ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2024 » Page 2 of 7 » Dynamic Leader
October 23, 2024
Home 2024 February (Page 2)
ಸಿನಿಮಾ

ಅರುಣ್ ಕುಮಾರ್ ಜಿ

ಮತ್ತೆ ಬಂದರು ಟಕ್ಕರ್ ರಘು ಶಾಸ್ತ್ರೀ…’ಲೈನ್ ಮ್ಯಾನ್’ ಅವತಾರದಲ್ಲಿ ತ್ರಿಗುಣ್… ಮಾ.15ಕ್ಕೆ ಚಿತ್ರ ರಿಲೀಸ್!

ಕನ್ನಡ ಚಿತ್ರರಂಗದಲ್ಲಿ ರನ್ ಆಂಟೋನಿ ಹಾಗೂ ಟಕ್ಕರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರಘು ಶಾಸ್ತ್ರಿ. ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ‘ಲೈನ್ ಮ್ಯಾನ್’ ಎಂಬ ಶೀರ್ಷಿಕೆ ಇಡಲಾಗಿದೆ. ಡಿಫ್ರೆಂಟ್ ಟೈಟಲ್ ಮೂಲಕ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಇದೀಗ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

‘ಲೈನ್ ಮ್ಯಾನ್’ ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಸರಿಗಮ ಕನ್ನಡ ಯೂಟ್ಯೂಬ್‌ನಲ್ಲಿ ಚಿತ್ರದ ಝಲಕ್ ರಿಲೀಸ್ ಆಗಿದ್ದು, ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬಂದಿದೆ. ಕದ್ರಿ ಮಣಿಕಾಂತ್ ಮ್ಯೂಸಿಕ್ ಕಿಕ್ ಕೊಡ್ತಿದೆ. ಯುವ ನಟ ತ್ರಿಗುಣ್ ಅವರು ‘ಲೈನ್ ಮ್ಯಾನ್’ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಆರ್.ಜಿ.ವಿ.ನಿರ್ದೇಶನದ ‘ಕೊಂಡ’ ಚಿತ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗಿದು ನಾಯಕ ನಟನಾಗಿ ಚೊಚ್ಚಲ ಚಿತ್ರ. ಹಾಗಾಗಿ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆ, ಭರವಸೆಯನ್ನಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ವಿದ್ಯುತ್ಗೆ ಸಂಬಂಧಿಸಿದ ಕೆಲಸ, ತೊಂದರೆ ಸರಿಪಡಿಸುವ ‘ಲೈನ್ ಮ್ಯಾನ್’ ಸುತ್ತ ಈ ಕಥೆ ಸುತ್ತುತ್ತದೆ. ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರವೇ ‘ಲೈನ್ ಮ್ಯಾನ್’. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ.ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ‘ಲೈನ್ ಮ್ಯಾನ್’ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ದೇಶ

ಗುಜರಾತ್: ಮಾರ್ಚ್ 5 ರಂದು ನಡೆಯಲಿರುವ ತನ್ನ ಸೋದರಳಿಯನ ಮದುವೆಯಲ್ಲಿ ಪಾಲ್ಗೊಳ್ಳಲು ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿ ರಮೇಶ್ ಚಂದನಾಗೆ ಗುಜರಾತ್ ಹೈಕೋರ್ಟ್ 10 ದಿನಗಳ ಪೆರೋಲ್ ನೀಡಿ ಆದೇಶಿಸಿದೆ.

ರಮೇಶ್ ಚಂದನಾ, ಕಳೆದ ವಾರ ಪೆರೋಲ್‌ಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಜನವರಿ 21 ರಂದು ಗೋದ್ರಾ ಪಟ್ಟಣದ ಜೈಲಿಗೆ ಎಲ್ಲಾ 11 ಅಪರಾಧಿಗಳು ಶರಣಾದ ನಂತರ, ಪೆರೋಲ್ ಮಂಜೂರು ಮಾಡಿದ ಪ್ರಕರಣದಲ್ಲಿ ಎರಡನೇ ಅಪರಾಧಿ ಇವರಾಗಿದ್ದಾರೆ.

2002ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಂದ ಪ್ರಕರಣದಲ್ಲಿ 11 ಅಪರಾಧಿಗಳನ್ನು ದೋಷಿಗಳೆಂದು ಘೋಷಿಸಲಾಗಿತ್ತು.

ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅವರು ಶುಕ್ರವಾರ ಹೊರಡಿಸಿರುವ ತಮ್ಮ ಆದೇಶದಲ್ಲಿ, ‘ಈ ಅರ್ಜಿಯ ಮೂಲಕ, ಅಪರಾಧಿ-ಅರ್ಜಿದಾರನು ತನ್ನ ಸಹೋದರಿಯ ಮಗನ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಆಧಾರದ ಮೇಲೆ ಪೆರೋಲ್ ರಜೆಗಾಗಿ ಪ್ರಾರ್ಥಿಸುತ್ತಾರೆ. ಈ ಅರ್ಜಿಯಲ್ಲಿ ಒತ್ತಾಯಿಸಿದ ಕಾರಣಗಳನ್ನು ಪರಿಗಣಿಸಿ, ಹತ್ತು ದಿನಗಳ ಅವಧಿಗೆ ಅರ್ಜಿದಾರ-ಆರೋಪಿಯನ್ನು ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ’ ಎಂದು ತಿಳಿಸಿದೆ.

ಇದಕ್ಕೂ ಮುನ್ನ, ಪ್ರಕರಣದ ಮತ್ತೊಬ್ಬ ಅಪರಾಧಿ ಪ್ರದೀಪ್ ಮೋಧಿಯಾ ಅವರ ಪೆರೋಲ್ ಅರ್ಜಿಯನ್ನು ಹೈಕೋರ್ಟ್ ಅನುಮತಿಸಿದ ನಂತರ ಫೆಬ್ರವರಿ 7 ರಿಂದ 11 ರವರೆಗೆ ಗೋಧ್ರಾ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಸರ್ಕಾರದ ಅಫಿಡವಿಟ್ ಪ್ರಕಾರ, ರಮೇಶ್ ಚಂದನಾ ಅವರು 2008ರಲ್ಲಿ ಸೆರೆವಾಸದಿಂದ 1,198 ದಿನಗಳವರೆಗೆ ಪೆರೋಲ್ ಮತ್ತು 378 ದಿನಗಳ ಫರ್ಲೋ ಅನುಭವಿಸಿದ್ದಾರೆ.

ಆಗಸ್ಟ್ 2022 ರಿಂದ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ 11 ಅಪರಾಧಿಗಳಿಗೆ, ಗುಜರಾತ್ ಸರ್ಕಾರವು 1992ರ ನೀತಿಗೆ ಅನುಗುಣವಾಗಿ ಅವರಿಂದ ಕ್ಷಮಾದಾನ ಅರ್ಜಿಗಳನ್ನು ಸ್ವೀಕರಿಸಿ, ತನ್ನ ವಿವೇಚನಾ ಅಧಿಕಾರವನ್ನು ಬಳಸಿ, ಜೈಲಿನಲ್ಲಿ ಅವರ ‘ಉತ್ತಮ ನಡತೆ’ಯನ್ನು ಪರಿಗಣಿಸಿ, ಅವರೆಲ್ಲರನ್ನು ಅವಧಿಗೆ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಿತು.

2002ರ ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದ ಕಾರಣ, ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಜನವರಿ 8 ರಂದು  ನೀಡಿದ ತೀರ್ಪು ಎಲ್ಲಾ 11 ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸಿತು.

14 ವರ್ಷಗಳ ಕಾಲ ಜೈಲಿನಲ್ಲಿದ್ದ ನಂತರ 2022ರಲ್ಲಿ ಸ್ವಾತಂತ್ರ್ಯ ದಿನದಂದು ಗೋಧ್ರಾ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದ ಎಲ್ಲಾ ಅಪರಾಧಿಗಳನ್ನು ಎರಡು ವಾರಗಳಲ್ಲಿ ಜೈಲಿಗೆ ಹಿಂತಿರುಗುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿತು. ಅವರೆಲ್ಲರು ಜನವರಿ 21 ರಂದು ಗೋಧ್ರಾ ಜೈಲು ಅಧಿಕಾರಿಗಳ ಮುಂದೆ ಶರಣಾದರು.

ರಾಜಕೀಯ

ನವದೆಹಲಿ: ಖಾಸಗಿ ಕಂಪನಿಗಳ ಮೇಲೆ ದಾಳಿ ಮಾಡಿ, ಅವುಗಳ ಮೂಲಕ ಬಿಜೆಪಿಗೆ ದೇಣಿಗೆ ಸಂಗ್ರಹಿಸಲಿಕ್ಕಾಗಿ ಕೇಂದ್ರ ಗುಪ್ತಚರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ್ ರಮೇಶ್, ‘ಕಳೆದ ಹಣಕಾಸು ವರ್ಷಗಳ 2018-19 ಮತ್ತು 2022-23ರ ನಡುವೆ ಬಿಜೆಪಿಗೆ ಒಟ್ಟು 335 ಕೋಟಿ ರೂ ದೇಣಿಗೆ ನೀಡಿರುವ ಸುಮಾರು 30 ಕಂಪನಿಗಳು, ಅದೇ ಅವಧಿಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆಗಳನ್ನು ಎದುರಿಸಿರುತ್ತದೆ.

ಈ ಸಮಸ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಬಿಜೆಪಿ ಅವರ ಹಣಕಾಸಿನ ಮೂಲಗಳ ಬಗ್ಗೆ ಸ್ವೇತ ಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಈ ಅನುಮಾನಾಸ್ಪದ ದೇಣಿಗೆಗಳನ್ನು ತನಿಖೆ ಮಾಡಲು ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ, ‘ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಸಿಬಿಐ ಮುಂತಾದ ಕೇಂದ್ರೀಯ ಗುಪ್ತಚರ ಸಂಸ್ಥೆಗಳ ತನಿಖೆಯನ್ನು ಎದುರಿಸಿದ ನಂತರ, ಹಲವು ಖಾಸಗಿ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಇದು ಕೇಂದ್ರ ಗುಪ್ತಚರ ಸಂಸ್ಥೆಯ ಸ್ವಾತಂತ್ರ್ಯ, ಸ್ವಾಯತ್ತತೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಈ 3 ತನಿಖಾ ಸಂಸ್ಥೆಗಳ ಪೈಕಿ 2 ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತವೆ.

ಗುಪ್ತಚರ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಹೇಗೆ ನಿಯಂತ್ರಿಸುತ್ತದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ರಾಜಕಾರಣಿಗಳ ಮೇಲಿನ ಜಾರಿ ನಿರ್ದೇಶನಾಲಯದ ಪ್ರಕರಣಗಳು 2014 ರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಇದರಲ್ಲಿ ಶೇಕಡಾ ಶೇ.95ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧವೇ ಆಗಿವೆ.

ಬಿಜೆಪಿಗೆ ಒಟ್ಟು 187.58 ಕೋಟಿ ರೂ.ನೀಡಿದ 30 ಕಂಪನಿಗಳ ಪೈಕಿ, 23 ಕಂಪನಿಗಳು, 2014 ರಿಂದ ದಾಳಿ ನಡೆದ ವರ್ಷದವರೆಗೆ ಬಿಜೆಪಿಗೆ ಯಾವುದೇ ದೇಣಿಗೆ ನೀಡಿರುವುದಿಲ್ಲ. ಆದರೆ ಅದರ ನಂತರ ದೇಣಿಗೆಯನ್ನು ನೀಡಿದೆ. ಈಗಾಗಲೇ ದೇಣಿಗೆ ನೀಡುತ್ತಿದ್ದ ಸಂಸ್ಥೆಗಳು ದಾಳಿಯ ನಂತರ ಹೆಚ್ಚಿನ ದೇಣಿಗೆಗಳನ್ನು ನೀಡಿವೆ.

ತನಿಖಾ ಸಂಸ್ಥೆಗಳು ದಾಖಲಿಸಿರುವ ಪ್ರಕರಣಗಳು ಅಕ್ರಮ ಎಂದು ನಾವು ಹೇಳುತ್ತಿಲ್ಲ. ಆದರೆ ಈ ಕಂಪನಿಗಳು ತನಿಖೆ ಎದುರಿಸಿದ ನಂತರ ಬಿಜೆಪಿಗೆ ಏಕೆ ದೇಣಿಗೆ ನೀಡುತ್ತಿವೆ ಎಂಬುದು ತನಿಖೆಯಾಗಬೇಕಾದ ವಿಚಾರವಾಗಿದೆ’ ಎಂದು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ಕ್ರಮದ ನಂತರ ಅವರು ಬಿಜೆಪಿಗೆ ದೇಣಿಗೆ ನೀಡುತ್ತಿರುವುದು ಕೇವಲ ಕಾಕತಾಳೀಯವೇ? ನಾವು ಈ ವಿಷಯವನ್ನು ನ್ಯಾಯಾಂಗ ಮತ್ತು ಜನರ ಬಳಿಗೆ ಕೊಂಡೊಯ್ಯುತ್ತೇವೆ. ಎರಡೂ ಕಡೆಯೂ ನಿಮ್ಮನ್ನು ಸೋಲಿಸುತ್ತೇವೆ’ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ದೇಶ

ವಾರಣಾಸಿ: ‘ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ಸ್ಥಳೀಯ ಉತ್ಪನ್ನಗಳ ಪರವಾಗಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ತಮ್ಮ ತವರು ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಬೆಳಗ್ಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ, ನಂತರ ಸಂತ ಗುರು ರವಿದಾಸರ 647ನೇ ಜನ್ಮದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ 13,000 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು: ‘ವಾರಣಾಸಿಯಲ್ಲಿ ಕಳೆದ 10 ವರ್ಷಗಳಲ್ಲಿ ಬೆಳವಣಿಗೆ ಹಲವು ಪಟ್ಟು ಹೆಚ್ಚಾಗಿದೆ. ಈ ನಗರದ ಜನರ ಜೀವನಮಟ್ಟವನ್ನು ಹೆಚ್ಚಿಸಲು ನಾನು ಸಂಕಲ್ಪ ಮಾಡಿದ್ದೇನೆ.

ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ನಾನು ಸ್ಥಳೀಯ ಉತ್ಪನ್ನಗಳಿಗೆ ಧ್ವನಿ ನೀಡುತ್ತಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಹೊಂದಾಣಿಕೆ ರಾಜಕಾರಣದಿಂದಾಗಿ ಉತ್ತರಪ್ರದೇಶ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ಕಾಂಗ್ರೆಸ್ ಯುವರಾಜ, ಕಾಶಿ ಮತ್ತು ಉತ್ತರಪ್ರದೇಶ ಯುವಕರನ್ನು ಗುಲಾಮರು ಎಂದು ಕರೆಯುತ್ತಾರೆ. ಇದು ಯಾವ ರೀತಿಯ ವಿಮರ್ಶೆ? ಅವರು ಉತ್ತರಪ್ರದೇಶದ ಯುವಕರ ಮೇಲೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಆದರೆ ಯುವಕರು ತಮ್ಮದೇ ಆದ ರಾಜ್ಯವನ್ನು ಕಟ್ಟುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶ

ಪಂಜಾಬ್: ರೈತರ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ, ದೆಹಲಿಯತ್ತ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರನ್ನು ರಾಜ್ಯದ ಗಡಿಯಲ್ಲಿರುವ ಖನೌರಿ ಗಡಿಯಲ್ಲಿ ತಡೆದು ನಿಲ್ಲಿಸಲಾಗಿದೆ. ನಿನ್ನೆ, ರೈತರು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದಾಗ, ಹರಿಯಾಣ ಪೊಲೀಸರು ರಬ್ಬರ್ ಬುಲೆಟ್‌ಗಳನ್ನು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಆ ಸಮಯದಲ್ಲಿ ಪಂಜಾಬ್‌ನ 21 ವರ್ಷದ ರೈತ ಶುಭ ಕರಣ್ ಸಿಂಗ್ ಮೃತನಾದನು.

ಈ ಹಿನ್ನೆಲೆಯಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಮೃತ ರೈತ ಶುಭ ಕರಣ್ ಸಿಂಗ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ರಾಜಕೀಯ

ಕೊಲ್ಕತ್ತಾ: 2024ರ ಸಂಸತ್ತಿನ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಡುವೆ ಮಾತುಕತೆಗಳು ತೀವ್ರಗೊಂಡಿವೆ. ಈ ಹಿನ್ನಲೆಯಲ್ಲಿ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಹಲವು ಹಂತಗಳಲ್ಲಿ ಮಾತುಕತೆ ನಡೆಸಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ, ಕಾಂಗ್ರೆಸ್ 8 ರಿಂದ 14 ಸ್ಥಾನಗಳನ್ನು ಕೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಜೊತೆ ಮಾತುಕತೆ ಆರಂಭಿಸಿತು. ಆದರೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ‘ಪಶ್ಚಿಮ ಬಂಗಾಳದಲ್ಲಿ ನಿಮಗೆ ಒಬ್ಬ ಶಾಸಕರೂ ಇಲ್ಲ. ಎರಡು ಲೋಕಸಭಾ ಕ್ಷೇತ್ರಗಳನ್ನು ನೀಡುತ್ತೇನೆ. ಆ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಪಡಿಸಿಕೊಳ್ಳೋಣ’ ಎಂದರು. ಅಂತಿಮವಾಗಿ ಕಾಂಗ್ರೆಸ್‌ಗೆ 6 ಲೋಕಸಭಾ ಕ್ಷೇತ್ರಗಳನ್ನು ನೀಡುವಂತೆ ಒತ್ತಾಯಿಸಿತು.

ಈ ಹಿನ್ನಲೆಯಲ್ಲಿ, ಇತ್ತೀಚೆಗೆ ಮಾಲ್ದಾ ಪ್ರದೇಶದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಕಾಂಗ್ರೆಸ್‌ಗೆ ಒಂದು ಸ್ಥಾನವನ್ನೂ ನೀಡುವುದಿಲ್ಲ’ ಎಂದು ಹೇಳಿದರು. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟದಲ್ಲಿ ತನ್ನ ಭಾಗವಹಿಸುವಿಕೆಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿಯೂ ಚುನಾವಣೆಯ ಫಲಿತಾಂಶವನ್ನು ಆಧರಿಸಿ, ಚುನಾವಣೆಯ ನಂತರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿಯೂ ಅವರು ಹೇಳಿದರು.

ಈ ಹಿನ್ನಲೆಯಲ್ಲಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ನಡುವಿನ ಮಾತುಕತೆ ಪುನರಾರಂಭವಾಗಿದ್ದು, ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಒಮ್ಮತಕ್ಕೆ ಬಂದರೆ, ಸದ್ಯದಲ್ಲೇ ಘೋಷಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್ ಪಕ್ಷವು, ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಬರ್ಹಾಂಪುರ್, ದಕ್ಷಿಣ ಮಾಲ್ದಾ, ಉತ್ತರ ಮಾಲ್ದಾ, ರಾಯ್‌ಗಂಜ್, ಡಾರ್ಜಿಲಿಂಗ್ ಮತ್ತು ಪುರುಲಿಯಾ ಮುಂತಾದ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸುತ್ತಿದೆ. ಈ ಪೈಕಿ 5 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ನಂಬುವುದಾಗಿ ಆ ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾತುಕತೆ ನಡೆಸಿತ್ತು. ಅದರಂತೆ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮತ್ತು ದೆಹಲಿಯ 7 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ ಎಂಬುದು ಗಮನಾರ್ಹ.

ಶಿಕ್ಷಣ

ಮಂಗಳೂರು: (ಅಡ್ಡೂರು) ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಸಬಲೀಕರಣದ ಉದ್ದೇಶವನ್ನಿಟ್ಟುಕೊಂಡು, ಅದಕ್ಕಾಗಿ ವಿವಿಧ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ‘ಅಡ್ಡೂರು ಸೆಂಟ್ರಲ್ ಕಮಿಟಿ’ಯು ಇದೀಗ ಅಡ್ಡೂರು ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿಯನ್ನು ಪ್ರಾರಂಭಿಸಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಅಬೂ ಅಲ್ಫಾಝ್ ಅಡ್ಡೂರು ಹೇಳಿದ್ದಾರೆ.

ಕಮ್ಯುನಿಟಿ ಸೆಂಟರ್‌ನಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು, ಪರೀಕ್ಷೆಯ ಸಂದರ್ಭದಲ್ಲಿ ಉತ್ತಮ ಅಂಕಗಳಿಸಬೇಕೆಂಬ ಉದ್ದೇಶದಿಂದ 9ನೇ ತರಗತಿ, 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಜೆ 5 ರಿಂದ 8 ಗಂಟೆಯವರೆಗೆ ನುರಿತ ಶಿಕ್ಷಕರಿಂದ ಟ್ಯೂಷನ್ ತರಬೇತಿಯನ್ನು ನೀಡಲಾಗುತ್ತಿದೆ. ಅಡ್ಡೂರು ಆಸುಪಾಸಿನ ಸುಮಾರು ಶೇ.60ರಷ್ಟು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಇದು ಅಡ್ಡೂರು ಸೆಂಟ್ರಲ್ ಕಮಿಟಿಯ ಕನಸಿನ ಯೋಜನೆಯಾಗಿದೆ.

ಇದಲ್ಲದೇ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ (Incentive Money), ವಿದ್ಯಾರ್ಥಿವೇತನ (Scholarship), ವೃತ್ತಿ ಮಾರ್ಗದರ್ಶನ (Career Guidance), ಸಂಪನ್ಮೂಲ ವ್ಯಕ್ತಿಗಳಿಂದ ಸಮಾಲೋಚನೆ (Counseling by resource persons), ಮಾರ್ಗದರ್ಶನ (Guidance) ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

ಅಕ್ಷರದ ಅರಿವಿನ ಜ್ಞಾನವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಒಂದು ಉತ್ತಮವಾದ ಕಾರ್ಯಕ್ಕೆಅಡ್ಡೂರು ಸೆಂಟ್ರಲ್ ಕಮಿಟಿ ಮುಂದಾಗಿರುವುದು ಶ್ಲಾಘನೀಯ. ಮುಂದೆ ಇನ್ನಷ್ಟು ಶೈಕ್ಷಣಿಕ ಕ್ರಾಂತಿಯು ತಮ್ಮಿಂದ ಅಡ್ಡೂರು ಗ್ರಾಮದಲ್ಲಿ ನಡೆಯಲಿ ಎಂದು ಆಶಿಸುತ್ತೇನೆ ಎಂದು ಅಬೂ ಅಲ್ಫಾಝ್ ಅಡ್ಡೂರು ಹೇಳಿದ್ದಾರೆ.  

ರಾಜಕೀಯ

ಎರಡೂ ಪಕ್ಷಗಳು ಪರಸ್ಪರ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ವಿಚಾರ ಜನರಲ್ಲಿ ಭಾರೀ ಆಘಾತವನ್ನುಂಟು ಮಾಡಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ.

ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಪಕ್ಷಗಳು ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ‘ತೆಲುಗು ದೇಶಂ ಪಕ್ಷ (ಟಿಡಿಪಿ) ಕಾಂಡೋಮ್ ಪ್ಯಾಕೆಟ್‌ಗಳ ಮೇಲೆ ತಮ್ಮ ಪಕ್ಷದ ಲೋಗೋ ಮುದ್ರಿಸಿ ಹಂಚುತ್ತಿದೆ’ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಈ ಸಂಬಂಧ ವೀಡಿಯೊವೊಂದನ್ನು ಬಿಡುಗಡೆ ಮಾಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷ, ತಮ್ಮ ‘ಎಕ್ಸ್’ ಸೈಟ್‌ನಲ್ಲಿ ‘ತಮ್ಮ ಪಕ್ಷದ ಪ್ರಚಾರಕ್ಕಾಗಿ ಗರ್ಭನಿರೋಧಕಗಳನ್ನು ವಿತರಿಸುತ್ತಿದೆ. ಇದು ಯಾವ ರೀತಿಯ ಜಾಹೀರಾತು ಹುಚ್ಚು? ಮುಂದೆ ಅವರು ವಯಾಗ್ರ ನೀಡಲು ಪ್ರಾರಂಭಿಸುತ್ತಾರೆಯೇ? ಕನಿಷ್ಠ ಅಲ್ಲಿಗೆ ನಿಲ್ಲಿಸಿ; ಇಲ್ಲದಿದ್ದರೆ, ನಿಮ್ಮ ಅವನತಿ ಇನ್ನಷ್ಟು ಹದಗೆಡುತ್ತದೆ’ ಎಂದು ಹೇಳಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ ತೆಲುಗು ದೇಶಂ ಪಕ್ಷವು ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್’ ಸೈಟ್‌ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿ, ‘ನಾವು ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ, ನಾವೂ ಸಿದ್ಧ… ಎಂದು ಏಕೆ ಕೂಗುತ್ತಿದ್ದೀರಿ? ಇಂತಹ ಅಸಹ್ಯ ಅಪಪ್ರಚಾರ ನಿಲ್ಲಿಸಿ’ ಎಂದು ಸೂಚಿಸಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಲೋಗೋವನ್ನು ಮುದ್ರಿಸಿರುವ ಗರ್ಭನಿರೋಧಕ ಪ್ಯಾಕೆಟ್‌ಗಳ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಎರಡೂ ಪಕ್ಷಗಳು ಪರಸ್ಪರ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ವಿಚಾರ ಜನರಲ್ಲಿ ಭಾರೀ ಆಘಾತವನ್ನುಂಟು ಮಾಡಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿದೆ.

ಸಿನಿಮಾ

ಅರುಣ್ ಕುಮಾರ್ ಜಿ

‘ಫೋಟೋ’ ಕನ್ನಡ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್, ಲೂಸಿಯಾ ಪವನ್. ಮಾರ್ಚ್ 15ಕ್ಕೆ ‘ಫೋಟೋ’ ರಿಲೀಸ್.

ಬೆಂಗಳೂರು: ಕನ್ನಡದಲ್ಲೀಗ ಕಂಟೆಂಟ್ ಆಧಾರಿತ ಸಿನಿಮಾಗಳ ಪ್ರಭೆ ಜೋರಾಗಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ ‘ಫೋಟೋ.’ ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಲೈಕ್ ಪಡೆದ ಈ ಸಿನಿಮಾದ ಮೊದಲ ನೋಟ ಅನಾವರಣಗೊಂಡಿದೆ. ನಟರಾಕ್ಷಸ ಡಾಲಿ ಧನಂಜಯ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ.

ಶ್ರೀರಂಗಪಟ್ಟದಲ್ಲಿರುವ ಪ್ರಕಾಶ್ ರಾಜ್ ಒಡೆತನದ ‘ನಿರ್ದಿಗಂತ ಫಾರಂ ಹೌಸ್’ ನಲ್ಲಿ ಫೋಟೋ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಹರಗಾರರು ಹಾಗೂ ಪತ್ರಕರ್ತರಾಗಿರುವ ಜೋಗಿ, ‘ಫೋಟೋ’ ಚಿತ್ರ ಪ್ರೆಸೆಂಟ್ ಮಾಡಿರುವ ಪ್ರಕಾಶ್ ರಾಜ್, ನಿರ್ದೇಶಕ ಉತ್ಸವ್ ಗೋನವಾರ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ಡಾಲಿ ಧನಂಜಯ್, “ಉತ್ಸವ್ ಅವರು ತುಂಬಾ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ತುಂಬಾ ಖುಷಿ ವಿಚಾರ ಏನೆಂದರೆ, ಇತ್ತೀಚೆಗೆ ಬರುತ್ತಿರುವ ಯುವ ನಿರ್ದೇಶಕರು, ಒಳ್ಳೊಳ್ಳೆ ಸಿನಿಮಾಗಳನ್ನು; ಬೇರೆ ಬೇರೆ ರೀತಿಯ ಸಿನಿಮಾಗಳನ್ನು ನಮ್ಮ ಕನ್ನಡದ ಜನಗಳ ಮುಂದೆ ತರುತ್ತಿದ್ದಾರೆ. ಅದು ತುಂಬಾ ಖುಷಿ ವಿಚಾರವಾಗಿದೆ. ಆ ರೀತಿಯ ಸಿನಿಮಾಗಳಿಗೆ ಒಬ್ಬೊಬ್ಬರು ಜೊತೆಯಾಗುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ರಾಜ್ ಸರ್ ಜೊತೆಯಾಗಿದ್ದಾರೆ.

ನಾನು ಮೈಸೂರಿಗೆ ಬಂದಾಗ, ಇಲ್ಲಿಗೆ ಎರಡು ಮೂರು ಬಾರಿ ಬಂದಿದ್ದೇನೆ. ಒಂದು ಗುರಿ ಇಟ್ಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹೇಗೆ ಟೈಮ್ ಸಿಗುತ್ತದೆಯೋ ಗೊತ್ತಿಲ್ಲ. ತೋಟಗಾರಿಕೆ, ರಂಗಭೂಮಿ ಎಲ್ಲವನ್ನೂ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ. 22-23 ವರ್ಷಕ್ಕೆ ಈ ರೀತಿ ಕಥೆ ಹೇಳಬೇಕು ಅಂತಾ ಪ್ರೆಸೆಂಟ್ ಮಾಡಿರುವುದು ಖುಷಿ ತಂದಿದೆ” ಎಂದರು.

ಲೂಸಿಯಾ ಪವನ್ ಮಾತನಾಡಿ, “ಫೋಟೋ ಸಿನಿಮಾದ ಪೋಸ್ಟರ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಪೋಸ್ಟ್ ಮಾಡುತ್ತಿದ್ದಾರೆ. ತುಂಬಾ ಚೆನ್ನಾಗಿದೆ ಅಂತಾ ಫೀಡ್ ಬ್ಯಾಕ್ ಬರುತ್ತಿದೆ. ನಾನು ಸಿನಿಮಾ ನೋಡಿದ್ದೇನೆ. ತುಂಬಾ ಪ್ರಭಾವ ಬೀರಿತು. ಲಾಕ್ ಡೌನ್ ಕಷ್ಟಗಳನ್ನು ಸಿನಿಮ್ಯಾಟಿಕ್ ಆಗಿ ನೋಡುವುದು ಬಹಳ ಇಂಪ್ಯಾಕ್ಟ್ ಆಗುತ್ತದೆ. ಮೇಕಿಂಗ್ ನೋಡಿದಾಗ ಬಹಳಷ್ಟು ಸ್ಪೂರ್ತಿಯಾಯ್ತು. ಇಡೀ ತಂಡಕ್ಕೆ ಒಳ್ಳೆಯದು ಆಗಲಿ” ಎಂದರು.

ಪ್ರಕಾಶ್ ರಾಜ್ ಮಾತನಾಡಿ, “ನಮ್ಮ ದೇಹಕ್ಕೆ ಆದ ಗಾಯಗಳು ಇದೆಯಲ್ಲ, ಅದು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ಸಮಾಜಕ್ಕೆ ಆಗಿರುವ ಗಾಯ ಇದೆಯಲ್ಲ, ನಾವು ಸುಮ್ಮನಿದ್ದಷ್ಟು ಜಾಸ್ತಿಯಾಗುತ್ತದೆ. ನನಗೆ ಉತ್ಸವ್ ಸಿನಿಮಾನಾ ಬಹಳ ದಿನಗಳಿಂದ ತೋರಿಸುವ ಆಸೆ ಇತ್ತು. ಬೇರೆ ಬೇರೆ ಕಾರಣಗಳಿಂದ ಬ್ಯುಸಿ ಇದ್ದೆ. ಸಿನಿಮಾ ನೋಡಿ ಆದ್ಮೇಲೆ 15 ರಿಂದ 20 ನಿಮಿಷ ಮಾತನಾಡಲು ಆಗಲಿಲ್ಲ. ಅಷ್ಟೂ ದುಃಖ ಬಂತು.

ಲಾಕ್ ಡೌನ್ ಸಮಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಇದ್ದೆವು; ಇಡೀ ಪ್ರಪಂಚ ಲಾಕ್ ಡೌನ್ ಆಗಿತ್ತು. ಎಲ್ಲಿ ಹೋಗುವುದೆಂದು ಗೊತ್ತಿಲ್ಲ; ಹೋಗಲು ದಾರಿಯೂ ತಿಳಿದಿಲ್ಲ. ಇದು ನಾವು ಲಾಕ್ ಡೌನ್ ನಲ್ಲಿ ನೋಡಿದ ನೈಜ ಸ್ಥಿತಿ. ಲಾಕ್ ಡೌನ್ ಸಮಯದಲ್ಲಿ ಒಬ್ಬರು ಲಾರಿ, ಬಸ್ ತೆಗೆದುಕೊಂಡು ಹೋಗಿ… ಅವರನ್ನು ಮನೆಗೆ… ಯೋಚನೆ ಮಾಡಿಲ್ಲ. ಈ ನೋವುಗಳನ್ನು ದಾಖಲೆ ಮಾಡ್ಬೇಕು ಅಂತಾ 21 ವರ್ಷದ ಹುಡುಗನಿಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು. ನಾವು ಚಿತ್ರ ಮಾಡಲು ಆಗಲಿಲ್ಲ. ಈ ಚಿತ್ರಕ್ಕೆ ಬೆಂಬಲವಾಗಿ ನಿಲ್ಲೋಣ ಎಂದು ಇದನ್ನು ರಿಲೀಸ್ ಮಾಡಲು ನಿಂತೆವು” ಎಂದರು.

ನಿರ್ದೇಶಕ ಉತ್ಸವ್ ಗೋನವಾರ ಮಾತನಾಡಿ, “ಲಾಕ್ ಡೌನ್ ಗೂ ಮುಂಚೆ ನಾನು ಕೂರ್ಗ್ ಗೆ ಹೋಗಿದ್ದೆ. ಆ ಸಮಯದಲ್ಲೊಂದು ಆರ್ಟಿಕಲ್ ಓದಿದ್ದೆ. ಗಂಗಮ್ಮ ಎಂಬ ಗರ್ಭಿಣಿ ಬೆಂಗಳೂರಿಂದ ಊರಿಗೆ ಹೋಗಬೇಕಾದರೆ ಮಧ್ಯೆದಲ್ಲಿ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿ ಸತ್ತು ಹೋಗ್ತಾರೆ; ಬಳ್ಳಾರಿ ಹತ್ತಿರ. ಈ ಆರ್ಟಿಕಲ್ ತುಂಬಾ ಕಾಡಿತು. ಈ ವಿಷಯ ಡಾಕ್ಯುಮೆಂಟ್ ಆಗಬೇಕು ಎಂದು ಅನಿಸಿತು. ಆಗ ಬರೆಯಲು ಶುರು ಮಾಡಿದೆ. ಆ ನಂತರ ಅದನ್ನು ಸಿನಿಮಾ ಮಾಡಿದೆ” ಎಂದರು.

ಕನ್ನಡದ ಈ ‘ಫೋಟೋ’ ಅನ್ನುವ ಚಿತ್ರವನ್ನ ಸ್ವತಃ ಪ್ರಕಾಶ್ ರಾಜ್ ಪ್ರಸೆಂಟ್ ಮಾಡುತ್ತಿದ್ದಾರೆ. ತಮ್ಮ ‘ನಿರ್ದಿಗಂತ’ ಮೂಲಕ ಈ ಚಿತ್ರಕ್ಕೆ ಬೆಂಬಲವಾಗಿಯೇ ನಿಂತಿದ್ದಾರೆ. ಹೊಸ ಪ್ರತಿಭೆಗೆ ಈ ಮೂಲಕ ಹೆಗಲುಕೊಟ್ಟಿದ್ದಾರೆ. ‘ಫೋಟೋ’ ಮೂಲಕ ಸ್ವತಂತ್ರವಾಗಿ ಡೈರೆಕ್ಟರ್ ಆಗಿರೋ ಉತ್ಸವ್ ಗೋನವಾರ, ಇಲ್ಲಿ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನಡೆದ ಕಥೆಯನ್ನು ಮನಸ್ಸಿಗೆ ತಾಕುವಂತೆ ದೃಶ್ಯ ರೂಪಕ್ಕೆ ಇಳಿಸಿ, ಪ್ರಕಾಶ್ ರಾಜ್ ಅವರಂತಹ ನಟರೂ ಒಪ್ಪಿಕೊಳ್ಳುವಂತೆ ಸಿನಿಮಾ ಮಾಡಿದ್ದಾರೆ.

ಮಸಾರಿ ಟಾಕೀಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ‘ಫೋಟೋ’ ಸಿನಿಮಾದಲ್ಲಿ ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್ ಮತ್ತು ವೀರೇಶ್ ಗೊನ್ವಾರ್ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಅವರು ಕ್ಯಾಮೆರಾ ಹಿಡಿದಿದ್ದು ರವಿ ಹಿರೇಮಠ್ ಹಿನ್ನೆಲೆ ಸಂಗೀತ, ಶಿವರಾಜ್ ಮೆಹೂ ಎಡಿಟಿಂಗ್ ಕೆಲಸ ಚಿತ್ರಕ್ಕಿದೆ. ಮಾರ್ಚ್ 15ಕ್ಕೆ ಎಲ್ಲರಿಂದ ಲೈಕ್ ಪಡೆಯೋದಕ್ಕೆ ‘ಫೋಟೋ’ ತೆರೆಗೆ ಬರ್ತಿದೆ.

ಕ್ರೀಡೆ ಸಿನಿಮಾ

ಚೆನ್ನೈ: ಈ ವರ್ಷದ ಐಪಿಎಲ್ ಕ್ರಿಕೆಟ್ ಸರಣಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಾ.22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ-ಬೆಂಗಳೂರು ತಂಡಗಳು ಸೆಣಸಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಸೀಸನ್ ಮತ್ತು 18ನೇ ಲೋಕಸಭೆ ಚುನಾವಣೆಗಳು (ಏಪ್ರಿಲ್ – ಮೇ) ಏಕಕಾಲದಲ್ಲಿ ನಡೆಯಲಿದೆ. ಇದರಿಂದ ವಿದೇಶದಲ್ಲಿ ಐಪಿಎಲ್ ಸರಣಿ ನಡೆಯಬಹುದು ಎನ್ನಲಾಗಿತ್ತು. 2009ರಲ್ಲಿ ಲೋಕಸಭೆ ಚುನಾವಣೆಯ ಕಾರಣ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. 2014ರ ಚುನಾವಣೆಯ ಕಾರಣ, ಅರ್ಧದಷ್ಟು ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಯಿತು. ಕರೋನಾ ಅವಧಿಯಲ್ಲಿ (2020, 2021) ಪಂದ್ಯಗಳು ಕೂಡ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೇ ನಡೆದವು.

2019 ರಲ್ಲಿ, ಲೋಕಸಭೆ ಚುನಾವಣೆಯೊಂದಿಗೆ ಐಪಿಎಲ್ ಸರಣಿಯೂ ಭಾರತದಲ್ಲಿಯೇ ನಡೆಯಿತು. ಅದೇ ರೀತಿ ಈ ಬಾರಿಯೂ ಭಾರತದಲ್ಲೇ ಪಂದ್ಯಗಳು ನಡೆಯಲಿವೆ. ಬೆಂಗಳೂರು, ಚೆನ್ನೈ, ಗುಜರಾತ್, ಮುಂಬೈ ಸೇರಿದಂತೆ 10 ತಂಡಗಳು ಭಾಗವಹಿಸಲಿವೆ. ಬಿಸಿಸಿಐ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಆರಂಭಿಕ ಪಂದ್ಯದಲ್ಲಿ ಚೆನ್ನೈ-ಬೆಂಗಳೂರು ತಂಡಗಳು ಸೆಣಸಲಿವೆ.

ಮಾರ್ಚ್ 22 ರಂದು ಚೆನ್ನೈನ ಚೆಪಾಕ್ಕಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಉಳಿದ ಸ್ಪರ್ಧೆಗಳ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.