ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
June 2023 » Page 2 of 12 » Dynamic Leader
November 21, 2024
Home 2023 June (Page 2)
ದೇಶ

ಉತ್ತರ ಪ್ರದೇಶದ ಸಹರಾನ್‌ಪುರದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್, ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವು ನಿಗೂಢ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎರಡು ಗುಂಡುಗಳು ಕಾರಿಗೆ ತಾಗಿವೆ. ಮೊದಲ ಗುಂಡು ಕಾರಿನ ಸೀಟಿಗೆ ಬಡಿದಿದ್ದು, ಇನ್ನೊಂದು ಗುಂಡು ಬಾಗಿಲನ್ನು ಹಾದು ಹೋಗುತ್ತಿದ್ದಂತೆಯೇ ಆಜಾದ್ನ ಸೊಂಟಕ್ಕೆ ತಗುಲಿದೆ. ಈ ಘಟನೆಯ ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನೆ ಕುರಿತು ಹೇಳಿಕೆ ನೀಡಿದ ಪೊಲೀಸ್ ಅಧಿಕಾರಿ ವಿಪಿನ್ ಥಾಡಾ ಅವರು, “ಕಾರಿನಲ್ಲಿ ಬಂದ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಚಂದ್ರಶೇಖರ್ ಆಜಾದ್ ಅವರ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ಗುಂಡು ಅವರ ಸೊಂಟಕ್ಕೆ ತಗುಲಿದೆ. ಅವರು ಚೆನ್ನಾಗಿ ಇದ್ದಾರೆ. ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಗಾಯಗೊಂಡ ಆಜಾದ್ ಮತ್ತು ಅವರ ಹಾನಿಗೊಳಗಾದ ವಾಹನದ ಫೋಟೋಗಳನ್ನು BEAM ಆರ್ಮಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.  ಮತ್ತು ಚಂದ್ರಶೇಖರ್ ಆಜಾದ್ ಅವರ ಭದ್ರತೆಗೆ ಭೀಮ್ ಸೇನಾ ಆಗ್ರಹಿಸಿದೆ.

ರಾಜಕೀಯ

ಭೋಪಾಲ್‌ನಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಾದಿಸಿದ ಯುಸಿಸಿ ಅಗತ್ಯದ ಪ್ರತಿಪಾದನೆ ವಿರುದ್ಧ ಕಠಿಣ ಪದಗಳಲ್ಲಿ ಕಿಡಿಕಾರಿರುವ ಓವೈಸಿ, ಇಸ್ಲಾಂನಲ್ಲಿ ಮದುವೆ ಎನ್ನುವುದು ಒಂದು ಒಪ್ಪಂದ. ಇದು ಬೇರೆ ಧರ್ಮಗಳಲ್ಲಿ ಇರುವಂತೆ ಅಲ್ಲ. ಸಂಸ್ಕೃತಿಯ ಹಕ್ಕು ಒಂದು ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.

ಏಕರೂಪ ನಾಗರಿಕ ಕಾನೂನು ಪರವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಭಾರತದ ವೈವಿಧ್ಯತೆ ಹಾಗೂ ಬಹುತ್ವವು ಒಂದು ಸಮಸ್ಯೆ ಎಂಬುದಾಗಿ ಪ್ರಧಾನಿ ಮೋದಿ ಪರಿಗಣಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಎಚ್‌ಯುಎಫ್ ರದ್ದುಗೊಳಿಸಲು ಸವಾಲು:
“ಆದಾಯ ತೆರಿಗೆ ಇಲಾಖೆಯ ಹಿಂದೂ ಅವಿಭಜಿತ ಕುಟುಂಬದ (ಎಚ್‌ಯುಎಫ್) ಅಡಿ, ಹಿಂದೂಗಳಿಗೆ ಮಾತ್ರವೇ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. 29ನೇ ವಿಧಿ-ಸಂಸ್ಕೃತಿಯ ಹಕ್ಕು ಒಂದು ಮೂಲಭೂತವಾದ ಹಕ್ಕು. ಪ್ರಧಾನಿ ಇದನ್ನು ಅರ್ಥ ಮಾಡಿಕೊಂಡಿದ್ದಾರೆಯೇ? ಅವರಿಗೆ ಅರ್ಥವಾಗಿದೆ ಎಂದು ನನಗೆ ಅನಿಸುತ್ತಿಲ್ಲ” ಎಂದಿರುವ ಓವೈಸಿ, ಎಚ್‌ಯುಎಫ್ ವಿನಾಯತಿಯನ್ನು ರದ್ದುಗೊಳಿಸುವ ಧೈರ್ಯವಿದೆಯೇ? ಹಿಂದೂ ಅವಿಭಜಿತ ಕುಟುಂಬ ತೆರಿಗೆ ರಿಯಾಯಿತಿಯು ಸಮಾನತೆಯ ಹಕ್ಕಿನ ವಿರುದ್ಧವಾಗಿಲ್ಲವೇ? ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ. ಎಚ್‌ಯುಎಫ್ ಕಾರಣದಿಂದ ದೇಶಕ್ಕೆ ಪ್ರತಿ ವರ್ಷ 3064 ಕೋಟಿ ರೂ ನಷ್ಟ ಉಂಟಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಸಿಖ್ಖರ ಹತ್ತಿರ ಯುಸಿಸಿ ಬಗ್ಗೆ ಮಾತನಾಡಿ:
“ಇಸ್ಲಾಂನಲ್ಲಿ ಮದುವೆ ಎನ್ನುವುದು ಒಂದು ಒಪ್ಪಂದ. ಇದು ಬೇರೆ ಧರ್ಮಗಳಿಗಿಂತ ವಿಭಿನ್ನ. ನೀವು ಎಲ್ಲವನ್ನೂ ಬೆರೆಸುತ್ತೀರಾ? ಯುಸಿಸಿ ಹೆಸರಿನಲ್ಲಿ ನೀವು ಬಹುತ್ವ ಹಾಗೂ ವೈವಿಧ್ಯತೆಯನ್ನು ಕಸಿದುಕೊಳ್ಳುತ್ತೀರಾ? ನಾನು ಪ್ರಧಾನಿಗೆ ಸವಾಲು ಹಾಕುತ್ತೇನೆ. ನಿಮ್ಮ ಬಳಿ 300 ಸಂಸದರಿದ್ದಾರೆ. ಹಿಂದೂ ಅವಿಭಜಿತ ಕುಟುಂಬ ವಿನಾಯಿತಿ ರದ್ದುಗೊಳಿಸಿ. ಪಂಜಾಬ್‌ಗೆ ಹೋಗಿ ಸಿಖ್ಖರ ಬಳಿ ಯುಸಿಸಿ ಬಗ್ಗೆ ಮಾತನಾಡಿ. ಅವರ ಪ್ರತಿಕ್ರಿಯೆ ಹೇಗೆ ಇರುತ್ತದೆ ಎಂದು ನೋಡಿ” ಎಂಬುದಾಗಿ ಕಿಡಿಕಾರಿದ್ದಾರೆ.

“ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನದ ಬಗ್ಗೆ ಏಕೆ ಅಂತಹ ಪ್ರೀತಿ? ಅವರು ಆಲೋಚಿಸುವ ಸಾಫ್ಟ್‌ ವೇರ್ ಅನ್ನು ಬದಲಿಸಬೇಕು. ಪಾಕಿಸ್ತಾನ ಮತ್ತು ಈಜಿಪ್ಟಿನ ವಿಚಾರದಲ್ಲಿ ಭಾರತದ ಮುಸ್ಲಿಮರು ಏನು ಮಾಡಬೇಕಿದೆ? ನೀವು ನಮ್ಮನ್ನು ಕಡೆಗಣಿಸುತ್ತಿದ್ದೀರಾ? ಇದು ದೇಶ ವಿರೋಧಿ ಸಂಗತಿ” ಎಂದು ಈಜಿಪ್ಟ್, ಪಾಕಿಸ್ತಾನ ಮುಂತಾದ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ತ್ರಿವಳಿ ತಲಾಖ್ ಬಳಕೆಯಲ್ಲಿ ಇಲ್ಲ ಎಂಬ ಮೋದಿ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.

“ನಿಮಗೆ ಮಣಿಪುರಕ್ಕೆ ಹೋಗಲು ಆಗುತ್ತಿಲ್ಲ. ಆದರೆ 371ರ ವಿಧಿ ಬಗ್ಗೆ ಮಾತನಾಡುತ್ತೀರಿ. ಗುಜರಾತ್‌ನಲ್ಲಿ ಹಿಂದೂ ಒಬ್ಬ ಮುಸ್ಲಿಮನಿಗೆ ಮನೆ ಮಾರಾಟ ಮಾಡುವಂತೆ ಇಲ್ಲ. ಹಿಮಾಚಲದ ರೈತನಿಂದ ಯಾವ ವಿದೇಶಿಗನೂ ಭೂಮಿ ಖರೀದಿಸುವಂತೆ ಇಲ್ಲ. ಪಂಜಾಬ್‌ಗೆ ಹೋಗಿ ಇದನ್ನು ಹೇಳಿ. ಮುಸ್ಲಿಮರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಪೆ: ವಿಜಯ ಕರ್ನಾಟಕ

ಸಿನಿಮಾ

ವರದಿ: ಅರುಣ್ ಜಿ.,

ಡಾರ್ಲಿಂಗ್ ಪ್ರಭಾಸ್, ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ನಟಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪ್ರಾಜೆಕ್ಟ್ K. ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿರುವ ಈ ಚಿತ್ರದಿಂದ ಕ್ರೇಜಿ ಅಪ್ ಡೇಟ್ ವೊಂದು ಹೊರಬಿದಿದ್ದೆ. ಎಲ್ಲರ ನಿರೀಕ್ಷೆಯಂತೆ ಉಲಗನಾಯಗನ್ ಕಮಲ್ ಹಾಸನ್ ಪ್ರಾಜೆಕ್ಟ್ K ಭಾಗವಾಗಿದ್ದಾರೆ. ಸ್ಪೆಷಲ್ ವಿಡಿಯೋ ಝಲಕ್ ಮೂಲಕ ಕಮಲ್ ಎಂಟ್ರಿ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.

ಕಳೆದೊಂದು ತಿಂಗಳಿನಿಂದ ಪ್ರಾಜೆಕ್ಟ್ K ಸಿನಿಮಾದಲ್ಲಿ ಕಮಲ್ ಹಾಸನ್, ಪ್ರಭಾಸ್ ಎದುರು ವಿಲನ್ ಆಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರಂತೆ ಈಗ ಚಿತ್ರತಂಡ ಕಮಲ್ ಎಂಟ್ರಿ ಬಗ್ಗೆ  ಘೋಷಿಸಿದೆ. ಆದರೆ, ಪ್ರಭಾಸ್ ಗೆ ಉಲಗನಾಯಗನ್ ಖಳನಾಯಕ ಅನ್ನೋದರ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಪ್ರಮುಖ ಪಾತ್ರವೊಂದರಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎಂದಷ್ಟೇ ತಿಳಿಸಿದೆ.

ಪ್ರಾಜೆಕ್ಟ್ K ಸಿನಿಮಾದಲ್ಲಿ ನಟಿಸುತ್ತಿರುವುದರ ಬಗ್ಗೆ ಕಮಲ್ ಹಾಸನ್ ಮಾತನಾಡಿ, “ನಾನು 50 ವರ್ಷದ ಹಿಂದೆ ನೃತ್ಯ ಸಹಾಯಕ ಮತ್ತು ಸಹಾಯಕ ನಿರ್ದೇಶಕನಾಗಿದ್ದಾಗ ನಿರ್ಮಾಣ ವಲಯದಲ್ಲಿ ಅಶ್ವಿನಿ ದತ್ ಹೆಸರು ದೊಡ್ಡ ಮಟ್ಟದಲ್ಲಿ ಖ್ಯಾತಿಗೊಳಿಸಿತ್ತು. ಐವತ್ತು ವರ್ಷದ ನಂತರ ನಾವು ಒಂದಾಗುತ್ತಿದ್ದೇವೆ. ಇಂದಿನ ಪೀಳಿಗೆಯ ಅದ್ಭುತ ನಿರ್ದೇಶಕ ನಾಗ್ ಅಶ್ವಿನ್, ನನ್ನ ಸಹನಟರಾದ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಜಿ ಜೊತೆ ನಟಿಸುತ್ತಿರುವುದು ಖುಷಿಕೊಟ್ಟಿದೆ. ಪ್ರಾಜೆಕ್ಟ್ K ಸಿನಿಮಾಗಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ” ಎಂದರು.

ನಿರ್ಮಾಪಕ ಅಶ್ವಿನಿ ದತ್,  “ಸುದೀರ್ಘವಾದ ವೃತ್ತಿ ಜೀವನದಲ್ಲಿ ‌ನಿಮ್ಮೊಟ್ಟಿಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಪ್ರಾಜೆಕ್ಟ್ ಕೆ ಮೂಲಕ ಅದು ನನಸಾಗಿದೆ. ಕಮಲ್ ಹಾಸನ್-ಅಮಿತಾಬ್ ಜಿ ಅವರೊಟ್ಟಿಗಿನ ಕೆಲಸ ಮಾಡುವ ಅವಕಾಶ ದೊರೆತಿರುವುದು ನನಗೆ ಆಶೀರ್ವಾದ” ಎಂದರು.

ನಿರ್ದೇಶಕ ನಾಗ್ ಅಶ್ವಿನ್, “ಕಮಲ್ ಸರ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇನೆ. ನಮ್ಮ ಜಗತ್ತನ್ನು ಪೂರ್ಣಗೊಳಿಸಲು ಅವರು ಒಪ್ಪಿಕೊಂಡಿರುವುದು ಸಂತಸ” ಎಂದರು. 

ವೈಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಮಲ್ಟಿ ಸ್ಟಾರ್  ಪ್ರಾಜೆಕ್ಟ್ ಕೆ ಸಿನಿಮಾಗೆ ಮಹಾನಟಿ ಸಿನಿಮಾ ಖ್ಯಾತಿಯ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ.

ರಾಜಕೀಯ

ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸೋ ಕಾಲ್ಡ್ ವಿಶ್ವಗುರು ಮೋದಿ ತುಟಿ ಬಿಚ್ಚುತ್ತಿಲ್ಲ. ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮೋದಿಯವರಿಂದ ಒಂದು ಸಣ್ಣ ಪ್ರಯತ್ನವೂ ಆಗಿಲ್ಲ.

ಆಂತರಿಕ ಸಂಘರ್ಷದಿಂದ ಮಣಿಪುರ ಅರಾಜಕತೆಯ ರಾಜ್ಯವಾಗಿದೆ. ಉಗ್ರರ ಮುಂದೆ ಸೇನೆಯೂ ಅಸಹಾಯಕವಾಗಿದೆ‌. ಮಣಿಪುರದಲ್ಲಿ ಯೋಧರಿಗೇ ರಕ್ಷಣೆಯಿಲ್ಲ. ಹೀಗಿರುವಾಗ ನಾಗರಿಕರ ಜೀವಕ್ಕೆ ರಕ್ಷಣೆ ಒದಗಿಸುವರ್ಯಾರು? ಮಣಿಪುರದಲ್ಲಿ ನಾಗರಿಕ ಯುದ್ಧ ತಾರಕಕ್ಕೇರಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದ್ಯಾಕೆ? ಕೇಂದ್ರಕ್ಕೆ ದಂಗೆ ನಿಯಂತ್ರಿಸದಷ್ಟು ಹೇಡಿತನವೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸೋ ಕಾಲ್ಡ್ ವಿಶ್ವಗುರು ಮೋದಿ ತುಟಿ ಬಿಚ್ಚುತ್ತಿಲ್ಲ. ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮೋದಿಯವರಿಂದ ಒಂದು ಸಣ್ಣ ಪ್ರಯತ್ನವೂ ಆಗಿಲ್ಲ. ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸುವ ಶಕ್ತಿಯಿದೆ ಎಂದು ಬಿಂಬಿಸಿಕೊಳ್ಳುವ ಮೋದಿಗೆ, ತನ್ನದೇ ದೇಶದ ಒಂದು ರಾಜ್ಯದಲ್ಲಿ ನಡೆಯುತ್ತಿರುವ ದಂಗೆ ನಿಲ್ಲಿಸಲು ಸಾಧ್ಯವಿಲ್ಲವೇ?

ರೋಮ್‌ನಂತೆ ಮಣಿಪುರವೂ ಹೊತ್ತಿ ಉರಿಯುತ್ತಿದೆ. ರೋಮ್ ಹೊತ್ತಿ ಉರಿಯುವಾಗ ಅಲ್ಲಿನ ದೊರೆ ನೀರೋ ಯಾವುದೇ ಚಿಂತೆಯಿಲ್ಲದೆ ಪಿಟೀಲು ಬಾರಿಸುತ್ತಿದ್ದ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ಇಲ್ಲಿನ ದೊರೆ ಮೋದಿ ಯಾವುದೇ ಚಿಂತೆಯಿಲ್ಲದೆ ವಿದೇಶ ಪ್ರವಾಸದಲ್ಲಿದ್ದಾರೆ. ರೋಮ್ ದೊರೆ ನೀರೋಗೂ ಪ್ರಧಾನಿ ಮೋದಿಗೂ ಏನಾದರೂ ವ್ಯತ್ಯಾಸವಿದೆಯೇ ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಜುಲೈ 10-12ರ ನಡುವೆ ಮುಂದಿನ ಹಂತದ ವಿಪಕ್ಷ ನಾಯಕರ ಚರ್ಚೆ ನಡೆಯಲಿರುವ ಶಿಮ್ಲಾ ಸಭೆಯಲ್ಲಿ ಪಿಡಿಎಗೆ (Patriotic Democratic Alliance) ಅಂತಿಮ ರೂಪ ನೀಡಲಾಗುವುದು.

ಪ್ರಸ್ತಾವಿತ ವಿರೋಧ ಪಕ್ಷದ ಹೆಸರು ‘ದೇಶಭಕ್ತಿಯ ಪ್ರಜಾಸತ್ತಾತ್ಮಕ ಒಕ್ಕೂಟ’ ಅಥವಾ PDA ಆಗಿರಬಹುದು ಮತ್ತು ಮುಂದಿನ ತಿಂಗಳು ಶಿಮ್ಲಾದಲ್ಲಿ ನಡೆಯುವ ವಿರೋಧ ಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು ಶನಿವಾರ ಪಾಟ್ನಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಕುರಿತು ಪ್ರತಿಪಾದಿಸಿದರು ಎಂದು ಹೇಳಲಾಗುತ್ತಿದೆ. ಶಿಮ್ಲಾ ಸಭೆಯಲ್ಲಿ ಪಿಡಿಎಗೆ ಅಂತಿಮ ರೂಪ ನೀಡಲಾಗುವುದು ಎಂದು ಅವರು ಹೇಳಿದಾರೆ. ಜುಲೈ 10-12 ರ ನಡುವೆ ಪ್ರತಿಪಕ್ಷ ನಾಯಕರ ಮುಂದಿನ ಹಂತದ ಚರ್ಚೆ ನಡೆಯಲಿದೆ.

ಡಿ.ರಾಜಾ ಅವರು, ಭಾನುವಾರ ಮೈತ್ರಿಯ ಹೆಸರು ‘ಪಿಡಿಎ’ ಆಗಿರಬಹುದು ಎಂದು ಹೇಳಿದ್ದಾರೆ. ಆದರೆ, ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಒತ್ತಿ ಹೇಳಿದರು. ಹೊಸ ಮೈತ್ರಿಯನ್ನು ಪೇಟ್ರಿಯಾಟಿಕ್ ಡೆಮಾಕ್ರಟಿಕ್ ಅಲೈಯನ್ಸ್ (ಪಿಡಿಎ) ಎಂದು ಹೆಸರಿಸಬಹುದು ಎಂದು ನಾವು ಹೇಳಬಹುದು. ಅದರ ಬಗ್ಗೆ ನಾವು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಎನ್‌ಡಿಎಯನ್ನು ಸೋಲಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳಿಗೆ ಅದರ ಬಗ್ಗೆ ಸ್ಪಷ್ಟತೆ ಇದೆ ಎಂದು ಅವರು ಹೇಳಿದರು.

ಪ್ರಸ್ತಾವಿತ ವೇದಿಕೆಗೆ ಬರುವ ವಿರೋಧ ಪಕ್ಷಗಳು ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತವನ್ನು ಹೊಂದಿರುತ್ತವೆ ಮತ್ತು ಹೊಸ ವೇದಿಕೆಯ ಹೆಸರು ಅದರ ಪ್ರತಿಬಿಂಬವನ್ನು ಹೊಂದಿರುತ್ತದೆ ಎಂದು ರಾಜಾ ಹೇಳಿದ್ದಾರೆ. “ತಮಿಳುನಾಡಿನಲ್ಲಿ ಸೆಕ್ಯುಲರ್ ಡೆಮಾಕ್ರಟಿಕ್ ಫ್ರಂಟ್ ಇದೆ. ಆದರೆ, ಬಿಹಾರದಲ್ಲಿ ಮಹಾಘಟಬಂಧನ್ ಇದೆ. ಆದ್ದರಿಂದ, ಸಂಯೋಜಿತ ವಿರೋಧವಾಗಿ ನಿಮ್ಮ ಬದ್ಧತೆಯನ್ನು ಹಂಚಿಕೊಳ್ಳುವ ಹೆಸರನ್ನು ನಾವು ಹೊಂದಿದ್ದೇವೆ ”ಎಂದು ಅವರು ಹೇಳಿದ್ದಾರೆ.

2004ರಲ್ಲಿ, ಸಾರ್ವತ್ರಿಕ ಚುನಾವಣೆಯ ನಂತರ, ಕಾಂಗ್ರೆಸ್, ಎಡ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲು ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅನ್ನು ರಚಿಸಿಕೊಳ್ಳಲಾಯಿತು. ಬಿಹಾರದಲ್ಲಿ, ಆರ್‌ಜೆಡಿ-ಜೆಡಿ(ಯು), ಕಾಂಗ್ರೆಸ್ ಮತ್ತು ಎಡಪಕ್ಷಗಳು 2015ರ ವಿಧಾನಸಭಾ ಚುನಾವಣೆಯ ಮೊದಲು ಮಹಾ ಮೈತ್ರಿ ಅಥವಾ ಮಹಾಘಟಬಂಧನ್ ಅನ್ನು ರಚಿಸಿ ಒಟ್ಟಿಗೆ ಸೇರಿಕೊಂಡವು.

ಡಿ.ರಾಜಾ ಅವರ ಘೋಷಣೆ, ಪಾಟ್ನಾ ಸಭೆಯ ಒಂದು ದಿನದ ನಂತರ ಹೊರ ಬರುತ್ತಿದೆ, ಪ್ರಸ್ತಾವಿತ ವೇದಿಕೆಗೆ ಔಪಚಾರಿಕ ರೂಪ ನೀಡುವ ಕಸರತ್ತು ಈಗಾಗಲೇ ಮುಂದುವರೆದಿದೆ. ಮತ್ತು ಶಿಮ್ಲಾ ಸಭೆಯು ಅದರ ರಚನೆ ಮತ್ತು ವಿವಿಧ ಕ್ಷೇತ್ರಗಳ ನಡುವೆ ಸೀಟು ಹಂಚಿಕೆಯ ವಿವಿಧ ಅಂಶಗಳ ಮೇಲೆ ಮುದ್ರೆ ಹಾಕುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಪ್ರಾಸಂಗಿಕವಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರತಿಪಕ್ಷಗಳ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯ ತಮ್ಮ ಭಾಷಣದಲ್ಲಿ “ಅವರೆಲ್ಲರೂ ದೇಶದ ಪ್ರಜೆಗಳಾಗಿರುವುದರಿಂದ ಅವರನ್ನು ‘ವಿರೋಧ ಪಕ್ಷದವರು’ ಎಂದು ಕರೆಯಬಾರದು ಅವರನ್ನು ‘ದೇಶಭಕ್ತರು’ ಎಂದು ಕರೆಯಬೇಕು” ಎಂದು ಒತ್ತಾಯಿಸಿದ್ದರು.

ದೇಶ

ಇಂಫಾಲ: ಮಣಿಪುರ ಗಲಭೆಗಳನ್ನು ಕೊನೆಗಾಣಿಸುವಂತೆ ಒತ್ತಾಯಿಸಿ, ಸುರಸಂದಪುರ ಜಿಲ್ಲೆಯ ಲಮ್ಕಾ ಪ್ರದೇಶದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಗುಂಪು, ಕಪ್ಪು ಬಟ್ಟೆ ಧರಿಸಿ ಶಾಂತಿ ಶವಪೆಟ್ಟಿಗೆ ರ್‍ಯಾಲಿ ನಡೆಸಿದರು. ಅಲ್ಲದೆ, ಹಿಂಸಾಚಾರದಲ್ಲಿ ಸಾವನ್ನಪ್ಪಿದ ಆದಿವಾಸಿಗಳ ಶವಗಳನ್ನು ಸರಿಯಾಗಿ ಹೂಳಬೇಕು ಎಂದು ಬುಡಕಟ್ಟು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮುಖ್ಯಮಂತ್ರಿ ಬೈರೋನ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಮೇ 3ರಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಈ ಗಲಭೆಯಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದು, ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮಣಿಪುರದ ಹಲವೆಡೆ ದಾಳಿಗೆ ಸಂಬಂಧಿಸಿದಂತೆ, ನಿನ್ನೆ ಪೊಲೀಸರು 12 ಮಂದಿಯನ್ನು ಬಂಧಿಸಿದ್ದರು. ಇವರಿಂದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಮಹಿಳೆಯರ ನೇತೃತ್ವದಲ್ಲಿ 1200 ರಿಂದ 1500 ಜನರು, ಸೈನ್ಯವನ್ನು ಸುತ್ತುವರೆದು ಬಂದಿಸಿದರು. ನಂತರ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ನಿನ್ನೆ ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಮಾತುಕತೆ ವಿಫಲವಾಗಿತ್ತು. 12 ಜನರನ್ನು ಬಿಡುಗಡೆ ಮಾಡದೆ ಕದಲುವುದಿಲ್ಲ ಎಂದು ನಾಗರಿಕರು ರಾತ್ರಿಯಿಡೀ ಸೈನಿಕರನ್ನು ಸುತ್ತುವರೆದರು ಕುಳಿತಿದ್ದರು. ಬಳಿಕ ಇಂದು (ಜೂನ್ 25) ಎಲ್ಲಾ 12 ಮಂದಿಯನ್ನು ಸೇನೆ ಬಿಡುಗಡೆ ಮಾಡಿದೆ.

ಮಣಿಪುರ ಗಲಭೆಗಳನ್ನು ಕೊನೆಗಾಣಿಸುವಂತೆ ಒತ್ತಾಯಿಸಿ, ಸುರಸಂದಪುರ ಜಿಲ್ಲೆಯ ಲಮ್ಕಾ ಪ್ರದೇಶದಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಗುಂಪು, ಕಪ್ಪು ಬಟ್ಟೆ ಧರಿಸಿ ಶಾಂತಿ ಶವಪೆಟ್ಟಿಗೆ ರ್‍ಯಾಲಿ ನಡೆಸಿದರು. ಮತ್ತು ಹಿಂಸಾಚಾರದಲ್ಲಿ ಸಾವನ್ನಪ್ಪಿದ ಆದಿವಾಸಿಗಳ ಶವಗಳನ್ನು ಸರಿಯಾಗಿ ಹೂಳಬೇಕು ಎಂದು ಬುಡಕಟ್ಟು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ದೇಶ

ಮದುವೆಗೆ ಮುನ್ನ ಸಹಬಾಳ್ವೆ ನಡೆಸುವುದು ಧರ್ಮದಲ್ಲಿ ನಿಷಿದ್ಧ ಎಂಬ ಕಾರಣಕ್ಕೆ, ಮುಸ್ಲಿಂ ಲಿವ್-ಇನ್ ಜೋಡಿಯೊಂದು ಪೊಲೀಸರಿಂದ ರಕ್ಷಣೆ ಕೋರಿದ್ದ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.

ಲಿವ್-ಇನ್ ವ್ಯವಸ್ಥೆಯಲ್ಲಿ ವಾಸಿಸುತ್ತಿರುವ ಕಾರಣಕ್ಕಾಗಿ ಕುಟುಂಬವು, ಪೊಲೀಸರ ನೆರವಿನಿಂದ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ, ಹಿಂದೂ ಮಹಿಳೆ ಮತ್ತು ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.

ಮದುವೆಗೆ ಮುನ್ನ ಮುಟ್ಟುವುದು, ಕಣ್ಣು ಹಾಯಿಸುವುದು, ಸಂಭೋಗ ಮಾಡುವುದು ಇಸ್ಲಾಂ ಧರ್ಮದಲ್ಲಿ ನಿಷಿದ್ಧವಾಗಿದ್ದು, ಹಾಗೆ ಮಾಡಿದರೆ ತಲಾ 100 ಛಡಿ ಏಟು ನೀಡಬೇಕು ಎಂದು ಕುರಾನ್ ನಲ್ಲಿ ಹೇಳಲಾಗಿದೆ ಎಂದು ಸರ್ಕಾದ ಪರವಾಗಿ ವಾದ ಮಂಡಿಸಲಾಯಿತು.

ಎಲ್ಲಾ ಸಂದರ್ಭಗಳಲ್ಲಿ ನಂಬಿಕೆ ವಿವಾಹ ಮತ್ತು ಸಂಬಂಧಿತ ಬೆದರಿಕೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಅರ್ಜಿದಾರರ ಪರವಾಗಿ ಕೋರ್ಟ್ನಲ್ಲಿ ವಾದಿಸಲಾಯಿತು.

ಮದುವೆಯ ವಯಸ್ಸನ್ನು ತಲುಪಿದ ಜನರು ತಾವು ಯಾರೊಂದಿಗೆ ಜೀವಿಸಬೇಕು ಎಂಬುದನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಮತ್ತು ಲಿವ್-ಇನ್ ಸಂಬಂಧದಲ್ಲಿನ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಎದುರಿಸಲು ಕಾರ್ಯವಿಧಾನಗಳನ್ನು ರೂಪಿಸಬೇಕು ಎಂದು ಹೇಳಿ, ಅಲಹಾಬಾದ್ ಹೈಕೋರ್ಟ್ ಸರ್ಕಾರದ ವಾದವನ್ನು ಒಪ್ಪಿಕೊಂಡು ಪರ್ಯಾಯ ಧಾರ್ಮಿಕ ಲಿವ್-ಇನ್ ದಂಪತಿಗಳ ಅರ್ಜಿಯನ್ನು ತಿರಸ್ಕರಿಸಿದೆ.

Muslim Law Doesn’t Recognise Pre-Marital Sex; Fornification An Offence Under Quran’: Allahabad HC Denies Relief To Interfaith Live-In Couple

ರಾಜಕೀಯ ರಾಜ್ಯ

ಮುಕ್ತ ಮಾರುಕಟ್ಟೆ ಯೋಜನೆಯಡಿ ಕೇಂದ್ರ ಸಂಗ್ರಹದಿಂದ ರಾಜ್ಯ ಸರ್ಕಾರಗಳಿಗೆ ಕೈಗೆಟಕುವ ದರದಲ್ಲಿ ಅಕ್ಕಿ, ಗೋಧಿ ಸೇರಿದಂತೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ; ಬಡತನ ರೇಖೆಗಿಂತ ಕೆಳಗಿರುವ ಪ್ರತಿ ವ್ಯಕ್ತಿಗೆ, ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ, ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿತ್ತು. ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಯನ್ನು ಜುಲೈ 1 ರಿಂದ ಜಾರಿಗೆ ತರಲು ಯೋಜನೆ ಹಾಕಿಕೊಂಡ ಸರ್ಕಾರ, ಕೇಂದ್ರ ಸರ್ಕಾರದ ಬಳಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಗೆ ಬೇಡಿಕೆ ಇಟ್ಟಿತ್ತು. ಅದೇ ರೀತಿ ಹಲವು ರಾಜ್ಯಗಳು ತಮಗೆ ಹೆಚ್ಚಿನ ಅಕ್ಕಿ ಬೇಕು ಎಂದು ಆಗ್ರಹಿಸಿದ್ದವು.

ತಮಿಳುನಾಡಿನಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಅಂಗಡಿಗಳ ಮೂಲಕ ಸರ್ಕಾರ 20 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು ಎಂದು ತಮಿಳುನಾಡು ಸರ್ಕಾರದ ಪರವಾಗಿ ಭಾರತೀಯ ಆಹಾರ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಕೇಂದ್ರ ಸರ್ಕಾರ ಹಲವು ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ನಿಲ್ಲಿಸಿದೆ.

ಈ ಬಗ್ಗೆ  ಮಾತನಾಡಿದ, ಭಾರತೀಯ ಆಹಾರ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಆಶಿಕ್ ಮೀನಾ, “ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 80 ಕೋಟಿ ಜನರಿಗೆ ಕೈಗೆಟಕುವ ದರದಲ್ಲಿ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿಯಂತಹ ಧಾನ್ಯಗಳ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಲು, ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ ಅಕ್ಕಿ ಸಿಗುವಂತೆ ಮಾಡಲು ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದರು.

ಕೆಲವು ದಿನಗಳ ಹಿಂದೆ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರು, ಅಗತ್ಯಬಿದ್ದರೆ ರಾಜ್ಯ ಸರ್ಕಾರಗಳು ಮಾರುಕಟ್ಟೆಯಿಂದ ಅಕ್ಕಿ ಖರೀದಿಸಬಹುದು ಎಂದು ಹೇಳಿದ್ದರು. ಅದರಂತೆ ಮುಂದಿನ ತಿಂಗಳು ಜುಲೈ 5 ರಿಂದ ಮುಕ್ತ ಮಾರುಕಟ್ಟೆ ಯೋಜನೆ ಮೂಲಕ ಅಕ್ಕಿ ಮಾರಾಟ ಆರಂಭಿಸಲಾಗುವುದು. ಇದಕ್ಕೆ ಪ್ರತಿ ಕ್ವಿಂಟಾಲ್‌ಗೆ 3,100 ರೂ. ಬೆಲೆ ನಿರ್ಣಯ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಕ್ರೈಂ ರಿಪೋರ್ಟ್ಸ್

ಕಾರುಗಳ ಮಾಲೀಕರಿಂದ ಕಾರುಗಳನ್ನು ಬಾಡಿಗೆಗೆ ಪಡೆದು, ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಮಾಹಿತಿ ಮೇರೆಗೆ ಸುಮಾರು 78,70,000/- ರೂಪಾಯಿಗಳ ಬೆಲೆ ಬಾಳುವ ಆರು ವಿವಿಧ ಕಂಪನಿಯ ಕಾರುಗಳು, ಒಂದು ದ್ವಿಚಕ್ರ ವಾಹಣಗಳಿಗೆ ಸಂಬಂಧಿಸಿದ ನಕಲಿ ದಾಖಲಾತಿಗಳು ಮತ್ತು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಕಾರುಗಳ ಮಾಲೀಕರಿಂದ, ಕಾರುಗಳನ್ನು ಬಾಡಿಗೆಗೆ ಪಡೆದು, ಕಾರುಗಳ ನಕಲಿ ದಾಖಲೆಗಳನ್ನು ಸೃಷ್ಠಿಸಿ, ಅವುಗಳನ್ನು ಅಸಲಿ ದಾಖಲೆಗಳೆಂದು ನಂಬಿಸಿ, ಆ ಕಾರುಗಳನ್ನು ಬೇರೆಯವರ ಬಳಿ ಭದ್ರತೆಗಾಗಿ ಇಟ್ಟು, ವಂಚನೆ ಮಾಡುವ ಉದ್ದೇಶದಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಜೂನ್ 19 ರಂದು ತಿಲಕ್‌ನಗರ ಪೊಲೀಸರು  ದಸ್ತಗಿರಿ ಮಾಡಿರುತ್ತಾರೆ. ಆರೋಪಿ ನೀಡಿದ ಮಾಹಿತಿ ಮೇರೆಗೆ, ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಂದ ರೂ.25,00,000/-ಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದು, ಆತನಿಂದ ಸುಮಾರು 78,70,000/- ರೂಪಾಯಿ ಮೌಲ್ಯದ ಆರು ವಿವಿಧ ಕಂಪನಿಯ ಕಾರುಗಳು, ಒಂದು ದ್ವೀಚಕ್ರ ವಾಹನ ಹಾಗೂ ವಾಹನಗಳ ನಕಲಿ ದಾಖಲಾತಿಗಳು ಮತ್ತು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ತಿಲಕ್‌ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸದರಿ ಕಾರ್ಯಚರಣೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರವರಾದ ಸಿ.ಕೆ.ಬಾಬು ಮತ್ತು ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಎನ್.ಪ್ರತಾಪ್ ರೆಡ್ಡಿ ರವರ ಮಾರ್ಗದರ್ಶನದಲ್ಲಿ ತಿಲಕ್‌ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಶಂಕರಾಚಾರ್.ಬಿ ರವರ ನೇತೃತ್ವದಲ್ಲಿ ಪಿಎಸ್‌ಐ ಸದ್ದಾಂ ಹುಸ್ಸೇನ್ ನದಾಪ್ ಮತ್ತು ಅಪರಾಧ ವಿಭಾಗದ ಸಿಬ್ಬಂಧಿರವರುಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಹಾಗೂ ಅಪರ ಪೊಲೀಸ್ ಆಯುಕ್ತರು ಪೂರ್ವ ರವರು ಪ್ರಶಂಶಿಸಿರುತ್ತಾರೆ.

ಆರೋಪಿಯಿಂದ ವಶಪಡಿಸಿಕೊಂಡಿರುವ ವಿವಿಧ ಕಂಪೆನಿಯ ಕಾರುಗಳು ಮತ್ತು ದ್ವೀಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ವಿವರ ಈ ಕೆಳಕಂಡಂತೆ ಇರುತ್ತದೆ:

ವಿವಿಧ ಕಂಪನಿಯ ಕಾರುಗಳಾದ ಫೋರ್ಡ್ ಈಕೋ ಸ್ಪೋರ್ಟ್ಸ್ ಕಾರು KA-01-MY-8631, ಟಾಟಾ ಟಿಗರ್ ಕಾರು KA-53-MF-9554, ಮಾರುತಿ ಸುಜುಕಿ ಎರ್ಟಿಗ ಕಾರು KA-51-MT-3050, ಮಹೇಂದ್ರ XUV 500 ಕಾರು KA-05-MQ-0230, ಮಾರುತಿ ಸುಜುಕಿ ಸ್ವಿಪ್ಟ್ ಕಾರು KA-03-NQ-4244, ಟಾಟಾ ಇನ್ನೋವ ಕಾರು KA-05-MD-0840 ಹಾಗೂ ಟಿವಿಎಸ್ ಅಪಾಚಿ ಬೈಕ್ KA-05-LN-4534 ಮತ್ತು 2 ವಿವೋ ಮೊಬೈಲ್ ಪೋನ್‌ಗಳು ಸೇರಿದಂತೆ ಇವುಗಳ ಮೌಲ್ಯ ಒಟ್ಟು ರೂ. 78,70,000/- ಆಗಿರುತ್ತದೆ.

ಸಾರ್ವಜನಿಕರಲ್ಲಿ ವಿನಂತಿ:
ಸಾರ್ವಜನಿಕರು ಇಂತಹ ಮೋಸ ವಂಚನೆಗಳಿಗೆ ಒಳಗಾಗಿದ್ದಲ್ಲಿ, ತಿಲಕ್‌ನಗರ ಪೊಲೀಸ್ ಠಾಣೆಯವರನ್ನು ಸಂಪರ್ಕಿಸಬೇಕೆಂದು ಕೋರಿದೆ.

ತಿಲಕ್‌ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 080-22942571. ಪೊಲೀಸ್ ಇನ್ಸ್​ಪೆಕ್ಟರ್ ಮೊಬೈಲ್: 9480801621.

ರಾಜಕೀಯ

“ನಿಮ್ಮ ಕ್ಷೇತ್ರದಲ್ಲಿ ನಿಮ್ಮದೇ ಕಾರ್ಯಕರ್ತರು ನಿಮಗೆ ಟಿಕೆಟ್ ಕೊಡಬಾರದು ಎನ್ನುತ್ತಿದ್ದಾರಂತೆ, ಒಮ್ಮೆ ಆ ಕಡೆ ಗಮನ ಹರಿಸಿ ನಿಮ್ಮ ಟಿಕೆಟ್ ಭದ್ರಪಡಿಸಿಕೊಳ್ಳಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.  

ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವಾರದ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಜೂನ್ 20 ರಂದು ಕಲಬುರ್ಗಿಯಲ್ಲಿ ಗೃಹ ಇಲಾಖೆಯ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ, ಮಾದಕ ದ್ರವ್ಯ ಮತ್ತು ಅಕ್ರಮ ಮದ್ಯ, ಅಕ್ರಮ ಮರಳು ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ, ಬೆಟ್ಟಿಂಗ್ ಮತ್ತು ಜೂಜು, ಅಂದಗೊಳಿಸುವ ರೌಡಿಗಳು, ದೇಶ ನಿರ್ಮಿತ ಬಂದೂಕುಗಳ ಅಕ್ರಮ ಪೂರೈಕೆ ಮುಂತಾದವುಗಳನ್ನು ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಇದಕ್ಕೆ ಪ್ರತಿಕ್ರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,  “ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯೋ? ತಮ್ಮ ಖಾತೆಯ ಮೇಲೆ ಬೇಸರವೋ? ತಿಳಿಯುತ್ತಿಲ್ಲ. ಅಥವಾ ತಮ್ಮ ಗೃಹಖಾತೆಯ ಕೆಲಸಗಳನ್ನು ಪ್ರಿಯಾಂಕ್ ಖರ್ಗೆ ಅವರಿಗೆ  ಲೀಸ್ ಗೆ ಕೊಟ್ಟಿದ್ದಾರೋ? ಪೊಲೀಸ್ ಅಧಿಕಾರಗಳಿಗೆ ಮರಿ ಖರ್ಗೆಯವರು ಕ್ಲಾಸ್ ತಗೊತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ? ಸಿದ್ದರಾಮಯ್ಯ ನವರೇ” ಎಂದು ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಶಾಸಕಾಂಗದ ಕಾರ್ಯವ್ಯಾಪ್ತಿಯ ಅರಿವಿಲ್ಲದ ನಳೀನ್ ಕುಮಾರ್ ಕಟೀಲ್ ಅವರೇ, ನೀವು ಅಧಿಕಾರ ಕಳೆದುಕೊಂಡಿದ್ದೇ ಇಂತಹ ಅಜ್ಞಾನಕ್ಕೋಸ್ಕರ. ಸಂಸದರಾಗಿರುವ ನಿಮಗೆ ನಿಮ್ಮ ಸ್ಥಾನದ ಹೊಣೆಯ ಅರಿವಿಲ್ಲದಿರಬಹುದು, ನನಗೆ ನನ್ನ ಹೊಣೆಯ ಅರಿವಿದೆ. ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಜಿಲ್ಲೆಯ ಎಲ್ಲಾ ಇಲಾಖೆಗಳ ಆಗುಹೋಗುಗಳಿಗೂ ಹೊಣೆಯಾಗಿರುತ್ತೇನೆ, ನನ್ನ ಜಿಲ್ಲೆಯ ಗೃಹ ಇಲಾಖೆಯನ್ನೂ ನಾನೇ ನಿಯಂತ್ರಿಸಬೇಕಿರುವುದು ನನ್ನ ಕರ್ತವ್ಯ. ನಿಮ್ಮ ಪಕ್ಷದವರಿಗೆ ಇಂತಹ ಸಾಮಾನ್ಯ ಜ್ಞಾನ ಇಲ್ಲದಿರುವುದಕ್ಕಾಗಿಯೇ ಜನತೆ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ.

ನಿಮ್ಮ 40% ಸರ್ಕಾರ ಈ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು, ರೈತರು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದನ್ನು ರಾಜ್ಯ ಕಂಡಿದೆ. ನಿಮ್ಮಂತ ವಿಫಲ ಆಡಳಿತಗಾರರಿಂದ ನಾವು ಆಡಳಿತಾತ್ಮಕ ಪಾಠ ಕಲಿಯುವ ಅಗತ್ಯವಿಲ್ಲ. ಅಧ್ಯಕ್ಷಗಿರಿಗೆ ರಾಜೀನಾಮೆ ಕೊಟ್ಟೆ ಎಂದು ಯೂ ಟರ್ನ್ ಹೊಡೆದಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಿ, ನಿಮ್ಮ ಕ್ಷೇತ್ರದಲ್ಲಿ ನಿಮ್ಮದೇ ಕಾರ್ಯಕರ್ತರು ನಿಮಗೆ ಟಿಕೆಟ್ ಕೊಡಬಾರದು ಎನ್ನುತ್ತಿದ್ದಾರಂತೆ, ಒಮ್ಮೆ ಆ ಕಡೆ ಗಮನ ಹರಿಸಿ ನಿಮ್ಮ ಟಿಕೆಟ್ ಭದ್ರಪಡಿಸಿಕೊಳ್ಳಿ” ಎಂದಿದ್ದಾರೆ.