ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
April 2023 » Page 2 of 7 » Dynamic Leader
October 23, 2024
Home 2023 April (Page 2)
ದೇಶ ರಾಜ್ಯ

ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಮತ್ತು ಬಿಜೆಪಿ ರ‍್ಯಾಲಿ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಡಾ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುವಾದಿ ಹಕ್ಕುಗಳು ಇರುತ್ತವೆ’ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಅವರು ಇದನ್ನು ಹೇಗೆ ಹೇಳಬಲ್ಲರು? ಈ ಕುರಿತು ನಾವು ಭಾರತ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ’ ಎಂದು  ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜಕೀಯ

“ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಈ ಮಟ್ಟದಲ್ಲಿ ಪ್ರಧಾನಿ ಸಹಿತ ಕೇಂದ್ರ ಬಿಜೆಪಿ ಸರ್ಕಾರದ ಸಚಿವರು, ದೇಶದ ಹಲವು ಭಾಗದ ಬಿಜೆಪಿ ಮುಖಂಡರು ರಾಜ್ಯದಲ್ಲಿ ಬೀಡು ಬಿಟ್ಟಿರುವುದು ಇದೇ ಮೊದಲಬಾರಿ ಅನಿಸುತ್ತಿದೆ. ದೇಶದ ಗೃಹ ಸಚಿವ ಅಮಿತ್ ಶಾ ಅವರಂತೂ, ರಾಜ್ಯದ ಭವಿಷ್ಯ ಮೋದಿಯವರ ಕೈಗೆ ಕೊಡುವ ನಿರ್ಧಾರ ಮಾಡುವ ಚುನಾವಣೆ ಇದು ಎಂದಿದ್ದಾರೆ.

ಇದೇನು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವೋ ಅಥವಾ ಸರ್ವಾಧಿಕಾರದ ದೇಶವೋ? ಗೃಹ ಸಚಿವರಿಗೆ ಗೊತ್ತಿಲ್ಲದಿರುವುದು ಕ್ರೂರ ವ್ಯಂಗ್ಯ. ರಾಜ್ಯದ ಜನತೆ ಮೋದಿಯವರ ಮುಖ ನೋಡಿ ಮತ ಹಾಕುವುದಾದರೆ, ಇಲ್ಲಿನ ಬಿಜೆಪಿ ಸರ್ಕಾರ ಮತ್ತದರ ಮುಖಂಡರೆಲ್ಲ ಏಕೆ? ಮತ ಹಾಕದಿದ್ದರೆ ರಾಜ್ಯ ಸಂಕಷ್ಟಕ್ಕೀಡಾಗಲಿದೆ ಎಂಬ ಹೆದರಿಸುವ ಒಳಾರ್ಥವೂ ಇದ್ದಂಗಿದೆ!

ಬಿಜೆಪಿ ಗೆಲ್ಲದಿದ್ದರೆ ಕೋಮು ಗಲಭೆಗಳಾಗಲಿದೆ ಎಂದು ಹೇಳಿರುವ ಅಮಿತ್ ಶಾ ಅವರೆ, ನಿಮ್ಮ ಹುದ್ದೆಯ ಘನತೆ ಗೌಣವಾಗಿಸಬೇಡಿ. ಕೋಮು ಹಿಂಸೆ ಆರಂಭಿಸುವ ಹುನ್ನಾರ ನಿಮ್ಮ ಮಾತಿನಲ್ಲಿ ಅಡಗಿರುವ ಹಾಗಿದೆ! ಇದು ತೀರ ಅಪಾಯಕಾರಿ. ಈಗಾಗಲೇ, ಕನ್ನಡಿಗರು ರಾಜ್ಯ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಲು ನಿರ್ಧರಿಸಿದ್ದಾರೆ. ನಿಮಗೆ ಸೋಲು ಕಟ್ಟಿಟ್ಟ ಬುತ್ತಿ” ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.   

ರಾಜಕೀಯ

ಮಂಗಳವಾರ ತಮ್ಮ ನಿವಾಸದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,  ‘ಬಿಜೆಪಿಯವರು ಪ್ರಚಾರಕ್ಕೆ ಪ್ರಧಾನಿಯನ್ನದರೂ ಕರೆಸಲಿ, ಅಮೆರಿಕದ ಅಧ್ಯಕ್ಷರನ್ನಾದರೂ ಕರೆಸಲಿ ನನಗೇನು ಆತಂಕ ಇಲ್ಲ’ ಎಂದು ಹೇಳಿದರು. ಇದಕ್ಕೆ ಕರ್ನಾಟಕ ಬಿಜೆಪಿ, ‘ನಾವು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ನಮ್ಮ ಪಕ್ಷದ ಪ್ರಚಾರಕ್ಕೆ ಆಹ್ವಾನಿಸಿದರೆ ನಿಮಗೇಕೆ ಈ ಪರಿ ಹೊಟ್ಟೆ ಉರಿ? ಅಂದ ಹಾಗೆ, ನಿಮ್ಮ ರೀತಿ ನಾವು ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂತು ಮಮತಾ ಬ್ಯಾನರ್ಜಿಯವರನ್ನು ಬೆನ್ನು ಬಗ್ಗಿಸಿ ಬಿನ್ನವಿಸಿಕೊಂಡು ಕರೆತರುವುದಿಲ್ಲ ಬಿಡಿ’ ಎಂದು ಪ್ರತಿಕ್ರಿಯೆ ನೀಡಿತು.

ಇದಕ್ಕೆ ಜೆಡಿಎಸ್ ಪಕ್ಷವು ‘ಚುನಾವಣೆ ವೇಳೆ ಮಾತ್ರ ರಾಜ್ಯಕ್ಕೆ ಬರುವ ‘ಚುನಾವಣಾಜೀವಿ’ ನರೇಂದ್ರ ಮೋದಿ ಅವರನ್ನು ನೀವು ಹೆಮ್ಮೆ ಎಂದು ಹೇಳುತ್ತಿದ್ದೀರಿ. ಇದನ್ನೆ ನಾವು ಗುಲಾಮಗಿರಿ ಎಂದು ಕರೆಯುವುದು. ಹಿಂದಿ ಮತ್ತು ಗುಜರಾತಿಗಳ ಗುಲಾಮಗಿರಿ ಮಾಡುವ ನಿಮ್ಮಿಂದ ಸ್ವಾಭಿಮಾನ ಕಲಿಯುವ ಅಗತ್ಯತೆ ಕುಮಾರಸ್ವಾಮಿಗೆ ಅವರಿಗೆ ಬಂದಿಲ್ಲ.

ಗುಜರಾತಿನ ಹಿಂದಿ ದೊರೆಗಳ ಮುಂದೆ ನಡುಬಗ್ಗಿಸಿ ನಿಂತು ‘ಜೀ ಹುಜೂರ್’ ಅನ್ನುವುದಕ್ಕೂ, ಮಹಿಳೆಯೊಬ್ಬರಿಗೆ ಗೌರವ ಕೊಡುವುದಕ್ಕೂ ವ್ಯತ್ಯಾಸವಿದೆ. ಓಟಿಗಾಗಿ ಮಾತ್ರ ಸಂಸ್ಕೃತಿ ಪಾಠ ಮಾಡುವ ನಿಮಗೆ, ಮಹಿಳೆಯೊಬ್ಬರಿಗೆ ಮನಸ್ಸಿನಿಂದ ಗೌರವ ನೀಡುವುದನ್ನು ಯೋಚಿಸಲು ಕೂಡಾ ಸಾಧ್ಯವೇ ಇಲ್ಲ. ನಿಮ್ಮದೇನಿದ್ದರೂ ಢಾಂಬಿಕತೆ ಮಾತ್ರ.

ಅಷ್ಟೊಂದು ಸ್ವಾಭಿಮಾನವಿದ್ದರೆ ಅಮಿತ್ ಶಾ ಮುಂದೆ ನಿಂತು ಹಿಂದಿ ಹೇರಿಕೆ ವಿರುದ್ಧ ಒಂದೇ ಒಂದು ಶಬ್ಧ ಮಾತನಾಡಿ. ನೀವು ‘ಚುನಾವಣಾಜೀವಿ’ ಯನ್ನು ಕರೆಸಿರುವುದರಲ್ಲಿ ನಮಗೆ ಯಾವ ತಕರಾರೂ ಇಲ್ಲ. ಆದರೆ, ಇನ್ನೂ ಪೂರ್ಣಗೊಳ್ಳದ ಕಾಮಗಾರಿಯ ಉದ್ಘಾಟನೆ ಹೆಸರಿನಲ್ಲಿ ಅವರನ್ನು ಕರೆಸಿ ಜನರ ತೆರಿಗೆ ಹಣ ಪೋಲು ಮಾಡಿದ್ದೀರಿ ಎಂಬುವುದೇ ನಮ್ಮ ತಕರಾರು’ ಎಂದು ಜೆಡಿಎಸ್ ಪಕ್ಷ ಕಾರವಾಗಿ ಉತ್ತರ ನೀಡಿದೆ.

ರಾಜಕೀಯ

ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಕ್ಕ ಉತ್ತರವನ್ನು ನೀಡಿದ್ದಾರೆ.

“ಗೃಹ ಸಚಿವ ಅಮಿತ್ ಶಾ ಅವರೇ, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡಲು ಮುಸ್ಲಿಮರ ಮೀಸಲಾತಿಯನ್ನು ಇಲ್ಲವೆ ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗ-ಲಿಂಗಾಯತರ ಮೀಸಲಾತಿ ಕಡಿತಗೊಳಿಸಬೇಕಾಗಿಲ್ಲ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಈ ವಿವಾದವನ್ನು ಸುಲಭದಲ್ಲಿ ಬಗೆಹರಿಸಬಹುದು. ಬಿಜೆಪಿಗೆ ಒಕ್ಕಲಿಗರು-ಲಿಂಗಾಯತರ ಮೀಸಲಾತಿ ಹೆಚ್ಚಿಸುವ ಸದುದ್ದೇಶ ಇರಲಿಲ್ಲ. ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡುವ ದುರುದ್ದೇಶವಷ್ಟೇ ಇತ್ತು. ಇದನ್ನು ಅರ್ಥಮಾಡಿಕೊಂಡೇ ಸುಪ್ರೀಂ ಕೋರ್ಟ್ ಸರ್ಕಾರದ ಮೀಸಲಾತಿ ನೀತಿಗೆ ತಡೆಯಾಜ್ಞೆ ನೀಡಿರುವುದು.

ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಲ್ಲಿಯೇ ಜಾತಿ-ಜಾತಿ ಮತ್ತು ಧರ್ಮ-ಧರ್ಮದ ನಡುವೆ ಜಗಳ ಹಚ್ಚುವ ದುಷ್ಟ ಆಲೋಚನೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ಕರ್ನಾಟಕದ ಜನತೆ ದಡ್ಡರಲ್ಲ. ಒಕ್ಕಲಿಗರು ಮತ್ತು ಲಿಂಗಾಯತರು ಸೇರಿದಂತೆ ಈ ರಾಜ್ಯದ ಮಹಾಜನತೆ ‘ಕಿತ್ತು ತಿನ್ನುವ ದುಷ್ಟರಲ್ಲ’, ‘ಹಂಚಿ ತಿನ್ನುವ ಔದಾರ್ಯ ಸಜ್ಜನರು’ ಎನ್ನುವುದನ್ನು ಅಮಿತ್ ಶಾ ಅವರಿಗೆ ವಿನಮ್ರವಾಗಿ ತಿಳಿಸಬಯಸುತ್ತೇನೆ.

ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಪಕ್ಷದ ವಿರೋಧ ಇಲ್ಲ. ನಮ್ಮ ಪಕ್ಷ ಮೀಸಲಾತಿ ಹೆಚ್ಚಳದ ಪರವಾಗಿದೆ. ಬಿಜೆಪಿ ಸರ್ಕಾರ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನಷ್ಟೇ ವಿರೋಧಿಸುತ್ತಿದ್ದೇವೆ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದೊಂದೇ ಈಗಿನ ಮೀಸಲಾತಿಯ ಗೊಂದಲ-ವಿವಾದವನ್ನು ಪರಿಹರಿಸಲು ಇರುವ ಸರಿಯಾದ ಮಾರ್ಗ. ಮೀಸಲಾತಿಗೆ ಈಗ ವಿಧಿಸಲಾಗಿರುವ ಶೇಕಡಾ 50ರ ಮಿತಿ ಸಂವಿಧಾನದಲ್ಲಿ ಹೇರಲಾದ ಮಿತಿ ಅಲ್ಲ, ಅದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗ.

ಈಗಾಗಲೇ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿ ಶೇಕಡಾ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಎಲ್ಲ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಗುವಂತೆ ಮೀಸಲಾತಿಯನ್ನು ಪರಿಷ್ಕರಿಸಿ ಜಾರಿಗೆ ತರಬೇಕು ಮತ್ತು ಈ ಮೀಸಲಾತಿಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ ಗೆ ಸೇರಿಸಬೇಕು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 50ರಿಂದ ಶೇಕಡಾ 75ರ ವರೆಗೆ ಹೆಚ್ಚಿಸಿ ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುತ್ತೇವೆ. ನಮ್ಮಲ್ಲಿ ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮನೆ ಮನೆಗೆ ತೆರಳಿ ವೈಜ್ಞಾನಿಕವಾಗಿ ಗಣತಿ ಮಾಡಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಸಿದ್ಧ ಇದೆ. ಅದರ ಆಧಾರದಲ್ಲಿ ಮೀಸಲಾತಿ ರೂಪಿಸಿದರೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಕೊಳ್ಳಬಹುದು ಎಂಬ ಭರವಸೆ ನನಗಿದೆ” ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.

1994ರಲ್ಲಿ ಎಂ.ವೀರಪ್ಪ ಮೊಯಿಲಿ ಸರ್ಕಾರ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 73ಕ್ಕೆ ಹೆಚ್ಚಿಸಿ ಆದೇಶ ಮಾಡಿತ್ತು. ಅದಿನ್ನು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಅಲ್ಲಿಯೂ ರಾಜ್ಯ ಸರ್ಕಾರ ಜಾತಿಗಣತಿಯ ವರದಿಯನ್ನು ಮುಂದಿಟ್ಟು ಮೀಸಲಾತಿ ಹೆಚ್ಚಳಕ್ಕೆ ಅನುಮತಿ ಕೋರಿದರೆ ನ್ಯಾಯಾಲಯ ಖಂಡಿತ ಒಪ್ಪಿಗೆ ನೀಡಬಹುದು. ಸಾಮಾಜಿಕ ಅನ್ಯಾಯವನ್ನೇ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡು ಬಂದ ಬಿಜೆಪಿ ಪಕ್ಷಕ್ಕಾಗಲಿ, ಅದರ ಅಧ್ಯಕ್ಷರಿಗಾಗಲಿ ಸಾಮಾಜಿಕ ನ್ಯಾಯ ಅರ್ಥವಾಗಲಾರದು. ನಮ್ಮದು ಕೋಮುವಾದವನ್ನು ಉಸಿರಾಡುವ ಗುಜರಾತ್ ಅಲ್ಲ, ಬಸವವಾದವನ್ನು ಮೈಗೂಡಿಸಿಕೊಂಡಿರುವ ಕರ್ನಾಟಕ ಎನ್ನುವುದನ್ನು ಅಮಿತ್ ಶಾ ಅವರಿಗೆ ನೆನಪಿಸಬಯಸುತ್ತೇನೆ.

ಸಾಧನೆಯ ಬಲದಿಂದಾಗಲಿ, ಸವಕಲುಗೊಂಡಿರುವ ಕೋಮುವಾದದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಈ ಅಡ್ಡಕಸುಬಿ ಮೀಸಲಾತಿ ನೀತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಘೋಷಿಸಿತ್ತು. ಈ ಮೀಸಲಾತಿಯನ್ನು ಒಕ್ಕಲಿಗ ಇಲ್ಲವೇ ಲಿಂಗಾಯತರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಮುಸ್ಲಿಮ್ ಮತ್ತು ಒಕ್ಕಲಿಗ-ಲಿಂಗಾಯತರ ನಡುವೆ ದ್ವೇಷ ಹುಟ್ಟಿಸುವುದೇ ಆಗಿದೆ.

ಗೃಹ ಸಚಿವ ಅಮಿತ್ ಶಾ ಅವರ ಪ್ರಶ್ನೆಯಲ್ಲಿಯೇ ಬಿಜೆಪಿಯ ದುಷ್ಟ ಆಲೋಚನೆ ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿರುವ ಮುಸ್ಲಿಮರು ಮೀಸಲಾತಿ ರದ್ದತಿಯಿಂದ ಅಧೀರರಾಗಲಿಲ್ಲ, ಪ್ರಚೋದನೆಗೂ ಒಳಗಾಗಲಿಲ್ಲ. ಅದೇ ರೀತಿ ಇದು ಕನ್ನಡಿಯೊಳಗಿನ ಗಂಟು ಎನ್ನುವುದನ್ನು ಅರ್ಥಮಾಡಿಕೊಂಡಿರುವ ಜಾಗೃತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕೂಡಾ ಹೊಸ ಮೀಸಲಾತಿ ಘೋಷಣೆಯಿಂದ ಸಂಭ್ರಮಗೊಳ್ಳಲಿಲ್ಲ. ಇದು ನಮ್ಮ ಕರ್ನಾಟಕ.

ಈಗ ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಹೊಸ ಮೀಸಲಾತಿಯನ್ನು ಜಾರಿಗೆ ತರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಮೂಲಕ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಕೇಂದ್ರ ಸರ್ಕಾರದ ಗೃಹಸಚಿವರು ಚುನಾವಣಾ ಭಾಷಣದಲ್ಲಿ ಅದರ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ಗೃಹಸಚಿವ ಅಮಿತ್ ಶಹಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ, ಬಡಿಯುವ, ಮುರಿಯುವ ಸುಡುವ ‘ಗುಜರಾತ್ ಮಾದರಿ’ ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ಪ್ರೀತಿಸುವ, ಪೊರೆಯುವ ಮತ್ತು ಕಟ್ಟುವ ‘ಕರ್ನಾಟಕ ಮಾದರಿ’ಯೇ ನಡೆಯುವುದು. ಅಮಿತ್ ಶಾ ಅವರ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

ರಾಜಕೀಯ

ಬೆಂಗಳೂರು: ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ಪ್ರಚಾರ ಮಾಡಿದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಬಿಜೆಪಿಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಶಾಸಕ ಎಸ್.ಆರ್.ವಿಶ್ವನಾಥ್ ಛೂ ಬಿಟ್ಟಿರುವ ಈ ಗೂಂಡಾಗಳು ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿಯ ವರೆಗೂ ದೌರ್ಜನ್ಯ ನಡೆಸಿದ್ದಾರೆ. ಬೊಮ್ಮಾಯ್ ಅವರೆ ಇದೇನು ಉತ್ತರ ಪ್ರದೇಶವೆ? ಸೋಲುವ ಭೀತಿಯಿಂದ ಬಿಜೆಪಿ ಇಂತಹ ಕೃತ್ಯಕ್ಕೆ ಇಳಿದಿದೆ. ನಳೀನ್ ಕುಮಾರ್ ಕಟೀಲ್ ಅವರೆ ಇದಲ್ಲವೆ ಬಿಜೆಪಿಯ ಗೂಂಡಾಗಿರಿ ಸಂಸ್ಕೃತಿ. ನಮ್ಮದು ಶಾಂತಿ ಮತ್ತು ಸಮಾನತೆಯ ದಾರಿಯಾಗಿದ್ದು, ನೀವೆಷ್ಟೇ ಪ್ರಚೋದಿಸಿದರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಗೂಂಡಾಗಿರಿಗೆ ಚುನಾವಣೆಯ ದಿನ ಮತದಾರರು ಉತ್ತರ ನೀಡಲಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ನಮ್ಮ ಕಾರ್ಯಕರ್ತರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಲಿದ್ದೇವೆ. ಅವರ ಗೂಂಡಾಗಿರಿಗೆ ನಾವು ಬೆದರುವುದಿಲ್ಲ; ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಬಾರಿ ಯಲಹಂಕಕ್ಕೆ ಮುನೇಗೌಡರೇ ಶಾಸಕ ಎಂದು ಜನರು ತೀರ್ಮಾನಿಸಿದ್ದಾರೆ. ಡಿಜಿಪಿ ಅವರೇ ದೌರ್ಜನ್ಯ ಎಸಗಿದ ಬಿಜೆಪಿಯ ಎಲ್ಲಾ ಗೂಂಡಾಗಳನ್ನೂ ಕಾನೂನಿನ ಕುಣಿಕೆಗೆ ತನ್ನಿ. ಎಂದು ಜೆಡಿಎಸ್ ಒತ್ತಾಯಿಸಿದೆ.  

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಪಿಎಂ ಕೇರ್ಸ್ ನಿಧಿ (PM Cares) ವಿವಾದವನ್ನು ಸೃಷ್ಟಿಸುತ್ತಲೇ ಇದೆ. ಈಗಾಗಲೇ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಹೊಸ ನಿಧಿಯನ್ನು ಏಕೆ ರಚಿಸಬೇಕು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗುತ್ತಿಲ್ಲ. ಅಲ್ಲದೆ, ಪಿಎಂ ಕೇರ್ಸ್ ನಿಧಿ ನಿಧಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿಗೆ ಮಾಹಿತಿ ಹಕ್ಕು ಕಾಯಿದೆ ಅಡಿ ಉತ್ತರ ಸಿಗುತ್ತಿಲ್ಲ. ಸರ್ಕಾರ ಪ್ರತಿಕ್ರಿಯಿಸಲು ನಿರಾಕರಿಸುತ್ತಲೇ ಇದೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳು ಪಿಎಂ ಕೇರ್ಸ್ ನಿಧಿಗೆ 2,900 ಕೋಟಿ ರೂಪಾಯಿ ದೇಣಿಗೆ ನೀಡಿವೆ ಎಂದು ವರದಿಯಾಗಿದೆ. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 2020ರಲ್ಲಿ ಪಿಎಂ ಕೇರ್ಸ್ ನಿಧಿಯನ್ನು ಪ್ರಾರಂಭಿಸಿದರು. ಈ ನಿಧಿಯನ್ನು ಕೊರೊನಾದಿಂದ ಜನರನ್ನು ರಕ್ಷಿಸಲು ಮತ್ತು ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು ಘೋಷಿಸಲಾಯಿತು.

ಪ್ರಧಾನಿ ಮೋದಿ ಈ ಪಿಎಂ ಕೇರ್ಸ್ ನಿಧಿಯ ಮುಖ್ಯಸ್ಥರಾಗಿದ್ದು, ಈ ಸಂಸ್ಥೆಯ ಟ್ರಸ್ಟಿಗಳಾಗಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂತಾದವರು ಇದ್ದಾರೆ. ಇವರಷ್ಟೇ ಅಲ್ಲದೇ ಪ್ರಮುಖ ಸಿನಿಮಾ ಸೆಲೆಬ್ರಿಟಿಗಳೂ ಈ ನಿಧಿಯ ಟ್ರಸ್ಟಿಗಳಾಗಿ ಕಾಣಿಸಿಕೊಂಡಿದ್ದಾರೆ. ಪಿಎಂ ಕೇರ್ಸ್ ನಿಧಿ ಸಂಗ್ರಹಿಸುವ ಜಾಹೀರಾತುಗಳಲ್ಲಿ ಅನೇಕ ಸಿನಿಮಾ ಸೆಲೆಬ್ರಿಟಿಗಳು ಸಹ ಅಭಿನಯಿಸಿದ್ದಾರೆ. ಇದಲ್ಲದೆ, ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ವೆಬ್‌ಸೈಟ್‌ಗಳಲ್ಲೂ ಪಿಎಂ ಕೇರ್ಸ್ ನಿಧಿಯ ಜಾಹೀರತನ್ನು ಬಿತ್ತರಿಸಿ ದೇಣಿಗೆ ಸಂಗ್ರಹಿಸಲು ಮುಂದಾದರು.

ಆದರೆ, ಇಲ್ಲಿಯವರೆಗೆ ಪಿಎಂ ಕೇರ್ಸ್ ನಿಧಿಗೆ ಎಷ್ಟು ಹಣವನ್ನು ನೀಡಲಾಗಿದೆ ಮತ್ತು ಹಣವನ್ನು ಹೇಗೆ ಬಳಸಲಾಗಿದೆ ಎಂಬ ವಿವರಗಳನ್ನು ಎಲ್ಲಿಯೂ ಪ್ರಕಟಿಸಲಾಗಿಲ್ಲ. ಈ ಹಣಕಾಸು ಸಂಸ್ಥೆಯು ಆರ್‌ಟಿಐ ಕಾಯ್ದೆಯಡಿ ಬರುವುದಿಲ್ಲ ಎಂದು ಸರ್ಕಾರವು ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಆದರೆ ದೇಶದ ಪ್ರಧಾನಿ ನೇತೃತ್ವದ ಈ ನಿಧಿಯು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಂತೆ ಆರ್‌ಟಿಐ ಕಾಯ್ದೆಯಡಿ ಬರಬೇಕು ಎಂದು ಪದೇ ಪದೇ ಹೇಳಲಾಗುತ್ತಿದೆ. ಆದರೆ ಸರಕಾರ ಇದನ್ನು ಕೇಳಲೂ ನಿರಾಕರಿಸುತ್ತಿದೆ.

ಇದು ಪ್ರಧಾನ ಮಂತ್ರಿ ಮತ್ತು ಮಂತ್ರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ವೆಬ್‌ಸೈಟ್ gov.in ಡೊಮೇನ್ ಹೆಸರಿನಲ್ಲೇ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಸಂಬಂಧಿಸಿದ ಕಚೇರಿ ಕೂಡ ಪ್ರಧಾನಿ ಕಾರ್ಯಾಲಯದಲ್ಲಿದೆ. ಹಾಗಾದರೆ ಈ ಪಿಎಂ ಕೇರ್ಸ್ ನಿಧಿಯನ್ನು ಆರ್‌ಟಿಐ ಕಾಯ್ದೆಯಡಿ ತರಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಯಾವುದೇ ಪಾರದರ್ಶಕತೆ ಇಲ್ಲದೆ ದಾನ ಮಾಡಿದ ಹಣವನ್ನು ಏನು ಮಾಡಬೇಕೆಂದು ತಿಳಿಯದ ಈ ಪಿಎಂ ಕೇರ್ಸ್ ನಿಧಿಯನ್ನು ನಂಬಿ ದಾನ ಮಾಡುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ, ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ಸಿಎಸ್ಆರ್ ಹಣವನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿರುವುದು ಹೆಚ್ಚು ಆಘಾತಕಾರಿಯಾಗಿದೆ. ಈಗಾಗಲೇ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಇರುವಾಗ ಮತ್ತೊಂದು ನಿಧಿ ಏಕೆ? PMCares ನಿಧಿಯನ್ನು RTI ಕಾಯಿದೆಯಡಿ ತರಲು ಸರ್ಕಾರ ಏಕೆ ನಿರಾಕರಿಸುತ್ತಿದೆ? ಇಲ್ಲಿಯವರೆಗೆ ಪಡೆದ ದೇಣಿಗೆಯಲ್ಲಿ ಎಷ್ಟು ಬಳಸಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಲು ಏಕೆ ನಿರಾಕರಿಸುತ್ತದೆ? ಇಂತಹ ಪ್ರಶ್ನೆಗಳಿಗೆ ಸರ್ಕಾರ ಮತ್ತು ಪ್ರಧಾನಿ ಉತ್ತರಿಸುವುದು ಯಾವಾಗ?

ರಾಜಕೀಯ

ನವದೆಹಲಿ: ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಇಂದು ತಡೆ ನೀಡಿದೆ. ನ್ಯಾಯಾಲಯದ ಆದೇಶದಿಂದ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.

ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಸುಮಾರು ಮೂರು ದಶಕಗಳಷ್ಟು ಹಿಂದಿನ 4% ಮೀಸಲಾತಿಯನ್ನು ರದ್ದುಗೊಳಿಸಿದ ಬಿಜೆಪಿ ನೇತೃತ್ವದ ಸರ್ಕಾರದ ವಿವಾದಾತ್ಮಕ ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರದ ಆದೇಶಕ್ಕೆ ತಡೆ ನೀಡಿ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದೆ.

ಮುಸ್ಲಿಮರ 4% ಒಬಿಸಿ ಕೋಟಾವನ್ನು ರದ್ದುಪಡಿಸಿ, ಒಕ್ಕಲಿಗರು ಹಾಗೂ ಲಿಂಗಾಯತರ ಮೀಸಲಾತಿಯನ್ನು ತಲಾ 2% ಹೆಚ್ಚಿಸುವ ನಿರ್ಧಾರವು ಮೇಲ್ನೋಟಕ್ಕೆ ಅಸ್ಥಿರ ಹಾಗೂ ದೋಷಪೂರಿತ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸುಮಾರು ನಾಲ್ಕು ದಶಕಗಳಿಂದ ಮುಸ್ಲಿಮರಿಗೆ 4% ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ 2% ಮೀಸಲಾತಿ ಹಂಚಿಕೆ ಮಾಡಿತು.

ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ಅವರ ನೇತೃತ್ವದ ನ್ಯಾಯಪೀಠ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಮೀಸಲಾತಿ ಪರಿಷ್ಕರಣೆ ವೇಳೆ ಮುಸ್ಲಿಮರಿಗೆ ರಾಜ್ಯ ಸರ್ಕಾರ 4% ಮೀಸಲಾತಿ ರದ್ದು ಮಾಡಿತ್ತು. ಸರ್ಕಾರದ ಈ ಆದೇಶ ಸಾಮಾಜಿಕ ವಲಯದಲ್ಲಿ ಹೆಚ್ಚು ಚರ್ಚೆಗೀಡಾಗಿತ್ತು. ಇದೀಗ ಸುಪ್ರೀಂಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.

ಸುಪ್ರೀಂಕೋರ್ಟ್‌ ಆದೇಶದಿಂದಾಗಿ ಈಗ ಒಕ್ಕಲಿಗ ಮತ್ತು ಲಿಂಗಾಯತ ಮೀಸಲಾತಿ ಹೆಚ್ಚಳದ ಮೇಲೆ ಪರಿಣಾಮ ಬೀಳಲಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವಂತ ಸಮುದಾಯಗಳ ಮುಖಂಡರು ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹಲವಾರು ಹೋರಟಗಳು ನಡೆದವು. ಚುನಾವಣೆಯ ಸಂದರ್ಭದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಒತ್ತಡಕ್ಕೆ ಮಣಿದ ಬಿಜೆಪಿ ಸರ್ಕಾರ, ಮಾಡುವುದರಿಯದೆ ಮುಸ್ಲಿಮರ 4% ಒಬಿಸಿ ಮೀಸಲಾತಿಯನ್ನು ರದ್ದುಪಡಿಸಿ, ಒಕ್ಕಲಿಗರು ಹಾಗೂ ಲಿಂಗಾಯತರ ಮೀಸಲಾತಿಯನ್ನು ತಲಾ 2% ಹೆಚ್ಚಿಸಿ ಆದೇಶ ಹೊರಡಿಸಿತು.

ಇದರಿಂದ ಸಮಾದಾನವಾಗದ ಒಕ್ಕಲಿಗರು ಮತ್ತು ಲಿಂಗಾಯತರು, “ಮುಸ್ಲಿಮರ ಮೀಸಲಾತಿಯನ್ನು ಕಿತ್ತು ನಮಗೆ ಕೋಡುವುದು ಸೂಕ್ತವಲ್ಲ; ನಮಗೆ ಈ 2% ಮೀಸಲಾತಿಯಿಂದ ಏನೂ ಪ್ರಯೋಜನವಿಲ್ಲ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿತು. ಮಸ್ಲಿಮರು, “ನಮ್ಮ ಮೀಸಲಾತಿಯನ್ನು ಕಿತ್ತು ಒಕ್ಕಲಿಗರು ಮತ್ತು ಲಿಂಗಾಯತರಿಗೆ ನೀಡಿ, ಅಣ್ಣ ತಮ್ಮಂದಿರಂತೆ ಇರುವ ನಮ್ಮೊಳಗೆ ಜಗಳ ತರಲು ಬಿಜೆಪಿ ಸರ್ಕಾರ ಕುತಂತ್ರ ಮಾಡುತ್ತಿದೆ. ನಾವು ಯಾರೊಂದಿಗೂ ಸಂಘರ್ಷಕ್ಕೆ ಇಳಿಯದೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಘೋಷಿಸಿ. ಕಾನೂನು ಹೋರಟವನ್ನು ಕೈಗೆತ್ತಿಕೊಂಡರು. ಅವರು ಹೇಳಿದಂತೆ ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಇಂದು ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.

ಸೂಕ್ಷಮವಾಗಿ ಗಮನಿಸಿದರೆ, ಇದು ಮುಸ್ಲಿಮರಿಗೆ ಮಾತ್ರ ಸಿಕ್ಕಿದ ಜಯವಲ್ಲ. ಇದು ಒಕ್ಕಲಿಗರು ಮತ್ತು ಲಿಂಗಾಯತರಿಗೂ ಸಿಕ್ಕಿದ ಜಯವೇ. ನಮ್ಮನ್ನಾಳುವ ಬಿಜೆಪಿ ಸರ್ಕಾರ ವೂಟ್ ಬ್ಯಾಂಕ್ ರಾಜಕಾರಣ ಮಾಡಲಿಕ್ಕಾಗಿ ಮುಸ್ಲಿಮರು, ಲಿಂಗಾಯತರು ಹಾಗೂ ಒಕ್ಕಲಿಗರ ನಡುವೆ ಮೀಸಲಾತಿ ಗೇಮ್ ಫ್ಲೇ ಮಾಡಿ, ಇಂದು ತಲೆ ತಗ್ಗಿಸುವಂತೆ ಆಗಿದೆ. ಖಂಡಿತವಾಗಿಯೂ ಇದರ ಪರಿಣಾಮವನ್ನು ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಎದುರಿಸಲಿದೆ. ಬಿಜೆಪಿ ಮುಸ್ಲಿಮರಿಗೆ ಮಾತ್ರವಲ್ಲ. ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಕ್ಕೂ ವಿರೋಧಿ ಎಂಬುದು ಈಗ ಸಾಬೀತಾಗಿದೆ.

ಈ ನಡುವೇ ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವುದನ್ನು ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದಲ್ಲಿ ಮುಸ್ಲಿಮರಿಗೆ ಧರ್ಮಾಧಾರಿತ ಶೇಕಡ 4ರಷ್ಟು ಮೀಸಲಾತಿ ಇತ್ತು. ಮತಬ್ಯಾಂಕ್ ರಾಜಕಾರಣಕ್ಕೆ ಮಣಿಯದೆ ಬಿಜೆಪಿ ಸರಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದೆ. ಎಂದು ಹೇಳಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪದಕರು

ಕರ್ನಾಟಕದಲ್ಲಿ ತಮಿಳು ಭಾಷಿಕರು ಸುಮಾರು 1 ಕೋಟಿಗೂ ಮಿಗಿಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಆನೇಕಲ್, ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ, ಸರ್ವಜ್ಞ ನಗರ, ಪುಲಿಕೇಶಿನಗರ, ಶಿವಾಜಿನಗರ, ಶಾಂತಿನಗರ, ಬಿಟಿಎಂ ಲೇಔಟ್, ಜಯನಗರ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿನಗರ, ರಾಜಾಜಿನಗರ, ಯಶವಂತಪುರ ಹಾಗೂ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ಮೈಸೂರು, ಹನೂರು, ಚಾಮರಾಜನಗರ, ಕೊಳ್ಳೇಗಾಲ, ಹಾಗೂ ಕೆಜಿಎಫ್ ಮುಂತಾದ 23 ಕ್ಷೇತ್ರಗಳಲ್ಲಿ ತಮಿಳರ ಮತಗಳೇ ನಿರ್ಣಾಯಕ.

ದಶಕಗಳ ಹಿಂದೆ ಈ ಕ್ಷೇತ್ರಗಳಲ್ಲಿ ತಮಿಳುನಾಡು ಮೂಲದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸ್ಪರ್ದಿಸುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ರಾಜಕೀಯ ಬದಲಾವಣೆಗಳು ಮತ್ತು ಎನ್‌ಡಿಎ ಹಾಗೂ ಯೂಪಿಎ ಮೈತ್ರಿ ಪಕ್ಷಗಳ ಕೋರಿಕೆಯ ಮೇರೆಗೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಇಲ್ಲಿನ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿ ಚುನಾವಣೆಯಿಂದ ಹಿಂದೆ ಸರಿದವು.

ಯೂಪಿಎ ಮೈತ್ರಿ ಕೂಟದಲ್ಲಿರುವ ಡಿಎಂಕೆ ಮತ್ತು ಸಿದಂಬರಂ ಲೋಕಸಭಾ ಸದಸ್ಯ ತೋಲ್ ತಿರುಮಾವಳವನ್ ನೇತೃವದ “ವಿಡುದಲೈ ಚಿರುತ್ತೈಗಳ್” ಪಕ್ಷಕ್ಕೆ ಕರ್ನಾಟಕದಲ್ಲಿ ಶಾಖೆಗಳಿವೆ. ಮತ್ತು ಅಪಾರವಾದ ಕಾರ್ಯಕರ್ತರಿದ್ದಾರೆ. ವಿಚಾರವಾದಿ ಪೆರಿಯಾರ್ ರವರ ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ.

ಆದರೆ, ಎನ್‌ಡಿಎ ಮೈತ್ರಿ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ ಪಕ್ಷವು, ಮಾಜಿ ಮುಖ್ಯಮಂತ್ರಿಗಳಾದ ಎಡಪ್ಪಾಡಿ ಪಳನಿಸ್ವಾಮಿ, ಒ.ಪನ್ನೀರ್ ಸೆಲ್ವಂ, ಶಶಿಕಲಾ ಮತ್ತು ಟಿಟಿವಿ ದಿನಕರನ್ ಮುಂತಾದವರ ನಾಯಕತ್ವದ ಕಚ್ಚಾಟದಿಂದ ನಾಲ್ಕು ಭಾಗಗಳಾಗಿ ಹೊಡೆದೋಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮೈತ್ರಿಕೂಟದಲ್ಲಿರುವ ಬಿಜೆಪಿ ಈಗ ಹೊರಗೆ ನಿಂತು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷವನ್ನು ಬಾಯಿಗೆ ಬಂದಂತೆ ವಿಮರ್ಶೆ ಮಾಡಿಕೊಂಡು ತಿರುಗಾಡುತ್ತಿದೆ. ಈರೋಡು ಉಪ ಚುನಾವಣೆಯಿಂದ ಎಐಎಡಿಎಂಕೆ ಮತ್ತು ತಮಿಳುನಾಡು ಬಿಜೆಪಿಯ ಸಂಬಂಧ ಅಷ್ಟೇನು ಸರಿಯಾಗಿಲ್ಲ.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ಆಡಳಿತ ರೂಡ ಡಿಎಂಕೆ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಜೊತೆಯಲ್ಲೇ ಮಿತ್ರ ಪಕ್ಷವಾದ ಎಐಎಡಿಎಂಕೆ ಪಕ್ಷದ ನಾಯಕರುಗಳನ್ನೂ ವಿಮರ್ಶೆ ಮಾಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ‘ದಿನನಿತ್ಯ ಪತ್ರಿಕೆಗಳಲ್ಲಿ, ಟಿ.ವಿ.ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಮಾದ್ಯಮಗಳಲ್ಲಿ ಸುದ್ದಿಯಾಗಬೇಕು ಎಂಬುದಕ್ಕಾಗಿ ಸಾಕ್ಷ್ಯದಾರ ವಿಲ್ಲದ ವಿಷಯಗಳನ್ನು ಮುನ್ನಲೆಗೆ ತಂದು ಅಣ್ಣಾಮಲೈ ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ದಿಎಂಕೆ ನಾಯಕರು ಹೇಳುತ್ತಿದ್ದಾರೆ. 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಬಿಜೆಪಿ ಪಕ್ಷವು ಸುಮಾರು 2.62% ಮತಗಳನ್ನು ಮಾತ್ರವೇ ಪಡೆದಿತ್ತು. ಆದರೆ, ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಿಳುನಾಡಿನಲ್ಲಿ ಪ್ರಬಲವಾದ ವಿರೋಧ ಪಕ್ಷ ನಾವೇ ಎಂದು ಎಲ್ಲಡೆಯೂ ಹೇಳಿಕೊಂಡು ಬರುತ್ತಿದ್ದಾರೆ. ತನ್ನನ್ನು ಎಂಜಿಆರ್, ಜಯಲಲಿತಾ ಹಾಗೂ ಕರುಣಾನಿಧಿ ಅವರೊಂದಿಗೆ ಹೋಲಿಕೆ ಮಾಡಿ ಮಾತನಾಡಿ ಎಲ್ಲರ ನಗೆಪಾಟಿಗೆ ಕಾರಣರಾಗಿದ್ದಾರೆ.

‘ರಫೇಲ್ ಕೈಗಡಿಯಾರದ ಬಿಲ್ಲಿನ ವಿಚಾರದಲ್ಲಿ ನಕಲಿ ರಶೀದಿಯನ್ನು ತೋರಿಸಿ, ದಿನಕ್ಕೊಂದು ಮಾತನಾಡುತ್ತಿದ್ದಾರೆ’ ಎಂದು ಅಲ್ಲಿನ ಜನ ಆಕ್ರೋಶವನ್ನು ವ್ಯಕ್ತಪಡಿಸಿ, ಶೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಮೀಮ್ಸ್ ಗಳನ್ನು ಹಾಕಿ ಕೀಟಲೆ ಮಾಡುತ್ತಿರುವುದು ದಿನನಿತ್ಯದ ಟ್ರೆಂಡಿಂಗ್ ಆಗಿದೆ. ‘ರಫೇಲ್ ವಾಚ್‌ಗೆ ಬಿಲ್ಲನ್ನು ಕೇಳಿದರೆ, ಅದಕ್ಕೆ ಪ್ರತಿಯುತ್ತರವಾಗಿ ಡಿಎಂಕೆ ಸರ್ಕಾರದ ಭ್ರಷ್ಟಾಚಾರಗಳನ್ನು ಏಪ್ರಿಲ್ ಒಂದರಂದು ಬಯಲುಗೊಳಿಸುತ್ತೇನೆ ಎಂದು ಹೇಳಿ, ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕೆಲವರ ಆಸ್ತಿ ಪಟ್ಟಿಯನ್ನು ತೋರಿಸಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಮಂತ್ರಿಮಂಡಲದ ಸಹದ್ಯೋಗಿಗಳು ರೂ.1,343,170,000,000 ಕೋಟಿಯಷ್ಟು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಹೇಳುತ್ತಿದ್ದಾರೆ’ ಎಂದು ಅಲ್ಲಿಂದ ವರದಿಗಳು ಹೇಳುತ್ತಿದೆ. ಇದನ್ನೇ ಕಾಯುತ್ತಿದ್ದ ಡಿಎಂಕೆ ಪಕ್ಷವು ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿಯ ಮೂಲಕ ತಕ್ಷಣ ಅಣ್ಣಮಲೈಗೆ ಲೀಗಲ್ ನೋಟೀಸ್ ಕಳುಹಿಸಿ, ‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಅವರ ಕುಟುಂಬ ಸದಸ್ಯರು ಮತ್ತು ಡಿಎಂಕೆ ನಾಯಕರ ವಿರುದ್ಧ ಇತ್ತೀಚಿಗೆ ಮಾಡಿದ ಭಾಷಣ ಮತ್ತು ಭ್ರಷ್ಟಾಚಾರ ಆರೋಪಗಳಿಗಾಗಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು ಮತ್ತು 48 ಗಂಟೆಗಳ ಒಳಗೆ 500 ಕೋಟಿ ರೂಪಾಯಿಗಳ ನಷ್ಟವನ್ನು ಪಾವತಿಸಬೇಕು. ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು’ ಎಂದು ಲೀಗಲ್ ನೋಟಿಸ್ ಕಳುಹಿಸಿತು.

ಕೆಲವು ದಿನಗಳ ಹಿಂದೆ ಮಾತನಾಡಿದ ಅಣ್ಣಾಮಲೈ ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿಯನ್ನು ಮುಂದುವರಿಸಿದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಗರ್ವದಿಂದ ಕೇಂದ್ರದ ಬಿಜೆಪಿ ವರಿಷ್ಠರಿಗೆ ಬೆದರಿಕೆಯ ಸಂದೇಶವನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಮುಂದಿನ ಚುನಾವಣೆ ಎಐಎಡಿಎಂಕೆ ಜೊತೆಯಲ್ಲೇ’ ಎಂದು ಪ್ರತಿಕ್ರಿಯೆ ನೀಡಿದರು. ಇಷ್ಟಕ್ಕೆ ತನ್ನಗಾಗದ ಅಣ್ಣಾಮಲೈ ‘ಡಿಎಂಕೆ ಮಾತ್ರವಲ್ಲ ತಮಿಳುನಾಡಿನಲ್ಲಿ ಅಧಿಕಾರ ಚಲಾಯಿಸಿದ ಹಿಂದಿನ ಪಕ್ಷಗಳ ಭ್ರಷ್ಟಾಚಾರವನ್ನೂ ಬಯಲಿಗೆಳೆಯುತ್ತೇನೆ’ ಎಂದು ಎಐಎಡಿಎಂಕೆ ಪಕ್ಷಕ್ಕೆ ದಮಕಿ ಹಾಕಿದರು. ಇದರಿಂದ ಎಐಎಡಿಎಂಕೆ ಮತ್ತು ಬಿಜೆಪಿಯ ಸಂಬಂಧ ಅಳಸಿಹೋಗಿರುವುದು ಸುಳ್ಳೇನಲ್ಲ. ಇವರ ನಡವಳಿಕೆಯಿಂದ ಬೇಸತ್ತ ತಮಿಳುನಾಡು ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳು ಸುಮಾರು ಜನ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳಲ್ಲಿ ಸೇರಿಕೊಳುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಎನ್‌ಡಿಎ ಮಿತ್ರ ಪಕ್ಷವಾದ ಎಐಎಡಿಎಂಕೆ, ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯವಿರುವ ಕಡೆಗಳಲ್ಲಿ ಸ್ಪರ್ದಿಸಲು 4 ರಿಂದ 6 ಕ್ಷೇತ್ರಗಳನ್ನು ಒದಗಿಸಿಕೊಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಕೇಳಿತ್ತು. ಆದರೆ ಇದಕ್ಕೆ ಅಮಿತ್ ಶಾ ಒಪ್ಪಿಗೆ ನೀಡಲಿಲ್ಲವೆಂದು ಹೇಳಲಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಎಐಎಡಿಎಂಕೆ ಕೊನೆಯ ಕ್ಷಣದಲ್ಲಿ ಪುಲಿಕೇಶಿನಗರದಲ್ಲಿ ತಮ್ಮ ಅಭ್ಯರ್ಥಿ ಟಿ.ಅನ್ಬರಸನ್ ಅವರನ್ನು ಕಣಕ್ಕಿಳಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತ ಪಡಿಸಿತು. ಈಗ ಬಿಜೆಪಿ ವರಿಷ್ಠರ ಕೋರಿಕೆಯ ಮೇರೆಗೆ ಅಲ್ಲಿ ತಮ್ಮ ಅಭ್ಯರ್ಥಿಯನ್ನು ವಾಪಸ್ಸು ಪಡೆದುಕೊಂಡಿದೆ.

ಬೆಂಗಳೂರು ನಗರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸಿರುವ  ಬಿಜೆಪಿಗೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕರ್ನಾಟಕ ಚುನಾವಣೆ ಸಹ ಉಸ್ತುವಾರಿಯಾದ ಅಣ್ಣಾಮಲೈ ಅವರಿಂದ ತಮಿಳರ ಪ್ರಾಬಲ್ಯವಿರುವ 23 ಕ್ಷೇತ್ರಗಳಲ್ಲಿ ತಮಿಳರ ಮತಗಳು ಕೈತಪ್ಪಿ ಹೋಗುವುದು ಬಹುತೇಕ ಖಚಿತವಾಗಿದೆ. ಕಾರಣ ಇಲ್ಲಿನ ಬಹುಪಾಲು ತಮಿಳರು ಇನ್ನು ಡಿಎಂಕೆ, ಎಐಎಡಿಎಂಕೆ, ವಿಡುದಲೈ ಚಿರುತ್ತೈಗಳ್, ದ್ರಾವಿಡರ್ ಕಳಗಂ ಹಾಗೂ ದ್ರಾವಿಡರ್ ವಿಡುದಲೈ ಕಳಗಂ ಮೂಂತಾದ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಬೆರಳೆನಿಕೆಯ ತಮಿಳರೆ ಇದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಡಿಎಂಕೆ ವರಿಷ್ಠ ದಿವಂಗತ ಎಂ.ಕರುಣಾನಿಧಿ ಅವರ ಆಡಳಿತಾವದಿಯಲ್ಲಿ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಹಾಗೂ ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಇದರಿಂದ ಕರ್ನಾಟಕದಲ್ಲಿ ಯಡಿಯೂರಪ್ಪನವರ ಮೇಲೆ ಇಲ್ಲಿನ ತಮಿಳರು ಅಪಾರವಾದ ಗೌರವವನ್ನು ಇಟ್ಟಿದ್ದರು. ಈಗ ಅಣ್ಣಾಮಲೈಯಿಂದ ಅದೂ ಇಲ್ಲದಂತೆ ಆಗಿದೆ. ತಮಿಳುನಾಡಿನಲ್ಲಿರುವ ಆಡಳಿತ ಪಕ್ಷವಾದ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳನ್ನು ಹಾಗೂ ವಿರೋಧ ಪಕ್ಷವಾದ ಎಐಎಡಿಎಂಕೆಯನ್ನು ಕಟುವಾಗಿ ಟೀಕಿಸಿಕೊಂಡು ಇಲ್ಲಿಗೆ ಬಂದು ತಮಿಳರಲ್ಲಿ ಮತ ಕೇಳಿದರೆ ಯಾರುತಾನೇ ಓಟು ನೀಡುತ್ತಾರೆ.        

ರಾಜಕೀಯ

ಇಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಸತಿ ಸಚಿವ ವಿ.ಸೋಮಣ್ಣ ರವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸಿರುವುದಾಗಿ ವರದಿಯಾಗಿದೆ. ಬಿಜೆಪಿಯ ಪ್ರಚಾರ ವಾಹನವನ್ನು ಕಂಡ ವರುಣಾ ಕ್ಷೇತ್ರದ ಸಾರ್ವಜನಿಕರು ಕಲ್ಲುಗಳಿಂದ ಹೊಡೆದು ವಾಹನವನ್ನು ಓಡಿಸಿರುವ ವಿಡಿಯೋ ವೈರಲ್ ಆಗಿದೆ.

ಖಾಲಿ ಕುರ್ಚಿಗಳ ಸಮಾವೇಶ ನಡೆಸುತ್ತಿದ್ದ ಬಿಜೆಪಿಗೆ ಜನಾಕ್ರೋಶ ದರ್ಶನ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ ಹುಟ್ಟುವಂತಾಗಿದೆ. ವಾಹನಕ್ಕೆ ಬಿದ್ದ ಒಂದೊಂದು ಕಲ್ಲೆಟುಗಳೂ ಬಿಜೆಪಿಯ ಬೆಲೆ ಏರಿಕೆ, ಭ್ರಷ್ಟಾಚಾರ, ವಂಚನೆ, ದುರಾಡಳಿತಕ್ಕೆ ಸಿಕ್ಕ ಉತ್ತರಗಳು ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ತಮ್ಮ ಆಕ್ರೊಶವನ್ನು ವ್ಯಕ್ತ ಪಡಿಸಿದೆ.

ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿ, “ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸುತ್ತಿರುವುದು ವರದಿಯಾಗಿದೆ. ಇದನ್ನು ನಮ್ಮ‌ ಪಕ್ಷದ ಕಾರ್ಯಕರ್ತರು ಇಲ್ಲವೇ ಬೇರೆಯವರು ಮಾಡಿದ್ದರೆ ಅದು ಸರಿ ಅಲ್ಲ. ಎಲ್ಲ ಅಭ್ಯರ್ಥಿಗಳಿಗೂ ಮುಕ್ತ ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಚಾರ ಮಾಡಲು ಅವಕಾಶ ಇದೆ. ಅದಕ್ಕೆ ಅಡ್ಡಿ ಪಡಿಸಬಾರದು. ಅಂತಿಮವಾಗಿ ಮತದಾರರು ತಮ್ಮ ಆಯ್ಕೆಯನ್ನು ತಾವೇ ನಿರ್ಧರಿಸುತ್ತಾರೆ” ಎಂದು ಹೇಳಿದ್ದಾರೆ. ಇದುವೇ ಒಬ್ಬ  ಜನನಾಯಕನಿಗೆ ಇರುವ ಗುಣಲಕ್ಷಣ; ಇದುವೇ ಪ್ರಜಾಪ್ರಭುತ್ವ; ಇದುವೇ ಸಂವಿಧಾನದ ಆಶಯ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಭಾರತದ ಉದ್ಯಮಿ ಅದಾನಿಯು ವಂಚನೆ ಮತ್ತು ಅವ್ಯವಹಾರದ ಆರೋಪಕ್ಕೆ ಒಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಏಕೆ ಭೇಟಿಯಾದರು?

‘ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಳ್ಳಲಿದೆ’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯಮಿ ಅಧಾನಿ, ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಗೌತಮ್ ಅದಾನಿಯು ಮುಂಬೈನಲ್ಲಿರುವ ಶರದ್ ಪವಾರ್ ಅವರ ‘ಸಿಲ್ವರ್ ಓಕ್’ ನಿವಾಸಕ್ಕೆ ಏಪ್ರಿಲ್ 20 ರಂದು ಭೇಟಿ ನೀಡಿದರು. ಅಲ್ಲಿ ಶರದ್ ಪವಾರ್ ಮತ್ತು ಅದಾನಿ ಭೇಟಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ವರದಿಗಳು ಹೇಳುತ್ತವೆ.

ಸುಪ್ರಿಯಾ ಸುಳೆ

ಶರದ್ ಪವಾರ್ ಅವರ ಸಂಬಂಧಿ ಅಜಿತ್ ಪವಾರ್, ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂಬ ಊಹಾಪೋಹದ ಸುದ್ಧಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಈ ವೇಳೆಯಲ್ಲಿ, ಇಂತಹ ಭೇಟಿ ನಡೆದಿರುವುದು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ, ಈ ಭೇಟಿ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ಶರದ್ ಪವಾರ್ ಮತ್ತು ಅದಾನಿ

ಅದಾನಿ ಸಮೂಹವು ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದೆ ಎಂದು ಹಿಂಡೆನ್‌ಬರ್ಗ್ ವರದಿಯು ಪುರಾವೆಗಳೊಂದಿಗೆ ಆರೋಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಅದಾನಿಯನ್ನು ಕಟುವಾಗಿ ಟೀಕಿಸಿದವು. ಉದ್ಯಮಿ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಪರ್ಕದ ಬಗ್ಗೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದರು. ಮೋದಿ ಮತ್ತು ಅದಾನಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನೂ ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೋರಿಸಿದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅದಾನಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರೂ ಶರದ್ ಪವಾರ್ ಅದಾನಿಯನ್ನು ಬೆಂಬಲಿಸಿಕೊಂಡು ಬಂದರು.

ರಾಹುಲ್ ಗಾಂಧಿ

ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಆದರೆ ‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಸಂಸದೀಯ ಜಂಟಿ ಸಮಿತಿಯ ತನಿಖೆ ಅಗತ್ಯವಿಲ್ಲ’ ಎಂದು ಶರದ್ ಪವಾರ್ ಹೇಳಿದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಹಾಗೂ ಗೌತಮ್ ಅದಾನಿ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಅದಾನಿ ವಿಚಾರವನ್ನು ತೀವ್ರವಾಗಿ ಟೀಕಿಸಿಕೊಂಡು ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ನೀಡಿದ ಮಾಹಿತಿಯೊಂದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತು. ಅದೇನೆಂದರೆ, ‘ಗೌತಮ್ ಅಧಾನಿ ನನ್ನನ್ನು ಮತ್ತು ಇತರ ಕೆಲವರನ್ನು ಸ್ನೇಹಿತರ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಮಹುವಾ ಮೊಯಿತ್ರಾ ಹೇಳಿದರು.

ಆ ಕೆಲವರಲ್ಲಿ ಶರದ್ ಪವಾರ್ ಕೂಡ ಒಬ್ಬರು ಎಂಬುದು ಈ ಭೇಟಿಯ ಮೂಲಕ ಬಹಿರಂಗವಾಗಿದೆ. ಅವರ ಭೇಟಿಯ ನಂತರ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, ‘ಯಾವುದೇ ರಾಜಕಾರಣಿ ಉದ್ಯಮಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಹೇಳಿದರು. ‘ಅದಾನಿ ಜತೆ ಮುಖಾಮುಖಿಯಾಗಿ ಚರ್ಚಿಸಲು ಏನೂ ಇಲ್ಲ. ಹಿಂಡೆನ್‌ಬರ್ಗ್ ವರದಿಯ ಆರೋಪಗಳ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳೂವ ತನಕ ಯಾವುದೇ ರಾಜಕಾರಣಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಮಹುವಾ ಮೊಯಿತ್ರಾ ಹೇಳುತ್ತಾರೆ. ಮತ್ತು ಶರದ್ ಪವಾರ್ ಅವರು ಅದಾನಿಯನ್ನು ಭೇಟಿಯಾಗಿರುವುದನ್ನೂ ಟೀಕಿಸಿದ್ದಾರೆ.

ಉದ್ಧವ್ ಠಾಕ್ರೆ

ನವೆಂಬರ್ 2019ರಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಸೇರಿದಂತೆ ಪಕ್ಷಗಳನ್ನು ಒಳಗೊಂಡ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರ ಅಲ್ಲಿ ನಡೆಯಿತು. ಇದ್ದಕ್ಕಿದ್ದಂತೆ ಶಿವಸೇನೆಯಿಂದ ಬೇರ್ಪಟ್ಟ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾದರು. ಆಡಳಿತ ಬದಲಾವಣೆಗೂ ಮುನ್ನ ಅದಾನಿ ಮತ್ತು ಶರದ್ ಪವಾರ್ ಭೇಟಿ ನಡೆಯಿತು ಎಂಬುದು ಗಮನಾರ್ಹ.

ಅಜಿತ್ ಪವಾರ್

ಪ್ರಸ್ತುತ ಉದ್ಧವ್ ಠಾಕ್ರೆ ಹೂಡಿರುವ ಪ್ರಕರಣದಲ್ಲಿ ಏಕನಾಥ್ ಶಿಂಧೆ ಬೆಂಬಲಿಗ ಶಾಸಕರು ಅನರ್ಹಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆ ಯಾರು ಸರ್ಕಾರ ರಚಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಹಿನ್ನಲೆಯಲ್ಲೇ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಅದಾನಿ ಹಾಗೂ ಶರದ್ ಪವಾರ್ ಭೇಟಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಏಕನಾಥ್ ಶಿಂಧೆ

ಶರದ್ ಪವಾರ್ ಮತ್ತು ಅದಾನಿ ಭೇಟಿಗೂ ಮಹಾರಾಷ್ಟ್ರ ರಾಜಕಾರಣದ ಮುಂದಿನ ನಡೆಗಳಿಗೂ ಸಂಬಂಧ ಇರುವ ಸಾಧ್ಯತೆಗಳು ಇದೆ ಎಂದೂ ಹೇಳಲಾಗುತ್ತಿದೆ. ಮತ್ತು ಈ ಸಭೆಯಲ್ಲಿ ಹಿಂಡೆನ್‌ಬರ್ಗ್ ವರದಿಯಿಂದ ಉಂಟಾದ ಬಿಕ್ಕಟ್ಟು ಮತ್ತು ವಿರೋಧ ಪಕ್ಷಗಳ ಹೋರಾಟದಿಂದ ಅದಾನಿ ಸಮೂಹಕ್ಕೆ ಉದ್ಭವಿಸಿರುವ ಒತ್ತಡದ ಬಗ್ಗೆಯೂ ಅವರು ಖಂಡಿತವಾಗಿ ಚರ್ಚಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.