ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
September 2024 » Dynamic Leader
October 23, 2024
Home 2024 September
ಉದ್ಯೋಗ

ತಮಿಳುನಾಡು ದೇಶದಲ್ಲೇ ಅತಿ ಹೆಚ್ಚಿನ ಕೈಗಾರಿಕೆಗಳು ಮತ್ತು ಹೆಚ್ಚಿನ ಜನರಿಗೆ ಉದ್ಯೋಗವನ್ನು ಒದಗಿಸುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳ ಸಚಿವಾಲಯದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಭಾರತದ ಒಟ್ಟು ಕೈಗಾರಿಕೆಗಳಲ್ಲಿ ತಮಿಳುನಾಡು 15.66% ಕೈಗಾರಿಕೆಗಳನ್ನು ಹೊಂದಿದೆ. ತಮಿಳುನಾಡಿನ ನಂತರ ಗುಜರಾತ್ (12.25%), ಮಹಾರಾಷ್ಟ್ರ (10.44%), ಉತ್ತರ ಪ್ರದೇಶ (7.54%) ಮತ್ತು ಆಂಧ್ರಪ್ರದೇಶ (6.51%) ಮುಂತಾದ ರಾಜ್ಯಗಳು ಇವೆ.

ದೇಶದ ಕಾರ್ಖಾನೆಗಳಲ್ಲಿ, ಉದ್ಯೋಗದಲ್ಲಿರುವ ಒಟ್ಟು ಉದ್ಯೋಗಿಗಳ ಪೈಕಿ ತಮಿಳುನಾಡು ಮಾತ್ರ 15% ರಷ್ಟಿದೆ. ತಮಿಳುನಾಡಿನ ನಂತರ ಮಹಾರಾಷ್ಟ್ರ (12.84%), ಗುಜರಾತ್ (12.62%), ಉತ್ತರ ಪ್ರದೇಶ (8.04%) ಕರ್ನಾಟಕ (6.58%) ಮುಂತಾದ ರಾಜ್ಯಗಳು ಇವೆ ವರದಿಯಲ್ಲಿ ತಿಳಿಸಲಾಗಿದೆ.

ದೇಶ

ಗುರ್ಗಾನ್: ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.

ಹರಿಯಾಣದ ಗುರ್ಗಾನ್ನ (Gurgaon) ಬಾದಶಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill 2024) ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದ್ದೇವೆ. ಇದರೊಂದಿಗೆ ಮಂಡಳಿಯ ಕೋರಿಕೆಯಂತೆ ಹಣ ವಿತರಣೆಗೂ ಅನುಮತಿ ನೀಡಲಾಗಿದೆ.

ಈ ಮಸೂದೆಗೆ ಸಂಬಂಧಿಸಿದಂತೆ ವಕ್ಫ್ ಮಂಡಳಿಯ ಪ್ರತಿನಿಧಿಗಳು ಮಾಡಿರುವ ಆರೋಪಗಳನ್ನು ಒಪ್ಪಲು ಸಾಧ್ಯವಿಲ್ಲ. ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿಯ ಜಗದಾಂಬಿಕಾ ಪಾಲ್ ಅವರು ಮಸೂದೆಯ ಸಂಪೂರ್ಣ ವಿವರಗಳನ್ನು ಅಧ್ಯಯನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಸಿನಿಮಾ

ಮಿಥುನ್ ಚಕ್ರವರ್ತಿ ತಮ್ಮ ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದವರು!

ಮುಂಬೈ: ಖ್ಯಾತ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ (Mithun Chakraborty). 1976ರಲ್ಲಿ ತೆರೆಕಂಡ ‘ಮೃಗಯಾ’ (Mrigayaa) ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಅವರಿಗೆ ಉತ್ತಮ ನಟರ ರಾಷ್ಟ್ರೀಯ ಪ್ರಶಸ್ತಿ ದೊರಕಿತು. ಇದರ ಮೂಲಕ ಪರಿಚಯ ಚಿತ್ರದಲ್ಲೇ ರಾಷ್ಟ್ರೀಯ ಪ್ರಶಸ್ತಿ ಗೆದ್ದ ನಟ ಎಂಬ ಗೌರವವನ್ನು ಪಡೆದರು ಮಿಥುನ್ ಚಕ್ರವರ್ತಿ.

ಮೃಗಯಾ – Mrigayaa-1976

ಆ ನಂತರ 1982ರಲ್ಲಿ ತೆರೆಕಂಡ ‘ಡಿಸ್ಕೋ ಡ್ಯಾನ್ಸರ್’ (Disco Dancer) ಚಿತ್ರದ ಮೂಲಕ ಭಾರತದಾದ್ಯಂತ ಪ್ರಸಿದ್ಧಿ ಪಡೆದರು. ನಂತರ, ಮಿಥುನ್ ಅವರು ‘ತಹದರ್ ಕಥಾ’ ಮತ್ತು ‘ಸ್ವಾಮಿ ವಿವೇಕಾನಂದ’ ಚಿತ್ರದ ಅಭಿನಯಕ್ಕಾಗಿ ಮತ್ತೆ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು. ತಮಿಳಿನಲ್ಲಿ ‘ಯಾಗಾವಾರಾಯಿನುಂ ನಾ ಕಾಕ್ಕೆ’ ಚಿತ್ರದಲ್ಲಿ ನಟಿಸಿದ್ದಾರೆ.

ಡಿಸ್ಕೋ ಡ್ಯಾನ್ಸರ್ – Disco Dancer

ಈ ಹಿನ್ನೆಲೆಯಲ್ಲಿ, ಮಿಥುನ್ ಚಕ್ರವರ್ತಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dada Saheb Phalke Award) ಘೋಷಿಸಲಾಗಿದೆ. ಇದನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಮುಂದಿನ ತಿಂಗಳು 8 ರಂದು ನಡೆಯುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮಿಥುನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವರ್ಷದ ಆರಂಭದಲ್ಲಿ, ಮಿಥುನ್ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು ಎಂಬುದು ಗಮನಾರ್ಹ.

ದೇಶ

ತಿರುಚ್ಚಿ: ಶ್ರೀರಂಗಂ ದೇವಸ್ಥಾನಕ್ಕೆ ಸ್ವಾಮಿ ದರ್ಶನಕ್ಕಾಗಿ ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸುವ ಕುರಿತು ಮಾತನಾಡಿದರು.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ಸಮಸ್ಯೆಗಳಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯೂ ಒಂದು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇದುವರೆಗೆ ಯಾವ ಸರಕಾರಕ್ಕೂ ಸಾಧ್ಯವಾಗಿಲ್ಲ. ಕಾವೇರಿ ವಿಚಾರದಲ್ಲಿ ಎರಡು ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ಕೇಂದ್ರ ಸರ್ಕಾರವೂ ರಾಜಕೀಯ ಮಾಡುತ್ತಿದೆ ಎಂದು ತಮಿಳುನಾಡಿನ ರೈತರು ಆರೋಪ ಮಾಡುತ್ತಿದ್ದಾರೆ. ಬೇಸಿಗೆ ಬಂತೆಂದರೆ ಕಾವೇರಿ ಸಮಸ್ಯೆ ತಲೆದೋರುತ್ತದೆ.

ಈ ಹಿನ್ನೆಲೆಯಲ್ಲಿ, ಕಾವೇರಿ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂದರ್ಶನ ನೀಡಿದ್ದಾರೆ. ಅದರಲ್ಲಿ, “ಶಾಸನಬದ್ಧ ಕಾವೇರಿ ವಿತರಣಾ ಯೋಜನೆಯು ಬರಗಾಲದಲ್ಲಿ ಕಾವೇರಿ ನೀರಿನ ಸಮಸ್ಯೆಗೆ ಸಹಾಯ ಮಾಡುವುದಿಲ್ಲ. ಕಾವೇರಿ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಎರಡು ರಾಜ್ಯ ಸರ್ಕಾರಗಳು ಚರ್ಚಿಸಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು. ಕಾವೇರಿ ಸಮಸ್ಯೆಗೆ Give and take policy ನೀತಿಯೊಂದೇ ಪರಿಹಾರ” ಎಂದು ಹೇಳಿದರು

ವಿದೇಶ

ಬೈರುತ್: ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಮತ್ತೊಂದು ವೈಮಾನಿಕ ದಾಳಿಯಲ್ಲಿ 105 ಜನರು ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆ ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಯೋತ್ಪಾದಕ ಸಂಘಟನೆ ಹಮಾಸ್ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್ ಇದೀಗ ಲೆಬನಾನ್ ಮೂಲದ ಹಿಜ್ಬುಲ್ಲಾ ಸಂಘಟನೆ ಮೇಲೂ ದಾಳಿ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ ನಡೆದ ದಾಳಿಯಲ್ಲಿ 21 ಮಕ್ಕಳು ಮತ್ತು 39 ಮಹಿಳೆಯರು ಸೇರಿದಂತೆ 274 ಜನರು ಸಾವನ್ನಪ್ಪಿದ್ದರು. ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hassan Nasrallah) ಕೂಡ ಕೊಲ್ಲಲ್ಪಟ್ಟರು.

ಈ ಹಿನ್ನೆಲೆಯಲ್ಲಿ, ಇದೀಗ ಮತ್ತೆ ಇಸ್ರೇಲ್ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 105 ಮಂದಿ ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಲೆಬನಾನ್ ಜನರು ದೇಶವನ್ನು ತೊರೆಯಲು ಪ್ರಾರಂಭಿಸಿದ್ದಾರೆ. ನಮ್ಮ ಗುರಿಯನ್ನು ಸಾಧಿಸುವವರೆಗೂ ನಾವು ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ಧರಿಸಿದ್ದಾರೆ.

ಯೆಮನ್‌ನಲ್ಲೂ ಇಸ್ರೇಲ್ ದಾಳಿ:
ಹಮಾಸ್ ಪಡೆಗಳ ವಿರುದ್ಧ ಯುದ್ಧ ಪ್ರಾರಂಭವಾದ 9 ತಿಂಗಳ ನಂತರ ಜುಲೈ 21 ರಂದು ಮೊದಲ ಬಾರಿಗೆ, ಯೆಮನ್‌ನಲ್ಲಿ ಹಲವಾರು ಹೌತಿ (Houthi) ಬಂಡುಕೋರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇದೀಗ ಯೆಮನ್‌ನಲ್ಲೂ ಇಸ್ರೇಲ್ ಭೀಕರ ದಾಳಿ ನಡೆಸುತ್ತಿದೆ.

ಇಸ್ರೇಲ್ ಯೆಮನ್‌ನ ವಿದ್ಯುತ್ ಸ್ಥಾವರಗಳು ಮತ್ತು ಬಂದರುಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಇದರಲ್ಲಿ 4 ಹೌತಿ ಬಂಡುಕೋರರು ಕೊಲ್ಲಲ್ಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಜಕೀಯ

ಕೇರಳದ ರಾಜಕೀಯ ಕ್ಷೇತ್ರವು ಹಲವು ಹೋರಾಟಗಳ ಮೇಲೆ ನಿರ್ಮಾಣವಾದದ್ದು. ಯುದ್ಧಭೂಮಿಯಲ್ಲೂ, ರಾಜಕೀಯ ಸೇಡಿನ ದಾಳಿಯಲ್ಲೂ ರಕ್ತಸಾಕ್ಷಿಗಳಾದ ಅನೇಕ ಒಡನಾಡಿಗಳು ಅಲ್ಲಿದ್ದಾರೆ. ಅಂತವರಲ್ಲಿ ಪುಷ್ಪನ್ ಕೂಡ ಒಬ್ಬರು!

ಪುಷ್ಪನ್ ಕೇರಳದ ಕಣ್ಣೂರು ಜಿಲ್ಲೆಯ ಸೋಕ್ಲಿಯಲ್ಲಿ ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದರು. ಅವರು ಓದಿದ್ದು 8ನೇ ತರಗತಿವರೆಗೆ ಮಾತ್ರ. ಸಿಪಿಎಂನ ಯುವ ಘಟಕವಾದ ಡಿವೈಎಫ್‌ಐನಲ್ಲಿ ಸಕ್ರಿಯರಾಗಿದ್ದರು. ಕೌಟುಂಬಿಕ ಬಡತನದಿಂದ ಬೆಂಗಳೂರಿಗೆ ಬಂದು ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

1994ರಲ್ಲಿ, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಸಿಪಿಎಂ ಪಕ್ಷ ಮತ್ತು ಅದರ ಯುವ ಸಂಘಟನೆ ಡಿವೈಎಫ್‌ಐ ಕೇರಳ ರಾಜ್ಯದಲ್ಲಿ ಅನುದಾನ ರಹಿತ ಕಾಲೇಜುಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿತ್ತು. ರಜೆಗೆಂದು ಊರಿಗೆ ಬಂದಿದ್ದ ಪುಷ್ಪನ್ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು.

ಪುಷ್ಪನ್

ನವೆಂಬರ್ 25, 1994 ರಂದು, ಆಗಿನ ಮಂತ್ರಿಗಳಾದ ರಾಧಾಕೃಷ್ಣನ್ ಮತ್ತು ಎಂ.ವಿ.ರಾಘವನ್ ಅವರು ಕೂತ್ತುಪ್ಪರಂಬು ಪ್ರದೇಶದಲ್ಲಿ ಅರ್ಬನ್ ಬ್ಯಾಂಕ್ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಘೋಷಿಸಲಾಯಿತು. ಅವರನ್ನು ತಡೆಯಲು ಸಿಪಿಎಂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.

ನವೆಂಬರ್ 25 ರಂದು ಕೂತ್ತುಪ್ಪರಂಬಿನಲ್ಲಿ ಸುಮಾರು 2000 ಸಿಪಿಎಂ ಕಾರ್ಯಕರ್ತರು ಪ್ರತಿಭಟನೆಗೆ ಜಮಾಯಿಸಿದ್ದರು. ಪೊಲೀಸರೂ ಜಮಾಯಿಸಿದ್ದರು. ಸಚಿವರು ಬಂದರೆ ತೊಂದರೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಹಾಗಾಗಿ ಸಚಿವ ರಾಧಾಕೃಷ್ಣನ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಅಂದಿನ ಸಹಕಾರಿ ಸಚಿವರಾಗಿದ್ದ ಎಂ.ವಿ.ರಾಘವನ್ ಮಾತ್ರ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿ ಅಲ್ಲಿಗೆ ಬಂದಿದ್ದರು. ಆಗ ಸಿಪಿಎಂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಸಚಿವರತ್ತ ತೆರಳಿದರು. ಪೊಲೀಸರು ತಡೆದು ಲಾಠಿ ಚಾರ್ಜ್ ಮಾಡಿದರು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಕೆ.ಕೆ.ರಾಜೀವನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ.ರೋಷನ್, ಪದಾಧಿಕಾರಿಗಳಾದ ಶಿಬುಲಾಲ್, ಮಧು, ಬಾಬು ಅವರು ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದರು.

ಅದರಲ್ಲಿ ಒಂದು ಗುಂಡು ಪುಷ್ಪನ್ ಕುತ್ತಿಗೆಯ ಮೂಲಕ ಬೆನ್ನುಹುರಿಯೊಳಗೆ ಹರಿಯಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆನ್ನುಹುರಿಗೆ ಹಾನಿಯಾಗಿ ಕತ್ತಿನ ಕೆಳಗಿನ ಭಾಗ ನಿಷ್ಕ್ರಿಯಗೊಂಕೊಂಡು ಪುಷ್ಪನ್ ಹಾಸಿಗೆ ಹಿಡಿದರು. ಪುಷ್ಪನ್ ಗೆ  ಗುಂಡು ತಗುಲಿ ಹಾಸಿಗೆ ಹೀಡಿದಾಗ ಅವರ ವಯಸ್ಸು 24. ಅವರು 30 ವರ್ಷಗಳನ್ನು ಹಾಸಿಗೆಯಲ್ಲಿ ಕಳೆದರು. ಸಿಪಿಎಂ ಪಕ್ಷದವರು ಅವರನ್ನು ನೋಡಿಕೊಂಡರು.

ನಂತರ ರಾಜಕೀಯದಲ್ಲಿ ಹಲವು ಬದಲಾವಣೆಗಳಾದವು. ಗುಂಡಿನ ದಾಳಿಗೆ ಕಾರಣರಾದ ಸಚಿವ ಎಂ.ವಿ.ರಾಘವನ್ ಮತ್ತೆ ಸಿಪಿಎಂ ಪಕ್ಷಕ್ಕೆ ಸೇರ್ಪಡೆಯಾದರು. ಈ ಹಿಂದೆ ಸಿಪಿಎಂನಲ್ಲಿದ್ದ ಎಂ.ವಿ.ರಾಘವನ್, ಅದರಿಂದ ಬೇರ್ಪಟ್ಟು ಸಿಎಂಪಿ (ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷ) ಎಂಬ ಪಕ್ಷವನ್ನು ಆರಂಭಿಸಿ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಹಕಾರಿ ಸಚಿವರಾಗಿದ್ದಾಗಲೇ ಈ ಗುಂಡಿನ ದಾಳಿ ನಡೆದಿತ್ತು ಎಂಬುದು ಗಮನಾರ್ಹ.

ಎಂ.ವಿ.ರಾಘವನ್ ಅವರು ಸಿಪಿಎಂಗೆ ಮರುಸೇರ್ಪಡೆಯಾಗುವುದನ್ನು ಪುಷ್ಪನ್ ವಿರೋಧಿಸಲಿಲ್ಲ. ಅಂತೆಯೇ, ಸಿಪಿಎಂ ಕೂಡ ತನ್ನ ಅನುದಾನ ರಹಿತ ಕಾಲೇಜುಗಳಿಗೆ ಸಂಬಂಧಿಸಿದ ತಮ್ಮ ನೀತಿಯನ್ನು ಪರಿಷ್ಕರಿಸಿತು. ಆಗಲೂ ಪುಷ್ಪನ್ ಪಕ್ಷದ ಬೆಂಬಲಕ್ಕೆ ನಿಂತಿದ್ದರು. ಆಗಿನ ಸಚಿವ ಎಂ.ವಿ.ರಾಘವನ್ ಪುತ್ರನಿಗೆ ಸಿಪಿಎಂ ಪಕ್ಷದಲ್ಲಿ ಸ್ಥಾನ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೂಡ ನೀಡಲಾಗಿತ್ತು. ಆದರೂ, ಪುಷ್ಪನ್ ಅವರು ಭಿನ್ನಾಭಿಪ್ರಾಯದ ಧ್ವನಿ ಎತ್ತದೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದರು.

ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ನೆನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವರದಿಗಳ ಪ್ರಕಾರ, ಅವರನ್ನು ಆಗಸ್ಟ್ 2 ರಂದು ಗಂಭೀರ ಸ್ಥಿತಿಯಲ್ಲಿ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಹೃದಯಾಘಾತದ ನಂತರ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿತ್ತು.

ಇಂದು ಬೆಳಗ್ಗೆ ಅವರ ದೇಹವನ್ನು ಕೋಳಿಕ್ಕೋಡ್ ಆಸ್ಪತ್ರೆಯಿಂದ ಕಣ್ಣೂರಿನ ತಲಸ್ಸೆರಿಗೆ ಕೊಂಡೊಯ್ಯಲಾಗಿದೆ. ಸಾರ್ವಜನಿಕ ಗೌರವಾರ್ಥವಾಗಿ ಅಲ್ಲಿ ಇರಿಸಲಾಗಿದೆ. ಇಂದು ಸಂಜೆ ಪುಷ್ಪನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಒಡನಾಡಿ ಪುಷ್ಪನ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಹಾಗೂ ಸಿಪಿಎಂ ಸಂತಾಪ ಸೂಚಿಸಿದೆ.

ರಾಜಕೀಯ

ಜಮ್ಮು: ಮೂರನೇ ಹಂತದ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಿಯಾಂಕಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ವಿಫಲವಾಗಿದೆ. ಇದಕ್ಕೆ ಬಿಜೆಪಿ ಪಕ್ಷವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಕಾಶ್ಮೀರದ ಕಥುವಾ (Kathua) ಜಿಲ್ಲೆಯ ಬಿಲ್ಲಾವರ್ (Billawar) ಮತ್ತು ಬಿಷ್ಣಃ (Bishnah) ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಮನೋಹರ್ ಲಾಲ್ ಅವರಿಗೆ ಬೆಂಬಲ ಸಂಗ್ರಹಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗಾಗಿ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಪ್ರಿಯಾಂಕಾ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಲು ಸಾಧ್ಯವಾಗದ ಕಾರಣ ಕಾರ್ಯಕ್ರಮಗಳಿಗೆ ಅಡ್ಡಿಯಾಗಿದೆ.

ಈ ಬಗ್ಗೆ ಮಾತನಾಡಿದ ಕಾಶ್ಮೀರ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ, “ಬಿಜೆಪಿಯ ವಿಧ್ವಂಸಕ ಕೃತ್ಯದಿಂದಾಗಿ ಪ್ರಿಯಾಂಕಾ ಅವರ ಕಾರ್ಯಕ್ರಮ ರದ್ದಾಗಿದೆ. ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸುತ್ತೇವೆ” ಎಂದು ಹೇಳಿದರು.

ರಾಜಕೀಯ

ವಿರುದುನಗರ: ತಮಿಳುನಾಡು ವಿರುದುನಗರ ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ ವತಿಯಿಂದ ಜಿಲ್ಲಾಧಿಕಾರಿಗಳ ಸಭೆಯಲ್ಲಿ, ಮುಸ್ಲಿಂ ಮಹಿಳಾ ಸಹಾಯ ಸಂಘದಿಂದ ಆಯೋಜಿಸಿದ್ದ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಜಯಶೀಲನ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರುದುನಗರ ಸಂಸದ ಮಾಣಿಕಂ ಟ್ಯಾಗೋರ್ (Manickam Tagore) ಅವರು 108 ಫಲಾನುಭವಿಗಳಿಗೆ 10.24 ಲಕ್ಷ ರೂ.ಗಳ ಕಲ್ಯಾಣ ನೆರವನ್ನು ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, “ನೈತಿಕ ಹಕ್ಕು ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಅದೇ ನೈತಿಕ ಹಕ್ಕು ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನೈತಿಕ ಹಕ್ಕಿನೊಂದಿಗೆ ನಿರ್ಮಲಾ ಸೀತಾರಾಮನ್ ಕೂಡಲೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹಾಗೆಯೇ ನಿರ್ಮಲಾ ಸೀತಾರಾಮನ್ ಕೆಳಗಿಳಿದು ಎಲ್ಲರಿಗೂ ಮಾದರಿಯಾಗಲಿದ್ದಾರೆಯೇ? ಅಥವಾ, ನೈತಿಕ ಹಕ್ಕು ಎಂಬುದಲ್ಲೆವೂ ಇತರರಿಗೆ ಮಾತ್ರ. ಇತರರಿಗೆ ಬಂದರೆ ರಕ್ತ.. ತನಗೆ ಬಂದರೆ ಅದು ಟೊಮೆಟೊ ಚಟ್ನಿ ಎಂದು ಹೇಳುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಸಂಸದ ಮಾಣಿಕಂ ಟ್ಯಾಗೋರ್, ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯ

‘ಪಾಕಿಸ್ತಾನ ಪ್ರತಿ ಹನಿ ನೀರಿಗೂ ಕೈಚಾಚಲಿದೆ; ಮೂರು ಭಾಗವಾಗಲಿದೆ’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಪಾಕಿಸ್ತಾನ ಭಯೋತ್ಪಾದನೆಯನ್ನು ಹರಡುತ್ತಲೇ ಇದೆ. 1960ರ ಭಾರತ-ಪಾಕಿಸ್ತಾನ ನದಿ ನೀರಿನ ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡಿದೆ. ಇದೇ ರೀತಿ ಮುಂದುವರಿದರೆ ಸದ್ಯ ಭಿಕ್ಷಾಪಾತ್ರೆ ಹೊತ್ತಿರುವ ಪಾಕಿಸ್ತಾನ ಭವಿಷ್ಯದಲ್ಲಿ ಪ್ರತಿ ಹನಿ ನೀರಿಗೂ ಕೈಚಾಚುವ ಪರಿಸ್ಥಿತಿ ಉಂಟಾಗುತ್ತದೆ. ಆ ದೇಶ ಮೂರು ಭಾಗವಾಗಿ ಒಡೆಯುತ್ತದೆ.

ಇದೀಗ ಪಾಕಿಸ್ತಾನ ಎರಡು ಕಾರಣಗಳಿಗಾಗಿ ತತ್ತರಿಸಿ ಹೋಗಿದೆ. ಮೊದಲನೆಯದು, ಆ ದೇಶವು ತನ್ನದೇ ಆದ ಚಟುವಟಿಕೆಗಳಿಂದ ತೊಂದರೆಯಲ್ಲಿ ಸಿಲುಕಿಕೊಂಡಿದೆ. ಎರಡನೆಯದು, ಬಲೂಚಿಸ್ತಾನದ ಜನರನ್ನು ವಿದೇಶಿಯರಂತೆ ಪರಿಗಣಿಸುವುದರಿಂದ ಆ ರಾಜ್ಯದ ಯಾರೂ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಲು ಬಯಸುತ್ತಿಲ್ಲ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಹಿಂದೆ ಸರಿಯಬೇಕು. ಬಿಜೆಪಿ ಸರ್ಕಾರದ ಕ್ರಮಗಳು, ವಿಶೇಷ ಸ್ಥಾನಮಾನವನ್ನು ನೀಡುವ ವಿಧಿ 370 ಮತ್ತು 35A ರದ್ದತಿಯಿಂದಾಗಿ, ಜಮ್ಮು ಮತ್ತು ಕಾಶ್ಮೀರವು ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿದೆ. ಪ್ರವಾಸಿಗರು ಸುಲಭವಾಗಿ ಅಲ್ಲಿಗೆ ಹೋಗಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮ್ಮು ಮತ್ತು ಕಾಶ್ಮೀರ ಈಗ ಭಯೋತ್ಪಾದನೆಯ ಬೆದರಿಕೆಯಿಂದ ಬದಲಾಗಿ ಮತ್ತೆ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ. ಅಲ್ಲದೆ, ದೆಹಲಿ-ಕಾಶ್ಮೀರಕ್ಕೆ ವಂದೇ ಭಾರತ್ ರೈಲು ಕೂಡ ಒದಗಿಸಲಾಗಿದೆ.

ಇಲ್ಲಿನ ಬಹರ್ವಾಲ್, ಗುಜ್ಜರ್, ದಲಿತ ಮತ್ತು ವಾಲ್ಮೀಕಿ ಸಮುದಾಯಗಳು ದೀರ್ಘಕಾಲದಿಂದ ತಮ್ಮ ಹಕ್ಕುಗಳನ್ನು ಪಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉಪಕ್ರಮವು ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಿದೆ.

ಈಗಾಗಲೇ ಕಾಶ್ಮೀರದಲ್ಲಿದ್ದ ರಾಜಕಾರಣಿಗಳು ವಿದೇಶಗಳಲ್ಲಿ ಮತ್ತು ದೆಹಲಿಯನ್ನು ಆಶ್ರಯಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯನ್ನು ಮರೆತಿದ್ದಾರೆ’ ಎಂದು ಹೇಳಿದ್ದಾರೆ.

ರಾಜಕೀಯ

ಮುಂಬೈ: ದೀಪಾವಳಿ ಮತ್ತು ಸಾಥ್ ಪೂಜೆಯ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕವನ್ನು ನಿರ್ಧರಿಸಲು ರಾಜಕೀಯ ಪಕ್ಷಗಳು ವಿನಂತಿಸಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಎರಡು ದಿನಗಳ ಕಾಲ ಮುಂಬೈನಲ್ಲಿ ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನಾವು ಕಾಂಗ್ರೆಸ್, ಶಿವಸೇನೆ (ಉದ್ದವ್ ತಂಡ) ಆಮ್ ಆದ್ಮಿ ಪಕ್ಷ ಸೇರಿದಂತೆ 11 ರಾಜಕೀಯ ಪಕ್ಷದ ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇವೆ. ಅದರ ಆಧಾರದ ಮೇಲೆ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ.

ದೀಪಾವಳಿ ಮತ್ತು ಸಾಥ್ ಪೂಜೆಯ ಮೊದಲೇ ಚುನಾವಣಾ ದಿನಾಂಕವನ್ನು ಘೋಷಿಸಲು ಅವರು ಒತ್ತಾಯಿಸಿದ್ದಾರೆ. ಒಟ್ಟು ಮತದಾರರು 9.59 ಕೋಟಿ, ಇದರಲ್ಲಿ 4.59 ಕೋಟಿ ಪುರುಷರು ಮತ್ತು 4.64 ಕೋಟಿ ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. 18 ವರ್ಷ ಪೂರೈಸಿದ 19.48 ಲಕ್ಷ ಪ್ರಥಮ ಬಾರಿ ಮತದಾರರಿದ್ದಾರೆ. ಒಟ್ಟು 288 ವಿಧಾನಸಭಾ ಕ್ಷೇತ್ರಗಳೀದ್ದು, ಎಸ್‌ಸಿ 29 ಕ್ಷೇತ್ರಗಳು, ಎಸ್‌ಟಿ 25 ಕ್ಷೇತ್ರಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಮತ್ತು ಮಹಾಯುತಿ ಮೈತ್ರಿಕೂಟದ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.