ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2023 » Page 6 of 76 » Dynamic Leader
October 23, 2024
Home 2023 (Page 6)
ದೇಶ ರಾಜಕೀಯ

ರಾಜಸ್ಥಾನ: ರಾಜಸ್ಥಾನದ ವಲ್ಲಭನಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಮಾತನಾಡಿದರು: “ನಾವು ಬಡವರಿಗೆ ಸಹಾಯ ಮಾಡಿದಾಗ, ಬಿಜೆಪಿ ಪ್ರತಿ ಯೋಜನೆಯಲ್ಲಿ ಕೋಟ್ಯಾಧಿಪತಿಗಳಿಗೆ ಸಹಾಯ ಮಾಡುತ್ತಿದೆ. ಅವರು ಒಂದು ತಂಡವಾಗಿದ್ದಾರೆ. ಅದಾನಿ ಪಿಕ್ ಪಾಕೆಟ್ ಹೊಡೆಯುವಾಗ ಜನರ ದಿಕ್ಕು ತಪ್ಪಿಸುವುದು ಮೋದಿಯ ಕೆಲಸ” ಎಂದು ಹೇಳಿದ್ದಾರೆ.

“ಜಾತಿವಾರು ಜನಗಣತಿಯು ದೇಶದ ಎಕ್ಸ್-ರೇ ( ಕ್ಷ-ಕಿರಣ) ಆಗಿದೆ. ಅದನ್ನು ಮಾಡಬೇಕಾದ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುತ್ತದೆ. ಪ್ರಧಾನಿ ಅವರನ್ನು ಒಬಿಸಿ ಎಂದು ಕರೆದುಕೊಳ್ಳುತ್ತಾರೆ. ಆದರೆ ನಾನು ಜಾತಿವಾರು ಜನಗಣತಿಯ ಬಗ್ಗೆ ಮಾತನಾಡುವಾಗ, ಭಾರತದಲ್ಲಿ ಬಡವರು ಎಂಬ ಒಂದೇ ಜಾತಿ ಇದೆ ಎಂದು ಹೇಳುತ್ತಾರೆ. ಆದರೆ ಅದಾನಿ, ಅಂಬಾನಿಯಂತಹ ಕೋಟ್ಯಾಧಿಪತಿಗಳ ಮತ್ತೊಂದು ಜಾತಿ ಅವರಲ್ಲಿದ್ದಾರೆ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ನವಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರಕ್ಕೆ ಇನ್ನು 3 ದಿನ ಮಾತ್ರ ಬಾಕಿ ಉಳಿದಿರುವ ಹಿನ್ನಲೆಯಲ್ಲಿ, ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಭರವಸೆಯನ್ನು ಇಂದು ಬಿಡುಗಡೆ ಮಾಡಿದೆ. ಅದರಲ್ಲಿ “ರೈತರಿಗೆ 2 ಲಕ್ಷ ರೂ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು. ಸ್ವಾಮಿನಾಥನ್ ವರದಿ ಪ್ರಕಾರ ಕನಿಷ್ಠ ಬೆಂಬಲ ಬೆಲೆ ನೀಡಲಾಗುವುದು. ಕಾಂಗ್ರೆಸ್ ಪಕ್ಷ 10 ಲಕ್ಷ ಉದ್ಯೋಗ ಸೃಷ್ಟಿಸಲಿದೆ. ಇದರಲ್ಲಿ 4 ಲಕ್ಷ ಉದ್ಯೋಗಗಳು ಸರ್ಕಾರಿ ವಲಯದಲ್ಲಿ ಸೃಷ್ಟಿಯಾಗಲಿವೆ.

ಪಂಚಾಯತಿ ಮಟ್ಟದ ನೇಮಕಾತಿ ಯೋಜನೆಯನ್ನು ಜಾರಿಗೆ ತರಲಾಗುವುದು. ಜಾತಿವಾರು ಜನಗಣತಿ ನಡೆಸಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ ರಾಜಸ್ಥಾನದ ಆರ್ಥಿಕತೆ 15 ಸಾವಿರ ಕೋಟಿ ರೂ ಇರಲಿದೆ. ಇದನ್ನು 2030ರ ವೇಳೆಗೆ 30 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ” ಎಂದು ಹೇಳಿದರು.

ದೇಶ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸುರಂಗ ಅಗೆಯುವ ವೇಳೆ ಸಿಲುಕಿದ್ದ 41 ಮಂದಿ ಜೀವಂತವಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು (ನ.21) ಅವರಿಗೆ ಟ್ಯೂಬ್ ಮೂಲಕ ಬಿಸಿ ಬಿಸಿ ರವಾ ಕಿಚಡಿಯನ್ನು ದ್ರವ ಆಹಾರವಾಗಿ ನೀಡಲಾಗಿದೆ. ಕಳೆದ 10 ದಿನಗಳಿಂದ ಕಾರ್ಮಿಕರ ಸ್ಥಿತಿ ತಿಳಿಯದ ಹಿನ್ನೆಲೆಯಲ್ಲಿ ಇದೀಗ ಉತ್ತಮ ಮಾಹಿತಿ ಸಿಕ್ಕಿದೆ.

ಈ ಸುದ್ದಿ ಕೇಳಿ ಕಾರ್ಮಿಕರ ಸಂಬಂಧಿಕರು ಸಂತಸಗೊಂಡಿದ್ದಾರೆ. “ಕಳೆದ ಒಂದು ವಾರದಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ” ಎಂದು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಬ್ರಹ್ಮಕಲ್ – ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ – ದಾಂಡಲ್‌ಗಾಂವ್ ನಡುವೆ ಪರ್ವತ ಸುರಂಗ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ.

ಕಳೆದ 12 ರಂದು ಕಾರ್ಮಿಕರು ಸುರಂಗ ಮಾರ್ಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಸುರಂಗದ ಮುಂಭಾಗ ಹಾಗೂ ಕಾರ್ಮಿಕರು ಕೆಲಸ ಮಾಡುತ್ತಿದ್ದ ಪ್ರದೇಶದ ನಡುವಿನ ಭಾಗ ಏಕಾಏಕಿ ಕುಸಿದು ಬಿದ್ದಿತ್ತು. ಇದರಲ್ಲಿ 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಒಂದು ವಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಒಳಗೆ ಸಿಲುಕಿರುವವರಿಗೆ ಅಗತ್ಯ ಆಹಾರ ಒದಗಿಸಲು 40 ಮೀಟರ್ ಪೈಪ್ ಲೈನ್ ಹಾಕಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಉನ್ನತ ಅಧಿಕಾರಿಗಳು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಸುರಂಗದೊಳಗೆ ಸಿಲುಕಿಕೊಂಡಿರುವ 41 ಮಂದಿ ಜೀವಂತವಾಗಿದ್ದಾರೆ; ಬಿಸಿ ಬಿಸಿ ರವಾ ಕಿಚಡಿ ರವಾನೆಯಾಗಿದೆ!

ದೇಶ ರಾಜಕೀಯ

ನವದೆಹಲಿ: ಕಳೆದ ವರ್ಷ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಒಂದು ದೇಶ ಒಂದು ರಸಗೊಬ್ಬರ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

“ಭಾರತದಾದ್ಯಂತ ಇರುವ ರಸಗೊಬ್ಬರ ಕಂಪನಿಗಳು ಇನ್ನುಮುಂದೆ ‘ಭಾರತ್’ ಎಂಬ ಸಾಮಾನ್ಯ ಹೆಸರಿನಲ್ಲೇ ರಸಗೊಬ್ಬರವನ್ನು ಮಾರಾಟ ಮಾಡಬೇಕು. ರಸಗೊಬ್ಬರ ಯೋಜನೆಯನ್ನು ಸೂಚಿಸುವ ‘ಪ್ರಧಾನ ಮಂತ್ರಿ ಭಾರತೀಯ ಜನ್ ಉರ್ವರಕ್ ಪರಿಯೋಜನ’ ಎಂದು ಸೂಚಿಸುವ ಮುದ್ರೆಯನ್ನೇ ರಸಗೊಬ್ಬರ ಪ್ಯಾಕೆಟ್‌ಗಳ ಮೇಲೆ ಬಳಸಬೇಕು” ಎಂದು ಘೋಷಿಸಲಾಯಿತು.

ಭಾರತದಲ್ಲಿ ಯೂರಿಯಾದ ಬೆಲೆಯನ್ನು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತದೆ. ಸರ್ಕಾರ ನಿರ್ಧಾರಿಸುವ ಬೆಲೆಯಲ್ಲೇ ಕಂಪನಿಗಳು ಅದನ್ನು ಮಾರಾಟ ಮಾಡುತ್ತವೆ. ಉತ್ಪಾದನೆಯ ವೆಚ್ಚದಲ್ಲಿ ಶೇ.80-90 ರಷ್ಟು ಉತ್ಪಾದಕರಿಗೆ ಸರ್ಕಾರ ಸಬ್ಸಿಡಿಯಾಗಿ ನೀಡುತ್ತದೆ. ಆಹಾರ ಸಬ್ಸಿಡಿಯ ನಂತರ ಭಾರತೀಯ ಸರ್ಕಾರವು ರಸಗೊಬ್ಬರಕ್ಕೆ ಹೆಚ್ಚಾಗಿ ಹಣವನ್ನು ನಿಗದಿಪಡಿಸಬೇಕಾಗಿದೆ. ಅಂದರೆ ಸುಮಾರು ರೂ.2 ಲಕ್ಷ ಕೋಟಿಗೂ ಮೇಲಾಗಿ ಸಬ್ಸಿಡಿಗೆ ಹಣವನ್ನು ನಿಗದಿಪಡಿಸುತ್ತಿದೆ.

“ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಒಂದು ದೇಶ ಒಂದು ರಸಗೊಬ್ಬರ ಯೋಜನೆ ಜಾರಿಯಿಂದ ರೈತರಿಗೆ ಕೈಗೆಟಕುವ ದರದಲ್ಲಿ ‘ಭಾರತ್ ಬ್ರಾಂಡ್’ ಗುಣಮಟ್ಟದ ರಸಗೊಬ್ಬರ ದೊರೆಯಲಿದೆ” ಎಂದರು. ಈ ಹಿನ್ನಲೆಯಲ್ಲಿ, ಒಂದು ದೇಶ ಒಂದು ರಸಗೊಬ್ಬರ ಯೋಜನೆಯಡಿ ಮಾರಾಟ ಮಾಡುತ್ತಿರುವ ಭಾರತ್ ಯೂರಿಯಾ ಚೀಲಗಳ ಮೇಲೆ ಹಿಂದಿಯಲ್ಲಿ “ಮೇಡ್ ಇನ್ ಚೈನಾ” ಎಂದು ಮುದ್ರಿಸಿರುವುದು ಆಘಾತವನ್ನು ಉಂಟುಮಾಡಿದೆ. ಇದರ ಬಗ್ಗೆ ವಿರೋಧ ಪಕ್ಷಗಳು ಖಂಡನೆಯನ್ನು ವ್ಯಕ್ತಪಡಿಸಿವೆ.

ಕಳೆದ ವರ್ಷ ಕೆನಡಾದಲ್ಲಿ ಸ್ಪೀಕರ್‌ಗಳಿಗಾಗಿ ನಡೆದ ಕಾಮನ್‌ವೆಲ್ತ್ ಸಮ್ಮೇಳನದಲ್ಲಿ ಸ್ಪೀಕರ್ ಒಂಬಿರ್ಲಾ ನೇತೃತ್ವದಲ್ಲಿ ಸ್ಪೀಕರ್‌ಗಳು ರಾಷ್ಟ್ರಧ್ವಜವನ್ನು ಹಿಡಿದು ರ‍್ಯಾಲಿ ನಡೆಸಿದರು. ಆ ರಾಷ್ಟ್ರಧ್ವಜಗಳ ಮೇಲೆ ‘ಮೇಡ್ ಇನ್ ಚೈನಾ’ ಎಂದು ಬರೆಯಲಾಗಿದ್ದು ವಿವಾದಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದು.

ದೇಶ ರಾಜ್ಯ

ಪ್ರಧಾನಿ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಡಾಲರ್‌ಗೆ ಸಮಾನವಾದ ಭಾರತೀಯ ಕರೆನ್ಸಿಯ ಮೌಲ್ಯವನ್ನು ತರುವುದಾಗಿ ಪ್ರಸ್ತಾಪಿಸಿದ್ದರು.

ಭಾರತದ ಪ್ರಧಾನಿ ಮೋದಿ ಅವರು ನಿನ್ನೆ ತಮ್ಮ ಕಚೇರಿಗೆ ಭೇಟಿ ನೀಡಿದ ಮಕ್ಕಳೊಂದಿಗೆ ಸಂತಸದಿಂದ ಕಾಲ ಕಳೆದರು. ನಂತರ ಅವರನ್ನು ರಂಜಿಸಲಿಕ್ಕಾಗಿ “ಮ್ಯಾಜಿಕ್” ಮಾಡಿ ತೋರಿಸಿದರು. ಅವರ ಹಣೆಗೆ ನಾಣ್ಯ ಅಂಟಿಸಿ ಮಾಯವಾಗುವಂತೆ ಮಾಡುತ್ತಿದ್ದರು; ಅದನ್ನು ಮಕ್ಕಳು ನೋಡಿ ಆನಂದಿಸಿದರು.

ಈ ವಿಡಿಯೋವನ್ನು ತಮ್ಮ ಎಕ್ಸ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ನನ್ನ ಕಿರಿಯ ಸ್ನೇಹಿತರೊಂದಿಗೆ ಕೆಲವು ಮರೆಯಲಾಗದ ಕ್ಷಣಗಳು” ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಕುಸಿಯುತ್ತಿರುವ ಭಾರತೀಯ ರೂಪಾಯಿ ಮೌಲ್ಯವನ್ನು ಹೋಲಿಕೆ ಮಾಡಿ ಕಾಂಗ್ರೆಸ್ ಪಕ್ಷ ಪ್ರಧಾನಿ ಮೋದಿಯವರನ್ನು ಟ್ರೋಲ್ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ತನ್ನ ಎಕ್ಸ್ ಪೇಜ್‌ನಲ್ಲಿ ಪ್ರಧಾನಿ ಮೋದಿ ಹಣೆಯ ಮೇಲೆ ನಾಣ್ಯ ಹಿಡಿದಿರುವ ಚಿತ್ರವನ್ನು ಬಿಡುಗಡೆ ಮಾಡಿದೆ.

ಅದರೊಂದಿಗೆ,
“ಪ್ರಶ್ನೆ: ಭಾರತೀಯ ಕರೆನ್ಸಿಯ ಮೌಲ್ಯ ಹೇಗೆ ಕುಸಿಯಿತು?
ಪ್ರಧಾನಿ ಮೋದಿ: ಹೀಗೆ…” ಎಂದು ಪೋಸ್ಟ್ ಮಾಡಿದೆ.

ಪ್ರಧಾನಿ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಡಾಲರ್‌ಗೆ ಸಮಾನವಾದ ಭಾರತೀಯ ಕರೆನ್ಸಿಯ ಮೌಲ್ಯವನ್ನು ತರುವುದಾಗಿ ಪ್ರಸ್ತಾಪಿಸಿದ್ದರು. ಆದರೆ, ಭಾರತೀಯ ಕರೆನ್ಸಿಯ ಪ್ರಸ್ತುತ ಮೌಲ್ಯ ಪ್ರತಿ ಡಾಲರ್‌ಗೆ ರೂ.83.27 ಆಗಿದೆ. 2014ರಲ್ಲಿ 63.72 ಇತ್ತು. ಇದನ್ನು ಟೀಕಿಸಿ ಕಾಂಗ್ರೆಸ್ ಪಕ್ಷ ಟ್ರೋಲ್ ಮಾಡಿದೆ.

ಕ್ರೈಂ ರಿಪೋರ್ಟ್ಸ್ ದೇಶ

ತಿರುವನಂತಪುರಂ: ಕಳೆದ ಅಕ್ಟೋಬರ್ 29 ರಂದು ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೇರಿ ಪ್ರದೇಶದಲ್ಲಿ ಕ್ರಿಶ್ಚಿಯನ್ ಧರ್ಮದ ಸಭೆಯಲ್ಲಿ ದಿಢೀರ್ ಬಾಂಬ್ ಸ್ಫೋಟ ಸಂಭವಿಸಿತು. ಇದರಲ್ಲಿ 3 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಹಿನ್ನಲೆಯಲ್ಲಿ, ಸ್ಫೋಟದ ತನಿಖೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್‌ಐಎ ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸುವಂತೆ ಆದೇಶಿಸಿದರು.

ಸ್ಫೋಟ ನಡೆದ ಕೆಲವು ಗಂಟೆಗಳ ನಂತರ ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ, ಕ್ರಿಶ್ಚಿಯನ್ ಧರ್ಮದ ಸಭೆಯಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಹೇಳಿಕೊಂಡು, ಸ್ಫೋಟಕ್ಕೆ ಹೊಣೆ ಹೊತ್ತು, ತ್ರಿಶೂರ್ ಜಿಲ್ಲೆಯ ಕೊಡಕ್ಕರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ಕೇರಳ ರಾಜ್ಯದ ಕಲಮಸ್ಸೇರಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಯತ್ತೂರಿನ ಪ್ರವೀಣ್ ಪ್ರದೀಪ್ ಎಂಬ ಯುವಕ ಇಂದು ಮೃತಪಟ್ಟಿದ್ದಾನೆ. ಇದರೊಂದಿಗೆ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸ್ಫೋಟದಲ್ಲಿ ಗಾಯಗೊಂಡ 11 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಕೀಯ

ಬೆಂಗಳೂರು: ನವೆಂಬರ್ 17 ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆ, ಘೋಷಣೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವರು ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಿದರು.

“ನವೆಂಬರ್ 17 ಶುಕ್ರವಾರ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಕೇಂದ್ರ ವೀಕ್ಷಕರು ಬರಲಿದ್ದಾರೆ. ಮಾಹಿತಿ ಪ್ರಕಾರ ಇಬ್ಬರು ವೀಕ್ಷಕರು ಬರಲಿದ್ದಾರೆ. ಯಾರು ಬರುತ್ತಾರೆ ಎಂಬುದು ನಾಳೆ ತಿಳಿಯಲಿದೆ” ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ದೇಶ

ಇಟಾವಾ/ನವದೆಹಲಿ, ನ.15 (ಪಿಟಿಐ) ಉತ್ತರ ಪ್ರದೇಶದ ಇಟಾವಾ ಬಳಿ ಬುಧವಾರ ಸಂಜೆ ನವದೆಹಲಿ-ದರ್ಭಾಂಗಾ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರಿಗೆ ಸುಟ್ಟ ಗಾಯಗಳಾಗಿಲ್ಲ ಎಂದು ಇಟಾವಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂಜಯ್ ಕುಮಾರ್ ಹೇಳಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಪ್ರಯಾಣಿಕರು ಹಾರಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ.

ಬೆಂಕಿ ಅವಘಡಕ್ಕೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.

ದೇಶ ರಾಜಕೀಯ

ರಾಯ್‌ಪುರ: ಪ್ರಧಾನಿ ಮೋದಿ ಎಲ್ಲಿಗೆ ಹೋದರೂ ನನ್ನನ್ನು ನಿಂದಿಸುತ್ತಿದ್ದಾರೆ. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಛತ್ತೀಸ್‌ಗಢ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಛತ್ತೀಸ್‌ಗಢದ ಪಲೋಡಾ ಬಜಾರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು: ಮೋದಿ ಎಲ್ಲಿಗೆ ಹೋದರೂ ನನ್ನನ್ನು ನಿಂದಿಸುತ್ತಿದ್ದಾರೆ. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೋದಿ ಗ್ಯಾರಂಟಿ ಎಂದರೆ ಅದು ಅದಾನಿಯ ಗ್ಯಾರಂಟಿಯೇ.

ಛತ್ತೀಸ್‌ಗಢದಲ್ಲಿ ಕೆ.ಜಿ.ಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣ ನೀಡಲು ಭೂಪೇಶ್ ಬಾಗಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಜಾತಿವಾರು ಜನಗಣತಿ:
ಮಧ್ಯಪ್ರದೇಶದ ದಾಡಿಯಾ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು, “ಮಧ್ಯಪ್ರದೇಶದಲ್ಲಿ ನಾವು (ಕಾಂಗ್ರೆಸ್) ಅಧಿಕಾರಕ್ಕೆ ಬಂದರೆ, ಕೃಷಿ ಸಾಲವನ್ನು ಮನ್ನಾ ಮಾಡುತ್ತೇವೆ. ಜಾತಿವಾರು ಜನಗಣತಿ ನಡೆಸುತ್ತೇವೆ.

ಮಧ್ಯಪ್ರದೇಶದಲ್ಲಿ ರಸಗೊಬ್ಬರಕ್ಕಾಗಿ ರೈತರು ಉದ್ದನೆಯ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇಲ್ಲಿ ರಸಗೊಬ್ಬರ ಸಿಗುತ್ತಿಲ್ಲ. ಮಧ್ಯಪ್ರದೇಶದಲ್ಲಿ ಚುನಾವಣಾ ಸಂದರ್ಭದಲ್ಲಿ ರಸಗೊಬ್ಬರದ ಚೀಲಗಳ ಮೇಲೆ ಮೋದಿ ಫೋಟೋ ಅಂಟಿಸಿದ್ದಕ್ಕೆ ಚುನಾವಣಾ ಆಯೋಗ ಗೊಬ್ಬರ ವಿತರಣೆಗೆ ನಿಷೇಧ ಹೇರಿದೆ. ಇದರಿಂದ ಮಧ್ಯಪ್ರದೇಶದ ರೈತರು ಕಂಗಾಲಾಗಿದ್ದಾರೆ” ಎಂದು ಮಾತನಾಡಿದ್ದಾರೆ.

ಕ್ರೈಂ ರಿಪೋರ್ಟ್ಸ್

ಪುದುಕೋಟ್ಟೈ: ಪುದುಕೋಟ್ಟೈ ಜಿಲ್ಲೆಯ ಆಯಪಟ್ಟಿಯ ಅಣ್ಣಾನಗರದ ಪರಿಶಿಷ್ಟ ಜಾತಿಯ ಯುವಕ ಪ್ರಕಾಶ್ ಅವರು ಪಟಾಕಿ ಖರೀದಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ, ಮೋಲುಡಯಾನ್ ಪಟ್ಟಿ, ನಾಲ್ಕು ರಸ್ತೆಯ ಹತ್ತಿರ ಕೀಳ್ ತೊಂಡೈಮಾನ್ ಗ್ರಾಮದ ಕಳ್ಳರ್ ಸಮುದಾಯಕ್ಕೆ ಸೇರಿದ ಸಾರಥಿ ಮತ್ತು ಆತನ ಸಹಚರು ಸೇರಿ, ಅಡ್ಡಗಟ್ಟಿ ಪ್ರಕಾಶ್ ಅವರನ್ನು ಜಾತಿ ನಿಂದನೆ ಮಾಡಿ, ಬಿಯರ್ ಬಾಟಲಿಯಿಂದ ತಲೆಗೆ 15 ಬಾರಿ ಬರ್ಬರವಾಗಿ ಹೊಡೆದು ಕೊಲೆ ಬೆದರಿಕೆ ಹಾಕಿದ್ದಾರೆ.

ಪುದುಕೊಟ್ಟೈ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಕಾಶ್ ಅವರನ್ನು ದಾಖಲಿಸಲಾಗಿದೆ. “ನೀಲಂ ಸಾಂಸ್ಕೃತಿಕ ಕೇಂದ್ರ”ದ ಸ್ಥಳೀಯ ಮುಖಂಡ ಮುರುಗಾನಂದನ್ ಅವರು ಕಾರ್ಯಕರ್ತರೊಂದಿಗೆ ಆಸ್ಪತ್ರೆಗೆ ಖುದ್ದು ತೆರಳಿ ಸಾಂತ್ವನ ಹೇಳಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರನ್ನೂ ಸಲ್ಲಿಸಲಾಗಿದೆ.

ಈ ಕುರಿತು ಮಾತನಾಡಿರುವ ಮುರುಗಾನಂದನ್, “ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ನಿರ್ದೇಶಕರಿಗೂ ಮಾಹಿತಿ ನೀಡಿದ್ದೇವೆ. ಜಾತಿ ಮನಸ್ಥಿತಿಯ ಅಪರಾಧಿಗಳನ್ನು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯ ಒದಗಿಸಿಕೊಡಬೇಕು.

ತಮಿಳುನಾಡಿನ ದಕ್ಷಿಣದ ಜಿಲ್ಲೆಗಳಲ್ಲಿ ಪರಿಶಿಷ್ಟ ಜನರ ಮೇಲೆ ನಿರಂತರವಾಗಿ ನಡೆಯುತ್ತಿರುವ ಜಾತಿ ಅಸ್ಪೃಶ್ಯತೆ ಹಿಂಸಾಚಾರವನ್ನು ತಡೆಯಲು ತಮಿಳುನಾಡು ಸರ್ಕಾರ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ಕ್ರೈಂ ರಿಪೋರ್ಟ್ಸ್ ದೇಶ

ತಿರುವನಂತಪುರಂ: ಕೇರಳ ರಾಜ್ಯದ ಆಲುವಾ ಜಿಲ್ಲೆಯ ಮುಖ್ಖಂ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಿಹಾರ ದಂಪತಿಯ 5 ವರ್ಷದ ಮಗಳು ಜುಲೈ 28 ರಂದು ನಾಪತ್ತೆಯಾಗಿದ್ದಳು. ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಅಲ್ಲದೆ, ಈ ಘಟನೆಗೆ ಸಂಬಂಧಿಸಿದಂತೆ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಿಹಾರ ರಾಜ್ಯದ ವಲಸೆ ಕಾರ್ಮಿಕ ಅಸ್ಪಾಕ್ ಆಲಂ ಅವರನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು.

ತನಿಖೆ ವೇಳೆ ಅಸ್ಪಾಕ್ ಆಲಂ ಬಾಲಕಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಬಾಲಕಿಯ ಶವವನ್ನು ಆಲುವಾ ಮಾರುಕಟ್ಟೆ ಹಿಂಭಾಗದ ಕಸದ ರಾಶಿಗೆ ಎಸೆದಿದ್ದಾನೆ. ಇದನ್ನು ಅನುಸರಿಸಿ ಪೊಲೀಸರು 20 ಗಂಟೆಗಳ ಹುಡುಕಾಟದ ಬಳಿಕ ಬಾಲಕಿಯ ಶವವನ್ನು ಹೊರತೆಗೆದಿದ್ದಾರೆ. ಈ ಘಟನೆ ದೇಶಾದ್ಯಂತ ಭಾರೀ ಆಘಾತವನ್ನುಂಟು ಮಾಡಿತ್ತು.

ಏತನ್ಮಧ್ಯೆ, 5 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಹತ್ಯೆಗೈದ ಅಸ್ಪಾಕ್ ಆಲಂ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆ ಎರ್ನಾಕುಲಂನ ಪೋಕ್ಸೋ ಕೋರ್ಟ್‌ನಲ್ಲಿ ನಡೆಯಿತು.

ಈ ಪ್ರಕರಣದಲ್ಲಿ, ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಸ್ಪಾಕ್ ಆಲಂ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ, ಆರೋಪಿ ಅಸ್ಪಾಕ್ ಆಲಂಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ನ್ಯಾಯಾಲಯವು ಆರೋಪಿ ಅಸ್ಪಾಕ್ ಆಲಂಗೆ 5 ಜೀವಾವಧಿ ಶಿಕ್ಷೆಯನ್ನೂ ವಿಧಿಸಿದೆ. ಆರೋಪಿಗಳಿಗೆ 7 ಲಕ್ಷ 70 ಸಾವಿರ ರೂಪಾಯಿ ದಂಡ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದ ವಿಚಾರಣೆ ಆರಂಭವಾಗಿ 110 ದಿನಗಳಲ್ಲಿ ಎರ್ನಾಕುಲಂ ಪೋಕ್ಸೊ ಕೋರ್ಟ್ ತೀರ್ಪು ನೀಡಿರುವುದು ಗಮನಾರ್ಹ. ಮಕ್ಕಳ ದಿನದಂದು, ಮಗುವನ್ನು ಕೊಂದ ಅಸ್ಪಾಕ್ ಆಲಂಗೆ ಪೋಕ್ಸೊ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದನ್ನು ಅನೇಕರು ಸ್ವಾಗತಿಸಿದ್ದಾರೆ.