ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
December 2023 » Page 3 of 4 » Dynamic Leader
October 23, 2024
Home 2023 December (Page 3)
ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

ಭಾರತದ ಸಂಸತ್ತಿನಿಂದ 92 ಸಂಸದರನ್ನು ಅಮಾನತು ಮಾಡಲಾಗಿದೆ. ಬಿಜೆಪಿಯ ಪ್ರಜಾಸತ್ತಾತ್ಮಕ ಸಾಧನೆಗಳಲ್ಲಿ ಇದೂ ಒಂದಾಗಿದೆ!

ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡುವುದು ಹೊಸದಲ್ಲ. ಕಳೆದ 5 ವರ್ಷಗಳಲ್ಲಿ ದೇಶದ ಪ್ರಮುಖ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಅನುಮತಿ ನೀಡುವಂತೆ ಧ್ವನಿ ಎತ್ತಿದ್ದಕ್ಕಾಗಿ 71 ಬಾರಿ ಸಂಸತ್ತಿನ 57 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಬೆಲೆ ಏರಿಕೆ, ಜಿಎಸ್‌ಟಿ ತೆರಿಗೆ ಹೆಚ್ಚಳ, ಮಹಾರಾಷ್ಟ್ರ ಕುದುರೆ ವ್ಯಾಪಾರ, ಮಣಿಪುರ ಗಲಭೆ, ರಫೇಲ್ ಸಮಸ್ಯೆ, ಟೆಲಿಫೋನ್ ಕದ್ದಾಲಿಕೆ, ಅದಾನಿ ಸಮಸ್ಯೆಯಂತಹ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ 2019 ರಿಂದ 57 ಸಂಸತ್ ಸದಸ್ಯರನ್ನು ಸಂಸತ್ತಿನಲ್ಲಿ 71 ಬಾರಿ ಅಮಾನತುಗೊಳಿಸಲಾಗಿದೆ.

2022ರ ಮುಂಗಾರು ಅಧಿವೇಶನದಲ್ಲಿ ಜಿಎಸ್‌ಟಿ ತೆರಿಗೆ ಹೆಚ್ಚಳದ ವಿರುದ್ಧ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿತು. ಆದರೆ ಚರ್ಚೆಗೆ ಅನುಮತಿ ನಿರಾಕರಿಸಲಾಯಿತು. ಆ ಸಮಯದಲ್ಲಿ ಸಂಸತ್ತಿನಲ್ಲಿ ಘೋಷಣೆ ಕೂಗಿದ 23 ಸಂಸದರನ್ನು ಅಮಾನತುಗೊಳಿಸಲಾಗಿದೆ. ಡಿಎಂಕೆ ಪಕ್ಷದ ಐವರು ಸಂಸದರು ಸೇರಿದಂತೆ ರಾಜ್ಯಸಭೆಯಲ್ಲಿ 19 ಸಂಸದರನ್ನು ಅಮಾನತುಗೊಳಿಸಲಾಯಿತು. ಇದೇ ವಿಚಾರವಾಗಿ ಲೋಕಸಭೆಯಲ್ಲಿ ನಾಲ್ವರು ಸಂಸದರನ್ನು ಅಮಾನತುಗೊಳಿಸಲಾಗಿತ್ತು.

2021ರ ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆ ಮತ್ತು ರೈತರ ಆಂದೋಲನದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದ 12 ಸಂಸದರನ್ನು ರಾಜ್ಯಸಭೆಯಲ್ಲಿ ಅಮಾನತುಗೊಳಿಸಲಾಯಿತು. ಇಂತಹ ಸಮಸ್ಯೆಗಳಿಂದಾಗಿ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳ 57 ಸಂಸದರನ್ನು 71 ಬಾರಿ ಅಮಾನತುಗೊಳಿಸಿರುವುದು ಬಹಿರಂಗವಾಗಿದೆ. ಪ್ರಶ್ನಿಸುವವರನ್ನು ಅಮಾನತು ಗೊಳಿಸುವುದೇ ಬಿಜೆಪಿ ನಾಯಕತ್ವದ ರಾಜಕೀಯ ಶೈಲಿ.

ರಾಹುಲ್ ಗಾಂಧಿ ಮತ್ತು ಮಹುವಾ ಮೊಯಿತ್ರಾ ಅವರನ್ನು ಪದಚ್ಯುತಿ ಮಾಡಿದ ಹಾಗೇ ಮಾಡಲು ಸಾಧ್ಯವಾಗದ ಕಾರಣ ‘ಅಮಾನತು’ ಎಂಬ ಅಸ್ತ್ರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಈಗಲೂ ಅದನ್ನೇ ಮಾಡಿದ್ದಾರೆ. 13 ರಂದು ಸಂಸತ್ತಿನ ಮೇಲೆ ಸ್ಮೋಕ್ ಬಾಂಬ್ ಎಸೆಯಲಾಯಿತು. ಈ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ ಕನಿಮೋಳಿ ಕರುಣಾನಿಧಿ ಸೇರಿದಂತೆ 13 ಲೋಕಸಭಾ ಸದಸ್ಯರುಗಳೊಂದಿಗೆ ಒಬ್ಬ ರಾಜ್ಯಸಭಾ ಸದಸ್ಯರೊಬ್ಬರನ್ನೂ ಅಮಾನತುಗೊಳಿಸಲಾಯಿತು. ಅದರ ನಂತರ, 33 ಲೋಕಸಭಾ ಸದಸ್ಯರು ಮತ್ತು 45 ರಾಜ್ಯಸಭಾ ಸದಸ್ಯರು ಸೇರಿದಂತೆ 78 ಸಂಸದರನ್ನು ನಿನ್ನೆ ಅಮಾನತುಗೊಳಿಸಲಾಗಿದೆ. ಹಾಗಾಗಿ ಒಟ್ಟು 92 ಸದಸ್ಯರನ್ನು ಅಮಾನತು ಮಾಡಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಭೇಟಿ ನೀಡಿ ಸಂಸತ್ ಸದಸ್ಯರಿಗೆ ಸಾಂತ್ವನ ಹೇಳಲಿಲ್ಲ? ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಬಂದು ವಿವರಣೆಯನ್ನೂ ನೀಡುತ್ತಿಲ್ಲ? ವಿವರಿಸುವಲ್ಲಿ ಇವರಿಗೆ ಸಮಸ್ಯೆ ಏನಿದೆ?

ಈ ಹಿನ್ನಲೆಯಲ್ಲಿ, ಪ್ರಧಾನಿ ಮೋದಿ ಅವರು ಹಿಂದಿ ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ‘ಸಂಸತ್ತಿನ ಭದ್ರತಾ ಲೋಪದ ಘಟನೆಯು ನೋವುಂಟುಮಾಡಿದೆ. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಅವ್ಯವಹಾರದ ಹಿಂದಿನ ವ್ಯಕ್ತಿಗಳು ಮತ್ತು ಅವರ ಉದ್ದೇಶವನ್ನು ಆಳವಾಗಿ ತನಿಖೆ ಮಾಡುವುದು ಅವಶ್ಯಕವಾಗಿದೆ. ಸಂಸತ್ತಿನ ಘಟನೆಯ ಗಂಭೀರತೆಯನ್ನು ಸುಲುಭವಾಗಿ ಅಂದಾಜಿಸಲು ಸಾಧ್ಯವಿಲ್ಲ. ಅದೇ ತೀವ್ರತೆಯಿಂದ ಲೋಕಸಭೆಯ ಸ್ಪೀಕರ್ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮೂಹಿಕ ಮನೋಭಾವದಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಇಂತಹ ವಿಷಯಗಳ ಮೇಲೆ ನಿರರ್ಥಕ ವಿವಾದಗಳನ್ನು ಎಲ್ಲರೂ ತಪ್ಪಿಸಬೇಕು’ ಎಂದು ಪ್ರಧಾನಿ ಹೇಳಿರುವುದಾಗಿ ವರದಿಯಾಗಿದೆ.

ಅದನ್ನೇ ಸಂಸತ್ತಿನಲ್ಲಿ ಹೇಳಿದರೆ ಕಡಿಮೆಯಾಗುವುದೇನು? ಸಂಸತ್ತಿನ ಸದಸ್ಯರಿಗೆ ಯಾವುದೇ ಸ್ಥಳದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಆ ವಿಷಯವನ್ನು ಸಂಸತ್ತಿನಲ್ಲಿ “ಹಕ್ಕುಗಳ ಉಲ್ಲಂಘನೆ” ಎಂಬ ಅರ್ಥದಲ್ಲಿ ಪ್ರಸ್ತಾಪಿಸಿ ಚರ್ಚೆಗಳನ್ನು ನಡೆಸಲಾಗುತ್ತದೆ. ಆದರೆ ಇಲ್ಲಿ ಎಲ್ಲಾ ಸದಸ್ಯರಿಗೆ ಬೆದರಿಕೆ ಇರುವುದಾಗಿ ಕಾಣುತ್ತಿದೆ. ಬಿಜೆಪಿ ಸದಸ್ಯರೂ ಗಾಬರಿಯಾಗಿದ್ದಾರೆ. ಇದು ದೊಡ್ಡ ಬೆದರಿಕೆ ಅಲ್ಲವೇ? ಅದನ್ನು ಚರ್ಚಿಸಬೇಕಲ್ಲವೇ?

ಇದನ್ನು ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿಲ್ಲ. “ಗೃಹ ಸಚಿವರು ಉತ್ತರಿಸಬೇಕು” ಎಂದು ಕೇಳುತ್ತಿದ್ದಾರೆ. ಸಂಸತ್ ನಲ್ಲಿ ಗೃಹ ಸಚಿವರು, ಪ್ರಧಾನಿಯ ಬದಲು ಪುಟಗಟ್ಟಲೆ ಭಾಷಣ ಮಾಡುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಈಗ ಅವರು ಉತ್ತರಿಸಬೇಕಾದ ಉತ್ತರವನ್ನು ಏಕೆ ನಿರಾಕರಿಸುತ್ತಿದ್ದಾರೆ? “ಸಂಸತ್ತಿಗೆ ಬರಲು ನಮಗೆ ಯಾವ ರಕ್ಷಣೆ ಇದೆ?” ಎಂದು ಕೇಳುವ ಹಕ್ಕು ಸಂಸತ್ತಿನ ಸದಸ್ಯರಿಗಿಲ್ಲವೇ?

ದೇಶ

ಅಹಮದಾಬಾದ್: ಸಂತ್ರಸ್ತೆ ಪತ್ನಿ ದೂರು ನೀಡಿದರೆ, ಪತಿ ಮಾಡಿದರೂ ಅದು ಅತ್ಯಾಚಾರವೇ ಎಂದು ಹೇಳಿ, ಪತಿಯ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. ಗುಜರಾತ್ ರಾಜ್ಯದ ಮಹಿಳೆಯೊಬ್ಬರು ರಾಜ್ ಕೋಟ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, “ನನ್ನ ಪತಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮತ್ತು ನನ್ನ ನಗ್ನ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಪ್ರಕಟಿಸಿದ್ದಾರೆ’ ಎಂದು ಆರೋಪಿಸಿದ್ದರು. ಆರೋಪದ ಮೇರೆಗೆ ರಾಜ್‌ಕೋಟ್ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದರು. ಅವರು ಜಾಮೀನು ಕೋರಿ ಕೆಳ ನ್ಯಾಯಾಲಯದ ಮೊರೆ ಹೋದರು.

ಆ ನ್ಯಾಯಾಲಯಗಳು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದಾಗ, ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ದಿವ್ಯೇಶ್ ಜೋಶಿ, ‘ಮಹಿಳೆಯೊಬ್ಬಳು ತನ್ನ ಪತಿಯಿಂದ ಅತ್ಯಾಚಾರವೆಸಗಿರುವುದಾಗಿ ಹೇಳಿದರೆ ಅದು ಕೂಡ ಅತ್ಯಾಚಾರವೇ. ಅನೇಕ ದೇಶಗಳಲ್ಲಿ, ಮದುವೆಯ ನಂತರ ಹೆಂಡತಿಯ ಒಪ್ಪಿಗೆಯ ವಿರುದ್ಧ ಲೈಂಗಿಕತೆಯನ್ನು ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376ರ ಅಡಿಯಲ್ಲಿ, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆದರೆ ಭಾಗಿಯಾಗಿರುವ ವ್ಯಕ್ತಿಗೆ ಶಿಕ್ಷೆಯಾಗುತ್ತದೆ.

ಸಂತ್ರಸ್ತೆಯ ಪತಿಯಾಗಿರುವುದರಿಂದ ಅವರಿಗೆ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ. ಕಳಂಕ, ಸಾಮಾಜಿಕ ಬಹಿಷ್ಕಾರ ಮತ್ತು ತಮ್ಮ ಗಂಡನ ಮೇಲೆ ಆರ್ಥಿಕ ಅವಲಂಬನೆಯ ಭಯದಿಂದ ವೈವಾಹಿಕ ಅತ್ಯಾಚಾರದ ವಿಷಯಗಳ ಬಗ್ಗೆ ಸಾಮಾನ್ಯವಾಗಿ ಮಹಿಳೆಯರು ಮೌನವಾಗಿರುತ್ತಾರೆ. ಅವರು ಹಾಗೆ ಸುಮ್ಮನಿರಬಾರದು. ಮೌನ ಮುರಿದು ಇಂತಹ ಪ್ರಕರಣಗಳನ್ನು ಮುಂದುವರಿಸಬೇಕು. ಹಾಗಾಗಿ ಸಂತ್ರಸ್ತೆಯ ಪತಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ’ ಎಂದು ಹೇಳಿದರು.   

ರಾಜಕೀಯ

‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ನವದೆಹಲಿ,
2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಜಂಟಿಯಾಗಿ ‘ಇಂಡಿಯಾ’ ಮೈತ್ರಿಕೂಟ ರಚಿಸಿದ್ದವು. ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಯುನೈಟೆಡ್ ಜನತಾ ದಳ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳನ್ನು ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಮೊದಲ ಮೂರು ಸಮಾಲೋಚನಾ ಸಭೆಗಳು ಕ್ರಮವಾಗಿ ಪಾಟ್ನಾ, ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದವು.

ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂ ಎಂಬ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಲ್ಕನೇ ಸಭೆ ನಡೆಯಲಿದೆ ಎಂದು ಘೋಷಿಸಲಾಯಿತು. ಆದರೆ ಮೈತ್ರಿ ಪಕ್ಷಗಳ ಪ್ರಮುಖ ನಾಯಕರಾದ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್ ಮತ್ತು ಅಖಿಲೇಶ್ ಯಾದವ್ ಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಸಭೆಯನ್ನು ರದ್ದುಗೊಳಿಸಲಾಯಿತು.

ಇದರ ಬೆನ್ನಲ್ಲೇ ಡಿಸೆಂಬರ್ 19 ರಂದು ಮಧ್ಯಾಹ್ನ 3 ಗಂಟೆಗೆ ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.

ಈ ಹಿನ್ನಲೆಯಲ್ಲಿ, ‘ಇಂಡಿಯಾ’ ಮೈತ್ರಿಕೂಟದ 4ನೇ ಸಭೆ ದೆಹಲಿಯಲ್ಲಿ ಆರಂಭವಾಗಿದೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಎಂ.ಕೆ.ಸ್ಟಾಲಿನ್, ರಾಹುಲ್ ಗಾಂಧಿ, ಟಿ.ಆರ್.ಬಾಲು. ಸೀತಾರಾಮ್ ಯೆಚೂರಿ, ಶರದ್ ಪವಾರ್, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್. ಮೆಹಬೂಬ ಮುಫ್ತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಮುಂತಾದ ನಾಯಕರು ಭಾಗವಹಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಸಂಸತ್ತಿನ ಚುನಾವಣಾ ಕಾರ್ಯತಂತ್ರ ಮತ್ತು ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ದೆಹಲಿಯ ಮೂಲಗಳು ತಿಳಿಸಿವೆ.

ರಾಜ್ಯ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ.

ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್‌.ಡಿ.ಆರ್‌.ಎಫ್. ನಿಂದ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಲಾಗಿದೆ.

ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್‌ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಆದ್ದರಿಂದ ಅಕ್ಟೋಬರ್‌ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್‌.ಡಿ.ಆರ್.ಎಫ್. ಅಡಿ 17,901 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ 12,577 ಕೋಟಿ ರೂ. ಮೊತ್ತವೂ ಸೇರಿದೆ. ನವೆಂಬರ್‌ 4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಬರದಿಂದ ಸಂಕಷ್ಟದಲ್ಲಿರು ಕರ್ನಾಟಕದ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೋರಲಾಗಿದೆ.

ದೇಶ

ನವದೆಹಲಿ: ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ವೇತನ ಸಹಿತ ರಜೆ ಅಗತ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, “ಮುಟ್ಟು ಮತ್ತು ಋತುಚಕ್ರವು ದೋಷವಲ್ಲ, ಮಹಿಳೆಯರ ಜೀವನದಲ್ಲಿ ಇದು ಸಹಜ. ಮುಟ್ಟನ್ನು ಎದುರಿಸುವ ಮಹಿಳೆಯಾಗಿ ನಾನು ಇದನ್ನು ಹೇಳುತ್ತಿದ್ದೇನೆ.

ಕಡಿಮೆ ಪ್ರಮಾಣದ ಮಹಿಳೆಯರೇ ತೀವ್ರ ಮುಟ್ಟಿನ ನೋವಿಗೆ ಒಳಗಾಗುತ್ತಾರೆ. ಇವು ಸಾಮಾನ್ಯವಾಗಿ ಔಷಧಿಗಳ ಮೂಲಕ ಸರಿ ಮಾಡಬಹುದಾದವುಗಳು. ಆದ್ದರಿಂದ, ಮಹಿಳೆಯರಿಗೆ ವೇತನ ನೀಡುವುದರೊಂದಿಗೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದು ಅನಿವಾರ್ಯವಲ್ಲ” ಎಂದು ಹೇಳಿದ್ದಾರೆ. ಹೀಗೆ ಸ್ಮೃತಿ ಇರಾನಿ ಮಾತನಾಡಿದ್ದು ವಿವಾದವನ್ನು ಸೃಷ್ಟಿಸಿದೆ.

ವಿದೇಶ

ಇಸ್ಲಾಮಾಬಾದ್: 44 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ (Zulfikar Ali Bhutto) ಅವರ ಗಲ್ಲು ಶಿಕ್ಷೆ ಪ್ರಕರಣದ ಮರು ವಿಚಾರಣೆಯನ್ನು 2024ರ ಜನವರಿಯಲ್ಲಿ ನಡೆಸಲಾಗುವುದು ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಪ್ರಕಟಿಸಿದೆ.

ಪಾಕಿಸ್ತಾನದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆದ ಚುನಾವಣೆಯಲ್ಲಿ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಜುಲ್ಫಿಕರ್ ಅಲಿ ಭುಟ್ಟೊ ಮೊದಲ ಪ್ರಧಾನಿಯಾಗಿ ಆಯ್ಕೆಯಾದರು. ಆದಾಗ್ಯೂ, ಆಗಿನ ಅಧ್ಯಕ್ಷ ಮುಹಮದ್ ಜಿಯಾ-ಉಲ್-ಹಕ್ (Muhammad Zia-ul-Haq) ಅವರು 1977ರಲ್ಲಿ ಭುಟ್ಟೋ ಅವರ ಆಡಳಿತವನ್ನು ಉರುಳಿಸಿ, ಮಿಲಿಟರಿ ಆಡಳಿತವನ್ನು ಹೇರಿದರು. ನಂತರ, ನವಾಬ್ ಮುಹಮ್ಮದ್ ಅಹ್ಮದ್ ಕುರೋಶಿ ಎಂಬ ರಾಜಕೀಯ ನಾಯಕನನ್ನು ಕೊಲೆ ಮಾಡಿದರು ಎಂದು ಜುಲ್ಫಿಕರ್ ಅಲಿ ಭುಟ್ಟೊ ವಿರುದ್ಧ ಕೊಲೆ ಆರೋಪ ಮಾಡಿ ಅವರನ್ನು ಏಪ್ರಿಲ್ 4, 1979 ರಂದು ಗಲ್ಲಿಗೇರಿಸಲು ಆದೇಶಿಸಿದರು.

ಈ ಹಿನ್ನಲೆಯಲ್ಲಿ, 2011ರಲ್ಲಿ ಆಗಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪಾಕ್ ಸಚಿವ ಸಂಪುಟದಲ್ಲಿ ಭುಟ್ಟೋ ಗಲ್ಲಿಗೇರಿದ ಪ್ರಕರಣವನ್ನು ಮತ್ತೆ ಮರು ತನಿಖೆಗೆ ನೀಡುವ ಬಗ್ಗೆ ತೀರ್ಮಾನ ಮಾಡಿದರು. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ರಾಷ್ಟ್ರೀಯ ಮಹತ್ವದ ಈ ಘಟನೆಗೆ ಸಂಬಂಧಿಸಿದಂತೆ, ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂಬ ಮಾಹಿತಿಯೂ ಕೇಳಿಬರುತ್ತಿದೆ.

ಇದೀಗ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ (Qazi Faez Isa) ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಜನವರಿ 2024ರಲ್ಲಿ ದಿನಾಂಕವನ್ನು ನಿರ್ದಿಷ್ಟಪಡಿಸದೆ ಮರು-ವಿಚಾರಣೆಗಾಗಿ ಪ್ರಕರಣವನ್ನು ಸ್ವೀಕರಿಸಲಾದ್ದು, ನಂತರ ಪ್ರಕರಣದ ವಿಚಾರಣೆಯನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಟಿ.ಎನ್.ಸೀತಾರಾಂ ಅವರ “ನೆನಪಿನ ಪುಟಗಳು” ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬೆಂಗಳೂರು: “ಟಿ.ಎನ್.ಸೀತಾರಾಂ ಸುಮಾರು 40 ವರ್ಷಗಳ ಒಡನಾಟವಿರುವ ಆಪ್ತಸ್ನೇಹಿತ. ನಾನು ಲಂಕೇಶ್ ಪತ್ರಿಕಾಲಯಕ್ಕೆ ಭೇಟಿ ನೀಡುತ್ತಿದ್ದೆ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ನಂಜುಂಡಸ್ವಾಮಿಯವರು ಕಾನೂನು  ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಆಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಮಾಜವಾದಿ ಯುವಜನಸಭಾದಲ್ಲಿ ನಾನು ಸದಸ್ಯನಾಗಲು ನೆರವಾದರು. 1971 ರಲ್ಲಿ ವೀರೆಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ನಾನು ಭಾಗಿಯಾಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ. ನಂಜುಂಡಸ್ವಾಮಿಯವರೇ ಕಾರಣ” ಎಂದು ಅವರು ತಮ್ಮ ಆರಂಭಿಕ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.

“ಜನತಾಪಾರ್ಟಿಯಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನನಗೆ ಪಕ್ಷದ ನಾಯಕರು ಪ್ರೋತ್ಸಾಹ ನೀಡಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ಮೇಲೆ ರಾಮಕೃಷ್ಣ ಹೆಗಡೆಯವರಿಗೆ ಬೆಂಬಲ ಸೂಚಿಸಿದೆ. ನಂತರ ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1984 ರಲ್ಲಿ ರೇಷ್ಮೆ ಸಚಿವನಾಗಿ ಕೆಲಸ ಮಾಡಿದೆ. 1985 ರಲ್ಲಿ ಜನತಾದಳದ ಪರವಾಗಿ ನಿಂತು ಜಯ ಸಾಧಿಸಿದ ನಂತರ ಪಶುಸಂಗೋಪನೆ ಸಚಿವನಾಗಿ ಕೆಲಸ ನಿರ್ವಹಿಸಿದೆ. ಆ ಸಂದರ್ಭದಲ್ಲಿ ಕಾರಣಾತರಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ನನ್ನ ಬಳಿಯಿದ್ದ ಸ್ಕೂಟರ್ ನಲ್ಲಿ ಓಡಾಡುತ್ತಿದ್ದೆ” ಎಂದು ಹೇಳಿದರು.

“ಟಿ.ಎನ್.ಸೀತಾರಾಂ ಅವರು ಬದುಕಿನ ಎಲ್ಲ ಸ್ತರಗಳ ಅನುಭವ ಇರುವವರು. ವಿದ್ಯಾರ್ಥಿ ದೆಸೆ, ಸ್ನೇಹಿತರ ಒಡನಾಟ, ರಾಜಕೀಯ, ಕಲಾ ಸೇವೆಯಲ್ಲಿ ತೊಡಗಿರುವ ಸೀತಾರಾಂ ಅವರು ಬಹುಮುಖ ಪ್ರತಿಭೆ. ರಾಮಕೃಷ್ಣ ಹೆಗಡೆಯವರ ಆಪ್ತರಾಗಿದ್ದವರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದಿದ್ದರೆ, ಶಾಸಕರಾಗುವ ಸಾಧ್ಯತೆಯೂ ಇತ್ತು. ರಾಮಕೃಷ್ಣ ಹೆಗಡೆಯವರಿಗೆ ಬಹಳ ಜನಪ್ರಿಯತೆ ಇದ್ದ ಕಾರಣ, ಜನತಾ ಪಾರ್ಟಿ ಪರವಾದ ಅಲೆ ಇತ್ತು.

“ನೆನಪಿನ ಪುಟಗಳು” ಪುಸ್ತಕವನ್ನು ಉತ್ತಮವಾಗಿ ಹಾಗೂ ಸತ್ಯವನ್ನೇ ಬರೆದಿದ್ದಾರೆ. ನನ್ನ  ಉತ್ತಮ ಸ್ನೇಹಿತರಾಗಿರುವ ಟಿ.ಎನ್.ಸೀತಾರಾಂ ಅವರು ಬರೆದಿರುವ ಕೃತಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡುತ್ತಿದ್ದೇನೆ” ಎಂದು ಹೇಳಿದರು.

ಹಿರಿಯ ನಟ, ಆಪ್‌ ಪಕ್ಷದ ರಾಜ್ಯಾಧ್ಯಕ್ಷರು ಆದ ಮುಖ್ಯಮಂತ್ರಿ ಚಂದ್ರು, ಲೇಖಕಿಯರ ಸಂಘದ ಅಧ್ಯಕ್ಷರಾದ ಹೆಚ್.ಎಲ್ ಪುಷ್ಪ, ಏಷಿಯಾನೆಟ್ ಸುವರ್ಣ ಸಂಪಾದಕರಾದ ರವಿ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದೇಶ ರಾಜಕೀಯ

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಕಾನೂನಿನ ಸೆಕ್ಷನ್ ಯಾವುದು? ಅದನ್ನು ಹೇಗೆ ರದ್ದುಗೊಳಿಸಲಾಯಿತು ಎಂಬ ಡಿಟೇಲ್ಸ್ ಇಲ್ಲಿದೆ.

ಆರ್ಟಿಕಲ್ 370ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು. ಆದರೆ, 2019ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆ ಸೆಕ್ಷನ್ ಅನ್ನು ಹಿಂತೆಗೆದುಕೊಂಡಿತು. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವುದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳ ಕುರಿತು ನ್ಯಾಯಾಲಯವು ಡಿಸೆಂಬರ್ 11 ರಂದು (ಸೋಮವಾರ) ತೀರ್ಪು ನೀಡಲಿದೆ.

ನ್ಯಾಯಾಲಯವು ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅರ್ಜಿದಾರರು ಮತ್ತು ಸರ್ಕಾರದ ವಿಚಾರಣೆಯನ್ನು ಆಲಿಸಿತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠ ಈ ತೀರ್ಪು ನೀಡಲಿದೆ. ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಈ ಪೀಠದ ಇತರ ನ್ಯಾಯಾಧೀಶರು.

ಆರ್ಟಿಕಲ್ 370 ರದ್ದತಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಏಕೆ ಮೊಕದ್ದಮೆ ಹೂಡಲಾಯಿತು?
ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ನಿರ್ಧರಿಸಿತು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಂವಿಧಾನದ ಸುಗ್ರೀವಾಜ್ಞೆ 272 ಅನ್ನು ಹೊರಡಿಸಿದರು. ಇದು 367ನೇ ವಿಧಿಗೆ ಕೆಲವು ಬದಲಾವಣೆಗಳನ್ನು ಮಾಡಿತು; ಇದು 370ನೇ ವಿಧಿಯನ್ನು ಹೇಗೆ ಓದುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಇದು ಸ್ವತಃ 370ನೇ ವಿಧಿಗೆ ತಿದ್ದುಪಡಿಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ.

ಕೆಲವೇ ಗಂಟೆಗಳಲ್ಲಿ, ಕಾನೂನಿನ ಈ ಕಾಯಿದೆಯ ಸೆಕ್ಷನ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕೆಂದು ರಾಜ್ಯಸಭೆಯು ಶಿಫಾರಸು ಮಾಡಿತು. ಮರುದಿನ, ರಾಷ್ಟ್ರಪತಿಗಳು ಈ ಶಿಫಾರಸನ್ನು ಔಪಚಾರಿಕಗೊಳಿಸಲು ಸಂವಿಧಾನದ ಆದೇಶ 273 ಅನ್ನು ಹೊರಡಿಸಿದರು. ಇದು 370ನೇ ವಿಧಿಯ ರದ್ದತಿಯನ್ನು ದೃಢಪಡಿಸಿತು. ಆಗಸ್ಟ್ 9 ರಂದು ಸಂಸತ್ತು ಜಮ್ಮು ಮತ್ತು ಕಾಶ್ಮೀರ ಪುನರ್ನಿರ್ಮಾಣ ಕಾಯ್ದೆಯನ್ನು ಅಂಗೀಕರಿಸಿತು. ಇದು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ವಿಚಾರಣೆಯ ಸಮಯದಲ್ಲಿ, 1957ರಲ್ಲಿ ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯ ಅವಧಿ ಮುಗಿದ ನಂತರ, ಸಂವಿಧಾನದಲ್ಲಿ ತಾತ್ಕಾಲಿಕವಾಗಿ ಉಲ್ಲೇಖಿಸಲಾದ 370ನೇ ವಿಧಿ ಹೇಗೆ ಶಾಶ್ವತವಾಯಿತು ಎಂದು ಸುಪ್ರೀಂ ಕೋರ್ಟ್ ಕೇಳಿತು. ಕೆಲವು ಅರ್ಜಿದಾರರು ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯ ಅವಧಿಯು 1957 ರಲ್ಲಿ ಕೊನೆಗೊಂಡಿದ್ದರಿಂದ, ಅದು ಹಿಂದಿನ ರಾಜ್ಯದ ಸಂವಿಧಾನವನ್ನು ರೂಪಿಸಿದ ನಂತರ, ಈ ವಿಧಿಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ವಾದಿಸಿದರು.

ಅಂತಹ ಕ್ರಮವನ್ನು ತೆಗೆದುಕೊಳ್ಳುವ ಮೊದಲು ಅದರ ಒಪ್ಪಿಗೆ ಅಗತ್ಯವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನ ಸಭೆಯ ಅನುಪಸ್ಥಿತಿಯಲ್ಲಿ, 370ನೇ ವಿಧಿಯನ್ನು ರದ್ದುಗೊಳಿಸಲು ಯಾರು ಶಿಫಾರಸು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಕೇಳಿತು. ಈ ವಿಧಿಯನ್ನು ರದ್ದುಪಡಿಸುವಲ್ಲಿ ಯಾವುದೇ “ಸಾಂವಿಧಾನಿಕ ವಂಚನೆ” ಇಲ್ಲ ಎಂದು ಕೇಂದ್ರವು ವಾದಿಸಿತು.

ಸೆಕ್ಷನ್ 370 ಎಂದರೇನು?
ಸಂವಿಧಾನದ 370ನೇ ವಿಧಿಯು ಭಾರತದ ಒಕ್ಕೂಟದೊಳಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದೆ. ಸಾಂವಿಧಾನಿಕ ಕಾನೂನು ತಜ್ಞ ಮತ್ತು ಹೈದರಾಬಾದ್‌ನ NALSAR ಕಾನೂನು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಫೈಸನ್ ಮುಸ್ತಫಾ ಅವರು, “ಅಕ್ಟೋಬರ್ 17, 1949 ರಂದು ಸಂವಿಧಾನಕ್ಕೆ ಸೇರಿಸಲಾಯಿತು, ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತದ ಸಂವಿಧಾನದಿಂದ ವಿನಾಯಿತಿ ನೀಡುತ್ತದೆ (ಆರ್ಟಿಕಲ್ 1 ಮತ್ತು ಆರ್ಟಿಕಲ್ 370 ಹೊರತುಪಡಿಸಿ) ಮತ್ತು ರಾಜ್ಯವು ತನ್ನದೇ ಆದ ಸಂವಿಧಾನವನ್ನು ರೂಪಿಸಲು ಅನುಮತಿಸುತ್ತದೆ.

ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಶಾಸಕಾಂಗ ಅಧಿಕಾರಗಳನ್ನು ನಿರ್ಬಂಧಿಸುತ್ತದೆ. ಇನ್‌ಸ್ಟ್ರುಮೆಂಟ್ ಆಫ್ ಆಕ್ಸೆಸ್ (IoA) ನಲ್ಲಿ ಒಳಗೊಂಡಿರುವ ವಿಷಯಗಳಿಗೆ ಕೇಂದ್ರ ಕಾಯಿದೆಯನ್ನು ವಿಸ್ತರಿಸಲು ರಾಜ್ಯ ಸರ್ಕಾರದೊಂದಿಗೆ ಕೇವಲ “ಸಮಾಲೋಚನೆ” ಮಾತ್ರ ಅಗತ್ಯವಿದೆ. ಆದರೆ ಅದನ್ನು ಇತರ ವಿಷಯಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರದ “ಸಹಕಾರ” ಅತ್ಯಗತ್ಯವಿದೆ. 1947ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯು ಬ್ರಿಟಿಷ್ ಭಾರತವನ್ನು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜಿಸಿದಾಗ IoA ಜಾರಿಗೆ ಬಂದಿತು.

1947ರಲ್ಲಿ ಉಪಖಂಡದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಅಂತ್ಯದ ನಂತರ, ಸ್ವತಂತ್ರ ಪ್ರಾಂತ್ಯಗಳನ್ನು ಭಾರತದ ಒಕ್ಕೂಟದ ಅಡಿಯಲ್ಲಿ ತರುವ ಪ್ರಯತ್ನಗಳನ್ನು ಅದು ಅನುಸರಿಸಿತು. ಕೆಲವು ಇತರ ರಾಜ್ಯಗಳು (ಮಿಜೋರಾಂ, ನಾಗಾಲ್ಯಾಂಡ್, ಮಹಾರಾಷ್ಟ್ರ, ಗುಜರಾತ್ ಇತ್ಯಾದಿ) ಸಹ 371A ನಿಂದ 371I ಅನ್ನು ಹೊಂದಿವೆ. 371ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಅನುಭವಿಸುತ್ತಿದೆ. 1948ರಲ್ಲಿ ಜಮ್ಮು ಮತ್ತು ಕಾಶ್ಮೀರ ಕುರಿತು ಭಾರತ ಸರ್ಕಾರದ ಶ್ವೇತಪತ್ರದಲ್ಲಿ ಹೇಳಿರುವಂತೆ ಭಾರತದ ಸೇರ್ಪಡೆಯನ್ನು ಸಂಪೂರ್ಣವಾಗಿ ತಾತ್ಕಾಲಿಕವೆಂದು ಪರಿಗಣಿಸುತ್ತದೆ ಎಂದು ತಿಳಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

370ನೇ ವಿಧಿಯನ್ನು ಏಕೆ ರದ್ದುಗೊಳಿಸಲಾಯಿತು?
370ನೇ ವಿಧಿ ರದ್ದತಿ ಹಲವು ವರ್ಷಗಳಿಂದ ಬಿಜೆಪಿ ಪ್ರಣಾಳಿಕೆಯಲ್ಲಿದೆ. ಇದು ಬಿಜೆಪಿಯ ಮಾತೃ ಘಟಕ ಆರ್‌ಎಸ್‌ಎಸ್‌ನ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.

1953 ರಲ್ಲಿಯೇ ಜನಸಂಘದ ನಾಯಕ ಬಲರಾಜ್ ಮಧೋಕ್ ಅವರಿಂದ ಸ್ಥಾಪಿಸಲ್ಪಟ್ಟ ಜಮ್ಮು ಮತ್ತು ಕಾಶ್ಮೀರ ಪ್ರಜಾ ಪರಿಷತ್, “ಸಂಪೂರ್ಣ ಏಕೀಕರಣ” ಕ್ಕಾಗಿ ಚಳುವಳಿಯನ್ನು ಪ್ರಾರಂಭಿಸಿತು. ಭಾರತೀಯ ಜನಸಂಘದ (ನಂತರ ಬಿಜೆಪಿ) ಸಂಸ್ಥಾಪಕ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ, “ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್, ನಹೀ ಚಲೇಗಾ, ನಹೀ ಚಲೇಗಾ (ಒಂದು ದೇಶದಲ್ಲಿ ಎರಡು ಸಂವಿಧಾನಗಳು, ಎರಡು ಪ್ರಧಾನ ಮಂತ್ರಿಗಳು ಮತ್ತು ಎರಡು ಧ್ವಜಗಳು ಇರಲು ಸಾಧ್ಯವಿಲ್ಲ) ಎಂದು ಆಕ್ರೋಶ ವ್ಯಕ್ತಪಡಿಸಿದರು.

2019ರಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು “370ನೇ ವಿಧಿ ರಾಷ್ಟ್ರದ ಏಕತೆಗೆ ಹಾನಿಕಾರಕ” ಎಂದು ಹೇಳಿದರು. “370ನೇ ವಿಧಿ ಕಾಶ್ಮೀರಿ ಸಂಸ್ಕೃತಿಯನ್ನು ದೇಶದ ಭೌಗೋಳಿಕ ಮೂಲೆಗೆ ಸೀಮಿತಗೊಳಿಸಿದೆ ಮತ್ತು ಇದನ್ನು ತೆಗೆದುಹಾಕಿದರೆ ರಾಜ್ಯದ ಸಂಸ್ಕೃತಿ ದೇಶದ ಇತರ ಭಾಗಗಳಿಗೆ ಹರಡುತ್ತದೆ” ಎಂದು ಅವರು ಹೇಳಿದರು.

ಕಾಶ್ಮೀರದ ಕಾರಣವನ್ನು ಕೈಗೆತ್ತಿಕೊಳ್ಳುವ ನೆಹರೂ ಅವರ ನಿರ್ಧಾರವನ್ನೂ ಶಾ ಟೀಕಿಸಿದರು. ಅದರ ಬಗ್ಗೆ ಪಾಕಿಸ್ತಾನವೂ ವಿಶ್ವಸಂಸ್ಥೆಗೆ ಹಕ್ಕು ಮಂಡಿಸಿತು. ನೆಹರೂ ಏಕೆ ಹಾಗೆ ಮಾಡಿದರು ಎಂಬುದರ ಕುರಿತು ಇಲ್ಲಿ ಇನ್ನಷ್ಟು ಓದಬೇಕಾಗಿದೆ. ಗೃಹ ಸಚಿವರು ಇತ್ತೀಚೆಗೆ ಸಂಸತ್ತಿನಲ್ಲಿ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯ “ಮೂಲ ಕಾರಣ” ಎಂದು ಹೇಳಿದರು. ನೆಹರೂ ಅವರ “ತಪ್ಪುಗಳಿಂದ” ಈ ಪ್ರದೇಶವು ಹಾನಿಗೊಳಗಾಗಿದೆ ಎಂದು ಅವರು ಹೇಳಿದರು.

Source: indianexpress.com

ದೇಶ

ಸೂರತ್: ಗುಜರಾತ್‌ನ ಸೂರತ್‌ ನಗರದಲ್ಲಿ ವಿಶ್ವದ ಅತಿ ದೊಡ್ಡ ವ್ಯಾಣಿಜ್ಯ ಕೇಂದ್ರ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 17 ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್‌ನ ಸೂರತ್‌ನಲ್ಲಿ 35.54 ಎಕರೆ ಪ್ರದೇಶದಲ್ಲಿ 9 ಆಯತಾಕಾರದ ರಚನೆಗಳಲ್ಲಿ (Rectangular Structures) 15 ಮಹಡಿಗಳ ಡೈಮಂಡ್ ಟ್ರೇಡ್ ಸೆಂಟರ್ ನಿರ್ಮಾಣ ಪೂರ್ಣಗೊಂಡಿದೆ. 2015ರಲ್ಲಿ ಈ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಯಿತು ಎನ್ನಲಾಗಿದೆ.

ಅಮೆರಿಕ ದೇಶದ ಸೇನಾ ಪ್ರಧಾನ ಕಛೇರಿಯಾದ ‘ಪೆಂಟಗನ್’ ಕಟ್ಟಡವೇ ವಿಶ್ವದ ಅತಿ ದೊಡ್ಡ ಕಟ್ಟಡವಾಗಿದೆ. ಈ ಹಿನ್ನಲೆಯಲ್ಲಿ ಗುಜರಾತ್‌ನ ಸೂರತ್ ನಗರದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಕೇಂದ್ರದ ಕಟ್ಟಡವೇ ವಿಶ್ವದ ಅತಿ ದೊಡ್ಡ ಕಟ್ಟಡ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಕಟ್ಟಡವನ್ನುಇದೇ 17 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ರಾಜ್ಯ ಸಿನಿಮಾ

ಬೆಂಗಳೂರು: ಮುಖ್ಯಮಂತ್ರಿ ಅವರು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟಿ ಶ್ರೀಮತಿ ಲೀಲಾವತಿಯವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವವನ್ನು ಸಲ್ಲಿಸಿ ಮಾತನಾಡಿದರು. “ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ಹಿರಿಯ ನಟಿ ಲೀಲಾವತಿಯವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲು ಆದೇಶಿಸಲಾಗಿದೆ” ಎಂದರು.

“ಲೀಲಾವತಿಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ನಿವಾಸಕ್ಕೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದೆ. ಆಗ ಅವರ ಮಗ ವಿನೋದ್ ರಾಜ್‌ರನ್ನು ಭೇಟಿಯಾಗಿ, ಅವರಿಗೆ ಯಾವುದೇ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ ಎಂದು ಧೈರ್ಯ ತುಂಬಲಾಗಿತ್ತು. ಲೀಲಾವತಿ ಹಾಗೂ ವಿನೋದರಾಜ್ ಅವರ ತಾಯಿಮಗನ ಸಂಬಂಧ ಆದರ್ಶಮಯವಾದದ್ದು” ಎಂದು ಹೇಳಿದರು.

“ರಂಗಭೂಮಿಯಿಂದ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.  ನೈಜ ನಟನೆಗೆ ಹೆಸರಾಗಿದ್ದ ಅವರು ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರರಂಗದಲ್ಲಿ ನಟಿಸಿದ್ದಾರೆ. ಬಹುಭಾಷಾ ಕಲಾವಿದರಾಗಿದ್ದ ಲೀಲಾವತಿಯವರು ನಾಯಕಿ, ಪೋಷಕ ನಟಿಯಾಗಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಡಾ.ರಾಜ್ ಕುಮಾರ್ ಹಾಗೂ ಲೀಲಾವತಿಯವರದು ಜನಪ್ರಿಯ ಜೋಡಿಯಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿ ಗೆಜ್ಜೆಪೂಜೆ, ಕುಲವಧು, ಭಕ್ತ ಕುಂಬಾರ ಸೇರಿದಂತೆ ಅನೇಕ ಚಲನಚಿತ್ರಗಳನ್ನು ವೀಕ್ಷಿಸಿದ್ದೆ” ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು.

“ಲೀಲಾವತಿಯವರು ಒಬ್ಬ ಪರಿಪೂರ್ಣ ಕಲಾವಿದರಾಗಿದ್ದರು. ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಪಾತ್ರಗಳನ್ನು ಲೀಲಾಜಾಲವಾಗಿ, ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಆಸ್ಪತ್ರೆ, ಪಶುವೈದ್ಯಕೀಯ ಆಸ್ಪತ್ರೆಗಳನ್ನು ನಿರ್ಮಿಸಿದ್ದರು. ರೈತಾಪಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಲೀಲಾವತಿಯವರು ಪ್ರಾಣಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಜೀವಿಗಳೆಡೆಗಿನ ಪ್ರೀತಿ ಅವರಿಗೆ ರಕ್ತಗತವಾಗಿ ಬಂದಿತ್ತು.

ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದ ಲೀಲಾವತಿಯವರು ಮನುಷ್ಯತ್ವದ ಮೂರ್ತರೂಪವಾಗಿದ್ದರು. ತಾನು ಗಳಿಸಿದ್ದನ್ನು ಪರರಿಗೆ ಹಂಚುವ ದೊಡ್ಡ ಗುಣ ಅವರಲ್ಲಿತ್ತು. ಅವರ ಪ್ರತಿಭೆಗೆ ಪದ್ಮಶ್ರೀ ಪ್ರಶಸ್ತಿಯಂತಹ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆಯದಿರುವುದು ದುರಂತ” ಎಂದು ವಿಷಾಧಿಸಿದರು.

ನಟಿ ಲೀಲಾವತಿಯವರ ಸಾವು ಆಘಾತವನ್ನುಂಟು ಮಾಡಿದ್ದು, ಕನ್ನಡ ಚಿತ್ರರಂಗವಲ್ಲದೇ, ಭಾರತೀಯ ಸಿನಿಮಾ ರಂಗಕ್ಕೂ ತುಂಬಲಾರದ ನಷ್ಟವುಂಟಾಗಿದೆ.  ಅವರ ಕುಟುಂಬ ಹಾಗೂ ಅಪಾರ ಅಭಿಮಾನ ಬಳಗಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದರು.