ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
December 2023 » Dynamic Leader
November 21, 2024
Home 2023 December
ದೇಶ

ನಾಗಪಟ್ಟಿಣಂ: ನಾಗಪಟ್ಟಿಣಂ ಜಿಲ್ಲೆ ವೇಲಾಂಕಣ್ಣಿಯಲ್ಲಿ ವಿಶ್ವಪ್ರಸಿದ್ದ ಸಂತ ಮೇರಿ ಮಾತೆಯ ದೇವಾಲಯವಿದೆ. ಇದು ಪೂರ್ವ ದೇಶಗಳ “ಲೂರ್ದು ನಗರ” ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ದೇವಾಲಯದಲ್ಲಿ ವಾರ್ಷಿಕವಾಗಿ ಆಂಗ್ಲ ಹೊಸ ವರ್ಷಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷಾಚರಣೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಆಂಗ್ಲ ಹೊಸ ವರ್ಷ 2024 ಇಂದು ಮಧ್ಯರಾತ್ರಿ ಪ್ರಾರಂಭವಾಗಲಿದೆ. ಹಾಗಾಗಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆ ರಾಜ್ಯಗಳು ಹಾಗೂ ಹಲವು ಜಿಲ್ಲೆಗಳಿಂದ ಪ್ರವಾಸಿಗರು ವೇಲಾಂಕಣ್ಣಿ ದೇವಾಲಯಕ್ಕೆ ಆಗಮಿಸಿದ್ದಾರೆ. ನಿನ್ನೆಯಿಂದ ಸತತ 3 ದಿನ ರಜೆ ಇರುವುದರಿಂದ ಸ್ಥಳೀಯ ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಇದರಿಂದಾಗಿ ಪ್ರವಾಸಿಗರ ದಂಡು ವೇಲಾಂಕಣ್ಣಿಗೆ ಹರಿದು ಬರುತ್ತಿದೆ. ವೇಲಾಂಕಣ್ಣಿ ದೇವಸ್ಥಾನ, ಮಾತಾಕುಲಂ, ನಡುತ್ತಿಟ್ಟು, ಹಳೆ ವೇಲಾಂಕಣ್ಣಿ, ಬೀಚ್ ರೋಡ್, ವೇಲಾಂಕಣ್ಣಿ ಬೀಚ್ ಹೀಗೆ ಎಲ್ಲೆಡೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ.

ಇಂದು ಮಧ್ಯರಾತ್ರಿಯಿಂದ ನಾಳೆ ಬೆಳಗಿನ ಜಾವದವರೆಗೆ ವೇಲಾಂಕಣ್ಣಿ ಚರ್ಚ್ ನಲ್ಲಿ ವಿಶೇಷ ಆಂಗ್ಲ ಹೊಸ ವರ್ಷದ ದಿವ್ಯ ಬಲಿಪೂಜೆಗಳು ನಡೆಯಲಿವೆ. ವರ್ಷಾಚರಣೆಯಲ್ಲಿ ಸಹಸ್ರಾರು ಜನ ಪಾಲ್ಗೊಳ್ಳುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದಾರೆ.

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ನಿಮ್ಮ ಕನಸು ಇದೀಗ ಸಾಕಾರಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬೆಂಗಳೂರು ನಗರ ಜಿಲ್ಲೆಯಾದ್ಯಂತ ‘1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿಯಲ್ಲಿ ನಿರ್ಮಿಸಿ ಪೂರ್ಣಗೊಂಡಿರುವ ಬಡಾವಣೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಕೂಡಲೇ ನೊಂದಾಯಿಸಿ, ಸ್ವಂತ ಸೂರು ಹೊಂದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಎಕ್ಸ್’ ಪೇಜ್ ನಲ್ಲಿ ತಿಳಿಸಿದ್ದಾರೆ.

ಕೂಗೂರು ಸರ್ವೆ ನಂ.69, ಸಾದೇನಹಳ್ಳಿ ಸರ್ವೆ ನಂ.30, ಅಗ್ರಹಾರ ಪಾಳ್ಯ ಸರ್ವೆ ನಂ.30, ಚಿಕ್ಕನಹಳ್ಳಿ-ಕಾಮನಹಳ್ಳಿ ಸರ್ವೆ ನಂ.71 ಹಾಗೂ ಜೆ.ಭಂಗೀಪುರ ಸರ್ವೆ ನಂ.29ರಲ್ಲಿ 1 ಬಿ.ಹೆಚ್.ಕೆ ಮನೆಗಳು ಮತ್ತು ಗೂಳಿಮಂಗಲ ಸರ್ವೆ ನಂ.67ರಲ್ಲಿ 2 ಬಿ.ಹೆಚ್.ಕೆ ಮನೆಗಳು ಪೂರ್ಣಗೊಂಡಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ: https://ashraya.karnataka.gov.in/

ದೇಶ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿಯವರು ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಎಸ್ ಪಿಜಿ ಸೈನಿಕರಂತೆ ಕಾರಿನ ಹೊರಭಾಗದಲ್ಲಿ ನಿಂತು, ನೇತಾಡುತ್ತಾ ಕೈ ಬೀಸುವ ಮೂಲಕ ಆರಂಭಿಸಿದರು.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ರಾಜಕೀಯ ಲಾಭ ಮತ್ತು ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಪರಿವರ್ತಿಸಲು ಬಿಜೆಪಿ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದರೆ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ 15,700 ಕೋಟಿ ರೂಪಾಯಿಗಳ ಯೋಜನೆಗಳಿಗೆ ಪ್ರಧಾನಿ ಮೋದಿ ಶನಿವಾರ ಚಾಲನೆ ನೀಡಿದರು. ರೂ.1,450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, 240 ಕೋಟಿ ರೂಪಾಯಿ ವೆಚ್ಚದಲ್ಲಿ ಪರಿಷ್ಕರಿಸಿದ “ಅಯೋಧ್ಯಾ ಧಾಮ್” ಜಂಕ್ಷನ್ ರೈಲು ನಿಲ್ದಾಣ, ಎರಡು ಹೊಸ “ಅಮೃತ್ ಭಾರತ್” ರೈಲುಗಳು ಮತ್ತು 6 ಹೊಸ “ವಂದೇ ಭಾರತ್ ರೈಲು”ಗಳನ್ನು ಮೋದಿ ಉದ್ಘಾಟಿಸಿದರು.

ರೋಡ್ ಶೋ:
ಯೋಜನೆಗಳನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರೋಡ್ ಶೋ ನಡೆಸಿದರು. ಅದೂ ಕೂಡ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿಯವರು ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಎಸ್ ಪಿಜಿ ಸೈನಿಕರಂತೆ ಕಾರಿನ ಹೊರಭಾಗದಲ್ಲಿ ನಿಂತು, ನೇತಾಡುತ್ತಾ ಕೈ ಬೀಸುವ ಮೂಲಕ ಆರಂಭಿಸಿದರು.

ವಿದ್ಯಾರ್ಥಿಗಳಿಗೆ ಕೇಸರಿ ಕ್ಯಾಪ್ ತೊಡಿಸಿ ಶೂಟಿಂಗ್ ಮಾಡಿಸಿದ ಮೋದಿ:
ಅಯೋಧ್ಯೆ ಕಲ್ಯಾಣ ಯೋಜನೆಗಳ ಹೆಸರಿನಲ್ಲಿ 2 ಹೊಸ “ಅಮೃತ್ ಭಾರತ್” ರೈಲುಗಳು ಮತ್ತು 6 ಹೊಸ “ವಂದೇ ಭಾರತ್ ರೈಲುಗಳು” ಎಂಬ 8 ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದಕ್ಕೂ ಮೊದಲು ಕೇಸರಿ ಬಣ್ಣದಲ್ಲಿ ನಿರ್ಮಿಸಲಾಗಿದ್ದ “ಅಮೃತ್ ಭಾರತ್” ರೈಲಿಗೆ ಪ್ರವೇಶಿಸಿದ ಮೋದಿ, ವಿದ್ಯಾರ್ಥಿಗಳಿಂದ ಪ್ರತ್ಯೇಕ ಶೂಟಿಂಗ್ ಸೆಟ್ ಹಾಕಿದ್ದರು. ಅಂದರೆ ವಿದ್ಯಾರ್ಥಿಗಳಿಗೆ ಕೇಸರಿ ಟೋಪಿಗಳನ್ನು ಧರಿಸುವಂತೆ ಮಾಡಿ, ಅವರ ಬಳಿ ಒಂದು ತುಂಡು ಚೀಟಿಯನ್ನು ಕೊಟ್ಟು; ಅದನ್ನು ಓದುವಂತೆ ಮಾಡಿ, ಪ್ರಧಾನಿ ಮೋದಿ ಹೇಳುವುದನ್ನು ವಿದ್ಯಾರ್ಥಿಗಳು ಕೇಳುವ ಹಾಗೆ ಚಿತ್ರೀಕರಣ ನಡೆಸಿದರು.

Source: theekkathir.in

ದೇಶ

ತಿರುವನಂತಪುರಂ,
2024ರ ಲೋಕಸಭೆ ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ಸಕ್ರಿಯವಾಗಿ ತಯಾರಿ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ, ಮುಂದಿನ ತಿಂಗಳು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸ್ಥಾಪಿಸಲಾದ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ,

“ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ಫೆಬ್ರವರಿ 14 ರಂದು ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಅದರ ನಂತರ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ಎಂದು ನಾನು ನಿರೀಕ್ಷಿಸುತ್ತೇನೆ.

ಆದ್ದರಿಂದ ವಿಷಯ ಸ್ಪಷ್ಟವಾಗಿದೆ. 2009ರಲ್ಲಿ ಭಾರತೀಯ ಮತದಾರರಿಗೆ ಮೋದಿ ಆರ್ಥಿಕ ಅಭಿವೃದ್ಧಿಯ ಅವತಾರವಾಗಿ, ಗುಜರಾತ್‌ನ ಮುಖ್ಯ ಆಡಳಿತಾಧಿಕಾರಿಯಾಗಿ ಪ್ರದರ್ಶಿಸಲಾಯಿತು. ಅವರು ಎಲ್ಲಾ ಭಾರತೀಯರಿಗೆ ಅಭಿವೃದ್ಧಿಯನ್ನು ತರುತ್ತಾರೆ ಎಂದು ಬಿಂಬಿಸಲಾಯಿತು.

ಆದರೆ, 2019ರಲ್ಲಿ, ನೋಟು ಅಮಾನ್ಯೀಕರಣದ ವಿನಾಶಕಾರಿ ಕ್ರಮದ ನಂತರ ಆ ಕಥೆ ಕುಸಿಯುತ್ತಿದ್ದಂತೆ, ಪುಲ್ವಾಮಾ ಭಯೋತ್ಪಾದಕ ದಾಳಿಯು ಮೋದಿಯವರಿಗೆ ಸಾರ್ವತ್ರಿಕ ಚುನಾವಣೆಯನ್ನು ರಾಷ್ಟ್ರೀಯ ಭದ್ರತಾ ಚುನಾವಣೆಯನ್ನಾಗಿ ಪರಿವರ್ತಿಸುವ ಅವಕಾಶವನ್ನು ನೀಡಿತು.

ಮುಂದಿನ 2024ರ ಚುನಾವಣೆಯಲ್ಲಿ ಬಿ.ಜೆ.ಪಿ ನರೇಂದ್ರ ಮೋದಿ ಅವರನ್ನು ಹಿಂದೂ ಹೃದಯಗಳ ಸಾಮ್ರಾಟ ಎಂದು ಬಡ್ತಿ ನೀಡುವುದು ಸ್ಪಷ್ಟವಾಗಿ ಕಾಣುತ್ತಿದೆ.

ಈ ಹಂತದಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: ‘ಅಚ್ಚೇ ದಿನ್’ ಏನಾಯಿತು? ವರ್ಷಕ್ಕೆ 2 ಕೋಟಿ ಉದ್ಯೋಗಗಳು ಏನಾಯಿತು? ಸಾಮಾಜಿಕ-ಆರ್ಥಿಕ ಏಣಿಯ ಕೆಳ ಹಂತಗಳಿಗೆ ಪ್ರಯೋಜನಕಾರಿ ಆರ್ಥಿಕ ಬೆಳವಣಿಗೆ ಏನಾಯಿತು? ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗಳಿಗೆ ಪಾವತಿಸುವುದಾಗಿ ಹೇಳಿದ್ದ ಹಣ ಏನಾಯಿತು?

ಹಿಂದೂತ್ವ ಅಜೆಂಡಾಗಳಿಗೆ ಮತ್ತು ಜನ ಕಲ್ಯಾಣಕ್ಕೆ ನಡುವೆ ನಡೆಯಲಿರುವ ಮುಂಬರುವ ಚುನಾವಣೆಯಲ್ಲಿ ಈ ಪ್ರಶ್ನೆಗಳು ಚರ್ಚೆಯಾಗಬೇಕು” ಎಂದು ಶಶಿ ತರೂರ್ ಹೇಳಿದ್ದಾರೆ. 

ವಿದೇಶ

2021ರಲ್ಲಿ ಪ್ರಾರಂಭವಾದ, ಡಾಲರ್‌ಗೆ ಪರ್ಯಾಯವಾದ ಕರೆನ್ಸಿಯನ್ನು ಕಂಡುಕೊಳ್ಳುವ ಡಿ-ಡಾಲರೈಸೇಶನ್ (de-Dollarization) ಎಂಬ ಈ ಪ್ರಯತ್ನವು 2023ರಲ್ಲಿ ವೇಗಗೊಳ್ಳಲು ಪ್ರಾರಂಭಿಸಿವೆ.

ಅಮೆರಿಕ ದೇಶವು ವಿಶ್ವದಲ್ಲಿ ಸೂಪರ್ ಪವರ್ ಆಗಲು ಪ್ರಮುಖ ಕಾರಣವೆಂದರೆ, ಅದರ ಮಿಲಿಟರಿ ಶಕ್ತಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕನ್ ಕರೆನ್ಸಿಯಾದ ಡಾಲರ್ (Dollar) ಬಳಕೆಯನ್ನು ದೊಡ್ಡಮಟ್ಟದಲ್ಲಿ ಚಲಾವಣೆ ಮಾಡುವುದು. ಜಾಗತಿಕವಾಗಿ ಇದನ್ನು ತಡೆಗಟ್ಟುವ ಉದ್ದೇಶದಿಂದ, ಅಮೆರಿಕ ಡಾಲರ್ ಪ್ರಾಬಲ್ಯವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹಲವಾರು ದೇಶಗಳು ಕೆಲವು ವರ್ಷಗಳಿಂದ ಮಾಡುತ್ತಿವೆ.

ಕೊರೋನಾ ಪೂರ್ವದ ಅವಧಿಯಲ್ಲಿ, ಬ್ರಿಕ್ಸ್ (BRICS) ಶೃಂಗಸಭೆಗಳಲ್ಲಿ ವ್ಯಾಪಾರಕ್ಕಾಗಿ ಚೀನಾ ತನ್ನ ಕರೆನ್ಸಿಯನ್ನು ಬಳಸಲು ಪ್ರಸ್ತಾಪಿಸಿತು. ಆದರೆ, ಕೋವಿಡ್‌ನಿಂದಾಗಿ ಈ ನಿರ್ಧಾರವನ್ನು ಮುಂದೂಡಲಾಯಿತು. 2021ರಲ್ಲಿ ಪ್ರಾರಂಭವಾದ, ಡಾಲರ್‌ಗೆ ಪರ್ಯಾಯವಾದ ಕರೆನ್ಸಿಯನ್ನು ಕಂಡುಕೊಳ್ಳುವ ಡಿ-ಡಾಲರೈಸೇಶನ್ (de-Dollarization) ಎಂಬ ಈ ಪ್ರಯತ್ನವು 2023ರಲ್ಲಿ ವೇಗಗೊಳ್ಳಲು ಪ್ರಾರಂಭಿಸಿವೆ.

ರಷ್ಯಾ ಮತ್ತು ಅರ್ಜೆಂಟೀನಾ ಚೀನಾದೊಂದಿಗೆ ವ್ಯಾಪಾರಕ್ಕಾಗಿ ಚೀನಾದ ಯುವಾನ್ (Yuan) ಅನ್ನು ಬಳಸಲಾರಂಭಿಸಿದವು. ಚೀನಾ ಮತ್ತು ಭಾರತವು ಕಚ್ಚಾ ತೈಲ ವ್ಯಾಪಾರದಲ್ಲಿ ತಮ್ಮ ರಾಷ್ಟ್ರೀಯ ಕರೆನ್ಸಿಗಳನ್ನು ಪರ್ಯಾಯವಾಗಿ ತರಲು ಪ್ರಯತ್ನಿಸಿದವು. ಯುಎಇ ಮತ್ತು ಶ್ರೀಲಂಕಾ ತೈಲೇತರ ವ್ಯಾಪಾರದಲ್ಲೂ ಕರೆನ್ಸಿಗಾಗಿ “ಭಾರತೀಯ ರೂಪಾಯಿ” ಬಳಸಲು ಒಪ್ಪಿಕೊಂಡಿವೆ.

ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಡಾಲರ್‌ಗೆ ಪರ್ಯಾಯ ಕರೆನ್ಸಿಗಳ ಹುಡುಕಾಟವನ್ನು ಪ್ರಾರಂಭಿಸಿವೆ. ಡಿಜಿಟಲ್ ಕರೆನ್ಸಿಗಳು ಮತ್ತು ಕ್ರಿಪ್ಟೋಕರೆನ್ಸಿಗಳ ಮೇಲೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಕೆಲವು ದೇಶಗಳು ಸಿದ್ಧವಾಗಿವೆ.

ಭವಿಷ್ಯದಲ್ಲಿ ಹಲವು ದೇಶಗಳು ಡಾಲರ್‌ಗೆ ಪರ್ಯಾಯವಾಗಿ ತೀವ್ರರೀತಿಯ ವ್ಯಾಪರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಾಗ ಡಾಲರ್‌ಗೆ ಬೇಡಿಕೆ ಕಡಿಮೆಯಾಗುತ್ತದೆ. ಇದರಿಂದ ಅಮೆರಿಕಕ್ಕೆ ದೇಶ-ವಿದೇಶಗಳಲ್ಲಿ ಸಮಸ್ಯೆಗಳು ಹೆಚ್ಚಾಗಲಿವೆ ಎನ್ನುತ್ತಾರೆ ಆರ್ಥಿಕ ತಜ್ಞರು.

ವಿದೇಶ

ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಯ ಕಾರಣದಿಂದಾಗಿ 2023ರಲ್ಲಿ ಬರೋಬ್ಬರಿ 42,000 ಅಮೆರಿಕನ್ನರು ಹತ್ಯೆಯಾಗಿದ್ದಾರೆ ಎಂದು ಗನ್ ವಯಲೆನ್ಸ್ ಆರ್ಕೈವ್‌ನ ಡೇಟಾ ತೋರಿಸುತ್ತದೆ.

ಅಮೆರಿಕದ ರಾಜಕೀಯವನ್ನು ದೇಶದ ಕಾರ್ಪೊರೇಟ್ ಗಳು, ವಿಶೇಷವಾಗಿ ಶಸ್ತ್ರಾಸ್ತ್ರ ಉದ್ಯಮಗಳು ನಿರ್ಧರಿಸುತ್ತದೆ. ಈ ಕಂಪನಿಗಳ ಪ್ರಾಬಲ್ಯದಿಂದಾಗಿ ಅಮೆರಿಕ ಹಲವು ದೇಶಗಳ ಮೇಲೆ ಯುದ್ಧ ಹೇರಿದೆ. ಇದರ ಹಿನ್ನೆಲೆಯಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ (ಯುದ್ಧದ ಆರ್ಥಿಕತೆ) ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಈ ಶಸ್ತ್ರಾಸ್ತ್ರ ಆರ್ಥಿಕತೆಯ ಪಿಡುಗು ಅಮೆರಿಕವನ್ನೂ ಬಿಟ್ಟಿಲ್ಲ. ಪ್ರತಿ ವರ್ಷ ಅಮೆರಿಕದಲ್ಲಿ ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್ ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಈ ಗುಂಡಿನ ದಾಳಿಯನ್ನು ನಿಯಂತ್ರಿಸಲು ಅಮೆರಿಕ ಸರ್ಕಾರ ಹರಸಾಹಸ ಪಡುತ್ತಿದೆ.

ಅಮೆರಿಕ ಗನ್ ವಯಲೆನ್ಸ್ ಆರ್ಕೈವ್‌ನ ಮಾಹಿತಿಯ ಪ್ರಕಾರ 2023ರಲ್ಲಿ ಬರೋಬ್ಬರಿ 42,000 ಜನರು ಬಂದೂಕು ಹಿಂಸಾಚಾರದಿಂದ ಸಾವನ್ನಪ್ಪಿದ್ದಾರೆ. ಇಂತಹ ಗುಂಡಿನ ದಾಳಿಯಲ್ಲಿ 17 ವರ್ಷದೊಳಗಿನ 1,600 ಮಕ್ಕಳು ಸಾವನ್ನಪ್ಪಿದ್ದಾರೆ. ಈ ಪೈಕಿ 23,760 ಮಂದಿ ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತು ಯಾವುದೇ ಕಾರಣವಿಲ್ಲದೆ 18,507 ಜನರು ಆತ್ಮರಕ್ಷಣೆಗಾಗಿ ಹಾಗೂ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ.

ರಾಜ್ಯ

ಬೆಂಗಳೂರು: ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರವರಿ 28ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು. ಕಾಯ್ದೆ ಜಾರಿ ಮಾಡುತ್ತೇವೆ. ಅಲ್ಲಿವರೆಗೆ ಎಲ್ಲರೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6) ರ ಪ್ರಕಾರ ಸರ್ಕಾರದ ಅಥವಾ ಸ್ಥಳೀಯ ಪ್ರಾಧಿಕಾರದ ಅನುಮೋದನೆಯೊಂದಿಗೆ ನಡೆಸುತ್ತಿರುವ ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ ಮುಂತಾದವುಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲಿನ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಲಾಗಿದೆ.

ಇದಕ್ಕೂ ಮೊದಲು 2018ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ನಾಮಫಲಕದಲ್ಲಿ ಶೇ. 60 ಕನ್ನಡ ಭಾಷೆ ಹಾಗೂ ಶೇ. 40 ರಷ್ಟು ಇತರ ಭಾಷೆಯಲ್ಲಿರಬಹುದು ಎಂದು ತಿಳಿಸಲಾಗಿದೆ. ಇದರಂತೆಯೇ ಸುಗ್ರೀವಾಜ್ಞೆ ಹೊರಡಿಸಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರವರಿ 28 ರೊಳಗೆ ವಾಣಿಜ್ಯ ಮಳಿಗೆಗಳು ಅನುಷ್ಠಾನಗೊಳಿಸಲು ಗಡುವು ನೀಡಲಾಗುವುದು.

ಈ ಕಾಯ್ದೆಯ ನಿಯಮ 17(8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿ ಇರತಕ್ಕದ್ದು ಎಂದಿದೆ. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಯಮಿಸಲಾದಂತೆ ಇರತಕ್ಕದ್ದು ಎಂದು ತಿಳಿಸಲಾಗಿದೆ. ಇದನ್ನು ಸಹ ಅನುಷ್ಠಾನಗೊಳಿಸಲಾಗುವುದು. ಈ ಕಾಯ್ದೆಯ ಅಧಿಸೂಚನೆ ಹೊರಡಿಸಲು ಹಾಗೂ ನಿಯಮಗಳನ್ನು ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು.

ಶಾಂತಿಯುತವಾದ ಪ್ರತಿಭಟನೆ ಮಾಡಲು ಸರ್ಕಾರದ ವಿರೋಧ ಇಲ್ಲ. ನಮಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದೆ. ಆದರೆ ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅದನ್ನು ಸರ್ಕಾರ ಸಹಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ.

3-3-2022ರಲ್ಲಿ ಕರ್ನಾಟಕ ಉಚ್ಛನ್ಯಾಯಾಲಯವು ಪ್ರತಿಭಟನೆಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾತ್ರ ನಡೆಸಬೇಕು, ರಾಜ್ಯ ಸರ್ಕಾರವು ಇದನ್ನು ಖಾತರಿಪಡಿಸಬೇಕು ಎಂದು ಸ್ಪಷ್ಟವಾದ ಆದೇಶ ಹೊರಡಿಸಿದೆ.

ಸಂಘಟನೆಯಿರಲಿ, ವ್ಯಕ್ತಿಗಳಿರಲಿ, ಖಾಸಗಿ ಸಂಸ್ಥೆಗಳಿರಲಿ ಯಾರೇ ಆಗಲಿ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಆಗಿದೆ ಎಂದು ಹೇಳಿದ್ದಾರೆ.

ದೇಶ

ಚೆನ್ನೈ: ಭಾರತದ ಸಾಮಾಜಿಕ ನ್ಯಾಯ ಸಮರದಲ್ಲಿ “ವೈಕಂ ಚಳುವಳಿ” ಮೊದಲನೆಯದು. ಕೇರಳದ ವೈಕಂನಲ್ಲಿ, ಮಹಾದೇವ ದೇವಸ್ಥಾನದ ಸುತ್ತಲಿನ ಬೀದಿಗಳಲ್ಲಿ ದಲಿತರು ನಡೆದಾಡುವುದನ್ನು ನಿಷೇಧಿಸಲಾಗಿತ್ತು. ಇದರ ವಿರುದ್ಧ 1924ರಲ್ಲಿ ಅಲ್ಲಿ ಬೃಹತ್ ಪ್ರತಿಭಟನೆಗಳು ನಡೆದವು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರುಗಳನ್ನು ಬಂಧಿಸಿದ್ದರಿಂದ ಪ್ರತಿಭಟನೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಆಗ ಕೇರಳದ ಮುಖಂಡರುಗಳು ತಂದೆ ಪೆರಿಯಾರ್ ಅವರಿಗೆ ಪತ್ರ ಬರೆದು, ಈ ಹೋರಾಟಕ್ಕೆ ಜೀವ ತುಂಬುವಂತೆ ಒತ್ತಾಯಿಸಿದರು.

ಈ ಪತ್ರವನ್ನು ಸ್ವೀಕರಿಸಿದ ತಂದೆ ಪೆರಿಯಾರ್ ತಮಿಳುನಾಡಿನಿಂದ ಕೇರಳಕ್ಕೆ ತೆರಳಿ ವೈಕಂ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ಹೋರಾಟ ಆ ಸಮಯದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಜನರು ದೊಡ್ದಮಟ್ಟದಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಇದರ ಪರಿಣಾಮವಾಗಿ ತಂದೆ ಪೆರಿಯಾರ್ ಎರಡು ಬಾರಿ ಬಂಧನಕ್ಕೊಳಗಾದರು. ಅವರು ಮೊದಲ ಬಾರಿಗೆ ಒಂದು ತಿಂಗಳು ಮತ್ತು ಎರಡನೇ ಬಾರಿಗೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದರು.

ಜೈಲಿನಲ್ಲಿ ಕೈಕಾಲು ಸರಪಳಿಯಿಂದ ಬಿಗಿದು ಚಿತ್ರಹಿಂಸೆ ನೀಡಲಾಗಿತ್ತು. ಆ ಸಮಯದಲ್ಲಿ ತಿರುವಾಂಕೂರಿನ ಮಹಾರಾಜರು ಮರಣಹೊಂದಿದ್ದರಿಂದ ರಾಣಿಯವರು ಅವರೆಲ್ಲರನ್ನೂ ಬಿಡುಗಡೆಗೊಳಿಸಿದರು.

ಅದಲ್ಲದೆ, ವೈಕಂ ಬೀದಿಯಲ್ಲಿ ದಲಿತರು ನಡೆದಾಡಬಾರದು ಎಂಬ ನಿಷೇಧವನ್ನೂ ರಾಣಿ ತೆಗೆದುಹಾಕಿದರು. ಪರಿಣಾಮವಾಗಿ, ಪೆರಿಯಾರ್ ಅವರ ಹೋರಾಟವು ವಿಜಯದಲ್ಲಿ ಕೊನೆಗೊಂಡಿದ್ದ ಕಾರಣ ಅವರನ್ನು ‘ವೈಕಂ ವೀರರ್’ ಎಂದು ಕರೆಯಲಾಯಿತು.

ಈ ಹೋರಾಟಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ವತಿಯಿಂದ ವೈಕಂ ಚಳುವಳಿಯ ಶತಮಾನೋತ್ಸವದ ವಿಶೇಷ ಆಚರಣೆಯನ್ನು ಚೆನ್ನೈನಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದರು.

ಅದರಂತೆ, ವೈಕಂ ಚಳುವಳಿಯ ಶತಮಾನೋತ್ಸವ ನಂದಂಪಾಕ್ಕಂ ಟ್ರೇಡ್ ಸೆಂಟರ್‌ನಲ್ಲಿ ಇಂದು ನಡೆಯಬೇಕಿತ್ತು. ಖ್ಯಾತ ಚಿತ್ರನಟ ಮತ್ತು ಮಾಜಿ ವಿರೋಧಪಕ್ಷದ ನಾಯಕ ಹಾಗೂ ಎಂಡಿಎಂಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ನಿಧನ ಹೊಂದಿದ್ದರಿಂದ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಸಮಾರಂಭವನ್ನು ವೇಪ್ಪೇರಿ ಪೆರಿಯಾರ್ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಚೆನ್ನೈಗೆ ಆಗಮಿಸಿದ್ದರು. ಅವರನ್ನು ಸಚಿವರಾದ ಅನ್ಬರಸನ್ ಮತ್ತು ಮಾ.ಸುಬ್ರಮಣ್ಯನ್ ಅವರು ಬರಮಾಡಿಕೊಂಡರು.

ಇಂದು ಬೆಳಗ್ಗೆ ಕಾರ್ಯಕ್ರಮ ನಡೆಯುವ ವೇಪ್ಪೇರಿ ಪೆರಿಯಾರ್ ಸಭಾಂಗಣಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪಿಣರಾಯಿ ವಿಜಯನ್ ಮತ್ತು ಎಲ್ಲಾ ಸಚಿವರುಗಳು ಆಗಮಿಸಿದ್ದರು. ಅವರೆಲ್ಲರನ್ನು “ದ್ರಾವಿಡರ್ ಕಳಗಂ” ಅಧ್ಯಕ್ಷ ಕೆ.ವೀರಮಣಿ ಸ್ವಾಗತಿಸಿದರು.

ಆ ಬಳಿಕ ಅಲ್ಲಿನ ಪೆರಿಯಾರ್ ಸ್ಮಾರಕದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪೆರಿಯಾರ್ ಸಭಾಂಗಣದಲ್ಲಿರುವ ಸ್ಮಾರಕ ಸ್ತಂಭದ ಬಳಿ ಸರಳ ರೀತಿಯಲ್ಲಿ ಸಮಾರಂಭ ನಡೆಯಿತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪೆರಿಯಾರ್ ಸ್ಮರಣಿಕೆ ನೀಡಿ ಗೌರವಿಸಿದರು. ಇದಾದ ನಂತರ ಶತಮಾನೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸ್ಟಾಲಿನ್ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು. ಪಿಣರಾಯಿ ವಿಜಯನ್ ಅದನ್ನು ಸ್ವೀಕರಿಸಿಕೊಂಡರು.

ಹಾಗೆಯೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಪೆರಿಯಾರ್ ಮತ್ತು ವೈಕಂ ಚಳುವಳಿ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಅದನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ವೀಕರಿಸಿಕೊಂಡರು.

ರಾಜ್ಯ

ಪಟ್ಟಭದ್ರರು ಬಹಳ ಕೆಟ್ಟ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಸವಾದಿ ಶರಣರು 800 ವರ್ಷಗಳ ಹಿಂದೆಯೇ “ಇವ ನಮ್ಮವ ಇವ ನಮ್ಮವ” ಎಂದು ಕರೆದರೂ ಇವತ್ತಿಗೂ “ಇವನಾರವ ಇವನಾರವ” ಎನ್ನುವ ವ್ಯವಸ್ಥೆಯೇ ಮುಂದುವರೆದಿದೆ.

ಆದಿಮ‌ ಸಾಂಸ್ಕೃತಿಕ ಕೇಂದ್ರದ ಹುಣ್ಣಿಮೆ ಹಾಡು-200ರ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಮಾತನಾಡಿದರು. ಇದೇ ಸಂದರ್ಭದಲ್ಲಿ ಆದಿಮ ನಡೆದು ಬಂದ ಹಾದಿಯನ್ನು ದಾಖಲಿಸಿರುವ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ನಮ್ಮ ಸಂವಿಧಾನ ಉಳಿದು, ಪ್ರಜಾಪ್ರಭುತ್ವ ಗಟ್ಟಿಯಾದರೆ ಮಾತ್ರ ದುಡಿಯುವವರಿಗೆ ಬದುಕಿನ ಅವಕಾಶಗಳು ದಕ್ಕುತ್ತವೆ. ಇದನ್ನು ಜನ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಆದಿಮ ಸಾಂಸ್ಕೃತಿಕ ಚಳವಳಿ ಮೂಲಕ ಬದಲಾವಣೆಯ ಕೇಂದ್ರ ಆಗುತ್ತದೆ ಎಂಬ ಭಾವನೆ ನನ್ನದು. ಸಮ ಸಮಾಜ ಮತ್ತು ಮಾನವೀಯತೆಯ ಸಮಾಜವನ್ನು ಗಟ್ಟಿಗೊಳಿಸಬೇಕಾದ ಸಂದರ್ಭ ಇದಾಗಿದೆ ಎಂದು ಹೇಳಿದರು.

ಅಸಮಾನತೆ ದೈವ ಸೃಷ್ಟಿ ಅಲ್ಲ. ಮನುಷ್ಯ ಸೃಷ್ಟಿ. ಸಮಾಜದಲ್ಲಿ ಯಾರಿಗೆ ಅವಕಾಶಗಳು ಸಿಕ್ಕಿತೋ ಅವರು ಬಹುಜನರನ್ನು ಅವಕಾಶ ವಂಚಿತರನ್ನಾಗಿ ಮಾಡಿದರು. ಇದರಿಂದ ಅಸಮಾನತೆ ಸೃಷ್ಟಿಯಾಯಿತು. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಅಸಮಾನತೆಗೆ ತುತ್ತಾದರು ಎಂದು ಹೇಳಿದರು.

ಅಸಮಾನತೆಗೆ ತುತ್ತಾದವರು ಪ್ರಜಾತಂತ್ರದ ಸೌಧವನ್ನು ದ್ವಂಸ ಮಾಡ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದರು. ನಮ್ಮದು ಚಲನೆ ರಹಿತ ಜಾತಿ ವ್ಯವಸ್ಥೆ. ಆದ್ದರಿಂದ ಬುದ್ದನ ಕಾಲದಿಂದಲೂ ಜಾತಿ ವ್ಯವಸ್ಥೆ ವಿರುದ್ಧ ಪ್ರಜ್ಞೆ ಮೂಡಿಸಿದರೂ ಇನ್ನೂ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಲೇ ಇದೆ ಎಂದು ಅಸಮಾನತೆ ವ್ಯಕ್ತಪಡಿಸಿದರು.

ಪಟ್ಟಭದ್ರರು ಬಹಳ ಕೆಟ್ಟ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಸವಾದಿ ಶರಣರು 800 ವರ್ಷಗಳ ಹಿಂದೆಯೇ “ಇವ ನಮ್ಮವ ಇವ ನಮ್ಮವ” ಎಂದು ಕರೆದರೂ ಇವತ್ತಿಗೂ “ಇವನಾರವ ಇವನಾರವ” ಎನ್ನುವ ವ್ಯವಸ್ಥೆಯೇ ಮುಂದುವರೆದಿದೆ. ಸ್ವಾರ್ಥರು, ಅಧಿಕಾರಕ್ಕೆ ಅಂಟಿಕೊಳ್ಳುವವರು ಪಟ್ಟಭದ್ರರ ವ್ಯವಸ್ಥೆ ಜತೆಗೆ ರಾಜಿ ಮಾಡಿಕೊಳ್ಳುತ್ತಾರೆ. ಇದರಿಂದ ಸಮಾಜ ಸಾಕಷ್ಟು ನೋವು ತಿನ್ನುತ್ತದೆ. ಕಟ್ಟ ಕಡೆಯ ಮನುಷ್ಯನಿಗೆ ದಕ್ಕಬೇಕಾದ ಪಾಲನ್ನು ದಕ್ಕದಂತೆ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯಕ ಮಾಡುವವರು ಅವಕಾಶಗಳಿಂದ ವಂಚಿತರಾಗುತ್ತಾರೆ. ಯಾರು ಕಾಯಕ ಜೀವಿಗಳಲ್ಲವೋ ಅವರು ಸಂಪತ್ತನ್ನು ಅನುಭವಿಸುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗಿ ಆಗಬೇಕು. ಉತ್ಪಾದನೆಯನ್ನು ಸಮವಾಗಿ ಹಂಚಿಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಶೋಷಣೆ ಮುಕ್ತ ಸಮಾಜ ಸೃಷ್ಟಿಯಾಗುತ್ತದೆ. ನಾನು ಮತ್ತು ನಮ್ಮ ಸರ್ಕಾರ ಶೋಷಿತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಭರವಸೆಯ ಮಾತಗಳನ್ನು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರುಗಳಾದ ನಂಜೇಗೌಡರು, ಕೊತ್ತನೂರು ಮಂಜುನಾಥ್, ಅನಿಲ್ ಕುಮಾರ್, ಮಾಜಿ ಸಭಾಪತಿ ಸುದರ್ಶನ್, ಮಾಜಿ ಸಚಿವರಾದ ಶ್ರೀನಿವಾಸ ಗೌಡ ಮತ್ತು ಆದಿಮ ಸಾಂಸ್ಕೃತಿಕ ಸಂಘಟನೆಯ ಪದಾಧಿಕಾರಿಗಳು, ಪೋಷಕರು ಮತ್ತು ದಲಿತ ಚಳವಳಿಯ ಹೋರಾಟಗಾರರು ಉಪಸ್ಥಿತರಿದ್ದರು.

ರಾಜಕೀಯ

ಬೆಂಗಳೂರು: ಶ್ರೀರಂಗಪಟ್ಟಣದ ಹನುಮಯಾತ್ರೆಯ ಸಂದರ್ಭದಲ್ಲಿ ಮಂಡ್ಯದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರ ಬಗ್ಗೆ ಅಸಾಂವಿಧಾನಿಕ ಮತ್ತು ಅಸಹ್ಯವಾದ ಅಶ್ಲೀಲ ಮಾತುಗಳನ್ನಾಡಿರುವುದನ್ನು ವೆಲ್‌ಫೇರ್ ಪಾರ್ಟಿ ಮಹಿಳಾ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಸಬೀಹಾ ಪಟೇಲ್ ತೀವ್ರವಾಗಿ ಖಂಡಿಸಿದ್ದಾರೆ.

“ಪದೇ ಪದೇ ಒಂದು ಸಮುದಾಯದ ವಿರುದ್ದ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುತ್ತಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ರಾಜ್ಯ ಸರಕಾರ ಯಾವುದೇ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ? ವಿಶೇಷವಾಗಿ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಮಹಿಳೆಯರ ಪರವಾಗಿ ಸಹಾನುಭೂತಿ ತೋರಿಸುವ ರಾಜ್ಯ ಸರ್ಕಾರ ಈಗ ಕೇವಲ ಮೂಕ ಪ್ರೇಕ್ಷಕವಾಗಿದೆ. ಇಂತಹ ತುಚ್ಛ ಹೇಳಿಕೆ ಕೊಟ್ಟ ಕಲ್ಲಡ್ಕ ಪ್ರಭಾಕರ್ ಭಟ್ ಕೇವಲ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಾತ್ರ ಹೇಳಿದ ಮಾತುಗಳಲ್ಲ ಬದಲಾಗಿ ಇದು ಇಡೀ ಮಹಿಳಾ ಸಮಾಜಕ್ಕೆ ಅವಮಾನ ಮಾಡಿದ ಹೇಳಿಕೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸ್ತ್ರೀ ವಿರೋಧಿಯಾದ ಇವರು ಈ ಹಿಂದೆ ಎಷ್ಟೋ ಬಾರಿ ಹಿಂದೂ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ‘ಮುಸ್ಲಿಂ ಯುವಕರು ಸೆಂಟ್ ಹೊಡೆದು ಬಂದರೆ ಹಿಂದೂ ಯುವತಿಯರು ಅವರ ಹಿಂದೆ ಓಡಿ ಹೋಗುತ್ತಾರೆ’ ಎಂದು ಈ ಹಿಂದೆ ಅಸಭ್ಯ ಹೇಳಿಕೆಯೊಂದನ್ನು ನೀಡಿದ್ದರು. ಇನ್ನೊಂದು ಕಡೆ ಕ್ರಿಶ್ಚಿಯನ್ ಮಹಿಳೆಯರಿಗೆ ಮತ್ತು ಅವರ ಸೇವೆಗಳನ್ನು ಕೂಡಾ ವ್ಯಂಗ್ಯ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಮಸೀದಿ ದರ್ಶನಕ್ಕೆ ಹೋದ ಸಹಧರ್ಮೀಯ ಮಹಿಳೆಯರಿಗೂ ಅಶ್ಲೀಲವಾದ ಮಾತುಗಳನ್ನಾಡಿದ್ದರು. ಇದು ಚುನಾವಣಾ ದಿನಗಳು ಹತ್ತಿರ ಬರುವಾಗ ಕೋಮುವಾದದ ವಿಷ ಬೀಜ ಬಿತ್ತುವ ಹುನ್ನಾರವಾಗಿದೆ.  ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ಕೊಳಕು ಮಾತುಗಳು ಅವರ ಸಂಸ್ಕಾರವನ್ನು ಬಿಂಬಿಸುತ್ತಿದೆ” ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಯಾರೂ ದಾರಿ ತೋರಿಸುವ ಅವಶ್ಯಕತೆ ಇಲ್ಲ. ಸುಮಾರು 14 ನೂರು ವರ್ಷಗಳ  ಹಿಂದೆಯೇ ಇಸ್ಲಾಂ ಧರ್ಮ ಮಹಿಳೆಯ ಸ್ಥಾನಮಾನ ಹಾಗೂ ಅವಳ ಹಕ್ಕುಗಳನ್ನು ಎತ್ತಿ ಹಿಡಿದಿದೆ. ತ್ರಿವಳಿ ತಲಾಖನ್ನು ಮುಂದಿಟ್ಟುಕೊಂಡು ಯಾವುದೇ ಅಧ್ಯಯನ ಇಲ್ಲದೆ ಇಂತಹ ಹೇಳಿಕೆಗಳನ್ನು ಕೊಡುವುದು ಅಸಾಂವಿಧಾನಿಕ. ಹಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವ ಇವರು ಎಂತಹಾ ಧರ್ಮರಕ್ಷಕ? ಎಂತಹಾ ಮುಖಂಡ? ಎನ್ನುವುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಒಂದು ಸಮುದಾಯವನ್ನು ಅಶ್ಲೀಲವಾಗಿ ನಿಂದಿಸಿದರೆ ಅವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಾಗಬೇಕು. ರಾಜ್ಯದಲ್ಲಿ ಹಿಜಾಬ್ ವಿಚಾರವನ್ನೆತ್ತಿಕೊಂಡು ರಾಜಕೀಯ ನಡೆಸುತ್ತಿರುವ ಸಂದರ್ಭದಲ್ಲಿ ಪುನಃ ಹೇಳಲಿಕ್ಕಾಗದ ಅಶ್ಲೀಲವಾದ ಮಾತುಗಳನ್ನಾಡಿ ಮುಸ್ಲಿಂ ಯುವತಿ ಮುಸ್ಕಾನ್ ಅವರಿಗೆ ಬೆದರಿಕೆ ಕೂಡ ಹಾಕಿದ್ದಾರೆ. ಇದೇ ತರಹ ಇನ್ನೂ ಹಲವಾರು ಪ್ರಕರಣಗಳನ್ನು ಇವರ ವಿರುದ್ಧ ದಾಖಲಿಸಬೇಕಾಗಿದೆ” ಎಂದು ಆಗ್ರಹಿಸಿದ್ದಾರೆ.

“ಇಂತಹ ಪ್ರಚೋದನಾಕಾರಿ ಹೇಳಿಕೆಗಳು ನಿಲ್ಲದಿದ್ದರೆ, ಸರ್ಕಾರ ಇಂತಹ ಅಸಂಸ್ಕೃತಿಯ ಮುಖಂಡರುಗಳ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ಘಟಕದ ವತಿಯಿಂದ ನೆಲದ ಕಾನೂನಿನ ಅಡಿಯಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ. ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮ ಈ ಅಶ್ಲೀಲವಾದ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆದು ಸಾರ್ವಜನಿಕವಾಗಿ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕು” ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯ ಮಹಿಳಾ ವಿಭಾಗ ಸಬೀಹಾ ಪಟೇಲ್ ಆಗ್ರಹಿಸಿದ್ದಾರೆ.