ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
November 2023 » Page 4 of 7 » Dynamic Leader
October 23, 2024
Home 2023 November (Page 4)
ರಾಜಕೀಯ

ಬೆಂಗಳೂರು: ಪೊಳ್ಳು ಗ್ಯಾರಂಟಿಗಳ ಮೂಲಕ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿ ಅಂಚಿಗೆ ನೂಕಿರುವ ಕಾಂಗ್ರೆಸ್ ಸರಕಾರ, ರೈತರ ಮೇಲೆಯೂ ವಕ್ರದೃಷ್ಟಿ ಬೀರಿದೆ. ಬರ, ವಿದ್ಯುತ್ ಕ್ಷಾಮದಿಂದ ಕಂಗೆಟ್ಟು ಹೋಗಿರುವ ಅನ್ನದಾತರಿಗೆ ಮತ್ತೊಂದು ಬರೆ ಎಳೆದು, ತಾನು ರೈತದ್ರೋಹಿ ಎಂದು ಸಾಬೀತು ಮಾಡಿಕೊಂಡಿದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾಸ್ವಾಮಿ ಹೇಳಿದ್ದಾರೆ.

‘ಗ್ಯಾರಂಟಿಗಳಿಗೆ ಪ್ರಚಾರ ಜಾಸ್ತಿ, ಅಭಿವೃದ್ದಿಗೆ ಹಣ ನಾಸ್ತಿ’ ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದೆ. ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡುತ್ತಿದ್ದ ಸಬ್ಸಿಡಿಗೆ ಕಾಂಗ್ರೆಸ್ ಸರಕಾರ ಕತ್ತರಿ ಹಾಕಿದೆ ಎನ್ನುವ ಸರಕಾರಿ ಆದೇಶ ನೋಡಿ ನನಗೆ ತೀವ್ರ ಆಘಾತ ಉಂಟಾಯಿತು. ಕೇಡುಗಾಲಕ್ಕೆ ಕೋಳಿಯು ಮೊಟ್ಟೆ ಬದಲು ಮರಿಯನ್ನೇ ಹಾಕಿತು ಎನ್ನುವ ಹಾಗೆ ಕಾಂಗ್ರೆಸ್ ಸರಕಾರ ಎರಡು ಕೈಗಳಿಂದಲೂ ರೈತರ ಮೇಲೆ ಮಣ್ಣು ಹಾಕುತ್ತಿದೆ ಎಂದು

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದ ಅನ್ನದಾತರಿಗೆ ಇದುವರೆಗೆ ಟ್ರಾನ್ಸ್ ಫಾರ್ಮ್, ವಿದ್ಯುತ್ ಕಂಬ, ಅಲ್ಯುಮಿನಿಯಂ ತಂತಿ ಇತ್ಯಾದಿಗಳಿಗೆ ಸರಕಾರವೇ ಸಬ್ಸಿಡಿ ಕೊಡುತ್ತಿತ್ತು. ಚುನಾವಣೆಯಲ್ಲಿ ಮತಕ್ಕಾಗಿ ಯಾವ ಹಸ್ತ ರೈತರ ಪಾದ ಮುಟ್ಟಿ ಮತಯಾಚನೆ ಮಾಡಿತೋ, ಈಗ ಅದೇ ಹಸ್ತ ಅಧಿಕಾರ ಸಿಕ್ಕ ಮೇಲೆ ಅನ್ನದಾತನ ಕೊರಳಿಗೆ ಹಗ್ಗ ಬಿಗಿಯತೊಡಗಿದೆ! ಇದಕ್ಕಿಂತ ಪೈಶಾಚಿಕ ಮನಃಸ್ಥಿತಿ ಮತ್ತೊಂದು ಇರಲು ಸಾಧ್ಯವೇ? ಎಂದು ಕಟಕಿಯಾಡಿದ್ದಾರೆ.

ತಮ್ಮ ಪಾಲಿನ 24,000 ರೂಪಾಯಿ ಭರಿಸುವುದಕ್ಕೇ ಇನ್ನಿಲ್ಲದ ಕಡುಕಷ್ಟ ಅನುಭವಿಸುತ್ತಿರುವ ರೈತರು, ಇನ್ನು ಮುಂದೆ ಪೂರ್ಣ ವೆಚ್ಚ ಭರಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಕಟುಕರ ಕೈಗೆ ಕರ್ನಾಟಕ ಸಿಕ್ಕಿ ನರಳುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಪುರಾವೆ ಬೇಕೆ? ಅಧಿಕಾರಕ್ಕೆ ಬಂದಾಗಿನಿಂದ ಸಮಾಧಿ ಸ್ಥಿತಿಯಲ್ಲಿರುವ ಈ ಸರಕಾರವು, ಇಂಥ ಜನದ್ರೋಹಿ ಕೃತ್ಯಗಳಲ್ಲಿ ಬಹಳ ಕ್ರಿಯಾಶೀಲವಾಗಿದೆ! ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸರಕಾರ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಲೇಬೇಕು. ಮೊದಲಿನಂತೆ ರೈತರಿಗೆ ಸಬ್ಸಿಡಿ ಕೊಡಬೇಕು. ಒಂದು ವೇಳೆ ಆದೇಶ ವಾಪಸ್ ಪಡೆಯದಿದ್ದರೆ ಜೆಡಿಎಸ್ ಪಕ್ಷ ಸದನದ ಒಳಗೆ, ಹೊರಗೆ ಹೋರಾಟಕ್ಕೆ ಇಳಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಬಂಡವಾಳಶಾಹಿ ಮನಃಸ್ಥಿತಿಯ ಲಾಭಕೋರ ಪಕ್ಷ. ಕಸಾಯಿ ಸಂಸ್ಕೃತಿಯ ಕಟುಕ ಪಕ್ಷ. ಅದಕ್ಕೆ ಕರುಣೆ, ದಯೆ, ದಾಕ್ಷಿಣ್ಯ ಎನ್ನುವುದು ಇರುವುದಿಲ್ಲ. ಇಡೀ ಕರ್ನಾಟಕವನ್ನೇ ಎಟಿಎಂ ಮಾಡಿಕೊಂಡು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರಕಾರ, ಈಗ ರೈತರನ್ನೂ ಕೊಳ್ಳೆ ಹೊಡೆಯುತ್ತಿದೆ. ಒಂದು ಕೈಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ರಾವಣರೂಪಿ ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದೆ. ವಿನಾಶಕಾಲೇ ವಿಪರೀತ ಬುದ್ಧಿ! ವಿನಾಶಕಾಲೇ ವಿಪರೀತ ಆಸೆ!! ಎಂದು ಕಿಡಿಕಾರಿದ್ದಾರೆ.

ವಿದೇಶ

ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಕತಾರ್‌ನಲ್ಲಿರುವ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿದ ವಿರುದ್ಧ ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿದೆ.

ಎಂಟು ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿಗಳು ಪಶ್ಚಿಮ ಏಷ್ಯಾದ ಕತಾರ್‌ನಲ್ಲಿರುವ ತಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕತಾರ್ ಸಶಸ್ತ್ರ ಪಡೆಗಳಿಗೆ ತರಬೇತಿ ಸೇರಿದಂತೆ ವಿವಿಧ ಸೇವೆಗಳನ್ನು ಈ ಕಂಪನಿ ಒದಗಿಸುತ್ತದೆ. ಕಂಪನಿಯ ವಿವಿಧ ಪ್ರಮುಖ ಯೋಜನೆಗಳಲ್ಲಿ ಅವರು ಭಾಗವಹಿಸಿದ್ದರು.

ಈ ಹಿನ್ನಲೆಯಲ್ಲಿ, ಎಂಟು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳು, ಇಸ್ರೇಲ್ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ನಡೆಸಿದರು ಎಂಬ ಆರೋಪ ಹುಟ್ಟಿಕೊಂಡಿತು. ಇದರಿಂದ ಈ ಎಂಟು ಮಂದಿಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಅವರ ಜಾಮೀನು ಅರ್ಜಿಯನ್ನು ಹಲವು ಬಾರಿ ತಿರಸ್ಕರಿಸಲಾಗಿತ್ತು. ಈ ಪ್ರಕರಣದಲ್ಲಿ ಕತಾರ್ ನ್ಯಾಯಾಲಯವು ಎಂಟು ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದೆ.

ಈ ಪ್ರಕರಣದಲ್ಲಿ 8 ಭಾರತೀಯರಿಗೆ ವಿಧಿಸಲಾದ ಮರಣದಂಡನೆ ವಿರುದ್ಧ, ಕತಾರ್ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಶಿ ಹೇಳಿದ್ದಾರೆ.

ಮತ್ತು ನಾವು ಎಂಟು ಜನರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಎಲ್ಲಾ ರೀತಿಯ ಕಾನೂನು ನೆರವು ಮತ್ತು ರಾಜತಾಂತ್ರಿಕ ನೆರವು ನೀಡಲಾಗುವುದು. ತೀರ್ಪಿನ ವಿವರಗಳನ್ನು ಕಾನೂನು ತಜ್ಞರಿಗೆ ನೀಡಲಾಗಿದೆ. ಕಳೆದ ಮಂಗಳವಾರ, ಎಲ್ಲಾ ಎಂಟು ಮಂದಿಗೆ ರಾಜತಾಂತ್ರಿಕ ನೆರವು ನೀಡಲಾಯಿತು ಎಂದು ಹೇಳಿದರು.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಬಸವಣ್ಣನವರು ಕಾಯಕ ಪದ್ಧತಿಯನ್ನು ಹೇಳಿದರು. ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ ನಾವು ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದರಿಂದ ಸಮ ಸಮಾಜದ ಆಶಯಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಶೂದ್ರ ಮತ್ತು ಮಹಿಳೆಯರನ್ನು ಶತ- ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಈ ಕಾರಣಕ್ಕೇ ಶೂದ್ರ ವರ್ಗಗಳು ಹಿಂದುಳಿಯುವಂತಾಯಿತು. ಅಸಮಾನತೆ ಹೆಚ್ಚಾಯಿತು. ಈ ಅಸಮಾನತೆಯನ್ನು ಅಳಿಸುವ ಉದ್ದೇಶ ನಮ್ಮ ಸರ್ಕಾರದ್ದು. 9,60,000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು ಎಂದರು.

ಸಹಾಯ ಧನ ಪಡೆಯುತ್ತಿರುವ ಇವರೆಲ್ಲರೂ ಅಸಂಘಟಿತ ಕಾರ್ಮಿಕರ ಮಕ್ಕಳು. ಶೇ.83ರಷ್ಟು ಕಾರ್ಮಿಕರು ಇವತ್ತಿಗೂ ಅಸಂಘಟಿತರಾಗಿದ್ದಾರೆ. ದೇಶದಲ್ಲಿ ರೈತ ಸಮುದಾಯವನ್ನು ಬಿಟ್ಟರೆ ಎರಡನೇ ಅತೀ ದೊಡ್ಡ ಸಮುದಾಯ ಕಾರ್ಮಿಕ ಸಮುದಾಯ. ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪಟ್ಟಭದ್ರರನ್ನು ನಾವು ದೂರ ಇಡಬೇಕು. ಈ ಪಟ್ಟ ಭದ್ರರು ಸಾಮಾಜಿಕ ನ್ಯಾಯದ ವಿರೋಧಿಗಳು. ಈ ವಿಭಜಕರು ಶೂದ್ರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆ ಬರುವುದನ್ನು ವಿರೋಧಿಸುತ್ತಾರೆ. ಆದ್ದರಿಂದ ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವವರನ್ನು ನಾವು ವಿರೋಧಿಸಬೇಕು ಎಂದು ಹೇಳಿದರು.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಿಂದ ನಾವು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ದೇಶ

ನವದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ. ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಬಗ್ಗೆ ವಿಚಾರಣಾ ನ್ಯಾಯಾಲಯಗಳಿಗೆ ಏಕರೂಪದ ಮಾರ್ಗಸೂಚಿಗಳನ್ನು ರೂಪಿಸುವುದು ಕಷ್ಟಕರವಾಗಿರುವುದರಿಂದ ಈ ವಿಚಾರವನ್ನು ನಾವು ಉಚ್ಚ ನ್ಯಾಯಾಲಯಗಳಿಗೆ ಬಿಡುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಂಸದರು ಮತ್ತು ಶಾಸಕರನ್ನು ಒಳಗೊಂಡ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಿ ತೀರ್ಪು ನೀಡಲು ಸ್ವಯಂ ಪ್ರೇರಣೆಯಿಂದ ಪ್ರಕರಣಗಳನ್ನು ದಾಖಲಿಸಲು ಹೈಕೋರ್ಟ್‌ಗಳನ್ನು ಸುಪ್ರೀಂ ಕೋರ್ಟ್ ಒತ್ತಾಯಿಸಿದೆ.

ಅಲ್ಲದೇ ಸಂಸದರು ಮತ್ತು ಶಾಸಕರ ವಿರುದ್ಧವಾಗಿ ತಡೆಯಾಜ್ಞೆ ನೀಡಿರುವ ಪ್ರಕರಣಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಗೆ ಪಟ್ಟಿ ಮಾಡಬೇಕು ಮತ್ತು ವಿಶೇಷ ನ್ಯಾಯಾಲಯಗಳ ಮೂಲಸೌಕರ್ಯಗಳನ್ನು

ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ದೃಢೀಕರಿಸಬೇಕು ಹಾಗೂ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ಸ್ಥಿತಿಗತಿ ತಿಳಿಯಲು ಹೈಕೋರ್ಟ್ ವೆಬ್ ಸೈಟ್ ನಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಲಾಗಿದೆ.

ಪ್ರಸ್ತುತ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷ ಶಿಕ್ಷೆಯಾಗಿದ್ದರೆ  6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಲಾಗುತ್ತದೆ. ಅದನ್ನು ಆಯಸ್ಸು ಕಾಲದವರೆಗೂ ವಿಸ್ತರಿಸುವಂತೆ ಕೋರಿ ಮತ್ತು ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಸಾಕಷ್ಟು ನ್ಯಾಯಾಲಯಗಳನ್ನು ಸ್ಥಾಪಿಸಲು ನಡೆಯುತ್ತಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದೆ.

ದೇಶ

ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ 96ನೇ ಹುಟ್ಟುಹಬ್ಬವನ್ನು ಇಂದು (ನ.08) ನವದೆಹಲಿಯ ಅವರ ಸ್ವಗೃಹದಲ್ಲಿ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಖುದ್ದು ಭೇಟಿ ಮಾಡಿ, ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಅಡ್ವಾಣಿ ಅವರ ಆರೋಗ್ಯವನ್ನೂ ಮೋದಿ ವಿಚಾರಿಸಿದರು. ಪ್ರಧಾನಿ ಮೋದಿ ಜೊತೆಗೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ ನಡ್ದಾ ಕೂಡ ಅಡ್ವಾಣಿ ಮನೆಗೆ ತೆರಳಿ ಅಭಿನಂದಿಸಿದ್ದಾರೆ.

ರಾಜ್ಯ

ಬೆಂಗಳೂರು: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶ್ರೀಗಳಿಗೆ ಇಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿ ಆದೇಶ ಮಾಡಿದೆ. 

ಮುರುಘಾಶ್ರೀ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಶ್ರೀಗಳಿಗೆ ಏಳು ಷರತ್ತನ್ನು ವಿಧಿಸಿ ಜಾಮೀನು ನೀಡಿದೆ. ಅದರಂತೆ ಮುರುಘಾ ಶ್ರೀಗಳು ತಮ್ಮ ಪಾಸ್ ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕಿದೆ. ಇಬ್ಬರು ಶ್ಯೂರಿಟಿಗಳನ್ನು ಒದಗಿಸಬೇಕು ಮತ್ತು ಇನ್ನು ಚಿತ್ರದುರ್ಗಕ್ಕೆ ಹೋಗದಂತೆ ಷರತ್ತು ವಿಧಿಸಿದೆ.

2 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿಯ ಮೇಲೆ ಅವರಿಗೆ ಜಾಮೀನು ನೀಡಲಾಗಿದೆ. ಸಾಕ್ಷಿಗಳನ್ನು ಹಾಳು ಮಾಡದಂತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ನೀಡಲಾಗಿದೆ. ವೀಕ್ಷಕರು ಜಾಮೀನನ್ನು ದುರುಪಯೋಗಪಡಿಸಿಕೊಳ್ಳಬಾರದು ಮತ್ತು ಅವರು ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ, ಅದು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಮುರುಘಾ ಶ್ರೀಗೆ ಜಾಮೀನು ಸಿಕ್ಕರೂ ಮತ್ತೊಂದು ಅರ್ಜಿ ವಿಚಾರಣೆ ಬಾಕಿ ಇರುವುದರಿಂದ ಅವರು ಇನ್ನೂ ಬಿಡುಗಡೆಯಾಗಿಲ್ಲ. ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 1 ರಂದು ಬಂಧಿಸಿದ್ದು, ಒಂದು ವರ್ಷದಿಂದ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ–2015ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು ಎಂಬು ಗಮನಾರ್ಹ.

ರಾಜಕೀಯ

ಕರೂರು: ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ನಾನು ಹಣ ಪಡೆದಿರುವ ಬಗ್ಗೆ ಪುರಾವೆ ಇದ್ದರೆ ಅಣ್ಣಾಮಲೈ ಪ್ರಕಟಿಸಲಿ. ಅಗತ್ಯಬಿದ್ದರೆ ಅಣ್ಣಾಮಲೈ ಅವರ ಆಸ್ತಿ ಮೌಲ್ಯವನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ಕರೂರು ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಹೇಳಿದ್ದಾರೆ.

ನಾನೊಬ್ಬ ಮಹಿಳೆಯಾದ್ದರಿಂದ ಆಕೆಯನ್ನು ಬದುಕಲು ಬಿಟ್ಟಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಇದನ್ನು ಹೇಳಲು ಅಣ್ಣಾಮಲೈ ಯಾರು? ಅಣ್ಣಾಮಲೈ ನನ್ನನ್ನು ಏನು ಮಾಡಬಹುದು? ಜಾರಿ ನಿರ್ದೇಶನಾಲಯದ ಬೇಟೆ ನಾಯಿಗಳನ್ನು (ಅಧಿಕಾರಿಗಳನ್ನು) ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿಯವರು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ.

ಸಾಧ್ಯವಾದರೆ ಜಾರಿ ಇಲಾಖೆಯನ್ನು ನನ್ನ ಮನೆಗೆ ಕಳುಹಿಸಲಿ. ನನ್ನ ಮನೆಯಲ್ಲಿ ಗಂಜಿಹಾಕಿದ ಕಾಟನ್ ಸೀರೆಗಳನ್ನು ಬಿಟ್ಟು ಬೇರೇನೂ ಸಿಗುವುದಿಲ್ಲ. ಮರಳು ಮಾಫಿಯಾಗಳಿಂದ ಹಣ ಪಡೆದು ಅಣ್ಣಾಮಲೈ ಅವರಂತೆ ಐಷಾರಾಮಿ ಜೀವನ ನಡೆಸಲಿಲ್ಲ. ಮನೆ ಬಾಡಿಗೆ 3.70 ಲಕ್ಷ ರೂ.ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅಣ್ಣಾಮಲೈ ಇನ್ನೂ ಪ್ರತಿಕ್ರಿಯಿಸಲಿಲ್ಲ.

ಅವರಂತೆ ನಿನ್ನೆಯ ಮಳೆಯಿಂದ ಇಂದು ಚಿಗುರೊಡೆದ ಅಣಬೆಯಲ್ಲ ನಾನು. ವೈಯಕ್ತಿಕವಾಗಿ ಮಹಿಳೆಯರ ಮೇಲೆ ಕೊಳಕು ರಾಜಕಾರಣ ನಡೆಸುವ ರಾಜಕಾರಣಿ ಅಣ್ಣಾಮಲೈ. ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಪ್ಪು ಕುರಿಯಾಗಿದ್ದರು. 2018ರಲ್ಲಿ ನಡೆದ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇರಲಿಲ್ಲ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಪರವಾಗಿ ಯಡಿಯೂರಪ್ಪ ಮೂರು ದಿನ ಮುಖ್ಯಮಂತ್ರಿಯಾಗಿದ್ದರು.

ಇದನ್ನೂ ಓದಿ: ಅಲಿಘರ್ ನಗರದ ಹೆಸರನ್ನು ಹರಿಘರ್ ಎಂದು ಬದಲಾಯಿಸಲು ನಿರ್ಧಾರ!

ಯಡಿಯೂರಪ್ಪ ಸರ್ಕಾರವನ್ನು ಉಳಿಸಲು ಆಗ ​​ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿದ್ದ ಅಣ್ಣಾಮಲೈಯನ್ನು ರಾಮನಗರಕ್ಕೆ ವರ್ಗಾಯಿಸಲಾಯಿತು. ಅಣ್ಣಾಮಲೈ ಮೂಲಕ, ರಾಮನಗರದಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್ ಶಾಸಕರಿಗೆ ಹಣನೀಡಿ, ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆಯುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು.

ಆ ಪ್ರಯತ್ನ ವಿಫಲವಾದಾಗ ಅಣ್ಣಾಮಲೈ ಮತ್ತೆ ಚಿಕ್ಕಮಗಳೂರಿಗೆ ವಾಪಸ್ಸಾಗಿ ಮತ್ತೆ ಅಲ್ಲಿಂದ ಬೆಂಗಳೂರಿಗೆ ಬಂದು ಸೇರಿಕೊಂಡರು. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ರಾಜಕೀಯವೇ ಗೊತ್ತಿಲ್ಲದ ಅಣ್ಣಾಮಲೈ ಅವರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನ ಸಿಕ್ಕಿದೆ.

ಮರಳು ಮಾಫಿಯಾಗಳಿಂದ 60 ಲಕ್ಷ ರೂಪಾಯಿ ಪಡೆದಿರುವುದಾಗಿ ಚೆನ್ನೈನಲ್ಲಿರುವ ಬಿಜೆಪಿ ಕಚೇರಿಯ ನೌಕರನ ಮನೆಗೆ ಜಾರಿ ಇಲಾಖೆ ತೆರಳಿತು. ಆದರೆ, ಜಾರಿ ಅಧಿಕಾರಿಗಳು ಸಂಬಂಧಿಸಿದವರನ್ನು ವಿಚಾರಣೆ ನಡೆಸದೆ ವಾಪಸ್ಸು ಹೋಗಿದ್ದು ಏಕೆ ಎಂಬುದಕ್ಕೆ ಉತ್ತರವಿಲ್ಲ. ಯಾವುದೇ ಸರ್ಕಾರಿ ಹುದ್ದೆ ಇಲ್ಲದ ಅಣ್ಣಾಮಲೈ ಅವರಿಗೆ ಅತ್ಯಧಿಕ ಝಡ್ ಕೆಟಗರಿ ರಕ್ಷಣೆ ನೀಡಿರುವುದರಿಂದ ವರ್ಷಕ್ಕೆ 3 ಕೋಟಿ ರೂ. ವರೆಗೆ ಖರ್ಚಾಗುತ್ತಿದೆ.

ಸಂಸದೆಯಾಗಿರುವ ನಾನೇ ವಿಮಾನದ ಪ್ರಥಮ ದರ್ಜೆಯಲ್ಲಿ ಹಾರುವುದಿಲ್ಲ. ಅವರು ನನ್ನನ್ನು ಹೇಗೆ ಪ್ರಶ್ನಿಸಬಹುದು? ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಣ್ಣಾಮಲೈ ಅವರ ಭ್ರಷ್ಟಾಚಾರ ಬಯಲಾಗಲಿದೆ. ಆಗ ಅವರು ಇರಬೇಕಾದ ಸ್ಥಳ ಬೇರಯದಾಗಿರುತ್ತದೆ. ಅಣ್ಣಾಮಲೈ ಕಲೆಕ್ಷನ್ ಕಿಂಗ್ ಆಗಿ ಹರಿದಾಡುತ್ತಿದ್ದಾರೆ. ನಾನು ಕರ್ನಾಟಕದ ಉಪಮುಖ್ಯಮಂತ್ರಿ ಶಿವಕುಮಾರ್ ಅವರಿಂದ ಹಣ ಪಡೆದಿರುವ ಬಗ್ಗೆ ಪುರಾವೆ ಇದ್ದರೆ ಅದನ್ನು ಅಣ್ಣಾಮಲೈ ಬಹಿರಂಗಪಡಿಸಲಿ. ಅಗತ್ಯವಿದ್ದರೆ ಅಣ್ಣಾಮಲೈ ಆಸ್ತಿ ಮೌಲ್ಯದ ಬಗ್ಗೆ ಪ್ರಕಟಿಸುತ್ತೇನೆ. ಎಂದು ಹೇಳಿದರು.

ದೇಶ

ಅಲಿಘರ್: ಉತ್ತರ ಪ್ರದೇಶದ ಪ್ರಮುಖ ನಗರವಾಗಿರುವ ಅಲಿಘರ್ ಹೆಸರನ್ನು ಹರಿಘರ್ ಎಂದು ಬದಲಾಯಿಸಲು ಮುನ್ಸಿಪಲ್ ಕಾರ್ಪೊರೇಷನ್ ಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. 2018ರಲ್ಲಿ ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಎಂದು ಮತ್ತು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ಮರುನಾಮಕರಣ ಮಾಡಲಾಯಿತು. ಅಲ್ಲದೆ, ಅಗತ್ಯ ಬಿದ್ದರೆ ಇತರೆ ಊರುಗಳ ಹೆಸರನ್ನೂ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು.

ಈ ಹಿನ್ನಲೆಯಲ್ಲಿ ಮೇಯರ್ ಪ್ರಶಾಂತ್ ಸಿಂಘಾಲ್ ಅವರು ನಿನ್ನೆ ಅಲಿಘರ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ನಗರದ ಹೆಸರನ್ನು ಹರಿಘರ್ ಎಂದು ಬದಲಾಯಿಸುವ ನಿರ್ಣಯವನ್ನು ಮಂಡಿಸಿದರು. ಎಲ್ಲಾ ಕೌನ್ಸಿಲರ್‌ಗಳು ನಿರ್ಣಯವನ್ನು ಬೆಂಬಲಿಸಿದ್ದರಿಂದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಈ ನಿರ್ಣಯವನ್ನು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಿದ್ದಾರೆ. ರಾಜ್ಯ ಸರ್ಕಾರವು ಅದನ್ನು ಅಂಗೀಕರಿಸಿದರೆ, ಅದನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಇತರ ಸಂಬಂಧಿತ ಇಲಾಖೆಗಳಿಗೆ ರವಾನಿಸಲಾಗುತ್ತದೆ. ಅವರ ಅನುಮೋದನೆಯ ನಂತರ ರಾಜ್ಯ ಸರ್ಕಾರ ಅಧಿಕೃತವಾಗಿ ಹೆಸರನ್ನು ಬದಲಾಯಿಸಬಹುದು.

ಈ ಕುರಿತು ಮಾತನಾಡಿರುವ ಮೇಯರ್ ಪ್ರಶಾಂತ್ ಸಿಂಘಾಲ್, “ಅಲಿಘರ್ ಹೆಸರನ್ನು ಹರಿಘರ್ ಎಂದು ಬದಲಾಯಿಸಬೇಕೆಂಬುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಆಗಲೇ ಈ ನಗರಕ್ಕೆ ಹರಿಘರ್ ಎಂಬ ಹೆಸರೇ ಇತ್ತು; ಪುರಾಣಗಳಲ್ಲಿಯೂ ಈ ಹೆಸರನ್ನು ಉಲ್ಲೇಖಿಸಲಾಗಿದೆ. ಕಾಲಕ್ರಮೇಣ ಅದು ಅಲಿಘರ್ ಎಂದು ಬದಲಾಗಿದೆ.

ಪ್ರಸ್ತುತ ಅದರ ಹೆಮ್ಮೆಯನ್ನು ಮರುಸ್ಥಾಪಿಸಲು ಪುನಃ ಹರಿಘರ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ” ಎಂದರು.

ದೇಶ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಒಟ್ಟು ಮೀಸಲಾತಿ ಮಟ್ಟವನ್ನು ಶೇ.65ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿದ್ದಾರೆ. ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ವರ್ಗಗಳಿಗೆ ಮೀಸಲಾತಿಯನ್ನು ಹೆಚ್ಚಿಸುವುದು ಅಗತ್ಯ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಿಹಾರ ರಾಜ್ಯ ಸರ್ಕಾರ ಜಾತಿ ಗಣತಿಯ ಫಲಿತಾಂಶವನ್ನು ಬಿಡುಗಡೆ ಮಾಡಿತ್ತು. ಅದರಂತೆ, “ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ (ಒಬಿಸಿ) 3 ಕೋಟಿ 54 ಲಕ್ಷದ 63 ಸಾವಿರದ 936 ಜನರನ್ನು ಹೊಂದಿರುತ್ತದೆ. ಇದು ಒಟ್ಟು ಜನಸಂಖ್ಯೆಯಲ್ಲಿ ಶೇ.27.13 ರಷ್ಟು ಆಗಿದೆ. ಅತ್ಯಂತ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ವರ್ಗಗಳು ಸೇರಿ ಒಟ್ಟು ಜನಸಂಖ್ಯೆ ಶೇ.63 ರಷ್ಟಿವೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಜಾತಿ ಗಣತಿ ಅಧ್ಯಯನದ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿದರು. ಮಾಡಿದ ಬೆನ್ನಲ್ಲೇ ಬಿಹಾರದಲ್ಲಿ ಮೀಸಲಾತಿಯನ್ನು ಶೇ.65ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿದ್ದಾರೆ. ಅತ್ಯಂತ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.30 ರಿಂದ ಶೇ.43ಕ್ಕೆ, ಪರಿಶಿಷ್ಟ ಜಾತಿ ವರ್ಗಗಳ ಮೀಸಲಾತಿಯನ್ನು ಶೇ.22ಕ್ಕೆ ಹೆಚ್ಚಿಸಿ ಒಟ್ಟು ಶೇ.65ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಿದರೆ ಒಟ್ಟು ಹಂಚಿಕೆಯ ಪ್ರಮಾಣ ಶೇ.75 ಆಗಿರುತ್ತದೆ. ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ವರ್ಗಗಳ ಮೀಸಲಾತಿಯನ್ನು ಹೆಚ್ಚಿಸುವುದು ಅಗತ್ಯ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ದೇಶ ರಾಜಕೀಯ

 ಡಿ.ಸಿ.ಪ್ರಕಾಶ್, ಸಂಪಾದಕರು

ಪ್ರಧಾನಿ ನರೇಂದ್ರ ಮೋದಿಯವರು ಬಿಟ್ಟಿಗಳ ವಿರುದ್ಧ ಮಾತನಾಡುತ್ತಿದ್ದರೂ ಬಿಜೆಪಿ ಚುನಾವಣೆಯ ಸಮಯದಲ್ಲಿ ಬಿಟ್ಟಿಗಳೆಂಬ ಅಸ್ತ್ರವನ್ನು ತಪ್ಪದೇ ಹೊರತಂದು ಮತದಾರರ ಮುಂದೆ ಜಳಪಿಸುತ್ತದೆ!

“ವಿರೋಧ ಪಕ್ಷಗಳು ಮತ ಸೆಳೆಯಲು ಉಚಿತ ಕೊಡುಗೆಗಳನ್ನು ನೀಡುತ್ತವೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಚಿತಗಳ ವಿರುದ್ಧ ಮಾತನಾಡುತ್ತಾರೆ. ಮತ್ತು “ಉಚಿತಗಳು ನಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಂಡು ನಮ್ಮ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ” ಎಂದು ಹೇಳುತ್ತಾರೆ. “ಸ್ವಾರ್ಥ ರಾಜಕಾರಣಕ್ಕಾಗಿ ರಾಜಕೀಯ ಪಕ್ಷಗಳಿಂದ ಘೋಷಿಸಲ್ಪಡುವ ಉಚಿತ ಘೋಷಣೆಗಳು ದೇಶವು ಸ್ವಾವಲಂಬಿಯಾಗುವುದನ್ನು ತಡೆಯುತ್ತದೆ. ಮತ್ತು ಪ್ರಾಮಾಣಿಕ ತೆರಿಗೆದಾರರ ಮೇಲಿನ ಹೊರೆ ಹೆಚ್ಚಿಸುವುದರ ಜೊತೆಗೆ, ಹೊಸ ತಂತ್ರಜ್ಞಾನಗಳಲ್ಲಿನ ಹೂಡಿಕೆಗಳನ್ನು ಸಹ ನಿರ್ಬಂಧಿಸುತ್ತದೆ” ಎಂದು ಪ್ರಧಾನಿ ಮೋದಿ ಎಲ್ಲಡೆಯೂ ಹೇಳುತ್ತಾರೆ.

”ಉಚಿತಗಳನ್ನು ನೀಡುವುದರಿಂದ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಉಚಿತಗಳು ಮುಂದುವರಿದರೆ ಶ್ರೀಲಂಕಾ, ಪಾಕಿಸ್ತಾನದಂತಹ ದೇಶಗಳ ಸ್ಥಿತಿ ಭಾರತಕ್ಕೂ ಬರುತ್ತದೆ” ಎಂಬುದು ಪ್ರಧಾನಿ ಮೋದಿಯವರ ಅಭಿಪ್ರಾಯ. ಮೋದಿ ಅವರು ಉಚಿತಗಳ ವಿರುದ್ಧ ಮಾತನಾಡಲು ಪ್ರಾರಂಭಿಸಿದ ನಂತರ, ಚುನಾವಣಾ ಪ್ರಣಾಳಿಕೆಗಳಲ್ಲಿ ‘ಅಲ್ಪಾವಧಿಯ ಉಚಿತ’ಗಳಿಗೆ ಸಂಬಂಧಿಸಿದ ಘೋಷಣೆಗಳನ್ನು ತಪ್ಪಿಸುವಂತೆ ಬಿಜೆಪಿ ತನ್ನ ರಾಜ್ಯ ಘಟಕಗಳಿಗೆ ಸೂಚನೆ ನೀಡಿದೆ ಎಂದು ವರದಿಗಳಾಗಿವೆ.

ಇದನ್ನೂ ಓದಿ: ಕಾಶ್ಮೀರಿ ಭಯೋತ್ಪಾದಕರ ಕಾಲಿಗೆ ಜಿಪಿಎಸ್ ಸಾಧನ ಅಳವಡಿಕೆ: ಓಡಲು ಸಾಧ್ಯವಿಲ್ಲ; ಅಡಗಿಕೊಳ್ಳಲೂ ಸಾಧ್ಯವಿಲ್ಲ.!

ಉಚಿತಗಳ ವಿರುದ್ಧ ಪ್ರಧಾನಿ ಮೋದಿಯವರ ಹೇಳಿಕೆಗಳಿಗೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. “ನಾವು ಉಚಿತಗಳನ್ನು ನೀಡುವುದಿಲ್ಲ ಶಿಕ್ಷಣ, ವೈದ್ಯಕೀಯ ಮುಂತಾದ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುತ್ತೇವೆ; ಅದು ಉಚಿತಗಳಲ್ಲ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪ್ರಧಾನಿಯವರು ಉಚಿತಗಳ ವಿರುದ್ಧ ಮಾತನಾಡುತ್ತಿರುವಾಗಲೇ ಬಿಜೆಪಿಯ ಭದ್ರಕೋಟೆಯಾಗಿರುವ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಬಿಟ್ಟಿ ಭರವಸೆಗಳನ್ನು ನೀಡಿತ್ತು. ಅದೇನೆಂದರೆ, ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ, ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಕಾಲೇಜು ಹೆಣ್ಣುಮಕ್ಕಳಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್, ಆರ್ಥಿಕವಾಗಿ ಹಿಂದುಳಿದ ಗರ್ಭಿಣಿಯರಿಗೆ ಉಚಿತ ಮಾಸಿಕ ಪೌಷ್ಟಿಕಾಂಶ ಯೋಜನೆ, ಪ್ರತಿ ವರ್ಷ ಎರಡು ಅಡುಗೆ ಅನಿಲ ಸಿಲಿಂಡರ್ ಇತ್ಯಾದಿಗಳು. ‘ಇದರೊಂದಿಗೆ ಬಿಜೆಪಿ ಉಚಿತಗಳ ವಿರುದ್ಧ ತನ್ನ ನಿಲುವನ್ನು ಬದಲಿಸಿಕೊಂಡಿದೆ’ ಎಂದು ವಿರೋಧ ಪಕ್ಷಗಳು ಟೀಕಿಸಿತು.

ಮುಂದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಉಚಿತ ಭರವಸೆಗಳನ್ನು ನೀಡಿತ್ತು. ಕರ್ನಾಟಕದಲ್ಲಿ ಬಡವರಿಗೆ ದಿನಕ್ಕೆ ಅರ್ಧ ಲೀಟರ್ ಹಾಲು, ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್‌ಗಳು, ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಯಂದು ಬಡವರಿಗೆ ಉಚಿತ ಸಿಲಿಂಡರ್ ನೀಡಲಾಗುವುದು ಮುಂತಾದ ಹತ್ತುಹಲವು ಭರವಸೆಗಳನ್ನು ಬಿಜೆಪಿ ನೀಡಿತ್ತು.

ಇದೀಗ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ರಂಗೇರುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಛತ್ತೀಸ್ ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿವಾಹಿತ ಮಹಿಳೆಯರಿಗೆ ವಾರ್ಷಿಕ 12 ಸಾವಿರ ರೂಪಾಯಿಗಳು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಂದರೆ, ತಮಿಳುನಾಡಿನ ಡಿಎಂಕೆ ಸರ್ಕಾರ ಮಹಿಳೆಯರಿಗೆ 1000 ರೂಪಾಯಿ ಮಹಿಳಾ ಸ್ಟೈಫಂಡ್ ನೀಡುತ್ತಿರುವಂತೆಯೇ ಛತ್ತೀಸ್‌ಗಢದಲ್ಲಿ ಬಿಜೆಪಿ ಯೋಜನೆಯನ್ನು ಘೋಷಿಸಿದೆ. ಇದರಿಂದಾಗಿ ಡಿಎಂಕೆ ಆಡಳಿತದ ಯೋಜನೆಯನ್ನು ಬಿಜೆಪಿ ನಕಲು ಮಾಡುತ್ತಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ: ರಾಜ್ಯಪಾಲರು ಚುನಾಯಿತ ಪ್ರತಿನಿಧಿಗಳಲ್ಲ ಎಂಬುದನ್ನು ಅರಿತುಕೊಳ್ಳಬೇಕು: ಸುಪ್ರೀಂ ಕೋರ್ಟ್!

ಬಿಟ್ಟಿಗಳನ್ನು ವಿರೋಧಿಸುವ ಬಿಜೆಪಿಯವರು ಉಚಿತ ಭರವಸೆಗಳನ್ನು ನೀಡುತ್ತಿರುವುದು ಏಕೆ? ಎಂಬ ಪ್ರಶ್ನೆಯನ್ನೂ ರಾಜಕೀಯ ವಿಮರ್ಶಕರು ಎತ್ತುತ್ತಿದ್ದಾರೆ. ಉಚಿತಗಳು ಎಂದು ಪ್ರಧಾನಿ ಮೋದಿಯಂತಹವರು ಮಾತನಾಡುವುದು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಬಡವರ ಕಲ್ಯಾಣ ಯೋಜನೆಗಳನ್ನೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದನ್ನೇ ಬಿಜೆಪಿ ಮತ್ತು ಸಂಘಪರಿವಾರದವರು ವಿರೋಧಿಸುವುದು.  

ಅದೇ ಸಮಯದಲ್ಲಿ, ದೊಡ್ಡ ಕಾರ್ಪೊರೇಟ್‌ಗಳಿಗೆ ನೀಡುತ್ತಿರುವ ಆ ಉಚಿತಗಳನ್ನು ಬಿಜೆಪಿ ವಿರೋಧಿಸುವುದಿಲ್ಲ! ಕಳೆದ ಒಂಬತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಸಾಲ ಮನ್ನಾ ಮತ್ತು ತೆರಿಗೆ ವಿನಾಯಿತಿ ಎಂದು 25 ಲಕ್ಷ ಕೋಟಿ ರೂಪಾಯಿಗಳನ್ನು ಬಿಜೆಪಿ ಸರ್ಕಾರ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ನೀಡಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ, ಸಣ್ಣಪುಟ್ಟ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರಿಗೆ ನೀಡುವ ಮೂಲಭೂತ ಸೌಲಭ್ಯಗಳನ್ನು ಮಾತ್ರ ‘ಉಚಿತ’ ಎಂದು ಬಿಜೆಪಿ ವಿರೋಧಿಸುತ್ತದೆ.

ಇದನ್ನೂ ಓದಿ: ಜೆಡಿಎಸ್ ‘ರೈತ ಸಾಂತ್ವನ ಯಾತ್ರೆ’ಯನ್ನು ವ್ಯಂಗ್ಯವಾಗಿ ಸ್ವಾಗತ ಮಾಡಿದ ಸಿದ್ದರಾಮಯ್ಯಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ!

ಪ್ರಧಾನಿ ನರೇಂದ್ರ ಮೋದಿಯವರು ಬಿಟ್ಟಿಗಳ ವಿರುದ್ಧ ಮಾತನಾಡುತ್ತಿದ್ದರೂ ಬಿಜೆಪಿ ಚುನಾವಣೆಯ ಸಮಯದಲ್ಲಿ ಬಿಟ್ಟಿಗಳೆಂಬ ಅಸ್ತ್ರವನ್ನು ತಪ್ಪದೇ ಹೊರತಂದು ಮತದಾರರ ಮುಂದೆ ಜಳಪಿಸುತ್ತದೆ! ವಿರೋಧ ಪಕ್ಷಗಳ ಬಿಟ್ಟಿಗಳನ್ನು ಟೀಕಿಸುವ ಮೋದಿ ಅವರು, ಸ್ವಂತ ಪಕ್ಷದ ಬಿಟ್ಟಿ ಘೋಷಣೆಗಳ ಬಗ್ಗೆ ಮಾತನಾಡದೇ ಹಾದುಹೋಗುತ್ತಾರೆ!?

ಇದನ್ನೂ ಓದಿ: ಜಾತಿವಾರು ಜನಗಣತಿ: “ಸುಳ್ಳುಗಳನ್ನು ಹರಡುವ ಬದಲು ಉತ್ತರಿಸಿ..” – ಅಮಿತ್ ಶಾ ಅವರನ್ನು ಪ್ರಶ್ನಿಸಿದ ತೇಜಸ್ವಿ ಯಾದವ್!