ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
April 2024 » Page 2 of 6 » Dynamic Leader
October 23, 2024
Home 2024 April (Page 2)
ರಾಜಕೀಯ

“ಮೋದಿಯವರು 16 ಲಕ್ಷ ಕೋಟಿ ರೂಪಾಯಿಗಳಷ್ಟು ಜನರ ಹಣವನ್ನು 5 ಶ್ರೀಮಂತರಿಗೆ ನೀಡಿದ್ದಾರೆ. ಅದರಲ್ಲಿ ಒಂದಿಷ್ಟು ಹಣ ಪಡೆದು ಶೇ.90ರಷ್ಟು ಜನರಿಗೆ ನೀಡುತ್ತೇವೆ.” – ರಾಹುಲ್ ಗಾಂಧಿ 

ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಜನರ ಆಸ್ತಿ ಕಿತ್ತುಕೊಳ್ಳುತ್ತಿದೆ ಎಂದು ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳನ್ನು ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆಯನ್ನು ನೋಡೋಣ.

ಛತ್ತೀಸ್‌ಗಢದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,

“ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕಡಿತಗೊಳಿಸಿ, ಅದನ್ನು ಕಿತ್ತುಕೊಂಡು ಕಾಂಗ್ರೆಸ್‌ ತನ್ನ ಬೆಂಬಲಿಗರಿಗೆ ನೀಡಲಿದೆ. ಅಂಬೇಡ್ಕರ್ ಅವರು ತಂದಿದ್ದ ಕಾಯಿದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾದ ಅಧಿಕಾರವನ್ನು ತೆಗೆದುಹಾಕುತ್ತದೆ.” ಎಂದು ಹೇಳಿದರು.

ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ,

“ಯಾವುದೇ ಅಧಿಕಾರ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಅಥವಾ ಪಂಗಡವಿಲ್ಲ. ಉನ್ನತ ಹುದ್ದೆಯಲ್ಲೂ ಅವರಿಲ್ಲ. ಮಾಧ್ಯಮಗಳಲ್ಲಿ, ಆಸ್ಪತ್ರೆಗಳಲ್ಲಿ, ದೊಡ್ಡ ಕಂಪನಿಗಳಲ್ಲಿ ಎಲ್ಲಿ ನೋಡಿದರೂ ಅವರು ಕಾಣುವುದಿಲ್ಲ. ಅಂದರೆ ಶೇಕಡ 90ರಷ್ಟು ಮಂದಿ ಇಲ್ಲ.” ಎಂದರು.

ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,

“ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ, ದೇಶದ ಪ್ರತೊಯೊಂದು ಮನೆಯನ್ನು, ಅಲಮಾರಿಯನ್ನು, ಪ್ರತಿಯೊಬ್ಬ ವ್ಯಕ್ತಿಯನ್ನು ಎಕ್ಸ್-ರೇ ಮಾಡಿ ಅವರು ಹೊಂದಿರುವ ಅಲ್ಪ ಸ್ವಲ್ಪ ಆಸ್ತಿಯ ಮೇಲೂ ಕಾಂಗ್ರೆಸ್ ತೆರಿಗೆ ವಿಧಿಸುತ್ತದೆ.”

ರಾಹುಲ್ ಗಾಂಧಿ:
“ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಮ್ಮೆ ಚೆನ್ನಾಗಿ ನೋಡಿ. ಇದು ಒಳ್ಳೆಯದು ಎಂದು ನಿಮಗೆ ಅನಿಸುತ್ತದೆ. ಅದರಲ್ಲಿ ಎಕ್ಸ್-ರೇ ಇದೆ. ಅದು ಏನಂದರೆ, ಮೋದಿಯವರು 16 ಲಕ್ಷ ಕೋಟಿ ರೂಪಾಯಿಗಳಷ್ಟು ಜನರ ಹಣವನ್ನು 5 ಶ್ರೀಮಂತರಿಗೆ ನೀಡಿದ್ದಾರೆ. ಅದರಲ್ಲಿ ಒಂದಿಷ್ಟು ಹಣ ಪಡೆದು ಶೇ.90ರಷ್ಟು ಜನರಿಗೆ ನೀಡುತ್ತೇವೆ.”

ನರೇಂದ್ರ ಮೋದಿ:
“ನೀವು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ನಿಮ್ಮ ಮಕ್ಕಳು ಅನುಭವಿಸಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಅದನ್ನು ಕಸಿದುಕೊಳ್ಳುತ್ತದೆ. ಭ್ರಷ್ಟಾಚಾರವೂ ಮಾಡುತ್ತದೆ. ಭ್ರಷ್ಟಾಚಾರವೇ ಕಾಂಗ್ರೆಸ್ ಮಂತ್ರ. ಅವರು ಸತ್ತರೂ ಅಥವಾ ಬದುಕಿದ್ದರೂ ಅದನ್ನು ಮಾಡುತ್ತಾರೆ.”

ರಾಹುಲ್ ಗಾಂಧಿ:
“ನಾನು ನಿಮಗೆ ಮೊದಲು ಹೇಳಿದಂತೆ, ಕಾಂಗ್ರೆಸ್ ಪ್ರಣಾಳಿಕೆ ರಾಜಕೀಯಕ್ಕಾಗಿ ಅಲ್ಲ. ಅದೇ ನಮ್ಮ ಜೀವನದ ಗುರಿ. ಇದು ನಮ್ಮ ಗ್ಯಾರಂಟಿ. ನೀವು ಬರೆದಿಟ್ಟುಕೊಳ್ಳಿ. ನಾವು ಇದನ್ನು ಸಾಧಿಸುತ್ತೇವೆ.”

ಹೀಗೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮಾತಿನ ಸಮರದಲ್ಲಿ ತೊಡಗಿದ್ದಾರೆ.

ರಾಜಕೀಯ

ರಾಯ್‌ಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಾವಿನ ನಂತರವೂ ಜನರಿಂದ ತೆರಿಗೆ ಸಂಗ್ರಹಿಸಲು ಕಾಂಗ್ರೆಸ್ ಯೋಜಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಛತ್ತೀಸ್‌ಗಢದ ಸರ್ಗುಜಾದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಧಃಪತನಕ್ಕೆ ಕಾಂಗ್ರೆಸ್‌ನ ದುರಾಡಳಿತ ಮತ್ತು ನಿರಾಸಕ್ತಿಯೇ ಕಾರಣ. ಇಂದು ಬಿಜೆಪಿ, ಭಯೋತ್ಪಾದನೆ ಮತ್ತು ನಕ್ಸಲಿಸಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಹಿಂಸಾಚಾರವನ್ನು ಹರಡುವ ಜನರನ್ನು ಧೈರ್ಯಶಾಲಿ ಎಂದು ಕರೆಯುವ ಮೂಲಕ ಕಾಂಗ್ರೆಸ್ ಬೆಂಬಲಿಸುತ್ತದೆ. ಭಯೋತ್ಪಾದಕರು ಹತರಾದಾಗ ಕಣ್ಣೀರು ಸುರಿಸುತ್ತಿದ್ದು, ಇಂತಹ ಕೃತ್ಯಗಳಿಂದ ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ.

ಆಂಧ್ರಪ್ರದೇಶದಲ್ಲಿ ಧಾರ್ಮಿಕ ಮೀಸಲಾತಿ ಕಲ್ಪಿಸಲು ಕಾಂಗ್ರೆಸ್ ಹಲವು ವರ್ಷಗಳ ಹಿಂದೆಯೇ ಪ್ರಯತ್ನಿಸಿತ್ತು. ನಂತರ ಇದನ್ನು ದೇಶಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಯೋಜಿಸಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಅಪಾಯಕ್ಕೆ ಸಿಲುಕಲಿದೆ. ದೇಶದಲ್ಲಿ ಕೆಳವರ್ಗದವರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ಕೊಡುತ್ತಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಧಾರ್ಮಿಕ ಮೀಸಲಾತಿಗೆ ಅವಕಾಶ ನೀಡುವುದಿಲ್ಲ.

ಸಾವಿನ ನಂತರವೂ ಜನರಿಂದ ತೆರಿಗೆ ಸಂಗ್ರಹಿಸಲು ಕಾಂಗ್ರೆಸ್ ಯೋಜಿಸಿದೆ. ಕಾಂಗ್ರೆಸ್ ಪಕ್ಷ ದೇಶದ ಜನರ ಆಸ್ತಿ ಕಿತ್ತುಕೊಳ್ಳಲು ಪ್ಲಾನ್ ಮಾಡಿದೆ. ಪಕ್ಷವು ದೇಶದ ಬಡವರ ಆಸ್ತಿ ಪಾಸ್ತಿಗಳ ಮೇಲೆ ಕಣ್ಣಿಟ್ಟಿದೆ. ಜನರ ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಮತ್ತು ಹಣವನ್ನು ಕಸಿದುಕೊಳ್ಳಲು ಯೋಜಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.

ರಾಜಕೀಯ

ಬೆಂಗಳೂರು: ಮುಸ್ಲಿಂ ಸಮುದಾಯದ ವಿರುದ್ಧ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ದ್ವೇಷ ಭಾಷಣ ಅವರ ಹತಾಶ ಮನಸ್ಥಿತಿಯನ್ನು ತೋರಿಸುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ‘ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ’ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಮೊದಲ ಹಂತದ ಮತದಾನದ ಬಳಿಕ ಪ್ರಧಾನಿಗಳಿಗೆ ಸೋಲಿನ ವಾಸನೆ ಬಡಿದಿರಬಹುದು. ಸುಳ್ಳು ಹೇಳಿ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಧಾನಿಗಳ ಬಗ್ಗೆ ಜನರಿಗೆ ಅರಿವಾಗತೊಡಗಿದೆ. ಬೇರೆ ದಾರಿ ಕಾಣದೆ ಚುನಾವಣಾ ಪ್ರಚಾರ ಸಭೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸತೊಡಗಿದ್ದಾರೆ.

ಮುಸ್ಲಿಮರು ನುಸುಳುಕೋರರು ಅವರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಅವರಿಗೆ ದೇಶದ ವೈಯಕ್ತಿಕ ಸಂಪತ್ತನ್ನು ಕಾಂಗ್ರೆಸ್ ಹಂಚುತ್ತಿದೆ ಎಂಬ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿ ಪ್ರಧಾನಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ. ಇದೆಂತಹಾ ಸಬ್ಕಾ ಸಾತ್ ಸಬ್ ಕಾ ವಿಕಾಸ್? ಎಂದು ಕಿಡಿಕಾರಿದ್ದಾರೆ.

ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರಗಿಸಬೇಕು. ಚುನಾವಣಾ ಆಯೋಗವು ನ್ಯಾಯೋಚಿತ ರೀತಿಯಲ್ಲಿ ವರ್ತಿಸಬೇಕು. ದೇಶದ ಸ್ವಾಸ್ಥ್ಯ ಕೆಡಿಸುವ  ಪ್ರಧಾನಿಗಳ ಶ್ರಮ ಅಪಾಯಕಾರಿ. ಅಲ್ಪಸಂಖ್ಯಾತ ಸಮುದಾಯದ ಜನರನ್ನು ನಿಂಧಿಸಿ ಬಹುಸಂಖ್ಯಾತ ಸಮುದಾಯವನ್ನು ಎತ್ತಿ ಕಟ್ಟುವ ಈ ಪ್ರಧಾನಿಗಳಿಂದ ದೇಶ ಹೇಗೆ ಉದ್ದಾರವಾದೀತು? ಮತದಾರರು ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕ್ರೈಂ ರಿಪೋರ್ಟ್ಸ್

ಡಿ.ಸಿ.ಪ್ರಕಾಶ್ ಸಂಪಾದಕರು

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬೆನ್ನಲ್ಲೇ ಕೋಮು ಘರ್ಷಣೆ, ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಮನವಮಿ ದಿನದಂದು ಜೈ ಶ್ರೀರಾಂ ಘೋಷಣೇ ಕೂಗಿದ್ದವರ ಮೇಲೆ ಹಲ್ಲೆ ಮಾಡಲಾಗಿತ್ತು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಬಳಿಕ ನೇಹಾ ಹತ್ಯೆಯಾಗಿದೆ. ಇದೀಗ ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ದಲಿತ ಯುವಕನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ. ಅದುಮಾತ್ರವಲ್ಲ, ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಆರೋಪಿಗೆ ಶಿಕ್ಷೆ ಕೊಡಿಸುವ ಸಲುವಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಷ್ಟರಲ್ಲಾಗಲೇ, ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ಮುಸ್ಲಿಂ ಯುವಕನೊಬ್ಬ ದಲಿತ ಯುವಕನನ್ನು ಹತ್ಯೆ ಮಾಡಿದ್ದಾನೆ. ರಾಕೇಶ್ (22) ಕೊಲೆಯಾದ ಯುವಕ. ರೊಟ್ಟಿ ಕೇಂದ್ರದ ಸದಸ್ಯ ಫಯಾಜ್ ಸೇರಿದಂತೆ ನಾಲ್ವರು ಕೃತ್ಯ ಎಸಗಿದ್ದಾರೆ.

ನಿನ್ನೆ ರಾತ್ರಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ರಾಕೇಶ್ ಹೋಗಿದ್ದ. ಇದೇ ವೇಳೆ ರೊಟ್ಟಿ ಕೇಂದ್ರದ ಫಯಾಜ್ ಜೊತೆ ಜಗಳವಾಗಿದೆ. ರಾಕೇಶ್ ಮನೆಗೆ ಮರಳಿದ ನಂತರ ಮತ್ತೆ ಜಗಳವಾಗಿದ್ದು, ಈ ವೇಳೆ ರಾಕೇಶ್​ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಮಾಡಲಾಗಿದೆ.

ಮೇಲಿನ ಎರಡೂ ಪ್ರಕರಣಗಳಲ್ಲಿ, ಕೊಲೆ ಮಾಡಿದವರು ಯಾರೇ ಆಗಿದ್ದರು ಕಾನೂನಿನಡಿಯಲ್ಲಿ ಶಿಕ್ಷೆ ಆಗಲಿದೆ. ಕಾನೂನಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ ಎಂಬ ಭೇದಭಾವ ಇರುವುದಿಲ್ಲ. ಇದರಲ್ಲಿ ಜಾತಿ, ಧರ್ಮ ಬೆರಸುವುದೇಕೆ? ಅಮಾಯಕರ ಸಾವು ನೋವುಗಳ ಮೇಲೆ ರಾಜಕೀಯ ಲೆಕ್ಕಾಚಾರ ಮಾಡುತ್ತಿರುವ ನಾಚಿಕೆಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಬದಿಗೊತ್ತಿ ಮಾನವೀಯತೆಗೆ ಆದ್ಯತೆ ಕೊಡಿ.

ಪ್ರತಿಭಾರಿಯೂ ಹಿಂದೂ-ಮುಸ್ಲಿಂ ಎಂದು ದ್ವೇಶಕಾರುತ್ತಿರುವ ಕೋಮು ಮನಸ್ಥಿತಿಯ ಮತಾಂಧ ಶಕ್ತಿಗಳು, ಇದೀಗ ದಲಿತ-ಮುಸ್ಲಿಂ ಎಂಬ ಹೊಸ ವರೆಸೆಯನ್ನು ಕೈಗೆತ್ತಿಕೊಂಡಿದೆ. ಪ್ರತಿಯೊಂದನ್ನೂ ಹಿಂದೂ-ಮುಸ್ಲಿಂ ಹಿನ್ನಲೆಯಿಂದಲೇ ನೋಡುವ ಕಾಮಾಲೆ ಕಣ್ಣುಗಳಿಗೆ ರಾಕೇಶ್ ಹಿಂದೂ ಯುವಕ ಎಂದು ಏಕೆ ಗೊತ್ತಾಗುತ್ತಿಲ್ಲ.

ಚುನಾವಣೆ ಸಂದರ್ಭದಲ್ಲಿ ನಡೆದಿರುವ ವೈಯಕ್ತಿಕ ಕೊಲೆಗಳನ್ನು ರಾಜಕೀಯ ಗೊಳಿಸುತ್ತಿರುವ ಮತಾಂಧ ಶಕ್ತಿಗಳು, ರಾಕೇಶ್ ಕೊಲೆಯನ್ನು ದಲಿತ-ಮುಸ್ಲಿಂ ಬಾಂಧವ್ಯವನ್ನು ಹಾಳುಗೆಡವಲು ಬಳಸುತ್ತಿದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ದಲಿತರು ಮತ್ತು ಅಲ್ಪಸಂಖ್ಯಾತರು ಇಂತಹ ಕುತಂತ್ರಗಳಿಗೆ ಬಲಿಯಾಗಬಾರದು. ಅದೇ ಸಂದರ್ಭದಲ್ಲಿ, ದಲಿತ ಯುವಕ ರಾಕೇಶನ ಸಾವಿಗೆ ನ್ಯಾಯ ಸಿಗಬೇಕು; ಫಯಾಜ್ ಮತ್ತು ಇತರರಿಗೆ ಶಿಕ್ಷೆ ಆಗಲೇಬೇಕು. ಇದು ನಮ್ಮ ಒತ್ತಾಯ!

ಲೇಖನ

ಡಿ.ಸಿ.ಪ್ರಕಾಶ್ ಸಂಪಾದಕರು

ಭಾರತೀಯ ಜನತಾ ಪಕ್ಷವು “ವಂದೇ ಭಾರತ್ ಎಕ್ಸ್‌ಪ್ರೆಸ್” ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳಲ್ಲಿ ಒಂದೆಂದು ಪ್ರಚಾರ ಮಾಡುತ್ತಿದೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಂದೇ ಭಾರತ್ ರೈಲು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲು ಹೊರಟಿದೆ ಎಂದು ತೋರುತ್ತದೆ.

ಭಾರತವನ್ನು ಸಂಪರ್ಕಿಸುವಲ್ಲಿ ರೈಲ್ವೆಯ ಪಾತ್ರ ಮಹತ್ವದ್ದಾಗಿದೆ. ಈ ಹಿಂದೆ ರೈಲ್ವೆ ಇಲಾಖೆಗೆ ಪ್ರತ್ಯೇಕ ಬಜೆಟ್ ಮಂಡಿಸಲಾಗಿತ್ತು. ಅಷ್ಟರಮಟ್ಟಿಗೆ ಸರಕಾರ ರೈಲ್ವೇ ಕ್ಷೇತ್ರಕ್ಕೆ ಮಹತ್ವ ನೀಡಿತ್ತು. ಆದರೆ ಮೋದಿ ನೇತೃತ್ವದ ಭಾರತೀಯ ಜನತಾ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಅಸ್ತವ್ಯಸ್ತಗೊಳಿಸಿದಂತೆ ರೈಲ್ವೆ ಕ್ಷೇತ್ರವನ್ನೂ ಅಸ್ತವ್ಯಸ್ತಗೊಳಿಸುವ ಕೆಲಸವನ್ನು ಮಾಡಿದೆ.

ನಿರ್ದಿಷ್ಟವಾಗಿ, ಪ್ರತ್ಯೇಕ ರೈಲ್ವೆ ಬಜೆಟ್ ಅನ್ನು ರದ್ದುಗೊಳಿಸಿ ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಿತು. ಇದರಿಂದಾಗಿ ರೈಲ್ವೇ ಕ್ಷೇತ್ರಕ್ಕೆ ನೀಡಲಾಗಿದ್ದ ವಿಶೇಷ ಪ್ರಾಮುಖ್ಯತೆ ಹಾಗೂ ವಿವಿಧ ಪಕ್ಷಗಳ ಬೇಡಿಕೆಗಳು ನಿರಾಕರಿಸಲಾಯಿತು. ರೈಲ್ವೆ ಕ್ಷೇತ್ರವನ್ನೂ ಖಾಸಗೀಕರಣಗೊಳಿಸಲು ಮೋದಿ ಸರಕಾರ ನಾನಾ ತಂತ್ರಗಳನ್ನು ಮಾಡುತ್ತಿದೆ. ಅದರಲ್ಲೂ ರೈಲ್ವೇ ನಿಲ್ದಾಣಗಳ ನಿರ್ವಹಣೆ, ರೈಲು ಕಾಯ್ದಿರಿಸುವಿಕೆ ಸೌಲಭ್ಯ, ರೈಲ್ವೆ ಕೋಚ್ ಫ್ಯಾಕ್ಟರಿ, ಮೀಸಲು ಮಾರ್ಗದ ಸಿದ್ಧತೆ ಸೇರಿದಂತೆ ಪ್ರತಿಯೊಂದನ್ನೂ ಪ್ರತ್ಯೇಕಿಸಿ ಸಂಪೂರ್ಣವಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಕೆಲಸ ಮಾಡಲಾಗುತ್ತಿದೆ.

ಇದರಿಂದ ರೈಲ್ವೆ ವಲಯದಲ್ಲಿ ಖಾಲಿ ಇರುವ ಲಕ್ಷಗಟ್ಟಲೆ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿಯೂ ಉದ್ಯೋಗ ಕಡಿತ ಮಾಡಲಾಗುತ್ತಿದೆ. ರೈಲ್ವೆ ವಲಯವನ್ನು ಮೋದಿ ಸರಕಾರ ನಿರ್ಲಕ್ಷಿಸಿದ ಪರಿಣಾಮ, ಒಡಿಶಾ ರಾಜ್ಯದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಸುಮಾರು 300 ಮಂದಿಯನ್ನು ಬಲಿ ತೆಗೆದುಕೊಂಡಿತು. ಇದಲ್ಲದೇ ದೇಶದ ನಾನಾ ಭಾಗಗಳಲ್ಲಿ ರೈಲುಗಳು ಹಳಿ ತಪ್ಪುವುದು, ಅಪಘಾತಗಳಲ್ಲಿ ಸಿಲುಕಿಕೊಳ್ಳುವುದೆಲ್ಲವೂ ಸಾಮಾನ್ಯ ಸಂಗತಿಯಾಗಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ರೈಲ್ವೆಯು ಕೊರೋನಾ ಸ್ಥಗಿತದ ಅವಧಿಯನ್ನು ಅವಕಾಶವಾಗಿ ಬಳಸಿಕೊಂಡು ಪ್ರಯಾಣಿಕರ ಸೇವೆಗಳಿಗೂ ಅಡ್ಡಿಪಡಿಸಿತು. ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲುಗಳನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಿತು. ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳೆಂದು ಘೋಷಿಸಿ ಪ್ರಯಾಣ ದರವನ್ನು ಹೆಚ್ಚಿಸಿತು.

ಇದರೊಂದಿಗೆ ಸ್ಲೀಪಿಂಗ್ ಸೌಲಭ್ಯದೊಂದಿಗೆ ಕಾಯ್ದಿರಿಸಿದ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಪ್ರತಿ ರೈಲಿನಲ್ಲಿ ಹವಾನಿಯಂತ್ರಿತ ಬೋಗಿಗಳೊಂದಿಗೆ ಕಾಯ್ದಿರಿಸಿದ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿ ಪ್ರಯಾಣ ದರವನ್ನು ಸಹ ಹಲವಾರು ಬಾರಿ ಹೆಚ್ಚಿಸಿದೆ. ಭಾರತದಾದ್ಯಂತ ಸಾವಿರಾರು ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ರೈಲುಗಳಲ್ಲಿ ಕಾಯ್ದಿರಿಸದ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ.

ಪರಿಣಾಮವಾಗಿ, ಲಕ್ಷಾಂತರ ಸಾಮಾನ್ಯ ಬಡ ಜನರು, ವಿಶೇಷವಾಗಿ ವಲಸೆ ಕಾರ್ಮಿಕರು, ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ಪ್ರಯಾಣವನ್ನು ಕೈಗೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿ ದರವನ್ನು ಸಹ ರದ್ದುಗೊಳಿಸಲಾಗಿದೆ.

ಇಂತಹ ಎಲ್ಲಾ ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ಮುಚ್ಚಿಹಾಕಲು ಸ್ವತಃ ಪ್ರಧಾನಿ ಮೋದಿಯವರೇ ವಂದೇ ಭಾರತ್ ಹೆಸರಿನಲ್ಲಿ 140, 160 ಕಿಲೋಮೀಟರ್ ವೇಗದಲ್ಲಿ ಓಡಬಲ್ಲ ಹೈಸ್ಪೀಡ್ ರೈಲುಗಳನ್ನು ನೇರವಾಗಿ ಹಲವು ರೈಲು ನಿಲ್ದಾಣಗಳಲ್ಲಿ ಪರಿಚಯಿಸಿದರು. ಆದರೆ ಭಾರೀ ಪ್ರಚಾರದ ವಂದೇ ಭಾರತ್ ರೈಲುಗಳು ಕೂಡ ನಿಯಮಿತ ವೇಗದಲ್ಲೇ ಚಲಿಸುವ ರೈಲುಗಳಾಗಿತ್ತು ಎಂಬುದು ಗಮನಾರ್ಹ.

ಇವುಗಳನ್ನು ಹೈಸ್ಪೀಡ್ ರೈಲುಗಳಾಗಿ ಪ್ರಸ್ತುತಪಡಿಸಲು, ಇತರ ರೈಲುಗಳನ್ನು ಕಡಿಮೆ ವೇಗದಲ್ಲಿ ಓಡಿಸುವಂತೆ ಮಾಡಲಾಯಿತು. ಇದರಿಂದ ಮೋದಿ ಸರ್ಕಾರದ ವಂದೇ ಭಾರತ್‌ನ ಮಹಾ ಅಭಿಯಾನವು ಭಾರಿ ವೈಫಲ್ಯದಲ್ಲಿ ಕೊನೆಗೊಂಡಿದೆ. ಇದು ಒಂದೆಡೆಯಾದರೆ, ವಂದೇ ಭಾರತ್ ರೈಲಿನ ಕಾರಣವನ್ನು ಹೇಳಿ ದೇಶಾದ್ಯಂತ ನೂರಾರು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ.

ಇದರಿಂದ ಸಾಮಾನ್ಯ ಬಡವರ ರೈಲು ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಸಾಂದರ್ಭಿಕ ವರದಿಗಳು ಬರುತ್ತಿದ್ದರೂ ಮೋದಿ ಮಾಧ್ಯಮಗಳು ಅಷ್ಟಾಗಿ ಗಮನಹರಿಸುತ್ತಿಲ್ಲ. ಆದಾಗ್ಯೂ, ಮೊದಲ ಹಂತದ ಸಂಸತ್ ಚುನಾವಣೆಯ ಮತದಾನ ಮುಗಿದಿದ್ದು, ರೈಲ್ವೆ ಸೇವೆಯ ಲೋಪವನ್ನು ನೇರವಾಗಿ ಅನುಭವಿಸಿದ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಕಾಯ್ದಿರಿಸದ ಬೋಗಿಗಳಲ್ಲಿ ತುಂಬಿ ತುಳುಕುತ್ತಿದ್ದ ಕಾರಣ ಕೆಲವು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಗಳನ್ನು ಹತ್ತುತ್ತಿದ್ದರು.ಇದೀಗ ಎರಡನೇ ದರ್ಜೆಯ ಕಾಯ್ದಿರಿಸಿದ ಬೋಗಿಗಳಲ್ಲಿ ಮಾತ್ರವಲ್ಲದೇ ಮೂರನೇ ದರ್ಜೆಯ ಹವಾನಿಯಂತ್ರಿತ, ಎರಡನೇ ದರ್ಜೆಯ ಹವಾನಿಯಂತ್ರಿತ ಬೋಗಿಗಳಲ್ಲೂ ಬುಕ್ ಮಾಡದ ಪ್ರಯಾಣಿಕರು ಇಕ್ಕಟ್ಟಾದ ಸ್ಥಿತಿಯಲ್ಲಿ ಪ್ರವೇಶಿಸಿ ಪ್ರಯಾಣಿಸುತ್ತಿದ್ದಾರೆ.

ಕಾಯ್ದಿರಿಸುವಿಕೆ ಶುಲ್ಕ ಪಾವತಿಸಿದ ಪ್ರಯಾಣಿಕರೂ ಸರಿಯಾದ ಸೌಲಭ್ಯಗಳನ್ನು ಪಡೆಯಲು ಪರದಾಡುತ್ತಿದ್ದಾರೆ. ಇತರೆ ಪ್ರಯಾಣಿಕರು ಊರಿಗೆ ಹೋದರೆ ಸಾಕು ಎಂಬುದಕ್ಕಾಗಿ ಲಭ್ಯವಿರುವ ಕೋಚ್‌ಗಳಿಗೆ ಸಿಲುಕಿ ಬಿಕ್ಕಟ್ಟಿನಲ್ಲಿ ಪ್ರಯಾಣಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ದಾಖಲಾಗುತ್ತಿದೆ.

ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಎಕ್ಸ್ (ಟ್ವಿಟರ್) ಸೈಟ್‌ನಲ್ಲಿ ದಾಖಲಿಸಲಾಗಿದೆ. ಬಿಜೆಪಿ ಬೆಂಬಲಿಗನಾಗಿದ್ದ ಬಿಹಾರದ ಕಾರ್ಮಿಕನೊಬ್ಬ, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಮೊದಲ ಹಂತದ ಮತದಾನದ ವೇಳೆ ಅವರು ಬಿಹಾರದ ತಮ್ಮ ಊರಿಗೆ ಮತ ಚಲಾಯಿಸಲು ರೈಲಿನಲ್ಲಿ 29 ಗಂಟೆ ಪ್ರಯಾಣ ಬೆಳಸಿದ್ದರು. ಈ ಪ್ರವಾಸದ ವೇಳೆ ರೈಲ್ವೇ ಕ್ಷೇತ್ರದ ಸೇವೆಯ ಕೊರತೆಯ ಸಂಕಟವನ್ನು ಸಹಿಸಲಾಗದೆ ನೇರವಾಗಿ ಮತಗಟ್ಟೆಗೆ ತೆರಳಿ ಬಿಜೆಪಿಗೆ ಮತ ಹಾಕದೇ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕಿರುವುದಾಗಿ ತಮ್ಮ ಗೆಳೆಯನಿಗೆ ತಿಳಿಸಿದ್ದಾರೆ.

ಅಂತೆಯೇ ವಿವಿಧ ರೈಲುಗಳಲ್ಲಿ ಮತದಾನ ಮಾಡಲು ತೆರಳಿದ್ದ ಪ್ರಯಾಣಿಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರೈಲ್ವೇಯನ್ನು ಖಾಸಗೀಕರಣಗೊಳಿಸುವ ಮೋದಿ ಸರಕಾರದ ಉದಾರ ನೀತಿಯ ಪರಿಣಾಮವಾಗಿ, ಲಕ್ಷಾಂತರ ಪ್ರಯಾಣಿಕರು ತಮ್ಮ ಅನುಭವದಲ್ಲಿ ಅದನ್ನು ನೇರವಾಗಿ ಅನುಭವಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದ ಪರವಾಗಿ ಮತ ಚಲಾಯಿಸುವ ಮೂಲಕ ಅವರು ಅದನ್ನು ದೃಢಪಡಿಸಿದ್ದಾರೆ. ಹಾಗಾಗಿ ರೈಲ್ವೇಯನ್ನು ಅಸ್ತವ್ಯಸ್ತಗೊಳಿಸಿ ವಂದೇ ಭಾರತ್ ರೈಲು ಬಿಡುವ ಮೂಲಕ ಜನರನ್ನು ವಂಚಿಸಬಹುದು ಎಂದುಕೊಂಡ ಮೋದಿ ಸರಕಾರವನ್ನು ಅದೇ “ವಂದೇ ಭಾರತ್” ರೈಲು ಮತ್ತು “ವಲಸೆ ಕಾರ್ಮಿಕರು” ಅಧಿಕಾರದಿಂದ ಕೆಳಗಿಳಿಸಿ, ಮನೆಗೆ ಕಳುಹಿಸಿಕೊಡುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ರಾಜಕೀಯ

ಕೋಲಾರ: ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಆಯೋಜಿಸಿದ್ದ ರೋಡ್ ಶೋನಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರಿಗೆ ಮತ ನೀಡುವಂತೆ ಮನವಿ ಮಾಡಿ ಮಾತನಾಡಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಇಡೀ ದೇಶದ ಯುವಕ, ಯುವತಿಯರಿಗೆ ನಂಬಿಸಿದರು. ನರೇಂದ್ರ ಮೋದಿ ಅವರ ಮಾತನ್ನು ನಂಬಿ ಯುವ ಸಮೂಹ ಮತ ಹಾಕಿತು. ಹೀಗೆ ಮತ ಹಾಕಿದವರೆಲ್ಲಾ ಡಿಗ್ರಿ ಮುಗಿಸಿ ಕೆಲ್ಸ ಕೊಡಿ ಎಂದು ಕೇಳಿದರೆ, “ಹೋಗಿ ಪಕೋಡ ಮಾರಾಟ ಮಾಡಿ” ಅಂದರು. ನಿರುದ್ಯೋಗಿ ಯುವಕ, ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿಯೇ ಪ್ರಧಾನಿ ಆಗಬೇಕಿತ್ತಾ? ಎಂದು ಕಿಡಿ ಕಾರಿದರು.

ಮೋದಿಯವರು ಪ್ರಧಾನಿಯಾಗಿರಲು ನಾಲಾಯಕ್ ಎಂದು ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ. ಇಂಥಾ ನಾಲಾಯಕ್ ಗೆ ಮತ ಹಾಕ್ತೀರಾ? ಹತ್ತತ್ತು ವರ್ಷ ಮತ ಹಾಕಿದ್ದೀರ ನಿಮಗೆ, ದೇಶಕ್ಕೆ ಏನಾದ್ರೂ ಸಿಕ್ಕಿತಾ? ಈ ಹತ್ತು ವರ್ಷದಲ್ಲಿ ಏನೇನೂ ಕೊಡದವರು ಈ ಬಾರಿ ನಿಮ್ಮ ಮತ ಕೇಳುತ್ತಿದ್ದಾರೆ, ಹೀಗೆ ಮತ ಕೇಳುವ ಯೋಗ್ಯತೆಯಾಗಲೀ, ಅರ್ಹತೆಯಾಗಲೀ ಬಿಜೆಪಿ ಅವರಿಗೆ ಇದೆಯೇ? ಪ್ರಶ್ನಿಸಿದರು.

ನಾಲಾಯಕ್ ನರೇಂದ್ರಮೋದಿ ಅವರು ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ?‌ ಹೀಗಾಗಿ ಬಿಜೆಪಿಯ ಖಾಲಿ ಚೊಂಬಿಗೆ ಮತ ಹಾಕ್ತೀರಾ? ನಿಮ್ಮ ಜೇಬು ತುಂಬಿಸುವ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿ ನುಡಿದಂತೆ ನಡೆಯುವ ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ತೀರೋ? ಎನ್ನುವುದನ್ನು ಯೋಚಿಸಿ ತೀರ್ಮಾನಿಸಿ ಎಂದು ಹೇಳಿದರು.

ವಿದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಒಡೆತನದ ಟೆಸ್ಲಾ, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ವಿಶ್ವದ ಅಗ್ರಗಣ್ಯವಾಗಿದೆ. ಕಂಪನಿಯ ಕಾರ್ಖಾನೆಗಳು ಪ್ರಪಂಚದ ವಿವಿಧ ದೇಶಗಳಲ್ಲಿವೆ. ಏತನ್ಮಧ್ಯೆ, ಎಲೋನ್ ಮಸ್ಕ್ ಭಾರತದಲ್ಲಿಯೂ ಟೆಸ್ಲಾ ಕಂಪೆನಿಯನ್ನು ಸ್ಥಾಪಿಸಲು ನಿರ್ಧರಿಸಿದ್ದರು. ಅದರಂತೆ, ತಮಿಳುನಾಡು, ಮಹಾರಾಷ್ಟ್ರ ಅಥವಾ ಗುಜರಾತ್‌ನಲ್ಲಿ ಅತಿದೊಡ್ಡ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯನ್ನು ಸ್ಥಾಪಿಸಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ, ಅಂಬಾನಿ ಕಂಪನಿಯೊಂದಿಗೆ ಸೇರಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವಂತೆ ಎಲೋನ್ ಮಸ್ಕ್ ಅವರಿಗೆ ಒತ್ತಾಯಿಸಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಗಳಿಗಾಗಿ ಅವರು ಭಾರತಕ್ಕೆ ಬರಲು ಯೋಜಿಸಿದ್ದರು.

ಆದರೆ, ಅವರು ಅಮೆರಿಕಾದಿಂದ ಹೊರಡುವ ಕೆಲವೇ ಗಂಟೆಗಳ ಮೊದಲು ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ, ಎಲೋನ್ ಮಸ್ಕ್ ಅವರ ಭಾರತ ಪ್ರವಾಸವನ್ನು ಇದ್ದಕ್ಕಿದ್ದಂತೆ ಮುಂದೂಡಲಾಗಿದೆ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ. “ಟೆಸ್ಲಾದಲ್ಲಿನ ಕೆಲಸದ ಹೊರೆಯಿಂದಾಗಿ ದುರದೃಷ್ಟವಶಾತ್ ಭಾರತ ಪ್ರವಾಸವು ವಿಳಂಬವಾಗಿದೆ. ಆದರೂ ನಾನು ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಹೋಗುತ್ತೇನೆ” ಎಂದು ಹೇಳಿದ್ದಾರೆ.

ಅವರ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಅಲ್ಲದೆ, ಎಲೋನ್ ಮಸ್ಕ್ ಅವರು ಗುಜರಾತ್‌ನಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಘಟಕವನ್ನು ಸ್ಥಾಪಿಸಲು ಬಯಸುತ್ತಿಲ್ಲವೆಂದು ಮತ್ತು ವಾಹನ ಘಟಕವನ್ನು ತಮಿಳುನಾಡಿನಲ್ಲಿ ಸ್ಥಾಪಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿವೆ.

ಆದರೆ, ಈ ವಾಹನ ಘಟಕವನ್ನು ಗುಜರಾತ್‌ನಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಒತ್ತಾಯಿಸಿದ್ದರಿಂದ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಸಂಬಂಧ ಮಾತನಾಡಿದ ಭಾರತೀಯ ವಾಣಿಜ್ಯೋದ್ಯಮಿಗಳ ಸಂಘದ ಕಾರ್ಯನಿರ್ವಾಹಕ ರಘುನಾಥನ್, ‘ಎಲೋನ್ ಮಸ್ಕ್ ತಮಿಳುನಾಡಿನಲ್ಲಿ ಟೆಸ್ಲಾ ಕಾರು ಉತ್ಪಾದನಾ ಕಂಪನಿಯನ್ನು ಸ್ಥಾಪಿಸಲು ಬಯಸಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುಜರಾತ್‌ಗೆ ಸ್ಥಳಾಂತರಿಸುವಂತೆ ಒತ್ತಡ ಹೇರಿದೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ’ ಎಂದು ಹೇಳಿದ್ದಾರೆ.

ಎಲೋನ್ ಮಸ್ಕ್ ಅವರ ಭಾರತ ಭೇಟಿಯಿಂದ ಬಿಜೆಪಿ ಭಾರೀ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿತ್ತು ಎನ್ನಲಾಗಿದೆ. ಅದರಂತೆ ಭಾರತದಲ್ಲಿಯೇ ಅತಿ ದೊಡ್ಡ ಎಲೆಕ್ಟ್ರಿಕ್ ಕಾರ್ ಫ್ಯಾಕ್ಟರಿಯನ್ನು ಸ್ಥಾಪಿಸುವ ಮೂಲಕ ಉದ್ಯಮವನ್ನು ಅಭಿವೃದ್ಧಿಪಡಿಸಲು ಮೋದಿ ಪ್ರಬಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜನರಲ್ಲಿ ಬಿಂಬಿಸಲು ಬಿಜೆಪಿ ಯೋಜಿಸಿತ್ತು. ಆದರೆ ಇದೀಗ ಎಲೋನ್ ಮಸ್ಕ್ ಭೇಟಿ ರದ್ದಾಗಿರುವುದರಿಂದ ಬಿಜೆಪಿ ಮಂದಿ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ತಮ್ಮ ಟ್ವೀಟ್ ಖಾತೆಯಲ್ಲಿ, “ಎಲೋನ್ ಮಸ್ಕ್ ಕೂಡ ಭಾರತದಲ್ಲಿ ಆಡಳಿತ ಬದಲಾವಣೆಗಾಗಿ ಕಾಯುತ್ತಿದ್ದಾರೆ. ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚನೆಯಾದ ನಂತರ ನಮ್ಮ ಪ್ರಧಾನಿ ಮಸ್ಕ್ ಅವರನ್ನು ಸ್ವಾಗತಿಸುತ್ತಾರೆ” ಎಂದು ಹೇಳಿದ್ದಾರೆ.

ರಾಜಕೀಯ

ಮೊದಲ ಹಂತದ ಮತದಾನದಲ್ಲೇ ಬಿಜೆಪಿಯ ಚಿತ್ರ ವಿಫಲವಾಗಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

18ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಿನ್ನೆ 21 ರಾಜ್ಯಗಳಲ್ಲಿ 102 ಕ್ಷೇತ್ರಗಳಲ್ಲಿ ನಡೆದಿದೆ. ತಮಿಳುನಾಡು (39), ಪುದುಚೇರಿ (1), ಅರುಣಾಚಲ ಪ್ರದೇಶ (2), ಅಸ್ಸಾಂ (5), ಬಿಹಾರ (4), ಛತ್ತೀಸ್‌ಗಢ (1), ಮಧ್ಯಪ್ರದೇಶ (6), ಮಹಾರಾಷ್ಟ್ರ (5), ಮಣಿಪುರ (2), ಮೇಘಾಲಯ (2), ಮಿಜೋರಾಂ (1), ನಾಗಾಲ್ಯಾಂಡ್ (1), ರಾಜಸ್ಥಾನ (12), ಸಿಕ್ಕಿಂ (1), ತ್ರಿಪುರ (1), ಉತ್ತರ ಪ್ರದೇಶ (8), ಉತ್ತರಾಖಂಡ್ (5) , ಪಶ್ಚಿಮ ಬಂಗಾಳ (3), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಜಮ್ಮು ಮತ್ತು ಕಾಶ್ಮೀರ (1) ಮತ್ತು ಲಕ್ಷದ್ವೀಪ (1) ಮುಂತಾದ ರಾಜ್ಯಗಳಲ್ಲಿ ನಿನ್ನೆ ಮೊದಲ ಹಂತದ ಮತದಾನ ನಡೆದಿತ್ತು. ಒಟ್ಟು ಶೇ.64ರಷ್ಟು ಮತಗಳು ದಾಖಲಾಗಿವೆ.

ತಮಿಳುನಾಡಿನಲ್ಲಿ ನಿನ್ನೆ ಬೆಳಗ್ಗೆ 7 ಗಂಟೆಯಿಂದ ಬಿರುಸಿನಿಂದ ಮತದಾನ ನಡೆದಿದೆ. ಬೆಳಗ್ಗೆಯಿಂದಲೇ ಜನರು ಉತ್ಸಾಹದಿಂದ ಮತದಾನ ಮಾಡಿದರು. ತಮಿಳುನಾಡಿನಲ್ಲಿ ಶೇ.69ರಷ್ಟು ಮತದಾನವಾಗಿದೆ. ಅದೇ ರೀತಿ ಬಿಹಾರದ 4 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.47.49ರಷ್ಟು ಮತದಾನವಾಗಿದೆ.

ಈ ಹಿನ್ನಲೆಯಲ್ಲಿ, ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಅವರು ಮೊದಲ ಹಂತದ ಮತದಾನದಲ್ಲಿಯೇ ಬಿಜೆಪಿಯ ಚಿತ್ರ ಸೋತಿದೆ ಎಂದು ಹೇಳಿದ್ದಾರೆ. ತೇಜಸ್ವಿ ಯಾದವ್ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, “400 ಸ್ಥಾನಗಳು ಎಂದ ಬಿಜೆಪಿಯ ಚಿತ್ರ ಮೊದಲ ಹಂತದ ಮತದಾನದಲ್ಲೇ ವಿಫಲವಾಗಿದೆ. ಅವರ ಸುಳ್ಳಿನ ಪರ್ವತಗಳು ಮತ್ತು ವರದಿಗಳೆಲ್ಲವೂ ಕುಸಿದೋಗಿವೆ. ಬಿಜೆಪಿಯ ದಿನಗಳು ಈಗ ಮುಗಿದಿವೆ” ಎಂದು ಹೇಳಿದ್ದಾರೆ.

ಅಂತೆಯೇ, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ “ಭಾರತಕ್ಕೆ ಜಯವೇ” ಎಂದು ಹೇಳಿರುವುದು ಗಮನಾರ್ಹ.