ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2024 » Page 5 of 7 » Dynamic Leader
October 23, 2024
Home 2024 February (Page 5)
ರಾಜ್ಯ

17ನೇ ಲೋಕಸಭೆಯ ಅಧಿವೇಶನದಲ್ಲಿ 9 ಸಂಸದರು ಒಂದೇ ಒಂದು ಪ್ರಶ್ನೆಯನ್ನೂ ಎತ್ತಲಿಲ್ಲ ಎಂಬ ವರದಿ ಅಚ್ಚರಿ ಮೂಡಿಸಿದೆ.

17ನೇ ಲೋಕಸಭೆಯಲ್ಲಿ ಚಲನಚಿತ್ರ ನಟರು ಹಾಗೂ ರಾಜಕಾರಣಿಗಳೂ ಆಗಿರುವ ಸನ್ನಿ ಡಿಯೋಲ್ ಮತ್ತು ಶತ್ರುಘ್ನ ಸಿನ್ಹಾ ಸೇರಿದಂತೆ 9 ಸಂಸದರು ಒಂದೂ ಮಾತನಾಡಲಿಲ್ಲ ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿರುವ 9 ಸಂಸದರ ಪೈಕಿ 6 ಮಂದಿ ಬಿಜೆಪಿಗೆ ಸೇರಿದವರಾಗಿದ್ದು ಅದರಲ್ಲಿ 4 ಜನ ಕರ್ನಾಟಕದವರು ಎಂಬುದು ಗಮನಾರ್ಹ.

ಮೇ 2019ರಲ್ಲಿ ಲೋಕಸಭೆ ಚುನಾವಣೆಯ ನಂತರ 17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 17, 2019 ರಂದು ಪ್ರಾರಂಭವಾಯಿತು. ಒಟ್ಟು 543 ಸಂಸದರ ಪೈಕಿ ಬಿಜೆಪಿಯ 6 ಸಂಸದರು, ತೃಣಮೂಲ ಕಾಂಗ್ರೆಸ್‌ನ 2 ಮತ್ತು ಬಹುಜನ ಸಮಾಜ ಪಕ್ಷದ ಒಬ್ಬರು ಕಳೆದ 5 ವರ್ಷಗಳಲ್ಲಿ ನಡೆದ ಲೋಕಸಭೆ ಅಧಿವೇಶನಗಳಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದು ಲೋಕಸಭೆಯ ದಾಖಲೆಗಳು ತೋರಿಸುತ್ತವೆ.

9 ಸಂಸದರು ಯಾರು?
ಬಿಜೆಪಿ ಸಂಸದರುಗಳಾದ ರಮೇಶ ಚಂದಪ್ಪ ಜಿಗಜಿಣಗಿ (ಬಿಜಾಪುರ-ಎಸ್‌ಸಿ), ಬಿ.ಎನ್.ಬಚ್ಚೇಗೌಡ (ಚಿಕ್ಕಬಳ್ಳಾಪುರ), ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ), ವಿ.ಶ್ರೀನಿವಾಸ್ ಪ್ರಸಾದ್ (ಸಮರಾಜನಗರ-ಎಸ್‌ಸಿ), ಪ್ರಧಾನ್ ಬರುವಾ (ಲಖಿಂಪುರ, ಅಸ್ಸಾಂ), ಸನ್ನಿ ಡಿಯೋಲ್ (ಗುರುದಾಸ್ಪುರ್, ಪಂಜಾಬ್)

ಬಹುಜನ ಸಮಾಜ ಪಕ್ಷದ ಸಂಸದ ಅತುಲ್ ಕುಮಾರ್ ಸಿಂಗ್ (ಘೋಸಿ, ಉತ್ತರಪ್ರದೇಶ), ಅವರು ಪ್ರಸ್ತುತ ಜೈಲಿನಲ್ಲಿದ್ದಾರೆ.

ಟಿಎಂಸಿಯ ಶತ್ರುಘ್ನ ಸಿನ್ಹಾ (ಅಸನ್ಸೋಲ್, ಪಶ್ಚಿಮ ಬಂಗಾಳ) ಮತ್ತು ಅಧಿಕಾರಿ ದಿಬ್ಯೇಂದು (ತಮ್ಲುಕ್, ಪಶ್ಚಿಮ ಬಂಗಾಳ)

ಸ್ಪೀಕರ್ ಓಂ ಬಿರ್ಲಾ ಅವರು ಸನ್ನಿ ಡಿಯೋಲ್‌ಗೆ ಎರಡು ಬಾರಿ ಕರೆ ಮಾಡಿ, ಯಾವುದೇ ರೂಪದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡುವಂತೆ ಕೇಳಿಕೊಂಡರು. ಆದರೆ, ಸನ್ನಿ ಡಿಯೋಲ್ ಮಾತನಾಡಲಿಲ್ಲ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಆದರೆ ಶೂನ್ಯವೇಳೆ ಚರ್ಚೆಯಲ್ಲಿ ಸನ್ನಿ ಡಿಯೋಲ್ ಸೇರಿದಂತೆ ಒಂಬತ್ತು ಸಂಸದರ ಪೈಕಿ 6 ಮಂದಿ ಲಿಖಿತ ಪ್ರಶ್ನೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ, ಉಳಿದ 3 ಜನ (ಶತ್ರುಘ್ನ ಸಿನ್ಹಾ, ಅತುಲ್ ಕುಮಾರ್ ಸಿಂಗ್ ಮತ್ತು ರಮೇಶ್ ಜಿಗಜಿಣಗಿ) 17ನೇ ಲೋಕಸಭೆಯಲ್ಲಿ ಲಿಖಿತ ಅಥವಾ ಮೌಖಿಕ ರೂಪದಲ್ಲಿ ಯಾವುದೇ ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಲಾಗಿದೆ.

ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ (PRS Legislative Research) ಎಂಬ ಎನ್‌ಜಿಒ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 17ನೇ ಲೋಕಸಭೆಯಲ್ಲಿ ಸಂಸದರು ಸರಾಸರಿ 45 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಕೇರಳ ಮತ್ತು ರಾಜಸ್ಥಾನದ ಸಂಸದರು ಸರಾಸರಿ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಬಂದಿದೆ.

ದೇಶ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಗೆ ತೆರಳಿದ್ದಾರೆ. ಇದರಿಂದ ಸಾರಿಗೆ ದಟ್ಟಣೆ ಸಂಭವಿಸಿದೆ. ಪ್ರತಿಭಟನೆಯನ್ನು ತಡೆಯಲು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ರಾಜ್ಯಗಳ ರೈತ ಸಂಘಟನೆಗಳು, ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ (MSP) ಎಂದು ಕರೆಯಲ್ಪಡುವ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ನೀಡುವ ಕಾನೂನು, ಪಿಂಚಣಿ, ಭೂಕಬಳಿಕೆಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಇಂದು ರಾಜಧಾನಿ ದೆಹಲಿಯತ್ತ ಬೃಹತ್ ಮೆರವಣಿಗೆಗೆ ಕರೆ ನೀಡಿತ್ತು.

ಈ ಹಿನ್ನಲೆಯಲ್ಲಿ, ರಾಜ್ಯಗಳ ರೈತರು ಕೇಂದ್ರ ಸರ್ಕಾರದ ವಿರುದ್ಧ ಮುತ್ತಿಗೆ ಹೋರಾಟ ನಡೆಸಲು ದೆಹಲಿಗೆ ತೆರಳಿದ್ದಾರೆ. ಇದರಿಂದಾಗಿ ದೆಹಲಿಯ ಪ್ರಮುಖ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ಪ್ರಮುಖ ರಸ್ತೆಗಳ ಮಾರ್ಗವನ್ನು ಬದಲಿಸಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಮಾರ್ಚ್ 12ರವರೆಗೆ ದೆಹಲಿಯಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನಾಕಾರರು ಯಾವುದೇ ಅಹಿತಕರ ಘಟನೆಗೆ ಒಳಗಾಗದಂತೆ ತಡೆಯಲು ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಅರೆಸೇನಾ ಪಡೆಗಳೂ ಭದ್ರತೆಯಲ್ಲಿ ತೊಡಗಿವೆ.

Uncategorized

ಬೆಂಗಳೂರು: ದೆಹಲಿಯಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್‌ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಿಕೊಳ್ಳಲು ಕಳಿಸಿಕೊಡಬೇಕು ಎಂದು‌ ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಬಂಧಿಸಿರುವುದು ಮಧ್ಯಪ್ರದೇಶದ ಸರ್ಕಾರವಾದರೂ ಈ ದುಷ್ಕೃತ್ಯದ ಹಿಂದಿನ ಕ್ರಿಮಿನಲ್ ಮೆದುಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಎನ್ನುವುದು ಸ್ಪಷ್ಟ ಎಂದು ಹೇಳಿದ್ದಾರೆ.

ಈ ರೀತಿ ಬಂಧಿಸಿ, ಬೆದರಿಸಿ ರೈತರ ಹೋರಾಟವನ್ನು ಹತ್ತಿಕ್ಕಲಾಗದು. ಇಂತಹ ದಬ್ಬಾಳಿಕೆಯಿಂದ ಇನ್ನಷ್ಟು ರೈತರು ಬೀದಿಗಿಳಿಯಬಹುದೇ ಹೊರತು ಮಣ್ಣಿನ ಮಕ್ಕಳ ಹೋರಾಟ ನಿಲ್ಲದು. ಶಾಂತಿ-ಸುವ್ಯವಸ್ಥೆಯ‌ ಕಾಳಜಿಯನ್ನು ಕೇಂದ್ರ ಸರ್ಕಾರ ಹೊಂದಿದ್ದರೆ ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆ ಬಗೆಹರಿಸಬೇಕೇ ಹೊರತು ಈ ರೀತಿ ದಮನ-ದೌರ್ಜನ್ಯ ನಡೆಸಿ ರೈತರ ಬಾಯಿ ಮುಚ್ಚಿಸುವುದಲ್ಲ ಎಂದು ಕಿಡಿಕಾರಿದ್ದಾರೆ.

ಕೇಂದ್ರದಲ್ಲಿ ಇರಲಿ, ರಾಜ್ಯಗಳಲ್ಲಿ ಇರಲಿ‌ ಬಿಜೆಪಿ ಕೈಗೆ ಅಧಿಕಾರ ಬಂದ ಕೂಡಲೇ ಅವರು ಮೊದಲು ದಂಡ ಪ್ರಯೋಗ ಮಾಡುವುದು ಅನ್ನದಾತರ ಮೇಲೆ‌ ಎನ್ನುವುದಕ್ಕೆ ಇತಿಹಾಸ ಸಾಕ್ಷಿ. ಕರ್ನಾಟಕದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರ, ಗೊಬ್ಬರ ಕೇಳಿದ್ದ ರೈತರನ್ನು ನಿರ್ದಯವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಗುಂಡಿಕ್ಕಿ ಕೊಂದಿತ್ತು ಎಂದು ಹೇಳಿದ್ದಾರೆ

ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ದೆಹಲಿ ಮತ್ತು ಉತ್ತರಪ್ರದೇಶಲ್ಲಿ ಪ್ರತಿಭಟನಾನಿರತ ರೈತರ ಮೇಲೆ ನಡೆಸಿದ್ದ ದೌರ್ಜನ್ಯದಲ್ಲಿ ಹಲವಾರು ರೈತರು ಸಾವಿಗೀಡಾಗಿದ್ದರು. ನರೇಂದ್ರ ಮೋದಿ ಅವರ ಸರ್ಕಾರದ ಈಗಿನ ಕ್ರಮಗಳನ್ನು ನೋಡಿದರೆ ರೈತರನ್ನು ಬೆದರಿಸಿ ತಲೆ ಎತ್ತದಂತೆ‌ ಮಾಡುವುದೇ ಮುಖ್ಯ ಉದ್ದೇಶವಿದ್ದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ರೈತ ಸಂಘ ಫ್ರೀಡಂಪಾರ್ಕ್ ನಲ್ಲಿ ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ 88ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿ, ಬಳಿಕ ರೈತ ಪರ ಬಜೆಟ್ ರೂಪಿಸಲು ರೈತ ಸಂಘ ನೀಡಿದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು.

ರೈತರು ನೀಡಿದ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ “ಭೂ ಸುಧಾರಣಾ ಕಾಯ್ದೆ 2020″ಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ನಂಜುಂಡಸ್ವಾಮಿಯವರು ಸಂಘಟಿಸಿದ ಸ್ಟಡಿ ಸರ್ಕಲ್ ಮೂಲಕ ಹಲವು ವಿಚಾರಗಳ ಒಳನೋಟ ದೊರೆಯಿತು. ಸಮಾಜವಾದಿ ಆರ್ಥಿಕತೆ, ಸಮಾಜವಾದಿ ರಾಜಕಾರಣದ ಬಗ್ಗೆ ಸ್ಪಷ್ಟತೆ ಸಿಕ್ಕಿತು. ಈ ಸ್ಟಡಿ ಸರ್ಕಲ್ ಗೆ ಬಹಳ ಮಂದಿ ಉಪನ್ಯಾಸಕರು, ಪ್ರೊಫೆಸರ್ ಗಳು, ಸಾಹಿತಿಗಳು ಬರುತ್ತಿದ್ದರು. ಇವರೆಲ್ಲರ ಮಾರ್ಗದರ್ಶನ ನನಗೆ ಅನುಕೂಲವಾಯಿತು ಎಂದು ಹೇಳಿದರು.

ನಂಜುಂಡಸ್ವಾಮಿಯವರು ಕಡೆಯವರೆಗೂ ರೈತರ ಪರವಾಗಿ ಕ್ರಿಯಾಶೀಲವಾಗಿದ್ದರು. ಸಮಾಜವಾದಿ ಆಶಯಗಳ ಪರವಾಗಿದ್ದ ಅವರು ಬೆಳೆಸಿದ ರೈತ ಚಳವಳಿ, ರೈತರ ಸಮಸ್ಯೆ ಪರಿಹಾರಕ್ಕೆ ಆಸರೆ ಆಯಿತು. ರೈತ ಹೋರಾಟ ಮತ್ತು ರೈತ ಸಮಾವೇಶಗಳಲ್ಲಿ ಭಾಗವಹಿಸುವುದು ನನಗೂ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯ. ನಂಜುಂಡಸ್ವಾಮಿ ಮತ್ತು ರೈತ ಹೋರಾಟಗಳು ಸಮಾಜ ಮತ್ತು ಸರ್ಕಾರಗಳ ಮೇಲೆ ಪರಿಣಾಮ ಬೀರಿದೆ. ನಂಜುಂಡಸ್ವಾಮಿಯವರ ರೈತ ಹೋರಾಟ ನನಗೆ ರಾಜಕೀಯ ಪ್ರೇರಣೆಯಾಗಿದೆ ಎಂದು ಹೇಳಿದರು.

ಬಡಗಲಾಪುರ ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ರೈತ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್.ಪಾಟೀಲ್, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ದಲಿತ ಮುಖಂಡ ಮಾವಳ್ಳಿ ಶಂಕರ್, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕರಾದ ಕುಮಾರ್ ಸಮತಳ ಸೇರಿ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ರಾಜ್ಯ

ಕಲಬುರಗಿ: ಕಲಬುರಗಿಯ ಜನತೆಗೆ ಇಂದು ಸಂತಸದ ದಿನವಾಗಿದೆ. ಅವರ ಬಹುದಿನಗಳ ಕನಸು ಇಂದು ಈಡೇರಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ಹೇಳಿದ್ದಾರೆ.

ತುರ್ತು ಚಿಕಿತ್ಸೆಗಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ‘ಟ್ರಾಮಾ ಕೇರ್ ಸೆಂಟರ್’ ನಿರ್ಮಿಸಲಾಗಿದ್ದು ಇಂದು ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸೇರಿ ಉದ್ಘಾಟನೆ ನೆರವೇರಿಸಿದ್ದಾರೆ.

ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸೌಲಭ್ಯಗಳು, ಪ್ರತ್ಯೇಕ OT ವ್ಯವಸ್ಥೆ, ಪ್ರತ್ಯೇಕ ಮಹಿಳಾ ವಾರ್ಡ್, ಆಧುನಿಕ CT & MRI ಸ್ಕ್ಯಾನಿಂಗ್ ಸೌಲಭ್ಯಗಳು, ಆಂಬುಲೆನ್ಸ್ ವ್ಯವಸ್ಥೆ ಹೊಂದಿರುವ ಈ ‘ಟ್ರಾಮಾ ಕೇರ್ ಸೆಂಟರ್’ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ವರದಾನವಾಗಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ ಮತ್ತಿತರರು ಪಾಲ್ಗೊಂಡಿದ್ದರು.

ರಾಜಕೀಯ

ಬೆಂಗಳೂರು: ಹಿಂದೂಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿ ಗೆ ಮಾತ್ರವೇ ಬಳಸಬೇಕು ಎನ್ನುವ ಮೂಲಕ ಬೆಳ್ತಂಗಡಿ ಶಾಸಕ  ಹರೀಶ್ ಪೂಂಜಾ ರವರು ತನ್ನ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದ್ದಾರೆ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಹರೀಶ್ ಪೂಂಜಾ ರವರು ಅಜ್ಞಾನದಿಂದ ಭಾರತೀಯರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಕುರಿತು ಪಾಠ ಮಾಡಿ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಅರ್ಥೈಸಬೇಕಾಗಿದೆ. ಭಾರತದ ಬಹುತ್ವದ ಸಂಸ್ಕೃತಿಗಳ ಭಾವೈಕ್ಯದ ಬಗೆಗೆ ಇರುವ ಅರಿವಿನ ಕೊರತೆಯೇ ಇಂತಹ ಹೇಳಿಕೆಗಳಿಗೆ ಕಾರಣವಾಗಿದೆ. ಕೋಮು ಅಮಲು ಮಾತ್ರ ತಲೆಯಲ್ಲಿ ತುಂಬಿ ಇತರರನ್ನು ತುಚ್ಚೀಕರಿಸಿ ಸಮಾಜ ಒಡೆಯುವಂತಹ ರಾಜಕಾರಣಿಗಳು ದೇಶಕ್ಕೆ ಅಪಾಯಕಾರಿ.

ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ತತ್ವವನ್ನು ಅರ್ಥೈಸಿ, ಸಾಮರಸ್ಯದ ಸಹಬಾಳ್ವೆಯ ಭಾರತದ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯ

ಗಿರೀಶ್ ಕುಮಾರ, ಯಾದಗಿರಿ

ಯಾದಗಿರಿ: ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ರಿ) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ನೆನ್ನೆ ಜಿಲ್ಲಾ ಸಮಿತಿ, ತಾಲೂಕ ಸಮಿತಿ ಹಾಗೂ ನಗರ ಸಮಿತಿಗಳ ಪದಾಧಿಕಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಡಾ.ಕೆ.ಎಂ.ಸಂದೇಶ್ ರವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ರಾಹುಲ್ ಕೊಲ್ಲೂರಕರ್ ಅವರ ಮುಂದಾಳುತ್ವದಲ್ಲಿ ಅಂಬೇಡ್ಕರ್ ಭವನ ಕೋಟೆಗಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತಾಲೂಕ ಸಮಿತಿಯ ಅಧ್ಯಕ್ಷರಾಗಿ ಯಾದಗಿರಿ ರಾಮು ಗಣಪುರ, ಉಪಾಧ್ಯಕ್ಷರಾಗಿ ಕುಮಾರ್ ಅರಿಕೇರಿ, ಸಹ ಕಾರ್ಯದರ್ಶಿಯಾಗಿ ಮಂಜು ಕುಲೂರ್, ಕಾರ್ಯದರ್ಶಿಯಾಗಿ ದಶರಥ, ಸಹ ಕಾರ್ಯದರ್ಶಿಯಾಗಿ ರಾಧಾಕೃಷ್ಣ, ಖಜಾಂಚಿಯಾಗಿ ರಾಹುಲ್ ಅರಿಕೇರಿ ಹಾಗೂ ಸಮಿತಿ ಸದಸ್ಯರುಗಳಾಗಿ ರಾಜು ಮತ್ತು ಪುಟ್ಟು  ಅವರನ್ನು ಆಯ್ಕೆ ಮಾಡಲಾಯಿತ್ತು ಅದೇ ರೀತಿ, ನಗರ ಸಮಿತಿ ಅಧ್ಯಕ್ಷರಾಗಿ ಯಾದಗಿರಿ ಗಿರೀಶ್ ವಾಡಗೇರಿ, ಉಪಾಧ್ಯಕ್ಷರಾಗಿ ಬಾಲು ಹಳ್ಳಿ, ಕಾರ್ಯದರ್ಶಿಯಾಗಿ ಅನಿಲ್ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ಸಮಿತಿಯ ನಾಯಕರುಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಅವರು,  “ಪ್ರತಿಯೊಬ್ಬ ನಾಯಕರೂ ಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ, ದಿನಲಿತರಿಗೆ, ಬಹುಜನರ ಏಳಿಗೆಗಾಗಿ ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಹೋರಾಡುತೀರಿ ಎಂದು ಆಶಿಸುತ್ತೇನೆ. ನಿಮ್ಮೆಲ್ಲರಿಗೂ ಇದರಲ್ಲಿ ಯಶಸ್ಸು ದೊರಕಿ, ಸಂಘಟನೆಗೆ ಕೀರ್ತಿ ತರುತ್ತೀರಿ ಎಂದು ಶುಭ ಹಾರೈಸುತ್ತೆನೆ” ಎಂದು ಹೇಳಿದರು.

ರಾಜ್ಯ

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾವಣಗೆರೆಯಲ್ಲಿ ಜಗದ್ಗುರು ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಪಟ್ಟಾಭಿಷೇಕ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಮಹೋತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ವ್ಯವಸ್ಥೆ ಬೇರೂರಲು ವೈಚಾರಿಕ ಶಿಕ್ಷಣದ ಕೊರತೆ ಕಾರಣ. ಚಲನರಹಿತವಾದ ಜಾತಿ ವ್ಯವಸ್ಥೆ ಬಲವಾಗಿ ಬೇರು ಬಿಟ್ಟಿರುವುದರಿಂದ ಬದಲಾವಣೆ ತರಲು ಇಂದಿಗೂ ಸಾಧ್ಯವಾಗಿಲ್ಲ. ದಾರ್ಶನಿಕರ ಪ್ರಯತ್ನದಿಂದಾಗಿ ಸ್ವಲ್ಪ ಸರಿಹೋಗುವ ಜಾತಿ ವ್ಯವಸ್ಥೆ ಕಾಲಾ ನಂತರ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ಬಸವಾದಿ ಶರಣರು ‘ಇವನಾರವ, ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂದು ಭಾವಿಸುವಂತೆ ಹೇಳಿದ್ದರು ಎಂದು ಹೇಳಿದರು.

ಉಪ್ಪಾರರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜ. ಉಪ್ಪು ತಯಾರಿಸಿ ಮಾರಾಟ ಮಾಡುವ ವೃತ್ತಿಯಾಗಿದ್ದು, ಕೈಗಾರೀಕರಣವಾದ ನಂತರ ಕುಲಕಸುಬು ಬಿಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇವರ ಕಸುಬಿಗೆ ಧಕ್ಕೆಯುಂಟಾದ ಮೇಲೆ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಶಿಕ್ಷಣ, ಆರ್ಥಿಕ ಶಕ್ತಿಯಿಂದ ವಂಚಿತರಾಗಿ ಉದ್ಯೋಗವಿಲ್ಲದೇ ಕೂಲಿ ಮಾಡುವ ಸ್ಥಿತಿ ಉಂಟಾಯಿತು. ಉಪ್ಪಾರ ಸಮಾಜ ಮಹಾತ್ಮಾ ಗಾಂಧಿಜಿಯವರು ಬ್ರಿಟಿಷರ ವಿರುದ್ಧ ಹೋರಾಡುವಾಗ ಉಪ್ಪಿನ ಸತ್ಯಾಗ್ರಹ ಮಾಡಿದರು, ಅದರಲ್ಲಿ ಉಪ್ಪಾರರ ಕೊಡುಗೆಯೂ ಅಪಾರವಾಗಿತ್ತು ಎಂದು ಹೇಳಿದರು.

ಜಾತಿ ವ್ಯವಸ್ಥೆಯ ಕಾರಣದಿಂದ ಅಕ್ಷರ ಸಂಸ್ಕೃತಿಯಿಂದ ಎಲ್ಲಾ ಶೂದ್ರರೂ ವಂಚಿತರಾಗಿದ್ದಾರೆ. ಆರ್ಥಿಕ, ಸಮಾಜಿಕ ಅಸಮಾನತೆ ಇದ್ದರೆ ಅದಕ್ಕೆ ನಮ್ಮ ದೇಶದ ಜಾತಿ ವ್ಯವಸ್ಥೆ ಕಾರಣ. ಸಂವಿಧಾನದಲ್ಲಿ ಸಮ ಸಮಾಜ ನಿರ್ಮಾಣವಾಗಬೇಕೆಂದು ಹೇಳಿದೆ. ಶೋಷಣೆಗೊಳಗಾದ ಜನರಿಗೆ ಆರ್ಥಿಕ, ಸಮಾಜಿಕ ಶಕ್ತಿ ತುಂಬಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದರು.

ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ವಿರೋಧಿಸಿದರು. ನಾನು ಕಾನೂನು ಶಿಕ್ಷಣ ಪಡೆದು, ವಕೀಲನಾಗಿ, ಈಗ ಮುಖ್ಯಮಂತ್ರಿಯಾಗುವ ಅವಕಾಶವನ್ನು ಅಂಬೇಡ್ಕರ್ ರವರ ಸಂವಿಧಾನ ನೀಡಿತು. ಶ್ರೀಮಠವು ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಇಂಬು ನೀಡುತ್ತಿರುವುದು ಶ್ಲಾಘನೀಯ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣಗುರುಗಳು ಬೋಧಿಸಿದರು. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು ಎಂದು ಬಸವಣ್ಣನವರು ಪ್ರತಿಪಾದಿಸಿದರು ಎಂದು ಹೇಳಿದರು.

ಸಮುದಾಯಗಳು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಹೊಂದಬಾರದೆಂಬ ಉದ್ದೇಶದಿಂದ ದಾರಿ ತಪ್ಪಿಸುವವರು ಬಹಳಷ್ಟಿದ್ದಾರೆ. ಚರಿತ್ರೆ ತಿಳಿದಿರುವವರು ಮಾತ್ರ ಭವಿಷ್ಯ ನಿರ್ಮಿಸಲು ಸಾಧ್ಯ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ತುಂಬಿದಾಗ ಮಾತ್ರ ದೇಶಕ್ಕೆ ಬಂದ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಶ್ರೇಷ್ಠತೆ ಎಂಬುದು ಜಾತಿಯಿಂದ ಬರುವುದಲ್ಲ. ಅದು ನಮ್ಮ ಶಿಕ್ಷಣ, ಪರಿಶ್ರಮದಿಂದ ಬರುತ್ತದೆ ಎಂದು ಹೇಳಿದರು.

ತಳಮಟ್ಟದ ಜನರಿಗೆ ಉಪಯೋಗವಾಗುವ ಗ್ಯಾರಂಟಿ ಯೋಜನೆಗಳನ್ನು ಕೆಲವರು ಟೀಕಿಸಿದರು. ಆದರೆ ರಾಜ್ಯದ ಮಹಿಳೆಯರು ಜೂನ್ 11 ರಿಂದ ಸಾರಿಗೆ ಬಸ್ಸುಗಳಲ್ಲಿ 150 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇಂತಹ ಜನಪರ ಯೋಜನೆಗಳ ಬಗ್ಗೆ ಇಚ್ಛಾಶಕ್ತಿ ತೋರದ ಪಕ್ಷಗಳು, ಮೊದಲಿಗೆ ಯೋಜನೆಗಳನ್ನು ಜಾರಿ ಮಾಡಿ ನಂತರ ಸ್ಥಗಿತಗೊಳಿಸುತ್ತಾರೆ ಎಂದು ಟೀಕಿಸುತ್ತಾರೆ. ಆದರೆ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ರಾಜ್ಯದ 4.5 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ ಎಂದು ಹೇಳಿದರು.

ಉಪ್ಪಾರ ಸಮಾಜಕ್ಕೆ ಜಗದ್ಗುರು ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಸರ್ಕಾರದ ವತಿಯಿಂದ ಭಗೀರಥ ಜಯಂತಿ ಆಚರಣೆ ಹಾಗೂ ಭಗೀರಥ ಮಂಡಳಿ ಸ್ಥಾಪನೆಯಾಗಿದ್ದರೆ ಅದಕ್ಕೆ ಸ್ವಾಮೀಜಿಯವರು ಕಾರಣ. ಸಂಸ್ಥೆಗೆ ಸ್ವಾಮೀಜಿಗಳ ಜಮೀನು ಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

ದೇಶ

ನವದೆಹಲಿ: ಉತ್ತರಪ್ರದೇಶಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು ಎಂದು ತಮಿಳುನಾಡು ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಡಾ.ಪಳನಿವೇಲ್ ತ್ಯಾಗರಾಜನ್ (ಪಿಟಿಆರ್) ಹೇಳಿದ್ದಾರೆ.

ಕೇರಳ, ತಮಿಳುನಾಡು ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ನಾಯಕರು “GST ಹಣದ ಮರು ಹಂಚಿಕೆ ಮತ್ತು ಅನುದಾನ ಹಂಚಿಕೆಯಲ್ಲಿ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜಧಾನಿ ದೆಹಲಿಯಲ್ಲಿ ನೆನ್ನೆ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಭಾಗವಹಿಸಿ ಡಾ.ಪಳನಿವೇಲ್ ತ್ಯಾಗರಾಜನ್ ಮಾತನಾಡಿದರು.

“ಕಳೆದ 5 ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳು GST ಮತ್ತು ನೇರ ತೆರಿಗೆಗಳಿಗೆ ಕೊಡುಗೆ ನೀಡಿದ ಒಟ್ಟು ತೆರಿಗೆ (ಆಮದು ಸುಂಕದ ಮೇಲಿನ GST ಹೊರತುಪಡಿಸಿ) – 22,26,983.39 ಕೋಟಿ.

ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶ ಕೊಡುಗೆ ನೀಡಿದ ಮೊತ್ತ ರೂ.3,41,817.60 ಕೋಟಿಗಳು.
(Difference in Contribution: Rs.18,85,166 Crores)

ಕಳೆದ 5 ವರ್ಷಗಳಲ್ಲಿ ಮೇಲೆ ತಿಳಿಸಲಾದ ದಕ್ಷಿಣದ ರಾಜ್ಯಗಳಿಗೆ ಬಿಡುಗಡೆಯಾದ ಕೇಂದ್ರ ತೆರಿಗೆಗಳು ಮತ್ತು ಸುಂಕಗಳು (ಒಟ್ಟು) – ರೂ.6,42,295.05 ಕೋಟಿಗಳು.

ಉತ್ತರ ಪ್ರದೇಶಕ್ಕೆ ಬಿಡುಗಡೆಯಾದ ಮೊತ್ತ – 6,91,375.12 ಕೋಟಿ ರೂ.
(Difference in sharing: Rs.49,080 Crores)

ಒಂದು ರಾಜ್ಯಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು” ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕಾಗಿ ಮೊನ್ನೆ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಾಳುತ್ವದಲ್ಲಿ ದೆಹಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ.

ದೇಶ

ಪ್ರಧಾನಿ ನರೇಂದ್ರ ಮೋದಿ ಅವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಜನವರಿ 14 ರಂದು ಮಣಿಪುರದಿಂದ ಮಹಾರಾಷ್ಟ್ರಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆಯ ಎರಡನೇ ಹಂತವನ್ನು ಪ್ರಾರಂಭಿಸಿದರು.

ಯಾತ್ರೆಯು ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ 15 ರಾಜ್ಯಗಳನ್ನು ಒಳಗೊಂಡಿದೆ. ಒಟ್ಟು 66 ದಿನಗಳಲ್ಲಿ 110 ಜಿಲ್ಲೆಗಳಲ್ಲಿ ಸುಮಾರು 6700 ಕಿ.ಮೀ. ಪ್ರಯಾಣಿಸುವ ಸಲುವಾಗಿ ಈ ನಡಿಗೆ ನಡೆಯಲಿದೆ.

ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಬಿಹಾರ ಮತ್ತು ಪಶ್ಚಿಮ ಬಂಗಾಳದ ನಂತರ ಇದೀಗ ಒಡಿಶಾದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ನಡೆತ್ತಿದ್ದಾರೆ. ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಮೋದಿ ಸಾಮಾನ್ಯ ಜಾತಿ ಕುಟುಂಬದಲ್ಲಿ ಜನಿಸಿದವರು.

ಇವರು “ತೆಲಿ” ಜಾತಿಗೆ ಸೇರಿದವರು. 2000 ರಲ್ಲಿ, ಗುಜರಾತ್‌ನ ಬಿಜೆಪಿ ಸರ್ಕಾರವು ತೆಲಿ ವರ್ಗವನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಕೊಂಡಿತ್ತು. ಈ ಕಾರಣಕ್ಕಾಗಿ, ತಮ್ಮ ಜೀವನ ಪರ್ಯಂತ ಅವರು ಜಾತಿವಾರು ಜನಗಣತಿ ನಡೆಸಲು ಅನುಮತಿ ಕೊಡುವುದಿಲ್ಲ” ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯವರ ಈ ಹೇಳಿಕೆ ಭಾರತದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮೋದಿಯವರ ಶಿಕ್ಷಣದ ವಿವರಗಳನ್ನು ಬಹಿರಂಗಪಡಿಸದೇ ಇರುವ ಹಿನ್ನಲೆಯಲ್ಲಿ, ಈಗ ಅವರ ಜಾತಿಯ ಪ್ರಶ್ನೆಯೂ ಉದ್ಭವಿಸಿದೆ. ಪ್ರಧಾನಿ ಮೋದಿವಿವಿಧ ವೇದಿಕೆಗಳಲ್ಲಿ ತಾನು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಹೇಳಿಕೊಂಡು ಮತ ಸಂಗ್ರಹಿಸಿರುವುದು ಗಮನಾರ್ಹ.