ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
April 2024 » Page 5 of 6 » Dynamic Leader
November 25, 2024
Home 2024 April (Page 5)
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ; ಹಾಗಾಗಿ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಇದೆ. ಆದರೆ, ಯಾರೇ ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು; ಮರೆಯಬಾರದು.

ಅಖಿಲ ಕಾಂಗ್ರೆಸ್ ಸಮಿತಿಯು ಚುನಾವಣಾ ಭರವಸೆಗಳನ್ನು ಸಿದ್ಧಪಡಿಸಲು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ದೇಶದೆಲ್ಲೆಡೆ ಸಂಚರಿಸಿ ಹಲವರಿಂದ ಸಲಹೆ ಪಡೆಯಲಾಯಿತು. ವೆಬ್‌ಸೈಟ್ ಮೂಲಕವೂ ಪ್ರತಿಕ್ರಿಯೆಗಳನ್ನು ಪಡೆಯಲಾಯಿತು. ಅದರ ಆಧಾರದ ಮೇಲೆ ಭರವಸೆಗಳನ್ನು ಸಿದ್ಧಪಡಿಸಿ ಮೊನ್ನೆ ಪ್ರಕಟಿಸಲಾಯಿತು.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಆಗ ಮಾತನಾಡಿದ ಪಿ.ಚಿದಂಬರಂ, “ಕಳೆದ 10 ವರ್ಷಗಳಲ್ಲಿ ಯಾರನೆಲ್ಲ ಹೊರಗಿಡಲಾಯಿತೋ ಅಂತಹವರಿಗೆಲ್ಲ ನ್ಯಾಯ ಕೊಡಿಸಲು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ” ಎಂದರು.

ಪ್ರಣಾಳಿಕೆಯಲ್ಲಿ, ದೇಶಾದ್ಯಂತ ಸಾಮಾಜಿಕ-ಆರ್ಥಿಕ ಮತ್ತು ಜಾತಿವಾರು ಸಮೀಕ್ಷೆ ನಡೆಸಲಾಗುವುದು. ರಾಜ್ಯ ಸರ್ಕಾರಗಳು ಬಯಸಿದಲ್ಲಿ NEET, CUET ನಂತಹ ಪರೀಕ್ಷೆಗಳನ್ನು ನಡೆಸಿಕೊಳ್ಳಬಹುದು. ಪ್ರತಿ ಕುಟುಂಬದಲ್ಲಿ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡಲಾಗುವುದು. ಎಲ್ಲ ಜಾತಿಗಳಿಗೂ ಶೇ.10ರಷ್ಟು ಮೀಸಲಾತಿಯನ್ನು ವಿಸ್ತರಿಸಲಾಗುವುದು. ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರಲಾಗುವುದು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿದ ನಂತರವೇ ಜಾರಿಗೆ ತರಲಾಗುವುದು. 12ನೇ ತರಗತಿವರೆಗೆ ಕಡ್ಡಾಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಒಂದು ದೇಶ, ಒಂದು ಚುನಾವಣಾ ವ್ಯವಸ್ಥೆಯನ್ನು ತರುವುದಿಲ್ಲ. ಚುನಾವಣಾ ಪತ್ರಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು. ಎಂ.ಎಸ್.ಸ್ವಾಮಿನಾಥನ್ ಅವರ ಶಿಫಾರಸ್ಸು ಜಾರಿಗೆ ತರಲಾಗುವುದು. ಸರ್ಕಾರಿ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗುವುದು.

ಪಾಂಡಿಚೇರಿಗೆ ರಾಜ್ಯ ಸ್ಥಾನಮಾನ ನೀಡಲಾಗುವುದು. ಮಾಧ್ಯಮ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. 10 ವರ್ಷಗಳಲ್ಲಿ ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ಬಿಜೆಪಿ ಜಾರಿಗೊಳಿಸಿದ ಕಾನೂನುಗಳನ್ನು ವಿಶ್ಲೇಷಿಸಿ ಬದಲಾವಣೆಗಳನ್ನು ಮಾಡಲಾಗುವುದು. ನೋಟು ಅಮಾನ್ಯೀಕರಣ, ರಫೇಲ್ ಡೀಲ್, ಪೆಗಾಸಸ್ ಬೇಹುಗಾರಿಕೆ, ಚುನಾವಣಾ ಬಾಂಡ್ ಯೋಜನೆ ಕುರಿತು ತನಿಖೆ ನಡೆಸಲಾಗುವುದು. ಬಿಜೆಪಿ ಸೇರುವ ಮೂಲಕ ಕ್ರಿಮಿನಲ್ ಪ್ರಕರಣಗಳಿಂದ ಪಾರಾದವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು.

ಜನರ ಆಹಾರ, ಉಡುಗೆ, ಪ್ರೇಮ ವಿವಾಹ ಮತ್ತು ಭಾರತದ ಯಾವುದೇ ಭಾಗದಲ್ಲಿ ಪ್ರಯಾಣ ಬೆಳಸಿ ವಾಸಿಸುವಂತಹ ಜನರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಸೇನಾ ನೇಮಕಾತಿಗಾಗಿ ‘ಅಗ್ನಿಪತ್’ ಯೋಜನೆಯನ್ನು ರದ್ದುಗೊಳಿಸಲಾಗುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ನೀಡಲಾಗುವ ವೇತನವನ್ನು ರೂ.400ಕ್ಕೆ ಹೆಚ್ಚಿಸಲಾಗುವುದು. ಚೀನಾ ಆಕ್ರಮಿಸಿಕೊಂಡಿರುವ ನಮ್ಮ ನೆಲದ ಭಾಗವನ್ನು ಪುನಃಸ್ಥಾಪಿಸಲು ಕ್ರಮ. ಜಮ್ಮು ಮತ್ತು ಕಾಶ್ಮೀರಕ್ಕೆ ತಕ್ಷಣವೇ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲಾಗುವುದು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು.

ಕಳೆದೆರಡು ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್‌ಗೆ ಈ ಭರವಸೆಗಳು ಫಲ ನೀಡುತ್ತವೆಯೇ?
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ, ಬಯಸಿರುವ ರಾಜ್ಯಗಳಲ್ಲಿ ಮಾತ್ರ ನೀಟ್ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ. ಇದು ದೇಶಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಹಾಗಲ್ಲ; ಶಾಲೆಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕೂಡ ಅಕ್ರಮ ನಡೆಸಲಾಗುತ್ತದೆ. ಇದನ್ನು ಸಾಕ್ಷರ ಕುಟುಂಬಗಳು ಸ್ವಾಗತಿಸಿವೆ. ಜನರ ಆಹಾರ, ಉಡುಗೆ, ಪ್ರೇಮ ವಿವಾಹ ಮತ್ತು ಭಾರತದ ಯಾವುದೇ ಭಾಗದಲ್ಲಿ ಪ್ರಯಾಣ ಬೆಳಸಿ ವಾಸಿಸುವಂತಹ ಜನರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಹಾಗಾಗಿ ಇದು ಎಲ್ಲಾ ವರ್ಗದ ಜನರನ್ನು ಆಕರ್ಷಿಸಲಿದೆ. ಅದೇ ರೀತಿ ಒಂದು ಭಾಷಾ ನೀತಿಯನ್ನು ಜಾರಿಗೆ ತರಲು ಬಿಜೆಪಿ ಯೋಜಿಸಿದೆ. ಅದನ್ನು ತಡೆಯಲಿಕ್ಕಾಗಿ ಒಂದು ದೇಶ ಒಂದು ಚುನಾವಣೆಯನ್ನು ತರುವುದಿಲ್ಲ ಎಂದು ಹೇಳಲಾಗಿದೆ. ಕರ್ನಾಟಕದಂತಹ ರಾಜ್ಯಗಳಿಂದ ಹೆಚ್ಚಿನ ಯುವಕರು ಸೇನೆಗೆ ಸೇರುತ್ತಿದ್ದರು. ಅವರನ್ನು ತಡೆಯಲಿಕ್ಕಾಗಿಯೇ ‘ಅಗ್ನಿಪತ್’ ಯೋಜನೆಯನ್ನು ಜಾರಿಗೆ ತರಲಾಯಿತು.

ಅದನ್ನು ರದ್ದುಪಡಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಒಂದು ತಿಂಗಳ ಹಿಂದೆ ಪ್ರಕಟವಾದ ಸಮೀಕ್ಷೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ಹೇಳಲಾಗಿತ್ತು. ಆಗ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ, ಕೇಜ್ರಿವಾಲ್ ಬಂಧನದಂತಹ ಸಮಸ್ಯೆಗಳಿರಲಿಲ್ಲ. ಹಾಗಾಗಿ ಈಗ ಬಿಜೆಪಿ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ; ಹಾಗಾಗಿ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಇದೆ. ಆದರೆ ಯಾರೇ ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು; ಮರೆಯಬಾರದು.

ದೇಶ

ನವದೆಹಲಿ: ಜಾರಿ ಇಲಾಖೆ ಬಂಧನದ ವಿರುದ್ಧ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಪ್ರಕರಣದ ತೀರ್ಪನ್ನು ದೆಹಲಿ ಹೈಕೋರ್ಟ್ ದಿನಾಂಕವನ್ನು ನಿರ್ದಿಷ್ಟಪಡಿಸದೆ ಮುಂದೂಡಿದೆ.

ಮದ್ಯ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಕೇಜ್ರಿವಾಲ್ ಬಂಧನದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಇಂದು ನಡೆಯಿತು.

ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ತಪ್ಪಿತಸ್ಥರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ವಾದಿಸಿದರು. ನಾವು ಅಪರಾಧ ಮಾಡುತ್ತೇವೆ. ಆದರೆ ಚುನಾವಣಾ ಕಾಲವಾದ್ದರಿಂದ ನಮ್ಮನ್ನು ಬಂಧಿಸಬಾರದು ಎಂದು ಹೇಳುವ ಹಕ್ಕು ವಿಚಾರಣಾಧೀನ ಕೈದಿಗಳಿಗೆ ಇಲ್ಲ.

ಇದು ಮೂರ್ಖತನ. ಚುನಾವಣೆಗೂ ಮುನ್ನ ರಾಜಕೀಯ ವ್ಯಕ್ತಿ ಕೊಲೆ ಮಾಡಿದರೆ ಬಂಧಿಸಬಾರದೇ? ಬಂಧನ ಕ್ರಮ ಕಿರುಕುಳ ಆಗುತ್ತದೆಯೇ? ಕೊಲೆ ಮಾಡಿದ ನಂತರ ಬಂಧಿಸುವುದು ಅಪರಾಧ ಎಂದು ಹೇಳಬಹುದೇ?  ಎಂದು ವಾದಿಸಿದರು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಅವರನ್ನು ಬಂಧಿಸುವ ಏಕೈಕ ಉದ್ದೇಶ ಅವರಿಗೆ ಕಿರುಕುಳ ನೀಡುವುದು ಮತ್ತು ದೆಹಲಿಯಲ್ಲಿ ಬಿಜೆಪಿಗೆ ನಿಜವಾದ ಸವಾಲಾಗಿರುವ ಆಮ್ ಆದ್ಮಿ ಪಕ್ಷವನ್ನು ಮೌನಗೊಳಿಸುವುದು. ಆಮ್ ಆದ್ಮಿ ಪಕ್ಷವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ.

ಜಾರಿ ಇಲಾಖೆ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಚುನಾವಣೆಗೂ ಮುನ್ನ ಮುಖ್ಯಮಂತ್ರಿಯನ್ನು ಬಂಧಿಸುವುದು ಅನಗತ್ಯ ಎಂದು ವಾಗ್ದಾಳಿ ನಡೆಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು ತೀರ್ಪನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತು.

ರಾಜಕೀಯ

ಲಕ್ನೋ: ತಮ್ಮ ಕುಟುಂಬದವರನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿಯನ್ನಾಗಿ ಮಾಡುವುದೇ ವಿರೋಧ ಪಕ್ಷದ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ‘ಕಾಶ್ಮೀರ ನಮಗೆ ಸೇರಿದ್ದು. ಮೋದಿ ಎರಡನೇ ಬಾರಿಗೆ ಪ್ರಧಾನಿಯಾದಾಗ, ಅವರು 370ನೇ ವಿಧಿಯನ್ನು ರದ್ದುಗೊಳಿಸಿ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದರು. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಮೋದಿ ಶ್ರಮಿಸಿದ್ದಾರೆ. ಬಿಜೆಪಿ ಸರ್ಕಾರ ಉತ್ತರಪ್ರದೇಶದಿಂದ ಜನರ ವಲಸೆಯನ್ನು ನಿಲ್ಲಿಸಿದೆ, ಈಗ ಅಪರಾಧಿಗಳು ವಲಸೆ ಹೋಗುತ್ತಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಬೇಕು. ಅವರು ಬಡವರ, ರೈತರ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಖಿಲೇಶ್ ಯಾದವ್ ಅವರ ಪಕ್ಷ ಮತ್ತು ಕಾಂಗ್ರೆಸ್ ಎಂದಿಗೂ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಬಯಸಲಿಲ್ಲ.

“ಇಂಡಿಯಾ” ಮೈತ್ರಿಕೂಟದಲ್ಲಿರುವ ದುರಹಂಕಾರಿಗಳು 12 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿ, ಪ್ರಧಾನಿ ಮಾಡುವುದೇ ವಿರೋಧ ಪಕ್ಷಗಳ ಉದ್ದೇಶ ಎಂದು ಅವರು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ರಾಜ್ಯದ ಜನ ಬರಗಾಲದಿಂದ ತತ್ತರಿಸಿದ್ದರೂ ಸ್ಪಂದಿಸದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯ ಪ್ರವಾಸ ಮಾಡಿ ಬರ ಕುರಿತಂತೆ ವರದಿ ನೀಡಿದೆ. ಅದೇ ತಿಂಗಳಲ್ಲಿಯೇ ಮೂರು ಮನವಿಗಳನ್ನು ಸಲ್ಲಿಸಿದ್ದೇವೆ. ನಂತರ ಡಿಸೆಂಬರ್ 19 ರಂದು ನಾನು ಖುದ್ದು ಪ್ರಧಾನ ಮಂತ್ರಿಗಳನ್ನು ಹಾಗೂ 20 ರಂದು ಅಮಿತ್ ಶಾ ಅವರನ್ನು ಭೇಟಿಯಾಗಿ, ರಾಜ್ಯದ ಬರ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ತಿಳಿಸಿದ್ದೇನೆ.

ಡಿಸೆಂಬರ್ 23ಕ್ಕೆ ಉನ್ನತ ಮಟ್ಟದ ಸಮಿತಿ ಸಭೆ ನಡೆಸುವುದಾಗಿ ಅಮಿತ್ ಶಾ ಅವರು ತಿಳಿಸಿದ್ದರು. ಮನವಿ ಸಲ್ಲಿಸಿ ಐದು ತಿಂಗಳು ಕಳೆದಿದ್ದರೂ ಅವತ್ತಿಂದ, ಇವತ್ತಿನವರೆಗೂ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಬರ ಪರಿಹಾರವನ್ನು ನೀಡಿಲ್ಲ.

ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಸತ್ಯವನ್ನೂ ನಾಚಿಸುವಂತೆ ಅಪ್ಪಟ ಸುಳ್ಳು ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ನಿರೂಪಿಸಲು ಸಿದ್ಧವಿದ್ದೇನೆ. ಕೇಂದ್ರದ ಈ ಧೋರಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಕದವನ್ನೂ ತಟ್ಟಿದ್ದೇವೆ.

ದೇಶದ ವಿವಿಧೆಡೆಗಳಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡಲೆಂದು 15ನೇ ಹಣಕಾಸು ಆಯೋಗದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಕೇಂದ್ರಕ್ಕೆ ನೀಡಲಾಗಿರುತ್ತದೆ. ಎನ್‌ಡಿಆರ್‌ಎಫ್ ಹಣ ರಾಜ್ಯಗಳಿಗೆ ಸೇರಿದ್ದು. ರಾಜ್ಯದ ಜನ ಬರಗಾಲದಿಂದ ತತ್ತರಿಸಿದ್ದರೂ ಸ್ಪಂದಿಸದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶ

ಬೆಂಗಳೂರು: ಕೇಂದ್ರ ಸರ್ಕಾರ  ಬರ ಪರಿಹಾರ ಕೊಡುತ್ತಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದ್ದು, ಮಧ್ಯಪ್ರವೇಶಿಸಿ ಬರ ಪರಿಹಾರ ಬಿಡುಗಡೆ ಮಾಡಿಸುವಂತೆ ಸುಪ್ರೀಂ ಕೋರ್ಟ್​ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆ.

ಕೇಂದ್ರ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ಆದಾಗ ರಾಜ್ಯ ಸರ್ಕಾರಕ್ಕೆ ಸ್ಪಂದಿಸಬೇಕು. ಅದಕ್ಕಾಗಿ ವಿಪತ್ತು ನಿರ್ವಹಣೆ ಕಾಯ್ದೆ ತರಲಾಗಿದೆ. ಈ ಕಾಯ್ದೆ ಕೂಡ ಅದನ್ನೇ ಹೇಳುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, 223 ತಾಲೂಕನ್ನು‌ ಬರಪೀಡಿತ ಅಂತ ಘೋಷಣೆ‌ ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ಕೃಷಿ, ತೋಟಗಾರಿಕಾ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ  ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಮಾದರಿಯಲ್ಲೇ ತಮಿಳುನಾಡು ಕೂಡ ಇದೀಗ ಮಧ್ಯಂತರ ಪ್ರವಾಹ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ಸಲ್ಲಿಸಿದೆ.

ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ದಕ್ಷಿಣದ ಜಿಲ್ಲೆಗಳು ಮತ್ತು ಚೆನ್ನೈಗೆ ಮಧ್ಯಂತರ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡುಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪ್ರವಾಹ ಪರಿಹಾರ ಕೋರಿ ಪತ್ರ ಬರೆದಿರುವುದು ಗಮನಾರ್ಹ.

ವೆಲ್ಲೂರು ಜಿಲ್ಲೆಯ ಕೋಟೆ (Fort) ಮೈದಾನದಲ್ಲಿ ನಿನ್ನೆ ಡಿಎಂಕೆ ಮೈತ್ರಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆ ನಡೆಯಿತು. ಇದರಲ್ಲಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ನಾವೂ ಕೂಡ ಪ್ರವಾಹ ಪರಿಹಾರ ಕೇಳಿದ್ದೇವೆ; ಸಿಕ್ಕಿಲ್ಲ. ನಾಳೆ (ಇಂದು) ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಲಿದ್ದೇವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ದೇಶ

ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಧಾನಿ ಮೋದಿ ಪ್ರಚಾರದಲ್ಲಿ ಮಾತನಾಡುತ್ತಿರುವ ಹಾಗೆ ಬಿಂಬಿಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕಾರಣಿಗಳು ಬಿಜೆಪಿ ಸೇರಿದ ಮೇಲೆ ಅವರ ವಿರುದ್ಧದ ಪ್ರಕರಣಗಳನ್ನು ಮುಚ್ಚಿ ಹಾಕುವುದನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಟೀಕಿಸುತ್ತಿದೆ. ಮುಂದುವರಿದು, ಮೋದಿ ವಾಷಿಂಗ್ ಪೌಡರ್ ಮತ್ತು ಬಿಜೆಪಿ ವಾಷಿಂಗ್ ಮೆಷಿನ್ ಅನ್ನು ಕಾಂಗ್ರೆಸ್ ಪಕ್ಷ ಪರಿಚಯಿಸಿ ಟೀಕಿಸಿದೆ.

ವಾಷಿಂಗ್ ಮೆಷಿನ್ ಬೆಲೆ 8,552 ಕೋಟಿ ರೂಪಾಯಿ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಇದು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದ ಮೊತ್ತವಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಮ್ಮ ಎಕ್ಸ್ ಪೇಜ್ ನಲ್ಲಿ ಪ್ರಧಾನಿ ಮೋದಿ ಪ್ರಚಾರದಲ್ಲಿ ಮಾತನಾಡುತ್ತಿರುವ ಹಾಗೆ ಬಿಂಬಿಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಅದರಲ್ಲಿ “ಈಗ ವಾಷಿಂಗ್ ಮಷಿನ್‌ಗಳನ್ನು ಮತ್ತು  ಚುನಾವಣಾ ಬಾಂಡ್‌ಗಳನ್ನು ತಂದಿದ್ದೇವೆ. ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ಪೇಟಿಎಂ (Paytm) ತರುವುದಿಲ್ಲ. ನೇರವಾಗಿ ಪ್ರಧಾನಿಗೆ ಹಣ ಸಂದಾಯ ಆಗುವ ಪೇಪಿಎಂ (PayPM) ಯೋಜನೆಯನ್ನು ತರುತ್ತೇವೆ” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.

ರಾಜಕೀಯ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜನರ ಧ್ವನಿ, ಸಂವಿಧಾನ ರಕ್ಷಣೆಯ ಧ್ವನಿ, ರಾಜ್ಯದ ಪರವಾದ ಧ್ವನಿ, ಸಾಮಾಜಿಕ ನ್ಯಾಯದ ಧ್ವನಿ, ಇವರು ನಮ್ಮ-ನಿಮ್ಮಲ್ಲರ ಧ್ವನಿಯಾಗಿ ಸಂಸತ್ತಿಗೆ ಹೋಗ್ತಾರೆ. ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲಿಸಿ ಕಳಿಸೋಣ ಎಂದು ಹೇಳಿದರು.

ನಮ್ಮ ಅಭ್ಯರ್ಥಿ ಎಂ.ಲಕ್ಷ್ಮಣ್ ಸಾಮಾನ್ಯ ಒಕ್ಕಲಿಗ ಕುಟುಂಬದಿಂದ ಬಂದು, ಶ್ರಮದಿಂದ ಮೇಲೆ ಬಂದ ಕಾರ್ಯಕರ್ತ. ಇವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರವನ್ನು ವ್ಯಾಪಕವಾಗಿ ಮಾಡುತ್ತಿದ್ದಾರೆ. ಆದರೆ, ಎಂ.ಲಕ್ಷ್ಮಣ್ ಅವರು ಅಪ್ಪಟ ಒಕ್ಕಲಿಗರು. ಬಿಜೆಪಿ ಒಕ್ಕಲಿಗರಿಗೆ ಟಿಕೆಟ್ ತಪ್ಪಿಸಿದೆ ಎನ್ನುವ ಅಸಮಾಧಾನ ಹಲವರಲ್ಲಿದೆ, ಆ ಕಾರಣಕ್ಕೇ ಲಕ್ಷ್ಮಣ್ ಅವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸುಳ್ಳು ಮತ್ತು ಅಪಪ್ರಚಾರವನ್ನು ನಂಬಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನಮ್ಮ ನಾಡಿಗೆ ಪ್ರವಾಹ ಬಂದಾಗ ನರೇಂದ್ರ ಮೋದಿ ಬರಲಿಲ್ಲ; ಬರಗಾಲ ಬಂದಾಗಲೂ ಮೋದಿ ಬರಲಿಲ್ಲ. ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗಲೂ ಮೋದಿ ಬರಲಿಲ್ಲ; ಚುನಾವಣೆ ಬಂತು ನೋಡಿ – ಮೋದಿ ರಾಜ್ಯಕ್ಕೆ ಮೇಲಿಂದ ಮೇಲೆ ಬರ್ತಾರೆ ಎಂದು ವ್ಯಂಗ್ಯವಾಡಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿದ್ದೇ ಬಿಜೆಪಿ. ಹಾಗಂತ ಇದೇ ಕುಮಾರಸ್ವಾಮಿ ಬಯ್ಯುತ್ತಿದ್ದರು. ಈಗ ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಆದ್ದರಿಂದ ಇವರು ತಮ್ಮ ಪಕ್ಷದ ಹೆಸರಿನಲ್ಲಿರುವ ಸೆಕ್ಯುಲರ್ ಪದವನ್ನು ಕಿತ್ತಾಕೋದು ಉತ್ತಮ ಎಂದೆ. ಇಷ್ಟು ಹೇಳಿದ್ದಕ್ಕೇ ದೇವೇಗೌಡರು ಸಿದ್ದರಾಮಯ್ಯರಿಗೆ ಗರ್ವ ಇದೆ ಎನ್ನುತ್ತಿದ್ದಾರೆ.

ದೇವೇಗೌಡರ ಕುರಿತ ನಮಗಿರುವುದು ರಾಜಕೀಯ ವಿರೋಧ ಮಾತ್ರ. ನಿಮ್ಮ ರಾಜಕೀಯ ನಿಲುವುಗಳಿಗೆ ಮಾಡುವ ವಿರೋಧ. ಯಾವುದೇ ಕಾರಣಕ್ಕೂ ದೇವೇಗೌಡರ ಬಗ್ಗೆ ವೈಯುಕ್ತಿಕ ವಿರೋಧ ಇಲ್ಲವೇ ಇಲ್ಲ. ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರನ್ನೂ ಬಳಸಿ ಬಿಸಾಡಿದ ಜೆಡಿಎಸ್ ನವರು, ನನ್ನನ್ನೂ ಪಕ್ಷದಿಂದ ಹೊರಗೆ ಹಾಕಿದರು. ಇದೇ ರೀತಿ ಹಲವು ನಾಯಕರನ್ನು ಬಳಸಿ ಬಿಸಾಕಿದ್ದಾರೆ. ಇವರ ಈ ರಾಜಕೀಯ ವರ್ತನೆಗೆ ಮಾತ್ರ ನಮ್ಮ ವಿರೋಧ ಎಂದು ಪುನರುಚ್ಚಿಸಿದರು.

ಆದ್ದರಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಕಣ್ಣೀರಿಗೆ ಮರಳಾಗದೆ, ಅವರ ಮಾತುಗಳನ್ನು, ಅವರ ವರ್ತನೆಯನ್ನು, ಪದೇ ಪದೇ ಬದಲಾಗುವ ಅವರ ನಿಲುವುಗಳನ್ನು ಪ್ರಶ್ನಿಸಿ ಪ್ರಭುದ್ಧವಾದ ಮತ್ತು ಖಚಿತವಾದ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕು. ಮೈಸೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮಾಡಿದ, ನಾನು ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಣ ಮುಂದಿವೆ. ಬಿಜೆಪಿ, ಜೆಡಿಎಸ್ ಸರ್ಕಾರದಲ್ಲಿ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಲಿ ಎಂದು ಸವಾಲೆಸದರು.

ಪಶು ಸಂಗೋಪನಾ ಸಚಿವರಾದ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್,‌ ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಮತ್ತು ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರು ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇಶ

ಜಾರಿ ಇಲಾಖೆಯಿಂದ ಬಂಧಿಸಲಾದ ದೆಹಲಿ ಸಂಸದ ಸಂಜಯ್ ಸಿಂಗ್‌ಗೆ 6 ತಿಂಗಳ ನಂತರ ಜಾಮೀನು ನೀಡಲಾಗಿದೆ.

ನವದೆಹಲಿ: ಮದ್ಯ ನೀತಿಯ ದುರ್ಬಳಕೆ ಪ್ರಕರಣವು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ದೊಡ್ಡ ಬಿಕ್ಕಟ್ಟನ್ನು ಉಂಟುಮಾಡಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮುಂತಾದ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಈ ಹಿನ್ನೆಲೆಯಲ್ಲಿ ದೆಹಲಿ ಸಂಸದ ಸಂಜಯ್ ಸಿಂಗ್ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇಂದು ವಿಚಾರಣೆಗೆ ಬಂದಿತ್ತು. ಆಗ ಸಂಜಯ್ ಸಿಂಗ್‌ಗೆ ಜಾಮೀನು ನೀಡಲು ಜಾರಿ ನಿರ್ದೇಶನಾಲಯ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ನಂತರ ಸುಪ್ರೀಂ ಕೋರ್ಟ್ ಸಂಜಯ್ ಸಿಂಗ್‌ಗೆ ಜಾಮೀನು ನೀಡಿತು. ಈ ಆದೇಶವನ್ನು ಇತರ ಪ್ರಕರಣಗಳಿಗೆ ಮುನ್ನ ನಿದರ್ಶನವಾಗಿ ತೆಗೆದುಕೊಳ್ಳಬಾರದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ದೆಹಲಿ ಸಂಸದ ಸಂಜಯ್ ಸಿಂಗ್ ಅವರನ್ನು ಕಳೆದ ವರ್ಷ ಅಕ್ಟೋಬರ್ 4 ರಂದು ಜಾರಿ ಇಲಾಖೆ ಬಂಧಿಸಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂಜಯ್ ಸಿಂಗ್ ಅವರಿಗೆ 6 ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಂಸತ್ ಚುನಾವಣೆಯ ಹೊಸ್ತಿಲಲ್ಲಿ ಸಂಜಯ್ ಸಿಂಗ್ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವುದು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

ರಾಜ್ಯ

ಬೆಂಗಳೂರು: ಶತಮಾನದ ಶ್ರೇಷ್ಠ ಸುಳ್ಳುಗಾರ ಪ್ರಧಾನಿ ಮೋದಿಯವರ ಬಾಯಲಿ ಬರುವ ಸುಳ್ಳುಗಳು‌ ಒಂದೇ ಎರಡೇ.? ಸುಳ್ಳನ್ನೇ ಹಾಸು ಹೊದ್ದು‌ ಮಲಗಿರುವ ಮೋದಿಯವರು ‘ಕಚ್ಚತೀವು’ ದ್ವೀಪವನ್ನು ಕಾಂಗ್ರೆಸ್ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದೆ ಎಂಬ ಹಸಿ ಸುಳ್ಳು ಹೇಳಿ ನಗೆಪಾಟಲಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಪರ್ಯಾಸವೆಂದರೆ ಪ್ರಧಾನಿಯವರು ಕಚ್ಚತೀವು ದ್ವೀಪದ ಬಗ್ಗೆ ಸುಳ್ಳು ಹೇಳಿಕೊಂಡು ಅಲೆದಾಡುತ್ತಿದ್ದರೆ, ಅತ್ತ ಚೀನಾ ಅರುಣಾಚಲ ಪ್ರದೇಶದ 30 ಊರುಗಳಿಗೆ ತನ್ನ ಹೆಸರು ನಾಮಕರಣ ಮಾಡಿಕೊಂಡಿದೆ. ಈ ಮೂಲಕ ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನಿಸುತ್ತಿದೆ. ಸುಳ್ಳಿನ ಸರದಾರರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಚುನಾವಣೆಯ ಹೊತ್ತಿನಲ್ಲಿ ‘ಕಚ್ಚತೀವು’ ದ್ವೀಪದ ಪ್ರಸ್ತಾಪ ಮಾಡುತ್ತಿರುವ ಮೋದಿಯವರು, ಚೀನಾ ನಮ್ಮ ದೇಶದ ಭೂ ಭಾಗವನ್ನು ಅಕ್ರಮಿಸುತ್ತಿರುವ ಬಗ್ಗೆ ಎಂದಾದರೂ ಬಾಯಿ ಬಿಟ್ಟಿದಾರೆಯೇ.? ಕಳೆದ ಹತ್ತು‌ ವರ್ಷಗಳಿಂದ ಗಡಿ ವಿಚಾರದಲ್ಲಿ‌ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ ಎಂದು ಹೇಳಿದ್ದಾರೆ.

ಆದರೆ ಚೀನಾದ ತಗಾದೆ ವಿರುದ್ಧ ಅಂಧಭಕ್ತರ ಪಾಲಿನ 56 ಇಂಚಿನ ಎದೆಯ ಶೂರ ಒಮ್ಮೆಯಾದರೂ ಮಾತನಾಡುವ ಧೈರ್ಯ ತೋರಿಸಿದ್ದಾರೆಯೇ? ಉತ್ತರ ಕುಮಾರನಂತೆ ವಿಪಕ್ಷಗಳ ಎದುರು ಪೌರುಷ ತೋರಿಸುವ ಮೋದಿಯವರು ಚೀನಾದ ವಿಚಾರದಲ್ಲಿ ‘ಡರ್‌ಪೋಕ್‌’ ಆಗುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಚೀನಾದ ವಿರುದ್ಧ ಪೌರುಷ ತೋರಿಸಲು‌ ಮೋದಿಯವರ 56 ಇಂಚಿನ ಎದೆಯಲ್ಲಿ ಧಮ್ ಇಲ್ಲವೆ? ಕೇಳಿದ್ದಾರೆ.

ರಾಜ್ಯ

ಬೆಂಗಳೂರು: ನರೇಂದ್ರ ಮೋದಿ ಸರ್ಕಾರ ಜುಜುಬಿ ರೂ.12,000 ಕೊಟ್ಟು ಅದಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಹೆಸರಿಟ್ಟಿರುವುದೇ ನಾಚಿಕೆಗೇಡು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರತಿ ಫಲಾನುಭವಿಗೆ ಒಂದೂವರೆ ಲಕ್ಷ ರೂಪಾಯಿ ಕೊಡುತ್ತದೆ. ರಾಜ್ಯ ಸರ್ಕಾರ 1 ಲಕ್ಷದ 28 ಸಾವಿರ ಕೊಡುತ್ತಿತ್ತು. ಉಳಿದ 3.80 ಲಕ್ಷ ರೂಪಾಯಿಯನ್ನು ಫಲಾನುಭವಿ ಕೊಡಬೇಕಿತ್ತು.

ಕೇಂದ್ರ ಸರ್ಕಾರ ಈ ಯೋಜನೆಯಡಿ ನೀಡಲಾದ ಪ್ರತಿ ಮನೆಗೆ 18% ರಂತೆ ಜಿಎಸ್‌ಟಿ ವಸೂಲಿ ಮಾಡುತ್ತದೆ. ಅಂದರೆ ಪ್ರತಿ ಕೊಳೆಗೇರಿ ಮನೆಗೆ 1 ಲಕ್ಷದ 38 ಸಾವಿರ ರೂಪಾಯಿಯನ್ನು ಜಿಎಸ್‌ಟಿ ಹೆಸರಲ್ಲಿ ಸಂಗ್ರಹಿಸುತ್ತದೆ. ಒಂದೂವರೆ ಲಕ್ಷ ರೂಪಾಯಿ ಸಹಾಯಧನ ಕೊಟ್ಟು, ಅದರಲ್ಲಿ 1 ಲಕ್ಷದ 38 ಸಾವಿರ ರೂಪಾಯಿ ವಾಪಾಸ್ ವಸೂಲಿ ಮಾಡಿದರೆ ಕೊಟ್ಟಿದ್ದು 12 ಸಾವಿರ ರೂಪಾಯಿ ಮಾತ್ರ.

ಕೊಳೆಗೇರಿ ನಿವಾಸಿಗಳಿಂದಲೂ 18% ಜಿಎಸ್‌‌ಟಿ ಸುಲಿಗೆ ಮಾಡುವ ಕ್ರಮ ಬಹಳ ಬೇಸರ ತಂದಿತು. ಹೀಗಾಗಿ ಪ್ರತಿಯೊಬ್ಬ ಫಲಾನುಭವಿ ಕಟ್ಟಬೇಕಿದ್ದ ಅವರ ಪಾಲಿನ 3 ಲಕ್ಷ 80 ಸಾವಿರ ರೂಪಾಯಿಯಲ್ಲಿ 1 ಲಕ್ಷ ಮಾತ್ರ ಅವರಿಂದ ಕಟ್ಟಿಸಿಕೊಂಡು ಉಳಿದ ಹಣವನ್ನು ನಮ್ಮ ಸರ್ಕಾರದಿಂದಲೇ ಕಟ್ಟಲು ನಿರ್ಧರಿಸಿದೆ. ಹೀಗಾಗಿ ಪ್ರತಿ ಕೊಳೆಗೇರಿ ಮನೆಗೆ 4 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ನಮ್ಮ ರಾಜ್ಯ ಸರ್ಕಾರ ಕಟ್ಟುತ್ತಿದೆ.

ನರೇಂದ್ರ ಮೋದಿ ಸರ್ಕಾರ ಜುಜುಬಿ ರೂ.12,000 ಕೊಟ್ಟು ಅದಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಹೆಸರಿಟ್ಟಿರುವುದೇ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.