ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2024 » Page 7 of 7 » Dynamic Leader
November 22, 2024
Home 2024 February (Page 7)
ವಿದೇಶ

ಯುರೋಪಿನ ಪ್ರಾಚೀನ ದೇಶ ಇಟಲಿ. ರೋಮನ್ ಸಂಸ್ಕೃತಿಯನ್ನು ಹೊಂದಿರುವ ಆ ದೇಶದಲ್ಲಿ ಪ್ರಾಚೀನ ವರ್ಣಚಿತ್ರಗಳಿಗೆ ಹಾಗೂ ವರ್ಣಚಿತ್ರಕಾರರಿಗೆ ಇಂದಿಗೂ ಅನೇಕ ಉತ್ಸಾಹಿಗಳಿದ್ದಾರೆ.

ಆ ದೇಶದ 605 ಆಸನಗಳ ಸಂಸತ್ತಿನ ಸದಸ್ಯರಾದ ಮತ್ತು ಸಂಸ್ಕೃತಿ ಸಚಿವರೂ ಆಗಿರುವ 71 ವರ್ಷದ ವಿಟ್ಟೋರಿಯೊ ಸ್ಗಾರ್ಬಿ (Vittorio Sgarbi) ಪುರಾತನ ಕಲಾಕೃತಿಗಳು ಮತ್ತು ಅಪರೂಪದ ವರ್ಣಚಿತ್ರಗಳನ್ನು ಖರೀದಿಸುವುದರಲ್ಲಿ ಉತ್ಸಾಹಿಯಾಗಿದ್ದಾರೆ.

2013ರಲ್ಲಿ, ಇಟಲಿಯ ಉತ್ತರ ಪೀಡ್ಮಾಂಟ್ (Piedmont) ಪ್ರದೇಶದ ಒಬ್ಬರ ಒಡೆತನದ ಕೋಟೆಯಲ್ಲಿ, ಹಲವಾರು ವರ್ಷಗಳಿಂದ ಇದ್ದ 17ನೇ ಶತಮಾನದ ರೂಟಿಲಿಯೊ ಮನೆಟ್ಟಿ (Rutilio Manetti) ಎಂಬ ಕಲಾವಿದರಿಂದ ಬರೆದ ದಿ ಕ್ಯಾಪ್ಚರ್ ಆಫ್ ಸೈಂಟ್ ಫೇಟರ್ (The Capture of Saint Peter) ಎಂಬ ಚಿತ್ರಕಲೆ ಕಳ್ಳತನವಾಗಿತ್ತು.

2021ರಲ್ಲಿ ಸಚಿವ ಸ್ಗಾರ್ಬಿ ಆಯೋಜಿಸಿದ್ದ ಪ್ರದರ್ಶನದಲ್ಲಿ ಈ ವರ್ಣಚಿತ್ರವನ್ನು ಮತ್ತೆ ಪ್ರದರ್ಶಿಸಲಾಯಿತು. ಇದು 2013ರಲ್ಲಿ ಕಣ್ಮರೆಯಾದ ಪೇಂಟಿಂಗ್ ಅನ್ನು ಹೋಲುತ್ತದೆಯಾದರೂ, ಪೇಂಟಿಂಗ್‌ನ ಮೇಲಿನ ಎಡ ಮೂಲೆಯಲ್ಲಿ ಮೇಣದಬತ್ತಿ ಕಂಡುಬಂದಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ವಿಟ್ಟೋರಿಯೊ ಸ್ಗಾರ್ಬಿ

ಸುಮಾರು 20 ವರ್ಷಗಳ ಹಿಂದೆ ತನ್ನ ತಾಯಿ ಖರೀದಿಸಿದ ಹಳೆಯ ವಿಲ್ಲಾದಲ್ಲಿ ತಾನು ಅದನ್ನು ಕಂಡುಕೊಂಡಿದ್ದೇನೆ ಮತ್ತು ಇದು ರೂಟಿಲಿಯೊ ಮನೆಟ್ಟಿಯ “ಮೂಲ” ಪೇಂಟಿಂಗ್ ಮತ್ತು 2013ರಲ್ಲಿ ಕಳವಾಗಿದ್ದು “ನಕಲು” ಎಂದು ಸ್ಗಾರ್ಬಿ ಹೇಳಿಕೊಂಡಿದ್ದಾರೆ.

ಆದರೆ 2013ರಲ್ಲಿ ಸ್ಗಾರ್ಬಿಯವರು ಕದ್ದ ಪೇಂಟಿಂಗ್ ಗೆ ಚಿತ್ರಕಲಾ ತಜ್ಞರ ನೆರವಿನಿಂದ ಕೆಲವು ಬದಲಾವಣೆ ಮಾಡಿ ಹೊಸದಾಗಿ ಕಾಣುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಅಂದಿನಿಂದ ನಾಪತ್ತೆಯಾಗಿರುವ ಪೇಂಟಿಂಗ್ ಅನ್ನು ಪತ್ತೆ ಹಚ್ಚಲು ಮತ್ತು ಸ್ಗಾರ್ಬಿಯ ಪೇಂಟಿಂಗ್ ಅಸಲಿಯೇ ಅಥವಾ 2013ರಲ್ಲಿ ಕಳವಾದ ಪೇಂಟಿಂಗೇ ಎಂಬುದನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಟೀಕೆಗಳ ಪರಿಣಾಮವಾಗಿ ಇದೀಗ ಸಚಿವ ವಿಟ್ಟೋರಿಯೊ ಸ್ಗಾರ್ಬಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

“ನಾನು ಯಾವುದೇ ಅಪರಾಧ ಮಾಡಿಲ್ಲ. ನನ್ನ ಸ್ಥಾನವು ತನಿಖೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಾನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ತಿಳಿಸಿದ್ದೇನೆ” ಎಂದು ವಿಟ್ಟೋರಿಯೊ ಸ್ಗಾರ್ಬಿ ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

“ದೇಶದಲ್ಲಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ನಲ್ಲಿ ಅನ್ಯಾಯ ಮಾಡಿದ್ದು, ಈ ಬಜೆಟ್​ನಿಂದ ನಮಗೆ ಬಹಳ ನಿರಾಸೆಯಾಗಿದೆ. ಇದರ ಬಗ್ಗೆ ಹೋರಾಟ ಮಾಡುವ ಕುರಿತು ನಿರ್ಧಾರ ಮಾಡುತ್ತೇವೆ. ಲೋಕಸಭೆ ಚುನಾವಣೆ ಹಿನ್ನೆಲೆ ಜನರಿಗೆ ಏನು ಕೊಡುತ್ತೇವೆ ಎಂಬ ದಿಕ್ಸೂಚಿಯನ್ನಾದರೂ ಹೇಳಬೇಕಿತ್ತು. ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಎಲ್ಲವೂ ಹುಸಿಯಾಗಿದೆ” ಎಂದು ಹೇಳಿದ್ದಾರೆ.

“ಬಿಜೆಪಿ ಸಂಸದರು ಈ ಕುರಿತು ಪ್ರಶ್ನೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ತಂದಿರುವ ಜನಪರ ಯೋಜನೆಗಳನ್ನು ನೋಡಿಯಾದರೂ ಕೇಂದ್ರ ಸರಕಾರ ಬಜೆಟ್ ಮಂಡಿಸಬಹುದಿತ್ತು. ಈಗಾಗಲೇ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಮತ್ತಷ್ಟು ಹೊರೆ ಹೊರಿಸುವುದರಲ್ಲಿ ಸಂದೇಹವಿಲ್ಲ” ಎಂದು ಹೇಳಿದ್ದಾರೆ.

ಸಿನಿಮಾ

ಅರುಣ್ ಜಿ

ಶಿವಣ್ಣನಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ಡೈರೆಕ್ಟರ್ ಆಕ್ಷನ್ ಕಟ್…

ಸೆಂಚೂರಿ ಸ್ಟಾರ್‌ಗೆ ಸಪ್ತ ಸಾಗರದಾಚೆ ಎಲ್ಲೋ ಡೈರೆಕ್ಟರ್ ಆಕ್ಷನ್ ಕಟ್…ಐದನೇ ಸಿನಿಮಾಗೆ ಹೇಮಂತ್ ರಾವ್ ರೆಡಿ!

ಪ್ರಯೋಗಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರ ಎದುರು ತಂದು ನಿಲ್ಲಿಸುವ ನಿರ್ದೇಶಕ ಸಾಲಿನಲ್ಲಿ ಪ್ರಮುಖರು ಹೇಮಂತ್ ಎಂ ರಾವ್. ಮನು ಸುರಭಿ ಹಾಗೂ ಪ್ರಿಯಾಳ ಪ್ರೇಮಕಥೆ ಹೇಳಿ ಗೆದಿದ್ದ ಸಪ್ತ ಸಾಗರದಾಚೆ ಎಲ್ಲೋ ಸಾರಥಿ ಹೇಮಂತ್ ಈಗ ಹ್ಯಾಟ್ರಿಕ್ ಹೀರೋ ಜೊತೆ ಕೈ ಜೋಡಿಸಿದ್ದಾರೆ.  ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’ ಈಗ ಸಪ್ತ ಸಾಗರದಾಚೆ ಎಲ್ಲೋ ಮೂಲಕ ಹೊಸ ಅಲೆ ಸೃಷ್ಟಿಸಿರುವ ಹೊಸ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಿರ್ಮಾಪಕ ವೈಶಾಕ್ ಜೆ ಗೌಡ

ಶಿವಣ್ಣನಿಗೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಿತ್ತು. ಈ ಬಗ್ಗೆ ಇದೀಗ ಚಿತ್ರತಂಡವೇ ಅಧಿಕೃತ ಮುದ್ರೆ ಒತ್ತಿದೆ. ದೊಡ್ಮನೆ ದೊರೆಗೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ವೈಶಾಕ್ ಗೌಡ ಈ ಸಿನಿಮಾಗೆ ಹಣ ಹಾಕುತ್ತಿದ್ದಾರೆ. ತಮ್ಮದೇ ವೈಶಾಕ್ ಜೆ ಫಿಲಂಸ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಈ ಪ್ರಾಜೆಕ್ಟ್‌ ಬಗ್ಗೆ ಶಿವಣ್ಣ ಜೊತೆ ಚರ್ಚೆ ನಡೆಸಲಾಗುತ್ತಿದ್ದು, ಇದೀಗ ಹ್ಯಾಟ್ರಿಕ್ ಹೀರೋ ಹೇಮಂತ್ ರಾವ್ ನಿರ್ದೇಶನದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ನಿರ್ಮಾಪಕ ಡಾ.ವೈಶಾಕ್ ಜೆ ಗೌಡ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಹೇಮಂತ್ ಎಂ ರಾವ್

ಹೇಮಂತ್ ರಾವ್ ನಿರ್ದೇಶನದ  ಸಿನಿಮಾಗಳ ಪೈಕಿ ಈ ಪ್ರಾಜೆಕ್ಟ್ ಬಹಳ ವಿಭಿನ್ನವಾಗಿದ್ದು, ಹಿಂದೆಂದೂ ನೋಡದ ಶಿವಣ್ಣ ಅವರನ್ನು ಈ ಚಿತ್ರದ ಮೂಲಕ ತೋರಿಸಲು ಅವರು ಸಜ್ಜಾಗಿದ್ದಾರೆ. ಶಿವಣ್ಣನ ಅಪ್ಪಟ ಅಭಿಮಾನಿಯಾಗಿರುವ ನಿರ್ಮಾಪಕ ವೈಶಾಕ್ ತಮ್ಮ ಸಿನಿಮಾ ಜರ್ನಿಯನ್ನು ಶಿವಣ್ಣ ಅವರ ಜೊತೆ ಆರಂಭ ಮಾಡುತ್ತಿರುವ ಖುಷಿಯಲ್ಲಿದ್ದಾರೆ. ಶೀಘ್ರದಲ್ಲೇ ಸ್ಟಾರ್ ಕಾಸ್ಟ್ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ರಾಜಕೀಯ ಸಿನಿಮಾ

ಚೆನ್ನೈ: ನಟ ವಿಜಯ್, ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಅವರ ಪಕ್ಷಕ್ಕೆ “ತಮಿಳಗ ವೆಟ್ರಿ ಕಳಗಂ” ಎಂದು ಹೆಸರಿಟ್ಟಿರುವುದಾಗಿ ಇಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಇದರ ಬಗ್ಗೆ ಅವರು ಪ್ರಕಟಿಸಿರುವ ಪತ್ರಿಕಾ ಹೇಳಿಕೆಯಲ್ಲಿ, “ವಿಜಯ್ ಪೀಪಲ್ಸ್ ಮೂವ್ಮೆಂಟ್ನ ಹೆಸರಿನಲ್ಲಿ ಅನೇಕ ವರ್ಷಗಳಿಂದ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮಾಡುತ್ತಾ ಪರಿಹಾರ ನೆರವುಗಳನ್ನು ನೀಡಿ, ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವುದು ತಮ್ಮೆಲ್ಲರಿಗೂ ತಿಳಿದಿದೆ.

ಆದಾಗ್ಯೂ, ಸಂಪೂರ್ಣವಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ತರಲು, ಸ್ವಯಂ ಸೇವಾ ಸಂಸ್ಥೆಯಿಂದ ಸಾಧ್ಯವಿಲ್ಲ, ಅದನ್ನು ಮಾಡಲು ರಾಜಕೀಯ ಶಕ್ತಿಯ ಅಗತ್ಯವಿದೆ.

ಪ್ರಸ್ತುತ ರಾಜಕೀಯ ವಾತಾವರಣ, ಆಡಳಿತಾತ್ಮಕ ಅಸ್ವಸ್ಥತೆಗಳು ಮತ್ತು ‘ಭ್ರಷ್ಟ ರಾಜಕೀಯ ಸಂಸ್ಕೃತಿ’ ಒಂದೆಡೆಯಾದರೆ, ನಮ್ಮ ಜನರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುವ ‘ವಿಭಜಕ ರಾಜಕೀಯ ಸಂಸ್ಕೃತಿ’ ಮತ್ತೊಂದೆಡೆಯಾಗಿದೆ. ಇದರಿಂದ ನಮ್ಮ ಏಕತೆ ಮತ್ತು ಪ್ರಗತಿಗೆ ಅಡೆತಡೆ ಉಂಟಾಗಿವೆ.

ನಿಸ್ವಾರ್ಥ, ಪಾರದರ್ಶಕ, ಜಾತಿ ರಹಿತ, ದೂರದೃಷ್ಟಿಯ ಆಲೋಚನೆ ಹೊಂದಿದ, ಲಂಚ-ಭ್ರಷ್ಟಾಚಾರ ರಹಿತ ದಕ್ಷ ಆಡಳಿತವನ್ನು ಮುನ್ನಡೆಸಬಲ್ಲ, ಮೂಲಭೂತ ರಾಜಕೀಯ ಬದಲಾವಣೆಗಾಗಿ, ನಿರ್ದಿಷ್ಟವಾಗಿ ಹೇಳುವುದಾದರೆ, ತಮಿಳುನಾಡಿನಲ್ಲಿರುವ ಪ್ರತಿಯೊಬ್ಬರೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಎಂಬುದು ವಾಸ್ತವಿಕ ಸತ್ಯವಾಗಿದೆ. ಅಂತಹ ಮೂಲಭೂತ ರಾಜಕೀಯ ಬದಲಾವಣೆಯನ್ನು, ಜನರ ಒಮ್ಮತದ ಅಭಿಮಾನ ಮತ್ತು ಪ್ರೀತಿಯನ್ನು ಪಡೆದ ಪ್ರಮುಖವಾದ ಒಂದು ಜನಶಕ್ತಿಯ ಮೂಲಕವೇ ಸಾಧ್ಯವಾಗಿಸಬಹುದಾಗಿದೆ.

ಅದರಂತೆ ನನ್ನ ನೇತೃತ್ವದಲ್ಲಿ “ತಮಿಳಗ ವೆಟ್ರಿ ಕಳಗಂ” ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಆರಂಭಿಸಿ, ಭಾರತದ ಮುಖ್ಯ ಚುನಾವಣಾ ಆಯೋಗದಲ್ಲಿ ನೋಂದಾಯಿಸಲು ನಮ್ಮ ಪಕ್ಷದ ಪರವಾಗಿ ಇಂದು ಅರ್ಜಿ ಸಲ್ಲಿಸಲಾಗಿದೆ. ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಜನರು ಬಯಸುವ ಮೂಲಭೂತ ರಾಜಕೀಯ ಬದಲಾವಣೆಗೆ ಕಾರಣವಾಗುವುದು ನಮ್ಮ ಗುರಿಯಾಗಿದೆ.

ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರ, ಮುಂಬರುವ ಸಂಸತ್ತಿನ ಚುನಾವಣೆ ಮುಗಿದ ಮೇಲೆ, ತಮಿಳುನಾಡಿಗೆ ಸಂಬಂಧಿಸಿದ ನೀತಿಗಳ ಯಶಸ್ಸಿಗೆ ಮತ್ತು ತಮಿಳುನಾಡಿನ ಜನರ ಉನ್ನತಿಗಾಗಿ ನಮ್ಮ ಪಕ್ಷದ ನೀತಿ, ನಿಯಮಗಳು, ಧ್ವಜ, ಚಿಹ್ನೆ ಮತ್ತು ಕ್ರಿಯಾ ಯೋಜನೆಗಳನ್ನು ಮುಂದಿಟ್ಟು, ಸಾರ್ವಜನಿಕ ಸಭೆ ಸಮಾರಂಭಗಳೊಂದಿಗೆ ತಮಿಳುನಾಡಿನ ಜನತೆಗಾಗಿ ನಮ್ಮ ರಾಜಕೀಯ ಪಯಣ ಆರಂಭವಾಗಲಿದೆ.

ಮುಂಬರುವ 2024ರ ಸಂಸತ್ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದಿಲ್ಲ, ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನನ್ನ ಮಟ್ಟಿಗೆ ಹೇಳುವುದಾದರೆ, ರಾಜಕೀಯವು ಕೇವಲ ಇನ್ನೊಂದು ವೃತ್ತಿಯಲ್ಲ; ರಾಜಕೀಯ ನನ್ನ ಹವ್ಯಾಸವಲ್ಲ; ಅದು ನನ್ನ ಆಳವಾದ ಆಸೆ. ಅದರಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ.

ನನ್ನ ಪರವಾಗಿ, ನಾನು ಈಗಾಗಲೇ ಒಪ್ಪಿಕೊಂಡಿರುವ ಮತ್ತೊಂದು ಚಲನಚಿತ್ರ ಸಂಬಂಧಿತ ಕೆಲಸಗಳನ್ನು, ಪಕ್ಷದ ಕೆಲಸಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮುಗಿಸಿಕೊಟ್ಟ ನಂತರ, ನಾನು ಸಂಪೂರ್ಣವಾಗಿ ಜನಸೇವೆಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.  

ಸಿನಿಮಾ

 ಅರುಣ್ ಜಿ

ಮಂಗಳೂರು: ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ “ರವಿಕೆ ಪ್ರಸಂಗ” ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ. “ರವಿಕೆ ಪ್ರಸಂಗ” ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ “ರವಿಕೆ ಪ್ರಸಂಗ”. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸ‌ರ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು “ರವಿಕೆ ಪ್ರಸಂಗ” ಸಿನಿಮಾದಲ್ಲಿ ಮಾಡಿದ್ದಾರೆ.

‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

ರವಿಕೆ ಪ್ರಸಂಗ ಸಿನಿಮಾವನ್ನು ‘ಮಾಷ್೯ ಡಿಸ್ಟ್ರಿಬ್ಯುಟರ್ಸ್’ ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕತೆಯನ್ನು ಈ ಸಿನಿಮಾ ಹೊಂದಿದೆ.

ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್  ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ, ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್‌ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’.

ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ.  ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ‘ರವಿಕೆಪ್ರಸಂಗ’ ರಾಜ್ಯಾದ್ಯಂತ ತೆರೆಕಾಣಲಿದೆ.

ರಾಜಕೀಯ

ಬೆಂಗಳೂರು: ದಕ್ಷಿಣ ರಾಜ್ಯಗಳು ಅದರಲ್ಲಿಯೂ ವಿಶೇಷವಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಧರ್ಮ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಈ ಅನ್ಯಾಯ ಹೀಗೆ ಮುಂದುವರೆದರೆ, ಪ್ರತ್ಯೇಕದ ಕೂಗು ಈಗಾಗಲೇ ಎಲ್ಲಡೆಯೂ ಕೇಳಿ ಬರುತ್ತಿದೆ; ನಾನೂ ಹೇಳಿದ್ದೇನೆ. ಭಾರತೀಯ ಜನತಾ ಪಕ್ಷದವರು ನನ್ನ ಹೇಳಿಕೆಯನ್ನು ತಿರುಚುವುದರಲ್ಲಿ ನಿಸ್ಸೀಮರು. ನಮ್ಮ ರಾಜ್ಯ ಕೇಂದ್ರದ ಬೊಕ್ಕಸಕ್ಕೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಅದಕ್ಕೆ ಪ್ರತಿಯಾಗಿ ನಾವು ಪಡೆದುಕೊಂಡ ಅನುದಾನ ಕಡಿಮೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಯೋಜನೆಗಳ ವಿಚಾರದಲ್ಲಿ ಸಂಪೂರ್ಣ ಮಲತಾಯಿ ಧೋರಣೆ ನಮಗೆ ಸಿಕ್ಕಿದೆ. ಕರ್ನಾಟಕ ಭಾರತದಲ್ಲೇ ಇದೆ. ಇದನ್ನು ಒಕ್ಕೂಟ ಸರ್ಕಾರ ಮರೆಯಬಾರದು ಇದಕ್ಕೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದರೆ ನಾವು “ಪ್ರತ್ಯೇಕತಾವಾದಿ”ಗಳು! ಎಂದು ಬಣ್ಣಿಸುತ್ತಾರೆ. ಮೇಕೆದಾಟು, ಮಹದಾಯಿ, ಬರ ಪರಿಹಾರ ಇರಲಿ, ಕೇಂದ್ರ ಬಿಜೆಪಿ ಸರಕಾರ ನಮ್ಮ ಯಾವುದೇ ಸಮಸ್ಯೆಗಳಿಗೆ ಈವರೆಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.

ನಮ್ಮ ನಾಡಿನ ಭಾಷೆ ಉಳಿಸಿಕೊಳ್ಳಲು ನಾಮಫಲಕಗಳನ್ನು ಕನ್ನಡದಲ್ಲಿ ಕಡ್ಡಾಯ ಮಾಡಿದರೆ, ಅದನ್ನು ಬದಲಾಯಿಸಲು ಸುಗ್ರೀವಾಜ್ಞೆಗಳನ್ನೂ ಇವರು ರಾತ್ರೋ ರಾತ್ರಿ ತರುತ್ತಾರೆ. ದೇಶಭಕ್ತಿ, ಐಕ್ಯತೆ ಮತ್ತು ಸಮಗ್ರತೆ ಬಗ್ಗೆ ಬೋಗಸ್ ಜನತಾ ಪಾರ್ಟಿಯವರಿಂದ ಕಲಿಯುವ ದುಸ್ಥಿತಿ ನಮಗೆ ಬಂದಿಲ್ಲ, ಬರುವುದೂ ಇಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ನಿಷೇಧಿತ ಭಯೋತ್ಪಾಧಕ ಸಂಘಟನೆಯಾದ ಐಎಸ್‌ಐಎಸ್‌ಗೆ ಬೆಂಬಲ್ ಸೂಚಿಸಿ, ಟ್ವಿಟ್ಟರ್ ಮೂಲಕ ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 2,15,000/- ರೂ ದಂಡ ವಿಧಿಸಿದ ವಿಶೇಷ ನ್ಯಾಯಾಲಯ!

2014ರಲ್ಲಿ ಐಎಸ್‌ಐಎಸ್‌ ಎಂಬುವ ನಿಷೇಧಿತ ಭಯೋತ್ಪಾಧಕ ಸಂಘಟನೆಯು ಅಬೂಬಕ್ಕರ್ ಬಾಗ್ದಾದಿ ಎಂಬಾತನ ನೇತೃತ್ವದಲ್ಲಿ ಸಿರಿಯಾ ದೇಶದಲ್ಲಿ ಭಯೋತ್ಪಾದಕ ಕೃತ್ಯವನ್ನು ನಡೆಸುತ್ತಾ ಆ ದೇಶದ ಮೇಲೆ ಯುದ್ಧ ಸಾರಿದ್ದು, ಆ ಸಮಯದಲ್ಲಿ, ಪಶ್ಚಿಮ ಬಂಗಾಳ ಮೂಲದ ಮೆಹದಿ ಮೆಸ್ರೂಸ್ ಬಿಸ್ವಾಸ್ ಎಂಬಾತನು ಬೆಂಗಳೂರು ನಗರದ ಗಂಗಮ್ಮನಗುಡಿ ಪೊಲೀಸ್ ಠಾಣೆಯ ಸರಹದ್ದಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಮಾಡಿಕೊಂಡು, “SAMY WITNESS” ಎಂಬುವ ಟ್ವಿಟ್ಟರ್ ಖಾತೆಯ ಮೂಲಕ ಐಎಸ್‌ಐಎಸ್‌ ಉಗ್ರರಿಗೆ ಬೆಂಬಲವನ್ನು ಸೂಚಿಸುತ್ತಾ, ಐಎಸ್‌ಐಎಸ್ ಸಂಘಟನೆಗೆ ಹಲವಾರು ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದನು.

ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ್ದ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂಧಿಗಳು ದಾಳಿ ಮಾಡಿ, ಆರೋಪಿ ಮೆಹದಿ ಮೆಸ್ರೂರ್ ಬಿಸ್ವಾಸ್‌ನನ್ನು ದಸ್ತಗಿರಿ ಮಾಡಿರುತ್ತಾರೆ. ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣ ತನಿಖೆಯನ್ನು ಸಿಸಿಬಿ ಘಟಕದ ಹಿಂದಿನ ಸಹಾಯಕ ಪೊಲೀಸ್ ಕಮೀಷನರ್ ಎಂ.ಕೆ.ತಿಮ್ಮಯ್ಯ ಮತ್ತು ಅವರ ತಂಡದವರು ಕೈಗೊಂಡು, ಆರೋಪಿಯು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಲ್ಯಾಪ್‌ಟ್ಯಾಪ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಂದ ಆರೋಪಿತನು ಕೃತ್ಯವೆಸಗಿರುವ ಬಗ್ಗೆ ಸಾವಿರಾರು ಪುಟಗಳ ದಾಖಲೆಗಳನ್ನು ಸಂಗ್ರಹಿಸಿ, ಅಮೆರಿಕಾ ದೇಶದಲ್ಲಿರುವ ಟ್ವಿಟ್ಟರ್ ಸಂಸ್ಥೆಯಿಂದ ದಾಖಲಾತಿಗಳನ್ನು ಸಂಗ್ರಹಿಸುತ್ತಾರೆ.

ನಂತರ ಈ ಪ್ರಕರಣದಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ (ಸಿಸಿಹೆಚ್-50) ಸುಮಾರು 37 ಸಾವಿರ ಪುಟಗಳ ದಾಖಲಾತಿಗಳನ್ನೊಳಗೊಂಡ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ವಿಶೇಷ ನ್ಯಾಯಾಲಯದಲ್ಲಿ, ಪ್ರಕರಣ ಸಂಖ್ಯೆ: ಎಸ್.ಸಿ. ನಂ.272/2016 ರಲ್ಲಿ ವಿಚಾರಣೆ ನಡೆದು ದಿನಾಂಕ: 25.01.2024 ರಂದು ಆರೋಪಿತನಿಗೆ 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 2 ಲಕ್ಷ 15 ಸಾವಿರ ರೂಪಾಯಿಗಳು ದಂಡ ವಿಧಿಸಿರುತ್ತದೆ.

ಈ ಪ್ರಕರಣವು ದೇಶದಲ್ಲಿಯೇ ಐಎಸ್‌ಐಎಸ್‌ ಭಯೋತ್ಪಾದಕ ಸಂಘಟನೆಯ ವಿರುದ್ಧ ದಾಖಲಾಗಿದ್ದ ಮೊದಲ ಪ್ರಕರಣವಾಗಿರುವುದು ಗಮನಾರ್ಹ.

ಈ ಪ್ರಕರಣದಲ್ಲಿ ಎಸಿಪಿ ಎಂ.ಕೆ.ತಮ್ಮಯ್ಯ ತನಿಖಾಧಿಕಾರಿಗಳಾಗಿದ್ದು, ನ್ಯಾಯಾಲಯದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಬಿಕ್ಕಣ್ಣನವರ್ ಸರ್ಕಾರದ ಪರವಾಗಿ ವಾದವನ್ನು ಮಂಡಿಸಿದ್ದರು. ಈ ಪ್ರಕರಣವನ್ನು ಭಯೋತ್ಪಾದಕ ನಿಗ್ರಹ ದಳದ (ಎಟಿಸಿ) ಎಸಿಪಿ ಬಿ.ಆರ್.ವೇಣುಗೋಪಾಲ್ ಹಾಗೂ ಅವರ ತಂಡದವರು ನ್ಯಾಯಾಲಯದ ದಿನನಿತ್ಯದ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸಿ, ಈ ಪ್ರಕರಣದಲ್ಲಿ ಆರೀಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

ರಾಜಕೀಯ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಐದು ಗ್ಯಾರಂಟಿಗಳು ರದ್ದಾಗುತ್ತವೆ ಎಂದು ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಹೇಳಿರುವುದು ಕಾಂಗ್ರೆಸ್ ಸರಕಾರದ ಅಸಲಿ ಆಲೋಚನೆಯನ್ನು ಬಯಲು ಮಾಡಿದೆ. ಕೊಟ್ಟ ಕೈಯ್ಯಲ್ಲೆ ಕಸಿದುಕೊಳ್ಳುವ ಹುನ್ನಾರ ಇಲ್ಲಿ ಸ್ಫುಟವಾಗಿ ಗೋಚರಿಸುತ್ತಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.  

ಪಕ್ಷ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಅಪ್ಪಣೆ ಇಲ್ಲದೆ ಶಾಸಕರು ಇಂಥ ಮಹತ್ವದ ಹೇಳಿಕೆಯನ್ನು ಅದೂ ಚುನಾವಣೆ ಹೊತ್ತಿನಲ್ಲಿ ಕೊಡಲು ಸಾಧ್ಯವೇ? ಅಲ್ಲಿಗೆ ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಒದ್ದಾಡುತ್ತಿರುವ ಸರಕಾರವು, ತನ್ನ ಶಾಸಕರೊಬ್ಬರ ಮೂಲಕ ರದ್ದು ಮಾಡುತ್ತೇವೆ ಎಂದು ಹೇಳಿಸಿದೆ ಎಂದೇ ಭಾವಿಸಬೇಕಾಗುತ್ತದೆ. ಅದು ನಿಜವೂ ಹೌದು ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಾರೆ.

ಆ ಶಾಸಕರ ಹೇಳಿಕೆಯ ಧಾಟಿ ಹೇಗಿದೆ ಎಂದರೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಇಲ್ಲವಾದರೆ ನಿಮಗೆ ಕೊಟ್ಟಿರುವ ಗ್ಯಾರಂಟಿಗಳನ್ನು ಮುಲಾಜಿಲ್ಲದೆ ರದ್ದು ಮಾಡುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡುವ ಧಾಟಿಯಲ್ಲಿದೆ ಇದು ಪ್ರಜಾಪ್ರಭುತ್ವಕ್ಕೆ, ಜನರ ನಂಬಿಕೆಗೆ ಎಸಗಿದ ಅಪಚಾರವಾಗಿದೆ ಎಂದು ಕಿಡಿಕಾರಿದ್ದಾರೆ.

ಆ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ನೀವು ಪಂಚ ಗ್ಯಾರಂಟಿಗಳ ಭರವಸೆ ಕೊಟ್ಟಿದ್ದಿರಿ. ಆಮೇಲೆ ಅವುಗಳನ್ನು ಜಾರಿ ಮಾಡಿದ್ದೀರಿ. ‘ಗ್ಯಾರಂಟಿ ಕೊಡಿ, ನಿಮಗೆ ವೋಟು ಹಾಕುತ್ತೇವೆ’ ಎಂದು ಜನರೇನು ಕೇಳಿರಲಿಲ್ಲ. ವಾಸ್ತವ ಸ್ಥಿತಿ ಹೀಗಿದ್ದ ಮೇಲೆ ಈಗ ಗ್ಯಾರಂಟಿಗಳನ್ನು ಅದ್ಹೇಗೆ ವಾಪಸ್ ಪಡೆಯುತ್ತೀರಿ? ಕಾಂಗ್ರೆಸ್ ಸರಕಾರದ ವರ್ತನೆಗೆ ನನ್ನ ಹಾಗೂ ನಮ್ಮ ಪಕ್ಷದ ತೀವ್ರ ವಿರೋಧವಿದೆ ಎಂದು ಹೇಳಿದ್ದಾರೆ.  

ದೇಶ

ನವದೆಹಲಿ: 2024-25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರಿಂದ ತಿಂಗಳಿಗೆ ರೂ.15 ಸಾವಿರದಿಂದ ರೂ.18 ಸಾವಿರ ವರೆಗೆ ಆದಾಯ ಗಳಿಸಬಹುದು ಎಂದು ಹೇಳಿದ್ದಾರೆ.

ಇನ್ನೂ ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. “ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಮುಂದಿನ 5 ವರ್ಷಗಳಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಮುಂದಿನ 5 ವರ್ಷಗಳು ಅಭಿವೃದ್ಧಿಗಾಗಿ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬಜೆಟ್‌ನ ಮುಖ್ಯಾಂಶಗಳು:
ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು.
ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು.
ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು.
ಪೌಷ್ಟಿಕಾಂಶದ ಕೊರತೆಯನ್ನು ಸರಿಪಡಿಸಲು ಹೊಸ ಆ್ಯಪ್‌ ಪರಿಚಯಿಸಲಾಗುವುದು.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 18 ವರ್ಷದೊಳಗಿನ ಬಾಲಕಿಯರಿಗೆ ಲಸಿಕೆ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು.

1 ಲಕ್ಷ ಕೋಟಿ ರೂ:
ಸಂಶೋಧನೆ ಮತ್ತು ನಾವೀನ್ಯತೆ ಯೋಜನೆಗಳನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ವಿನಿಯೋಗಿಸಲಾಗುವುದು.
ಮೀನುಗಾರಿಕೆ ಕ್ಷೇತ್ರದಲ್ಲಿ 55 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮಾ ಯೋಜನೆ ವಿಸ್ತರಿಸಲಾಗುವುದು.
ದೇಶಾದ್ಯಂತ 41 ಸಾವಿರ ಕೋಚ್‌ಗಳನ್ನು ವಂದೇ ಭಾರತ್ ರೈಲು ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು.
ಸರಕು ರೈಲು ಸಂಚಾರಕ್ಕಾಗಿ ಪ್ರತ್ಯೇಕವಾಗಿ ಲೈನ್‌ಗಳನ್ನು ನಿರ್ವಹಿಸಲಾಗುವುದು.
ಮೆಟ್ರೊ ರೈಲು ಯೋಜನೆಗಳನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುವುದು.

ಪ್ರವಾಸೋದ್ಯಮ:
ದೇಶದ ವಿಮಾನಯಾನ ಸಂಸ್ಥೆಗಳು 1000 ಹೊಸ ವಿಮಾನಗಳನ್ನು ಖರೀದಿಸಲು ಯೋಜಿಸುತ್ತಿವೆ.
ಉಡಾನ್ ಯೋಜನೆಯಡಿಯಲ್ಲಿ 517 ಹೊಸ ಮಾರ್ಗಗಳಲ್ಲಿ ಕಡಿಮೆ ದರದ ವಿಮಾನಯಾನ ಸೇವೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ಲಕ್ಷದ್ವೀಪವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುವುದು.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಡ್ಡಿ ರಹಿತ ಸಾಲ ಯೋಜನೆ ಜಾರಿಗೊಳಿಸಲಾಗುವುದು.
ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ವಿವಿಧ ಯೋಜನೆಗಳನ್ನು ಪರಿಚಯಿಸಲಾಗುವುದು.

ವಿತ್ತೀಯ ಕೊರತೆ:
2023-24ರ ಪರಿಷ್ಕೃತ ಅಂದಾಜಿನ ಪ್ರಕಾರ ಸರ್ಕಾರದ ವೆಚ್ಚ 40.90 ಲಕ್ಷ ಕೋಟಿ ರೂಪಾಯಿಗಳು.
2024-2025ರಲ್ಲಿ ದೇಶದ ವಿತ್ತೀಯ ಕೊರತೆ 5.1 ರೊಳಗೆ ನಿಯಂತ್ರಿಸಲಾಗುವುದು.
2025-26 ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇಕಡಾ 4.5 ಕ್ಕಿಂತ ಕಡಿಮೆ ಮಾಡಲು ಯೋಜಿಸಲಾಗುವುದು.
10 ವರ್ಷಗಳಲ್ಲಿ ತೆರಿಗೆದಾರರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ.

ರಕ್ಷಣಾ ಇಲಾಖೆ:
ರಕ್ಷಣಾ ವಲಯದಲ್ಲಿನ ಹೂಡಿಕೆಯನ್ನು ಶೇ 11.1ರಷ್ಟು ಹೆಚ್ಚಿಸಿ 11,11,111 ಕೋಟಿ ರೂ.ಗೆ ಹೆಚ್ಚಿಸಲಾಗುವುದು.
ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಒಟ್ಟು ದೇಶೀಯ ಬೆಳವಣಿಗೆಯಾದ ಜಿಡಿಪಿಯ ಶೇ.3.4%ರಷ್ಟು ಇರುತ್ತದೆ.

ದೇಶ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರನ್ ಅವರನ್ನು ನಿನ್ನೆ ರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಏಳು ಗಂಟೆಗಳ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಹಿನ್ನಲೆಯಲ್ಲಿ, ಜಾರಿ ಇಲಾಖೆಯ ಕ್ರಮದ ವಿರುದ್ಧ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ರಾತ್ರಿ ಬಂಧನವಾದ ನಂತರ, ಅವರು ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಸಂದೇಶದಲ್ಲಿ, “ಇದೊಂದು ವಿರಾಮ. ಜೀವನವು ಒಂದು ದೊಡ್ಡ ಯುದ್ಧವಾಗಿದೆ. ನಾನು ಪ್ರತಿ ಕ್ಷಣವೂ ಹೋರಾಡಿದೆ; ಪ್ರತಿ ಕ್ಷಣವೂ ಹೋರಾಡುತ್ತೇನೆ. ಆದರೆ, ನಾನು ರಾಜಿ ಮಾಡಿಕೊಳ್ಳಲು ಮಂಡಿಯೂರುವುದಿಲ್ಲ” ಎಂದು ಹೇಳಿದ್ದಾರೆ.

“ಸೋಲು ಅಥವಾ ಗೆಲವು ನಾನು ಯಾವುದಕ್ಕೂ ಹೆದರುವುದಿಲ್ಲ; ನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಮಂತ್ ಸೋರೆನ್ ಹೇಳಿದ್ದಾರೆ.