ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2024 » Page 3 of 7 » Dynamic Leader
October 23, 2024
Home 2024 February (Page 3)
ದೇಶ

ರೈತರ ಬೇಡಿಕೆಗಳನ್ನು ಪ್ರತಿಪಾದಿಸುವ ರೈತ ಸಂಘಟನೆಗಳ ಸಾಮಾಜಿಕ ಜಾಲತಾಣಗಳನ್ನು ಮತ್ತು ‘ಎಕ್ಸ್’ ಖಾತೆಗಳನ್ನು ನಿರ್ಬಂಧಿಸಲು ಬಿಜೆಪಿ ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ ಎಂದು ಎಲಾನ್ ಮಸ್ಕ್ ಅವರ ‘ಎಕ್ಸ್’ ಕಂಪನಿ ಆರೋಪಿಸಿದೆ.

ಕೇಂದ್ರ ಸರಕಾರದ ಕೃಷಿ ವಿರೋಧಿ ನೀತಿಯ ಬಗ್ಗೆ ಜಗತ್ತಿನ ಜನತೆಗೆ ಅರಿವು ಮೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಎಕ್ಸ್-ಜಾಲತಾಣ (twitter) ವಹಿಸುತ್ತಿದೆ.

ಅದರ ಆಧಾರದ ಮೇಲೆ, ರೈತ ಸಂಘಟನೆಗಳ ಪ್ರತಿನಿಧಿಗಳು, ಕೃಷಿ ತಜ್ಞರು ಮತ್ತು ಸಾರ್ವಜನಿಕರು ರೈತರ ಹೋರಾಟಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ರೈತರ ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡ ಪ್ರಮುಖ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಿದೆ.

ಈ ಬಗ್ಗೆ ‘ಎಕ್ಸ್’ ಗ್ರೂಪ್‌ನ ಅಧಿಕೃತ ಖಾತೆ ಗ್ಲೋಬಲ್ ಗವರ್ನಮೆಂಟ್ ಅಫೇರ್ಸ್ (Global Government Affairs) ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ, “ಒಂದು ನಿರ್ದಿಷ್ಟ ಘಟನೆಯ (ರೈತರ ಪ್ರತಿಭಟನೆ) ಕುರಿತು ಪೋಸ್ಟ್ ಮಾಡುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸಲು ಭಾರತ ಸರ್ಕಾರವು ಕಾನೂನಾತ್ಮಕವಾಗಿ ವಿನಂತಿಸಿಕೊಂಡಿದೆ.

ಅವರ ಬೇಡಿಕೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುವುದರಿಂದ, ಅದರಲ್ಲಿ ನಮಗೆ ಒಪ್ಪಿಗೆಯಿಲ್ಲ. ಆದಾಗ್ಯೂ, ಅವರು ನಮ್ಮನ್ನು ಕಾನೂನಾತ್ಮಕವಾಗಿ ಸಂಪರ್ಕಿಸಿರುವುದರಿಂದ ನಾವು ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಅಲ್ಲದೆ, ಈ ಜಾಲತಾಣ ಖಾತೆಗಳ ನಿರ್ಬಂಧವನ್ನು ಭಾರತದಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಇತರ ದೇಶಗಳಲ್ಲಿ ಈ ಖಾತೆಗಳ ಮೇಲೆ ಯಾವುದೇ ನಿಷೇಧವಿಲ್ಲ” ಎಂದು ಹೇಳಿದೆ.

ಈ ಮೂಲಕ ಕೇಂದ್ರ ಸರ್ಕಾರದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ರಾಜಕಾರಣ ಭಾರತವನ್ನು ದಾಟಿ ಇಡೀ ಜಗತ್ತಿಗೆ ಬಹಿರಂಗವಾಗಿದೆ. ಇದುವರೆಗೆ ಜಗತ್ತಿನಾದ್ಯಂತ ಸುಮಾರು 30 ಲಕ್ಷ ಮಂದಿ ಈ ಪೋಸ್ಟ್ ನ್ನು ವೀಕ್ಷಿಸಿದ್ದಾರೆ. ‘ಮೋದಿಯವರ ಆಡಳಿತ ನೋಡಿ ಜಗತ್ತೇ ಬೆರಗಾಗುತ್ತಿದೆ’ ಎಂದು ಎರಡು ದಿನಗಳ ಹಿಂದೆ ಅಮಿತ್ ಶಾ ಹೇಳಿದ್ದನ್ನು ಸ್ಮರಿಸಬೇಕಿದೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ರಷ್ಯಾದಲ್ಲಿ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಏಜೆಂಟ್‌ಗಳ ಮೂಲಕ ಕರೆದೊಯ್ಯದ ಭಾರತೀಯರನ್ನು ಯುದ್ಧಭೂಮಿಗೆ ವರ್ಗಾಯಿಸಲಾಗುತ್ತಿದೆ ಎಂದು ಓವೈಸಿ ಆರೋಪಿಸಿದ್ದಾರೆ.

ಅಮೆರಿಕ ಸದಸ್ಯರಾಗಿರುವ ನ್ಯಾಟೋಗೆ ಸೇರುವ ಉಕ್ರೇನ್ ಪ್ರಸ್ತಾಪವನ್ನು ವಿರೋಧಿಸಿದ ರಷ್ಯಾ, ಅಧ್ಯಕ್ಷ ಪುಟಿನ್ ಅವರ ಆದೇಶದ ಮೇರೆಗೆ ಫೆಬ್ರವರಿ 24, 2022 ರಂದು ಉಕ್ರೇನ್ ಮೇಲಿನ ಯುದ್ಧ ಪ್ರಾರಂಭವಾಯಿತು. ಯುದ್ಧ ಪ್ರಾರಂಭವಾಗಿ ನಾಳೆಗೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಆದರೂ ರಷ್ಯಾದ ದಾಳಿ, ಉಕ್ರೇನ್‌ನ ಪ್ರತಿರೋಧ ನಿರಂತರವಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ ಕನಿಷ್ಠ 3 ಲಕ್ಷದ 15 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆಯ ವರದಿಗಳು ಹೇಳುತ್ತವೆ.

ಆದಾಗ್ಯೂ, ಉಕ್ರೇನ್ ಸಂಪೂರ್ಣವಾಗಿ ರಷ್ಯಾಕ್ಕೆ ಶರಣಾದರೆ ಮಾತ್ರ ಪುಟಿನ್ ಯುದ್ಧವನ್ನು ನಿಲ್ಲಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಹಿನ್ನಲೆಯಲ್ಲಿ, ಉದ್ಯೋಗಕ್ಕಾಗಿ ಏಜೆಂಟ್‌ಗಳಿಂದ ರಷ್ಯಾಕ್ಕೆ ಕರೆದೊಯ್ಯಲ್ಪಟ್ಟ ಭಾರತೀಯರನ್ನು ಸೈನ್ಯಕ್ಕೆ ಸ್ವಯಂ ಸೇವಕರು ಎಂಬ ಹೆಸರಿನಲ್ಲಿ, ಆಯುಧಗಳನ್ನು ನಿರ್ವಹಿಸು ತರಬೇತಿ ನೀಡಿ, ಮಾರಿಯುಪೋಲ್, ಖಾರ್ಕಿವ್ ಮತ್ತು ಡೊನೆಟ್ಸ್ಕ್‌ನಲ್ಲಿ ಬಲವಂತಪಡಿಸಿ ಯುದ್ಧಭೂಮಿಗೆ ದೂಡಲಾಗುತ್ತಿದೆ ಎಂಬ ವರದಿಗಳಿವೆ.

ವ್ಲಾಡಿಮಿರ್‌ ಪುಟಿನ್‌

ಇದರಲ್ಲಿ, ವಿದೇಶದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬ ವೀಡಿಯೋಗಳನ್ನು, ‘ಬಾಬಾ ವ್ಲಾಗ್ಸ್’ (Baba Vlogs) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡುತ್ತಿರುವ ಫೈಸಲ್ ಖಾನ್ ಎಂಬಾತನೇ ಭಾರತೀಯರನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ, ಎಐಎಂಐಎಂ (AIMIM) ನಾಯಕ ಮತ್ತು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ, ಕೆಲಸದ ಹೆಸರಿನಲ್ಲಿ ರಷ್ಯಾಕ್ಕೆ ಕರೆದೊಯ್ಯಲಾದ ಭಾರತೀಯರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ಕಡ್ಡಾಯಗೊಳಿಸಲಾಗುತ್ತಿದ್ದು, ಕೂಡಲೇ ಅವರನ್ನು ರಕ್ಷಿಸಿ ಅಲ್ಲಿಂದ ಕರೆತರಲು ನೆರವಾಗುವಂತೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, “ತೆಲಂಗಾಣ, ಗುಜರಾತ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶದಿಂದ ನಿರುದ್ಯೋಗಿ ಪುರುಷರನ್ನು ರಷ್ಯಾದಲ್ಲಿ ಕಟ್ಟಡ ಭದ್ರತಾ ಸಿಬ್ಬಂದಿಯ ಕೆಲಸ ಕೊಡಿಸುವುದಾಗಿ ನಂಬಿಸಿ, ಏಜೆಂಟ್‌ಗಳ ಮೂಲಕ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಅವರನ್ನು ವಂಚಿಸಿ ಯುದ್ಧಭೂಮಿಗೆ ಕಳುಹಿಸಲಾಗಿದೆ.

ಅಸಾದುದ್ದೀನ್ ಓವೈಸಿ

ಅಲ್ಲಿ ಸಿಕ್ಕಿಬಿದ್ದವರಿಗೆ ಸಂಬಂಧಿಸಿದಂತೆ, ನನ್ನ ಬಳಿ ಸಹಾಯ ಕೇಳಿ ಬಂದ ಕುಟುಂಬಗಳನ್ನು ನಾನು ಕಳೆದ ಡಿಸೆಂಬರ್‌ನಲ್ಲಿ ಭೇಟಿಯಾದೆ. ಇದಾದ ಬಳಿಕ ಅಲ್ಲಿನ ಜನರನ್ನು ವಾಪಸ್ ಕರೆತರುವಂತೆ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಅವರಿಗೆ ಪತ್ರ ಬರೆದಿದ್ದೇನೆ.

ದುಬೈನಲ್ಲಿರುವ ಫೈಸಲ್ ಖಾನ್, ಮುಂಬೈ ಮೂಲದ ಸುಫಿಯಾನ್ ಮತ್ತು ಭೋಜಾ ಎಂಬುವವರೊಂದಿಗೆ ಸೇರಿ ವಂಚಿಸಿದ್ದಾರೆ. ಅಲ್ಲಿ ಸಿಕ್ಕಿಬಿದ್ದು ಬಲವಂತವಾಗಿ ಯುದ್ಧಭೂಮಿಗೆ ದೂಡಲ್ಪಟ್ಟ ಒಬ್ಬ ಭಾರತೀಯನು ಸಾವನ್ನಪ್ಪಿದ್ದಾನೆ” ಎಂದು ಹೇಳಿದರು.

ಅಲ್ಲದೆ, ಜೈಶಂಕರ್‌ಗೆ ಓವೈಸಿ ಬರೆದಿರುವ ಪತ್ರದಲ್ಲಿ, “ಮೊಹಮ್ಮದ್ ಅಸ್ಫಾನ್, ಅರ್ಬಾಬ್ ಹುಸೇನ್ ಮತ್ತು ಜಹೂರ್ ಅಹ್ಮದ್ ಹೈದರಾಬಾದ್‌ಗೆ ಮರಳಲು ಸಹಾಯವನ್ನು ಎದುರು ನೋಡುತ್ತಿದ್ದಾರೆ. ಆದರೆ ಅವರನ್ನು ಭಾರತೀಯ ಏಜೆಂಟರು ದಾರಿ ತಪ್ಪಿಸಿ ಬಲವಂತವಾಗಿ ರಷ್ಯಾದ ಸೇನೆಗೆ ಸೇರಿಸಿದ್ದಾರೆ ಎಂಬ ಅಂಶವೂ ಬಹಿರಂಗವಾಗಿದೆ.

ವೊಲೊಡಿಮಿರ್ ಝೆಲೆನ್ಸ್ಕಿ

25 ದಿನಗಳಿಂದ ಅವರು ತಮ್ಮ ಕುಟುಂಬದವರನ್ನು ಸಂಪರ್ಕಿಸಿಲ್ಲ. ಅವರ ಕುಟುಂಬಗಳು ತುಂಬಾ ಚಿಂತಿತರಾಗಿದ್ದಾರೆ. ಅಲ್ಲದೆ, ಅವರ ಕುಟುಂಬದಲ್ಲಿ ಅವರೊಬ್ಬರೇ ಸಂಪಾದನೆ ಮಾಡುವವರಾಗಿದ್ದರು” ಎಂದು ನಮೂದಿಸಿದ್ದಾರೆ.

ಇದಕ್ಕೂ ಮೊದಲು, ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ವೀಡಿಯೊದಲ್ಲಿ, ಯುರೋಪಿಯನ್ ದೇಶಗಳ ಕೆಲಸದ ಪರವಾನಿಗೆ (Work Permit) ತನಗೆ ಸಿಕ್ಕಿರುವುದಾಗಿ ಹೇಳಿದ್ದ ಫೈಸಲ್ ಖಾನ್, ರಷ್ಯಾದ ಸೈನ್ಯದೊಂದಿಗೆ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದರು. ಮತ್ತೊಂದು ವೀಡಿಯೊದಲ್ಲಿ, ಏಳು ಜನರು ರಷ್ಯಾದಲ್ಲಿ ಕೆಲಸ ಮಾಡಲು ಅನುಮತಿ ಪಡೆದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದರು ಎಂಬುದು ಗಮನಾರ್ಹ.   

ಉದ್ಯೋಗ

ಬೆಂಗಳೂರು: ಕರ್ನಾಟಕ ಸರ್ಕಾರವು ನಮ್ಮ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 26 ಮತ್ತು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಯುವ ಸಮೃದ್ಧಿ’ ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಿದ್ದು ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಈ ಉದ್ಯೋಗ ಮೇಲಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ‘ಯುವ ಸಮೃದ್ಧಿ’ ಮೆಗಾ ಉದ್ಯೋಗ ಮೇಳದ ಕುರಿತು ವಿವರ ಹಂಚಿಕೊಂಡರು.

ಈ ಉದ್ಯೋಗ ಮೇಳದಲ್ಲಿ ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದ ಸುಮಾರು 500ಕ್ಕೂ ಅಧಿಕ ಕಂಪನಿಗಳು ಭಾಗವಹಿಸುತ್ತಿದ್ದು ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳು ಲಭ್ಯವಿದೆ ಎಂದು ಹೇಳಿದರು.

ಈಗಾಗಲೇ ಆನ್ಲೈನ್ ಮೂಲಕ ರಾಜ್ಯದ 31 ಸಾವಿರಕ್ಕೂ ಅಧಿಕ ಯುವಕರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಅವರ ಅನುಕೂಲಕ್ಕಾಗಿ 600ಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಲಾಗಿದ್ದು ವಿವಿಧ ಭಾಗಗಳಿಂದ ಆಗಮಿಸುವ ಯುವಕರಿಗಾಗಿ ಉಚಿತ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮೊ, ಐಟಿಐ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವಿದ್ಯಾರ್ಹತೆ ಹೊಂದಿದವರಿಗೂ ಇಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು ನಾಡಿನ ಯುವಜನತೆ ಈ ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ದೇಶ

ಬೆಂಗಳೂರು: ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

“ದೇಶದ ಅತ್ಯಂತ ಶ್ರೇಷ್ಠ ನದಿ ನೀರಿನ ವಿವಾದ ತಜ್ಞರಾಗಿದ್ದ ನಾರಿಮನ್ ಅವರು ದಶಕಗಳ ಕಾಲ ಕರ್ನಾಟಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು. ಕೃಷ್ಞಾ, ಕಾವೇರಿ ನದಿಗಳ ಜಲಹಂಚಿಕೆ ವಿವಾದಗಳಲ್ಲಿ ಕರ್ನಾಟಕದ ರೈತರಿಗೆ ನ್ಯಾಯ ಸಿಕ್ಕಿದ್ದರೆ ಅದರಲ್ಲಿ ನಾರಿಮನ್ ಅವರ ದೊಡ್ಡ ಕೊಡುಗೆ ಇದೆ.

ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಗೌರವಾದರಗಳಿಗೆ ಪಾತ್ರರಾಗಿದ್ದ ನಾರಿಮನ್ ಅವರಂತಹವರು ನ್ಯಾಯವಾದಿಯಾಗಿ ಸಿಕ್ಕಿದ್ದು ಕರ್ನಾಟಕದ ಪಾಲಿನ ಭಾಗ್ಯವಾಗಿತ್ತು. ವಕೀಲಿ ವೃತ್ತಿಯಿಂದ ಬಂದ ನನಗೆ ಅವರ ಬಗ್ಗೆ ವಿಶೇಷವಾದ ಅಭಿಮಾನ ಇತ್ತು.

ದೇಶದ ಖ್ಯಾತ ಮತ್ತು ಪ್ರತಿಭಾವಂತ ವಕೀಲರಾಗಿದ್ದ ನಾರಿಮನ್ ಅವರ ಜೊತೆಗೆ ನನ್ನದು ದೀರ್ಘಕಾಲದ ಒಡನಾಟ. ನೀರಾವರಿಗೆ ಸಂಬಂಧಿಸಿದ ಎಂತಹ ಜಟಿಲ ಸಮಸ್ಯೆಗಳು ಎದುರಾದರೂ ಉದ್ವೇಗಗೊಳ್ಳದೆ ಪರಿಹಾರದ ಕ್ರಮಗಳನ್ನು ಸೂಚಿಸುತ್ತಿದ್ದ ಅವರ ಕಸುಬುಗಾರಿಕೆ ಅನನ್ಯವಾದುದು.

ಆಂತರಿಕವಾದ ಸಭೆಯಲ್ಲಿ ಅವರು ನೀಡುತ್ತಿದ್ದ ಸಲಹೆಗಳು ಮತ್ತು ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದ ವಾದಗಳಿಂದ ನೀರಾವರಿ ವಿಷಯದಲ್ಲಿ ನನ್ನ ಜ್ಞಾನವೃದ್ಧಿಯಾಗಿದೆ ಎನ್ನುವುದನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತೇನೆ.

ನಾರಿಮನ್ ಅವರ ಅಗಲಿಕೆಯ ದು:ಖದಲ್ಲಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು.‌ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಹೋಗಿ ಬನ್ನಿ ನಾರಿಮನ್ ಸಾಬ್, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರಾಗಿರುತ್ತದೆ” ಎಂದು ಹೇಳಿದ್ದಾರೆ.

ದೇಶ

ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಹೋದಾಗ ನ್ಯಾಯಾಧೀಶರೇ ಲೈಂಗಿಕ ಕಿರುಕುಳ ನೀಡಿದ ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ.!

ತ್ರಿಪುರಾ ರಾಜ್ಯದಲ್ಲಿ ನೆಲೆಸಿರುವ 26 ವರ್ಷದ ಯುವತಿಯೊಬ್ಬಳು ಮದುವೆಯಾಗಿ ತನ್ನ ಪತಿಯೊಂದಿಗೆ ವಾಸವಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಿಗೂಢ ವ್ಯಕ್ತಿಯೊಬ್ಬ ಆಕೆಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದನು. ಈ ಘಟನೆ ತೀವ್ರ ಆಘಾತವನ್ನುಂಟು ಮಾಡಿದ್ದರಿಂದ ಸಂತ್ರಸ್ತೆ ತನ್ನ ಪತಿಯ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ, ಫೆಬ್ರವರಿ 13 ರಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಆ ಮಹಿಳೆ, ನ್ಯಾಯಾಧೀಶ ಬಿಶ್ವತೋಷ್ ಧರ್ (Bishwatosh Dhar) ಮುಂದೆ ಸಾಕ್ಷಿ ಹೇಳಲು ಹೋಗಿದ್ದಾರೆ. ಇದು ಲೈಂಗಿಕ ಪ್ರಕರಣವಾಗಿರುವುದರಿಂದ ನ್ಯಾಯಾಧೀಶರು ಪ್ರತ್ಯೇಕ ಕೊಠಡಿಯಲ್ಲಿ ಹೇಳಿಕೆ ತೆಗೆದುಕೊಳ್ಳುತ್ತಾರೆ. ಆ ಮೂಲಕ ನ್ಯಾಯಾಧೀಶರು ತಮ್ಮ ಖಾಸಗಿ ಕೋಣೆಯಲ್ಲಿ ಮಹಿಳೆಯಿಂದ ಹೇಳಿಕೆಯನ್ನು ಪಡೆಯಲು ಪ್ರಯತ್ನಿಸಿದ್ದಾರೆ.

ಬಳಿಕ ಕೊಠಡಿಯಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ ನ್ಯಾಯಾಧೀಶರು, ವಿಚಾರಣೆಯ ಹೆಸರಿನಲ್ಲಿ ಆಸನದಿಂದ ಎಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ತನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ.

ನಂತರ ಸಂತ್ರಸ್ತೆಯ ಪತಿ ಈ ಘಟನೆಗೆ ಸಂಬಂಧಿಸಿದಂತೆ ವಕೀಲರ ಸಂಘಕ್ಕೆ ಲಿಖಿತ ಪತ್ರ ನೀಡಿದ್ದಾರೆ. ಪ್ರಸ್ತುತ ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬಳು ಹೇಳಿಕೆ ನೀಡಲು ಹೋದಾಗ, ನ್ಯಾಯಾಧೀಶರಿಂದಲೇ ಲೈಂಗಿಕ ಕಿರುಕುಳವನ್ನು ಅನುಭವಿಸಿದ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ.

ಸಿನಿಮಾ

ಆರುಣ್ ಕುಮಾರ್ ಜಿ

ಬೆಂಗಳೂರು: ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ‘ಜಿ ಸಿನಿಮಾಸ್’ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ‘ಪ್ರೊಡಕ್ಷನ್ ನಂ 4’ ಚಿತ್ರದ ಹಾಡುಗಳ ಧ್ವನಿಮುದ್ರಣ (ಸಾಂಗ್ ರೆಕಾರ್ಡಿಂಗ್) ಪೂಜೆ ನಾಗರಭಾವಿಯ ಲೂಪ್ ಸ್ಟುಡಿಯೋಸ್ ನಲ್ಲಿ ನೆರವೇರಿತು. ‘ಜಟ್ಟ’, ‘ಮೈತ್ರಿ’ ಚಿತ್ರಗಳ ಖ್ಯಾತಿಯ ಬಿ.ಎಂ ಗಿರಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಕನ್ನಡದ ಹೆಸರಾಂತ ನಿರ್ದೇಶಕ ಬಿ.ಜೆ.ಭರತ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಹಿಂದೆ ಸಾಂಗ್ ರೆಕಾರ್ಡಿಂಗ್ ಪೂಜೆ ಎಂದರೆ ಒಂದು ಸಡಗರ ಎಂದು ಮಾತು ಆರಂಭಿಸಿದ ನಿರ್ದೇಶಕ ಗಿರಿರಾಜ್, ಈಗ ಕೆಲವು ವರ್ಷಗಳಿಂದ ಆ ಸಂಸ್ಕೃತಿ ಮರೆತು ಹೋಗಿದೆ. ಗುರು ದೇಶಪಾಂಡೆ ಮತ್ತೆ ಸಾಂಗ್ ರೆಕಾರ್ಡಿಂಗ್ ಪೂಜೆ ಮೂಲಕ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಇಂದು ಒಳ್ಳೆಯ ದಿವಸ ಎಂದು ಪೂಜೆ ಆರಂಭಿಸಿದ್ದೇವೆ. ಈ ಸಿನಿಮಾ ಈ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರುತ್ತದೆ. ಮರೆಯಾಗುತ್ತಿರುವ ಸಂಸ್ಕೃತಿಯ ಮತ್ತೆ ತರುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಭರತ್ ಅವರ ಸಂಗೀತ ನಿರ್ದೇಶನದಲ್ಲಿ ಇಂದಿನಿಂದ ಸಾಂಗ್ ರೆಕಾರ್ಡಿಂಗ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು.

ಇದು ‘ಜಿ ಸಿನಿಮಾಸ್’ ಮೂಲಕ ನಿರ್ಮಾಣವಾಗುತ್ತಿರುವ ನಾಲ್ಕನೇಯ ಚಿತ್ರ. ನಮ್ಮ ‘ಜಿ ಅಕಾಡೆಮಿ’ ಮೂಲಕ ಸಾಕಷ್ಟು ಮಕ್ಕಳಿಗೆ ನಟನಾ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಹತ್ತು ಬ್ಯಾಚ್ ಗಳು ಯಶಸ್ವಿಯಾಗಿ ಪೂರ್ಣವಾಗಿದೆ. ಮಕ್ಕಳಿಗೆ ಬರೀ ನಟನೆ ಕಲಿಸಿಕೊಟ್ಟು ಕಳುಹಿಸಿದರೆ ಸಾಲದು. ಅವರಿಗೆ ಸೂಕ್ತ ವೇದಿಕೆ ಕೂಡ ಕಲ್ಪಿಸಿಕೊಡಬೇಕು. ಅದರಲ್ಲೂ ವಿಶೇಷವಾಗಿ ಮಧ್ಯಮವರ್ಗದ ಮಕ್ಕಳಿಗೆ. ಆ ಸಲುವಾಗಿ ನಮ್ಮ ಈ ಚಿತ್ರದಲ್ಲಿ ನಮ್ಮ ‘ಜಿ ಅಕಾಡೆಮಿ’ಯ 15ಕ್ಕೂ ಅಧಿಕ ಮಕ್ಕಳು ನಟಿಸಲಿದ್ದಾರೆ.

ಕನ್ನಡದ ಹೆಸರಾಂತ ನಟರು ಈ ಚಿತ್ರದ ನಾಯಕರಾಗಿ ಅಭಿನಯಿಸಲಿದ್ದಾರೆ. ಈ ಕುರಿತು ಹೆಚ್ಚಿನ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ. ಕನ್ನಡದಲ್ಲಿ ಕಮರ್ಷಿಯಲ್ ಹಾಗೂ ಪ್ರಶಸ್ತಿ ಚಿತ್ರಗಳು ಎಂಬ ಎರಡು ವಿಭಾಗಗಳಿದೆ. ಬೇರೆ ಕಡೆ ಆ ರೀತಿ ಇಲ್ಲ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಜನರು ನೋಡುತ್ತಾರೆ. ಆಗ ಅದು ಎರಡು ವಿಭಾಗಗಳನ್ನೊಳಗೊಂಡ ಒಂದೇ ಚಿತ್ರವಾಗುತ್ತದೆ. ನಮ್ಮ ಚಿತ್ರ ಕೂಡ ಅದೇ ರೀತಿ ಇರಲಿದೆ ಎಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದರು.

ಇಂದಿನಿಂದ ಹಾಡುಗಳ ಧ್ವನಿಮುದ್ರಣ ಆರಂಭವಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದರು ಸಂಗೀತ ನಿರ್ದೇಶಕ ಬಿ.ಜೆ.ಭರತ್. ಗೀತರಚನೆಕಾರ ಪುನೀತ್ ಆರ್ಯ ಹಾಗೂ ವಿತರಕ ವೆಂಕಟ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಿನಿಮಾ

ಅರುಣ್ ಕುಮಾರ್ ಜಿ

ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ

ಬೆಂಗಳೂರು: ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಅವರು ನಿರ್ಮಿಸಿರುವ, ವಿಭಿನ್ನ ಕಥೆಯ ಹಾರಾರ್ ಚಿತ್ರ “ಕಪ್ಪು ಬಿಳುಪಿನ ನಡುವೆ” ಚಿತ್ರ ಇದೇ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗೂ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ವೀಕ್ಷಿಸಿದ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

“ಕಪ್ಪು ಬಿಳುಪಿನ ನಡುವೆ” ಹಾರಾರ್ ಚಿತ್ರವಾಗಿದ್ದು, “ಕಪ್ಪು ಬಿಳುಪನ್ನು” ಕತ್ತಲು, ಬೆಳುಕಿಗೆ ಹೋಲಿಸಬಹುದು. ಪಾಸಿಟಿವ್ ಹಾಗೂ ನೆಗಟಿವ್ ಎನರ್ಜಿ ಅಂತಲೂ ಎನ್ನಬಹುದು. ಯೂಟ್ಯೂಬರ್ ಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ ಎಂದು ವಸಂತ್ ವಿಷ್ಣು ತಿಳಿಸಿದ್ದಾರೆ.

ವಸಂತ್ ವಿಷ್ಣು ಅವರಿಗೆ ನಾಯಕಿಯಾಗಿ ವಿದ್ಯಾಶ್ರೀ ಗೌಡ ನಟಿಸಿದ್ದಾರೆ.  ಬಿರಾದಾರ್, ಶರತ್ ಲೋಹಿತಾಶ್ವ, ಹಾಸ್ಯ ನಟ ಹರೀಶ್, ನವೀನ್ ರಘು, ಮಾಹೀನ್ ಭಾರದ್ವಾಜ್,  ತೇಜಸ್ವಿನಿ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಚಿತ್ರದಲ್ಲಿ ಮೂರು ಹಾಡುಗಳಿದ್ದು ಡಾ. ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ.  ರಿಶಾಲ್ ಸಾಯಿ ಸಂಗೀತ ನೀಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ಸಂತೋಷ್ ವೆಂಕಿ, ಶ್ರೀಧರ್ ಕಶ್ಯಪ್ ಹಾಡುಗಳನ್ನು ಹಾಡಿದ್ದಾರೆ. ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಹಾಗೂ ಅಮಿತ್ ಜಾವಲ್ಕರ್ ಸಂಕಲನ ಈ ಚಿತ್ರಕ್ಕಿದೆ.

ದೇಶ

ನವದೆಹಲಿ: ರೈತರ ಪ್ರತಿಭಟನೆ ಕುರಿತು ಪೋಸ್ಟ್ ಮಾಡಿದ್ದ 177 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಬಂಧಿಸಿದೆ.

ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ, ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವುದು ಸೇರಿದಂತೆ ನಾನಾ ಬೇಡಿಕೆಗಳಿಗೆ ಒತ್ತು ನೀಡಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳ ರೈತರು ದೆಹಲಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತರುವಾಯ ಕೇಂದ್ರ ಸರ್ಕಾರ ಹಾಗೂ ರೈತರೊಂದಿಗೆ ನಡೆಸಿದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ನಾಳೆ (ಫೆಬ್ರವರಿ 21) ದೆಹಲಿ ಕಡೆಗೆ ರ‍್ಯಾಲಿಯನ್ನು ಪ್ರಾರಂಭಿಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ.

ಈ ಹಿನ್ನಲೆಯಲ್ಲಿ, ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 42 ‘ಎಕ್ಸ್’ ಸಾಮಾಜಿಕ ಮಾಧ್ಯಮ ಖಾತೆಗಳಗಳು, 35 ಫೇಸ್‌ಬುಕ್‌ ಖಾತೆಗಳು ಮತ್ತು 14 ಇನ್‌ಸ್ಟಾಗ್ರಾಮ್ ಖಾತೆಗಳು ಸೇರಿದಂತೆ 177 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂದಿಸಲಾಗಿದೆ.

ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಯೂ ಈ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ದೇಶ

ಕೊಲ್ಕತ್ತ: ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಶ್ಚಿಮ ಬಂಗಾಳ ಸರ್ಕಾರ ನೀಡುತ್ತಿರುವ ಕಲ್ಯಾಣ ಯೋಜನೆಗಳನ್ನು ತಡೆಯಲು ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ರೀತಿ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ದೂರುಗಳು ಬಂದಿವೆ. ತಮ್ಮ ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಲಾಭವನ್ನು ಸಾಮಾನ್ಯ ಜನರಿಗೆ ಸಿಗದಂತೆ ತಡೆಯಲು ಬಿಜೆಪಿಯು ರಾಜ್ಯದಲ್ಲಿ ಜನರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇಂದು ರಾಜ್ಯ ಸಚಿವಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಗೆ ಮುನ್ನ ಅನೇಕ ಆಧಾರ್ ಕಾರ್ಡ್‌ಗಳನ್ನು ಏಕೆ ನಿಷ್ಕ್ರಿಯಗೊಳಿಸಲಾಯಿತು? ಬಹುತೇಕ ‘ಮಾಟುವಾ’ ಸಮುದಾಯದ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಕಾರ್ಡ್‌ಗಳನ್ನೂ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ರಾಜ್ಯ

ಬೆಂಗಳೂರು: ಉತ್ತರದ ರಾಜ್ಯಗಳಲ್ಲಿ ಕಟಾವು ಆರಂಭವಾಗುತ್ತಿದ್ದಂತೆ ಬೆಳ್ಳುಳ್ಳಿಯ ಗರಿಷ್ಠ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತದೆ. ಕಳೆದ ವರ್ಷ ಈ ರಾಜ್ಯಗಳಲ್ಲಿ ಬೆಳ್ಳುಳ್ಳಿ ಕೃಷಿಗೆ ಧಕ್ಕೆಯಾಗಿತ್ತು.

ರೈತರು ಮರು ನಾಟಿ ಮಾಡಲು ಪ್ರಾರಂಭಿಸಿದರು. ಬೆಳ್ಳುಳ್ಳಿಯ ದಾಸ್ತಾನು ಕಡಿಮೆಯಾದಂತೆ ಆನ್‌ಲೈನ್ ವ್ಯಾಪಾರಿಗಳಿಂದ ಅಕ್ರಮ ಸಂಗ್ರಹಣೆ ಹೆಚ್ಚಾಯಿತು. ಇದರಿಂದ ಕೊರತೆ ಉಂಟಾಗಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿತು.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಕಿಲೋ ಪ್ರಥಮ ದರ್ಜೆ ಬೆಳ್ಳುಳ್ಳಿ 500 ರೂ. ಎರಡನೇ ದರ್ಜೆಯ ಬೆಳ್ಳುಳ್ಳಿ, 400 ರೂಪಾಯಿ; ಮೂರನೇ ದರ್ಜೆಯ ಬೆಳ್ಳುಳ್ಳಿ 350 ರೂ.ಗೆ ಮಾರಾಟ ಮಾಡಲಾಯಿತು. ಇದರಿಂದ ಗ್ರಾಹಕರು ಬೆಚ್ಚಿಬಿದ್ದರು.

ಈ ಹಿನ್ನಲೆಯಲ್ಲಿ, ಉತ್ತರ ರಾಜ್ಯಗಳಲ್ಲಿ ಬೆಳ್ಳುಳ್ಳಿ ಕಟಾವು ಆರಂಭವಾಗಿರುವುದರಿಂದ ಅವುಗಳ ಬೆಲೆ ಕುಸಿಯಲಾರಂಭಿಸಿದೆ. ಒಂದು ಕೆಜಿ ಬೆಳ್ಳುಳ್ಳಿ ರೂ.200 ರಿಂದ ರೂ.250 ರವರೆಗೆ ಮಾರಾಟವಾಗಲಿದೆ.

ತಾಜಾ ಬೆಳ್ಳುಳ್ಳಿಯನ್ನು ಗಾಳಿಯಲ್ಲಿ ಇಡಬೇಕು. ಇಲ್ಲದಿದ್ದರೆ, ಅವು ಕೊಳೆಯುತ್ತವೆ ಮತ್ತು ವ್ಯರ್ಥವಾಗುತ್ತವೆ. ತಾಜಾ ಬೆಳ್ಳುಳ್ಳಿ ಬಂದಿರುವುದರಿಂದ ಹಳೆ ಬೆಳ್ಳುಳ್ಳಿಯ ಬೆಲೆಯೂ ಕೆಜಿಗೆ 100 ರೂಪಾಯಿ ಇಳಿಕೆಯಾಗಲಿದೆ. ಮುಂದಿನ ತಿಂಗಳು ಬೆಳ್ಳುಳ್ಳಿ ಬೆಲೆ ಮತ್ತಷ್ಟು ಗಣನೀಯವಾಗಿ ಇಳಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.