ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
May 2023 » Page 9 of 10 » Dynamic Leader
October 23, 2024
Home 2023 May (Page 9)
ರಾಜಕೀಯ

ಬೆಂಗಳೂರು: ರಾಜ್ಯ ಚುನಾವಣೆ ಮತದಾನ ದಿನಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇರುವಂತೆ ಮತ್ತೊಂದು ಚುನಾವಣೆ ಪೂರ್ವ ಸಮೀಕ್ಷೆ ವರದಿ ಪ್ರಕಟಗೊಂಡಿದೆ. ಲೋಕ್‌ಪೋಲ್‌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ ಭರ್ಜರಿ ಮುನ್ನಡೆ ಪಡೆದುಕೊಂಡು ಅಧಿಕಾರಕ್ಕೇರಲಿದೆ.

ರಾಜ್ಯ ಚುನಾವಣೆ ಮತದಾನ ಮೇ 10ಕ್ಕೆ ನಿಗದಿಯಾಗಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಮತದಾನಕ್ಕೆ ನಾಲ್ಕು ದಿನ ಬಾಕಿ ಇರುವಂತೆ ರಾಷ್ಟ್ರೀಯ ಸಮೀಕ್ಷಾ ಸಂಸ್ಥೆಯಾದ ಲೋಕ್‌ಪೋಲ್‌ ತನ್ನ ಸಮೀಕ್ಷೆಯನ್ನು ನೀಡಿದೆ. ಮೊದಲ ಸ್ಥಾನದಲ್ಲಿ ಕಾಂಗ್ರೆಸ್‌ ಬಹುಮತಗಳೊಂದಿಗೆ ಮೊದಲ ಸ್ಥಾನನದಲ್ಲಿದ್ದು, ಉಳಿದಂತೆ ಬಿಜೆಪಿ ಎರಡನೇ ಸ್ಥಾನ ಪಡೆದುಕೊಳ್ಳಲಿದ್ದು, ಮೂರನೇ ಸ್ಥಾನದಲ್ಲಿ ಜೆಡಿಎಸ್‌ ಇರಲಿದೆ.

ಕಾಂಗ್ರೆಸ್‌ 129 -134 ಸ್ಥಾನಗಳು, ಬಿಜೆಪಿ 59-65 ಸ್ಥಾನಗಳು ಹಾಗೂ ಜೆಡಿಎಸ್‌ 23 – 28 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಇನ್ನು ಪಕ್ಷೇತರ/ಸ್ವತಂತ್ರ ಅಭ್ಯರ್ಥಿಗಳು 0-2 ಸ್ಥಾನಗಳಿಸಬಹುದು ಎಂದು ಲೋಕ್‌ಪೋಲ್‌ ತನ್ನ ಸಮೀಕ್ಷೆ ವರದಿಯಲ್ಲಿ ತಿಳಿಸಿದೆ. ಸದ್ಯ ಅಧಿಕಾರಕ್ಕೇರಲು ಮ್ಯಾಜಿಕ್‌ ನಂಬರ್‌ 113 ಇದ್ದು, ಕಾಂಗ್ರೆಸ್‌ ಬಹುಮತ ಪಡೆಯುವುದು ಮಾತ್ರವಲ್ಲ ಸುಮಾರು 20 ಸ್ಥಾನಗಳು ಹೆಚ್ಚು ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಮತ ಹಂಚಿಕೆ ಪ್ರಮಾಣದಲ್ಲಿಯೂ ಕಾಂಗ್ರೆಸ್‌ ಮುಂದಿದೆ. ಒಟ್ಟಾರೆ ಚಲಾವಣೆಯಾಗುವ ಮತಗಳಲ್ಲಿ ಶೇ. 42 ರಿಂದ 25 ರಷ್ಟು ಕಾಂಗ್ರೆಸ್‌ ಪಡೆದುಕೊಳ್ಳಲಿದೆ. ಬಿಜೆಪಿ ಶೇ 31 ರಿಂದ 32 ರಷ್ಟು ಹಾಗೂ ಜೆಡಿಎಸ್‌ ಶೇ 14 ರಿಂದ 18 ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಉಳಿದಂತೆ ಶೇ.5 ರಿಂದ 9 ರಷ್ಟು ಮತಗಳು ಇತರೆ ಪಕ್ಷಗಳ/ ಸ್ವತಂತ್ರ ಅಭ್ಯರ್ಥಿಗಳ ಪಾಲಾಗಲಿವೆ ಎಂದು ಲೋಕ್‌ಪೋಲ್‌ ತಿಳಿಸಿದೆ.

ಲೋಕ್‌ಪೋಲ್‌ 150 ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹ ಮಾಡಿದೆ. ಇದಕ್ಕಾಗಿ 15,000 ಕರೆಗಳನ್ನು ಮಾಡಿ ಆ ಮೂಲಕ ಮಾಹಿತಿ ಪಡೆಯಲಾಗಿದೆ. ಕಳೆದ ಎರಡು ತಿಂಗಳಿಂದಲ್ಲಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ತಳಮಟ್ಟದಿಂದ 65 ಸಾವಿರ ಮಾದರಿ ಸಂಗ್ರಹ ಮಾಡಲಾಗಿದೆ. ಒಟ್ಟಾರೆ ಈ ಹಿಂದನ ಎಲ್ಲಾ ಮಾಹಿತಿ ಸಂಗ್ರಹ ಮಾಡಿ ಅಂತಿಮ ವರದಿ ಪ್ರಕಟಿಸಲಾಗಿದೆ ಎಂದು ಸಮೀಕ್ಷಾ ಸಂಸ್ಥೆಯೇ ತಿಳಿಸಿದೆ.

ಇನ್ನು ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿಯೂ ಈ ಲೋಕ್‌ಪೋಲ್‌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿತ್ತು. ಆ ಸಂದರ್ಭದಲ್ಲಿಯೂ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ತಿಳಿಸಿತ್ತು. ಕಳೆದ ಎರಡೂ ಸಮೀಕ್ಷೆ ವರದಿಗಿಂತಲೂ ಮೇ 6 ರಂದು ಬಂದ ಅಂತಿಮ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ತಿಳಿಸಲಾಗಿದೆ. ಇನ್ನು ಮೇ 10 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಲಿದೆ.

ರಾಜಕೀಯ ಸಿನಿಮಾ

“ದಿ ಕೇರಳ ಸ್ಟೋರಿ ಚಲನ ಚಿತ್ರವು ಇಸ್ಲಾಮಿಕ್ ವಿರೋಧಿ ದ್ವೇಷ ರಾಜಕಾರಣವನ್ನು ಪ್ರೇರೇಪಿಸುತ್ತಿದೆ. ಈ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಬೆಂಬಲಿಸುವುದಾಗಿ ಹೇಳಿದ್ದಾರೆ. ಅವರು ಈ ಚಿತ್ರದ ನಿರ್ಮಾಪಕರೇ ಅಥವಾ ನಿರ್ದೇಶಕರೇ” ಎಂದು ಸಂಸದ ಡಾ.ತೊಲ್ ತಿರುಮಾವಳವನ್ ವ್ಯಂಗ್ಯವಾಡಿದ್ದಾರೆ.

ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನಕ್ಕೆ ಪೊಲೀಸ್ ಇಲಾಖೆ ಭದ್ರತೆ ಒದಗಿಸಿರುವುದು ಆಘಾತಕಾರಿಯಾಗಿದೆ. ಈ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದನ್ನು ಮುಂದುವರಿಸಿದರೆ ತಮಿಳುನಾಡಿನಲ್ಲಿ ಶಾಂತಿ ಕದಡುತ್ತದೆ. ಆದ್ದರಿಂದ ತಮಿಳುನಾಡು ಸರ್ಕಾರ ಕೂಡಲೇ ಈ ಚಿತ್ರವನ್ನು ನಿಷೇಧಿಸಬೇಕು ಎಂದು  ವಿಡುದಲೈ ಚಿರುತ್ತೈಗಳ್ ಪಕ್ಷದ ಅದ್ಯಕ್ಷ ಹಾಗೂ ಶಿವಗಂಗೈ ಸಂಸದ ಡಾ.ತೊಲ್ ತಿರುಮಾವಳವನ್ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ‘ದಿ ಕೇರಳ ಸ್ಟೋರಿ’ ಚಿತ್ರದ ವಿಷಯವನ್ನು ಪ್ರಸ್ತಾಪಿಸಿ, ಚಿತ್ರವು ಭಯೋತ್ಪಾದನೆಯ ಪಿತೂರಿಯನ್ನು ಆಧರಿಸಿದೆ ಎಂದು ಹೇಳಿದರು. “ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ” ಎಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಬಳ್ಳಾರಿಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು.

ದೇಶ

ಚೆನ್ನೈ: “ಹಲವು ಭಿನ್ನಾಭಿಪ್ರಾಯಗಳ ನಡುವೆಯೂ ಭಾರತವು ಒಂದೇ ದೇಶವಾಗಿದೆ” ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದರು.

ಚೆಂಗಲ್ಪಟ್ಟು ಜಿಲ್ಲೆಯ ಪೌಂಜೂರ್ ಸಮೀಪದ ನೀಲಮಂಗಲಂ ಗ್ರಾಮದಲ್ಲಿ, ಶಾಸ್ತ್ರಾಲಯ ಆಶ್ರಮದಲ್ಲಿ, ಭಾರತ ಮಾತಾ ದೇವಾಲಯವನ್ನು ನಿರ್ಮಿಸಲಾಗಿದೆ. 300 ಟನ್ ತೂಕದ ಒಂದೇ ಕಲ್ಲಿನಿಂದ ಮಾಡಲ್ಪಟ್ಟ, ಭಾರತ ಮಾತೆಯ 9 ಅಡಿ ಎತ್ತರದ ಪ್ರತಿಮೆಯನ್ನು ಅಖಂಡ ಭಾರತ ನಕ್ಷೆಯೊಂದಿಗೆ ಕೆತ್ತಲಾಗಿದೆ.

ಈ ದೇವಾಲಯದ ಕುಂಭಾಭಿಷೇಕ ಸಮಾರಂಭವು ನೆನ್ನೆ ನಡೆದಿತ್ತು. ಈ ಸಮಾರಂಭದಲ್ಲಿ ಆರ್‌ಎಸ್‌ಎಸ್ ರಾಷ್ಟ್ರೀಯ ಅಧ್ಯಕ್ಷ ಮೋಹನ್ ಭಾಗವತ್, ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಶಾಸ್ತ್ರಾಲಯ ಆಶ್ರಮದ ಸಂಸ್ಥಾಪಕ ಸ್ವಾಮಿ ಬ್ರಹ್ಮ ಯೋಗಾನಂದ ಮುಂತಾದವರು ಪಾಲ್ಗೊಂಡಿದ್ದರು. 100ಕ್ಕೂ ಹೆಚ್ಚು ಬಾಲಕಿಯರು ಭಾರತ ಮಾತೆಯ ವೇಷವನ್ನು ಧರಿಸಿ, ಭಾರತ ಮಾತೆಯ ಪ್ರತಿಮೆಗೆ ದೀಪಾರಾಧನೆ ಸಲ್ಲಿಸಿದರು.

ನಂತರ ಮಾತನಾಡಿದ ಮೋಹನ್ ಭಾಗವತ್, “ಭಾಷೆ, ಆಹಾರ, ಉಡುಗೆ, ಪೂಜೆಯ ವಿಧಾನ ಹೀಗೆ ನಮ್ಮಲ್ಲಿ ಹಲವು ವ್ಯತ್ಯಾಸಗಳಿದ್ದರೂ, ಭಾರತ ಯಾವಾಗಲೂ ಒಂದೇ ದೇಶವಾಗಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಭಾರತದ ಈ ಭೂ ಪ್ರದೇಶವು ದೇವರಿಂದ ನಿರ್ಧರಿಸಲ್ಪಟ್ಟಿದೆ. ಭೂಪ್ರದೇಶದಿಂದ ಭಾರತವನ್ನು ಹಲವಾರು ದೇಶಗಳಾಗಿ ವಿಂಗಡಿದ್ದರೂ, ಧರ್ಮದಿಂದ ಅಖಂಡ ಭರತವಾಗಿಯೇ ಉಳಿದಿದೆ.

‘ಭಾರತವು ವಿಶ್ವಕ್ಕೆ ಮಾರ್ಗದರ್ಶಿಯಾಗಿರುತ್ತದೆ’ ಎಂದು ಮಹಾನ್ ಅರಬಿಂದೋ ಹೇಳಿದರು. ನಾವು ದೇಶದ ಮೇಲೆ ಭರವಸೆಯನ್ನು ಇಡಬೇಕು. ಆ ಭರವಸೆಯು ನಮ್ಮ ದೇಶವನ್ನು ತೊರೆದವರನ್ನು ಮರಳಿ ಬರುವಂತೆ ಮಾಡುತ್ತದೆ. ಇಲ್ಲಿನ ಮುಸ್ಲಿಮರು ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗದೆ, ಭಾರತ ನಮ್ಮ ದೇಶ ಎಂದು ಇಲ್ಲೇ ಉಳಿದುಕೊಂಡರು. ಭಾರತವು ಸತ್ಯ, ಪ್ರೀತಿ, ಪರಿಶುದ್ಧತೆ ಮತ್ತು ತಪಸ್ಸು ಎಂಬ ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಅಖಂಡ ಭಾರತವು ರಚನೆಯಾಬೇಕೆ ಎಂಬುದರ ಸಂಕೇತವಾಗಿ, ಇಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಇರಿಸಲಾಗಿದೆ” ಎಂದು ಹೇಳಿದರು. RSS chief takes part in consecration of Bharata Mata temple in Tamilnadu.

ಸಿನಿಮಾ

ವರದಿ: ಅರುಣ್ ಜಿ.,

ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ ನಿರ್ದೇಶಕ – ನಿರ್ಮಾಪಕ ಆರ್.ಚಂದ್ರು

ನಟ ಆದಿತ್ಯ ಅಭಿನಯದ ‘ಟೆರರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಾಯಕ ಆದಿತ್ಯ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ವಿಶೇಷ ಟೀಸರ್ ಬಿಡುಗಡೆ ಮಾಡಿದೆ‌. ನಿರ್ದೇಶಕ – ನಿರ್ಮಾಪಕ ಆರ್.ಚಂದ್ರು ‘ಟೆರರ್’ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರು. 

“ಟೆರರ್’ ಸಿನಿಮಾದ ಹೆಸರಿನಲ್ಲೆ ಒಂದು ಫೈಯರ್ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಸನ್ನಿವೇಶಗಳು ಗಮನ ಸೆಳೆಯುತ್ತದೆ. ಟೀಸರ್‌ನಲ್ಲಿಯೇ ‘ಟೆರರ್’ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ” ಎಂದು ಆರ್.ಚಂದ್ರು ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರಾದ ದೇವೇಂದ್ರ ರೆಡ್ಡಿ,  ರಮೇಶ್ ರೆಡ್ಡಿ, ಪ್ರಕಾಶ್, ಶ್ರೀನಗರ ಕಿಟ್ಟಿ ಮುಂತಾದವರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಆದಿತ್ಯ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು.

“ಈ ಕಥೆ ಕೇಳಿದ ಕೂಡಲೇ ನಿರ್ಮಾಪಕ ಸಿಲ್ಕ್ ಮಂಜು, ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಸಹಕಾರದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಯಿತು.  ಸಿನಿಮಾದಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಕೂಡ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕೋಟೆ ಪ್ರಭಾಕರ್, ಧರ್ಮ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ 30% ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ” ಎಂದು ನಿರ್ದೇಶಕ ರಂಜನ್ ಶಿವರಾಮ್ ಗೌಡ ಹೇಳಿದರು.

“ಕನ್ನಡ ಚಿತ್ರರಂಗಕ್ಕೆ “A” ಎಂಬ ಉತ್ತಮ ಚಿತ್ರಕೊಟ್ಟ ನಿರ್ಮಾಪಕ ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಂಜನ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಹುಟ್ಟುಹಬ್ಬಕ್ಕಾಗಿ ವಿಶೇಷ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಇಲ್ಲಿ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ” ಎಂದರು ನಾಯಕ ಆದಿತ್ಯ. 

“ಎ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೊಂದು ನಿರೀಕ್ಷಿತ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ” ಎಂದರು ನಿರ್ಮಾಪಕ ಸಿಲ್ಕ್ ಮಂಜು.

ದೇಶ

2019ರ ಕೊನೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಪ್ರಾರಂಭವಾಯಿತು. ನಂತರ ವಿವಿಧ ದೇಶಗಳಿಗೆ ಹರಡಿದ ಕರೋನಾ ವೈರಸ್ ಪ್ರಪಂಚದ ಸಹಜ ಸ್ಥಿತಿಯನ್ನು ಬೆಚ್ಚಿಬೀಳಿಸಿತು. ಪ್ರಪಂಚದಾದ್ಯಂತ ಕೋಟಿಯಾಂತರ ಜನರು ತಮ್ಮ ಜೀವವನ್ನು ಕಳೆದುಕೊಂಡರು. ಈ ಭಯಾನಕ ಕಾಯಿಲೆಯ ಗಂಭೀರತೆಯಿಂದಾಗಿ, ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಅನ್ನು ಅಂತರರಾಷ್ಟ್ರೀಯ ವೈದ್ಯಕೀಯ ತುರ್ತುಸ್ಥಿತಿ ಎಂದು ಘೋಷಿಸಿತು.

ಮೊದಲ ಅಲೆ ಮತ್ತು ಎರಡನೇ ಅಲೆಯೆಂದು ಕಳೆದ ಕೆಲವು ವರ್ಷಗಳಿಂದ ವಿಶ್ವದ ದೇಶಗಳನ್ನು ಕರೋನಾ ವೈರಸ್‌ ಬೆದರಿಸುತ್ತಲೇ ಬಂದಿತು. ವೈದ್ಯಕೀಯ ಸಂಶೋಧಕರು ಇದಕ್ಕೆ ಲಸಿಕೆ ಹುಡುಕುವ ಮತ್ತು ಈ ಕಾಯಿಲೆಯಿಂದ ಹೊರಬರುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುದೀರ್ಘ ಸಂಶೋಧನೆಯ ನಂತರ, ಕರೋನಾ ವೈರಸ್‌ನ ಪರಿಣಾಮಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದ ಲಸಿಕೆಗಳನ್ನು ಕಂಡುಹಿಡಿದರು. ನಂತರ ಈ ಔಷಧದ ಕೊರತೆಯು ಹೆಚ್ಚಾಯಿತು.

ಪ್ರಸ್ತುತ ಕೊರೊನಾ ವೈರಸ್‌ನ ತೀವ್ರತೆ ಇಳಿಮುಖವಾಗಿದೆ. ಇದರಿಂದ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ವಿವಿಧ ಅಂಶಗಳನ್ನು ಪರಿಗಣಿಸಿ, ಕರೋನಾ ವೈರಸ್‌ನ ತುರ್ತು ಪರಿಸ್ಥಿತಿ ಕೊನೆಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. “ಆದರೂ ಕೊರೊನಾ ವೈರಸ್‌ ಕೊನೆಗೊಂಡಿದೆ ಎಂದು ಯಾರೂ ಭಾವಿಸಬೇಡಿ. ಕಳೆದ ವಾರದವರೆಗೆ, ಕೊರೊನಾ ವೈರಸ್‌ನಿಂದ ಪ್ರತಿ ಮೂರು ನಿಮಿಷಕ್ಕೆ ಒಂದು ಸಾವು ದಾಖಲಾಗುತ್ತಿತ್ತು. ಮತ್ತು ಇದು ನಮಗೆ ತಿಳಿದಿರುವ ಲೆಕ್ಕಮಾತ್ರ” ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ. COVID no longer a global health emergency, WHO says

ದೇಶ

ಸಾಮಾನ್ಯವಾಗಿ ನವಜಾತ ಶಿಶುಗಳಿಗೆ ಮಾಡುವ ಶಸ್ತ್ರಚಿಕಿತ್ಸೆಯ ಬಗ್ಗೆ ನಾವು ಕೇಳಿದ್ದೇವೆ. ಆದರೆ ಅಮೆರಿಕದ ವೈದ್ಯರ ತಂಡವೊಂದು ಗರ್ಭಕೋಶದಲ್ಲಿದ್ದ 34 ವಾರಗಳ ಪುಟ್ಟ ಮಗುವಿಗೆ ಮೆದುಳು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

34 ವಾರಗಳ ಗರ್ಭಿಣಿಯಾಗಿದ್ದ ಅಲ್ಲಿನ ಮಹಿಳೆಯೊಬ್ಬಳು ಬೋಸ್ಟನ್ ಮಕ್ಕಳ ಆಸ್ಪತ್ರೆಗೆ ತಪಾಸಣೆಗಾಗಿ ಹೋಗಿದ್ದರು.ಮಗುವಿನ ಬೆಳವಣಿಗೆ ಹೇಗಿದೆ ಎಂಬುದನ್ನು ತಿಳಿಯಲು ಆಕೆಯನ್ನು ವೈದ್ಯರು ಪರಿಶೀಲಿಸಿದರು. ಆಗ ಮೆದುಳಿನಿಂದ ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳವು ಸರಿಯಾಗಿ ಅಭಿವೃದ್ಧಿ ಹೊಂದಿಲ್ಲದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಇದು ವೀನಸ್ ಆಫ್ ಗ್ಯಾಲೆನ್ ಎಂಬ ಕೊರತೆಯಾಗಿರುತ್ತದೆ. ಈ ಕೊರತೆಯು ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ.ರಕ್ತವು ಕ್ಯಾಪಿಲ್ಲರಿಗಳನ್ನು ನೇರವಾಗಿ ಸಂಪರ್ಕಿಸುವ ಬದಲು, ರಕ್ತವು ನೇರವಾಗಿ ರಕ್ತನಾಳಗಳಿಗೆ ಸಂಪರ್ಕಿಸುತ್ತದೆ. ಇದರ ಕಾರಣದಿಂದ ನರಗಳಿಗೆ ಹೆಚ್ಚಿನ ರಕ್ತ ಒತ್ತಡವನ್ನು ಉಂಟುಮಾಡುತ್ತದೆ. ನರಗಳಲ್ಲಿ ಈ ಹೆಚ್ಚುವರಿ ರಕ್ತ ಒತ್ತಡವು ಉಂಟಾಗುವಾಗ ಹಲವಾರು ಸಮಸ್ಯೆಗಳು ಉದ್ಭವವಾಗುತ್ತದೆ. ಹೆಚ್ಚಿನ ಹೃದಯದ ಕ್ರಿಯೆಯ ನಷ್ಟ ಮತ್ತು ಮೆದುಳಿನ ಕ್ಷೀಣತೆಯಿಂದಾಗಿ ಜೀವ ಕಳೆದುಕೊಳ್ಳುವ ಅಪಾಯವಿರುತ್ತದೆ.

ಡ್ಯಾರೆನ್ ಬಿ. ಓರ್ಬಾಚ್ ನೇತೃತ್ವದ ವೈದ್ಯರ ತಂಡವು ಈ ಅಪರೂಪದ ಕಾಯಿಲೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲು ನಿರ್ಧರಿಸಿತು. ಗರ್ಭದಲ್ಲಿರುವ ಮಗುವನ್ನು ಉಳಿಸಲು ವೈದ್ಯರು ಕ್ರಮ ಕೈಗೊಂಡರು. ಅತ್ಯಂತ ಸವಾಲಿನ ಈ ಮಿದುಳಿನ ಶಸ್ತ್ರಚಿಕಿತ್ಸೆಯನ್ನು ವೈದ್ಯರ ತಂಡವು ಒಂದು ಸೂಜಿಯಿಂದ ಯಶಸ್ವಿಯಾಗಿ ನಡೆಸಿದೆ. ಇದೀಗ ಮಗುವಿನ ರಕ್ತನಾಳ ಸರಿಯಾಗಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ವಿಶ್ವದಲ್ಲೇ ಪ್ರಥಮ ಬಾರಿಗೆ ಅಮೆರಿಕದ ವೈದ್ಯರ ತಂಡವೊಂದು ಈ ಆಪರೇಷನ್ ಮಾಡಿ ದಾಖಲೆ ಸೃಷ್ಟಿಸಿರುವುದು ಗಮನಾರ್ಹ. In World’s First, US Doctors Perform Brain Surgery On Baby Still In Womb. A baby in the womb with the rare vein of Galen malformation disease was saved in a first-of-its-kind brain surgery. 

ರಾಜಕೀಯ

ವರದಿ: ರಾಮು ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಂಪಯ್ಯ ನಾಯಕ, ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಬಿ.ವಿ.ನಾಯಕ ಅಭ್ಯರ್ಥಿಗಳಾಗಿದ್ದಾರೆ. ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿಯ ಮತಯಾಚನೆ ನೆಡೆದಿದೆ. ಮತ ಬೇಟೆಯಲ್ಲಿ ಮೂರು ಪಕ್ಷಗಳು ಬಿಸಿಲಿನಲ್ಲಿ ಬೆವರು ಹರಿಸುತ್ತಿದ್ದಾರೆ. ಮಾನ್ವಿ ನಗರದಲ್ಲಿ ಜೆಡಿಎಸ್ ಪ್ರಚಾರದಲ್ಲಿ ಮುಂದೆ ಇರುವುದು ಕಂಡು ಬಂದಿದೆ. ಕಾಂಗ್ರೆಸ್ ಬಿಜೆಪಿಗಿಂತ ಮೊದಲಿಗೆ ಜೆಡಿಎಸ್ ಚುನಾವಣೆ ಪ್ರಚಾರವನ್ನು ಕೈಗೊಂಡ ಕಾರಣ ಮತದಾರರನ್ನು ತನ್ನತ್ತ ಸೆಳೆಯಲು ಯಾಶಸ್ವಿಯಾಗಿದೆ. ಕ್ಷೇತ್ರದ ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷದ ಅಬ್ಬರದ ಪ್ರಚಾರ ಮತ್ತು ಪಕ್ಷದ ಸೇರ್ಪಡೆ ಕಾರ್ಯಕ್ರಮಗಳು ಬರದಿಂದ ಸಾಗಿದ್ದು ಪಕ್ಷಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಅದೂ ತನ್ನ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಬೇರೆ ತಾಲ್ಲೂಕಿನಿಂದ ವಲಸೆ ಬಂದ ಕಾರಣ ಮತದಾರರನ್ನು ಸೆಳೆಯುವಲ್ಲಿ ಸಪಲವಾಗಿಲ್ಲ. ಕೆಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದು ಆ ಪಕ್ಷಕ್ಕೆ ಸ್ವಪ್ಲ ಬಲ ಹೆಚ್ಚಾಗಿದೆ. ಪಕ್ಷ ಸೇರ್ಪಡೆ ಬರದಿಂದ ಮುಂದುವರಿಯುತ್ತಿದೆ. ಇನ್ನೂ ಕಾಂಗ್ರೆಸ್ ಪಕ್ಷದ ನೆಡೆಯು ಮೋಡಮುಸುಕಿದ ವಾತಾವರಣ ಇದೆ. ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್‌ಗೆ ಸೇರಿರುವುದರಿಂದ ಆ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಎಂ.ಈರಣ್ಣ ಅವರ ಸೇರ್ಪಡೆಯಿಂದ ನಿಟ್ಟುಸಿರು ಬಿಡುವಂತೆ ಅಗಿದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ. ತಾಲ್ಲೂಕಿನ ದೊಡ್ಡ ದೊಡ್ಡ ಹಳ್ಳಿಗಳಲ್ಲಿ ಕೂಡಾ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ. ಕೆಲವು ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇದು ಹಗಲಿನಷ್ಟೆ ಸತ್ಯ.

ಜೆಡಿಎಸ್, ಬಿಜೆಪಿಯಲ್ಲಿ ಕಾರ್ಯಕರ್ತರು ಹೊಸ ಹುರುಪಿನಿಂದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಆದರೇ ಈ ರೀತಿಯ ವಾತಾವರಣ ಕಾಂಗ್ರೆಸ್‌ನಲ್ಲಿ ಕಂಡು ಬರುತ್ತಿಲ್ಲ. ಇದು ಆ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ. ಚುನಾವಣೆಗೆ ಇನ್ನೂ ಕೇವಲ ಐದು ದಿನ ಬಾಕಿಯಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಮುಖ ಜೋತಾಕಿಕೊಂಡು ತಿರುಗಾಡುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ಗೆ ಇದೊಂದು ದೊಡ್ಡ ಹೊಡೆತ ಅಂದರೆ ಅತಿಶಯೋಕ್ತಿಯಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಪುಟಿದೇಳಬೇಕಾದ ಪರಸ್ಥಿತಿ ಎದುರಾಗಿದೆ. ಅದರ ನಾಯಕರು ಇತ್ತ ಕಡೆ ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕು. ಅಂತು ಮಾನ್ವಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರದಲ್ಲಿ ಜೆಡಿಎಸ್ ಎಲ್ಲರಿಗಿಂತಲು ಒಂದು ಹೆಜ್ಜೆ ಮುಂದಿದೆ. ನಂತರ ಬಿಜೆಪಿ, ಅನಂತರ ಕಾಂಗ್ರೆಸ್ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೇ ರೀತಿಯಲ್ಲಿ ಜೆಡಿಎಸ್ ಮುನ್ನೆಡೆದರೆ ಅದು ಗೆಲುವಿನ ದಡ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನೂ ಐದು ದಿನಗಳು ಚುನಾವಣೆಗೆ ಬಾಕಿ ಉಳಿದಿರುವುದರಿಂದ ಪಕ್ಷಗಳು ಯಾವ ತಂತ್ರಗಳನ್ನು ಅನುಸರಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ

ವರದಿ: ಅರುಣ್ ಜಿ.,

ಒಂದು ಕಡೆ ಚುನಾವಣೆ ಮತ್ತೊಂದು ಕಡೆ ಐಪಿಎಲ್ ಇದರ ನಡುವೆ ಕಳೆದವಾರ ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.‌ ಈ ಸಂತೋಷವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ‌

ಚುನಾವಣೆ, ಐಪಿಎಲ್ ನಡುವೆ ಈ ಚಿತ್ರ ಬಿಡುಗಡೆ ಮಾಡುತ್ತಾರಾ? ಎಂದು ಎಷ್ಟೋ ಜನ‌ ಕೇಳುತ್ತಿದ್ದರು. ಆದರೆ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಕಂಟೆಂಟ್ ಚೆನ್ನಾಗಿದ್ದರೆ ಜನ ಖಂಡಿತವಾಗಿ ನೋಡುತ್ತಾರೆ ಎಂಬ ನಂಬಿಕೆಯಿಂದ ಈ ಚಿತ್ರವನ್ನು ಬಿಡುಗಡೆ ಮಾಡಿದರು.‌ ಅವರ ಮಾತು ನಿಜವಾಯಿತು. ಜನ ನಮ್ಮ ಚಿತ್ರಕ್ಕೆ ತೋರುತ್ತಿರುವ ಮೆಚ್ಚುಗೆಗೆ ಮನತುಂಬಿ ಬಂದಿದೆ ಹಾಗೂ ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ‌. ರಾಯರ ಹೆಸರಿನ ಈ ಚಿತ್ರಕ್ಕೆ ರಾಯರೆ ಯಶಸ್ಸು ನೀಡುತ್ತಿದ್ದಾರೆ ಎಂದರು ನಾಯಕ ಜಗ್ಗೇಶ್.

ನಾವು ಈ ಸಿನಿಮಾ ಬಿಡುಗಡೆಗೂ ಹತ್ತು ದಿನಗಳ ಮುಂಚೆ ಪ್ರಮೋಷನ್ ಶುರು ಮಾಡಿದ್ದು. ಆನಂತರ ಬಿಡುಗಡೆಯಾದ ಟ್ರೇಲರ್ ಹಾಗೂ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಬಂತು. ನನ್ನ ಈ ಹಿಂದಿನ‌ ಸಿನಿಮಾಗಳ ಜಾನರ್ ಬೇರೆ. ಈ ಸಿನಿಮಾ ಜಾನರ್‌ ಬೇರೆ. ಲೇಟ್ ಮ್ಯಾರೇಜ್ ಹಾಗೂ ಆನಂತರ ಅವರಿಗೆ ಮಕ್ಕಳಾಗದ ಸಮಸ್ಯೆ ಬಗ್ಗೆಗಿನ ಕಥಾಹಂದರವನ್ನು ಈ ಚಿತ್ರ  ಹೊಂದಿದೆ.  ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಯಶಸ್ಸಿಗೆ ಕಾರಣರಾದ ನನ್ನ ತಂಡಕ್ಕೆ,‌ ನಿರ್ಮಾಣ ಮಾಡಿರುವ ಖ್ಯಾತ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರಿಗೆ ಹಾಗೂ ಜಗ್ಗೇಶ್ ಅವರ ಆದಿಯಾಗಿ ಚಿತ್ರದಲ್ಲಿ ‌ನಟಿಸಿರುವ ಎಲ್ಲಾ ಕಲಾವಿದರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.

ಚಿತ್ರದಲ್ಲಿ ಅಭಿನಯಿಸಿರುವ ಶ್ವೇತ ಶ್ರೀವಾಸ್ತವ್, ದತ್ತಣ್ಣ, ಮಿತ್ರ, ರವಿಶಂಕರ್ ಗೌಡ, ಚಿತ್ಕಲಾ ಬಿರಾದಾರ್, ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಜಿ ರಾಜ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಹಕ ಶ್ರೀಶ ಕುದುವಳ್ಳಿ ಮುಂತಾದವರು ಈ ಸಂದರ್ಭದಲ್ಲಿ ಚಿತ್ರದ ಕುರಿತು ಮಾತನಾಡಿದರು.

ಸಿನಿಮಾ

ವರದಿ: ಅರುಣ್ ಜಿ.,

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಇತ್ತೀಚೆಗೆ ಮೈಸೂರಿನಲ್ಲಿ ನೆರವೇರಿತು. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ  ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.

‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು.

‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ.  ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ.

ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.

ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು. 

‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ದೇಶ

ಕೇರಳದ ಮಸೀದಿ ಒಂದರಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಜೋಡಿಗೆ ನಡೆದಿರುವ ಮದುವೆಯ ಕುರಿತ ವೀಡಿಯೋವೊಂದನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೇರಳದ ಆಲಪ್ಪುಳ ಪ್ರದೇಶಕ್ಕೆ ಸೇರಿದ ಅಂಜು ಜೊತೆ. ಅದೇ ಭಾಗದ ಸರತ್ ಅವರೊಂದಿಗೆ ಮದುವೆಯ ನಿಶ್ಚಯವಾಗಿತ್ತು. ಮದುವೆಯ ಏರ್ಪಾಡುಗಳನ್ನು ಮಾಡಲು ಹಣವಿಲ್ಲದ ಕಾರಣ, ಅಂಜುವಿನ ತಾಯಿ, ಹತ್ತಿರದಲ್ಲಿರುವ ಮಸೀದಿಗೆ ಹೋಗಿ, ಅಲ್ಲಿ ಇದರ ಬಗ್ಗೆ ಹೇಳಿಕೊಂಡರು. ಮದುವೆಗೆ ಆಗುವ ಖರ್ಚುನ್ನು ನಾವೆ ಮಾಡಿ ಮದುವೆಯನ್ನು ನಡೆಸಿಕೊಡುವುದಾಗಿ ಜಮಾತ್ ನಿರ್ವಾಹಕರರು ಅಂಜುವಿನ ತಾಯಿಯ ಬಳಿ ತಿಳಿಸಿದರು. ಅದರಂತೆ, ಅಲ್ಲಿನ ಮಸೀದಿಯಲ್ಲಿ ಮದುವೆಗೆ ಏರ್ಪಾಡನ್ನು ಮಾಡಲಾಯಿತು.

ಮಸೀದಿಯ ಮುಖ ದ್ವಾರದಲ್ಲಿ ಬಾಳೆ ಮರವನ್ನು ಕಟ್ಟಿ ಅಲಂಕರಿಸಲಾಯಿತು. ಮಸೀದಿಯ ಒಳಗೆ ಅರ್ಚಕರು ವೇದ ಮಂತ್ರಗಳು ಪಠಿಸುವ ಮೂಲಕ ಶರತ್ – ಅಂಜು ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನೆರೆವೇರಿಸಿಕೊಟ್ಟರು. ಈ ಮದುವೆಗೆ ಬಂದವರಿಗೆ ಮಸೀದಿಯ ಆವರಣದಲ್ಲೇ ಸಸ್ಯಾಹಾರಿ ಉಪಹಾರವನ್ನು ನೀಡಲಾಯಿತು.

ಎರಡು ವರ್ಷಗಳ ಹಿಂದೆ ನಡೆದ ಈ ಘಟನೆಯ ವಿಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್, ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಅದರಲ್ಲಿ ‘ಇದು ಮತ್ತೊಂದು ಕೇರಳದ ಸ್ಟೋರಿ’ ಎಂಬ ಶೀರ್ಷಿಕೆಯಲ್ಲಿ ‘ಮನುಕುಲದ ಮೇಲಿನ ಪ್ರೀತಿ ಬೇಷರತ್ತಾಗಿರಬೇಕು ಮತ್ತು ಸಾಂತ್ವನವಾಗಿರಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ಕೇರಳದ ಹಿಂದೂ ಮಹಿಳೆಯರನ್ನು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ, ಅವರನ್ನು ಬ್ರೈನ್ ವಾಶ್ ಮಾಡಿ, ಭಯೋತ್ಪಾದಕ ಸಂಘಟನೆಗೆ ಸೇರಿಸುವುದೇ ‘ದಿ ಕೇರಳ ಸ್ಟೋರಿ’ ಚಿತ್ರದ ಕಥಾಹಂದರ. ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ವಿಚಾರ ಕೇರಳ ರಾಜಕೀಯದಲ್ಲಿ ವಿವಾದವನ್ನು ಸೃಷ್ಠಿಸಿರುವ ಈ ಸಂದರ್ಭದಲ್ಲಿ, ರೆಹಮಾನ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.