ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2023 » Page 13 of 76 » Dynamic Leader
October 24, 2024
Home 2023 (Page 13)
ರಾಜಕೀಯ

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ, ಬೆಂಗಳೂರಿಗೆ ಸೇರಿಸುವೆ’ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು, ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.

‘ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ’ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದು ಕಿಡಿಕಾರಿದ್ದಾರೆ.

‘ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ’ ಎನ್ನುವ ಇವರು; ಇಷ್ಟು ದಿನ ಶಾಸಕರಾಗಿ, ಸಚಿವರಾಗಿ ಉಪ ಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ! ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿದೆ. ಕನಕಪುರಕ್ಕೆ 52 ಕೀ.ಮೀ. ದೂರದಲ್ಲಿದೆ ಬೆಂಗಳೂರು. 25 ಕೀ.ಮೀ. ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನಕಪುರ ತಾಲೂಕನ್ನು ಬೆಂಗಳೂರು ನಗರದೊಂದಿಗೆ ಸೇರಿಸಲು ಡಿ.ಕೆ.ಶಿವಕುಮಾರ್ ಭರವಸೆ!

2006-2007ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿ.ಕೆ.ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು!

ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತು!! ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ.. ಅದೇ ನಮ್ಮ ಪುಣ್ಯ ಎಂದು ವ್ಯಂಗ್ಯವಾಡಿದರು.

ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರೇ ಮೈತ್ರಿ ಸರಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು. ಯೋಜನೆಯೂ, ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು. ಉಪ ಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ? ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ: ತನ್ನ ನಿಲುವನ್ನು ಬದಲಿಸಿಕೊಂಡ ಚೀನಾ!

ಬೆಂಗಳೂರು ರಾಜಕೀಯ

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರದ ಶಿವನಹಳ್ಳಿಯ ವೀರಭದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಭೂಮಿ ಪೂಜೆ ಮತ್ತು ಶಿಲಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಿಮ್ಮ ಆಸ್ತಿಗಳನ್ನ ಹೆಚ್ಚು ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದ್ದಾನೆ. ಯಾರು ಸಹ ನಿಮ್ಮ ಆಸ್ತಿಗಳನ್ನು ಮಾರಿಕೊಳ್ಳಬೇಡಿ. ನಾವು ಬೆಂಗಳೂರು ಗ್ರಾಮಾಂತರ ಅಲ್ಲ… ರಾಮನಗರ ಅಲ್ಲ… ಬೆಂಗಳೂರು ನಗರದವರು ಎಂದು ಹೇಳುವ ಮೂಲಕ ಕನಕಪುರ ತಾಲೂಕನ್ನು ಬೆಂಗಳೂರು ನಗರದೊಂದಿಗೆ ಸೇರಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ನಿಮ್ಮ ಜೋಬಿಗೆ ನಾನು ದುಡ್ಡು ಹಾಕಲು ಆಗೋದಿಲ್ಲ. ಪ್ರತಿಯೊಬ್ಬರಿಗೂ ಮನೆ ಕೊಡಿಸಲು ಆಗೋದಿಲ್ಲ. ಆದರೆ ನಿಮ್ಮ ಆಸ್ತಿಯ ಮೌಲ್ಯವು ಒಂದು ಇದ್ದರೆ ಅದನ್ನು 10ರಷ್ಟು ಹೆಚ್ಚು ಮಾಡಬಹುದು. ಅಷ್ಟು ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಆ ಕೆಲಸವನ್ನು ನಾನು ಮಾಡಿದ್ದೇನೆ. ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನನ್ನಿಂದ ಏನೂ ಕೊಡಲು ಆಗೋದಿಲ್ಲ, ಆಸ್ತಿಯನ್ನು ಮಾತ್ರ ನೀಡಲು ಸಾಧ್ಯ ಎಂದರು.

ನೀವು ರಾಮನಗರದವರು ಅಲ್ಲ, ಬೆಂಗಳೂರು ಜಿಲ್ಲೆಯವರು; ಇದನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಳ್ಳಿ. ಸುಮ್ಮನೆ ನಮ್ಮನ್ನು ರಾಮನಗರ ಅಂತ ಹೇಳುವ ಮೂಲಕ ನಮ್ಮನ್ನು ಮೂಲೆ ಗುಂಪು ಮಾಡಿದ್ದಾರೆ. ಸುಮ್ಮನೆ ಯಾರೋ ಹೆಸರು ಮಾಡಿಕೊಳ್ಳಬೇಕು ಎಂಬುದಕ್ಕಾಗಿ ಇದನ್ನು ಮಾಡಿದ್ದಾರೆ. ದೇವಸ್ಥಾನದಲ್ಲಿ ನಿಂತು ಇದನ್ನು ಹೇಳುತ್ತಿದ್ದೇನೆ. ನಾನೇನು ಮಾಡಬೇಕೋ ಅದನ್ನು ಮಾಡ್ತೀನಿ, ಮುಂದಿನ ದಿನಗಳಲ್ಲಿ ಅಡಿಗಳಲ್ಲಿ ಇಲ್ಲಿ ಭೂಮಿ ವ್ಯವಹಾರ ನಡೆಯುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ: ತನ್ನ ನಿಲುವನ್ನು ಬದಲಿಸಿಕೊಂಡ ಚೀನಾ!

ವಿದೇಶ

ಬೀಜಿಂಗ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಲ್ಲಿ ಮೌನವಾಗಿದ್ದ ಚೀನಾ ಇದೀಗ ತನ್ನ ನಿಲುವನ್ನು ಬದಲಿಸಿದ್ದು, “ಇಸ್ರೇಲ್ ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ” ಎಂದು ಹೇಳಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ 18ನೇ ದಿನವೂ ಮುಂದುವರಿದಿದೆ. ಈ ದಾಳಿಯ ಪ್ರಾರಂಭದಿಂದಲೂ, ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ದೇಶಗಳು ಇಸ್ರೇಲನ್ನು ಬೆಂಬಲಿಸುತ್ತಾ ಹಮಾಸ್ ಹೋರಾಟಗಾರರನ್ನು ಖಂಡಿಸುತ್ತಾ ಬಂದಿವೆ. ಆದರೆ ಈ ವಿಚಾರದಲ್ಲಿ ಚೀನಾ ಯಾರನ್ನೂ ಬೆಂಬಲಿಸದೆ ದೂರವೇ ಉಳಿದಿತ್ತು.

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ಯಾಲೆಸ್ತೀನ್ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಅರಬ್ ರಾಷ್ಟ್ರಗಳು ಮತ್ತು ಈಜಿಪ್ಟ್ ಜೊತೆ ಸೇರಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಅಮಾಯಕರನ್ನು ಕೊಂದ ಹಮಾಸ್ ಭಯೋತ್ಪಾದಕರನ್ನು ಖಂಡಿಸಬೇಕು ಎಂದು ಅಮೆರಿಕಾ ಸಂಸದರು ಚೀನಾವನ್ನು ಒತ್ತಾಯಿಸುತ್ತಾ ಬಂದರು. ಇಸ್ರೇಲ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿತ್ತು.

ಇದರ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, “ಪ್ರತಿಯೊಂದು ರಾಷ್ಟ್ರಕ್ಕೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಅದೇ ಸಮಯದಲ್ಲಿ, ನಾವು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಮುಗ್ಧ ಜನರನ್ನು ರಕ್ಷಿಸಬೇಕು. ಯುದ್ಧದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅಲ್ಲಿ ಪರಿಸ್ಥಿತಿ ಕೆಟ್ಟಿರುವುದು ಬೇಸರವಾಗಿದೆ. ಅಮಾಯಕರು ಸಂಕಷ್ಟಕ್ಕೆ ಸಿಲುಕಿರುವುದನ್ನು ನಾನು ಖಂಡಿಸುತ್ತೇನೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ವಿರುದ್ಧವೂ ಪ್ರತಿಭಟಿಸುತ್ತೇನೆ” ಎಂದು ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇದೇ 26 ರಿಂದ 28 ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹಮಾಸ್ ಸಂಘಟನೆಯನ್ನು ಚೀನಾ ಖಂಡಿಸಿರುವುದು ಗನಾರ್ಹ.

ವಿದೇಶ

ವ್ಯಾಟಿಕನ್: ಇಸ್ರೇಲ್ ಮತ್ತು ಹಮಾಸ್ ಭಯೋತ್ಪಾದಕರ ನಡುವಿನ ಸಮರ ಮುಂದುವರಿದಿರುವಾಗಲೇ ಪೋಪ್ ಫ್ರಾನ್ಸಿಸ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ಸೇನೆ ಮತ್ತು ಹಮಾಸ್ ಭಯೋತ್ಪಾದಕರ ನಡುವೆ ಕಳೆದ ಅಕ್ಟೋಬರ್ 7 ರಿಂದ ದಾಳಿ ಮುಂದುವರಿಯುತ್ತಿದೆ. ಇದರಲ್ಲಿ ಇಸ್ರೇಲೀಯರು 1,400 ಮಂದಿ ಮತ್ತು ಪ್ಯಾಲೆಸ್ತೀನಿಯರು 4,469 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ.

ಈ ಹಿನ್ನಲೆಯಲ್ಲಿ, ವ್ಯಾಟಿಕನ್ ಕ್ಯಾಥೋಲಿಕ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಜಗತ್ತಿನ ವಿವಿಧ ಸಂಘರ್ಷಗಳನ್ನು ಮತ್ತು ಶಾಂತಿಯ ಮಾರ್ಗಗಳನ್ನು ಗುರುತಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳ ಗಮನವನ್ನು ಬಿಜೆಪಿಯತ್ತ ತಿರುಗಿಸಲು ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಪ್ರಮುಖ ಪಕ್ಷವಾಗಿ ಬೆಳೆದಿದೆ ಎಂದು ತೋರಿಸಿ, ಡಿಎಂಕೆಗೆ ಬಿಜೆಪಿಯೇ ಪರ್ಯಾಯ ಎಂಬ ಭ್ರಮೆಯನ್ನು ಮೂಡಿಸಲು ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಧ್ಯಕ್ಷರಾದ ಮೇಲೆ ಇದು ಮಿತಿಮೀರಿ ಹೋಗಿದೆ.

ಪ್ರಚಾರದ ಗೀಳಿನಿಂದ ಸಮಾಜ ಸುಧಾರಣಾ ಚಳವಳಿಯ ಪಿತಾಮಹ ತಂದೆ ಪೆರಿಯಾರ್, ಡಿಎಂಕೆ ಸಂಸ್ಥಾಪಕರಾಗಿರುವ ದಿವಂಗತ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಮತ್ತು ಎಂ.ಕರುಣಾನಿಧಿ ಮುಂತಾದವರ ಬಗ್ಗೆ ಮತ್ತು ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಮತ್ತು ಕೀಳು ಅಭಿರುಚಿಯ ಭಾಷಣಗಳನ್ನು ಮಾಡುವುದು, ಪೋಸ್ಟರ್ ಅಂಟಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕವಾಗಿ ಬರೆಯುವುದು ಮುಂತಾದವುಗಳನ್ನು ಮಾಡುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜೆಯಲಲಿತಾ ಅವರ ಬಗ್ಗೆಯೂ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಎಐಎಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆವಾಗಲೇ ಮೈತ್ರಿಯಿಂದ ಬಿಜೆಪಿಯನ್ನು ಹೊರಗಿಡುವ ಆಲೋಚನೆಯನ್ನು ಎಐಎಡಿಎಂಕೆ ನಾಯಕರು ಮಾಡಿದ್ದರು. ಆದರೆ, ಜಿಜೆಪಿ ಕೇಂದ್ರ ವರಿಷ್ಟರು ಮಾಡಿದ್ದ ಸಂಧಾನದಿಂದ ಸುಮ್ಮನಾದರು.

ಆದರೆ, ಅಣ್ಣಾಮಲೈ ಸುಮ್ಮನಾಗಲಿಲ್ಲ. ಮತ್ತೆ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಲ್ಲದೇ ಎಐಎಡಿಎಂಕೆ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡಿದರು. ಇದರಿಂದ ಕೆಂಡಾಮಂಡಲರಾದ ಎಐಎಡಿಎಂಕೆ ನಾಯಕರು ಬಿಜೆಪಿ ಮೈತ್ರಿಯನ್ನು ಮುರಿದುಕೊಂಡು, “ಮುಂಬರುವ 2024ರ ಸಂಸತ್ ಚುನಾವಣೆಯಲ್ಲಿ ಮಾತ್ರವಲ್ಲ, 2026ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ” ಎಂದು ಘೋಷಿಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರು ಈ ಬಾರಿ ಮಾಡಿದ ಯಾವ ಪ್ರಯತ್ನಗಳೂ ಕೈಕೊಡಲಿಲ್ಲ; ಮೈತ್ರಿ ಮುರಿದೇ ಹೋಯಿತು. ಮೈತ್ರಿ ಮುರಿಯಲು ಮತ್ತೊಂದು ಕಾರಣವೂ ಇದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದಲ್ಲೇ ಚುನಾವಣೆ ಮೈತ್ರಿ ರಚಣೆಯಾಗಿತ್ತು. ಆದರೆ, ಅದನ್ನು ಬಿಜೆಪಿಯವರು ‘ಬಿಜೆಪಿ ನೇತೃತ್ವದ ಮೈತ್ರಿಕೂಟ’ ಎಂದೇ ಹೇಳಿಕೊಂಡು ಬರುತ್ತಿದ್ದರು. ಮತ್ತು ಅದನ್ನೇ ನೆಪ ಮಾಡಿಕೊಂಡು, ‘ನಾವೇ ಸರಿಯಾದ ವಿರೋಧ ಪಕ್ಷ’ ಎಂದು ಎಐಎಡಿಎಂಕೆ ನಾಯಕರ ಬಳಿಯೇ ಹೇಳಿಕೊಂಡಿದ್ದರು.

ಅದುಮಾತ್ರವಲ್ಲ, ಮುಂದಿನ ಸಂಸತ್ ಮತ್ತು ವಿಧಾನಸಭೆ ಚುನಾವಣೆಯನ್ನು ಬಿಜೆಪಿ ನೇತೃತ್ವದಲ್ಲೇ ಎದುರಿಸಲಾಗುವುದು; ಅಣ್ಣಾಮಲೈ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದೆಲ್ಲಾ ಹೇಳಿಕೊಂಡು ತಿರುಗಾಡಿದ ಪರಿಣಾಮದಿಂದಾಗಿ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮೈತ್ರಿಯಿಂದ ಬಿಜೆಪಿಯನ್ನು ಕಿತ್ತೆಸೆದರು. ‘5 ರಾಜ್ಯಗಳ ಚುನಾವಣೆ ಘೋಷಣೆ ಆಗಿದೆ, ನಂತರ ಸಂಸತ್ ಚುನಾವಣೆ ಬರಲಿದೆ ಅಲ್ಲಿಯವರೆಗೂ ಬಿಜೆಪಿಯಿಂದ ನಮಗೆ ಏನೂ ತೋದರೆಯಿಲ್ಲ’ ಎಂದು ಲೆಕ್ಕಾಚಾರ ಮಾಡಿದ ಎಡಪ್ಪಾಡಿ ಪಳನಿಸ್ವಾಮಿ ಮೈತ್ರಿಯನ್ನು ಮುರಿದುಕೊಂಡು ದೂರ ಸರಿದರು.

ತಮಿಳುನಾಡಿನಲ್ಲಿ ‘ನೋಟಾಗಿಂತ ಕಡಿಮೆ ಮತಗಳನ್ನು ಪಡೆಯುವ ಪಕ್ಷ’ ಎಂಬ ಹಣೆಪಟ್ಟಿಯ ಬಿಜೆಪಿ ಇಂದು ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ. ಪಾದಯಾತ್ರೆ ನಡೆಸುವುದು, ಪ್ರೆಸ್ ಮೀಟ್ ಮಾಡುವುದು, ಡಿಎಂಕೆ ಹಾಗೂ ಎಐಎಡಿಎಂಕೆ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಬಿಗಿಯುವುದು ಇತ್ಯಾದಿ. ಒಂದು ಸುಳ್ಳನ್ನು ಮರೆಮಾಚಲು ಇನ್ನೊಂದು ಸುಳ್ಳನ್ನು ಹೇಳುವುದು; ಅದರಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಳ್ಳನ್ನು ಹೇಳುವುದು. ಅದೂ ಸಾಧ್ಯವಾಗದಿದ್ದರೆ ಅವಹೇಳನಕಾರಿಯಾಗಿ ಮಾತನಾಡುವುದು. ಇದುವೇ ತಮಿಳುನಾಡು ಬಿಜೆಪಿಯ ಸ್ಟ್ರಾಟರ್ಜಿ.

ಇದರಿಂದ ಆಡಳಿತರೂಢ ಡಿಎಂಕೆ ಸರ್ಕಾರ, ದ್ರಾವಿಡ ಚಳವಳಿಯ ನೇತಾರರನ್ನು, ಮುಖ್ಯಮಂತ್ರಿಯನ್ನು, ಸಚಿವರುಗಳನ್ನು, ಶಾಸಕರು ಮತ್ತು ಸಂಸದರ ವಿರುದ್ಧ ಅವಹೇಳನಕಾರಿ ಭಾಷಣ ಮಾಡುವವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕವಾಗಿ ಕಂಟಂಟ್ ಬರೆಯುವವರ ವಿರುದ್ಧ  ದೂರು ದಾಖಲಿಸಿ ಬಂಧಿಸುತ್ತಿದೆ. ಇದನ್ನು ಕೇಂದ್ರ ಬಿಜೆಪಿ ನಾಯಕರು “ಕ್ರೂರ ಮತ್ತು ಅಸಂಬದ್ಧ ವರ್ತನೆ” ಎಂದು ಬಣ್ಣಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿರುವ ಕೇಂದ್ರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಾಲ್ಕು ಸದಸ್ಯರ ನಿಯೋಗವೊಂದನ್ನು ರಚಿಸಿ, ತಮಿಳುನಾಡಿನಿಂದ ವರದಿ ತರುವಂತೆ ಸೂಚಿಸಿದ್ದಾರೆ. ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಬಿಜೆಪಿ ಕಾರ್ಯಕರ್ತರು ತಮಿಳುನಾಡು ಸರ್ಕಾರದಿಂದ ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಎದುರಿಸುತ್ತಿದ್ದಾರೆ. ತಮಿಳುನಾಡಿಗೆ ಭೇಟಿ ನೀಡಲು ನಾಲ್ವರು ಸದಸ್ಯರ ನಿಯೋಗವನ್ನು ರಾಷ್ಟ್ರೀಯ ಅಧ್ಯಕ್ಷ ಜಿ.ಪಿ.ನಡ್ಡಾ ನಾಮನಿರ್ದೇಶನ ಮಾಡಿದ್ದಾರೆ. ಅದರ ವರದಿಯನ್ನು ಆದಷ್ಟು ಬೇಗ ಸಲ್ಲಿಸಿ.” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ವಿ.ಸದಾನಂದಗೌಡ, ಮಧ್ಯಪ್ರದೇಶದ ಮಾಜಿ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್, ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಡಿ.ಪುರಂದೇಶ್ವರಿ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರನ್ನೊಳಗೊಂಡ ನಿಯೋಗವು ಇದನ್ನು ಮುನ್ನಡೆಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾಜಿ ಸಚಿವ ಪೊನ್ ರಾಧಾಕೃಷ್ಣನ್, ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ನಾಗಾಲ್ಯಾಂಡ್ ರಾಜ್ಯಪಾಲ ಎಲ್.ಗಣೇಶನ್, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಹಾಗೂ ಕೇಂದ್ರ ಸಚಿವ ಎಲ್.ಮುರುಗನ್ ಮುಂತಾದವರೆಲ್ಲರೂ ಕಟ್ಟಿಬೆಳೆಸಿದ ತಮಿಳುನಾಡು ಬಿಜೆಪಿಯನ್ನು, ಈಗ ಕಂಡವರೆಲ್ಲ ಗೇಲಿ ಮಾಡುವ ಮಟ್ಟಕ್ಕೆ ತಂದಿಟ್ಟಿರುವ ಕೀರ್ತಿ ಹಾಲಿ ಅಧ್ಯಕ್ಷ ಅಣ್ಣಾಮಲೈಗೆ ಸೇರುತ್ತದೆ.

ಅಣಾಮಲೈ ವರ್ತನೆಯಿಂದ ಬೇಸೆತ್ತು ಸಿನಿಮಾ ಹಿರಿಯ ನಟ ಎಸ್.ವಿ.ಶೇಖರ್, ನಟಿ ಗಾಯತ್ರಿ ರಘುರಾಮ್, ಸೀರಿಯಲ್ ಆಕ್ಟರ್ ಡಾ.ಶರ್ಮಿಲಾ ಮುಂತಾದವರೆಲ್ಲ ಪಕ್ಷವನ್ನೇ ಬಿಟ್ಟಿದ್ದಾರೆ. ನೆನ್ನೆ ನಟಿ ಗೌತಮಿ ರಾಜಿನಾಮೆ ನೀಡಿದ್ದಾರೆ. ಬಿಜೆಪಿಯ ಹಲವಾರು ರಾಜ್ಯ ಮುಖಂಡರುಗಳು ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅಣ್ಣಾಮಲೈ ಅವರನ್ನು ಆ ಸ್ಥಾನದಿಂದ ಪದಚ್ಯುತಿ ಗೊಳಿಸದೇ ಇರುವುದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಕೃಪಾಕಟಾಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ.  

ದೇಶ

ಅಹಮದಾಬಾದ್: ನವರಾತ್ರಿ ಉತ್ಸವದ ಸಮಯದಲ್ಲಿ ದೈವತ್ವದ ಸ್ತ್ರೀ ರೂಪವಾದ ದುರ್ಗಾ ದೇವಿಯನ್ನು ಕೇಂದ್ರೀಕ್ರಿಸಿ, 9 ಶಕ್ತಿ  ರೂಪದ ದೇವತೆಗಳನ್ನು ಆರಾಧಿಸುವ ಸಲುವಾಗಿ ಗರ್ಬಾ ಹಾಡುಗಳನ್ನು ಹಾಡಲಾಗುತ್ತದೆ. ಗಾರ್ಬಾ ನೃತ್ಯವನ್ನು ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಪುರುಷರು ಮತ್ತು ಮಹಿಳೆಯರು ಮುಂಜಾನೆ ತನಕ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ.

ಈ ಹಿನ್ನಲೆಯಲ್ಲಿ ಗುಜರಾತ್‌ನಲ್ಲಿ ನವರಾತ್ರಿ ಆಚರಣೆ ವೇಳೆ ಕಳೆದ 24 ಗಂಟೆಗಳಲ್ಲಿ ಗರ್ಬಾ ನೃತ್ಯ ಮಾಡಿದ 10 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಯುವಕರು ಮತ್ತು ಮಧ್ಯವಯಸ್ಕರು ಎಂದು ವೈದ್ಯರು ಹೇಳಿದ್ದಾರೆ. ಬರೋಡಾದ 13 ವರ್ಷದ ಬಾಲಕ ಗರ್ಬಾ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅದೇ ರೀತಿ ಅಹಮದಾಬಾದ್‌ನ 24 ವರ್ಷದ ಯುವಕ ಕೂಡ ಗರ್ಬಾ ನೃತ್ಯ ಮಾಡುವಾಗ ಸಾವನ್ನಪ್ಪಿದ್ದಾನೆ. ಅದೇ ರೀತಿ ಗುಜರಾತ್‌ನಲ್ಲಿ ಇನ್ನೂ 8 ಸಾವುಗಳು ವರದಿಯಾಗಿವೆ.

ಇದನ್ನೂ ಓದಿ: ಡೋಂಗೀ ಸಮಾಜವಾದಿ, ಪುಲ್ ಟೈಂ ಮೀರುಸಾದಿಕವಾದಿಗೆ ವೆಸ್ಟ್ ಎಂಡ್ ಸೋಂಕು ಮತ್ತೆ ತಗುಲಿದೆ!

ನವರಾತ್ರಿಯ ಮೊದಲ 6 ದಿನಗಳಲ್ಲಿ ಗರ್ಬಾ ನೃತ್ಯ ಪ್ರದರ್ಶಿಸಿದ 609 ಮಂದಿಗೆ ಉಸಿರುಗಟ್ಟಿದೆ. ಅದೇ ರೀತಿ ಸಂಜೆ 6 ರಿಂದ ಬೆಳಗಿನ ಜಾವ 2 ರವರೆಗೆ 108 ಆ್ಯಂಬುಲೆನ್ಸ್‌ಗೆ ಹೃದಯಾಘಾತಕ್ಕೆ ಸಂಬಂಧಿಸಿದಂತೆ 521 ಕರೆಗಳು ಬಂದಿವೆ. ಅದರಂತೆ, ಗರ್ಬಾ ನೃತ್ಯ ನಡೆಯುವ ಸ್ಥಳಗಳ ಸಮೀಪದ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿದ್ಧವಾಗಿರಬೇಕು ಎಂದು ಗುಜರಾತ್ ಸರ್ಕಾರ ಸೂಚನೆ ನೀಡಿದೆ.

ಅಲ್ಲದೆ, ಗಾರ್ಬಾ ನೃತ್ಯ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸುವ ಮೂಲಕ ಗರ್ಬಾ ಸಂಘಟಕರು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೊರೋನಾ ನಂತರ ವಿವಿಧ ಘಟನೆಗಳಲ್ಲಿ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ.

ರಾಜಕೀಯ

ಬೆಂಗಳೂರು: ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್‌ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮೀಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್‌ ಕ್ಷಾಮದ ವಾಸ್ತವತೆ ಬಗ್ಗೆ ‘ಶ್ವೇತಪತ್ರ’ ಹೊರಡಿಸಿ. ಈ ಬಗ್ಗೆ ನಿಮ್ಮ ಮೌನ ಏಕೆ? ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

“ವೆಸ್ಟ್ ಎಂಡ್ ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? 5 ವರ್ಷ ಸರಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಭಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ. ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ಎರಡೇ; 1. ವೆಸ್ಟ್‌ ಎಂಡ್‌, 2. ಬಿಜೆಪಿ ಬಿ ಟೀಂ” ಎಂದು ಕಿಡಿಕಾರಿದ್ದಾರೆ.

“ಡೋಂಗೀ ಸಮಾಜವಾದಿ, ಪುಲ್ ಟೈಂ ಮೀರುಸಾದಿಕವಾದಿಗೆ ವೆಸ್ಟ್ ಎಂಡ್ ಸೋಂಕು ಮತ್ತೆ ತಗುಲಿದೆ. I.N.D.I.A. ಕೂಟದ ಸಭೆಯನ್ನು ಇದೇ ವೆಸ್ಟ್ ಎಂಡ್ ಬದಲಿಗೆ, ತಮ್ಮ ಸುತ್ತ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ ʼಪರ್ಸಂಟೇಜ್ ಪಟಾಲಂʼ ಏಳುಸುತ್ತಿನ ಕೋಟೆಯ ವಠಾರದಲ್ಲಿಯೇ ನಡೆಸಬೇಕಿತ್ತು. ಏಕೆ ನಡೆಸಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.

“ಆಧುನಿಕ ಭಾರತದ ಈಸ್ಟ್‌ ಇಂಡಿಯಾ ಕಂಪನಿ ಕಾಂಗ್ರೆಸ್‌ಗೆ ಕರ್ನಾಟಕ ಪೊಗದಸ್ತು ಹುಲ್ಲುಗಾವಲು. ಸಿದ್ದಪುರುಷ @ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ. ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೆಯುತ್ತಿದ್ದರೆ ದಿನಪೂರ್ತಿ ಕೂತು ಕ್ರಿಕೆಟ್ ನೋಡುವಷ್ಟು ಶೋಕಿದಾರ! ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!! ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್‌ ಮ್ಯಾಚ್‌ ನೋಡುತ್ತಿದ್ದ!!!” ಎಂದು ಕಟುವಾಗಿ ಟೀಕಿಸಿದ್ದಾರೆ.

“5 ತಿಂಗಳಿಂದ ವಿದ್ಯುತ್ ಉತ್ಪಾದನೆ ಅಲಕ್ಷಿಸಿದ್ದೇಕೆ? ಹಾಹಾಕಾರ ಎದ್ದ ಮೇಲೆ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದರೆ ಲೋಡ್ ಶೆಡ್ಡಿಂಗ್ ಏಕೆ ಬಂತು? 2013-2018ರಲ್ಲಿ 12,000 ಮೆ.ವ್ಯಾ. ಉತ್ಪಾದಿಸಿದ್ದೇವೆ ಎಂದು ನೀವೇ ಹೇಳಿದ್ದೀರಿ, ಸರಿ. ಈಗ ಮಳೆ ಕಡಿಮೆಯಾಗಿ ಜಲವಿದ್ಯುತ್‌ ಉತ್ಪಾದನೆ ಕುಸಿದಿದೆ, ನನಗೂ ಗೊತ್ತಿದೆ.

ಇದನ್ನೂ ಓದಿ: ಜೆಡಿ(ಎಸ್)ನ ಕೇರಳ ಘಟಕವು ಎಲ್‌ಡಿಎಫ್‌ನ ಅವಿಭಾಜ್ಯ ಅಂಗವಾಗಿ ಮುಂದುವರಿಯಲಿದೆ: ಹೆಚ್.ಡಿ.ಕುಮಾರಸ್ವಾಮಿ

ಅದರಲ್ಲಿ 3,000 ಮೆ.ವ್ಯಾ. ಇಲ್ಲ ಎಂದರೂ ಸಾರ್ವಜನಿಕ & ಖಾಸಗಿ ವಲಯ ಸೇರಿ ಒಟ್ಟು 29,000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಆಗಲೇಬೇಕಿತ್ತು. ಆಗಿಲ್ಲವೇಕೆ? ಏಕಾಎಕಿ ಉತ್ಪಾದನೆ ನಿಲ್ಲಿಸಿದ್ದೇಕೆ? ಜಲವಿದ್ಯುತ್‌ ಕೈಕೊಡುತ್ತದೆ ಎಂದು ಗೊತ್ತಿದ್ದರೂ ಕಲ್ಲಿದ್ದಲ ಸಂಗ್ರಹ ಇಟ್ಟುಕೊಳ್ಳಲಿಲ್ಲವಲ್ಲ, ಏಕೆ?

ಜಲ ವಿದ್ಯುತ್‌ ಹೊರತುಪಡಿಸಿ ಇತರೆ ಮೂಲಗಳ ವಿದ್ಯುತ್‌ ಉತ್ಪಾದನೆಗೂ ಖೋತಾ ಬೀಳಲಿಕ್ಕೆ ಪ್ರಕೃತಿ ಕಾರಣವೋ? ಅಥವಾ ನಿಮ್ಮ ʼಕೈ ಚಳಕʼವೇ ಕಾರಣವೋ? ಸತ್ಯ ಹೇಳಿದರೆ ನನ್ನ ಕಡೆಗೇ ಬೊಟ್ಟು ಮಾಡುತ್ತೀರಿ, ನಿಮ್ಮ ಸಚಿವರನ್ನು ….. ….. ಗಳಂತೆ ನನ್ನ ಮೇಲೆ ಛೂ ಬಿಡುತ್ತೀರಿ. ಎಷ್ಟು ದಿನ ನೆಪಗಳ ನಾಜೂಕತನ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮತ್ತೆ ಮತ್ತೆ ನಾನು ಹೇಳುತ್ತೇನೆ, ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್‌ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮೀಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್‌ ಕ್ಷಾಮದ ವಾಸ್ತವತೆ ಬಗ್ಗೆ ‘ಶ್ವೇತಪತ್ರ’ ಹೊರಡಿಸಿ. ಈ ಬಗ್ಗೆ ನಿಮ್ಮ ಮೌನ ಏಕೆ?” ಎಂದು ಆರೋಪಿಸಿದ್ದಾರೆ.

“ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ ನಂತರ ಇಂ’ಧನ’ ಇಲಾಖೆಯಲ್ಲೂ ನೀವು ನಗದೀಕರಣಕ್ಕೆ ನಾಂದಿ ಹಾಡಿದ್ದೀರಿ. ಖರೀದಿ ಖುಷಿಯಲ್ಲಿ ಪರ್ಸಂಟೇಜ್ ಪಟಾಲಂ ಸಂಭ್ರಮಿಸುತ್ತಿದೆ” ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.  

ರಾಜಕೀಯ

ಬೆಂಗಳೂರು: ತಮ್ಮ ಪಕ್ಷದ ಕೇರಳ ಘಟಕಕ್ಕೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರದ ಭಾಗವಾಗಿ ಉಳಿಯಲು ಅವಕಾಶ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜನತಾ ದಳ (ಜಾತ್ಯತೀತ) ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಶ್ಲಾಘಿಸಿದ್ದಾರೆ.

ಭಾರತೀಯ ಜನತಾ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿಯನ್ನು ಪಿಣರಾಯಿ ವಿಜಯನ್ ಬೆಂಬಲಿಸಿದ್ದಾರೆ ಎಂಬ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಹೇಳಿಕೆಯನ್ನು ವಿಜಯನ್ ನಿರಾಕರಿಸಿದ ಒಂದು ದಿನದ ನಂತರ ಇದು ನಡೆದಿದೆ.

ಜೆಡಿ(ಎಸ್)ನ ಕೇರಳ ಘಟಕವು ಎಲ್‌ಡಿಎಫ್‌ನ ಅವಿಭಾಜ್ಯ ಅಂಗವಾಗಿ ಮುಂದುವರಿದಿದೆ ಎಂದು ಕುಮಾರಸ್ವಾಮಿ ಹೇಳಿದರು. “ಕೇರಳದ ಪರಿಸ್ಥಿತಿ ಕರ್ನಾಟಕಕ್ಕಿಂತ ಭಿನ್ನವಾಗಿದೆ. ನಮ್ಮಲ್ಲಿರುವ ಸಮಸ್ಯೆ ನಮ್ಮ ಪಕ್ಷಕ್ಕೆ ಸೀಮಿತವಾಗಿದೆ. ಇದರ ಬಗ್ಗೆ ನಾವು ಕೇರಳ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲು ಬಯಸುವುದಿಲ್ಲ.” ಎಂದರು.

ಎಲ್‌ಡಿಎಫ್‌ನಲ್ಲಿ ಜೆಡಿಎಸ್‌ನ ನಿರಂತರ ಭಾಗವಹಿಸುವಿಕೆಗಾಗಿ ವಿಜಯನ್‌ಗೆ ಕೃತಜ್ಞತೆ ಸಲ್ಲಿಸಿದ ಕುಮಾರಸ್ವಾಮಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದಕ್ಕಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕ್ಯಾಬಿನೆಟ್ ಮಂತ್ರಿಗಳನ್ನು ಟೀಕಿಸಿದರು.

ಪಾಕಿಸ್ತಾನವನ್ನು ಬೆಂಬಲಿಸಲು ರಾಜ್ಯ ಸಚಿವ ಸಂಪುಟವು ಪಂದ್ಯಕ್ಕೆ ಹಾಜರಾಗಿ ಅವರ ಆದ್ಯತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. “ಇದು ಭಾರತ ಮತ್ತು ಪಾಕಿಸ್ತಾನದ ಪಂದ್ಯವಾಗಿದ್ದರೆ, ಅದು ಉತ್ತಮವಾಗಿತ್ತು. ಆದರೆ ಪಂದ್ಯ ನಡೆದಿದ್ದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ. ಅವರು ಪಾಕಿಸ್ತಾನಕ್ಕೆ ಅಥವಾ ಆಸ್ಟ್ರೇಲಿಯಾಕ್ಕೆ ಬೆಂಬಲ ನೀಡಿದ್ದಾರೆಯೇ? ರಾಜ್ಯ ಸಂಕಷ್ಟದಲ್ಲಿದೆ, ಸರ್ಕಾರ ಕ್ರಿಕೆಟ್ ಪಂದ್ಯವನ್ನು ನೋಡುತ್ತಿದೆ” ಎಂದು ಕುಮಾರಸ್ವಾಮಿ ಹೇಳಿದರು.

“ಅವರು ಭರವಸೆ ನೀಡಿದ್ದನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ, ಆದರೆ ರೈತರು ಸಂಕಷ್ಟದಲ್ಲಿದ್ದಾರೆ. ಸರಕಾರ ಕೇಂದ್ರ ಸರಕಾರದಿಂದ ಹಣ ಕೇಳುತ್ತಿದೆ. ಕೇಂದ್ರ ಸರ್ಕಾರಕ್ಕೆ ಸರ್ಕಾರ ಪತ್ರ ಬರೆದಿದೆ. ಈಗ ಸರ್ಕಾರ ಕೇಂದ್ರದ ಮೊರೆ ಹೋಗಬೇಕು,’’ ಎಂದು ಹೇಳಿದ ಅವರು, ರೂ.4,860 ಕೋಟಿ ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಉಲ್ಲೇಖಿಸಿದರು. ಇನ್ನು ಕೆಲವು ಜಿಲ್ಲೆಗಳಲ್ಲಿ ರಾಜ್ಯದ ರೈತರು ನೀರಿನ ಕೊರತೆ ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸಿದ್ದರಾಮಯ್ಯ ಅವರು ಬರಗಾಲದಿಂದ ರಾಜ್ಯದ ರೈತರು ರೂ.30,000 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ಹೇಳಿದ್ದರು. 42 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ನಿಯಮಗಳ ಪ್ರಕಾರ, ನಾವು ಕೇಂದ್ರ ಸರ್ಕಾರದಿಂದ ರೂ.4,860 ಕೋಟಿ ಕೇಳಿದ್ದೇವೆ ಮತ್ತು ಕೇಂದ್ರ ತಂಡವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ದೇಶ

ಚೆನ್ನೈ: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಉದ್ಯಮ ಒಕ್ಕೂಟದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಭಾರತದ ವಾಸ್ತವ ಸ್ಥಿತಿ ತಿಳಿಯದೆ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿ ಪ್ರಕಟಿಸಲಾಗಿದೆ ಎಂದರು. 140 ಕೋಟಿ ಜನರಲ್ಲಿ ಕೇವಲ 3000 ಜನರ ಅಭಿಪ್ರಾಯ ಪಡೆದು ಪ್ರಕಟಿಸಿರುವ ಪಟ್ಟಿಯಿಂದ ನೈಜ ಸ್ಥಿತಿ ತಿಳಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಸಂಸ್ಮರಣ ದಿನಾಚರಣೆ: ಹುತಾತ್ಮ ಪೊಲೀಸರಿಗೆ ಪುಷ್ಪ ನಮನದ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಈ ಹಿನ್ನಲೆಯಲ್ಲಿ, ಸ್ಮೃತಿ ಇರಾನಿ ಅವರ ಅಭಿಪ್ರಾಯವನ್ನು ಟೀಕಿಸಿರುವ ಡಿಎಂಕೆ ಸಂಸದೆ ಕನಿಮೊಳಿ ಅವರು, ತಮ್ಮ ‘ಎಕ್ಸ್’ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ, ಜಾಗತಿಕ ಹಸಿವು ಸೂಚ್ಯಂಕವನ್ನು ಯಾವ ವಿಧಾನದಿಂದ ಸಿದ್ಧಪಡಿಸಲಾಗಿದೆ ಎಂದು ತಿಳಿಯದೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಟೀಕೆ ಮಾಡಿರುವುದು ನೋವಿನ ಸಂಗತಿ ಎಂದಿದ್ದಾರೆ.

ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ 28 ದಿನಗಳವರೆಗೆ ನೀರು ಹರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ!

ಅಪೌಷ್ಟಿಕತೆ, ಆಹಾರದ ಕೊರತೆ, ಮಕ್ಕಳ ಮರಣ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಸಾಮರ್ಥ್ಯ ಏನು ಎಂಬುದನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಭಾಷಣದ ಮೂಲಕ ಬಯಲಾಗಿದೆ ಎಂದು ಸಂಸದೆ ಕನಿಮೊಳಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಜಾತಿವಾರು ಜನಗಣತಿ ನಡೆಸಬೇಕು: ಪ್ರಧಾನಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪತ್ರ!

ಜಾಗತಿಕ ಹಸಿವು ಸೂಚ್ಯಂಕ 2023ರಲ್ಲಿ ಭಾರತದ ಶ್ರೇಯಾಂಕವು 125 ದೇಶಗಳಲ್ಲಿ 111 (2022 ರ ಸೂಚ್ಯಂಕ 107 ರಿಂದ ಜಾರಿಯಾಗಿದೆ) ಆಗಿದೆ. ಪ್ರತಿ ಅಕ್ಟೋಬರ್‌ನಲ್ಲಿ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ತುಂಗರ್‌ಹಿಲ್ಫ್ ಜಂಟಿಯಾಗಿ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತವೆ. ಹಸಿವು ಸೂಚ್ಯಂಕವು ನಾಲ್ಕು ಘಟಕ ಸೂಚಕಗಳ ಮೇಲೆ ದೇಶಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ.

ರಾಜಕೀಯ

ಬೆಂಗಳೂರು: ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಮಲ್ಲಾಬಾದ್ ಲಿಫ್ಟ್ 1,2,3 ಕಾಲುವೆಗಳ ಮೂಲಕ 28 ದಿನಗಳವರೆಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಿಗೆ ಸೂಚನೆ ನೀಡಲು ಮಾನ್ಯ  ಮುಖ್ಯಮಂತ್ರಿಗಳಲ್ಲಿ ಇಂದು ಮನವಿ ಮಾಡಲಾಯಿತು.

ಮಾನ್ಯ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿಯಾದ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರು ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಮಲ್ಲಾಬಾದ್ ಲಿಫ್ಟ್ 1,2,3 ಕಾಲುವೆಗಳ ಮೂಲಕ ಒಂದು ವಾರದವರೆಗೆ: (28-10-2023 ರಿಂದ 4-11-2023) ನೀರು ಹರಿಸುವ ಆದೇಶವನ್ನು ಬದಲಿಸಿ ಸಂಪೂರ್ಣ 28 ದಿನಗಳವರೆಗೆ ನೀರು ಹರಿಸುವಂತೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಿಗೆ ಸೂಚನೆ ನೀವುವಂತೆ ಮನವಿ ಮಾಡಿದರು.

ಇತ್ತೀಚೆಗೆ ಎರಡೂ ತಾಲ್ಲೂಕುಗಳ ರೈತರು ಶಹಾಪುರ ಶಾಸಕರೂ ಆದ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದರು. ಇದರಿಂದ ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕುಗಳ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.