ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2023 » Page 15 of 76 » Dynamic Leader
October 24, 2024
Home 2023 (Page 15)
ದೇಶ ರಾಜಕೀಯ

ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಯುವ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ಭ್ರಷ್ಟಾಚಾರ:
2015ರಲ್ಲಿ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರದಲ್ಲಿದ್ದಾಗ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ 3,350 ಕೋಟಿ ರೂ.ಗಳ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ.10 ರಷ್ಟು ಪಾಲು ಪಾವತಿಸಬೇಕು. ಆದರೆ, ರಾಜ್ಯ ಸರ್ಕಾರದ ಪಾಲಿನ 240 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ನಕಲಿ ಬಿಲ್‌ಗಳು ಮತ್ತು ಇನ್‌ವಾಯ್ಸ್‌ಗಳ ಮೂಲಕ ಜಿಎಸ್‌ಟಿಯನ್ನು ವಂಚಿಸಿದ ಆರೋಪವೂ ಇದೆ.

ಚಂದ್ರಬಾಬು ನಾಯ್ಡು ಬಂಧನ:
ತಂತ್ರಜ್ಞಾನ ಕಂಪನಿಗಳು ಮತ್ತು ಸರ್ಕಾರದ ನಡುವಿನ ಯೋಜನೆಯ ವೆಚ್ಚದ ಹಂಚಿಕೆಯಲ್ಲಿ ಅಕ್ರಮಗಳು ನಡೆದಿದೆ (371 ಕೋಟಿ ರೂ.ಗಳಲ್ಲಿ 241 ಕೋಟಿ ರೂ.ಗಳು ಭ್ರಷ್ಟಾಚಾರ ನಡೆದಿರುವುದಾಗಿ) ಎಂದು ಸಿಐಡಿ 2017-18ರ ರಿಮಾಂಡ್ ವರದಿಯಲ್ಲಿ ಆರೋಪಿಸಿದೆ. ಅಲ್ಲದೆ, ಈ ಹಿಂದೆ ಸಿಐಡಿ ಪ್ರಕರಣ ದಾಖಲಿಸಿದ್ದ 26 ಮಂದಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಬಂಧಿಸಲಾಗಿತ್ತು. ಸದ್ಯ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಆಂಧ್ರ ಹೈಕೋರ್ಟ್!
ಚಂದ್ರಬಾಬು ನಾಯ್ಡು ಅವರ ಬಂಧನ ಖಂಡಿಸಿ ರಾಜ್ಯಾದ್ಯಂತ ಸಂಪೂರ್ಣ ಬಂದ್‌ ನಡೆಸಲಾಗಿತ್ತು. ಅವರ ಬಂಧನವನ್ನು ಹಲವರು ಖಂಡಿಸಿದ್ದು, ಕೆಲವರು ಜೈಲಿನಲ್ಲಿದ್ದ ಚಂದ್ರಬಾಬು ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಹಿನ್ನಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ಅಮರಾವತಿ ಇನ್ನರ್ ರಿಂಗ್ ರೋಡ್ ವಂಚನೆ ಪ್ರಕರಣ ಮತ್ತು ಅಂಗಲ್ಲು ಗಲಭೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಂಧ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದರಲ್ಲಿ ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಆಂಧ್ರ ಹೈಕೋರ್ಟ್, ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಇದೇ 16 ರವರೆಗೆ ಬಂಧಿಸಬಾರದು ಎಂದು ಮಧ್ಯಂತರ ಜಾಮೀನು ನೀಡಿದೆ.

ದೇಶ

ತಿರುವನಂತಪುರಂ: ಕೇರಳದ 8 ಪೊಲೀಸ್ ಠಾಣೆಗಳನ್ನು ಸ್ಫೋಟಿಸಲು ಮಾವೋವಾದಿಗಳು ಮುಂದಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಪೊಲೀಸ್ ಠಾಣೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.  ಕೇರಳ ರಾಜ್ಯದ ಕೋಳಿಕೋಡ್, ಮಲಪ್ಪುರಂ, ಪತ್ತನಂತಿಟ್ಟ ಮತ್ತು ಕಣ್ಣೂರು ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಮಾವೋವಾದಿಗಳು ಸಕ್ರಿಯರಾಗಿದ್ದಾರೆ.

ಆಗಾಗ ಊರಿಗೆ ಬಂದು ಸಾರ್ವಜನಿಕರಿಂದ ಆಹಾರ ಪದಾರ್ಥಗಳನ್ನು ಖರೀದಿಸಿಕೊಂಡು ಹೋಗುವುದನ್ನು ವಾಡಿಕೆಯಾಗಿಸಿಕೊಂಡಿರುವ ಮಾವೋವಾದಿಗಳು, ಪೊಲೀಸ್ ಠಾಣೆಗಳು, ಅರಣ್ಯ ಇಲಾಖೆ ಕಚೇರಿ ಸೇರಿದಂತೆ ಸರಕಾರಿ ಕಚೇರಿಗಳ ಮೇಲೆ ದಾಳಿಯನ್ನೂ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹಲವು ಬಾರಿ ಮಾವೋವಾದಿಗಳಿಗೂ ಕೇರಳ ಕಾರ್ಯಪಡೆ ಪೊಲೀಸರಿಗೂ ಗುಂಡಿನ ಚಕಮಕಿ ನಡೆದಿರುತ್ತದೆ. ಹಲವು ಮಾವೋವಾದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಈ ಹಿನ್ನಲೆಯಲ್ಲಿ, ವಯನಾಡ್ ಜಿಲ್ಲೆಯ ಕಂಬಮಲೈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳು ಆಗಾಗ್ಗೆ ಭೇಟಿ ನೀಡುತ್ತಿರುವುದು ಕಳೆದ ಕೆಲವು ದಿನಗಳಿಂದ ಸಂಚಲನ ಮೂಡಿಸಿದೆ. ಬಳಿಕ ಪೊಲೀಸ್ ಕಾರ್ಯಪಡೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಕೋಳಿಕೋಡ್ ಜಿಲ್ಲೆಯ 8 ಪೊಲೀಸ್ ಠಾಣೆಗಳನ್ನು ಸ್ಫೋಟಿಸಲು ಮಾವೋವಾದಿಗಳು ಮುಂದಾಗಿದ್ದಾರೆ ಎಂಬ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಸಂಚಲನ ಮೂಡಿಸಿದೆ.

ಕೋಳಿಕೋಡ್ ಜಿಲ್ಲೆಯ ವಳಯಂ, ಕುಟ್ರಿಯಾಡಿ, ತೊಟ್ಟಿಲ್ ಬಾಲಂ, ಪೆರುವನ್ನಾಮೂಳಿ, ಕೂರಾಚ್ಚುಂಡು, ತಾಮರಚೇರಿ, ತಿರುವಂಬಾಡಿ ಮತ್ತು ಕೋಟ್ಟಚೇರಿ ಪೊಲೀಸ್ ಠಾಣೆಗಳನ್ನು ಮಾವೋವಾದಿಗಳು ಸ್ಫೋಟಿಸುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ.

ಇದನ್ನು ಅನುಸರಿಸಿ, ಸದರಿ ಪೊಲೀಸ್ ಠಾಣೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶದ ಮೂಲಕ ಕೋಳಿಕೋಡ್ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಮಾವೋವಾದಿಗಳು ಸುಲಭವಾಗಿ ಬರುವ ಸಾಧ್ಯತೆ ಇರುವುದರಿಂದ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ತೀವ್ರಗೊಳಿಸಲು ಕೇರಳ ಕಾರ್ಯಪಡೆ ಯೋಜನೆ ರೂಪಿಸಿದೆ.

ದೇಶ

ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರ ಪ್ರತಿಮೆಗೆ ಗೌರವ ಸಲ್ಲಿಸಲು ಅನುಮತಿ ನಿರಾಕರಿಸಿದ ಕಾರಣಕ್ಕೆ ಗೋಡೆ ಏರಿ ಜಿಗಿದ ಅಖಿಲೇಶ್ ಯಾದವ್.

ಲಖನೌ: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವನ್ನು ಇಂದು ಆಚರಿಸಲಾಯಿತು. ಏತನ್ಮಧ್ಯೆ, ಭದ್ರತಾ ಕಾರಣಗಳಿಗಾಗಿ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿರುವ ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ಕೇಂದ್ರದ ಗೇಟನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿತು. ಅಂತರಾಷ್ಟ್ರೀಯ ಕೇಂದ್ರವನ್ನು ಪ್ರವೇಶಿಸಲು ಮತ್ತು ಜಯಪ್ರಕಾಶ್ ನಾರಾಯಣ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅನುಮತಿ ನಿರಾಕರಿಸಿತು.

ಈ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ಮೇಲೆ ಏರಿ ಜಿಗಿದು ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ಕೇಂದ್ರವನ್ನು ಪ್ರವೇಶಿಸಿದರು. ನಂತರ ಸಮಾಜವಾದಿ ಪಕ್ಷದ ಸದಸ್ಯರು ಅಲ್ಲಿನ ಜಯಪ್ರಕಾಶ್ ನಾರಾಯಣ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದರಿಂದಾಗಿ ಅಲ್ಲಿ ಸಂಭ್ರಮ ಮನೆ ಮಾಡಿತ್ತು.

ಅಖಿಲೇಶ್ ಯಾದವ್ ಅವರ ಗೋಡೆ ಜಿಗಿಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರಾಜ್ಯ

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನವೆಂಬರ್‌ನಲ್ಲಿ ಹಮ್ಮಿಕೊಂಡಿರುವ ಕಂಬಳ ಓಟದ ಕರೆ ಪೂಜೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗಿಯಾಗಿ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು “ಕರಾವಳಿ ಭಾಗದ ಸಂಸ್ಕೃತಿ, ವ್ಯಾಪಾರ – ವಹಿವಾಟು, ಅಲ್ಲಿನ ಶಿಕ್ಷಣ, ಹೋಟೆಲ್‌ಗಳು ಎಲ್ಲವೂ ಈ ದೇಶದ ಆಸ್ತಿ. ಅಲ್ಲಿನ ಸಂಸ್ಕೃತಿಯ ಭಾಗವಾಗಿರುವ ಕಂಬಳ ಓಟವು ಬೆಂಗಳೂರಿನಲ್ಲಿ ಜರುಗುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಈ ಸಂಸ್ಕೃತಿ ಉಳಿಸುವ ಸಲುವಾಗಿ ಒಂದು ಕಚೇರಿ ತೆರೆಯಲು ಜಾಗ ನೀಡುವಂತೆ ಕೇಳಿದ್ದಾರೆ. ಖಂಡಿತವಾಗಿಯೂ ಅವರ ಮನವಿಯನ್ನು ಪರಿಗಣಿಸುತ್ತೇವೆ. ಬೆಂಗಳೂರಿನಲ್ಲಿ ಜರುಗುತ್ತಿರುವ ಐತಿಹಾಸಿಕ ಕಂಬಳಕ್ಕೆ ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ವಿದೇಶ

ಇಸ್ರೇಲ್ ಸೇನೆಯು ಗಾಜಾದ ಮೇಲೆ ವೈಟ್ ಪಾಸ್ಪರಸ್ (ಬಿಳಿ ರಂಜಕ) ಬಾಂಬ್‌ಗಳನ್ನು ಬೀಳಿಸಿದೆ ಎಂದು ಆರೋಪಿಸಲಾಗಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಯುದ್ಧ ತೀವ್ರಗೊಂಡಿದೆ. ಹಮಾಸ್, ಮೊದಲು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ ಅನೇಕ ಸಾವುನೋವುಗಳಿಗೆ ಕಾರಣವಾದಾಗ, ಇಸ್ರೇಲ್ ಉಗ್ರವಾಗಿ ಪ್ರತಿದಾಳಿ ನಡೆಸುತ್ತಿದೆ. ಹಮಾಸ್ ವಶಪಡಿಸಿಕೊಂಡ ಗಾಜಾ ಗಡಿಯಲ್ಲಿರುವ ಪ್ರದೇಶಗಳ ಮೇಲೆ ಇಸ್ರೇಲ್ ಮತ್ತೆ ಹಿಡಿತ ಸಾಧಿಸಿದೆ. ಜೊತೆಗೆ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸುವುದನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ.

ನಾಲ್ಕನೇ ದಿನವೂ ಯುದ್ಧ ಮುಂದುವರಿದಿದ್ದು, ಇಸ್ರೇಲ್ ಅಂತಾರಾಷ್ಟ್ರೀಯವಾಗಿ ನಿಷೇಧಿತ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಗಾಜಾದಲ್ಲಿ ಇಸ್ರೇಲಿ ಸೇನೆಯು ಹೆಚ್ಚು ಜನನಿಬಿಡ ಪ್ರದೇಶಗಳ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬೀಳಿಸುತ್ತಿದೆ ಎಂದು ಹೇಳಿಕೊಳ್ಳುವ ವೀಡಿಯೊ ಮತ್ತು ಫೋಟೋಗಳನ್ನು ಪ್ಯಾಲೆಸ್ಟೀನಿಯರು ಬಿಡುಗಡೆ ಮಾಡಿದ್ದಾರೆ. ಇದರಿಂದ ಜನರು ಭಯಭೀತರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಂಕಿಯ ಮಳೆ ಬೀಳುವಂತಿದೆ. ಆದರೆ ಈ ವೀಡಿಯೋ ವಾಸ್ತವವಾಗಿ ಗಾಜಾದಲ್ಲಿ ರೆಕಾರ್ಡ್ ಆಗಿದೆಯೇ? ಇತ್ತೀಚಿನ ವೀಡಿಯೊನಾ? ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ವೈಟ್ ಪಾಸ್ಪರಸ್ ಶೀಘ್ರದಲ್ಲೇ ಹೊತ್ತಿ ಉರಿಯುವ ರಾಸಾಯನಿಕವಾಗಿದೆ. ಗಾಳಿಗೆ ಒಡ್ಡಿಕೊಂಡಾಗ ಅದು ತ್ವರಿತವಾಗಿ ಮತ್ತು ಪ್ರಕಾಶಮಾನವಾಗಿ ಉರಿಯುತ್ತದೆ. ಅಮೆರಿಕಾ ಸೇರಿದಂತೆ ವಿವಿಧ ದೇಶಗಳ ಸೇನೆಗಳು, ಶತ್ರುಗಳ ಗುರಿಗಳನ್ನು ನಾಶಪಡಿಸಲು ಮತ್ತು ಹಾನಿ ಮಾಡಲು ಬೆಂಕಿಯ ಆಯುಧವಾಗಿ ವೈಟ್ ಪಾಸ್ಪರಸ್ ಬಾಂಬುಗಳನ್ನು ಬಳಸುತ್ತವೆ.

ಈ ರಾಸಾಯನಿಕವು ಹೊತ್ತಿಕೊಂಡಾಗ ಹೆಚ್ಚಿನ ಶಾಖವನ್ನು (ಸುಮಾರು 815 ° C) ಉತ್ಪಾದಿಸುತ್ತದೆ ಮತ್ತು ದಟ್ಟವಾದ ಬಿಳಿ ಹೊಗೆಯನ್ನು ಹೊರಸೂಸುತ್ತದೆ. ಉದ್ವಿಗ್ನ ಪ್ರದೇಶಗಳಲ್ಲಿ ಶತ್ರುವನ್ನು ಅಸ್ಥಿರಗೊಳಿಸಲು ಹೊಗೆ ವಲಯವನ್ನು ರಚಿಸಲು ಸೇನೆಗಳು ಈ ರೀತಿಯ ರಾಸಾಯನಿಕವನ್ನು ಬಳಸುತ್ತವೆ.

ಒಮ್ಮೆ ವೈಟ್ ಪಾಸ್ಪರಸ್ ಹೊತ್ತಿಕೊಂಡರೆ ಅದನ್ನು ಆರಿಸುವುದು ಬಹಳ ಕಷ್ಟ. ಹೊತ್ತಿ ಉರಿಯುವ ಈ ರಾಸಾಯನಿಕವು ಮಾನವನ ಚರ್ಮ ಮತ್ತು ಬಟ್ಟೆ ಸೇರಿದಂತೆ ಹಲವು ಪ್ರದೇಶಗಳಿಗೆ ಅಂಟಿಕೊಂಡರೆ ಬಹಳ ತೊಂದರೆಯಾಗುತ್ತದೆ. ಅಂಗಾಂಶ ಮತ್ತು ಮೂಳೆಗೆ ಆಳವಾಗಿ ತೂರಿಕೊಳ್ಳುತ್ತದೆ ಮತ್ತು ತೀವ್ರವಾದ ಸುಡುವಿಕೆಗೆ ಕಾರಣವಾಗುತ್ತದೆ.

ನಾಗರಿಕರ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುವುದನ್ನು ಯುದ್ಧ ಅಪರಾಧ ಎಂದು ಪರಿಗಣಿಸಲಾಗುತ್ತದೆ. ರಷ್ಯಾ ಇತ್ತೀಚೆಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಈ ರೀತಿಯ ಬಾಂಬ್ ಅನ್ನು ಬಳಸಿದೆ ಎಂದು ಆರೋಪಿಸಲಾಗಿದೆ ಎಂಬುದು ಗಮನಾರ್ಹ.

ದೇಶ ರಾಜಕೀಯ

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಮೈತ್ರಿ ಮಾತುಕತೆ, ಕ್ಷೇತ್ರ ಹಂಚಿಕೆ, ಅಭ್ಯರ್ಥಿ ಆಯ್ಕೆ, ಪ್ರಚಾರದಂತಹ ಹಲವು ಕಾರ್ಯಗಳು ನಡೆಯುತ್ತಿವೆ. ಭಾರತವನ್ನು ಆಳುವ ಅವಕಾಶ ಯಾರಿಗೆ ಸಿಗಲಿದೆ ಮತ್ತು ಆಡಳಿತದ ಜವಾಬ್ದಾರಿಯನ್ನು ಜನತೆ ಯಾರ ಕೈಗೆ ನೀಡಲಿದ್ದಾರೆ ಎಂಬುದು ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಮೀಕ್ಷೆಯ ಫಲಿತಾಂಶಗಳು!
ಲೋಕಸಭೆ ಚುನಾವಣೆಯ ಮುನ್ನೋಟವಾಗಿ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಮುಂತಾದ ಐದು ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಈ ಚುನಾವಣಾ ಫಲಿತಾಂಶಗಳನ್ನು ನಾವು ಜನರ ಮನಸ್ಥಿತಿಯನ್ನು ಊಹಿಸುವ ಮಾರ್ಗವಾಗಿ ನೋಡಬಹುದು. ಐದು ರಾಜ್ಯಗಳ ಚುನಾವಣಾ ದಿನಾಂಕಗಳನ್ನು ನಿನ್ನೆ ಅಧಿಕೃತವಾಗಿ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಐದು ರಾಜ್ಯಗಳ ಚುನಾವಣೆಗೆ ಸಂಬಂಧಿಸಿದ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ABP-C Voter ಸಂಸ್ಥೆಗಳು ಜಂಟಿಯಾಗಿ ಈ ಸಮೀಕ್ಷೆಯನ್ನು ನಡೆಸಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.

ಮಧ್ಯಪ್ರದೇಶ:
ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 113 ರಿಂದ 125 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 104 ರಿಂದ 116 ಸ್ಥಾನಗಳನ್ನು ಗೆಲ್ಲಲಿದೆ. ಸಮೀಕ್ಷೆಯ ಪ್ರಕಾರ ಬಿಎಸ್‌ಪಿ 0 ರಿಂದ 2 ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಇತರರು 0 ರಿಂದ 3 ಸ್ಥಾನಗಳನ್ನು ಗೆಲ್ಲಲಿದ್ದಾರೆ. ವ್ಯತ್ಯಾಸ ಕಡಿಮೆ ಆಗಿರುವುದರಿಂದ ಕೊನೆಯ ಕ್ಷಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ಪೈಕಿ ಯಾವುದೇ ಪಕ್ಷ ಸರ್ಕಾರವನ್ನು ರಚಿಸಬಹುದು.

ಛತ್ತೀಸ್‌ಗಢ:
ಛತ್ತೀಸ್‌ಗಢದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 45ರಿಂದ 51ರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬಿಜೆಪಿ 39 ರಿಂದ 45 ಸ್ಥಾನಗಳನ್ನು ಪಡೆಯಲಿದೆ. ಇತರರು 0 ರಿಂದ 2 ಸ್ಥಾನಗಳನ್ನು ಪಡೆಯಬಹುದು. ಇಲ್ಲಿ ಕಾಂಗ್ರೆಸ್ ಗೆದ್ದರೂ ವ್ಯತ್ಯಾಸ ಕಡಿಮೆಯಾಗಿರುವುದರಿಂದ ಕೊನೆಯ ಕ್ಷಣದಲ್ಲಿ ಅಚ್ಚರಿಗೆ ಕೊರತೆ ಇರುವುದಿಲ್ಲ.

ತೆಲಂಗಾಣ:
ತೆಲಂಗಾಣ ರಾಜ್ಯವು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ 48 ರಿಂದ 60 ಸ್ಥಾನಗಳನ್ನು ಗೆಲ್ಲಲಿದೆ. ಚಂದ್ರಶೇಖರ್ ರಾವ್ ಅವರ  ಬಿಆರ್‌ಎಸ್ 43 ರಿಂದ 55 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ 5 ರಿಂದ 11 ಸ್ಥಾನಗಳನ್ನು ಮಾತ್ರ ಪಡೆಯಲಿದೆ. ಇತರರು 5 ರಿಂದ 11 ಸ್ಥಾನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇಲ್ಲಿ ಕಾಂಗ್ರೆಸ್ Vs ಬಿಆರ್‌ಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಇಲ್ಲಿಯೂ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುತ್ತಿದೆ. ಆದರೆ ವ್ಯತ್ಯಾಸವು ಕಡಿಮೆ ಎಂಬುದು ಗಮನಾರ್ಹ.

ಮಿಜೋರಾಂ:
ಈಶಾನ್ಯ ರಾಜ್ಯ ಮಿಜೋರಾಂ 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಇಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷ 13 ರಿಂದ 17 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 10 ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ. ಸೋರಂ ಪೀಪಲ್ಸ್ ಮೂವ್‌ಮೆಂಟ್ 9 ರಿಂದ 13 ಸ್ಥಾನಗಳನ್ನು ಪಡೆಯಲಿದೆ. ಇತರರಿಗೆ 0 ರಿಂದ 3 ಸ್ಥಾನಗಳನ್ನು ಪಡೆಯುವ ಅವಕಾಶಗಳಿವೆ.

ರಾಜಸ್ಥಾನ:
ರಾಜಸ್ಥಾನದ ಒಟ್ಟು 200 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 127 ರಿಂದ 137 ಸ್ಥಾನಗಳನ್ನು ಗೆಲ್ಲಲಿದೆ ಎಂದು ವರದಿಯಾಗಿದೆ. ಕಾಂಗ್ರೆಸ್ ಪಕ್ಷ 59 ​​ರಿಂದ 69 ಸ್ಥಾನಗಳನ್ನು ಪಡೆದು ಪ್ರಮುಖ ವಿರೋಧ ಪಕ್ಷವಾಗಲಿದೆ ಎಂದು ಹೇಳಲಾಗುತ್ತಿದೆ. ಇತರರು 2 ರಿಂದ 6 ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ದೇಶ ರಾಜಕೀಯ

ಶ್ರೀನಗರ: 5 ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಏಕೆ ಚುನಾವಣೆ ನಡೆಸಲಿಲ್ಲ ಮತ್ತು ಕಾರಣಗಳನ್ನು ಹೇಳಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಉಮರ್ ಅಬ್ದುಲ್ಲಾ ಕೇಳಿದ್ದಾರೆ.

2019ರಲ್ಲಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಒಂದು ಕೇಂದ್ರಾಡಳಿತ ಪ್ರದೇಶವಾಗಿ, ಲಡಾಖನ್ನು ಮತ್ತೊಂದು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜನೆ ಮಾಡಿತು.

ಅಂದಿನಿಂದ ಅಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಲಿಲ್ಲ. ಇದಕ್ಕೆ ಸಂಬಂಧಿತ ಪ್ರಕರಣದಲ್ಲಿ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧವಿರುವುದಾಗಿಯೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಗಣನೀಯವಾಗಿ ಪೂರ್ಣಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ಗೂ ತಿಳಿಸಿತ್ತು.

ಈ ಹಿನ್ನಲೆಯಲ್ಲಿ, ಇಂದು (ಅ.9) ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಿಜೋರಾಂ, ಛತ್ತೀಸ್ ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಮುಂತಾದ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.

ಇದನ್ನೂ ಓದಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಪಕ್ಷವೇ… ಅಥವಾ ಬಿಜೆಪಿಯೇ… ಪರಿಸ್ಥಿತಿ ಏನು?

ಆಗ ಜಮ್ಮು-ಕಾಶ್ಮೀರ ಚುನಾವಣೆ ಯಾವಾಗ ನಡೆಯಲಿದೆ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಜೀವ್ ಕುಮಾರ್, “ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ ಮತ್ತು ಇತರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಲು ಇದು ಸರಿಯಾದ ಸಮಯ ಎಂದು ಚುನಾವಣಾ ಆಯೋಗವು ಭಾವಿಸಿದಾಗ ಚುನಾವಣೆ ನಡೆಸಲಾಗುವುದು” ಎಂದು ಹೇಳಿದರು.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಉಮರ್ ಅಬ್ದುಲ್ಲಾ, “ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿಲ್ಲ. ಚುನಾವಣೆ ನಡೆಸದಿರಲು ಯಾವ ಕಾರಣಗಳು ಇದೆಯೋ ಅದನ್ನು ತಿಳಿಸಿ.

ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಷ್ಟು ಹದಗೆಟ್ಟಿದೆಯೇ? ಜಮ್ಮು ಮತ್ತು ಕಾಶ್ಮೀರದ ಜನರನ್ನು ಪ್ರಜಾಪ್ರಭುತ್ವದಿಂದ ಏಕೆ ಹೊರಗಿಡಲಾಗುತ್ತಿದೆ” ಎಂದು ಚುನಾವಣಾ ಆಯೋಗ ಉತ್ತರಿಸಬೇಕು” ಎಂದು ಹೇಳಿದ್ದಾರೆ.  

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಚುನಾವಣಾ ಆಯೋಗವು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಂಬರುವ ಸಂಸತ್ತಿನ ಚುನಾವಣೆಯ ಮುನ್ನೋಟ ಎಂದು ಪರಿಗಣಿಸಲಾಗಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಐದು ರಾಜ್ಯಗಳ ಚುನಾವಣಾ ಕಾರ್ಯದಲ್ಲಿ ಕೆಲ ತಿಂಗಳ ಹಿಂದೆಯೇ ನಿರತವಾಗಿದ್ದು, ಇದೀಗ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂದು ಪ್ರಕಟಿಸಿದ್ದಾರೆ. ಅದರಂತೆ ಛತ್ತೀಸ್ ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 7 ರಂದು ಮಿಜೋರಾಂ, ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 23 ರಂದು ರಾಜಸ್ಥಾನ ಮತ್ತು ನವೆಂಬರ್ 30 ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸುತ್ತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಮತ್ತು ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಆಡಳಿತ ನಡೆಸುತ್ತಿದೆ. ರಾಜಸ್ಥಾನ 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಆಂತರಿಕ ಸಂಘರ್ಷ ಕಾಂಗ್ರೆಸ್ ಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಆದರೆ, ಕಾಂಗ್ರೆಸ್ ವರಿಷ್ಠರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಸರಿಪಡಿಸಿದ ನಂತರ, ಪರಿಸ್ಥಿತಿ ಸ್ಥಿರವಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅಲ್ಲಿ ರೂ.7,000 ಕೋಟಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ರಾಜಸ್ಥಾನದಲ್ಲಿ ಕಾಂಗ್ರೆಸ್‌ನಂತೆಯೇ ಬಿಜೆಪಿಯಲ್ಲೂ ಗುಂಪು ಸಂಘರ್ಷಗಳಿವೆ. ಈ ಬಾರಿಯೂ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಸಿಂಧಿಯಾ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ. ಇದರಿಂದ ಉದ್ಭವಿಸಿರುವ ಆಂತರಿಕ ಕಲಹಗಳನ್ನು ನಿಭಾಯಿಸಲು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ವಿಧಾನಸಭೆ ಚುನಾವಣೆ ನಡೆಸಲು ನಿರ್ಧರಿಸಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಒಂದು ವರ್ಷ ಆಡಳಿತ ನಡೆಸಿತು. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರಿಂದ, ಬಿಜೆಪಿ ಅಧಿಕಾರ ಹಿಡಿಯಿತು.

ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚುನಾವಣಾ ಭರವಸೆಗಳ ಘೋಷಣೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಮಹಿಳೆಯರಿಗೆ ತಿಂಗಳಿಗೆ ರೂ.1,000 ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ಆರಂಭಿಸಿತು. ಆದರೆ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರೂ.1,500 ನೀಡಲಾಗುವುದು ಎಂದು ಹೇಳಿದೆ. ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ವರದಿಗಳು ತಿಳಿಸುತ್ತಿವೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೇತೃತ್ವದಲ್ಲಿ ಭಾರತ್ ರಾಷ್ಟ್ರ ಸಮಿತಿ ಪಕ್ಷ ಆಡಳಿತ ನಡೆಸುತ್ತಿದೆ. ಹೇಗಾದರೂ ಮಾಡಿ ಅಲ್ಲಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಕಳೆದ ಕೆಲವು ತಿಂಗಳುಗಳಿಂದ ಕಸರತ್ತು ನಡೆಸುತ್ತಿದೆ. ಅದೇ ಸಮಯದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಭಾವ ಹೆಚ್ಚಾಗಿದೆ.

ಹೀಗಾಗಿ ಕಾಂಗ್ರೆಸ್ ಪಕ್ಷವೂ ಅಧಿಕಾರ ಹಿಡಿಯಲು ತೀವ್ರ ಪೈಪೋಟಿ ನಡೆಸುತ್ತಿದೆ. ಭಾರತ್ ರಾಷ್ಟ್ರ ಸಮಿತಿಯ 12 ಮಾಜಿ ಸಚಿವರು ಸೇರಿದಂತೆ 35 ಪ್ರಮುಖ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಉತ್ತೇಜನ ನೀಡಿದೆ. ತೆಲಂಗಾಣ ಚುನಾವಣಾ ಕ್ಷೇತ್ರವು ಬಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ದೇಶ

‘ನ್ಯೂಸ್ ಕ್ಲಿಕ್’ ಸಂಸ್ಥೆ ಚೀನಾದಿಂದ ಹಣ ಪಡೆದಿದೆ ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ‘ನ್ಯೂಯಾರ್ಕ್ ಟೈಮ್ಸ್’ ಸುಮಾರು 2 ತಿಂಗಳ ಹಿಂದೆ ಆಧಾರರಹಿತ ವರದಿ ಪ್ರಕಟಿಸಿತ್ತು. ಅದರ ಆಧಾರದ ಮೇಲೆ, ಜಾರಿ ನಿರ್ದೇಶನಾಲಯ (ಇಡಿ) ಸೆಪ್ಟೆಂಬರ್ 2021 ರಲ್ಲಿ ‘ನ್ಯೂಸ್ ಕ್ಲಿಕ್’ ಮಾಧ್ಯಮ ಕಚೇರಿ ಮೇಲೆ ದಾಳಿ ನಡೆಸಿತು. ಮನಿ ಲಾಂಡರಿಂಗ್ ತಡೆ ಕಾಯಿದೆ ಅಡಿಯಲ್ಲಿ, ‘ನ್ಯೂಸ್ ಕ್ಲಿಕ್’ ಕಂಪನಿಯ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ಮಾಲೀಕತ್ವದಲ್ಲಿನ ರೂ.4.5 ಕೋಟಿ ಮೌಲ್ಯದ ಮನೆ ಮತ್ತು ರೂ. 41 ಲಕ್ಷ ಸ್ಥಿರ ಠೇವಣಿಗಳನ್ನೂ ಸ್ಥಗಿತಗೊಳಿಸಿತು.

ಈ ಹಿನ್ನಲೆಯಲ್ಲಿ, ಅಕ್ಟೋಬರ್ 3 ರಂದು ‘ನ್ಯೂಸ್ ಕ್ಲಿಕ್’ ಮಾಧ್ಯಮ ಮತ್ತು ಅದರ ಸಂಬಂಧಿತ ಪತ್ರಕರ್ತರಿಗೆ ಸೇರಿದ 100 ಸ್ಥಳಗಳಲ್ಲಿ 12 ಗಂಟೆಗಳ ಕಾಲ ದಾಳಿ ನಡೆಸಿದ ದೆಹಲಿ ಪೊಲೀಸರು, ಸೆಲ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ಜಪ್ತಿ ಮಾಡಿದ್ದಾರೆ. ‘ನ್ಯೂಸ್ ಕ್ಲಿಕ್’ ನೌಕರರು ಮತ್ತು 9 ಪತ್ರಕರ್ತರಿಗೆ 25 ಪ್ರಶ್ನೆಗಳ ಪಟ್ಟಿಯನ್ನು ನೀಡಿ  ತನಿಖೆ ನಡೆಸಲಾಯಿತು.

ಇದನ್ನೂ ಓದಿ: ಜನರ ಮನಸ್ಥಿತಿ ಬದಲಾಗಿದೆ; ಮುಂದಿನ ದಿನಗಳಲ್ಲಿ ಕುಟುಂಬ ಪ್ರಾಬಲ್ಯವಿರುವ ರಾಜ್ಯ ಪಕ್ಷಗಳು ನೆಲಕಚ್ಚುವುದು ಖಚಿತ!

ಇದಕ್ಕೂ ಮುನ್ನ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿಕೊಂಡ ದೆಹಲಿ ಪೊಲೀಸರು, 12 ಗಂಟೆಗಳ ದಾಳಿ ಮತ್ತು ವಿಚಾರಣೆಯ ನಂತರ, ‘ನ್ಯೂಸ್ ಕ್ಲಿಕ್’ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ರಾತ್ರಿ ಬಂಧಿಸಲಾಗಿದೆ.

‘ನ್ಯೂಸ್ ಕ್ಲಿಕ್’ ಮೇಲಿನ ದಾಳಿಯು ದೇಶಾದ್ಯಂತ ಆಘಾತವನ್ನು ಉಂಟುಮಾಡಿದೆ. ‘ಇಂಡಿಯಾ’ ಮೈತ್ರಿಕೂಟದ ವಿರೋಧ ಪಕ್ಷಗಳು ಮತ್ತು ಭಾರತೀಯ ಪತ್ರಕರ್ತರ ಸಂಘ, ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ, ದೆಹಲಿ ಪತ್ರಕರ್ತರ ಒಕ್ಕೂಟ ಮತ್ತು ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮುಂತಾದ ಸಂಘಟನೆಗಳು ‘ಇದು ಮೋದಿ ಸರ್ಕಾರದ ದಬ್ಬಾಳಿಕೆ ವಿಧಾನ’ ಎಂದು ಖಂಡಿಸಿವೆ.

ಇದನ್ನೂ ಓದಿ: ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ: ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರು, “ಚೀನಾದ ಕಂಪನಿಗಳಿಂದ ಭಾರಿ ಹಣ ಪಡೆದಿರುವ ‘ಪಿಎಂ ಕೇರ್ಸ್’ (PM CARES) ನ ವ್ಯವಸ್ಥಾಪಕರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ” ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನಲೆಯಲ್ಲಿ, “ಮೋದಿ ಸರಕಾರವೇ ಚೀನಾಕ್ಕೆ ಬೆಂಬಲವಾಗಿ ವರ್ತಿಸುತ್ತಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಈ ಬಗ್ಗೆ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ‘ಎಕ್ಸ್’ ಪೇಜ್ ನಲ್ಲಿ, “ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು 20 ಬಾರಿ ಭೇಟಿಯಾಗಿದ್ದಾರೆ. ಜೂನ್ 19, 2020 ರಂದು ಚೀನಾ ಸೇನೆಯು ಗಡಿಯಲ್ಲಿ ಅತಿಕ್ರಮಣ ಮಾಡಿದಾಗ ಅದರ ಬಗ್ಗೆ ಅವರು ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ. ಪಿಎಂ ಕೇರ್ಸ್‌ಗಾಗಿ ಚೀನಾ ಕಂಪನಿಗಳಿಗೆ ಕೋಟಿಗಟ್ಟಲೆ ಹಣ ನೀಡಲು ಮೋದಿ ಅವಕಾಶ ನೀಡಿದ್ದರು. ಹಾಗಾದರೆ ವಿದೇಶಿ ಶಕ್ತಿಗಳು ಯಾರನ್ನು ನಿಯಂತ್ರಿಸುತ್ತಿವೆ?” ಎಂದು ಪ್ರಶ್ನಿಸಿ ಆರೋಪಿಸಿದ್ದಾರೆ.

ರಾಜಕೀಯ ರಾಜ್ಯ

ಚಿತ್ರದುರ್ಗ: ಕಲುಷಿತ ನೀರು ಸೇವನೆಯಿಂದ ಸಾವು ಸಂಭವಿಸಿದ ಕಾವಾಡಿಗರಹಟ್ಟಿಯ ಸಂತ್ರಸ್ಥ ಕುಟುಂಬಗಳನ್ನು ಭೇಟಿಮಾಡಿ, ಬಳಿಕ ಗ್ರಾಮಸ್ಥರ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಸಿದರು.  

ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದ ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ ನೀಡಿದ್ದೇವೆ. ಸಂತ್ರಸ್ಥ ಕುಟುಂಬಗಳ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ. ಈ ಕುಟುಂಬಗಳ ಸದಸ್ಯರಿಗೆ ಉದ್ಯೋಗವನ್ನೂ ಕೊಡುತ್ತೇವೆ; ಮನೆಯನ್ನೂ ಕಟ್ಟಿಸಿಕೊಡುತ್ತೇವೆ. ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ ಎಂದು ಪರಿಹಾರಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ವಿವರಿಸಿ ಹೇಳಿದರು.

ಘಟನೆ ಘಟಿಸಿದ ತಕ್ಷಣ ಸ್ಥಳೀಯ ಶಾಸಕರು, ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟು, ತಕ್ಷಣಕ್ಕೆ 10 ಲಕ್ಷ ಪರಿಹಾರ ನೀಡಲಾಗಿತ್ತು. ಮೊದಲೇ ಶುದ್ಧ ನೀರಿನ ವ್ಯವಸ್ಥೆ ಇದ್ದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ಘಟನೆ ಬಳಿಕ ಶುದ್ಧ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಇಂತಹ ಅನಾಹುತ ನಡೆದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಜನರ ಮನಸ್ಥಿತಿ ಬದಲಾಗಿದೆ; ಮುಂದಿನ ದಿನಗಳಲ್ಲಿ ಕುಟುಂಬ ಪ್ರಾಬಲ್ಯವಿರುವ ಪ್ರಾದೇಶಿಕ ಪಕ್ಷಗಳು ನೆಲಕಚ್ಚುವುದು ಖಚಿತ! – ಜೆಪಿ ನಡ್ಡಾ