ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
May 2023 » Page 3 of 10 » Dynamic Leader
November 23, 2024
Home 2023 May (Page 3)
ರಾಜಕೀಯ

“ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ನಿರಾಕರಿಸುತ್ತದೆ ಒಬ್ಬ ಮನುಷ್ಯನ ದುರಹಂಕಾರ” ಎಂದು ಕಾಂಗ್ರೆಸ್ ಅಪಾದಿಸಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಡಿರುವ ಟ್ವೀಟ್ ನಲ್ಲಿ, “ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಂಚಿಯ ಜಾರ್ಖಂಡ್ ಹೈಕೋರ್ಟ್ ಸಂಕೀರ್ಣದಲ್ಲಿ ದೇಶದ ಅತಿದೊಡ್ಡ ನ್ಯಾಯಾಂಗ ಸಂಕೀರ್ಣವನ್ನು ಉದ್ಘಾಟಿಸಿದರು. ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ಒಬ್ಬ ವ್ಯಕ್ತಿಯ ದುರಹಂಕಾರವು ನಿರಾಕರಿಸಿದೆ. ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಹಕ್ಕು ರಾಷ್ಟ್ರಪತಿಗಳಿಗೆ ಇದೆ.

ಒಬ್ಬ ವ್ಯಕ್ತಿಯ ಸ್ವಯಂ ಪ್ರಚಾರದ ದುರಾಸೆಯಿಂದ ಆದಿವಾಸಿ ಸಮುದಾಯದ ಪ್ರಥಮ ಪ್ರಜೆಯ ಹಕ್ಕುನ್ನು ಕಸಿದುಕೊಳ್ಳಲಾಗಿದೆ. ರಾಷ್ಟ್ರಪತಿಗಳಿಗೆ ಪ್ರಧಾನಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ 20 ಪಕ್ಷಗಳು ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ, ಎಸ್‌ಪಿ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ 19 ವಿರೋಧ ಪಕ್ಷಗಳು ಜಂಟಿಯಾಗಿ ಬಹಿಷ್ಕಾರವನ್ನು ಘೋಷಿಸಿವೆ. ಪ್ರಜಾಪ್ರಭುತ್ವದ ಆತ್ಮವು ಹೀರಿಕೊಂಡಾಗ ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಾಣಲಾಗದು ಎಂದು ಅವರು ಬಣ್ಣಿಸಿದ್ದಾರೆ.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸದಿದ್ದರೆ ತಮ್ಮ ಪಕ್ಷ ಪಾಲ್ಗೊಳ್ಳುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 19 ವಿರೋಧ ಪಕ್ಷಗಳ ಜಂಟಿ ಹೇಳಿಕೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮುವನ್ನು ಸಂಪೂರ್ಣವಾಗಿ ಪಕ್ಕಕ್ಕೆ ಇರಿಸಿ, ನೂತನ ಸಂಸತ್ ಭವನವನ್ನು ತಾವೇ ಉದ್ಘಾಟಿಸವ ಪ್ರಧಾನಿ ಮೋದಿಯ ನಿರ್ಧಾರ, ಗಂಭೀರ ಅವಮಾನ ಮಾತ್ರವಲ್ಲ ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ” ಎಂದು ಅವರು ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಹಾಗೂ ಸೀಯು, ಫ್ಲಾಪ್ ಡೈರೆಕ್ಟರ್, ಕರ್ತ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ದುರ್ಗಾ ಪಿ.ಎಸ್. ಅವರ ನಿರ್ದೇಶನದ ಮತ್ತೊಂದು ಚಿತ್ರ  ದಿಗ್ವಿಜಯ. ಒಬ್ಬ  ವರದಿಗಾರ ಮನಸು ಮಾಡಿದ್ರೆ ಸಮಾಜದ ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ ಬಗೆಹರಿಸಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.  ವರದಿಗಾರನೊಬ್ಬ ಹುಚ್ಚನನ್ನು ಇಟ್ಟುಕೊಂಡು ಕೇವಲ ಮೂರು ದಿನದಲ್ಲಿ ರಾಜ್ಯದ ಎಲ್ಲಾ ರೈತರ ಸಾಲವನ್ನು  ಮನ್ನಾ ಮಾಡಿಸುತ್ತಾನೆ. ಅದು ಹೇಗೆ ಎನ್ನುವುದೇ ಈ ಚಿತ್ರದ ಕಥೆ. ನಾಯಕನ ತಂದೆ ತಾಯಿ ಕೂಡ ರೈತರೇ ಆಗಿದ್ದು, ಅವರೂ ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್ ನಿಂದ ನಾಯಕನ ಗೆಳೆಯ ಹುಚ್ಚನಾಗಿರುತ್ತಾನೆ.

ಜೆ.ಪಿ. ಎಂಟರ್‌ಟೈನ್‌ಮೆಂಟ್ ನಿರ್ಮಾಣದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದ ‘ಯು’ ಸರ್ಟಿಫಿಕೇಟ್ ದೊರೆತಿದೆ. ಗೋವಾ ಫಿಲಂ ಫೆಸ್ಟಿವಲ್‌ನಲ್ಲಿ ಈ ಚಿತ್ರಕ್ಕೆ 2 ಅವಾರ್ಡ್ ಬಂದಿದೆ. ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಜಯಪ್ರಭು ಆರ್.ಲಿಂಗಾಯತ್. ಅರುಣ್ ಸುಕದರ್. ಹರೀಶ್ ಆರ್.ಸಿ ಅವರು  ನಿರ್ಮಾಣ ಮಾಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ಸಂಕಲನ ಮತ್ತು ನಿರ್ದೇಶನ ದುರ್ಗಾ ಪಿ.ಎಸ್ ಅವರದು.

ಜಯಪ್ರಭು ಆತಗ. ಲಿಂಗಾಯತ್ ಚಿತ್ರದ ನಾಯಕನಾಗಿ ನಟಿಸಿದ್ದು,  ಸ್ನೇಹ ನಾಯಕಿಪಾತ್ರ ನಿರ್ವಹಿಸಿದ್ದಾರೆ. ಸುಚೇಂದ್ರ ಪ್ರಸಾದ್. ಪಟ್ರೆಬ ನಾಗರಾಜ್. ಹೊನ್ನವಳ್ಳಿ ಕೃಷ್ಣ. ಹೊನ್ನವಳ್ಳಿ ಶ್ರೀಕಾಂತ್. ಕಿಲ್ಲರ್ ವೆಂಕಟೇಶ್. ಶಿವಕುಮಾರ್ ಆರಾಧ್ಯ. ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರಿಕರಣ ನೆಡೆಸಲಾಗಿದೆ. ಚಿತ್ರದಲ್ಲಿ 4 ಫೈಟ್, 5 ಹಾಡುಗಳಿದ್ದು ಹರ್ಷ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿನಸ್ ಮೂರ್ತಿ. ಸಾಹಸ-ಸೂಪ್ಪರ್ ಸುಬ್ಬು. ಡ್ಯಾನ್ಸ್ ಮಾಸ್ಟರ್ ಜಗ್ಗು ಅವರದು.

ಸಿನಿಮಾ

ವರದಿ: ಅರುಣ್ ಜಿ.,

ಈ ಹಿಂದೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಓಂ, ಸ್ವಸ್ತಿಕ್, ಸೂಪರ್ ನಂಥ ಚಿತ್ರಗಳು ಮಾಡಿದ ದಾಖಲೆ ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿಯ ಟೈಟಲ್ ಇರುವ ಮತ್ತೊಂದು ಚಿತ್ರಕ್ಕೆ ಇತ್ತೀಚೆಗೆ ಚಾಲನೆ ದೊರೆತಿದೆ. ಅದರ ಹೆಸರು ಸ್ಟಾರ್. ನಕ್ಷತ್ರದ ಗುರುತನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿಟ್ಟುಕೊಂಡು, ಚಿತ್ರ ಮಾಡಲು ಹೊರಟಿರುವವರು ನಿರ್ಮಾಪಕ ಶರತ್; ಅವರೇ ಚಿತ್ರದ ಹೀರೋ ಕೂಡ. ಈ ಚಿತ್ರಕ್ಕೆ ಪತಿ, ಪತ್ನಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಮತಿ ಅನು ಹಾಗೂ ಮಂಜು ವಿಜಯಸೂರ್ಯ ಸೇರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀನಿವಾಸ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆದ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ರವಿ ಸುಬ್ರಮಣ್ಯ ಅವರು ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚಿತ್ರದ ನಾಯಕ ಹಾಗೂ ನಿರ್ಮಾಪಕರೂ ಆದ ಶರತ್ ಮಾತನಾಡಿ, “ನಮ್ಮ ತಂದೆ ಪ್ರಕಾಶ್ ಫೈಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅದೇ ನಾನು ಚಿತ್ರರಂಗಕ್ಕೆ ಬರಲು ಕಾರಣ. ಈ ಹಿಂದೆ ನಾನು ‘ಪ್ಯಾಟಿ ಮಂದಿ ಕಾಡಿಗ್ ಬಂದ್ರು’ ಶೋನಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದೆ, ಥೇಟರ್ ಹಿನ್ನಲೆಯೂ ನನಗಿದೆ. ಇದೊಂದು ರೌಡಿಸಂ ಬೇಸ್ ಸಬ್ಜೆಕ್ಟ್. ನಿರ್ದೇಶಕರು ತುಂಬಾ ಚೆನ್ನಾಗಿ ಪ್ಲಾನ್ ಮಾಡಿಕೊಂಡಿದ್ದಾರೆ. ವಿಭಿನ್ನವಾದ ಕಥೆ. ಕ್ಲೈಮ್ಯಾಕ್ಸ್ ನೋಡಿ ಹೊರ ಬರುವಾಗ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ. ಚಿತ್ರದಲ್ಲಿ ಒಂದಷ್ಟು ನೈಜ ಘಟನೆಗಳನ್ನು ಹೇಳಿದರೂ, ಯಾರ ಹೆಸರನ್ನೂ ಸಹ ಬಳಸಿಕೊಂಡಿಲ್ಲ” ಎಂದು ಹೇಳಿದರು.

  ನಂತರ ನಿರ್ದೇಶಕ ಮಂಜು ವಿಜಯಸೂರ್ಯ ಮಾತನಾಡಿ, “16 ವರ್ಷಗಳ ಹಿಂದೆ ನಾನು ಒಬ್ಬ ಲೈಟ್ ಬಾಯ್ ಆಗಿ ಸಿನಿ ಜರ್ನಿ ಆರಂಭಿಸಿ, ಬರವಣಿಗೆಯಲ್ಲೇ ಹೆಚ್ಚು ಸಮಯ ಕಳೆದೆ. ಈಗ ನಿರ್ದೇಶಕನಾಗುತ್ತಿದ್ದೇನೆ.  ನಮ್ಮ ಚಿತ್ರದ ಟೈಟಲ್ಲೇ ಕಥೆ ಹೇಳುತ್ತದೆ. ಇದು ಅಂಡರ್‌ ವರ್ಲ್ಡ್ ಸಬ್ಜೆಕ್ಟ್. ಹೀರೋಗೆ ನಾಯಕಿ ಹೇಗೆ ಬೆಂಬಲವಾಗಿ ನಿಲ್ತಾರೆ ಅಂತ ಹೇಳಿದ್ದೇವೆ. ನ್ಯಾಚುರಲ್ ಆದಂಥ ಫೈಟ್ಸ್ ಚಿತ್ರದಲ್ಲಿರುತ್ತವೆ. ಇದೊಂದು ಲೋಕಲ್ ಸಬ್ಜೆಕ್ಟ್ ಆಗಿರುವುದರಿಂದ ಬೆಂಗಳೂರಿನಲ್ಲೇ ಹೆಚ್ಚು ಭಾಗದ ಶೂಟಿಂಗ್ ಮಾಡುತ್ತೇವೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಮೇಲೆ ಹೆಚ್ಚು ಫೋಕಸ್ ಮಾಡಿದ್ದೇವೆ. ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿಕೊಂಡು ಹೋಗುವ ಕಂಟೆಂಟ್” ಎಂದು ಹೇಳಿದರು.

ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ನಟಿ ರಜತ ರಕ್ಷ ಮಾತನಾಡಿ, “ಈ ಹಿಂದೆ ಸದ್ದು, ವಿಚಾರಣೆ ನಡೆಯುತ್ತಿದೆ, ತಲವಾರ್ ಸೇರಿ ಮೂರು ಚಿತ್ರಗಳಲ್ಲಿ ನಟಿಸಿದ್ದೆ. ನಾಯಕಿಯಾಗಿ ಇದೇ ಮೊದಲ ಚಿತ್ರ. ನಾಯಕನಿಗೆ ಸಪೋರ್ಟ್ ಆಗಿರುವಂಥ ಪಾತ್ರ, ತುಂಬಾ ಚೆನ್ನಾಗಿದೆ” ಎಂದು ಹೇಳಿದರು. ಛಾಯಾಗ್ರಾಹಕ ಪ್ರವೀಣ್ ಎಂ.ಪ್ರಭು ಮಾತನಾಡಿ, “ಕಪಾಲ ನಂತರ ಮೂರನೇ ಚಿತ್ರ. ರಿಯಲಿಸ್ಟಿಕ್ ಆಗಿ ಸಿನಿಮಾವನ್ನು ಶೂಟ್ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದೇನೆ. ನಿರ್ದೇಶಕರ ಜೊತೆ ಈ ಹಿಂದೆ ಶಾರ್ಟ್ ಫಿಲಂಸ್ ಮಾಡಿದ್ದೆ” ಎಂದರು. ಮತ್ತೊಬ್ಬ ನಿರ್ದೇಶಕಿ ಅನು ಮಾತನಾಡಿ, “ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಜಾಸ್ತಿ ಇನ್‌ವಾಲ್ ಆಗಿದ್ದೇನೆ. ರಿಯಲಿಸ್ಟಿಕ್ ಆಗಿ ಚಿತ್ರವನ್ನು ತೆರೆಮೇಲೆ ತರಬೇಕು ಎಂದುಕೊಂಡಿದ್ದೇವೆ” ಎಂದರು. ಒಂದು ಪ್ಯಾಥೋ, ಒಂದು ಮಾಸ್ ಹಾಗೂ 2 ಲವ್ ಸಾಂಗ್ ಸೇರಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕಾಸ್ ವಸಿಷ್ಠ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ

ವರದಿ: ಅರುಣ್ ಜಿ.,

ಇದು ಆಟೋ ಚಾಲಕರ ಬದುಕು ಹಾಗೂ ಸಾಧನೆಗಳ ಪರಿಚಯಿಸುವ ಅಪರೂಪದ ಕಾರ್ಯಕ್ರಮ.

“ನಮ್ಮೂರ ಮಂದಾರ ಹೂವೆ” ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ವಿನಾಯಕ ಜೋಶಿ, ಈತನಕ ಸುಮಾರು 85ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗಷ್ಟೇ ಅಲ್ಲದೆ, ವಿನಾಯಕ ಜೋಶಿ ಆರ್.ಜೆ ಹಾಗೂ ನಿರೂಪಕನಾಗೂ ಚಿರಪರಿಚಿತ.

ಪ್ರಸ್ತುತ ವಿನಾಯಕ ಜೋಶಿ, ತಮ್ಮದೇ ಆದ ಜೋಶಿ ಚಿತ್ರ ಲಾಂಛನದಲ್ಲಿ ‌”ಮೀಟರ್ ಹಾಕಿ ಪ್ಲೀಸ್ ” ಎಂಬ ವೆಬ್ ಸೀರಿಸ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಹಾಗೂ ನಿರೂಪಣೆ ಕೂಡ ಅವರದೆ. ಇತ್ತೀಚೆಗೆ ಈ ವೆಬ್ ಸಿರೀಸ್ ಟ್ರೇಲರ್ ಬಿಡುಗಡೆ ಹಾಗೂ ಮೊದಲ ಸಂಚಿಕೆ ಪ್ರದರ್ಶನ ನಡೆಯಿತು.‌ ಅಮೋಘವರ್ಷ (ಗಂಧದಗುಡಿ ಖ್ಯಾತಿ), ಧರ್ಮೇಂದ್ರ ಕುಮಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ವೆಬ್ ಸಿರೀಸ್ ಗೆ ಶುಭ ಕೋರಿದರು.

“ಬಾಲನಟನಾಗಿ ಬಂದ ನಾನು, ನಾಯಕನೂ ಆದೆ. ಆನಂತರ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾದೆ. ಕೆಲವು ವರ್ಷಗಳ ಹಿಂದೆ “ಜೋಶ್ ಲೆ” ಎಂಬ ವೆಬ್ ಸಿರೀಸ್ ನಿರ್ಮಿಸಿದ್ದೆ. ಈಗ “ಮೀಟರ್ ಹಾಕಿ ಪ್ಲೀಸ್” ಎಂಬ ವಿಭಿನ್ನ ವೆಬ್ ಸಿರೀಸ್ ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಆಟೋ ಚಾಲಕರ ಜೀವನ ಹಾಗೂ ಸಾಧನೆಯನ್ನು ಪರಿಚಯಿಸುವ ವೆಬ್ ಸಿರೀಸ್ ಇದಾಗಿದೆ. ಸುಮಾರು ಏಳು ಕಂತುಗಳಲ್ಲಿ ಯೂಟ್ಯೂಬ್ ಹಾಗೂ Spotify ನಲ್ಲಿ ಇದು ಪ್ರಸಾರವಾಗಲಿದೆ. ಕರ್ನಾಟಕದಾದ್ಯಂತ ಇರುವ ಹತ್ತಕ್ಕೂ ಹೆಚ್ಚು ಜನಪ್ರಿಯ ಆಟೋಚಾಲಕರನ್ನು ಸಂದರ್ಶಿಸಿದ್ದೇನೆ.‌ 40 ನಿಮಿಷಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ನಮ್ಮ‌ ಸುಮಾರು 25 ಜನರ ತಂಡದ ಪರಿಶ್ರಮದಿಂದ ಈ ವೆಬ್ ಸಿರೀಸ್ ಮೂಡಿಬಂದಿದೆ. ಹಲವು ಪ್ರಾಯೋಜಕರ ಬೆಂಬಲ ನಮಗಿದೆ” ಎಂದು ವಿನಾಯಕ ಜೋಶಿ “ಮೀಟರ್ ಹಾಕಿ ಪ್ಲೀಸ್” ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಆಟೋ ಚಾಲಕರನ್ನು ಸನ್ಮಾನಿಸಲಾಯಿತು.

ರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಅಧಿವೇಶನದಲ್ಲಿ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಯು.ಟಿ.ಖಾದರ್ ಅವರನ್ನು ಅಭಿನಂದಿಸಿ ಮಾತನಾಡಿದರು.

“ವಿಧಾನಸಭೆಯಲ್ಲಿ ಆರೋಗ್ಯಪೂರ್ಣ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೂಡಿದ ಚರ್ಚೆಗಳಾಗುವ ಮೇಲ್ಪಂಕ್ತಿಯನ್ನು ಎತ್ತಿಹಿಡಿವ ಜವಾಬ್ದಾರಿ ಸಭಾಧ್ಯಕ್ಷರ ಮೇಲಿದೆ. ಸದನದ ಘನತೆ, ಗಾಂಭೀರ್ಯ, ಗೌರವವನ್ನು ಸ್ಪೀಕರ್ ಎತ್ತಿಹಿಡಿಯಬೇಕು. ಖಾದರ್ ಅವರ ಮುಂದಾಳ್ವತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ ಎಂದು ಆಶಿಸುತ್ತೇನೆ.

ಖಾದರ್ ಅವರು ಸಭಾದ್ಯಕ್ಷರ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ನಂಬಿಕೆ, ವಿಶ್ವಾಸವಿದೆ. ಅವರು ಬಹಳ ತಾಳ್ಮೆ ಇರುವ ವ್ಯಕ್ತಿ. ಅದು ಈ ಹುದ್ದೆಗೆ ಅಗತ್ಯವಾದ ಗುಣ. ಸದನದಲ್ಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಚರ್ಚೆಗಳಾಗಲಿ. ಹೊಸದಾಗಿ ಆರಿಸಿ ಬಂದ ಸದಸ್ಯರಿಗೆ ಅಭಿನಂದನೆಗಳು. ಸರ್ಕಾರವಾಗಿ ತಮಗೆ ನಾವು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ.

ರಾಜಕಾರಣದ ಕುಟುಂಬದಿಂದ ಬಂದಿರುವ ಯು.ಟಿ.ಖಾದರ್ ಅವರು ತಮ್ಮ ತಂದೆಯ ನಿಧನದ ನಂತರ ಉಳ್ಳಾಲ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿಯಾದ ಖಾದರ್ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ್ದು, 2018ರಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ “ಸದನವೀರ” ಪ್ರಶಸ್ತಿಯೂ ದೊರೆತಿತ್ತು.

ಯು.ಟಿ.ಖಾದರ್ ಅವರು ಮಾದರಿ ಶಾಕಸರಾಗಿ ಕೆಲಸ ಮಾಡಿದ್ದು, ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ವಿರೋಧಪಕ್ಷದ ಉಪನಾಯಕರಾಗಿ ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಜಾತ್ಯಾತೀತ ಮನೋಭಾವ ಉಳ್ಳವರು ಕೂಡ.

ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ಎಲ್ಲ ಸದಸ್ಯರೂ ಬಯಸುತ್ತಾರೆ. ವಿಧಾನಸಭೆಯಲ್ಲಿ ಈ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಭಾವನೆ ಅನೇಕರಲ್ಲಿದೆ. ಆ ಭಾವನೆ ಹೋಗಲಾಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. “ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ”. ಇಲ್ಲಿ ಏಳು ಕೊಟಿ ಕನ್ನಡಿಗರ ಸಮಸ್ಯೆಗಳನ್ನು ಚರ್ಚೆ ಮಾಡಬೇಕು.

ಸದನದ ಅಧ್ಯಕ್ಷರಿಗೆ ಪ್ರಜಾಪ್ರಭುತ್ವದಲ್ಲಿ ಮಹತ್ವದ ಸ್ಥಾನವಿದೆ. ಸದನದ ಚರ್ಚೆಯಲ್ಲಿ ಅನೇಕ ವಿಚಾರಗಳು ಬರುತ್ತವೆ. ಚರ್ಚೆಯಲ್ಲಿ ಭಾಗವಹಿಸುವಾಗ ಪದಬಳಕೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಅಸಂವಿಧಾನಾತ್ಮಕ ಪದಬಳಕೆಗೆ ಅವಕಾಶವಿರಬಾರದು. ರಚನಾತ್ಮಾಕವಾದ ಸಲಹೆಗಳನ್ನು ನೀಡಲು ಎಲ್ಲರಿಗೂ ಅವಕಾಶ ಹಾಗೂ ಹಕ್ಕುಗಳಿವೆ.

ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕ. ವಿಧಾನಸಭೆಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ, ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಇರಬೇಕು. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆಯಾಗುವುದಿಲ್ಲ. ಬಂಡವಾಳ ಹೂಡಿಕೆಯಾಗದಿದ್ದರೆ, ಉದ್ಯೋಗ ಸೃಷ್ಟಿಯಾಗುವುದಿಲ್ಲ. ಉದ್ಯೋಗ ಸೃಷ್ಟಿಯಾಗದಿದ್ದರೆ ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ರಾಜ್ಯದ ಅಭಿವೃದ್ಧಿ, ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಆದ್ದರಿಂದ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಬೆಳವಣಿಗೆ ಒಂದಕ್ಕೊಂದು ಪೂರಕವಾಗಿದೆ” ಎಂದು ಹೇಳಿದರು.

ರಾಜ್ಯ

ಶೋಭಿತಾ ಎಂಬ ಯುವತಿ, ಪ್ರಧಾನಿ ನರೇಂದ್ರ ಮೋದಿಯ ಚಿತ್ರವನ್ನು ತನ್ನ ಬೆನ್ನ ಹಿಂದೆ ಟಾಟೂ ಹಾಕಿಸಿಕೊಂಡ ಅರೆನಗ್ನ ಚಿತ್ರವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು, “ಮೋದಿನ ಬೈದ್ರೆ ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಾಗುತ್ತೇ ಅಂದ್ರೆ ಬೈರಿ, ಮಳೆ ಜಾಸ್ತಿ ಆದ್ರೆ ಜನ ಆಕಾಶನ ಬೈತಾರೆ, ನೋವು ಬಂದ್ರೆ ದೇವರನ್ನ ದೂಷಿಸುತ್ತಾರೆ, ಕೆಲಸದಲ್ಲಿ ವಿಫಲವಾದರೆ ವಿಧಿನ ನಿಂದಿಸ್ತಾರೆ, ಆಸ್ತಿ ಕಡಿಮೆ ನೀಡಿದ್ರ ತಂದೆ ತಾಯಿಗಳನ್ನು ನಿಂದಿಸುಸ್ತಾರೆ. ಮೋದಿಯನ್ನು ನಂಬಿ ಅಷ್ಟೆ ಸಾಕು. ಸುಳ್ಳು ಪ್ರಚಾರಗಳನ್ನು ನಂಬಬೇಡಿ” ಎಂದು ಟ್ವೀಟ್ ಮಾಡಿದ್ದಾಳೆ. ಇದು ವೈರಲ್ ಆಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯ ಮೇಲೆ ನಾಡಿನ ಪ್ರತಿಯೊಬ್ಬರಿಗೂ ಪ್ರೀತಿ, ಗೌರವ, ಅಭಿಮಾನ ಎಲ್ಲವೂ ಇರುತ್ತದೆ. ಆದರೆ, ರಾಜಕೀಯ ಸನ್ನಿವೇಶಗಳು ಬೇರೆ ಬೇರೆಯದಾಗಿರುತ್ತದೆ; ಅಷ್ಟೇ. ಪ್ರಧಾನಿ ನರೇಂದ್ರ ಮೋದಿಯ ಮೇಲೆ ಅಭಿಮಾನ ತೋರಿಸುವುದು ತಪ್ಪಲ್ಲ. ಅದು ಅತಿಯಾಗಬಾರದು. ನಿನ್ನ ಅರೆನಗ್ನ ಪೋಟೋವನ್ನು ನೋಡಿದರೆ ಪ್ರಧಾನಿ ಮೆಚ್ಚುತ್ತಾರೆಯೇ? ಖಂಡಿತ ಇಲ್ಲ. ಇದು ಅವರಿಗೆ ಮಾಡಿದ ಅಪಮಾನ. ನಿನ್ನ ಮೇಲೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದು ಫಾರಿನ್ ಅಲ್ಲ. ಇದು ನಮ್ಮ ಸಂಸ್ಕೃತಿಯೂ ಅಲ್ಲ. ಈ ಪೋಟೋವನ್ನು ನೋಡಿ ನಿಮ್ಮ ತಾಯಿ-ತಂದೆ, ಅಣ್ಣ-ತಮ್ಮಂದಿರಾದರೂ ಮೆಚ್ಚುತ್ತಾರೆಯೇ ಹೇಳು?

ನಿನ್ನ ಅರೆನಗ್ನ ಚಿತ್ರವನ್ನು ಹಾಕಿ ಸುದ್ದಿ ಮಾಡಬೇಕೆಂಬುದು ನಮ್ಮ ಉದ್ದೇಶವಿಲ್ಲ. ಹೆಣ್ಣು ಮಕ್ಕಳನ್ನು ಹಿಯ್ಯಾಳಿಸಿ ನಮಗೆ ಅಭ್ಯಾಸವೂ ಇಲ್ಲ. ಆದರೆ ಇಂತಹ ಅಸಹ್ಯಕರವಾದ ಕೆಲಸವನ್ನು ಮತ್ತೊಮ್ಮೆ ಯಾವ ಮಹಿಳೆಯೂ ಮಾಡಬಾರದು ಎಂಬುದಕ್ಕಾಗಿ ಇದನ್ನು ಸುದ್ದಿ ಮಾಡುತ್ತಿದ್ದೇವೆ. ಬಿಜೆಪಿಯ ಮುಖಂಡರು ಇದನ್ನು ಖಂಡಿಸಬೇಕು. ಇಲ್ಲವೇ ಪ್ರಧಾನಿ ನರೇಂದ್ರ ಮೋದಿಗೆ ಅಪಮಾನ ಮಾಡಿದ ಯುವತಿಯ ಮೇಲೆ ಹಾಗೂ ಟಾಟೂ ಹಾಕಿಸಿದವರ ಮೇಲೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದೇ ನಮ್ಮ ಮನವಿ.

     

ರಾಜಕೀಯ

ಮೇ 28 ರಂದು ದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಘೋಷಿಸಲಾಗಿದೆ. ಇದನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ, ಸಿಪಿಎಂ ಮತ್ತು ಸಿಪಿಐ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ.

ಇದು ಸಂವಿಧಾನ ಬಾಹಿರ. ಪ್ರಧಾನಿ ಮೋದಿಯವರ ಬದಲಿಗೆ ಸಂಸತ್ತಿನ ಅಧ್ಯಕ್ಷರಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಬೇಕು. ಅವರನ್ನು ಆಹ್ವಾನಿಸಬೇಕಿತ್ತು ಎಂದು ವಾದಿಸಿದ್ದಾರೆ.

ಕಾಂಗ್ರೆಸ್ ತನ್ನ ನಿರ್ಧಾರವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸದಿದ್ದರೂ, ಪಕ್ಷವು ಸಮಾರಂಭವನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ವಿರೋಧ ಪಕ್ಷಗಳು ಸಮಾರಂಭವನ್ನು ಜಂಟಿಯಾಗಿ ಬಹಿಷ್ಕರಿಸುವ ಹೇಳಿಕೆಯನ್ನು ನೀಡಬಹುದು ಎಂದು ವರದಿಗಳಾಗಿವೆ. ಡಿಸೆಂಬರ್ 2020ರಲ್ಲಿ ಹೊಸ ಸಂಸತ್ತಿನ ಕಟ್ಟಡದ ಶಂಕುಸ್ಥಾಪನೆ ಸಮಾರಂಭವನ್ನು ಕಾಂಗ್ರೆಸ್ ಮತ್ತು ಹಲವಾರು ವಿರೋಧ ಪಕ್ಷಗಳು ಬಹಿಷ್ಕರಿಸಿದ್ದವು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾದ ಅದೇ ದಿನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ಘೋಷಿಸಿದವು.

ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರೇನ್ ಅವರು, “ಸಂಸತ್ತು ಕೇವಲ ಕಟ್ಟಡವಲ್ಲ; ಇದು ಹಳೆಯ ಸಂಪ್ರದಾಯಗಳು, ಮೌಲ್ಯಗಳು, ಪೂರ್ವನಿದರ್ಶನಗಳು ಮತ್ತು ನಿಯಮಗಳನ್ನು ಹೊಂದಿರುವ ಸಂಸ್ಥೆಯಾಗಿದೆ. ಇದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯ. ಪ್ರಧಾನಿ ಮೋದಿಗೆ ಇದು ಅರ್ಥವಾಗುತ್ತಿಲ್ಲ. ಭಾನುವಾರ ನಡೆಯುವ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭವು ನಾನು… ನಾನೇ ಎಂಬುದನ್ನು ಎತ್ತಿ ತೋರಿಸುತ್ತದೆ” ಎಂದರು.

ಮತ್ತು ಪಕ್ಷದ ಮತ್ತೊಬ್ಬ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್, “ಇದು ಅಸಭ್ಯವಾದದ್ದು” ಎಂದು ಬಣ್ಣಿಸಿದ್ದಾರೆ. “ಬಿಜೆಪಿ ಪಕ್ಷವು ಮಹಿಳೆ ಮತ್ತು ಬುಡಕಟ್ಟು ಜನಾಂಗದ ರಾಷ್ಟ್ರಪತಿಗಳನ್ನು ನೇರವಾಗಿ ಅವಮಾನಿಸುತ್ತಿದೆ. ಕಟ್ಟಡವೂ ಇನ್ನೂ ಪೂರ್ಣಗೊಂಡಿಲ್ಲ. ಹಾಗಾದರೆ ಉದ್ಘಾಟನೆಗೆ ಈ ಧಾವಂತ ಏನನ್ನು ವಿವರಿಸುತ್ತದೆ? ಮೇ 28 (VD) ಸಾವರ್ಕರ್ ಅವರ ಜನ್ಮದಿನವಾಗಿದೆ ಎಂಬುದಕ್ಕಾಗಿಯೆ”? ಎಂದು ಪ್ರಶ್ನಿಸಿದ್ದಾರೆ.

ಆಮ್ ಆದ್ಮಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು “ಮುರ್ಮು ಅವರನ್ನು ಆಹ್ವಾನಿಸದಿರುವುದು ಅವರಿಗೆ ಹಾಗೂ ದೇಶದ ದಲಿತರು, ಆದಿವಾಸಿಗಳು ಮತ್ತು ದೀನದಲಿತ ವರ್ಗಗಳಿಗೆ ಮಾಡಿದ ಅವಮಾನ” ಎಂದು ಹೇಳಿದ್ದಾರೆ. “ರಾಷ್ಟ್ರಪತಿಗಳಿಗೆ ಆಹ್ವಾನ ನೀಡದಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಅವರು “ಸಮಾರಂಭವನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳಲ್ಲಿ ಅಗಾಧ ಒಮ್ಮತವಿದೆ” ಎಂದು ತಿಳಿಸಿದ್ದಾರೆ. “ಭಾರತ ದೇಶಕ್ಕೆ ರಾಷ್ಟ್ರಪತಿಗಳೇ ಅಧ್ಯಕ್ಷರು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಪ್ರಧಾನಿ ಸರ್ಕಾರದ ಮುಖ್ಯಸ್ಥರು” ಎಂದರು. “ರಾಷ್ಟ್ರಪತಿಗಳ ಬಹಿಷ್ಕಾರವನ್ನು ಒಪ್ಪಲಾಗದು” ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಡಿಎಂಕೆ ಬಹಿಷ್ಕಾರ ಘೋಷಿಸಿದೆ: ದೆಹಲಿಯಲ್ಲಿ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು ಡಿಎಂಕೆ ನಿರ್ಧರಿಸಿದೆ. 28 ರಂದು ನಡೆಯಲಿರುವ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಡಿಎಂಕೆ ಸಂಸದ ತಿರುಚ್ಚಿ ಶಿವ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

ರಾಜಕೀಯ

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಹಂಗಾಮಿ ಸ್ಪೀಕರ್ ಶ್ರೀ.ಆರ್.ವಿ.ದೇಶಪಾಂಡೆ ಅವರಿಂದ ವಿಧಾನಸಭೆಯ ನೂತನ ಶಾಸಕನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾನ್ಯ ಸಭಾಧ್ಯಕ್ಷರ ಕಚೇರಿಯಲ್ಲಿ ಪ್ರಮಾಣ ಸ್ವೀಕಾರ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹೊಳೆನರಸೀಪುರದ ಶಾಸಕರೂ ಆದ ಹೆಚ್.ಡಿ.ರೇವಣ್ಣ ಜೊತೆಯಲ್ಲಿದ್ದರು.

ಸಿನಿಮಾ

ವರದಿ: ಅರುಣ್ ಜಿ.,

ಮೇ 29 ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ “ಅಂತ” ಚಿತ್ರ ಮೇ 26ರಂದು ಮರು ಬಿಡುಗಡೆಯಾಗುತ್ತಿದೆ. ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ.

1981 ಇಸವಿಯಲ್ಲಿ ತೆರೆ ಕಂಡ ಚಿತ್ರವಿದು. ಈ ಚಿತ್ರವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ.ಸಿಂಗ್ ಅವರ ಮೂಲಕ ಕಥೆ ನನಗೆ ದೊರಕಿತು. ಪರಿಮಳ ಆರ್ಟ್ಸ್ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್.ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಂಬರೀಶ್ ಅವರು ನಾಯಕ ಎಂದು ತಿರ್ಮಾನಿಸಲಾಯಿತು. ಲಕ್ಷ್ಮೀ ಈ ಚಿತ್ರದ ನಾಯಕಿ. ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ.

ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹಾಗೂ ನಿರ್ಮಾಪಕ ವೇಣು

ಹದಿನೆಂಟು ಅದ್ದೂರಿ ಸೆಟ್ ಹಾಕಲಾಗಿತ್ತು. “ಅಂತ” ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು.  ನನಗೆ ತಿಳಿದಿರುವ ಪ್ರಕಾರ ಈ ಚಿತ್ರದ ಸ್ಪೂರ್ತಿಯಿಂದ ಸಾವಿರಾರು ಚಿತ್ರಗಳು ಬಂದಿದೆ. “ಅಂತ” ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ನನ್ನ ಪ್ರಕಾರ ಚಿತ್ರದ ನಿಜವಾದ ಹೀರೋ ಕಥೆ. ಆ ಕಥೆ ಚೆನ್ನಾಗಿತ್ತು ಎಂದರೆ ಯಶಸ್ಸು ಖಂಡಿತ. ಇಂತಹ ಅದ್ಭುತ “ಅಂತ” ಚಿತ್ರ ಇದೇ ಮೇ 26 ರಂದು ಮರು ಬಿಡುಗಡೆಯಾಗುತ್ತಿದೆ. ಒಳ್ಳೆಯದಾಗಲಿ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತಿಳಿಸಿದರು. 

ಮೇ 29, ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇ 26 ರಂದು “ಅಂತ” ಚಿತ್ರವನ್ನು 70ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಜಯಣ್ಣ ಫಿಲಂಸ್ ಅವರು ಬಿಡುಗಡೆ ಮಾಡುತ್ತಿದ್ದಾರೆ.  35MM ನಿಂದ 70MM ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ ಎಂದು ನಿರ್ಮಾಪಕ ವೇಣು ತಿಳಿಸಿದರು.

ರಾಜಕೀಯ

ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

“ನಾಡಿನ ಜನತೆ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಕಾಲ ಮಿತಿಯಲ್ಲಿ ಕೆಲಸ ಮಾಡಿ ಜನರ ನಿರೀಕ್ಷೆ ಈಡೇರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ನನ್ನ ರಾಜಕೀಯ ಜೀವನದಲ್ಲಿ ತಪ್ಪಿಲ್ಲದೆ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿಲ್ಲ. ನಿಮ್ಮ ತಪ್ಪಿನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸಹಿಸಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಅವರು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ಅವರ ಪ್ರತಿನಿಧಿಗಳಾಗಿ ಇಲ್ಲಿಗೆ ಬಂದಿದ್ದೇವೆ. ಅವರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರ ನಿರೀಕ್ಷೆಗೆ ಅನುಗುಣವಾಗಿ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ.

ಜನರ ಆಶೋತ್ತರಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅವರಿಗೆ ಸ್ಪಂದಿಸಬೇಕೆನ್ನುವ ಬಯಕೆ ನಮ್ಮ ಸರ್ಕಾರಕ್ಕಿದೆ. ಉತ್ತಮ ಸರ್ಕಾರದ ನಿರೀಕ್ಷೆ ಜನರಿಗಿದೆ. ಕ್ರಿಯಾಶೀಲ ಸರ್ಕಾರದ ಅಗತ್ಯವಿದೆ ಎಂದು ಜನ ಬಯಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಿಂತುಹೋಗಿದೆ; ಭ್ರಷ್ಟಾಚಾರವಿದೆ ಎಂಬ ಭಾವನೆ ಜನರಲ್ಲಿತ್ತು. ಈ ಭಾವನೆಯನ್ನು ಹೋಗಲಾಡಿಸಲು ಅಧಿಕಾರಿಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು.

ಗುಣಮಟ್ಟದ ಕಾಮಗಾರಿಗಳಾಗಬೇಕು, ಕಾಲಮಿತಿಯಲ್ಲೇ ಕೆಲಸಗಳಾಗಬೇಕು. ಕಣ್ಣುಮುಚ್ಚಿ ಕೊಂಡು ಸಹಿ ಹಾಕದೇ ಜನರ ಹಣವನ್ನು ಸರಿಯಾದ ರೀತಿಯಲ್ಲಿ ವೆಚ್ಚ ಮಾಡಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಇವುಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇಲ್ವಿಚಾರಣೆ ಮಾಡಬೇಕು. ಕ್ಷೇತ್ರಗಳಿಗೆ ಕಾಲಕಾಲಕ್ಕೆ ಭೇಟಿ ನೀಡುವುದಲ್ಲದೇ ಕಚೇರಿಗಳಿಗೆ ಅನಿರೀಕ್ಷಿತ ಭೇಟಿಯನ್ನೂ ನೀಡಬೇಕು.

ಇದನ್ನೂ ಓದಿ: ಮುಂಗಾರಿಗೆ ಮೊದಲೇ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಹಿರಿಯ ಅಧಿಕಾರಿಗಳು ನಿಯಮಗಳನ್ನು ಪಾಲಿಸಬೇಕು. ಯೋಜನೆಗಳ ಕ್ಷಿಪ್ರ ಅನುಷ್ಠಾನವಾದರೆ ಜನರಿಗೆ ಪ್ರಯೋಜನವಾಗುತ್ತದೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆನ್ನುವುದು ಸರ್ಕಾರದ ಉದ್ದೇಶ. ಜನರ ಕಷ್ಟಗಳಿಗೆ ಸ್ಪಂದಿಸುವವರೇ ಮನುಷ್ಯರು ಎಂದು ಅರ್ಥಮಾಡಿಕೊಂಡು ತಾವೆಲ್ಲರೂ ಜನರ ನಿರೀಕ್ಷೆಗಳಿಗೆ ಸಕಾಲದಲ್ಲಿ ಸೂಕ್ತರೀತಿ ಸ್ಪಂದಿಸಬೇಕೆಂದು ಬಯಸುತ್ತೇನೆ” ಎಂದರು.

“Senior officers should follow the rules. Rapid implementation of projects will benefit people. The government’s intention is to keep its promise to the people. I want them all to respond appropriately to people’s expectations by understanding that people are the ones who respond to people’s difficulties”  Siddaramaiah