ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
October 2023 » Page 6 of 6 » Dynamic Leader
November 23, 2024
Home 2023 October (Page 6)
ದೇಶ

ಅಕ್ಟೋಬರ್ 14, 1956 ರಂದು, ಡಾ.ಬಿ.ಆರ್.ಅಂಬೇಡ್ಕರ್ ರವರು ದೀಕ್ಷಾ ಭೂಮಿಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು. ಅವರು ಮತಾಂತಗೊಂಡ ದಿನವನ್ನು “ಧಮ್ಮ ಚಕ್ರ ಪ್ರವರ್ತನ ದಿನ” ಎಂದು ಆಚರಿಸಲಾಗುತ್ತದೆ.

ಈ ಹಿನ್ನಲೆಯಲ್ಲಿ ಅಮೆರಿಕಾದಲ್ಲಿ, ಅಕ್ಟೋಬರ್ 14 ರಂದು ಮೇರಿಲ್ಯಾಂಡ್ ಅಕ್ಕೋಕೀಕ್ (Accokeek) ಪ್ರದೇಶದ 13 ಎಕರೆ ಜಾಗದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ (AIC) “ಸಮಾನತೆಯ ಪ್ರತಿಮೆ” (Statue of Equality) ಎಂದು ಹೆಸರಿಸಲಾದ 19 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಿದ್ದಾರೆ.

ಈ ಪ್ರತಿಮೆಯನ್ನು ಭಾರತದ ಗುಜರಾತ್ ರಾಜ್ಯದಲ್ಲಿ “ಏಕತೆಯ ಪ್ರತಿಮೆ” (Statue of Unity) ಎಂಬ ಹೆಸರಿನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ (Ram Sutar) ಈ ವಿಗ್ರಹವನ್ನೂ ರಚಿಸಿದ್ದಾರೆ.

ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಸಮಾರಂಭಕ್ಕೆ ವಿಶ್ವದಾದ್ಯಂತ ಹಲವು ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

ದೇಶ

ಜಿಲ್ಲಾಧಿಕಾರಿ ಅರವಿಂದ್ ವಿಜಯನ್ ಅವರು ಗುಜರಾತ್‌ನ ಪಟಾನ್ ಜಿಲ್ಲೆಯ ಕನೋಸನ್ ಗ್ರಾಮದ ಎಲ್ಲಾ 436 ಕುಟುಂಬಗಳ ಪಡಿತರ ಚೀಟಿಗಳನ್ನು ಎಡ್ಲಾ ಗ್ರಾಮದ ನ್ಯಾಯಬೆಲೆ ಅಂಗಡಿಗೆ (FPS) ಸೆಪ್ಟೆಂಬರ್‌ನಲ್ಲಿ ವರ್ಗಾಯಿಸಿದ್ದಾರೆ.

ಕಾಂತಿ ಪರ್ಮಾರ್‌ ಎಂಬ ದಲಿತ, ಕಳೆದ 30 ವರ್ಷಗಳಿಂದ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷಗಳ ಹಿಂದೆ ಗ್ರಾಮದ ಮೇಲ್ವರ್ಗದ ಮುಖಂಡರೊಬ್ಬರ ಪಡಿತರ ಚೀಟಿ ಅಮಾನ್ಯವಾಗಿತ್ತು ಎಂಬ ಕಾರಣಕ್ಕಾಗಿ, ಪಡಿತರ ನಿರಾಕರಿಸಿದ ನಂತರ ಗ್ರಾಮದಲ್ಲಿ ನಕಾರಾತ್ಮಕ ಪ್ರಚಾರ ಪ್ರಾರಂಭವಾಯಿತು.

ಕನೋಸನ್ ಗ್ರಾಮದ 371 ಜನರ ಸಹಿಯೊಂದಿಗೆ ಅಸಮರ್ಪಕ ವಿತರಣೆಯ ಬಗ್ಗೆ ನಕಲಿ ಆರೋಪಗಳನ್ನು ಮಾಡಿ, ಪಕ್ಕದ ಗ್ರಾಮದ ‘ಸವರ್ಣ ನ್ಯಾಯಬೆಲೆ ಅಂಗಡಿ’ಯಲ್ಲಿ POS ಯಂತ್ರವನ್ನು ಬಳಸಿ ಪಡಿತರ ವಿತರಿಸಲು ಸಂಚು ರೂಪಿಸುವ ಮೂಲಕ ಬಹಿಷ್ಕಾರವನ್ನು ಪ್ರಾರಂಭಿಸಲಾಯಿತು. ಇದು ಕಾಂತಿ ಪರ್ಮಾರ್‌ಗೆ ಹೆಚ್ಚಿನ ಒತ್ತಡವನ್ನು ಉಂಟು ಮಾಡಿತು. ಇದರಿಂದಾಗಿ ಅವರು ಮೇ 2021ರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು ಎಂದು ಹೇಳಲಾಗುತ್ತಿದೆ.

ವಿಷವು ಅವರ ಒಂದು ಕಾಲಿಗೆ ಗಂಭೀರವಾದ ಗಾಯವನ್ನು ಉಂಟುಮಾಡಿತು. ಇದರಿಂದ ಅವರ ಒಂದು ಕಾಲನ್ನೇ ಕತ್ತರಿಸಬೇಕಾಯಿತು. ಇದರ ನಂತರ 5 ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಯಿತು. ಆದರೆ ಒಂದು ತಿಂಗಳೊಳಗೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ನಂತರ, ದಲಿತರು ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಗೆ ಸಾಮೂಹಿಕ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು.

ಗ್ರಾಮದ ಬಹುಪಾಲು ಕುಟುಂಬಗಳು ಮೇಲ್ಜಾತಿ ಸಮುದಾಯಕ್ಕೆ ಸೇರಿದ್ದು, ತಮ್ಮ ಪಡಿತರ ಚೀಟಿಗಳನ್ನು ಎಡ್ಲ ಗ್ರಾಮಕ್ಕೆ ವರ್ಗಾಯಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಅರವಿಂದ್ ವಿಜಯನ್ ಅವರು ಗುಜರಾತ್‌ನ ಪಟಾನ್ ಜಿಲ್ಲೆಯ ಕನೋಸನ್ ಗ್ರಾಮದ ಎಲ್ಲಾ 436 ಕುಟುಂಬಗಳ ಪಡಿತರ ಚೀಟಿಗಳನ್ನು ಎಡ್ಲಾ ಗ್ರಾಮದ ನ್ಯಾಯಬೆಲೆ ಅಂಗಡಿಗೆ (FPS) ಸೆಪ್ಟೆಂಬರ್‌ನಲ್ಲಿ ವರ್ಗಾಯಿಸಿದ್ದಾರೆ. ಪ್ರಸ್ತುತ ದಲಿತರು ನಡೆಸುವ ನ್ಯಾಯಬೆಲೆ ಅಂಗಡಿಯ (FPS) ಪರವಾನಗಿ ರದ್ದಾಗುವ ಸಾಧ್ಯತೆಯಿದೆ.

ಆಹಾರದ ಹಕ್ಕು ಅಭಿಯಾನ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆಯಲ್ಲಿ ಕೆಲಸ ಮಾಡುವ ವಿವಿಧ ನಾಗರಿಕ ಸಮಾಜ ಸಂಸ್ಥೆಗಳ ವೇದಿಕೆ, ಪಟಾನ್ ಜಿಲ್ಲೆಯ ಕನೋಸನ್ ಗ್ರಾಮದಲ್ಲಿ ಮೇಲ್ಜಾತಿ ಸಮುದಾಯದ ಸಾಮಾಜಿಕ ಬಹಿಷ್ಕಾರದ ಕಾರಣ ದಲಿತರ ನ್ಯಾಯಬೆಲೆ ಅಂಗಡಿಯಿಂದ ಎಲ್ಲಾ ಪಡಿತರ ಚೀಟಿಗಳನ್ನು ಬೇರೆ ಗ್ರಾಮಕ್ಕೆ ವರ್ಗಾಯಿಸಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ಖಂಡಿಸಿದೆ.

ಅಭಿಯಾನದ ಸಂಚಾಲಕರಾದ ಆಯಷಾ ಮತ್ತು ಗಂಗಾರಾಮ್ ಪೈಕ್ರಾ ಅವರ ಹೇಳಿಕೆಯಲ್ಲಿ, “ಜಿಲ್ಲಾಧಿಕಾರಿ ಅರವಿಂದ್ ವಿಜಯನ್ ಅವರು ಕಳೆದ ತಿಂಗಳು ಕನೋಸನ್‌ನಲ್ಲಿರುವ ಎಲ್ಲಾ 436 ಮನೆಗಳ ಪಡಿತರ ಚೀಟಿಗಳನ್ನು ಎಡ್ಲಾ ಗ್ರಾಮದ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿದ್ದಾರೆ. ಇಂತಹ ಕ್ರಮವು ಕಾನೂನಿಗೆ ವಿರುದ್ಧವಾಗಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಒಬ್ಬ ವ್ಯಕ್ತಿಯನ್ನು ಅವಮಾನಿಸಿದರೆ, ನಿಂದಿಸಿದರೆ ಅಥವಾ ಪರಿಶಿಷ್ಟ ಜಾತಿಯ ವ್ಯಕ್ತಿಯ ವಿರುದ್ಧ ದ್ವೇಷ, ದ್ವೇಷ ಮತ್ತು ದ್ವೇಷದ ಭಾವನೆಯನ್ನು ಉಂಟುಮಾಡಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಅವರು ಹೇಳಿದರು. ನಿರ್ದಿಷ್ಟ ಜಾತಿಯ ವ್ಯಕ್ತಿ, ಕುಟುಂಬ ಅಥವಾ ಗುಂಪಿನ ಸಾಮಾಜಿಕ ಬಹಿಷ್ಕಾರ, ಆರ್ಥಿಕ ಬಹಿಷ್ಕಾರ, ಅವರ ಉದ್ಯೋಗ, ವ್ಯಾಪಾರ ಅಥವಾ ಅಂಗಡಿಗೆ ಅಡ್ಡಿಪಡಿಸುವುದು ಕೂಡ ಅಪರಾಧ ಎಂದು ಸಂಚಾಲಕರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಯತ್ನಿಸಲು ಒತ್ತಾಯಿಸಲಾಗಿದೆ. ಆದ್ದರಿಂದ ಮೇಲೆ ತಿಳಿಸಲಾದ ಇತರ ಸೆಕ್ಷನ್‌ಗಳ ಜೊತೆಗೆ ಐಪಿಸಿ ಸೆಕ್ಷನ್ ಗಳ ಪ್ರಕಾರವೂ ಪ್ರಕರಣವನ್ನು ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಅಭಿಯಾನದ ಸಂಚಾಲಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Source: thehindu.com

ದೇಶ

ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ 12 ಶಿಶುಗಳು ಸೇರಿದಂತೆ 24 ರೋಗಿಗಳು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ನಾಂದೇಡ್ ಜಿಲ್ಲೆಯಲ್ಲಿ ಡಾ.ಶಂಕರರಾವ್ ಚವ್ಹಾಣ್ ಸರ್ಕಾರಿ ವೈದ್ಯಕೀಯ ಕಾಲೇಜು (SCGMC) ಮತ್ತು ಆಸ್ಪತ್ರೆ ಇದೆ. ಈ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ಜನಿಸಿದ 12 ಶಿಶುಗಳು ಹಾಗೂ ಇತರೆ 12 ರೋಗಿಗಳು ಸೇರಿ ಒಂದೇ ದಿನದಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಆಸ್ಪತ್ರೆ ಮೂಲಗಳ ಪ್ರಕಾರ, ವೈದ್ಯಕೀಯ ಸಿಬ್ಬಂದಿ ಕೊರತೆ, ಕೆಲವರು ವರ್ಗಾವಣೆಗೊಂಡಿರುವುದು, ಹೊಸ ಸಿಬ್ಬಂದಿ ಮತ್ತು ವೈದ್ಯರ ನೇಮಕವಾಗದಿರುವುದು ಹಾಗೂ ಜೀವರಕ್ಷಕ ಔಷಧಿಗಳ ಕೊರತೆಯೇ ಕಾರಣವೆಂದು ಹೇಳಲಾಗುತ್ತಿದೆ.

ವಿರೋಧ ಪಕ್ಷಗಳು ಘಟನೆಯನ್ನು ಖಂಡಿಸಿವೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರನ್ನೊಳಗೊಂಡ ಮೂರು ಎಂಜಿನ್ ಸರ್ಕಾರವೇ ಇದಕ್ಕೆ ನೇರ ಕಾರಣ ಎಂದು ದೂಷಿಸಲಾಗುತ್ತಿದೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-2023’ ಪ್ರದಾನ ಮಾಡಿ ಮಾತನಾಡಿದರು.

2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಮಹಾತ್ಮ ಗಾಂಧಿಯವರ ಜಯಂತಿಯಂದು ಗಾಂಧಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿ, ಗಾಂಧಿಜೀಯವರ ತತ್ವಾದರ್ಶಗಳ ಹಾದಿಯಲ್ಲಿ ನಡೆಯುವ ವ್ಯಕ್ತಿ ಅಥವಾ ಸಂಘಸಂಸ್ಥೆಗಳಿಗೆ ಗಾಂಧಿ ಪ್ರಶಸ್ತಿಯನ್ನು ನೀಡಬೇಕೆಂದು ಆದೇಶ ಹೊರಡಿಸಲಾಯಿತು. ಪ್ರಶಸ್ತಿಗೆ ಆರ್ಹರಾಗುವವರು ಗಾಂಧಿಜೀಯವರ ತತ್ವಗಳಲ್ಲಿ ನಂಬಿಕೆಯಿಟ್ಟುವವರಾಗಿರಬೇಕು. ಧಾರವಾಡದ ಗರಗ ಕ್ಷೇತ್ರಿಯ ಸೇವಾ ಸಂಘ ಖಾದಿ ಉತ್ಪನ್ನ ಮತ್ತು ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಭಾರತದ ರಾಷ್ಟ್ರಧ್ವಜ ತಯಾರಕರಾಗಿದ್ದಾರೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನು ಇಡೀ ದೇಶಕ್ಕೆ ಸರಬರಾಜು ಮಾಡಲಾಗುತ್ತದೆ. ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನರಾದ ಈ ಸಂಸ್ಥೆಯ ಎಲ್ಲರಿಗೂ ಅಭಿನಂದನೆಗಳು ಹಾಗೂ ಪ್ರಶಸ್ತಿಯ ಆಯ್ಕೆ ಸಮಿತಿಗೆ ಧನ್ಯವಾದಗಳು ಎಂದು ಹೇಳಿದರು.

ಮಹಾತ್ಮ ಗಾಂಧಿಯವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ. ವಕೀಲ ವೃತ್ತಿಯಲ್ಲಿದ್ದ ಗಾಂಧಿಯವರು ದಕ್ಷಿಣಾ ಆಫ್ರಿಕಾದಲ್ಲಿ ವರ್ಣಬೇಧದಿಂದ ಅವಮಾನಿತರಾದರು. ಆ ದೇಶದಲ್ಲಿ ವರ್ಣಬೇಧದ ವಿರುದ್ಧ ಹೋರಾಟ ನಡೆಸಿದರು. ಗೋಪಾಲಕೃಷ್ಣ ಗೋಖಲೆಯವರು ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಗಾಂಧಿಯವರ ಹೋರಾಟವನ್ನು ನೋಡಿ, ಭಾರತವನ್ನು ಬ್ರಿಟೀಷರ ದಾಸ್ಯದಿಂದ ತಪ್ಪಿಸಲು ಗಾಂಧಿಯವರು ನೇತೃತ್ವವನ್ನು ವಹಿಸಲು ಕೋರಿದರು. 1915ರಲ್ಲಿ ಗಾಂಧಿಯವರು ಭಾರತಕ್ಕೆ ಬಂದರು. ಭಾರತದ ಸಾಮಾಜಿಕ ವ್ಯವಸ್ಥೆ, ಜನರ ಬದುಕನ್ನು ಅರಿಯಲು ರೈಲಿನಲ್ಲಿ 3ನೇ ದರ್ಜೆಯಲ್ಲಿಯೇ ಪ್ರಯಾಣ ಮಾಡಿ ಇಡೀ ಭಾರತವನ್ನು ಸುತ್ತಿದ್ದ ಅತ್ಯಂತ ಸರಳ ಜೀವಿ ಅವರು ಎಂದು ಗಾಂಧಿಯನ್ನು ಸ್ಮರಿಸಿದರು.

ಗಾಂಧಿಯವರ ಮಾತು ಹಾಗೂ ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು. ಅಹಿಂಸೆಯ ಹಾದಿಯಲ್ಲಿ ನಡೆದು ಸ್ವಾತಂತ್ರ್ಯ ಪಡೆಯಲು ಹೊರಟ ದೇಶವೆಂದರೆ ಅದು ಭಾರತ. ಗಾಂಧಿಯವರು ದೊಡ್ಡ ಮಾನವತಾವಾದಿ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವ ಮೂಲಕ ಗಾಂಧಿಯವರಿಗೆ ನಿಜವಾದ ಗೌರವ ಅರ್ಪಿಸಿದಂತಾಗುತ್ತದೆ. ಅವರು ನಡೆದ ದಾರಿಯಲ್ಲಿ ನಡೆಯುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗಾಂಧಿಯವರಿಗೆ ಮಹಾತ್ಮ ಎಂದು ಬಿರುದು ನೀಡಿದವರು ರವೀಂದ್ರನಾಥ ಟಾಗೋರ್ ಅವರು. ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. ದೇಶದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಕೊನೆಯವರೆಗೂ ಶ್ರಮಿಸಿದ್ದರು. ಆದರೆ ನಾಥೂರಾಂ ಗೋಡ್ಸೆಯವರ ಮತಾಂಧತೆಯಿಂದ ಅವರು ಅಸುನೀಗಿದರು. ನಾಥೂರಾಂ ಅವರನ್ನು ಪೂಜಿಸುವವರು ಈ ದೇಶದಲ್ಲಿರುವುದು ವಿಷಾದನೀಯ. ಇಂತಹವರ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಕಿಡಿಕಾರಿದರು.

ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಸ್ವಾವಂಬನೆಯಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ನಮ್ಮ ದೇಶಕ್ಕೆ ದೊಡ್ಡ ಕೈಗಾರಿಕೆಗಳ ಬದಲು ಗುಡಿ ಕೈಗಾರಿಕೆಗಳು ಬರಬೇಕು. ಅವರು ಹೇಳಿದ ಪಂಚಾಯತ್ ರಾಜ್ ವ್ಯವಸ್ಥೆಯಂತೆ ಅಧಿಕಾರ ಹಳ್ಳಿಯಿಂದ ದಿಲ್ಲಿಗೆ ಹೋಗಬೇಕೆ ಹೊರತು, ದಿಲ್ಲಿಯಿಂದ ಹಳ್ಳಿಗೆ ಬರಬಾರದು ಎಂದಿದ್ದರು. ದೇಶ, ರಾಜ್ಯ, ಜಿಲ್ಲೆ, ಹಳ್ಳಿ ನಾಲ್ಕು ಹಂತದಲ್ಲಿ ಅಧಿಕಾರದ ವಿಕೇಂದ್ರೀಕರಣವು, ಜನರ ಪಾಲ್ಗೊಳ್ಳುವಿಕೆಯಿಂದ ಜನತಂತ್ರದ ವಿಕೇಂದ್ರೀಕರಣ ಸಾಧ್ಯ. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧಿಯವರ ಚಿಂತನೆಗಳೇ ಪ್ರೇರಣೆ ಎಂದು ಮೊಳಗಿದರು.

ಮಹಿಳಾ ಸ್ವಾತಂತ್ರ್ಯ ಹಾಗೂ ಸಬಲೀಕರಣದ ಬಗ್ಗೆ ಗಾಂಧಿಯವರು ಅಪಾರವಾದ ಬದ್ಧತೆ ಹೊಂದಿದ್ದರು. ಮಹಿಳೆಯರ ಅಭಿವೃದ್ಧಿಯಿಂದ ನಾಡು, ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಅನ್ನಭಾಗ್ಯ ಯೋಜನೆಗಳು ಗಾಂಧಿ ತತ್ವಗಳನ್ನು ಅವಲಂಬಿಸಿದೆ ಎಂದು ತಮ್ಮ ಸರ್ಕಾರದ ಯೋಜನೆಗಳನ್ನು ಸಮರ್ಥಿಸಿಕೊಂಡರು.

ಇಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಾಗಿದ್ದು, ಇಡೀ ದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತ ಕಂಡ ಪ್ರಾಮಾಣಿಕ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ. ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ ಬದುಕಿದವರು. ಅವರನ್ನು ಈ ಸಂದರ್ಭದಲ್ಲಿ ಗೌರವದಿಂದ ನೆನೆಯುತ್ತೇನೆ ಎಂದು ಹೇಳಿದರು.

ಬೆಂಗಳೂರು

ಬೆಂಗಳೂರು: ಕೆ.ಆರ್.ಪುರಂ ವ್ಯಾಪ್ತಿಯ ಕುವೆಂಪುನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ “ಕುವೆಂಪುನಗರ ಪೀಪಲ್ಸ್ ವೆಲ್ಫೇರ್ ಅಸೋಸಿಯೇಷನ್” ವತಿಯಿಂದ ಇಂದು ಮಹಾತ್ಮ ಗಾಂಧಿಯವರ 154ನೇ ಜನ್ಮ ದಿನಾಚರನೆಯನ್ನು ಬಹಳ ವಿಭೃಂಜಣೆಯಿಂದ ಆಚರಿಸಲಾಯಿತು.

ಸಂಘದ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಕುವೆಂಪುನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗಣ್ಯರಿಂದ ಬಾಪೂಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಎಲ್ಲರಿಗೂ ಸಿಹಿ ಹಂಚಲಾಯಿತು.

ಮಹಾತ್ಮಾ ಗಾಂಧಿಯವರದ್ದು ಅಪರೂಪದ ವ್ಯಕ್ತಿತ್ವ; ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಡಿ ಗೆದ್ದ ಅಹಿಂಸಾತ್ಮಕ ಪಾರಿವಾಳ. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಒಮ್ಮೆ ಅವರ ಬಗ್ಗೆ ಪ್ರಸ್ತಾಪಿಸುತ್ತಾ “ಇಂತಹ ಮನುಷ್ಯ ಈ ಭೂಮಿಯ ಮೇಲೆ ಬದುಕಿದ್ದರು ಎಂದು ಮುಂದಿನ ಪೀಳಿಗೆ ನಂಬುವುದು ತುಂಬಾ ಕಷ್ಟ” ಎಂದರು.

“ಉನ್ನತವಾದ ಗುರಿಯಿಟ್ಟುಕೊಂಡರೆ ಸಾಲದು; ಅದನ್ನು ಸಾಧಿಸುವ ಮಾರ್ಗವೂ ಪ್ರಾಮಾಣಿಕವಾಗಿರಬೇಕು” ಎಂದು ಹೇಳಿದ್ದು ಮಾತ್ರವಲ್ಲ ಹೇಳಿದಂತೆ ಬದುಕಿ ತೋರಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು. ಅಹಿಂಸೆ ಮತ್ತು ಸತ್ಯ ಎಂದಿಗೂ ಸೋಲುವುದಿಲ್ಲ ಎಂದು ಅವರು ದೃಢವಾಗಿ ನಂಬಿದ್ದರು.

ಅನೇಕ ಗುಲಾಮಗಿರಿ ದೇಶಗಳಲ್ಲಿ ಜನರನ್ನು ಮುನ್ನಡೆಸುವ ನಾಯಕರು ಶಸ್ತ್ರಾಸ್ತ್ರಗಳನ್ನು ಹಿಡಿದು ಸ್ವಾತಂತ್ರ್ಯಕ್ಕಾಗಿ ಹೋರಾಡಿದಾಗ, ಅಹಿಂಸೆಯ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಿರಾಯುಧವಾಗಿ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಅವರು. ಅಹಿಂಸೆ, ಸತ್ಯ, ಸಮರ್ಪಣೆ, ಪರಿಶ್ರಮದಲ್ಲಿ ಕೊನೆಯವರೆಗೂ ದೃಢವಾಗಿದ್ದ ಅವರು, ಎಂದಿಗೂ ತಾನು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ ಮತ್ತು ಅವರು ಎಂದಿಗೂ ಹಿಂಸೆಯನ್ನು ಪ್ರತಿಪಾದಿಸಲಿಲ್ಲ.

ರಷ್ಯಾದ ವಿಮೋಚನೆಗಾಗಿ ಹೋರಾಡಿದ ಲೆನಿನ್, ಚೀನಾದ ವಿಮೋಚನೆಗಾಗಿ ಹೋರಾಡಿದ ಮಾವೋ (ಮಾಓ ತ್ಸೆ ತುಂಗ್) ಮುಂತಾದ ವಿಶ್ವದ ಯಾವುದೇ ದೇಶವನ್ನು ತೆಗೆದುಕೊಂಡರೂ ದೇಶಗಳು ಸ್ವಾತಂತ್ರ್ಯ ಪಡೆದಾಗ, ಆ ದೇಶದಲ್ಲಿ ಸ್ಥಾಪಿಸಲಾದ ಸರ್ಕಾರದ ನಾಯಕತ್ವವನ್ನು ಅವರೇ ವಹಿಸಿಕೊಂಡಿದ್ದರು.

ಆದರೆ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರು ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಇತರರಿಗೆ ಆಡಳಿತದ ಜವಾಬ್ದಾರಿಯನ್ನು ವಹಿಸಿಕೊಟ್ಟು ಮೊದಲಿನಂತೆ ಸರಳ ವ್ಯಕ್ತಿಯಂತೆ ದೇಶದ ಏಕತೆಗೆ ಮತ್ತು ಪ್ರಗತಿಗೆ ಶ್ರಮಿಸಲು ಮುಂದಾದರು.

ಒಂದು ದೇಶವನ್ನು ಮುನ್ನಡೆಸುವ ನಾಯಕ ಹೇಗಿರಬೇಕು ಎಂಬುದಕ್ಕೆ ಅವರೇ ಉದಾಹರಣೆಯಾಗಿದ್ದರು. ಆದ್ದರಿಂದಲೇ ಮೋಹನ್ ದಾಸ್ ಕರಮಚಂದ ಗಾಂಧಿ “ಮಹಾತ್ಮ” ಆದರು. ಈ ಬಿರುದನ್ನು ಕವಿ ರವೀಂದ್ರನಾಥ ಟ್ಯಾಗೋರ್ ಅವರು ನೀಡಿದ್ದಾರೆ. 1909ರಲ್ಲಿ ಪ್ರಂಜಿವನ್ ಮೆಹ್ತಾ ಎಂಬ ಸ್ನೇಹಿತ ಗಾಂಧಿಗೆ ಬರೆದ ಪತ್ರದಲ್ಲಿ ಮೊದಲ ಬಾರಿಗೆ ಅವರನ್ನು “ಮಹಾತ್ಮ” ಎಂದು ಕರೆದಿದ್ದರು.

ಭಾರತ ಸ್ವತಂತ್ರವಾದಾಗ ವಿದೇಶಿ ಪತ್ರಕರ್ತರೊಬ್ಬರು ಮಹಾತ್ಮ ಗಾಂಧಿಯನ್ನು ಭೇಟಿಯಾಗಿ, “ದೇಶದ ಜನತೆಗೆ ನೀವು ಈಗ ಏನು ಹೇಳಲು ಬಯಸುತ್ತೀರಿ?” ಎಂದು ಕೇಳಿದರು. ಅದಕ್ಕೆ ಗಾಂಧಿಯವರು, “ನನ್ನ ಜೀವನವೇ ನನ್ನ ಸಂದೇಶ” ಎಂದರು.

“ನನ್ನ ಜೀವನವೇ ನನ್ನ ಸಂದೇಶ” ಎಂದು ಸಾರಿದ ಮಹಾತ್ಮ ಗಾಂಧಿಯವರ ಜನ್ಮ ದಿನಾಚರನೆಯನ್ನು ಆಚರಿಸುವುದಲ್ಲದೇ  ಅದನ್ನು ಮುಂದಿನ ತಲಮಾರಿಗೆ ಪರಿಚಯಿಸುವ ಕೆಲಸವೂ ಮಾಡುತ್ತಿರುವ ಕುವೆಂಪುನಗರ ಪೀಪಲ್ಸ್ ವೆಲ್ಫೇರ್ ಅಸೋಸಿಯೇಷನ್ ಪದಾಧಿಕಾರಿಗಳ ಮತ್ತು ಆಡಳಿತ ಮಂಡಳಿ ಸದಸ್ಯರ ಕಾರ್ಯ ಶ್ಲಾಘನೀಯ.

ಇದನ್ನೂ ಓದಿ: ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ! – ಸಿದ್ದರಾಮಯ್ಯ

ರಾಜ್ಯ

ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಅವರ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ. ಯಾವುದೇ ಪ್ರಚಾರದ ಸಾಮಾಗ್ರಿ ಮತ್ತು ತಂತ್ರಜ್ಞಾನ ಇಲ್ಲದೆ ಕೇವಲ ಅಹಿಂಸೆ ಮತ್ತು ತಮ್ಮ ಬದುಕಿನ ಸರಳತೆಯಿಂದಲೇ ಮಹಾತ್ಮಗಾಂಧಿ ವಿಶ್ವದ ಮೂಲೆ ಮೂಲೆಗೆ ತಲುಪಿದರು ಎಂದು ಹೇಳಿದರು.

ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು, “ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, “ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ” ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಗಾಂಧಿಯನ್ನು ಸ್ಮರಿಸಿದರು.

ನಮ್ಮ ಸರ್ಕಾರ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಮಹಾತ್ಮಗಾಂಧಿ ಅವರ ಆಶಯಗಳು ಸೇರಿವೆ. ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.  

ರಾಜ್ಯ

ಬೆಂಗಳೂರು: ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್‌ನಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು.

ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ. ನಾವು ನೀವೆಲ್ಲಾ ಎಷ್ಟು ವರ್ಷ ಬದುಕುತ್ತೀವಿ ಎನ್ನುವುದಕ್ಕಿಂತ ಇದ್ದಷ್ಟು ದಿನ ಸಾರ್ಥಕ ಬದುಕು ನಡೆಸುವುದು ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಪದ್ಮಶ್ರೀ ಪುರಸ್ಕೃತ ಶ್ರೀ.ಹರೇಕಳ ಹಾಜಪ್ಪ, ಹಿರಿಯ ನ್ಯಾಯವಾದಿ ಪಿ.ಎಸ್.ರಾಜಗೋಪಾಲ್, ಯೋಗಪಟು ಡಿ.ನಾಗರಾಜ್, ಸಂಬಾಳ ವಾದಕ ಹಣಮಂತ ಗೋವಿಂದಪ್ಪ ಹೂಗಾರ, ನಿವೃತ್ತ ಕುಲಪತಿ ಆರ್.ಆರ್.ಹಂಚಿನಾಳ, ಸಮಾಜ ಸೇವಕ ವೀರಭದ್ರಪ್ಪ ಶರಣಪ್ಪ ಉಪ್ಪಿನ, ನಿವೃತ್ತ ಶಿಕ್ಷಕರಾದ ಎಚ್.ಎಸ್.ಗಿರಿರಾಜ್ ಎಲ್ಲರೂ ನಮಗೆ ಮಾದರಿ ಮತ್ತು ಮಾರ್ಗದರ್ಶಕರು. ಇವರ ಬದುಕಿನ ಮೌಲ್ಯಗಳು ಸಮಾಜವನ್ನು ಬೆಳಗುತ್ತವೆ ಎಂಬ ಭಾವನೆ ನನ್ನದು ಎಂದರು.

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಜಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು

ಸಂಸತ್ತು ಮತ್ತು ಶಾಸಕಾಂಗಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಯೋಜನೆಯನ್ನು ಪರಿಚಯಿಸುವ ಪ್ರಯತ್ನಗಳು ಈಗ ಪ್ರಾರಂಭವಾಗಿದ್ದರೂ, ಇದು 2029 ರಲ್ಲಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಏಕಕಾಲಕ್ಕೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಯೋಜನೆಯನ್ನು ಜಾರಿಗೆ ತರಲು ಕೇಂದ್ರದ ಬಿಜೆಪಿ ಸರ್ಕಾರ ಬಹಳ ದಿನಗಳಿಂದ ಮಾತನಾಡುತ್ತಿದೆ. ಈಗ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಸಂಸತ್ತಿನ ವಿಶೇಷ ಅಧಿವೇಶನದ ಘೋಷಣೆಯಾದಾಗಲೇ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ‘ಒಂದು ದೇಶ; ಒಂದು ಚುನಾವಣೆ’ ಮಸೂದೆ ಮಂಡಿಸಲು ಮುಂದಾಗಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು.

ಆದರೆ, ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಯಾವುದೇ ಮಸೂದೆ ಮಂಡನೆಯಾಗಲಿಲ್ಲ. ಬದಲಾಗಿ, ಕೇಂದ್ರ ಸರ್ಕಾರವು ‘ಒಂದು ದೇಶ; ಒಂದು ಚುನಾವಣೆ’ ಯೋಜನೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭಾ ಮಾಜಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಮತ್ತು ಇತರರು ಇದರ ಸದಸ್ಯರಾಗಿದ್ದಾರೆ.

ಪ್ರಸ್ತುತ, ಕಾನೂನು ಆಯೋಗವು ಸಂಸತ್ತು ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸೂತ್ರವನ್ನು ರೂಪಿಸುತ್ತಿದ್ದು, ಈ ಯೋಜನೆಯು 2029ರ ಹೊತ್ತಿಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಸಂಸತ್ತು ಮತ್ತು ವಿಧಾನಸಭೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸುವ ಕಾರ್ಯವನ್ನು ಕಾನೂನು ಆಯೋಗಕ್ಕೆ ವಹಿಸಬಹುದು ಎಂಬ ವರದಿಗಳೂ ಇವೆ.

ಸಂಸತ್ತು, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆದರೆ ಸಮಯ, ವೆಚ್ಚ ತಗ್ಗಲಿದೆ ಎಂಬುದು ಕೇಂದ್ರ ಬಿಜೆಪಿ ಸರ್ಕಾರದ ಅಭಿಪ್ರಾಯ. ಮತದಾರರು ಒಮ್ಮೆ ಮತಗಟ್ಟೆಗೆ ಹೋದರೆ ಸಂಸತ್ತು, ವಿಧಾನಸಭೆ, ಸ್ಥಳೀಯ ಸಂಸ್ಥೆಗೆ ಏಕಕಾಲಕ್ಕೆ ಮತ ಚಲಾಯಿಸಬಹುದು ಎನ್ನುತ್ತಾರೆ ಆಡಳಿತಗಾರರು. ಈ ಸಂಬಂಧ ಕಾನೂನು ಆಯೋಗದ ವರದಿ ಇನ್ನಷ್ಟೇ ಸಿದ್ಧವಾಗಬೇಕಿದೆ.

‘ಒಂದು ದೇಶ; ಒಂದು ಚುನಾವಣೆ’ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಿತು. ಆ ಸಭೆಯಲ್ಲಿ, ಕೇಂದ್ರ ಕಾನೂನು ಆಯೋಗ, ಮುಖ್ಯ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಲು ನಿರ್ಧರಿಸಲಾಗಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಬೇಡಿಕೆ 1983ರಲ್ಲೇ ಹುಟ್ಟಿಕೊಂಡಿತ್ತು. ಅಂದಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರಕಾರ ಇದಕ್ಕೆ ಮಹತ್ವ ನೀಡಲಿಲ್ಲ.

ನಂತರ 1999ರಲ್ಲಿ, ಭಾರತದ ಕಾನೂನು ಆಯೋಗವು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡಿತು. ಆಗ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಅಧಿಕಾರದಲ್ಲಿತ್ತು. ನಂತರ 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ಒಂದು ದೇಶ; ಒಂದು ಚುನಾವಣೆ’ ಎಂಬ ಭರವಸೆಯನ್ನು ನೀಡಿತ್ತು.

ಇದೀಗ ಕೇಂದ್ರ ಬಿಜೆಪಿ ಸರ್ಕಾರ ಆ ಭರವಸೆಯನ್ನು ಜಾರಿಗೆ ತರಲು ಪ್ರಯತ್ನ ನಡೆಸಿದೆ. ಆದರೆ ಕೇಂದ್ರ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ‘ಒಂದು ದೇಶ; ಒಂದು ಚುನಾವಣೆ’ಯ ಕಲ್ಪನೆಯು ಎಲ್ಲಾ ರಾಜ್ಯಗಳ ಮೇಲಿನ ದಾಳಿಯಾಗಿದೆ” ಎಂದು ಎಕ್ಸ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ಒಂದು ದೇಶ, ಒಂದೇ ಚುನಾವಣೆಯಾದರೆ ಸಾಮಾನ್ಯ ಜನರಿಗೆ ಏನು ಪ್ರಯೋಜನ. ಇದರ ಬದಲಾಗಿ ನಮಗೆ ಒಂದು ದೇಶ; ಒಂದು ಶಿಕ್ಷಣ, ಒಂದು ದೇಶ; ಒಂದು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮುಂತಾದವುಗಳೇ ಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.