ಡಿ.ಸಿ.ಪ್ರಕಾಶ್ ಸಂಪಾದಕರು
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗೆದ್ದು, ಆಡಳಿತ ನಡೆಸುತ್ತಿದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳೆಗಿಳಿಸಿತು. ನಂತರ ಮೇ 20 ರಂದು ಸಿದ್ದರಾಮಯ್ಯನವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರೊಂದಿಗೆ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಜನ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡರು.
ಮುಂದುವರಿದು, ಮೇ 22 ರಿಂದ 24 ರವರೆಗೆ 3 ದಿನಗಳ ಕಾಲ ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯಿತು. ಇದರಲ್ಲಿ ನೂತನ ಶಾಸಕರುಗಳು ಪ್ರಮಾಣವಚನ ಸ್ವೀಕರಿಸಿಕೊಂಡರು. ಮೇ 24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದರು.
ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಅವರ ನಿವಾಸದಲ್ಲಿ ಪ್ರತ್ಯೇಕವಾಗಿ ಭೇಟಿಯಾದರು. ಒಟ್ಟು ಶಾಸಕರ ಪೈಕಿ ಶೇ.15ರಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಬಹುದು ಎಂಬುದು ನಿಯಮ. ಅದರಂತೆ ಕರ್ನಾಟಕದಲ್ಲಿ 224 ಶಾಸಕರಿರುವುದರಿಂದ 34 ಮಂದಿ ಸಚಿವರಾಗಬಹುದು. ಈ ಪೈಕಿ 10 ಹುದ್ದೆಗಳು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದು, 24 ಹುದ್ದೆಗಳು ಖಾಲಿ ಉಳಿದಿವೆ.
ಈ ಹಿನ್ನಲೆಯಲ್ಲಿ ನೂತನವಾಗಿ ನೇಮಕಗೊಂಡಿರುವ 24 ಸಚಿವರ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ನಿನ್ನೆ ರಾತ್ರಿ ಬಿಡುಗಡೆ ಮಾಡಿದರು. ಇದರ ಬೆನ್ನಲ್ಲೇ ಇಂದು ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ನೂತನ ಸಚಿವರಾಗಿ ದಿನೇಶ್ ಗುಂಡೂರಾವ್ (ಗಾಂಧಿನಗರ), ಈಶ್ವರ್ ಖಂಡ್ರೆ (ಭಾಲ್ಕಿ), ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ), ಶಿವಾನಂದ ಪಾಟೀಲ್ (ಬಸವನ ಬಾಗೇವಾಡಿ), ಶರಣಬಸಪ್ಪ ದರ್ಶನಾಪುರ (ಶಹಾಪುರ), ಎಚ್.ಸಿ.ಮಹದೇವಪ್ಪ (ಟಿ.ನರಸೀಪುರ), ಕೆ.ವೆಂಕಟೇಶ್ (ಪಿರಿಯಾಪಟ್ಟಣ), ಎಸ್.ಎಸ್.ಮಲ್ಲಿಕಾರ್ಜುನ್ (ದಾವಣಗೆರೆ), ಭೈರತಿ ಸುರೇಶ್ (ಹೆಬ್ಬಾಳ), ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ),
ರಹೀಂ ಖಾನ್ (ಬೀದರ್ ಉತ್ತರ), ಡಾ.ಎಂ.ಸಿ.ಸುಧಾಕರ್ (ಚಿಂತಾಮಣಿ), ಡಿ.ಸುಧಾಕರ್ (ಹಿರಿಯೂರು), ಎಚ್.ಕೆ.ಪಾಟೀಲ್ (ಗದಗ), ಚೆಲುವರಾಯಸ್ವಾಮಿ (ನಾಗಮಂಗಲ), ಕೆ.ಎನ್.ರಾಜಣ್ಣ (ಮಧುಗಿರಿ), ಸಂತೋಷ್ ಲಾಡ್ (ಕಲಘಟಗಿ), ಮಧು ಬಂಗಾರಪ್ಪ (ಸೊರಬ), ಮಂಕಾಳ ವೈದ್ಯ (ಭಟ್ಕಳ), ಶಿವರಾಜ್ ತಂಗಡಕಿ (ಕನಕಗಿರಿ), ಆರ್.ಬಿ.ತಿಮ್ಮಾಪುರ (ಮುಧೋಳ), ಡಾ.ಶರಣಪ್ರಕಾಶ್ ಪಾಟೀಲ (ಸೇಡಂ), ಎನ್.ಎಸ್.ಬೋಸರಾಜು (ಮಾನ್ವಿ), ಬಿ.ನಾಗೇಂದ್ರ (ಬಳ್ಳಾರಿ ಉಪನಗರ) ಸ್ಥಾನ ಸ್ವೀಕರಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಇಂದು ಸಂಜೆ ವೇಳೆಗೆ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 2 ಪ್ರಮುಖ ಖಾತೆಗಳು ಸಿಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಸರ್ಕಾರದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟಿದ್ದಾರೆ. ಕಾರಣ ಕೊಟ್ಟಿರುವ ವಾಗ್ದಾನಗಳು ಆ ರೀತಿಯಾಗಿದೆ. ಚುನಾವಣೆ ಮುಗಿದು 17 ದಿನಗಳು ಕಳೆದೋಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವಾರಗಳು ಆಗಿವೆ. ವಿರೋಧಪಕ್ಷಗಳು “ಕರೆಂಟ್ ಬಿಲ್ ಕಟ್ಟಬೇಡಿ; ಬಸ್ ಟಿಕೆಟ್ ತೆಗೆಯಬೇಡಿ” ಎಂದು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಬಹುಮತ ಸರ್ಕಾರ ಹಾಗೂ ಪೂರ್ಣವಾದ ಮಂತ್ರಿಮಂಡಲ ಇನ್ನು ಕಾಲವಿಳಂಬ ಮಾಡದೆ, ಬೇಗನೆ ಟೇಕಪ್ ಆದರೆ, ಅದು ಸರಕಾರಕ್ಕೆ ಒಳ್ಳೆಯದು; ಜನರಿಗೂ ಒಳ್ಳೆಯದು!