಥಳೀಯ ಆಡಳಿತ ಮಂಡಳಿ ಭಕ್ತಾಧಿಗಳಿಗೆ ಮಾಡಿಕೊಡಬೇಕಾದ ಮೂಲಭೂತ ಸೌಲಭ್ಯಗಳನ್ನು ಮಾಡುವುದರಲ್ಲಿಯೂ ಅಧಿಕಾರಿಗಳು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ.

ಮದ್ಯ, ಮಾಂಸ ನೀಷೇಧ ವಿದ್ದರೂ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಪ್ರಾಣಿ ಬಲಿ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಹಾಗೂ ದೇವಸ್ಥಾನದ ಪ್ರಮುಖರು ಕಣ್ಣು ಮುಚ್ಚಿ ಸಹಕಾರ ನೀಡುತ್ತಿದ್ದಾರೆ. ಕಾನೂನನ್ನು ಗಾಳಿಗೆ ತೂರುವುದೆಲ್ಲ ಇವರಿಗೆ ಹಾಲು ಅನ್ನ ಸವಿದಂಗೆ.

ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಸುತ್ತಮುತ್ತ ನೆಡೆಯುವ ಅಕ್ರಮ ಚಟುವಟಿಕೆಗಳನ್ನು ಸ್ಥಳೀಯ ಆಡಳಿತ ಮಂಡಳಿ ಕೂಡಲೇ ತಡೆಗಟ್ಟಿ, ಸೇರಲಿರುವ ಲಕ್ಷಾಂತರ ಭಕ್ತಾಧಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬುದು ನೀರಮಾನ್ವಿ ಗ್ರಾಮ ಜನರ ಆಶಯವಾಗಿದೆ.