ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
September 2024 » Page 6 of 7 » Dynamic Leader
October 23, 2024
Home 2024 September (Page 6)
ದೇಶ

ಭುಜ್: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ 12 ಜನರು ನಿಗೂಢ ಜ್ವರದಿಂದ ಸಾವನ್ನಪ್ಪಿದ್ದಾರೆ.

ಗುಜರಾತ್‌ನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಾಜ್ಯದ ವಿವಿಧೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ, ಕಚ್ ಜಿಲ್ಲೆ ವ್ಯಾಪ್ತಿಯ ಲಖ್ಪತ್ ತಾಲೂಕಿನಲ್ಲಿ 12 ಮಂದಿ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ. ಇದು ನ್ಯುಮೋನಿಯಾ (Pneumonia) ಆಗಿರಬಹುದು ಎಂದು ಹೇಳಲಾಗುತ್ತಿದ್ದರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಕಛ್ ಜಿಲ್ಲಾಧಿಕಾರಿ ಅಮಿತ್ ಅರೋರಾ, ‘ಆರೋಗ್ಯ ಇಲಾಖೆಯ 22 ಸದಸ್ಯರ ತಂಡ ಪೀಡಿತ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದು, ರೋಗದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವೈದ್ಯಕೀಯ ಸೇವೆಯನ್ನು ತೀವ್ರಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ‘ರೋಗಿಗಳು ಜ್ವರ, ನೆಗಡಿ, ಕೆಮ್ಮು, ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ’ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಜಿಲ್ಲಾ ಪಂ.ಸದಸ್ಯರೊಬ್ಬರು ‘ವೈದ್ಯರಿಗೆ ರೋಗವನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

ದೇಶ

ಹಿಂಸಾಚಾರ ಮತ್ತೆ ಬುಗಿಲೆದ್ದಿರುವುದನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh), ಇದನ್ನು “ಉಗ್ರವಾದ ಕೃತ್ಯಗಳು” ಎಂದು ಬಣ್ಣಿಸಿದ್ದಾರೆ.

ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ವರ್ಷದಿಂದ, ಕುಕಿ ಮತ್ತು ಮೈತೇಯಿ ಜನರ ನಡುವೆ ಹಿಂಸಾಚಾರ ತೀವ್ರಗೊಂಡಿದೆ. ತಿಂಗಳಿಂದ ತಗ್ಗಿದ್ದ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದರಿಂದ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕರ್ಫ್ಯೂ ಜಾರಿ ಮಾಡಲಾಗಿದೆ.

ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ (ಇಂದು) ನಡೆದ ಘರ್ಷಣೆಯಲ್ಲಿ 5 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮಲಗಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದರು ಎಂಬ ಕಾರಣಕ್ಕೆ ಎರಡು ಕಡೆ (ಕುಕಿ ಮತ್ತು ಮೈತೇಯಿ) ನಡೆದ ಗುಂಡಿನ ದಾಳಿಯಲ್ಲಿ ಇನ್ನೂ 4 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿರಿಬಾಮ್ ಜಿಲ್ಲೆಯ ಗುಡ್ಡಗಾಡು ಗ್ರಾಮವೊಂದರಲ್ಲಿ ದಾಳಿ ನಡೆಸಲಾಗಿದೆ. ಎರಡು ಕಡೆಯ ನಡುವೆ ನಡೆದ ಘರ್ಷಣೆಯಲ್ಲಿ ‘ಗುಡ್ಡಗಾಡು ಮೂಲದ 3 ಉಗ್ರರು’ ಹತರಾಗಿದ್ದಾರೆ ಎಂದು ಹೇಳಲಾಗಿದೆ. ಹಿಂದಿನ ದಿನ ಬಿಷ್ಣುಪುರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದರು ಮತ್ತು 5 ಮಂದಿ ಗಾಯಗೊಂಡಿದ್ದರು.

ಆ ದಾಳಿಯಲ್ಲಿ, ಸಶಸ್ತ್ರ ಗುಂಪುಗಳು ಹಳ್ಳಿಗಳ ಮೇಲೆ ರಾಕೆಟ್ ದಾಳಿಯನ್ನು ನಡೆಸಿದ್ದರು ಎಂದು ಹೇಳಲಾಗುತ್ತದೆ. ಈ ವಾರದ ಆರಂಭದಲ್ಲಿ ಪಶ್ಚಿಮ ಇಂಫಾಲ್‌ನಲ್ಲಿ ಡ್ರೋನ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.

ಹಿಂಸಾಚಾರ ಮತ್ತೆ ಬುಗಿಲೆದ್ದಿರುವುದನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಇದನ್ನು “ಉಗ್ರವಾದ ಕೃತ್ಯಗಳು” ಎಂದು ಬಣ್ಣಿಸಿದ್ದಾರೆ.

“ಮಣಿಪುರ ಸರ್ಕಾರವು ಈ ಸ್ವಯಂಪ್ರೇರಿತ ದಾಳಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಬುಡಕಟ್ಟು ಜನರ ಮೇಲಿನ ಈ ಭಯೋತ್ಪಾದಕ ದಾಳಿಗಳಿಗೆ ನಾವು ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಹಿಂಸಾಚಾರದ ಘಟನೆಗಳಿಂದಾಗಿ ಸೆಪ್ಟೆಂಬರ್ 7 ರಂದು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಮಣಿಪುರದ ಕಣಿವೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣಿಪುರ ಏಕೀಕರಣಕ್ಕಾಗಿ ಸಮನ್ವಯ ಸಮಿತಿ (COCOMI), ಅನಿರ್ದಿಷ್ಟ “ಸಾಮಾನ್ಯ ತುರ್ತುಸ್ಥಿತಿ” ಘೋಷಿಸಿದೆ.

ಕುಕಿ ಸಶಸ್ತ್ರ ಗುಂಪುಗಳ ನಿರಂತರ ದಾಳಿಗಳನ್ನು ಸೂಚಿಸಿ, ಜನರು ಮನೆಯೊಳಗೆ ಇರುವಂತೆ ಕೇಳಿಕೊಂಡಿದೆ. ಮಣಿಪುರದಲ್ಲಿ ಸಹಜ ಸ್ಥಿತಿ ಮರಳುವವರೆಗೆ ತುರ್ತು ಪರಿಸ್ಥಿತಿ ಮುಂದುವರಿಯಲಿದೆ ಎಂದು COCOMI ಹೇಳಿದೆ.

ದೇಶ

ಮುಂಬೈ: ದೇಶಾದ್ಯಂತ ಇಂದು ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈ ರಾಜ್ಯದಲ್ಲಿ ವಿನಾಯಕ ಚತುರ್ಥಿಯನ್ನು 10 ದಿನಗಳ ಕಾಲ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮುಂಬೈ ಮಹಾನಗರವು ಸಂಭ್ರಮದಲ್ಲಿದೆ. ವಿನಾಯಕ ಚತುರ್ಥಿಯ ಸಂದರ್ಭದಲ್ಲಿ ಮುಂಬೈನ ಲಾಲ್ ಬಾಗ್ ಚಾ ರಾಜಾ ವಿನಾಯಕ ದೇವಸ್ಥಾನವು ಜನರಿಂದ ತುಂಬಿ ತುಳುಕುತ್ತಿರುತ್ತದೆ. ವರ್ಷಪೂರ್ತಿವೂ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ.

ಈ ಹಿನ್ನೆಲೆಯಲ್ಲಿ, ವಿನಾಯಕ ಚತುರ್ಥಿಯಂದು, ಲಾಲ್ ಬಾಗ್ ಚಾ ರಾಜಾ ಗಣೇಶನಿಗೆ, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಪುತ್ರ ಆನಂದ್ ಅಂಬಾನಿ 15 ಕೋಟಿ ರೂಪಾಯಿ ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕ್ರೈಂ ರಿಪೋರ್ಟ್ಸ್

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಅಲ್ಲಿದ್ದವರು ಆ ಮಹಿಳೆಯನ್ನು ರಕ್ಷಿಸದೆ ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದಾರೆ.

ಉಜ್ಜಯಿನಿಯ ಕೊಯಿಲಾ ಪಾಠಕ್ ನಲ್ಲಿ ಮಹಿಳೆಯೊಬ್ಬರು ಕಸ ಸಂಗ್ರಹಿಸುತ್ತಿದ್ದರು. ಆ ಪ್ರದೇಶದಲ್ಲಿದ್ದ ಲೋಕೇಶ್ ಎಂಬುವನು, ಮಹಿಳೆಯನ್ನು ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ಆಸೆ ಮಾತು ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ಆತನೊಂದಿಗೆ ತೆರಳಿದ್ದಾಳೆ. ಮಹಿಳೆಗೆ ಲೋಕೇಶ್ ರಸ್ತೆಯಲ್ಲೇ ಅರಿವಳಿಕೆ ಮಿಶ್ರಿತ ಮದ್ಯ ನೀಡಿದ್ದಾನೆ. ಇದನ್ನು ಅರಿಯದೆ ಕುಡಿದು ಅಲ್ಲೆ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಇದನ್ನು ಕಂಡ ಅಲ್ಲಿದ್ದ ಕೆಲವರು ಮಹಿಳೆಗೆ ಸಹಾಯ ಮಾಡದೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಪೊಲೀಸರ ಗಮನಕ್ಕೆ ಬಂದಾಗ ಲೋಕೇಶ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ರಾಜ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕನಸಿನ ಕೂಸು, 7 ಜಿಲ್ಲೆಗಳ ಲಕ್ಷಾಂತರ ಜನರ ಬದುಕು ಬದಲಿಸುವ “ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ”ಯ ಹಂತ-1ಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಹೇಳಿದ್ದಾರೆ.

ಇದು ಎರಡು ಹಂತದ ಯೋಜನೆಯಾಗಿದೆ. ಮೊದಲ ಹಂತ ಇಂದು ಉದ್ಘಾಟನೆಯಾಗಿದೆ. ಎರಡನೇ ಹಂತ ಕೂಡ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳಿಗೆ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನೆಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆ.

ಹೀಗಿದ್ದರೂ ಕೆಲವರು ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ.

2014ರಲ್ಲಿ ಎತ್ತಿನಹೊಳೆಗೆ ಭೂಮಿಪೂಜೆ ನೇರವೇರಿಸಿದವನು ನಾನೇ. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀನಿ. ಕೆರೆಗಳನ್ನು ತುಂಬಿಸಿಯೇ ತುಂಬಿಸ್ತೇನೆ. ಇದು ಶತಸಿದ್ಧ ಎಂದು ಹೇಳಿದರು.

ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು ಎಂಬ ಸೂಚನೆಯನ್ನು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ.

ರಾಜಕೀಯ

ನವದೆಹಲಿ: ಲೋಕಸಭೆ ಚುನಾವಣೆಯ ಅಂತಿಮ ಹಂತ ಮುಗಿದ ತಕ್ಷಣ ಚುನಾವಣೋತ್ತರ ಸಮೀಕ್ಷೆ (Exit Poll)ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮಾಧ್ಯಮ ಸಂಸ್ಥೆಗಳು ಮತ್ತು ಅವರ ಸಹವರ್ತಿಗ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಪಿಐಎಲ್ ಅನ್ನು “ರಾಜಕೀಯ ಹಿತಾಸಕ್ತಿ ಮೊಕದ್ದಮೆ” ಎಂದು ಬಣ್ಣಿಸಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ನ್ಯಾಯಾಲಯ, ”ಈಗಾಗಲೇ ಸರ್ಕಾರ ಆಯ್ಕೆಯಾಗಿದೆ. ಚುನಾವಣೆಯ ಸಮಯದಲ್ಲಿ ಏನಾಗುತ್ತದೆ ಎಂಬ ಕಥೆಯನ್ನು ಈಗ ಮುಗಿಸಿಕೊಂಡು, ಈಗ ನಾವು ದೇಶದಲ್ಲಿ ಆಡಳಿತವನ್ನು ಪ್ರಾರಂಭಿಸೋಣ. ಚುನಾವಣಾ ಆಯೋಗ ಅದನ್ನು ನಿಭಾಯಿಸುತ್ತದೆ. ನಾವು ಚುನಾವಣಾ ಆಯೋಗವನ್ನು ನಡೆಸುವುದಿಲ್ಲ. ಇದು ರಾಜಕೀಯ ಹಿತಾಸಕ್ತಿ ಮೊಕದ್ದಮೆಯಾಗಿರುವುದು ಸ್ಪಷ್ಟ.ಹಾಗಾಗಿ  ಪ್ರಕರಣವನ್ನು ವಜಾಗೊಳಿಸಲಾಗಿದೆ” ಎಂದು ತಿಳೀಸಿದೆ.

ಜೂನ್ 1 ರಂದು ಕೊನೆಯ ಹಂತದ ಚುನಾವಣೆಯ ನಂತರ ತಕ್ಷಣವೇ ಎಕ್ಸಿಟ್ ಪೋಲ್‌ಗಳನ್ನು ಚರ್ಚಿಸುವ ಮೂಲಕ ಮಾಧ್ಯಮ ಸಂಸ್ಥೆಗಳು ಹೂಡಿಕೆದಾರರ ಮೇಲೆ ಪ್ರಭಾವ ಬೀರಿವೆ. ಇದು ಷೇರು ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಕೆಗೆ ಕಾರಣವಾಯಿತು ಎಂದು ಅರ್ಜಿದಾರರಾದ ವಕೀಲ ಬಿ.ಎಲ್.ಜೈನ್ ಆರೋಪಿಸಿದ್ದರು. ಆದಾಗ್ಯೂ, ಜೂನ್ 4 ರಂದು ನಿಜವಾದ ಫಲಿತಾಂಶಗಳು ಪ್ರಕಟವಾದಾಗ, ಮಾರುಕಟ್ಟೆಯು ಕುಸಿಯಿತು, ಇದರ ಪರಿಣಾಮವಾಗಿ ಸಾಮಾನ್ಯ ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂ. ನಷ್ಟವಾಗಿದೆ.

ವಕೀಲ ವರುಣ್ ಠಾಕೂರ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಗಳು ಮತ್ತು ಚರ್ಚೆಗಳ ಪ್ರಸಾರವು ಕೆಲವು ರಾಜಕೀಯ ಪಕ್ಷಗಳ ಪರವಾಗಿ ಅಥವಾ ವಿರುದ್ಧವಾಗಿ ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತವಾಗಿದೆ ಎಂದು ಹೇಳಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ, 1951 ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹಲವಾರು ಮಾಧ್ಯಮ ಸಂಸ್ಥೆಗಳ ವಿರುದ್ಧ ಸಿಬಿಐ, ಇಡಿ, ಸಿಬಿಡಿಟಿ, ಸೆಬಿ ಮತ್ತು ಎಸ್‌ಎಫ್‌ಐಒ ಸೇರಿದಂತೆ ವಿವಿಧ ಏಜೆನ್ಸಿಗಳಿಂದ ತನಿಖೆಗೆ ಅದು ಕೋರಿತ್ತು.

ಸಿನಿಮಾ

ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ವಿಶೇಷ ನ್ಯಾಯ ಪೀಠವನ್ನು ರಚಿಸಲಾಗಿದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.

ವಿಶೇಷ ನ್ಯಾಯ ಪೀಠವನ್ನು ರಚಿಸಲು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ಮುಷ್ತಾಕ್ ಅವರು ಕಳೆದ 29 ರಂದು ಆದೇಶಿಸಿದ್ದಾರೆ ಎಂದು ಕೇರಳ ಹೈಕೋರ್ಟ್ ರಿಜಿಸ್ಟ್ರಾರ್ ಇಲಾಖೆ ಮಾಹಿತಿ ನೀಡಿದೆ. ಅದರಂತೆ ನ್ಯಾಯಾಧೀಶರಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಸಿ.ಎಸ್.ಸುಧಾ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ಹೇಮಾ ಕಮಿಟಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆ ನಡೆಸಲಿದೆ ಎಂದು ತಿಳಿಸಲಾಗಿದೆ.

ಕೇರಳದಲ್ಲಿ ಕಳೆದ 2017ರಲ್ಲಿ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ನಂತರ ಹೇಮಾ ಕಮಿಟಿಯನ್ನು ಸ್ಥಾಪಿಸಲಾಯಿತು. ಇದರ ವರದಿಯು ಇತ್ತೀಚೆಗೆ ಪ್ರಕಟವಾದ ನಂತರ ವಿವಿಧ ಮಲಯಾಳಂ ನಟರು ಮತ್ತು ನಿರ್ದೇಶಕರ ಮೇಲೆ ಲೈಂಗಿಕ ದೌರ್ಜನ್ಯಗಳ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ವಿಚಾರಣೆ ನಡೆಸುವುದಕ್ಕೆ 7 ಸದಸ್ಯರ ವಿಶೇಷ ತನಿಖಾ ತಂಡವನ್ನು ಕೇರಳ ಸರ್ಕಾರ ಕಳೆದ 25 ರಂದು ಸ್ಥಾಪಿಸಿದೆ.

ಏತನ್ಮಧ್ಯೆ, ಲೈಂಗಿಕ ಕಿರುಕುಳ ಆರೋಪದಲ್ಲಿ ಮಲಯಾಳಂ ನಟರಾದ ಮುಖೇಶ್ ಮತ್ತು ಎಡವೇಲ ಬಾಬು ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಟ ಹಾಗೂ ಶಾಸಕ ಮುಖೇಶ್ ವಿರುದ್ಧ ನಟಿಯೊಬ್ಬರು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೂರು ದಾಖಲಿಸಿದ್ದರು.

ಅದರ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರಾಸಿಕ್ಯೂಷನ್ ವಿರುದ್ಧ ಮುಖೇಶ್ ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಂದಾಗ, ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಮುಖೇಶ್ ವಾದಿಸಿದ್ದರು.

ತರುವಾಯ, ನ್ಯಾಯಾಧೀಶರು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು. ಅದೇ ರೀತಿ ಲೈಂಗಿಕ ಆರೋಪದಲ್ಲಿ ನಟ ಎಡವೇಲ ಬಾಬು ಅವರಿಗೂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ ಅನೇಕ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಹೇಮಾ ಸಮಿತಿ ವರದಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.

ರಾಜಕೀಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತರೂಡ ತೃಣಮೂಲ ಕಾಂಗ್ರೆಸ್ ಪಕ್ಷದ ಮೇಲೆ ಜನರು ಹಿಂದೆಂದಿಗಿಂತಲೂ ಹೆಚ್ಚು ಅತೃಪ್ತರಾಗಿರುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಘಾತವನ್ನು ಉಂಟುಮಾಡಿದೆ.

ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ 31 ವರ್ಷದ ಟ್ರೈನಿ ವೈದ್ಯೆಯೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು.

ಮಹಿಳಾ ವೈದ್ಯೆಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ವೈದ್ಯರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯಲ್ಲಿ ಇದುವರೆಗೂ ಪರಿಹಾರ ಸಿಗದ ಕಾರಣ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನದ ಅಲೆ ಎದ್ದಿದೆ. ಅದೂ ಅಲ್ಲದೆ, ಈ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರ ವಿವಾದಾತ್ಮಕ ಭಾಷಣಗಳು ಆಡಳಿತ ಪಕ್ಷದ ವಿರುದ್ಧ ಚಿತ್ತ ನೆಟ್ಟಿದೆ ಎನ್ನಬಹುದು.

ಏತನ್ಮಧ್ಯೆ, ಲಂಚ ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಮಹಿಳಾ ವೈದ್ಯರ ಕುಟುಂಬದವರು ಆರೋಪಿಸಿದ್ದು, ಜನರಲ್ಲಿ ಮತ್ತಷ್ಟು ತಳಮಳ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ವಿವಿಧೆಡೆ ತೃಣಮೂಲ ಕಾಂಗ್ರೆಸ್ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಜನರಲ್ಲಿ ಅಸಮಾಧಾನ ಇರುವುದು ಬಹಿರಂಗವಾಗಿದೆ. ಕಳೆದ 2019ರ ಲೋಕಸಭೆ ಚುನಾವಣೆಯಿಂದ ಆಗಾಗ್ಗೆ ತೃಣಮೂಲ ಕಾಂಗ್ರೆಸ್ ಜನರಲ್ಲಿ ಸಮೀಕ್ಷೆ ನಡೆಸುವುದನ್ನು ರೂಢಿ ಮಾಡಿಕೊಂಡಿದೆ.

ಆ ರೀತಿಯಲ್ಲಿ, ಸದ್ಯದ ಸಮೀಕ್ಷೆ ಪಕ್ಷಕ್ಕೆ ಆಘಾತವನ್ನು ಉಂಟುಮಾಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರ್.ಜಿ.ಕರ್ ಆಸ್ಪತ್ರೆಯ ಡೀನ್ ಸಂದೀಪ್ ಘೋಷ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದಕ್ಕೆ ಅವರ ಪಕ್ಷದಲ್ಲೂ ಅಸಮಾಧಾನ ಉಂಟುಮಾಡಿದೆ.

ಈ ಹಿನ್ನೆಲೆಯಲ್ಲಿ, ಮಹಿಳಾ ವೈದ್ಯೆ ಹತ್ಯೆ ಪ್ರಕರಣದಲ್ಲಿ ತನಿಖೆಗೆ ಮುಂದಾಗದೆ ಹಣ ಪಾವತಿಗೆ ಯತ್ನಿಸಿರುವುದು ಯಾರನ್ನೋ ಉಳಿಸುವ ಕೃತ್ಯ ಎನ್ನಲಾಗುತ್ತಿದೆ. ಇದರಿಂದಾಗಿ ಮಮತಾ ಬ್ಯಾನರ್ಜಿ ವಿರುದ್ಧ ಹಿಂದೆಂದೂ ಇಲ್ಲದ ಅಸಮಾಧಾನ ಜನರಲ್ಲಿ ಮೂಡಿದೆ.

ತೃಣಮೂಲದ ಮಾಜಿ ಸಚಿವರಾದ ಪಾರ್ಥ ಚಟರ್ಜಿ ಮತ್ತು ಜ್ಯೋತಿಪ್ರಿಯಾ ಮಲ್ಲಿಕ್ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಸಾಕಷ್ಟು ಚರ್ಚೆಯಾಗುತ್ತಿವೆ.

ಕೋಲ್ಕತ್ತಾ ವೈದ್ಯೆ ಹತ್ಯೆಯ ಪರಿಣಾಮ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಸದ್ದು ಮಾಡುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಫಲಿತಾಂಶಗಳಿಂದ ಮಮತಾ ಆಘತಕ್ಕೆ ಒಳಗಾಗಿದ್ದಾರೆ ಎಂಬ ವರದಿಗಳಿವೆ.

“ಸಂದೀಪ್ ಘೋಷ್ ಅವರಂತಹ ಆರೋಪಿಯನ್ನು ಮಮತಾ ಬ್ಯಾನರ್ಜಿ ಏಕೆ ಬೆಂಬಲಿಸುತ್ತಿದ್ದಾರೆಂದು ನಮಗೆ ಅರ್ಥವಾಗುತ್ತಿಲ್ಲ” ಎಂದು ಹೆಸರು ಹೇಳಲು ಇಚ್ಛಿಸದ ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ದೇಶ

ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (Sitaram Yechury) ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

72 ವರ್ಷ ವಯಸ್ಸಿನ ಸೀತಾರಾಮ್ ಯೆಚೂರಿ ಅವರನ್ನು ಉಸಿರಾಟದ ತೊಂದರೆಗಾಗಿ ಕಳೆದ 19 ರಂದು ದೆಹಲಿ ಏಮ್ಸ್‌ಗೆ ದಾಖಲಿಸಲಾಗಿತ್ತು. ಅವರನ್ನು ಮೊದಲು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಯಿತು. ನಂತರ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸಿ ತೀವ್ರ ಚಿಕಿತ್ಸೆ ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ, ಯೆಚೂರಿ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೃತಕ ಉಸಿರಾಟ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ. ಅವರು ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದು ಗಮನಾರ್ಹ.

ರಾಜಕೀಯ

“ಭಾರತೀಯ ಪ್ರಧಾನಿ ಮೋದಿಯವರೊಂದಿಗಿನ ಅದಾನಿಯವರ ಸ್ನೇಹದಿಂದಾಗಿಯೇ ಕೀನ್ಯಾದಲ್ಲಿ ಅದಾನಿ ವಿರುದ್ಧದ ಆಂದೋಲನ ನಡೆಯುತ್ತಿದೆ” – ಕಾಂಗ್ರೆಸ್

ಕಳೆದ ಕೆಲವು ವರ್ಷಗಳಿಂದ ಕೊರೊನಾ ಪ್ರಭಾವ, ರಷ್ಯಾ-ಉಕ್ರೇನ್ ಯುದ್ಧ ಇತ್ಯಾದಿಗಳಿಂದ ಜಾಗತಿಕವಾಗಿ ಆರ್ಥಿಕತೆಯಲ್ಲಿ ದೊಡ್ಡ ಕುಸಿತ ಕಾಣುತ್ತಿದೆ. ಇದರಿಂದಾಗಿ ವಿಶ್ವಾದ್ಯಂತ ಬಡ್ಡಿ ದರಗಳು ಹೆಚ್ಚಾಗಿದ್ದು, ಜನಸಾಮಾನ್ಯರಷ್ಟೇ ಅಲ್ಲ ಜೆಫ್ ಬೆಜೋಸ್ (Jeff Bezos), ಎಲಾನ್ ಮಸ್ಕ್ (Elon Musk), ಮಾರ್ಕ್ ಜುಕರ್ ಬರ್ಗ್ (Mark Zuckerberg) ರಂತಹ ಶ್ರೀಮಂತರ ಸಂಪತ್ತು 60 ಬಿಲಿಯನ್ ಡಾಲರ್‌ಗಳಷ್ಟು ಕುಸಿತವನ್ನು ಕಂಡಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಈ ಆರ್ಥಿಕ ಪರಿಣಾಮ ಭಾರತದಲ್ಲೂ ಪ್ರತಿಧ್ವನಿಸಿದೆ. ಭಾರತೀಯ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಆದರೆ ಈ ಹಾನಿಯು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ಅವರ ಆಸ್ತಿ ಮೌಲ್ಯವೂ ತೀವ್ರವಾಗಿ ಏರಿಕೆಯಾಗಿದೆ.

ಇದಕ್ಕೆ ಮುಖ್ಯ ಕಾರಣ, ಪ್ರಧಾನಿ ಮೋದಿ ಜತೆಗಿನ ಅದಾನಿ ನಿಕಟ ಒಡನಾಟವೇ ಇದಕ್ಕೆ ಕಾರಣ ಎನ್ನಲಾಗಿದೆ. ಮೋದಿಯವರ ವಿದೇಶ ಪ್ರವಾಸಗಳು ಅದಾನಿಯವರ ವ್ಯಾಪಾರ ಹಿತಾಸಕ್ತಿಗಾಗಿ ಎಂಬ ಟೀಕೆಯೂ ಇದೆ. ಈಗಾಗಲೇ ಶ್ರೀಲಂಕಾದ ವಿದ್ಯುತ್ ಯೋಜನೆಗಳನ್ನು ಅದಾನಿಗೆ ನೀಡುವಂತೆ ಭಾರತ ಸರ್ಕಾರ ಒತ್ತಡ ಹೇರಿತ್ತು ಎಂಬ ದೂರುಗಳಿವೆ.

ಈ ಹಿನ್ನೆಲೆಯಲ್ಲಿ, ಆಫ್ರಿಕಾದ ಕೀನ್ಯಾ ದೇಶದಲ್ಲೂ ಅದಾನಿ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕೀನ್ಯಾದ ರಾಜಧಾನಿ ನೈರೋಬಿ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಇದಕ್ಕೆ ಕಾರ್ಮಿಕರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ ಅದಾನಿ ವಿರುದ್ಧ ಕೀನ್ಯಾದಲ್ಲಿ ಪ್ರತಿಭಟನೆ ಕೂಡ ಭುಗಿಲೆದ್ದಿದೆ. ಕೀನ್ಯಾ ಏರ್ಮೆನ್ ಅಸೋಸಿಯೇಷನ್ ಮುಷ್ಕರಕ್ಕೆ ಕರೆ ನೀಡಿದೆ. ಇದನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಪಕ್ಷ, “ಭಾರತೀಯ ಪ್ರಧಾನಿ ಮೋದಿಯವರೊಂದಿಗಿನ ಅದಾನಿಯವರ ಸ್ನೇಹದಿಂದಾಗಿ ಕೀನ್ಯಾದಲ್ಲಿ ಅದಾನಿ ವಿರುದ್ಧದ ಆಂದೋಲನವು ಭಾರತ ಮತ್ತು ಭಾರತ ಸರ್ಕಾರದ ವಿರುದ್ಧದ ಕೋಪವಾಗಿ ಸುಲಭವಾಗಿ ಬದಲಾಗಬಹುದು”ಎಂದು ಎಚ್ಚರಿಸಿದೆ.