ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
September 2023 » Page 2 of 6 » Dynamic Leader
October 23, 2024
Home 2023 September (Page 2)
ರಾಜಕೀಯ

ಅಹಮದಾಬಾದ್: ಗುಜರಾತ್ ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಅಹಮದಾಬಾದ್ ನಗರದಲ್ಲಿ ಜನರು ಸಂಭ್ರಮದಿಂದ ಸ್ವಾಗತಿಸಿದರು.

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಇಂದು ಗುಜರಾತ್‌ಗೆ ಆಗಮಿಸಿದರು. ಅವರು ಇಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ನಂತರ ಮೋದಿ ಮೊದಲ ಬಾರಿಗೆ ಗುಜರಾತ್‌ಗೆ ಭೇಟಿ ನೀಡುತ್ತಿದ್ದಂತೆ ಅಹಮದಾಬಾದ್‌ನಲ್ಲಿ ಬೃಹತ್ ವಾಹನ ಮೆರವಣಿಗೆ ನಡೆಸಲಾಯಿತು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ರಸ್ತೆಯುದ್ದಕ್ಕೂ ಮಹಿಳೆಯರು ಉತ್ಸಾಹದಿಂದ ಮೋದಿ ಅವರನ್ನು ಸ್ವಾಗತಿಸಿದರು. ನಂತರ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿಯರು ಪ್ರಧಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಮಹಿಳಾ ಮೀಸಲಾತಿ ಮಸೂದೆ ನಾನು ನಿಮಗೆ ನೀಡಿದ ಉಡುಗರೆ” ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು!

ರಾಜಕೀಯ

ಮೈಸೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕಾವೇರಿ ವಿಷಯವನ್ನು ರಾಜಕೀಯಗೊಳಿಸುತ್ತಿರುವುದು ಸ್ವಂತ ಲಾಭಕ್ಕೆ ಹೊರತು ಜನರ ಹಾಗೂ ನಾಡಿನ ಹಿತದೃಷ್ಟಿಯಿಂದ ಅಲ್ಲ ಎಂದು ಇಂದು (ಸೆ.26) ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.  

ಬಂದ್ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ನ್ಯಾಯಾಲಯ ಯಾವುದೇ ಸಭೆ, ಮೆರವಣಿಗೆಯನ್ನು ನಡೆಸಬಾರದು, ಪ್ರತಿಭಟನೆ ಮಾಡಬಾರದು ಎಂದು ಹೇಳಿದೆ. ನಾವು ನಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವಾಗ ಇತರರ ಮೂಲಭೂತ ಹಕ್ಕುಗಳನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.

ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಆದೇಶ ಮಾಡಲಾಗಿದೆ. ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಡಿಎಂಕೆ ‘ಬಿ ಟೀಮ್’ ಎಂಬ ಬಿಜೆಪಿ ಆರೋಪ ರಾಜಕೀಯಪ್ರೇರಿತವಾದುದ್ದು. ಡಿಎಂಕೆ ತಮಿಳುನಾಡಿನವರು. ಬಿಜೆಪಿ ಪಕ್ಷ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅವರನ್ನು ಏನೆಂದು ಹೇಳಬೇಕು? ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸಂತೋಷದ ವಿಷಯ. ಅದನ್ನು ನಾನು ಸ್ವಾಗತಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಸುಳ್ಳು ಎಂದರು.

ಇದನ್ನೂ ಓದಿ: ಕಾವೇರಿ ಜಲ ನಿಯಂತ್ರಣ ಸಮಿತಿ ಆದೇಶ ಕನ್ನಡಿಗರ ಪಾಲಿಗೆ ಮರಣಶಾಸನ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರ ಈ ರಾಜ್ಯದ ರೈತರ ಹಾಗೂ ರಾಜ್ಯದ ಹಿತರಕ್ಷಣೆಗೆ ಯಾವತ್ತೂ ಹಿಂದೆ ಬಿದ್ದಿಲ್ಲ; ಬೀಳುವುದೂ ಇಲ್ಲ. ನಮಗೆ ಅಧಿಕಾರ ಮುಖ್ಯವಲ್ಲ; ರಾಜ್ಯದ ಜನರ ಹಿತ ಮುಖ್ಯ. ಇದರಲ್ಲಿ ನಾವು ಬಲವಾದ ನಂಬಿಕೆ ಇಟ್ಟುಕೊಂಡಿರುವವರು. ಜನರು ಬಂದ್ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಬಂದ್, ಮೆರವಣಿಗೆ, ಪ್ರತಿಭಟನೆ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಪ್ರತಿಭಟನೆ ಮಾಡುವವರು ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಸಂಕಷ್ಟ ಸೂತ್ರ ರೂಪಿಸಲು ನಾವು ಒತ್ತಡ ಹೇರುತ್ತಿದ್ದೇವೆ. ಏಕೆಂದರೆ, ಮಳೆ ಕೈಕೊಟ್ಟ ಸಂದರ್ಭದಲ್ಲಿ ಎರಡೂ ಕಡೆ ಸಂಕಷ್ಟ ಶುರುವಾಗುತ್ತದೆ. ಅಂಥ ಸಂದರ್ಭದಲ್ಲಿ ನಾವು ಸಂಕಷ್ಟ ಹಂಚಿಕೊಳ್ಳಬೇಕು. ಇಂತಹ ಸನ್ನಿವೇಶದಲ್ಲಿ ನೀರು ಹಂಚಿಕೆಯ ವಿಚಾರದಲ್ಲಿ ಸಂಕಷ್ಟ ಸೂತ್ರವಿರಬೇಕು. ಮತ್ತೊಂದು ಪರಿಹಾರವೆಂದರೆ, ಮೇಕೆದಾಟು ಯೋಜನೆ ಅನುಷ್ಠಾನ. ಈ ಜಲಾಶಯವಿದ್ದಿದ್ದರೆ 67 ಟಿಎಂಸಿ ನೀರು ಇರುತ್ತಿದ್ದು, ಅಲ್ಲಿ ನೀರಿದ್ದರೆ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತಿತ್ತು. ಈ ಜಲಾಶಯದಿಂದ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು ಎಂಬುದನ್ನು ಒತ್ತಿ ಹೇಳಿದರು.

ಕೇಂದ್ರದ ತಜ್ಞರು ರಾಜ್ಯದಲ್ಲಿ ಕಾವೇರಿ ನೀರಿನ ಲಭ್ಯತೆಯನ್ನು ವಾಸ್ತವವಾಗಿ ಪರಿಶೀಲಿಸುವ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಜನತಾದಳದ ವರಿಷ್ಠರಾದ ದೇವೇಗೌಡರು, ಈ ಬಗ್ಗೆ ಭೇಟಿಯಾಗಿದ್ದು, ಕೇಂದ್ರದೊಂದಿಗೆ ಅವರ ಹೊಸ ಸ್ನೇಹದಿಂದ ಪರಿಹಾರ ದೊರೆಯಬಹುದೇ ನೋಡಬೇಕಿದೆ. ರಾಜ್ಯ ಸರ್ಕಾರ ಪರಿಹಾರ ಸೂತ್ರ ಕೋರಿ ಬರೆದಿರುವ ಪತ್ರಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಿಜೆಪಿಯ 25 ಸಂಸದರು ಪ್ರಧಾನಿಯವರ ಮೇಲೆ ಒತ್ತಡ ಹೇರಿ, ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.

ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡಬೇಕಾದ ಪ್ರಮಾಣದ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಸಂಕಷ್ಟದ ಸಮಯದಲ್ಲಿ ಆ ರಾಜ್ಯಕ್ಕೆ ನೀರು ಬಿಡುವ ಪ್ರಮಾಣ ತಿಳಿಸುವ ಸಂಕಷ್ಟ ಸೂತ್ರ ಇನ್ನೂ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಸೌಹಾರ್ದ ಇತ್ಯರ್ಥಕ್ಕೆ ಬರುವುದೇ ಉತ್ತಮ. ಆದ್ದರಿಂದ ಕಾವೇರಿ ವಿವಾದದ ಇತ್ಯರ್ಥಕ್ಕೆ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು. ಕಾವೇರಿ ವಿಷಯದ ವಾದಮಂಡನೆಗೆ ಮೊದಲಿನಿಂದಲೂ ಇರುವ ಕಾನೂನೂ ತಂಡವೇ ಈಗಲೂ ಇದ್ದು, ಎಲ್ಲ ಪಕ್ಷದ ಸರ್ಕಾರದ ಅವಧಿಯಲ್ಲಿ ಇದ್ದ ತಂಡವೇ ಆಗಿದೆ ಎಂದು ಪ್ರತಿಕ್ರಿಯಿಸಿದರು.

ರಾಜಕೀಯ

ಬೆಂಗಳೂರು: ಕರ್ನಾಟಕದ ನಿರಂತರ ಹೋರಾಟ, ಬಂದ್‌ ನಡುವೆಯೂ ದೆಹಲಿಯ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದೆ. 18 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಿಳಿಸಿದೆ. ಈ ಹಿನ್ನಡೆಗೆ ಕಾಂಗ್ರೆಸ್ ಸರ್ಕಾರ ಕಾರಣವೆಂದು ಮಾಜಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3000 ಕ್ಯೂಸೆಕ್ಸ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ; ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ಕಾಂಗ್ರೆಸ್ ಸರಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ

‘ಕೆಆರ್ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ’ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ‘ನಮ್ಮಲ್ಲಿ ನೀರೇ ಇಲ್ಲ’ ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು ‘ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ’ ಎನ್ನುತ್ತಾರೆ. ‘ಎತ್ತು ಏರಿಗೆ, ಕೋಣ ನೀರಿಗೆ’ ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ನಾವು ಕುಡಿಯಲು ನೀರು ಕೇಳುತ್ತಿದ್ದೇವೆ, ತಮಿಳುನಾಡು ಅಕ್ರಮವಾಗಿ ಮಿತಿಮೀರಿದ ವಿಸ್ತೀರ್ಣದಲ್ಲಿ ಬೆಳೆದ ‘ಕುರುವೈ’ ಬೆಳೆಗೆ ನೀರು ಕೇಳುತ್ತಿದೆ. ಅಲ್ಲಿ ಸ್ವಾರ್ಥ ಇದೆ; ಇಲ್ಲಿ ಜನರ ಬದುಕಿದೆ. ಮಾನವೀಯ ನ್ಯಾಯಕ್ಕೆ ವಿರುದ್ಧವಾದ ತಮಿಳುನಾಡು ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆ ರಾಜ್ಯದ ಇಂಥ ಮನಃಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಮಾಡುವ ಇಚ್ಛಾಶಕ್ತಿ ಈ ಸರ್ಕಾರಕ್ಕೆ ಇಲ್ಲದಾಗಿದೆ. ಕೇವಲ ಪಾಲುದಾರ ಪಕ್ಷ ಡಿಎಂಕೆಯ ಯೋಗಕ್ಷೇಮವನ್ನೇ ಕೈ ಸರಕಾರ ನೋಡುತ್ತಾ, ಕರ್ನಾಟಕದ ಹಿತವನ್ನು ಸಂಪೂರ್ಣ ಬಲಿ ಕೊಟ್ಟಿದೆ. ಕನ್ನಡಿಗರ ಮೇಲೆ ‘ಬಂಡೆ’ ಎಳೆದಿದೆ ಎಂದು ಆಡಳಿತ ರೂಢ ಡಿಎಂಕೆ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈಗಾಗಲೇ ಕಾವೇರಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಅಖೈರುಗೊಳಿಸಿದ್ದು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸಂಕಷ್ಟ ಕಾಲದಲ್ಲಿ ಪರಿಹಾರವೇನು? ಮಾತೆತ್ತಿದರೆ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) & ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಈ ಕೂಡಲೇ ‘ಸಂಕಷ್ಟ ಹಂಚಿಕೆ ಸೂತ್ರ’ವನ್ನು ರೂಪಿಸಲೇಬೇಕು. ಆ ನಿಟ್ಟಿನಲ್ಲಿ ಸರ್ಕಾರ ಒತ್ತಡ ಹೇರಿ, ಆ ಸೂತ್ರ ರೂಪಿಸದ ಹೊರತು ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಲೇಬೇಕು. ಯಾವುದೇ ಕಾರಣಕ್ಕೂ ಈಗ ನೀರು ಹರಿಸಬಾರದು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಜಕೀಯ

ಚೆನ್ನೈ: ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಸಿಎಜಿ ಬಿಡುಗಡೆ ಮಾಡಿದ “7.5 ಲಕ್ಷ ಕೋಟಿ ರೂಪಾಯಿ ಅಕ್ರಮಗಳು ಹಾಗೂ ಪ್ರಧಾನಿಯ ಮೌನ” ಎಂಬ ಶೀರ್ಷಿಕೆಯಡಿ ಇಂದು (ಶನಿವಾರ) ಬಿಡುಗಡೆಯಾದ ‘ಸ್ಪೀಕಿಂಗ್ ಫಾರ್ ಇಂಡಿಯಾ’ ‘ಪಾಡ್‌ಕಾಸ್ಟ್’ ಸರಣಿಯ ಎರಡನೇ ಸಂಚಿಕೆಯಲ್ಲಿ ಹೇಳಿರುವುದು:

“ಈ ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್‌ನ ಮೊದಲ ಸಂಚಿಕೆಯ ನಂತರ, ‘ಕರುಣಾನಿಧಿ ಮಹಿಳಾ ಹಕ್ಕುಭತ್ಯೆ ಯೋಜನೆ’ ಮತ್ತು ಡಿಎಂಕೆ ಪಕ್ಷದ ‘ಅಮೃತ್ ಮಹೋತ್ಸವ’ ಪ್ರಾರಂಭ ಇತ್ಯಾದಿಗಳನ್ನು ಮುಗಿಸಿಕೊಂಡು ಈಗ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಕರುಣಾನಿಧಿ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಪ್ರಾರಂಭಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಒಂದು ಪೋಸ್ಟನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಒಬ್ಬ ತಾಯಿ ಪ್ರಶ್ನಿಸುತ್ತಿರುವ ಪೋಸ್ಟ್ ಅದು. “ನಮ್ಮ ಮುಖ್ಯಮಂತ್ರಿ ಹೇಳಿದ ಸಾವಿರ ರೂಪಾಯಿ ಬಂದಾಯ್ತು, ಪ್ರಧಾನಿ ಹೇಳಿದ 15 ಲಕ್ಷ ಏನಾಯ್ತು? ಎಂಬುದಾಗಿದೆ. ಇದು ತಮಿಳುನಾಡಿನಲ್ಲಿ ವೈರಲ್ ಆಗಿದೆ.

ನಮ್ಮ ದೇಶ ಮತ್ತು ದೇಶದ ಜನರು, ಮತ್ತೆ ಬಿಜೆಪಿಯಿಂದ ಮೋಸ ಹೋಗಬಾರದು ಎಂಬುದಕ್ಕಾಗಿಯೇ ನಾನು ಈ ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್ ಸರಣಿಯನ್ನು ಪ್ರಾರಂಭಿಸಿದ್ದೇನೆ. 2014ರಲ್ಲಿ ಮೋಸ ಹೋದಂತೆ; 2019ರಲ್ಲಿ ಮೋಸ ಹೋದಂತೆ, 2024ರಲ್ಲಿ ದೇಶ ಮೋಸ ಹೋಗಬಾರದು. 2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು, ಗುಜರಾತ್ ರಾಜ್ಯವನ್ನು ಅಭಿವೃದ್ಧಿಪಡಿಸಿ, ಅಲ್ಲಿ ಜೇನಿನ ನದಿ – ಹಾಲಿನ ನದಿಯೆಲ್ಲ ಹರಿಯುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಅದರ ಮೂಲಕ ತನ್ನನ್ನು ಅಭಿವೃದ್ಧಿಯ ನಾಯಕನಾಗಿ ಬಿಂಬಿಸಿಕೊಂಡವರು ಪ್ರಧಾನಿ ನರೇಂದ್ರ ಮೋದಿ.

ಗುಜರಾತ್ ಮಾದರಿ

‘ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ಭಾರತವನ್ನು ಆಳಿದೆ, ನನಗೆ 60 ತಿಂಗಳು ಕೊಡಿ; ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇನೆ’ ಎಂದು ಮೋದಿ ಹೇಳಿದರು. ಅವರಿಗೆ 60 ತಿಂಗಳು ಮಾತ್ರವಲ್ಲ ಹೆಚ್ಚುವರಿಯಾಗಿ, ಇನ್ನೂ 60 ತಿಂಗಳು ಆಳುವ ಅವಕಾಶವನ್ನು ಭಾರತದ ಜನರು ನೀಡಿದರು. ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದರೇ? ಎಂಬುದನ್ನು ಅವರೇ ಉತ್ತರಿಸಬೇಕಾದ ಪ್ರಶ್ನೆಯಾಗಿದೆ. ಅವರು ಭಾರತವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ಪಟ್ಟಿ ಮಾಡಲು ಅವರಿಂದ ಸಾಧ್ಯವೇ?

ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ನನಗೆ 5 T-ಯೇ ಮುಖ್ಯ ಎಂದು ಹೇಳಿದರು. (Talent-ಪ್ರತಿಭೆ, Trading-ವ್ಯಾಪಾರ, Tradition-ಸಂಪ್ರದಾಯ, Tourism-ಪ್ರವಾಸೋದ್ಯಮ, Technology-ತಂತ್ರಜ್ಞಾನ) ಆದರೆ, ಈ 5 T ಗಳಲ್ಲಿ ಯಾವುದರಲ್ಲೂ ಅವರು ಸಾಧನೆ ಮಾಡಲಿಲ್ಲ?

ನನ್ನ ಪ್ರಕಾರ ಈ ಕೆಳಕಂಡ 5 C ಗಳನ್ನು ಒಳಗೊಂಡಂತೆಯೇ ಇಂದಿನ ಬಿ.ಜೆ.ಪಿ ಸರ್ಕಾರವಿದೆ. Communalism-ಕೋಮುವಾದ, Corruption-ಭ್ರಷ್ಟಾಚಾರ, Corporate Capitalism-ಕಾರ್ಪೊರೇಟ್ ಬಂಡವಾಳಶಾಹಿ, Cheating-ವಂಚನೆ, Character Assassination-ಪಾತ್ರ ಹತ್ಯೆ. ಈ ಸರ್ಕಾರವನ್ನು ಹೀಗೆಯೇ ಕರೆಯಬೇಕು. ಬಿಜೆಪಿ ಇಲ್ಲಿಯವರೆಗೆ ಇದನ್ನು ಜಾಹೀರಾತು ಎಂಬ ಬೆಳಕಿನ ಮೂಲಕ ಮರೆಮಾಡಿ ಇಟ್ಟಿತ್ತು. ಆದರೆ ಈಗ ರೂಪುಗೊಂಡಿರುವ ‘ಇಂಡಿಯಾ ಮೈತ್ರಿಕೂಟ’ ಹಾಗೂ ಇಂಡಿಯಾ ಮೈತ್ರಿ ಕೂಟದ ನಾಯಕರ ಅಬ್ಬರದ ಪ್ರಚಾರ, ಬಿಜೆಪಿ ಪಕ್ಷದ ಮುಖವಾಡವನ್ನು-ಪ್ರಧಾನಿ ನರೇಂದ್ರ ಮೋದಿಯವರ ಬಿಂಬವನ್ನು ಹರಿದುಹಾಕಿದೆ.

ಇಂಡಿಯಾ ಮೈತ್ರಿಕೂಟ

ಇದನ್ನು ನಾವು ರಾಜಕೀಯಕ್ಕಾಗಿ ಹೇಳುತ್ತಿಲ್ಲ. ನಿಜವಾದ ಅಂಕಿಅಂಶಗಳನ್ನು ಆಧರಿಸಿಯೇ ಹೇಳುತ್ತಿದ್ದೇವೆ. ಇದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಇಂಡಿಯಾ ಮೈತ್ರಿಕೂಟವನ್ನು ಭ್ರಷ್ಟರ ಮೈತ್ರಿಕೂಟ ಎಂದು ಆರೋಪಿಸುತ್ತಿರುವ ಮೋದಿ ಅವರೇ! ನಿಮ್ಮ ಆಡಳಿತದ ಬಗ್ಗೆ ಸಿಎಜಿ ವರದಿ ಏನು ಹೇಳುತ್ತದೆ ಎಂಬುದನ್ನು ನೀವು ಓದಿದ್ದೀರಾ? ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಿದ್ದೀರಾ? ಕನಿಷ್ಠ ಇದರ ಬಗ್ಗೆ ಉತ್ತರವನ್ನಾದರೂ ನೀಡಿದ್ದಿರಾ? ಅಯೋಧ್ಯೆ ಯೋಜನೆಯಲ್ಲಿಯೂ ಭ್ರಷ್ಟಾಚಾರ ಮಾಡಿದ ಪಕ್ಷ ಬಿಜೆಪಿ ಎಂದು ಸಿಎಜಿ ವರದಿ ಹೇಳಿದೆ.

ರಾಮಾಯಣ ನಡೆದ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಪ್ರವಾಸ ಯೋಜನೆಯೊಂದನ್ನು ಪ್ರಾರಂಭಿಸಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಗೋವಾ ಮತ್ತು ತೆಲಂಗಾಣ ಮುಂತಾದ 6 ರಾಜ್ಯಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆ ಅನುಷ್ಠಾನದಲ್ಲಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ ಎಂದು ಸಿಎಜಿ ಆರೋಪ ಮಾಡಿದೆ. ಗುತ್ತಿಗೆ ನೀಡಿಕೆಯಲ್ಲಿ ಯಾವ ರೀತಿಯ ಉಲ್ಲಂಘನೆಗಳಾಗಿವೆ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ.

ಬಿಜೆಪಿ ಘೋಷಿಸಿದ್ದನ್ನು ಈಡೇರಿಸುವುದಿಲ್ಲ ಎಂಬುದಕ್ಕೆ ಸಿಎಜಿ ವರದಿಯು ಒಂದು ಉದಾಹರಣೆಯನ್ನು ಉಲ್ಲೇಖಿಸಿದೆ. ಅದುವೇ ಉಡಾನ್ ಯೋಜನೆ. ಈ ಯೋಜನೆಯನ್ನು ಬಹಳ ಸಂಭ್ರಮದಿಂದ ಪ್ರಾರಂಭಿಸಲಾಯಿತು. ಬಡವರು ವಿಮಾನದಲ್ಲಿ ಪ್ರಯಾಣಿಸಬಹುದು, ಮಧ್ಯಮ ನಗರಗಳಲ್ಲೂ ವಿಮಾನ ನಿಲ್ದಾಣ ಸ್ಥಾಪಿಸಲಿದ್ದೇವೆ ಎಂದು ಹೇಳಿ ಈ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಿದರು. ಉಡಾನ್ ಯೋಜನೆಗಾಗಿ ಕೇಂದ್ರ ಸರ್ಕಾರ 1,089 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು. ಯೋಜಿತ 774 ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು, ಅದು ಈಗ ಕೇವಲ 7% ಮಾರ್ಗಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. 93% ಮಾರ್ಗಗಳು ಕಾರ್ಯನಿರ್ವಹಿಸುತ್ತಿಲ್ಲ.

ಉಡಾನ್ ಯೋಜನೆ

ಉದಾಹರಣೆಗೆ, ತಮಿಳುನಾಡಿನಲ್ಲಿ, ಉಡಾನ್ ಯೋಜನೆಯಡಿ ಸೇಲಂ, ತಂಜಾವೂರು, ರಾಮನಾಥಪುರಂ ಮತ್ತು ವೆಲ್ಲೂರು ನಗರಗಳಿಗೆ ವಿಮಾನ ಸೇವೆಗಳನ್ನು ಪರಿಚಯಿಸಲು ಯೋಜಿಸಲಾಗಿತ್ತು. ಆದರೆ, ಈ 4 ಯೋಜಿತ ನಗರಗಳಲ್ಲಿ, ಸೇಲಂ ಮಾತ್ರ ಉಡಾನ್ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದನ್ನೂ ಈಗ ಕಡಿತಗೊಳಿಸಲಾಗಿದೆ. ಒಟ್ಟು 774 ಯೋಜಿತ ಮಾರ್ಗಗಳ ಪೈಕಿ 720 ಮಾರ್ಗಗಳು ಕಾರ್ಯನಿರ್ವಹಿಸಿಲ್ಲ ಎಂದು ಸಿಎಜಿ ವರದಿ ಹೇಳುತ್ತದೆ.

2021-22 ರಲ್ಲಿ, ರೈಲ್ವೆ ವಲಯವು 100 ರೂಪಾಯಿಗಳ ಆದಾಯವನ್ನು ಗಳಿಸಲು 107 ರೂಪಾಯಿಗಳನ್ನು ಖರ್ಚು ಮಾಡುತ್ತಿದೆ, ಹೀಗಾಗಿ ಭಾರತೀಯ ರೈಲ್ವೆಯ ಆರ್ಥಿಕ ಸ್ಥಿತಿಯು ಆತಂಕಕಾರಿಯಾಗಿ ಪರಿಣಮಿಸಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಜಾಹೀರಾತುಗಳ ಮೂಲಕ ಬಿಜೆಪಿ ಸರ್ಕಾರ ಸುಳ್ಳು ಚಿತ್ರಣ ನಿರ್ಮಿಸಿದೆ ಎಂದು ನಾವು ಆಗಾಗ್ಗೆ ಹೇಳುತ್ತಿರುತ್ತೇವೆ. ಆ ಜಾಹೀರಾತುಗಳಿಗೆ ಅವರು ಏನು ಮಾಡಿದ್ದಾರೆ ಗೊತ್ತಾ? 2017 ರಿಂದ 2021 ರವರೆಗೆ ಕೇಂದ್ರ ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳಲ್ಲಿ ಮಂಜೂರಾದ ಹಣವನ್ನು ಕೇಂದ್ರ ಸರ್ಕಾರದ ಜಾಹೀರಾತಿಗೆ ಬಳಸಿರುವುದು ಈಗ ಬಯಲಾಗಿದೆ.

ಈ ಎಲ್ಲ ಅಕ್ರಮಗಳಿಗಿಂತ ದೊಡ್ಡ ಅಕ್ರಮವೆಂದರೆ ಅದು ಟೋಲ್ ಪ್ಲಾಜಾ ಅಕ್ರಮ. ಪ್ರಯಾಣಿಸುವ ಸಾರ್ವಜನಿಕರಿಂದ ಟೋಲ್ ಪ್ಲಾಜಾ ಮೂಲಕ ಪ್ರತಿ ದಿನವೂ ಅಕ್ರಮ ವಸೂಲಿ ನಡೆದಿರುತ್ತದೆ. ಕೇವಲ 5 ಟೋಲ್ ಪ್ಲಾಜಾಗಳನ್ನು ಮಾತ್ರ ಲೆಕ್ಕಪರಿಶೋಧನೆ ಮಾಡಿದಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾಹನ ಚಾಲಕರಿಂದ 132 ಕೋಟಿ 5 ಲಕ್ಷ ರೂಗಳನ್ನು ವಸೂಲಿ ಮಾಡಿದೆ ಎಂದು ಸಿಎಜಿ ವರದಿ ಆರೋಪಿಸಿದೆ. ಹಾಗೇ ನೋಡಿದರೆ, ಭಾರತದಾದ್ಯಂತ ಎಷ್ಟು ಟೋಲ್ ಪ್ಲಾಜಾಗಳಿವೆ? ಅದರ ಮೂಲಕ ಎಷ್ಟು ಲಕ್ಷ ಕೋಟಿ ರೂಪಾಯಿ ಅಕ್ರಮವಾಗಿ ಸಂಗ್ರಹವಾಗಿರುತ್ತದೆ ಎಂದು ಲೆಕ್ಕ ಮಾಡಿ?

ಟೋಲ್ ಪ್ಲಾಜಾ

ದೇಶಾದ್ಯಂತ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಸಂಪರ್ಕಿಸಲು 2015ರಲ್ಲಿ ‘ಭಾರತಮಾಲಾ’ ಎಂಬ ಯೋಜನೆಯನ್ನು ತಂದರು. ಅದರಲ್ಲಿ ಪ್ರತಿ ಕಿಲೋಮೀಟರ್ ಗೆ 15 ಕೋಟಿ 37 ಲಕ್ಷ ರೂಪಾಯಿ ಎಂಬುದನ್ನು ಬದಲಿಸಿ, 32 ಕೋಟಿ 17 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ 8 ವರ್ಷಗಳ ಅವಧಿಯಲ್ಲಿ ಕೇವಲ 13,000 ಕಿ.ಮೀ ರಸ್ತೆಗಳನ್ನು ಮಾತ್ರ ಹಾಕಲಾಗಿದೆ. ಇನ್ನೂ ಶೇ.40 ರಷ್ಟು ಕೆಲಸಗಳು ಪೂರ್ಣಗೊಂಡಿಲ್ಲ. “ಭಾರತಮಾಲಾ ಪರಿಯೋಜನೆ-1 ರಲ್ಲಿಯೂ ಅಕ್ರಮ ನಡೆದಿದೆ. ಅದೇ ರೀತಿ, “ದ್ವಾರಕಾ ಎಕ್ಸ್‌ಪ್ರೆಸ್‌ವೇ” ಯೋಜನೆ. “ಭಾರತಮಾಲಾ ಪರಿಯೋಜನೆ-1 ರಲ್ಲಿಯೂ ಅಕ್ರಮ ನಡೆದಿದೆ. ಯೋಜಿತ ಮೊತ್ತಕ್ಕಿಂತ 1,278 ಪಟ್ಟು ಹೆಚ್ಚು ಖರ್ಚು ಮಾಡಲಾಗಿದೆ.

ಭಾರತದಲ್ಲೇ ಪ್ರಪ್ರಥಮವಾಗಿ ತಮಿಳುನಾಡಿನಲ್ಲಿ 2009ರಲ್ಲಿ ‘ಕಲೈಜ್ಞರ್ ವಿಮಾ ಯೋಜನೆ’ ಯನ್ನು ಜಾರಿಗೆ ತರಲಾಯಿತು. ಸುಮಾರು 9 ವರ್ಷಗಳ ನಂತರ, 2018ರಲ್ಲಿ ಪ್ರಧಾನ ಮಂತ್ರಿ ಘೋಷಿಸಿದ ದೊಡ್ಡ ಯೋಜನೆಗಳಲ್ಲಿ “ಆಯುಷ್ಮಾನ್ ಭಾರತ್” ಯೋಜನೆಯೂ ಒಂದಾಗಿದೆ. ಬಡ ಕುಟುಂಬಗಳಿಗೆ 5 ಲಕ್ಷ ರೂಪಾಯಿವರೆಗೆ ವಿಮೆ ನೀಡಲಾಗುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. “ಆಯುಷ್ಮಾನ್ ಭಾರತ್” ಯೋಜನೆಯಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವನ್ನಪ್ಪಿದ ರೋಗಿಗಳಿಗೆ, ಮರಣದ ನಂತರವೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಳ್ಳು ಹೇಳಿ, ವಿಮಾ ಕ್ಲೇಮ್ ಅರ್ಜಿಗಳನ್ನು ಸ್ವೀಕರಿಸಿ, ವಿಮಾ ಮೊತ್ತವನ್ನು ನೀಡಲಾಗುತ್ತಿದೆ.

ಏಕ ಕಾಲದಲ್ಲಿ, ಒಂದೇ ರೋಗಿ ಹಲವಾರು ಆಸ್ಪತ್ರೆಗಳಲ್ಲಿ ದಾಖಲಾಗಿರುವ ಬಗ್ಗೆ ಲೆಕ್ಕ ತೋರಿಸಿವುದು, ಒಂದೇ ಆಧಾರ್ ಸಂಖ್ಯೆಯನ್ನು ಹಲವರಿಗೆ ನೀಡುವುದು, ಒಂದೇ ಪೋನ್ ನಂಬರನ್ನು ಹಲವರು ನೋಂದಣಿ ಮಾಡುವುದು, ಪೋನ್ ನಂಬರ್ ನೀಡದೆ ನೋಂದಣಿ ಮಾಡುವುದು ಮುಂತಾದ ಹಲವಾರು ಅಕ್ರಮಗಳು ನಡೆದಿರುತ್ತದೆ. ಎಷ್ಟು ಜನ, ಎಷ್ಟು ಕೋಟಿ ಎಂದು ಪ್ರತ್ಯೇಕ ಸಂಖ್ಯೆಗಳಾಗಿ ಹೇಳಿದರೆ, ಕೇಳುವವರು ಗಾಬರಿ ಗೊಳ್ಳುತ್ತಾರೆ!

ಆಯುಷ್ಮಾನ್ ಭಾರತ್

ಹೀಗೆ ಅಯೋಧ್ಯೆ ಯೋಜನೆಯಿಂದ ಹಿಡಿದು ಆಯುಷ್ಮಾನ್ ಭಾರತ್ ಯೋಜನೆಯವರೆಗೆ 7.5 ಲಕ್ಷ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ಅಂದಾಜು ಮಾಡಿದೆ. ಇದುವರೆಗೂ ಪ್ರಧಾನಿಯಾಗಲಿ, ಸಂಬಂಧಪಟ್ಟ ಕೇಂದ್ರ ಸಚಿವರಾಗಲಿ ಇದಕ್ಕೆ ಉತ್ತರಿಸಲಿಲ್ಲ; ಅವರು ಉತ್ತರಿಸಲು ಸಾಧ್ಯವೂ ಇಲ್ಲ. ಇದರಿಂದ ಜನರನ್ನು ದಿಕ್ಕು ತಪ್ಪಿಸಲು ವಿಭಿನ್ನ ರಾಜಕೀಯ ಮಾಡುತ್ತಿದ್ದಾರೆ.

ಆದರೆ ಬಡವರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ, ಪ್ರಧಾನಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಈಗ ದೇಶದ ಜನತೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಭಾರತದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಇದರ ಸಂಕೇತವಾಗಿದೆ.

2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು. ಬಿಜೆಪಿಯ ಕೋಮುವಾದ-ಭ್ರಷ್ಟ-ಕಾರ್ಪೊರೇಟ್ ರಾಜಕಾರಣವನ್ನು ಕೊನೆಗಾಣಿಸಲು ಭಾರತದ ಎಲ್ಲಾ ಜನರು ಒಂದೇ ಧ್ವನಿಯಾಗಿ ಗಟ್ಟಿ ನಿಲ್ಲಬೇಕು. ನಮ್ಮ ವಿಶಾಲ ಭಾರತ ದೇಶವನ್ನು ಉಳಿಸುವ ಕರ್ತವ್ಯ ನಮ್ಮೆಲ್ಲರ ಕೈಯಲ್ಲಿದೆ!

ಎಂ.ಕೆ.ಸ್ಟಾಲಿನ್ ಅವರ ಈ ಧ್ವನಿಯನ್ನು ಭಾರತದ ಧ್ವನಿಯಾಗಿ ಪ್ರತಿಯೊಬ್ಬರಿಗೂ ಕೊಂಡೊಯ್ಯಬೇಕೆಂದು ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ. ಭಾರತಕ್ಕಾಗಿ ಮಾತನಾಡುವುದನ್ನು ಮುಂದುವರಿಸೋಣ; ಭಾರತವನ್ನು ಉಳಿಸೋಣ! ಎಂದು ಹೇಳಿದ್ದಾರೆ.

ದೇಶ ರಾಜಕೀಯ

ನವದೆಹಲಿ: ದ್ವೇಷ ಭಾಷಣದಿಂದ ಪ್ರಭಾವಿತರಾದ ಬಹುಜನ ಸಾಮಾಜ ಪಾರ್ಟಿಯ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಕಾಂಗ್ರೆಸ್ ಸಂಸದ ರಾಹುಲ್ ಭೇಟಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಚರ್ಚೆಯ ಸಂದರ್ಭದಲ್ಲಿ ದೆಹಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಚಂದ್ರಯಾನ-3 ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅಡ್ಡಿಪಡಿಸುತ್ತಿದ್ದಂತೆ, ಇದರಿಂದ ಕೆರಳಿದ ರಮೇಶ್ ಬಿಧುರಿ, ಡ್ಯಾನಿಶ್ ಅವರನ್ನು ‘ಭಯೋತ್ಪಾದಕ’ ಎಂದು ಸಂಭೋಧಿಸಿದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ: ಇಸ್ರೋ

ಈ ವಿಚಾರ, ವಿವಾದ ಸೃಷ್ಟಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡ್ಯಾನಿಶ್ ಅಲಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ರಾಹುಲ್ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಇಂಡಿಯಾ ಮೈತ್ರಿಕೂಟದ ಪರವಾಗಿ ಲೋಕಸಭೆಯ ಸ್ಪೀಕರ್‌ಗೆ ಕಳುಹಿಸಿರುವ ಪತ್ರದಲ್ಲಿ, ದ್ವೇಷ ಭಾಷಣ ಮಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.  

ಬೆಂಗಳೂರು

ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಯಾವುದೇ ಸಿಗ್ನಲ್ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೋ ಹೇಳಿದೆ.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ದಕ್ಷಿಣ ಧ್ರುವವನ್ನು ಪರೀಕ್ಷಿಸಲು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ LVM3 M4 ರಾಕೆಟ್‌ನಲ್ಲಿ ಉಡಾವಣೆ ಮಾಡಿತು. ಇದು ಭೂಮಿಯ ಕಕ್ಷೆ, ಚಂದ್ರನ ಕಕ್ಷೆಯನ್ನು ದಾಟಿ, ಆಗಸ್ಟ್ 23 ರಂದು ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ 40 ದಿನಗಳ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು.

ಮುಂದಿನ 2 ಗಂಟೆಗಳ ನಂತರ ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರಬಂದಿತು. ಅದನ್ನು ವಿಕ್ರಮ್ ಲ್ಯಾಂಡರ್ ಮಗುವಿನಂತೆ ಮೇಲ್ವಿಚಾರಣೆ ಮಾಡುತಿತ್ತು. ರೋವರ್ ಅನ್ನು ಉಡಾವಣೆ ಮಾಡಿದ ದಿನ, ಚಂದ್ರನಲ್ಲಿ 14 ದಿನಗಳ (ಒಂದು ಚಂದ್ರನ ದಿನ) ನಂತರ ರಾತ್ರಿ ಮುಗಿದು, ಹಗಲು ಪ್ರಾರಂಭವಾದ ದಿನ. ಆ ದಿನವೇ ರೋವರ್ ತನ್ನ ಸಮೀಕ್ಷೆಯನ್ನು ಆರಂಭಿಸಿತು.

ಲ್ಯಾಂಡರ್‌ನಲ್ಲಿರುವ ‘ಲಿಪ್ಸ್’ ಎಂದು ಕರೆಯಲ್ಪಡುವ ‘ಸ್ಪೆಕ್ಟ್ರೋಸ್ಕೋಪ್ ಉಪಕರಣ’, ಚಂದ್ರನ ಮೇಲೆ ಸಲ್ಫರ್ ಇರುವಿಕೆಯನ್ನು ಅನುಮಾನಾಸ್ಪದವಾಗಿ ದೃಢಪಡಿಸಿತು. ತರುವಾಯ, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಸೇರಿದಂತೆ ಖನಿಜಗಳ ಉಪಸ್ಥಿತಿಯನ್ನು ರೋವರ್ ದೃಢಪಡಿಸಿತು. ಮತ್ತು ವಿವಿಧ ಕೋನಗಳಲ್ಲಿ ಲ್ಯಾಂಡರ್ ಜೊತೆಗೆ ಸೇರಿ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ವಿವಿಧ ಫೋಟೋಗಳನ್ನು ತೆಗೆದು, ಬೆಂಗಳೂರಿನ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿತು.

ಮುಂದುವರಿದು, ಚಂದ್ರನ ದಿನವು ಮುಗಿದು ಅಲ್ಲಿ ರಾತ್ರಿ ಪ್ರಾರಂಭವಾದಾಗ, ಕತ್ತಲೆಯಾದ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಮತ್ತು ಲ್ಯಾಂಡರ್ ಸಮೀಕ್ಷೆಯನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ತಿಂಗಳ ಆರಂಭದಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್ ಅನ್ನು ನಿದ್ರಾವಸ್ಥೆಯಲ್ಲಿ ಇರಿಸಲಾಯಿತು. ಇದರ ನಂತರ, ಲ್ಯಾಂಡರ್ ಅನ್ನೂ ನಿದ್ರಿಸಲಾಯಿತು. ಈ ಹಿನ್ನಲೆಯಲ್ಲಿ, ಚಂದ್ರನಲ್ಲಿ ಮೊದಲ 14 ದಿನಗಳವರೆಗೆ ಸೂರ್ಯನ ಬೆಳಕನ್ನು ಹೊಂದಿದ್ದಾಗ, ರೋವರ್‌ನ ಬ್ಯಾಟರಿಗಳನ್ನು ಸೌರ ಫಲಕಗಳಿಂದ ಚಾರ್ಜ್ ಮಾಡಲಾಗಿರುತ್ತದೆ.

ಈ ಹಿನ್ನಲೆಯಲ್ಲಿ, ಚಂದ್ರನ ದಕ್ಷಿಣ ಧ್ರುವದಲ್ಲಿರುವ ಶಿವಶಕ್ತಿ ಬಿಂದುವಿನ ಮೇಲೆ ಸೂರ್ಯನು ಬೆಳಗಿದಾಗ, ಸ್ಲೀಪಿಂಗ್ ರೋವರ್ ಮತ್ತು ಲ್ಯಾಂಡರ್ ಉಪಕರಣಗಳ ಕಾರ್ಯಾಚರಣೆಯ ಸ್ಥಿತಿಯು ಸುಧಾರಿಸುತ್ತದೆ. 14 ದಿನಗಳ ಸುದೀರ್ಘ ಚಂದ್ರನ ರಾತ್ರಿಯಲ್ಲಿ, ಚಂದ್ರನ ಪರಿಸರವು ಸುಮಾರು 200 ಡಿಗ್ರಿ ಸೆಲ್ಸಿಯಸ್‌ನ ಘನೀಕರಿಸುವ ತಾಪಮಾನದಿಂದ ಆವೃತವಾಗಿರುತ್ತದೆ. ಅಂತಹ ತೀವ್ರ ಹವಾಮಾನದಲ್ಲಿ ತಾಂತ್ರಿಕ ಉಪಕರಣಗಳು ಕೆಲಸ ಮಾಡುವುದು ಅಸಾಧ್ಯ.

ಆದ್ದರಿಂದಲೇ ಅದನ್ನು ವಿಜ್ಞಾನಿಗಳು ನಿದ್ರಾವಸ್ಥೆಯಲ್ಲಿ ಇರಿಸಿದ್ದರು. ಈ ಹಿನ್ನಲೆಯಲ್ಲಿ ಇಂದು (ಶುಕ್ರವಾರ) ಸೂರ್ಯೋದಯ ಆರಂಭವಾದಾಗ, ನಿದ್ರಾವಸ್ಥೆಯಲ್ಲಿರುವ ಲ್ಯಾಂಡರ್ ಮತ್ತು ರೋವರ್‌ಗೆ ಮತ್ತೆ ಚಾಲನೆ ನೀಡಿ, ಸಂಶೋಧನೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿತ್ತು. ಅದರಂತೆ, ವಿಕ್ರಮ್ ಲ್ಯಾಂಡರ್ ಅನ್ನು ಮತ್ತೆ ಕಾರ್ಯಗತಗೊಳಿಸಲು ಪ್ರಯತ್ನಿಸಲಾಯಿತು. ಆದರೆ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನಿಂದ ಯಾವುದೇ ಸಿಗ್ನಲ್ ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ಹೇಳಿದೆ. ಸಿಗ್ನಲ್ ಪಡೆಯುವ ಪ್ರಯತ್ನ ಮುಂದುವರಿಯಲಿದೆ ಎಂದೂ ಇಸ್ರೋ ತಿಳಿಸಿದೆ.

ರಾಜಕೀಯ

ಬೆಂಗಳೂರು: ‘ಬಾಳೆಗೊಂದು ಏಟು, ಬಾಳಿಗೊಂದು ಮಾತು’ ಎನ್ನುವ ಮಾತಿದೆ. ಸುಳ್ಳುಪೊಳ್ಳುಗಳ ಸೌಧದ ಮೇಲೆ ನಿಂತಿರುವ ಕಾಂಗ್ರೆಸ್ ಪಕ್ಷಕ್ಕೆ ಅಸತ್ಯವೇ ಅಷ್ಟೈಶ್ವರ್ಯ! ಆತ್ಮವಂಚನೆಯೇ ಅಧಿಕಾರದ ಮೂಲ ಬಂಡವಾಳ!! ಮೂರ್ಖರಿಗೆ ಎಷ್ಟು ಹೇಳಿದರೂ ಅಷ್ಟೇ, ಅರ್ಥವೇ ಆಗುವುದಿಲ್ಲ ಎಂದು ಜೆಡಿಎಸ್ ಪಕ್ಷ ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಂಡಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿ ಪಕ್ಷ ವಿಸರ್ಜನೆ ಮಾತು ಹೇಳಿದ್ದು ನಿಜ. “ನನಗೆ ಬಹುಮತದ ಸರಕಾರ ಕೊಟ್ಟರೆ 5 ವರ್ಷದಲ್ಲಿ ಪಂಚರತ್ನಗಳನ್ನು ಜಾರಿ ಮಾಡುವೆ. ಮಾತು ತಪ್ಪಿದರೆ ಮತ್ತೆಂದೂ ಬಾರಿ ಮತ ಕೇಳಲು ಬರುವುದಿಲ್ಲ, ಪಕ್ಷವನ್ನೇ ವಿಸರ್ಜಿಸುತ್ತೇನೆ” ಎಂದಿದ್ದರು. ಈ ಹೇಳಿಕೆಯ ವಿಡಿಯೋ, ಸುದ್ದಿಗಳಿವೆ ಗಮನಿಸಬಹುದು.

ಕಾಂಗ್ರೆಸ್ ಪಕ್ಷಕ್ಕೆ ಈ ಪರಿಯ ಅಜ್ಞಾನವೇ? ಪರಮಾಶ್ಚರ್ಯ!! ವರ್ಷದ ಕೂಳಿನ ಪಂಚರತ್ನಗಳಿಗೂ, ಒಪ್ಪೊತ್ತಿನ ಹರುಷದ ನಕಲಿ ಗ್ಯಾರಂಟಿಗಳಿಗೂ ಹೋಲಿಕೆಯೇ? ಎಲ್ಲರಿಗೂ ಫ್ರೀ ಫ್ರೀ ಎಂದು ಹೇಳಿ ಪಂಗನಾಮ ಹಾಕಿದ್ದು ಗೊತ್ತಿಲ್ಲದ ಸಂಗತಿಯೇ? ಎಲ್ಲಾ ಕಾಲದಲ್ಲಿಯೂ ಟೋಪಿ ಹಾಕಬಹುದು ಎನ್ನುವ ಅಹಂಕಾರವೇ?

ಇದನ್ನೂ ಓದಿ: ದೀಪಾವಳಿಯಂದು 2 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಬಹುದು: ಸುಪ್ರೀಂ ಕೋರ್ಟ್

ಕೆಟ್ಟ ದಾರಿಯಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಚಾಳಿ. ಶೆಟ್ಟರ್, ಸವದಿಯಂಥ ಬಿಜೆಪಿಗರನ್ನು ಬಲೆಬೀಸಿ ಬಿಗಿದಪ್ಪಿಕೊಂಡ ಹಸ್ತಪಕ್ಷಕ್ಕೆ, ಮೈಯ್ಯೆಲ್ಲಾ ಉರಿ ಹತ್ತಿಕೊಂಡಿದೆ. ಸ್ವಇಚ್ಛೆಯಿಂದಲೇ ಉರಿ ಇಟ್ಟುಕೊಂಡರೆ ಹೊಣೆ ಯಾರು? ಬಹುಶಃ,ಅಂಗೈಲಿ ಕೇಶವೇಕೆ ಬೆಳೆಯುತ್ತಿಲ್ಲವೆಂದು ಕೈಕೈ ಉಜ್ಜಿಕೊಳ್ಳುತ್ತಿದೆಯಾ ಕಾಂಗ್ರೆಸ್?

ಜೆಡಿಎಸ್‌ ಬಿಜೆಪಿ ಬಾಗಿಲಿಗೆ ಪದೇಪದೆ ಹೋಗುತ್ತದೆಂದು ಹಲ್ಲು ಗಿಂಜುವ ಕಾಂಗ್ರೆಸ್ಸಿಗರಿಗೆ; ಅದೇ ಬಿಜೆಪಿ ಜತೆ ಅಧಿಕಾರ ಅನುಭವಿಸಿದ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವಠಾಕ್ರೆ ಮನೆಗಳ ಸುತ್ತ ಗಿರಕಿ ಹೊಡೆಯಲು ಸಂಕೋಚವಿಲ್ಲ! ಗಂಗೆಯಲ್ಲಿ ಮಿಂದರೆ ಕಾಗೆ ಕೋಗಿಲೆ ಆಗುತ್ತದೆಯೇ ಕಾಮಾಲೆ ಕಣ್ಣಿನ ಕಾಂಗ್ರೆಸ್ಸಿಗರೇ?

ಪ್ರಜಾಪ್ರಭುತ್ವದಲ್ಲಿ ಮೈತ್ರಿ, ಹೊಂದಾಣಿಕೆ ಸಾಮಾನ್ಯ. ಆಯಾ ಸಂದರ್ಭಕ್ಕೆ ತಕ್ಕಂತೆ ಮೈತ್ರಿ ಆಗುತ್ತದೆ. ದೇಶ ವಿದೇಶದಲ್ಲೂ ಇದ್ದದ್ದೇ. ಆದರೆ, ನಮ್ಮ ಪಕ್ಷವನ್ನು ಬಿಜೆಪಿ ಬೀ ಟೀಂ ಎಂದು ಮೂದಲಿಸುವ ಕಾಂಗ್ರೆಸ್ಸಿಗೆ, ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ. ದುರದೃಷ್ಟಕ್ಕೆ ಇಂಥ ಜಾಣರೋಗಕ್ಕೆ ಮದ್ದಿಲ್ಲ!! ಎಂದು ಹೇಳಿದೆ.

ದೇಶ

ನವದೆಹಲಿ: ಪರಿಸರ ಸ್ನೇಹಿ ಪಟಾಕಿ ಸಿಡಿಸಬಹುದು; ಅದೂ ಕೂಡ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ದೀಪಾವಳಿಯನ್ನು ಪ್ರಪಂಚದಾದ್ಯಂತ ಪಟಾಕಿ ಸಿಡಿಸುವ ಮೂಲಕ ಆಚರಿಸಲಾಗುತ್ತದೆ. ಈ ರೀತಿಯಾಗಿ ಈ ವರ್ಷ ನವೆಂಬರ್ 12 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಗ್ರೆನೇಡ್ ಮತ್ತು ಬೇರಿಯಂನಿಂದ ತಯಾರಿಸಿದ ಪಟಾಕಿಗಳಿಗೆ ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನು ಆಲಿಸಿದ ಸುಪ್ರೀಂ ಕೋರ್ಟ್, ಪರಿಸರ ಸ್ನೇಹಿ ಪಟಾಕಿ ಸಿಡಿಸಬಹುದು; ಅದೂ ಕೂಡ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಬೇರಿಯಂ ಮತ್ತು ಗ್ರೆನೇಡ್‌ಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಜಾಗೊಳಿಸಿದೆ.

ಕೆಲವು ವರ್ಷಗಳಿಂದ ಕೇವಲ 2 ಗಂಟೆ ಮಾತ್ರ ಪಟಾಕಿ ಸಿಡಿಸುವ ಆದೇಶವಿದ್ದು, ಅದು ಈ ವರ್ಷವೂ ಮುಂದುವರಿದಿರುವುದರಿಂದ ದೀಪಾವಳಿಯನ್ನು ಎದುರು ನೋಡುತ್ತಿದ್ದ ಪಟಾಕಿ ಕಾರ್ಮಿಕರಿಗೆ ಇದು ದುಃಖಕ್ಕೆ ಕಾರಣವಾಗಿದೆ.

ದೇಶ ರಾಜ್ಯ

ಜನಸಂಖ್ಯೆಯ ಆಧಾರದ ಮೇಲೆ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತದೆ.

ಡಿ.ಸಿ.ಪ್ರಕಾಶ್ ಸಂಪಾದಕರು

ಜನಸಂಖ್ಯೆಯ ಆಧಾರದ ಮೇಲೆ 2026ರ ನಂತರ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ, ತಮಿಳುನಾಡು, ಕೇರಳ, ಮತ್ತು ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದಂತಹ ಉತ್ತರದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ವರದಿಯನ್ನು ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದೆ.

2026ರಲ್ಲಿ ಮತ್ತೊಮ್ಮೆ ಕ್ಷೇತ್ರದ ಮರುವಿಂಗಡಣೆ:
ಜನಸಂಖ್ಯೆಯ ಆಧಾರದ ಮೇಲೆಯೇ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ (Delimitation) ಮತ್ತು ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಆ ರೀತಿಯಲ್ಲಿ, ಪ್ರತಿ ಕ್ಷೇತ್ರವು ಸರಿಸುಮಾರು ಒಂದೇ ಸಂಖ್ಯೆಯ ಮತದಾರರನ್ನು ಹೊಂದಿದೆ ಎಂದು ಸರ್ಕಾರಗಳು ಖಚಿತಪಡಿಸುತ್ತವೆ. ಅಲ್ಲದೆ, ಜನಸಂಖ್ಯೆ ಹೆಚ್ಚಾದಂತೆ ಕ್ಷೇತ್ರಗಳನ್ನು ಸಹ ಮರುವಿಂಗಡಿಸಲಾಗುತ್ತದೆ. ಆದರೆ, ಕೇಂದ್ರ ಸರ್ಕಾರವು 1976 ರಿಂದ 2000 ರವರೆಗೆ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ, 2001ರಲ್ಲಿ, ನಿಷೇಧವನ್ನು 2026 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನಲೆಯಲ್ಲಿ, 2026ರ ನಂತರ, ಸಂಸತ್ತಿನ ಕ್ಷೇತ್ರಗಳನ್ನು ಮತ್ತೆ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆಗೊಳಿಸಲಾಗುವುದು.

ಆಘಾತಕಾರಿ ಸಂಶೋಧನಾ ವರದಿ:
ಈ ಹಿನ್ನಲೆಯಲ್ಲಿ, ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ, “ದಕ್ಷಿಣ ಭಾರತದ ರಾಜ್ಯಗಳಿಗಿಂತ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ತುಂಬಾ ವೇಗವಾಗಿದೆ. ಜನಗಣತಿಯ ಆಧಾರದ ಮೇಲೆ ಸಂಸತ್ತಿನ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಲಾಗುವುದರಿಂದ, ತುಲನಾತ್ಮಕವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕ್ಷೇತ್ರಗಳ ಸಂಖ್ಯೆಯು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ, ಜನಸಂಖ್ಯೆ ನಿಯಂತ್ರಣದಲ್ಲಿರುವ ದಕ್ಷಿಣ ರಾಜ್ಯಗಳ ಸಂಸದೀಯ ಕ್ಷೇತ್ರಗಳು ಗಣನೀಯವಾಗಿ ಕಡಿಮೆಯಾಗಲಿವೆ. ಅಂದರೆ ಈಗಿರುವ ಕ್ಷೇತ್ರಗಳಲ್ಲಿ ಭಾರಿ ನಷ್ಟವಾಗುತ್ತದೆ!” ಎಂಬ ಅಘಾತಕ್ಕಾರಿ ವರದಿಯನ್ನು ಪ್ರಕಟಿಸಿದೆ.

ಅಲ್ಲದೆ, “2026ರ ನಂತರ ಜನಸಂಖ್ಯೆಯನ್ನು ಅಂದಾಜಿಸಿ, ಅದರ ಆಧಾರದ ಮೇಲೆ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಉತ್ತರದ ರಾಜ್ಯಗಳಿಗೆ ಹೆಚ್ಚುವರಿ ಸ್ಥಾನಗಳು ಸಿಗಲಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದ ಅತಿದೊಡ್ಡ ರಾಜ್ಯವಾದ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶವು ಪ್ರಸ್ತುತ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ, ಕ್ಷೇತ್ರಗಳ ಮರು ವಿಂಗಡಣೆ ನಂತರ 11 ಹೆಚ್ಚುವರಿ ಕ್ಷೇತ್ರಗಳು ಪಡೆದು, ಒಟ್ಟು ಕ್ಷೇತ್ರಗಳ ಸಂಖ್ಯೆ 91ಕ್ಕೆ ಏರುವ ನಿರೀಕ್ಷೆಯಿದೆ. ಅಂತೆಯೇ, ಕ್ಷೇತ್ರಗಳ ಮರು ವಿಂಗಡಣೆ ನಂತರ ಅಸ್ತಿತ್ವದಲ್ಲಿರುವ ಕ್ಷೇತ್ರಗಳಿಗಿಂತ ಬಿಹಾರ ರಾಜ್ಯ 10, ರಾಜಸ್ಥಾನ 6 ಮತ್ತು ಮಧ್ಯಪ್ರದೇಶ 4 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆಯಲಿದೆ. ಅದೇ ರೀತಿ ಗುಜರಾತ್, ಹರಿಯಾಣ, ಜಾರ್ಖಂಡ್, ದೆಹಲಿ (ಕೇಂದ್ರಾಡಳಿತ ಪ್ರದೇಶ), ಛತ್ತೀಸ್‌ಗಢ ಸೇರಿದಂತೆ ಉತ್ತರದ ರಾಜ್ಯಗಳು ತಲಾ 1 ಲೋಕಸಭಾ ಸ್ಥಾನವನ್ನು ಹೆಚ್ಚುವರಿಯಾಗಿ ಪಡೆಯಲಿವೆ!

ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ:
ಅದೇ ಸಮಯದಲ್ಲಿ “ನಾವಿಬ್ಬರು ನಮಗಿಬ್ಬರು” ಎಂದು ಜನಸಂಖ್ಯಾ ನಿಯಂತ್ರಣವನ್ನು ಜವಾಬ್ದಾರಿಯುತವಾಗಿ ಜಾರಿಗೆ ತಂದ ದಕ್ಷಿಣದ ರಾಜ್ಯಗಳು ಆ ಹೊಣೆಗಾರಿಕೆಗಾಗಿಯೇ ತಕ್ಕ ಶಿಕ್ಷೆಯನ್ನು ಅನಿಭವಿಸಲಿದೆ. ಅಂದರೆ ಅಸ್ತಿತ್ವದಲ್ಲಿರುವ ಕ್ಷೇತ್ರಗಳು ಗಮನಾರ್ಹವಾಗಿ ಕಳೆದುಕೊಳ್ಳಲಿವೆ. ಅದರಲ್ಲೂ ತಮಿಳುನಾಡು ರಾಜ್ಯವು ಪ್ರಸ್ತುತ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ 2026ರ ನಂತರ ಕೇಂದ್ರ ಸರ್ಕಾರದ ಕ್ಷೇತ್ರದ ಪುನರ್ ವಿಂಗಡಣೆಯಿಂದಾಗಿ ಸುಮಾರು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕೇವಲ 31ಕ್ಕೆ ಇಳಿಯಲಿದೆ. ತಮಿಳುನಾಡಿನಂತೆ ಮತ್ತೊಂದು ದಕ್ಷಿಣದ ರಾಜ್ಯವಾದ ಕೇರಳವು ಪ್ರಸ್ತುತ 20 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ 12ಕ್ಕೆ ಕುಗ್ಗಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯಗಳು ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅದು 34ಕ್ಕೆ ಇಳಿಯಲಿದೆ. ಕರ್ನಾಟಕವೂ ಈಗಿನ 28 ರಿಂದ 2 ಸ್ಥಾನ ಕಳೆದುಕೊಂಡು 26ಕ್ಕೆ ಕುಗ್ಗುವುದೆಂದು ಊಹಿಸಲಾಗಿದೆ!” ಎಂದು ಕಾರ್ನೆಗೀ ವರದಿಯಲ್ಲಿ ಹೇಳಲಾಗಿದೆ.

‘ಸೆಂಟ್ರಲ್ ವಿಸ್ಟಾ’ ನಿರ್ಮಾಣದ ಸಮಯದಲ್ಲೇ ಎದ್ದ ವಿವಾದ:
ಇತ್ತೀಚೆಗಷ್ಟೇ `ಸೆಂಟ್ರಲ್ ವಿಸ್ಟಾ’ ಹೆಸರಿನ ನೂತನ ಸಂಸತ್ ಭವನವನ್ನು ನಿರ್ಮಿಸಿ ಪ್ರಧಾನಿ ಮೋದಿ ಉದ್ಘಾಟಿಸಿದರು. ನೂತನ ಸಂಸತ್ ಭವನ ನಿರ್ಮಾಣದ ವೇಳೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಫೋಟೋಗಳು, ವೀಡಿಯೊಗಳ ವಿವರಗಳು ವಿವಾದವನ್ನು ಹುಟ್ಟುಹಾಕಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳು ನಡೆಯುವ ಸಭಾಂಗಣದ ಆಸನಗಳು ಈಗಿರುವ ಹಳೆಯ ಸಂಸತ್ ಕಟ್ಟಡಕ್ಕಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ. ಉದಾಹರಣೆಗೆ, ಪ್ರಸ್ತುತ ಲೋಕಸಭೆಯು 543 ಸದಸ್ಯರನ್ನು ಮತ್ತು ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದೆ. ಅದರಂತೆಯೇ ಹಳೆಯ ಸಂಸತ್ ಭವನದ ಉಭಯ ಸದನಗಳ ಆಸನಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಈ ಹೊಸ ಸಂಸತ್ ಕಟ್ಟಡದ ಲೋಕಸಭೆಯಲ್ಲಿ 888 ಸ್ಥಾನಗಳು, ರಾಜ್ಯಸಭೆಯಲ್ಲಿ 384 ಸ್ಥಾನಗಳಂತೆ ಒಟ್ಟು 1272 ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಅಂದೇ ಎತ್ತಿ ತೋರಿಸಿದ ವಿರೋಧ ಪಕ್ಷಗಳು, ಸಂಸತ್ತಿನ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಿರುವುದರಿಂದ ಬಿಜೆಪಿ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಪುನರ್ ವಿಂಗಡಿಸಲು ಹೊರಟಿದೆ ಎಂದು ಅನುಮಾನ ವ್ಯಕ್ತಪಡಿಸಿತು. ನಿರ್ದಿಷ್ಟವಾಗಿ, ಕ್ಷೇತ್ರಗಳ ಮರು ವಿಂಗಡಣೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಕ್ಷೇತ್ರಗಳ ಸಂಖ್ಯೆಯಲ್ಲಿ ಹಿನ್ನಡೆ ಎದುರಿಸಬೇಕಾಗುತ್ತದೆ. ಬಿಜೆಪಿ ಪ್ರಾಬಲ್ಯವಿರುವ ಉತ್ತರ ಪ್ರದೇಶದಂತಹ ಉತ್ತರದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ದಕ್ಷಿಣ ರಾಜ್ಯದ ನಾಯಕರು ಆತಂಕಗೊಂಡಿದ್ದರು. ಈ ಹಿನ್ನಲೆಯಲ್ಲಿ ಕಾರ್ನೆಗೀ ವರದಿಯೂ ಇದನ್ನು ದೃಢಪಡಿಸಿದೆ.

ರಾಜಕೀಯ

ನವದೆಹಲಿ: ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿ ನಿಲ್ಲಬೇಕು ಎಂದು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಚಿವರು, ಸರ್ವ ಪಕ್ಷದ ಸಂಸತ್ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

“ಸಂಕಷ್ಟ ಸೂತ್ರ ಸಿದ್ಧವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯವಾಗಿ ಬೇಕಿದೆ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ. ನಮಗೆ ಆಗಸ್ಟ್ ಬಳಿಕ ಮಳೆ ಬರಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ.

ಇದನ್ನೂ ಓದಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಯರಿಗೆ ಶೇ.33 ಮೀಸಲಾತಿ: 7 ವರ್ಷ ಕಾಯಬೇಕು?

ವಾಸ್ತವ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞರು ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ. ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ.

ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ. ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ. ಹೀಗಾಗಿ ಮುಂದೆ ನಾವು ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು” ಎಂದು ಹೇಳಿದ್ದಾರೆ.