ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
June 2023 » Page 3 of 12 » Dynamic Leader
November 21, 2024
Home 2023 June (Page 3)
ರಾಜಕೀಯ

ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇನ್ನು ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

“ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ.

ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು” ಎಂದು ನಳೀನ್ ಕುಮಾರ್ ಕಟೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್

ಬಿಜೆಪಿ ವಿರುದ್ಧ, ಪಕ್ಷಗಳನ್ನು ಒಗ್ಗೂಡಿಸುವ ಹೊಣೆ ಹೊತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಜೂನ್ 23 ರಂದು ಪಕ್ಷದ ಮುಖಂಡರೊಂದಿಗೆ ಪಾಟ್ನಾದಲ್ಲಿ ಸಭೆ ನಡೆಸಿದರು. ಇದರಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು, ರಾಷ್ಟ್ರೀಯವಾದಿ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ, ಜಾರ್ಖಂಡ್ ಮುಕ್ತಿ ಮೋರ್ಚಾ, ನ್ಯಾಷನಲ್ ಕಾನ್ಫರೆನ್ಸ್‌, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಆಮ್ ಆದ್ಮಿ ಪಕ್ಷದ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸುಮಾರು 4 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ, ವಿರೋಧ ಪಕ್ಷಗಳ ಬಲವರ್ಧನೆ ಕುರಿತು ಚರ್ಚೆ ನಡೆಸಲಾಯಿತು. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರ ಒಮ್ಮತದ ಅಭಿಪ್ರಾಯವಾಗಿತ್ತು. ಈ ಹಿನ್ನಲೆಯಲ್ಲಿ, ಭಾರತದ ರಾಜಕೀಯದಲ್ಲಿ ಬದಲಾವಣೆ ತಂದ ಮತ್ತು ಪ್ರಬಲವಾಗಿ ಅಧಿಕಾರದಲ್ಲಿದ್ದ ಸರ್ಕಾರಗಳನ್ನು ಉರುಳಿಸಿದ ವಿರೋಧ ಪಕ್ಷಗಳ ಕುರಿತು ಒಂದು ನೋಟ:

ಜಯಪ್ರಕಾಶ್ ನಾರಾಯಣ್

1975ರಲ್ಲಿ ತುರ್ತು ಪರಿಸ್ಥಿತಿ (Emergency) ಜಾರಿಗೊಳಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ವಿರುದ್ಧ, ವಿರೋಧ ಪಕ್ಷಗಳು ಒಟ್ಟು ಗೂಡಿ ಜನತಾ ಪಕ್ಷವನ್ನು ಆರಂಭಿಸಿದವು. ಇದರ ಬೆನ್ನಲ್ಲೇ 1977ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಜನತಾ ಪಕ್ಷ ಸೋಲಿಸಿತು. ನಂತರ ಮೊರಾರ್ಜಿ ದೇಸಾಯಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸ್ವತಂತ್ರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೀಜವನ್ನು ಬಿತ್ತಿದವರು ಜಯಪ್ರಕಾಶ್ ನಾರಾಯಣ್. ಆರಂಭದಲ್ಲಿ, ಇಂದಿರಾ ಗಾಂಧಿ ವಿರುದ್ಧ ಅವರು ಪ್ರಾರಂಭಿಸಿದ ಬಿಹಾರ ಚಳವಳಿ, ಜನತಾ ಪಕ್ಷದ ರಚನೆಗೆ ಪ್ರಮುಖ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ರಾಜೀವ್ ಗಾಂಧಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜನತಾ ದಳದ ಸಂಸ್ಥಾಪಕ ವಿ.ಪಿ.ಸಿಂಗ್, ನ್ಯಾಷನಲ್ ಫ್ರಂಟ್ ಎಂಬ ಮೈತ್ರಿಕೂಟವನ್ನು ರಚಿಸಿದರು. ಬೋಪರ್ಸ್ ಹಗರಣದ ಹಿನ್ನೆಲೆಯಲ್ಲಿ ರಚನೆಯಾದ ಮೈತ್ರಿಕೂಟಕ್ಕೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್.ಟಿ.ರಾಮರಾವ್ ನಾಯಕರಾಗಿ, ವಿ.ಪಿ.ಸಿಂಗ್ ಸಂಘಟಕರಾಗಿದ್ದರು. ಈ ಮೈತ್ರಿಕೂಟ ರಚನೆಗೆ ತಮಿಳುನಾಡಿನ ಡಿಎಂಕೆ ನಾಯಕ ಎಂ.ಕರುಣಾನಿಧಿ ಪ್ರಮುಖ ಪಾತ್ರ ವಹಿಸಿದ್ದರು.

ಎಂ.ಕರುಣಾನಿಧಿ

1989ರಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಫ್ರಂಟ್ ಗೆ ಬಿಜೆಪಿ ಮತ್ತು ಎಡರಂಗ ಬೆಂಬಲ ನೀಡಿತ್ತು. ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಷನಲ್ ಫ್ರಂಟ್ ಸರ್ಕಾರ ಒಂದು ವರ್ಷವೂ ಉಳಿಯಲಿಲ್ಲ. ಪಕ್ಷದೊಳಗಿನ ಅಧಿಕಾರದ ಕಚ್ಚಾಟ, ಮಂಡಲ್ ಆಯೋಗದ ವಿರುದ್ಧ ಬಿಜೆಪಿಯ ನಿಲುವು, ಮತ್ತು ರಾಮಜನ್ಮ ಭೂಮಿ ಸಮಸ್ಯೆಯಿಂದಾಗಿ ನ್ಯಾಷನಲ್ ಫ್ರಂಟ್ ಸರ್ಕಾರವನ್ನು ಉರುಳಿಸಲಾಯಿತು. ಕಾಂಗ್ರೆಸ್ ವಿರುದ್ಧ ರಚನೆಯಾದ ನ್ಯಾಷನಲ್ ಫ್ರಂಟ್, ಕಾಂಗ್ರೆಸ್ ಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. ಚಂದ್ರಶೇಖರ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಮತ್ತೆ ಚಂದ್ರಶೇಖರ್ ಆಡಳಿತವನ್ನು ಕಾಂಗ್ರೆಸ್ ಏಳು ತಿಂಗಳಲ್ಲೇ ಉರುಳಿಸಿತು.

ಅದೇ ರೀತಿ 1998ರಲ್ಲಿ ಕಾಂಗ್ರೆಸ್ ವಿರುದ್ಧ ರಚನೆಯಾದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಜಯಲಲಿತ ನೇರುತ್ವದ ಎಐಎಡಿಎಂಕೆ ಬೆಂಬಲ ಕಳೆದುಕೊಂಡು ಒಂದೇ ವರ್ಷದಲ್ಲಿ ಸರ್ಕಾರ ಉರುಳಿತು. ನಂತರ, ಡಿಎಂಕೆ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 1999 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ವಾಜಪೇಯಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿತು.

ಎನ್.ಟಿ.ರಾಮರಾವ್

ವಿರೋಧ ಪಕ್ಷಗಳ ಮೈತ್ರಿಯು ವಿವಿಧ ಅವಧಿಗಳಲ್ಲಿ ವಿಜಯಶಾಲಿಯಾಗಿದ್ದರೂ, ಈಗ ಕೇಂದ್ರದಲ್ಲಿ ಪ್ರಬಲವಾಗಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ವಿರುದ್ಧ, ವಿರೋಧ ಪಕ್ಷಗಳ ಒಕ್ಕೂಟ ರಚನೆಯ ಪ್ರಯತ್ನ ಫಲ ನೀಡುತ್ತದೆಯೇ ಕಾದು ನೋಡಬೇಕಿದೆ.

ದೇಶ ರಾಜಕೀಯ

ಚೆನ್ನೈ:ರಾಜ್ಯದಲ್ಲಿ ಯಾವ ಪಕ್ಷಕ್ಕೆ ಪ್ರಭಾವವಿದೆಯೋ ಆ ಪಕ್ಷದ ನೇತೃತ್ವದಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.

ಬಿಹಾರ ರಾಜ್ಯದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿ, ಚೆನ್ನೈಗೆ ಹಿಂತಿರುಗಿದ ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು: “ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದು ನನಗೆ ಅತೀವ ಸಂತೋಷ ಮತ್ತು ಭರವಸೆಯನ್ನು ನೀಡಿದೆ. ಪಾಟ್ನಾ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ.

ಭಾರತದ ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಉಳಿಸಲು ಬಿಜೆಪಿ ಮತ್ತೆ ಸರ್ಕಾರ ರಚಿಸಬಾರದು ಎಂಬುದುಕ್ಕಾಗಿಯೇ ಈ ಸಭೆಯನ್ನು ಆಯೋಜಿಸಲಾಗಿತ್ತು. ಬಿಜೆಪಿಯನ್ನು ಸೋಲಿಸುವುದೇ ಎಲ್ಲ ಪಕ್ಷಗಳ ಒಂದೇ ಗುರಿಯಾಗಿದೆ. ರಾಜಕೀಯ ಪಕ್ಷಗಳ ನಡುವೆ ಕನಿಷ್ಠ ಕಾರ್ಯಕ್ರಮ ರೂಪಿಸುವಂತೆ ಒತ್ತಾಯಿಸಿದ್ದೇನೆ.

ಬಿಜೆಪಿಯನ್ನು ಸೋಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಸ್ತುತ ಪರಿಸ್ಥಿತಿಯು ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದೇವು ಅದು ಈಗ ಪಾಟ್ನಾದಲ್ಲಿ ನೆರವೇರಿದೆ.

ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕ್ಷೇತ್ರ ಹಂಚಿಕೊಳ್ಳಬಹುದು. ಕ್ಷೇತ್ರ ಹಂಚಿಕೆ ಸಾಧ್ಯವಾಗದಿದ್ದರೆ ಸಾಮಾನ್ಯ ಅಭ್ಯರ್ಥಿಯನ್ನು ಘೋಷಿಸಬಹುದು ಎಂದು ತೀರ್ಮಾನಿಸಲಾಗಿದೆ. ಮೈತ್ರಿ ರಚನೆಗೆ ಸಂಬಂಧಿಸಿದಂತೆ ಪಕ್ಷಗಳ ನಡುವೆ 7 ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ.

ರಾಜ್ಯದಲ್ಲಿ ಯಾವ ಪಕ್ಷಕ್ಕೆ ಪ್ರಭಾವವಿದೆಯೋ ಆ ಪಕ್ಷದ ನಾಯಕತ್ವದಲ್ಲಿ ಮೈತ್ರಿ ರಚನೆಯಾಗಬೇಕು ಎಂದು ಒತ್ತಾಯಿಸಲಾಗಿದೆ. ಪಾಟ್ನಾ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದರು.

ದೇಶ ರಾಜಕೀಯ

ಇಂದು ಬಿಹಾರದ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಮಾಲೋಚನಾ ಸಭೆ ಮುಕ್ತಾಯವಾಗಿದೆ. ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸುಮಾರು 4 ಗಂಟೆಗಳ ಕಾಲ ಸಮಾಲೋಚನೆ ಸಭೆ ನಡೆಯಿತು.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಟಿ.ಆರ್.ಬಾಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್‌ನ ಉಮರ್ ಅಬ್ದುಲ್ಲಾ,  ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ, ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಡಿ.ರಾಜಾ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅಧ್ಯಕ್ಷ ಉದ್ಧವ್ ಠಾಕ್ರೆ,  ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಹೇಮಂತ್ ಸೊರೆನ್ ಸೇರಿದಂತೆ 15ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

ಸಮಾಲೋಚನಾ ಸಭೆಯ ನಂತರ, ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, “ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. ಬಿಜೆಪಿಯ ಕಳೆದ 9 ವರ್ಷಗಳ ಆಡಳಿತ ಅನಾಹುತಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಪ್ರಜಾಪ್ರಭುತ್ವ ಮತ್ತು ಸಮಾಜ ದುರಂತವಾಗಿದೆ. ಮೋದಿ ನೇತೃತ್ವದ ಸರ್ಕಾರ ದೊಡ್ಡ ಉದ್ಯಮಿಗಳ ಪರವಾಗಿ ನಾಚಿಕೆಯಿಲ್ಲದೆ ಕೆಲಸ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತದೆ. ಬಿಜೆಪಿಯನ್ನು ಸೋಲಿಸಲೇಬೇಕು ಎಂದು ವಿರೋಧ ಪಕ್ಷಗಳು ತೀರ್ಮಾನಿಸಿವೆ” ಎಂದರು.

ಮಲ್ಲಿಕಾರ್ಜುನ ಖರ್ಗೆ: “ಜಾತ್ಯತೀತ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಸಭೆಯಲ್ಲಿ ರಾಜ್ಯಗಳ ಪ್ರಮುಖ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಾದೇಶಿಕ ಪಕ್ಷಗಳ ವಿಲೀನದ ಬಗ್ಗೆಯೂ ಚರ್ಚಿಸಿದ್ದೇವೆ” ಎಂದರು.

ರಾಹುಲ್ ಗಾಂಧಿ: ” ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ರಚನೆಯನ್ನು ಹಾಳು ಮಾಡುತ್ತಿವೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಸಿದ್ಧಾಂತದಲ್ಲಿ ಒಂದಾಗಿದ್ದೇವೆ” ಎಂದರು.

ಮಮತಾ ಬ್ಯಾನರ್ಜಿ: “ಬಿಹಾರದಲ್ಲಿನ ಗೊಂದಲವೇ ವಿರೋಧ ಪಕ್ಷಗಳು ಒಗ್ಗೂಡಲು ಕಾರಣ. ಸಿಬಿಐ ಹಾಗೂ ಇಡಿಯನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಬಳಿ ಹೋರಾಡಬೇಕಿದೆ. ಕೇಂದ್ರ ಸರ್ಕಾರ ಯಾವುದೇ ವಿಷಯದ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸುವುದಿಲ್ಲ. ನಾವು ಒಗ್ಗಟ್ಟಾಗಿದ್ದೇವೆ; ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ. ಇತಿಹಾಸ ಇಲ್ಲಿಂದ ಆರಂಭವಾಗುತ್ತದೆ. ಇತಿಹಾಸ ಬದಲಿಸುವ ಬಿಜೆಪಿಯ ಪ್ರಯತ್ನವನ್ನು ಒಗ್ಗಟ್ಟಾಗಿ ಎದುರಿಸೋಣ. ಈ ಬಾರಿಯೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗೆದ್ದರೆ ಅದು ಭಾರತದ ಕೊನೆಯ ಸಾರ್ವತ್ರಿಕ ಚುನಾವಣೆಯಾಗಲಿದೆ” ಎಂದರು.

ಮೆಹಬೂಬಾ ಮುಫ್ತಿ: “ದೇಶದ ಜಾತ್ಯತೀತ ಸ್ವರೂಪದ ಮೇಲೆ ದಾಳಿ ನಡೆಯುತ್ತಿದೆ. ಗಾಂಧಿಯನ್ನು ಬೆಂಬಲಿಸೋಣ; ಗೋಡ್ಸೆಯನ್ನು ಅಲ್ಲ” ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಈ ಸಭೆಗೆ ಕಾಂಗ್ರೆಸ್ ನೇತೃತ್ವ ವಹಿಸಲಿದೆ ಎಂದು ತಿಳಿದು ಬಂದಿದೆ.

ರಾಜಕೀಯ

ಪಂಚಮಸಾಲಿ ಸಮುದಾಯವನ್ನು ರಾಜ್ಯ 2(ಎ) ಪಟ್ಟಿಗೆ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸಲು ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿ ಶಾಸಕರ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರ ಸಭೆ ಕರೆದು, ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದ ಪಂಚಮಸಾಲಿ ಶಾಸಕರ ನಿಯೋಗಕ್ಕೆ ಆಶ್ವಾಸನೆ ನೀಡಿದರು.

“ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರಿದೆ. ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕುಷವಾಗಿ ಚರ್ಚಿಸಲಾಗುವುದು.

ಕಾಟಾಚಾರಕ್ಕಾಗಿ ಮೀಸಲಾತಿ ಕೊಡಬಾರದು; ಬಿಜೆಪಿಗೆ ಮೀಸಲಾತಿ ಕೊಡುವುದು ಬೇಕಾಗಿರಲಿಲ್ಲ. ಅದಕ್ಕೇ ನ್ಯಾಯಾಲಯಕ್ಕೆ ಹೋದರೆ ಬಿದ್ದೋಗುವ ರೀತಿಯಲ್ಲಿ ಕಾಟಾಚಾರಕ್ಕೆ ಕೊಟ್ಟರು. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಸಂವಿಧಾನ ತಜ್ಞರ ಜತೆ ಚರ್ಚಿಸಿ ಗೊಂದಲ ಬಗೆಹರಿಸಬೇಕಾಗಿದೆ” ಎಂದರು.

ರಾಜಕೀಯ

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಮೋಸದ ಪಟ್ಟಿ ಹೇಳುತ್ತಾ ಹೋದರೆ ಪುಸ್ತಕವೇ ಬರೆಯಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

“ನೀವು ಮನೆಗೆ ಮಾರಿ, ಪರರಿಗೆ ಉಪಕಾರಿ. ನಿಮ್ಮ ಈ ಮನೆಮುರಕುತನಕ್ಕೆ ಈಗಾಗಲೇ ಜನ ಪಾಠ ಕಲಿಸಿದ್ದಾರೆ‌.‌ ಆದರೂ ನಿಮಗೆ ಬುದ್ದಿ ಬಂದಿಲ್ಲ. ಕೇಂದ್ರ ಎಲ್ಲವನ್ನೂ ಕರ್ನಾಟಕಕ್ಕೆ ಕೊಡಲಿ ಎಂಬ ಸ್ವಾರ್ಥ ನಮ್ಮಲಿಲ್ಲ. ಗೋದಾಮುಗಳಲ್ಲಿ ಅಕ್ಕಿಯನ್ನು ಕೊಳೆಯಿಸುವ ಬದಲು ಬಡವರಿಗೆ ಕೊಡಿ ಎಂದಿದ್ದೇವೆ. ಅದೂ ಮಾರುಕಟ್ಟೆ ದರದಲ್ಲಿ. ಇದು ತಪ್ಪೆ” ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್‌ ಅವರನ್ನು ಪ್ರಶ್ನೆ ಮಾಡಿದ್ದಾರೆ.

“ಕೇಂದ್ರದ ನಿಮ್ಮ BJP ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಒಂದೇ ಎರಡೇ? GST ಬಾಕಿಯಲ್ಲಿ ಮೋಸ, GST ಪರಿಹಾರದಲ್ಲಿ ಮೋಸ, ನೆರೆ ಪರಿಹಾರದಲ್ಲಿ ಮೋಸ, ಬರ ಪರಿಹಾರದಲ್ಲೂ ಮೋಸ, ಯೋಜನೆ ಅನುಷ್ಠಾನದಲ್ಲೂ ಮೋಸ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾಡಿರುವ ಮೋಸದ ಪಟ್ಟಿ ಹೇಳುತ್ತಾ ಹೋದರೆ ಪುಸ್ತಕವೇ ಬರೆಯಬಹುದು.

ನೀವು ಈ ರಾಜ್ಯದ ಮನೆ ಮಗನಾಗಿ ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಗೆ ಹೆಗಲು ಕೊಡಬೇಕು. ರಾಜ್ಯದ ಬಡವರಿಗೆ ಅಕ್ಕಿ ಕೊಡದೇ ದ್ವೇಷದ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಕೇಂದ್ರ ನಾಯಕರಿಗೆ ತಿಳಿಹೇಳಬೇಕು. ಅದು ಬಿಟ್ಟು ಮೋದಿಯವರ ದ್ವೇಷದ ಬೆಂಕಿಗೆ ನೀವೆ ತುಪ್ಪ ಸುರಿದರೆ ಬಡವರ ಶಾಪ ನಿಮಗೆ ತಟ್ಟದಿರುತ್ತದೆಯೇ” ಎಂದು ಹೇಳಿದ್ದಾರೆ.

ರಾಜಕೀಯ ವಿದೇಶ

ಭಾರತದಲ್ಲಿ 2,500 ರಾಜಕೀಯ ಪಕ್ಷಗಳು ಇವೆ. 20 ವಿಭಿನ್ನ ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳನ್ನು ಆಳುತ್ತಿವೆ. ಆದರೆ, ದೇಶವೆಂಬುದು ಒಂದೇ; ವಿವಿಧತೆಯಲ್ಲಿ ಏಕತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅಲ್ಲಿನ ಸಂಸತ್ ಭವನದಲ್ಲಿ ಮಾತನಾಡಿದ್ದಾರೆ. “ಈ ಸದನದಲ್ಲಿ ಮಾತನಾಡುವುದು 140 ಕೋಟಿ ಜನರಿಗೆ ಸಂದ ಗೌರವ. ಭಾರತದಲ್ಲಿ 2,500 ರಾಜಕೀಯ ಪಕ್ಷಗಳಿವೆ” ಎಂದ ಕೂಡಲೇ ಸಂಸತ್‌ನಲ್ಲಿದ್ದ ಎಲ್ಲರೂ ನಕ್ಕರು (ಪ್ರಧಾನಿ ಮೋದಿ ಕೂಡ ಮುಗುಳ್ನಕ್ಕರು) 20 ವಿವಿಧ ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿವೆ. ಭಾರತದಲ್ಲಿ 22 ಭಾಷೆಗಳಿವೆ. ಆದರೆ ನಾವೆಲ್ಲರೂ ಒಂದೇ ಧ್ವನಿಯಲ್ಲಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಿದ್ದೇವೆ.

100 ಮೈಲಿಗಳ ಒಳಗೆ ಎಲ್ಲಿಹೋದರು ದೋಸೆ, ಆಲು ಪರೊಟ್ಟಾ, ಚಿಕನ್ ಎಲ್ಲವನ್ನು ಎಲ್ಲರೂ ಸವಿಯುತ್ತಾರೆ. ಡಿಜಿಟಲ್ ಪಾವತಿಗಳು ಘಾತೀಯವಾಗಿ ಬೆಳೆದಿವೆ. ರಸ್ತೆ ಬದಿ ಅಂಗಡಿಯಲ್ಲೂ ಫೋನ್ ಪೇ ಮಾಡಲಾಗುತ್ತಿದೆ. ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆ 2 ಸಾವಿರ ಪಟ್ಟು ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

ಮೊನ್ನೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಲಿಕ್ಕೆ ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ಮೋದಿ, “100 ಮೈಲಿಗಳ ಒಳಗೆ ಎಲ್ಲಿಹೋದರು ದೋಸೆ, ಆಲು ಪರೊಟ್ಟಾ, ಚಿಕನ್ ಎಲ್ಲವನ್ನು ಎಲ್ಲರೂ ಸವಿಯುತ್ತಾರೆ. ಡಿಜಿಟಲ್ ಪಾವತಿಗಳು ಘಾತೀಯವಾಗಿ ಬೆಳೆದಿವೆ. ರಸ್ತೆ ಬದಿ ಅಂಗಡಿಯಲ್ಲೂ ಫೋನ್ ಪೇ ಮಾಡಲಾಗುತ್ತಿದೆ. ನಮ್ಮಲ್ಲಿ 22 ಭಾಷೆಗಳಿವೆ” ಎಂಬ ಅದ್ಭುತವಾದ, ಯಾರೂ ಕೇಳರಿಯದ ಮಾಹಿತಿಯನ್ನು ಅಮೆರಿಕ ಸೆನಟ್‌ಗೆ ನೀಡಿ, ಎಲ್ಲರನ್ನು ಆಶ್ಚರ್ಯ ಪಡುವಂತೆ ಮಾಡಿದ್ದಾರೆ.

We have over 2,500 political parties. About 20 different parties govern various states of India. We have 22 official languages and thousands of dialects, yet we speak in one voice

ರಾಜ್ಯ

ಚಿಕನ್ ಕೋಶ (Cell) ಗಳನ್ನು ಪ್ರಯೋಗಾಲಯಗಳಲ್ಲಿ ಇರಿಸಿ, ಅದರಿಂದ ಉತ್ಪತ್ತಿಯಾಗುವ ಮಾಂಸವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳನ್ನು ಮೀರಿ, ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ತ್ಯಜಿಸುವ ‘ವ್ಯಾಗನ್’ ಎಂಬ ಆಹಾರ ಪದ್ದತಿ ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಈ ಆಹಾರವು ಪರಿಸರ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂದು ಅದರ ಅನುಯಾಯಿಗಳು ಹೇಳುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ಕೃತಕ ಮಾಂಸ ಉತ್ಪಾದನಾ ಮಾರುಕಟ್ಟೆಯೂ ಅತಿ ವೇಗವಾಗಿ ಬೆಳೆಯಲು ಆರಂಭಿಸಿದೆ. ಅಂದರೆ ಪ್ರಾಣಿಗಳ ‘ಕೋಶ’ಗಳನ್ನು ಪ್ರಯೋಗಾಲಯದಲ್ಲಿ ಇರಿಸಿ, ನಿರ್ವಹಿಸಿ ಮತ್ತು ಪೋಷಿಸಿ, ಇದನ್ನು ಮಾಂಸವಾಗಿ ಉತ್ಪಾದಿಸುವ ವಿಧಾನವನ್ನೇ ಪ್ರಯೋಗಾಲಯ ಮಾಂಸ ಎಂದು ಕರೆಯಲಾಗುತ್ತದೆ.

ಈ ರೀತಿಯಾಗಿ, ಪ್ರಾಯೋಗಿಕ ಚಿಕನ್ ಅನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೋಳಿಗೆ ಜೀವವಿಲ್ಲ. ’ಕೋಶ’ಗಳನ್ನು ಇಟ್ಟುಕೊಂಡು ಮಾಂಸಕ್ಕೆ ಬೇಕಾದ ಭಾಗಗಳನ್ನು, ಅಗತ್ಯವಿರುವ ರೂಪದಲ್ಲಿ ತಯಾರಿಸಿಕೊಳ್ಳುತ್ತಿದ್ದಾರೆ.

ಈ ಪ್ರಯೋಗಾಲಯದ ಕೋಳಿ ಮಾಂಸವನ್ನು ಮಾರಾಟ ಮಾಡಲು, ಅಮೆರಿಕ ಕೃಷಿ ಇಲಾಖೆ ಅನುಮೋದನೆ ನೀಡಿದೆ. ‘ಅಪ್‌ಸೈಡ್ ಫುಡ್ಸ್’ ಮತ್ತು ‘ಗುಡ್ ಮೀಟ್’ ಎಂಬ ಎರಡು ಕಂಪನಿಗಳಿಗೆ ಈ ಅನುಮತಿಯನ್ನು ನೀಡಲಾಗಿದೆ.

ಪ್ರಯೋಗಾಲಯದಲ್ಲಿ ತಯಾರಿಸಿದ ಮಾಂಸವನ್ನು ಯಾರು ಬೇಕಾದರೂ ತಿನ್ನಬಹುದು. ಇರಲ್ಲಿ ಪ್ರೋಟೀನ್ ಇದೆ. ಹಾನಿ ಮಾಡುವುದಿಲ್ಲ. ನಾವು ಪ್ರಾಣಿಗಳನ್ನು ಕೊಲ್ಲುತ್ತೇವೆ; ಪರಿಸರವನ್ನು ಹಾಳು ಮಾಡುತ್ತಿದ್ದೇವೆ ಎಂಬ ಪಾಪಪ್ರಜ್ಞೆ ಇರುವುದಿಲ್ಲ ಎಂದು, ಕಂಪನಿ ಹೇಳುತ್ತಿದೆ. ಈ ಮಾಂಸ ಶೀಘ್ರದಲ್ಲೇ ಮುಕ್ತ ಮಾರಾಟಕ್ಕೆ ಲಭ್ಯವಾಗಲಿದೆ. ಅದೇ ಸಮಯದಲ್ಲಿ, ಅಮೆರಿಕದಲ್ಲಿ ಇದರ ವಿರುದ್ಧ ಧ್ವನಿಗಳು ಕೇಳಿಬರುತ್ತಿವೆ.

ಪ್ರಯೋಗಾಲಯ ಮಾಂಸವನ್ನು ಅಭಿವೃದ್ಧಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಇದರಲ್ಲಿ ಕೆಲವು ಪ್ರಾಯೋಗಿಕ ಸಮಸ್ಯೆಗಳು ಇದೆ ಎಂದು ಹೇಳಲಾಗುತ್ತದೆ. ‘ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ರೀತಿಯ ಕೋಳಿ ಮಾಂಸ ಉತ್ಪನ್ನ, 2030ರ ವೇಳೆಗೆ 20 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕ್ಷೇತ್ರವಾಗಿ ಬೆಳೆಯಲಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದೆ.

ದೇಶ

ಜೂನ್ 23 ರಂದು ಪಾಟ್ನಾದಲ್ಲಿ ನಡೆಯಲಿರು ಬಿಜೆಪಿ ವಿರೋಧಿ, ವಿರೋಧ ಪಕ್ಷಗಳ ಸಭೆಗೆ ಮುನ್ನ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಅವರು ಬಿಹಾರದ ನಳಂದ ಜಿಲ್ಲೆಯಲ್ಲಿ, ಕಾಶ್ಮೀರದ ಕೊನೆಯ ಮುಸ್ಲಿಂ ರಾಜ ಯೂಸುಫ್ ಶಾ ಚಾಕ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.

ಸಂಪೂರ್ಣ ಶಿಥಿಲವಾಗಿರುವ “ಇತಿಹಾಸದ ಅವಶೇಷಗಳನ್ನು” ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿದರು.

ಪಿಡಿಪಿ ನಾಯಕಿ ಇಂದು (ಜೂನ್ 22) ಬಿಸ್ವಾಕ್ ಗ್ರಾಮದ ಕಾಶ್ಮೀರ ಚಾಕ್‌ಗೆ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಅವರು ಸಮಾಧಿ ಸ್ಥಳದಲ್ಲಿ ಖುರಾನ್ ಪದ್ಯಗಳನ್ನು ಪಠಿಸುವ ಮೂಲಕ ನಮನ ಸಲ್ಲಿಸಿದರು. ಮತ್ತು ರಾಜ ಯೂಸುಫ್ ಶಾ ಚಾಕ್ ಮತ್ತು ಅವರ ಕುಟುಂಬ ಸದಸ್ಯರ ಸ್ಮಶಾನದಲ್ಲಿ ಚಾದರ್ ಪೋಶಿ (ಶೀಟ್ ಅರ್ಪಣೆ) ಮಾಡಿದರು.

ನಂತರ ಇದರ ಬಗ್ಗೆ ಟ್ವೀಟ್ ಮಾಡಿರುವ ಅವರು, “ಬಿಹಾರದ ಯೂಸುಫ್ ಶಾ ಚಾಕ್ ಅವರ ಸಮಾಧಿಗೆ ನಮನ ಸಲ್ಲಿಸಲಾಯಿತು. ಕಾಶ್ಮೀರದ ಕೊನೆಯ ಮುಸ್ಲಿಂ ಆಡಳಿತಗಾರನಾಗಿ, ಅವರ ವಿಶ್ರಾಂತಿ ಸ್ಥಳವು ಕಾಶ್ಮೀರ ಮತ್ತು ಬಿಹಾರ ನಡುವಿನ ಸಂಬಂಧವನ್ನು ಸಂಕೇತಿಸುತ್ತದೆ. ದುರದೃಷ್ಟವಶಾತ್ ಸ್ಥಳವು ಸಂಪೂರ್ಣ ದುರಸ್ತಿ ಮತ್ತು ಅವಶೇಷಗಳಲ್ಲಿದೆ. ನಿತೀಶ್ ಕುಮಾರ್ ಜಿ, ಈ ಇತಿಹಾಸದ ಅವಶೇಷಗಳನ್ನು ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ದೇಶ ರಾಜಕೀಯ

ಬಿಹಾರದ ಹಣಕಾಸು ಸಚಿವ ವಿಜಯ್ ಚೌಧರಿ ಸಂಬಂಧಿಕರು ಹಾಗೂ ರಾಜ್ಯದ ದೊಡ್ಡ ಉದ್ಯಮಿಯೂ ಆಗಿರುವ ಅಜಯ್ ಕುಮಾರ್ ಸಿಂಗ್ ಅವರ ಬೇಗುಸರಾಯ್ ನಿವಾಸದ ಮೇಲೆ ಇಂದು ಇಡಿ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಆದಾಯ ತೆರಿಗೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತಂಡಗಳು ಇಂದು (ಜೂನ್ 22) ಬಿಹಾರದ ಹಣಕಾಸು ಸಚಿವ ವಿಜಯ್ ಕುಮಾರ್ ಚೌಧರಿ ಅವರ ಸೋದರಮಾವ ಅಜಯ್ ಕುಮಾರ್ ಸಿಂಗ್ ಅವರ ಬೇಗುಸರಾಯ್ ಪ್ರದೇಶದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿವೆ.

ಅಜಯ್ ಸಿಂಗ್, ಅಲಿಯಾಸ್ ಕರು ಯಾದವ್, ಜೆಡಿಯು ರಾಜ್ಯ ಅಧ್ಯಕ್ಷ ಲಾಲನ್ ಸಿಂಗ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಬೇಗುಸರಾಯ್‌ನ ಶ್ರೀಕೃಷ್ಣ ಪ್ರದೇಶದಲ್ಲಿರುವ ಅಜಯ್‌ಸಿಂಗ್ ನಿವಾಸದ ಮೇಲೆ ಇಂದು ದಾಳಿ ನಡೆಸಲಾಗಿದೆ.

ಐಟಿ ಮತ್ತು ಇಡಿ ಅಧಿಕಾರಿಗಳು ಬೆಳಗ್ಗೆ 6:00 ಗಂಟೆ ಸುಮಾರಿಗೆ ಉದ್ಯಮಿಯಾಗಿರುವ ಅಜಯ್ ಕುಮಾರ್ ಸಿಂಗ್ ಮನೆಗೆ ತಲುಪಿ ದಾಳಿ ನಡೆಸಿದ್ದಾರೆ. ದಾಳಿಯ ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬೇಗುಸರೈ ಆಡಳಿತ ಮಂಡಳಿಯಿಂದ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಜೂನ್ 23ರ ವಿರೋಧ ಪಕ್ಷಗಳ ಸಭೆಗೆ ಮುನ್ನ ಕೇಂದ್ರದ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಜೆಡಿಯು ಮೂಲಗಳು ಹೇಳಿವೆ.