ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2024 » Page 14 of 61 » Dynamic Leader
October 24, 2024
Home 2024 (Page 14)
ದೇಶ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ‘ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ?’ ಎಂಬ ಗೊಂದಲ ಎಲ್ಲರಲ್ಲಿಯೂ ಇದೆ. ಈ ಗೊಂದಲಕ್ಕೆ ಕಾರಣ ಮತ್ತು ಉತ್ತರವನ್ನು ವಿವರವಾಗಿ ನೋಡೋಣ!

1947ರ ಆಗಸ್ಟ್ 15 ರಂದು ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಇದಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಮತ್ತು ಸ್ವಾತಂತ್ರ್ಯದ ಸಾಧನೆಯನ್ನು ಆಚರಿಸಲು ನಾವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತೇವೆ. ಆ ದಿನದಲ್ಲಿ ನಾವು ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡುತ್ತೇವೆ.

ಆದರೆ ಈಗ ಪ್ರಶ್ನೆ ಅದಲ್ಲ. ಪ್ರತಿ ವರ್ಷ ಈ ದಿನ ಬಂದರೆ ‘ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ? ಎಂಬ ಗೊಂದಲ ಹೆಚ್ಚಿನ ಜನರಿಗೆ ಏಳುವುದು ಸಾಮಾನ್ಯ. ಅಂದರೆ 1947ಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿರುವುದರಿಂದ ನಾಳೆಯ ದಿನವನ್ನು 77ನೇ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಬಹುದೇ ಎಂದು ಉಲ್ಲೇಖಿಸುವವರಿಗೆ ಇಲ್ಲಿದೆ ಸರಿಯಾದ ಉತ್ತರ.

1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಾಗ ಆಗಸ್ಟ್ 15ನ್ನು ಮೊದಲ ಸ್ವಾತಂತ್ರ್ಯ ದಿನವೆಂದು ದಾಖಲಿಸಲಾಗಿತ್ತು. ಆದ್ದರಿಂದ, ಮುಂದಿನ ವರ್ಷ (1948ರಲ್ಲಿ) ನಾವು 2ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. ಆ ದೃಷ್ಟಿಯಿಂದ, ನಾಳೆಯ ದಿನವನ್ನು 78ನೇ ಸ್ವಾತಂತ್ರ್ಯ ದಿನಾಚರಣೆ ಎಂದು ಲೆಕ್ಕಿಸಲಾಗಿದೆ. ಈ ವರ್ಷ ಸರ್ಕಾರ ಹೊರಡಿಸಿರುವ ಎಲ್ಲ ಪ್ರಕಟಣೆಗಳಲ್ಲಿಯೂ 78ನೇ ಸ್ವಾತಂತ್ರ್ಯ ದಿನಾಚರಣೆ ಎಂದೇ ನಮೂದಿಸಲಾಗಿದೆ.

ಕ್ರೈಂ ರಿಪೋರ್ಟ್ಸ್ ದೇಶ

ಕಳೆದ ಶುಕ್ರವಾರ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು. ಕಣ್ಣು, ಬಾಯಿ, ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದ್ದು, ಎಡಗಾಲು, ಕುತ್ತಿಗೆ, ಬಲಗೈ ಮತ್ತು ತುಟಿಗಳಿಗೆ ಗಾಯಗಳಾಗಿದ್ದವು. ಶವಪರೀಕ್ಷೆ ವರದಿಯ ಪ್ರಕಾರ, ಕೊಲೆಯ ನಂತರ ಯುವ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ತನಿಖೆಯಲ್ಲಿ, ಕೊಲೆ ಆರೋಪಿ ಆಸ್ಪತ್ರೆಗೆ ಆಗಾಗ್ಗೆ ಬರುತ್ತಿದ್ದ ಭದ್ರತಾ ಸ್ವಯಂಸೇವಕ ಎಂಬುದು ಬಹಿರಂಗವಾಗಿದೆ. ಅಲ್ಲದೇ ಕೊಲೆಯಾದ ಬಳಿಕ ಯಾವುದೇ ಟೆನ್ಷನ್ ಇಲ್ಲದೇ, ಓಡಿ ಹೋಗದೆ ರಕ್ತಸಿಕ್ತ ಬಟ್ಟೆಗಳನ್ನು ಒಗೆದ ಆ ವ್ಯಕ್ತಿ, ಪಕ್ಕದ ಭದ್ರತಾ ಕೊಠಡಿಗೆ ಹೋಗಿ ನೆಮ್ಮದಿಯಿಂದ ಮಲಗಿ ನಿದ್ರಿಸಿದ್ದಾನೆ.

ಆ ವ್ಯಕ್ತಿಯ ಶೂ ಮೇಲಿದ್ದ ರಕ್ತದ ಕಲೆಗಳಿಂದ ಆತನೇ ಕೊಲೆಗಾರ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಘಟನೆ ನಡೆದ ದಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಪಶ್ಚಿಮ ಬಂಗಾಳವನ್ನು ಬೆಚ್ಚಿಬೀಳಿಸಿದ ಕೊಲೆ ಘಟನೆಯ ನಂತರ ಪಶ್ಚಿಮ ಬಂಗಾಳದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅಭ್ಯಾಸ ವೈದ್ಯರು ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಆರಂಭಗೊಂಡು ದೇಶಾದ್ಯಂತ ವಿವಿಧ ಆಸ್ಪತ್ರೆಗಳ ವೈದ್ಯರು ಆರೋಪಿಗಳಿಗೆ ತಕ್ಷಣದ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ವಿವಾದ ಎದ್ದ ಬೆನ್ನಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇಂದು (ಆಗಸ್ಟ್ 13) ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅಧಿವೇಶನದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಹೆಚ್ಚುತ್ತಿರುವ ರಾಜಕೀಯ ಒತ್ತಡದ ನಡುವೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹತ್ಯೆಗೀಡಾದ ವಿದ್ಯಾರ್ಥಿಯ ಕುಟುಂಬವನ್ನು ಭೇಟಿ ಮಾಡಿ, “ಮುಂದಿನ ಶನಿವಾರದೊಳಗೆ ತನಿಖೆ ಪೂರ್ಣಗೊಳಿಸದಿದ್ದರೆ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಶಿಫಾರಸು ಮಾಡಲಾಗುವುದು” ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ, ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ವೈದ್ಯರು ತಿಳಿಸಿದ್ದಾರೆ.

ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಪ್ರತಿಭಟನಾ ನಿರತ ವೈದ್ಯಕೀಯ ಸಂಘಗಳ ಜತೆ ಮಾತುಕತೆ ನಡೆಸಿದ್ದಾರೆ. ಆ ಸಮಯದಲ್ಲಿ, “ಘಟನೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆ ತನಿಖೆ ನಡೆಸಬೇಕು ಮತ್ತು ಕರ್ತವ್ಯದಲ್ಲಿರುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂಬ ಬೇಡಿಕೆಗಳನ್ನು ವೈದ್ಯಕೀಯ ಸಂಘದಿಂದ ಮುಂದಿಡಲಾಗಿದೆ.

ಆದರೆ, ಕೇಂದ್ರ ಸಚಿವರ ಜತೆಗಿನ ಮಾತುಕತೆಯಲ್ಲಿ ಸೌಹಾರ್ದಯುತ ಪರಿಹಾರ ಸಿಗದ ಕಾರಣ ಪ್ರತಿಭಟನೆ ಮುಂದುವರಿಸುವುದಾಗಿ ವೈದ್ಯಕೀಯ ಸಂಘಗಳು ಘೋಷಿಸಿವೆ.

ಈ ಹಿನ್ನೆಲೆಯಲ್ಲಿ, ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿ ಹತ್ಯಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತು ಪ್ರಕಟಿಸಿರುವ ಹೇಳಿಕೆಯಲ್ಲಿ, “ಕೋಲ್ಕತ್ತಾದ ಘಟನೆ ನಿರ್ಭಯಾ 2.0. ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ವೈದ್ಯಕೀಯ ಸಂಘಗಳು ಇಂದಿನಿಂದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ, ಒಪಿಡಿ ಎಂಬ ಹೊರರೋಗಿ ವಿಭಾಗದಲ್ಲಿ ವೈದ್ಯರು ನಿರ್ದಿಷ್ಟ ಸೇವೆಗಳಲ್ಲಿ ಕೆಲಸ ಮಾಡುವುದಿಲ್ಲ.

ಈ ಹೋರಾಟವನ್ನು ಬಲಪಡಿಸಲು ಎಲ್ಲಾ ವೈದ್ಯರು, ತರಬೇತಿ ವೈದ್ಯರು, ಡೀನ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಕೈಜೋಡಿಸಬೇಕು” ಎಂದು ಹೇಳಲಾಗಿದೆ. ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ಮುಷ್ಕರವನ್ನು ಘೋಷಿಸಿರುವುದರಿಂದ ದೇಶಾದ್ಯಂತ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳು ಪರಿಣಾಮ ಬೀರುವ ವಾತಾವರಣವಿದೆ.

ದೇಶ

ತಿರುವನಂತಪುರಂ: ಪತ್ರಿಕೆಗಳು ಮತ್ತು ಪತ್ರಕರ್ತರ ವಿರುದ್ಧ ಅನಗತ್ಯ ಮಾನನಷ್ಟ ಮೊಕದ್ದಮೆಗಳಿಗೆ ಅವಕಾಶ ನೀಡದಂತೆ ಕೆಳ ನ್ಯಾಯಾಲಯಗಳಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

ಕೇರಳದ ಆಲುವಾ ಪುರಸಭೆಯ ಮಹಿಳಾ ಕೌನ್ಸಿಲರ್, ಮಲಯಾಳ ಮನೋರಮಾ ದೈನಿಕದ ವಿರುದ್ಧ ಅಪರಾಧ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಲಯಾಳಂ ಮನೋರಮಾ ದಿನಪತ್ರಿಕೆಯ ಪರವಾಗಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಬದರುದ್ದೀನ್ ಹೊರಡಿಸಿದ ಆದೇಶದಲ್ಲಿ, “ಪತ್ರಿಕಾರಂಗವು ಭಾರತದ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ದೇಶದ ದೈನಂದಿನ ವಿದ್ಯಮಾನಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಪತ್ರಿಕಾ ಮತ್ತು ಮಾಧ್ಯಮಗಳ ಪಾತ್ರ ಅಪಾರವಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು ಸೆಕ್ಷನ್ 500ರ ಅಡಿಯಲ್ಲಿ, ಪತ್ರಕರ್ತರ ವಿರುದ್ಧ ಅನಗತ್ಯ ಮಾನನಷ್ಟ ಮೊಕದ್ದಮೆ ಹೂಡುವುದು ಜನರ ಹಕ್ಕುಗಳ ಉಲ್ಲಂಘನೆಯೂ ಆಗಿದೆ.

ಪತ್ರಿಕೆಗಳು ಮತ್ತು ಪತ್ರಕರ್ತರ ವಿರುದ್ಧ ಅನಗತ್ಯ ಮಾನನಷ್ಟ ಮೊಕದ್ದಮೆಗಳಿಗೆ ಅವಕಾಶ ನೀಡಬಾರದು. ಕ್ರಿಮಿನಲ್ ನ್ಯಾಯಾಲಯಗಳು ಭವಿಷ್ಯದಲ್ಲಿ ಜಾಗರೂಕರಾಗಿರಬೇಕು. ಈ ಪ್ರಕರಣದಲ್ಲಿ ಮಹಿಳಾ ಪುರಸಭಾ ಸದಸ್ಯೆಯ ಬಗ್ಗೆ ವರದಿ ಮಾಡಿದ ವಿಚಾರದಲ್ಲಿ ಮಲಯಾಳ ಮನೋರಮಾ ವಿರುದ್ಧ ಬಾಕಿ ಇರುವ ಮಾನನಷ್ಟ ಮೊಕದ್ದಮೆ ಅನಗತ್ಯವಾದದ್ದು” ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಇದರಿಂದ ಮಾನನಷ್ಟ ಮೊಕದ್ದಮೆ ರದ್ದಾಗಿದೆ.

ರಾಜಕೀಯ

“ಬಂಗಾಳಕೊಲ್ಲಿಯಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ಅವಕಾಶ ನೀಡಿದ್ದರೆ ನಾನೇ ಅಧಿಕಾರದಲ್ಲಿ ಮುಂದುವರಿಯುತ್ತಿದ್ದೆ” ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಅವಾಮಿ ಲೀಗ್ ಸದಸ್ಯೆ ಶೇಖ್ ಹಸೀನಾ ಅವರು 2009ರಲ್ಲಿ ಎರಡನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾದರು. ಆ ಬಳಿಕ ಸತತ 5 ಬಾರಿ ಸಂಸತ್ ಚುನಾವಣೆಯಲ್ಲಿ ಸೋಲದೆ ಗೆದ್ದು ಪ್ರಧಾನಿಯಾದರು.

ಆದರೆ, ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ವಾರಸುದಾರರಿಗೆ ಮೀಸಲಾತಿ ನೀಡಿರುವುದನ್ನು ವಿರೋಧಿಸಿ ಬಾಂಗ್ಲಾದಲ್ಲಿ ನಡೆದ ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಪ್ರತಿಭಟನೆ ಶಮನಗೊಂಡಿದ್ದ ಹಿನ್ನೆಲೆಯಲ್ಲಿ, ಕೆಲ ದಿನಗಳ ಹಿಂದೆ ಮತ್ತೆ ಪ್ರತಿಭಟನೆ ಭುಗಿಲೆದ್ದಿತ್ತು.

ಈ ಪ್ರತಿಭಟನೆಯ ತೀವ್ರತೆಯನ್ನು ಗ್ರಹಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದರು. ಇದರ ಬೆನ್ನಲ್ಲೇ ಇದೀಗ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಏತನ್ಮಧ್ಯೆ ಶೇಖ್ ಹಸೀನಾ ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಕುರಿತು ಬರೆದಿರುವ ಪತ್ರ ಪ್ರಕಟವಾಗಿದೆ.

ಆ ಪತ್ರದಲ್ಲಿ, “ಬಾಂಗ್ಲಾದೇಶದಲ್ಲಿ ಮತ್ತಷ್ಟು ಹಿಂಸಾಚಾರ ಮತ್ತು ಪ್ರಾಣಹಾನಿ ತಡೆಯಲು ರಾಜೀನಾಮೆ ನೀಡಿದ್ದೇನೆ. ವಿದ್ಯಾರ್ಥಿಗಳ ಶವಗಳ ಮೇಲೇರಿ ವಿರೋಧಿಗಳು ಅಧಿಕಾರಕ್ಕೆ ಬರುವುದನ್ನು ನಾನು ತಡೆದಿದ್ದೇನೆ. ಬಂಗಾಳಕೊಲ್ಲಿಯನ್ನು ಆಳಲು ಅಮೆರಿಕಕ್ಕೆ ಅವಕಾಶ ನೀಡುವುದರ ಜೊತೆಗೆ, ನಮ್ಮ ದೇಶಕ್ಕೆ ಸೇರಿದ ಸೇಂಟ್ ಮಾರ್ಟಿನ್ ದ್ವೀಪಗಳ ಸಾರ್ವಭೌಮತ್ವವನ್ನು ಅವರಿಗೆ ಹಸ್ತಾಂತರಿಸಿದ್ದರೆ ನಾನು ಅಧಿಕಾರದಲ್ಲಿರುತ್ತಿದ್ದೆ.

ಈಗಲಾದರೂ ಪ್ರತ್ಯೇಕತಾವಾದಿಗಳ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ದೇಶದ ಜನತೆಗೆ ಮನವಿ ಮಾಡುತ್ತೇನೆ. ಅವಾಮಿ ಲೀಗ್‌ ಪಕ್ಷದವರು ಭರವಸೆ ಕಳೆದುಕೊಳ್ಳಬಾರದು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ನಾನು ವಿಫಲವಾಗಿರಬಹುದು. ಆದರೆ, ನಮ್ಮ ಕುಟುಂಬ ಮತ್ತು ನನ್ನ ತಂದೆ ಯಾರಿಗಾಗಿ ಪ್ರಾಣ ತ್ಯಾಗ ಮಾಡಿದರೋ ಅವರು ಗೆದ್ದಿದ್ದಾರೆ” ಎಂದು ಅದರಲ್ಲಿ ಹೇಳಿದೆ.

ದೇಶ

ಡಿ.ಸಿ.ಪ್ರಕಾಶ್

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ನೇತೃತ್ವದ ಪ್ರಸ್ತುತ ಸರ್ಕಾರವನ್ನು ಉರುಳಿಸಲಾಗಿದ್ದು, ಸೇನೆಯ ಬೆಂಬಲದೊಂದಿಗೆ ವಿರೋಧ ಪಕ್ಷವಾದ ರಾಷ್ಟ್ರೀಯವಾದಿ ಪಕ್ಷ ಸರ್ಕಾರ ರಚಿಸಲಿದೆ ಎಂದು ಘೋಷಿಸಲಾಗಿದೆ. ಆದರೆ, ಅಲ್ಲಿ ಪ್ರತಿಭಟನೆ ಮುಂದುವರಿದಿದೆ. ಅಲ್ಲದೆ, ಅಲ್ಲಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ವಿವಿಧ ನಕಲಿ ಸುದ್ದಿಗಳು ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.

ರಿಪಬ್ಲಿಕ್ ಟಿವಿ ಇಂತಹ ಸುದ್ದಿಯನ್ನು ಪ್ರಕಟಿಸಿದ ನಂತರ, ಬಾಂಗ್ಲಾದೇಶದ ರಾಷ್ಟ್ರೀಯ ಹಿಂದೂ ಮಹಾಜೋತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಪ್ರಮಾಣಿಕ್ ಅವರು ‘ಹಿಂದೂಗಳ ಮೇಲೆ ದಾಳಿ ನದೆದಿಲ್ಲ, ಬದಲಿಗೆ ಅವರನ್ನು ಮತ್ತು ದೇವಾಲಯಗಳನ್ನು ರಕ್ಷಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಬಿಜೆಪಿ ಮತ್ತು ಹಿಂದುತ್ವ ಗ್ಯಾಂಗ್‌ಗಳು ನಿರಂತರವಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿವೆ.

ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಈ ನಕಲಿ ಸುದ್ದಿಗೆ ಪ್ರತಿಯಾಗಿ ಹಿಂದುತ್ವದ ಗ್ಯಾಂಗ್‌ಗಳು ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿ ಮಾಡುವ ಮೂಲಕ ಅರಾಜಕತೆಯಲ್ಲಿ ತೊಡಗಿವೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ಹಿಂದೂ ಗುಂಪು ಭಾರತೀಯ ಮುಸ್ಲಿಂ ಕೊಳೆಗೇರಿ ನಿವಾಸಿಗಳ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಪಿಂಕಿ ಚೌಧರಿ ನೇತೃತ್ವದ ಹಿಂದೂ ರಕ್ಷಾ ದಳ ಮತ್ತು ಅವರ ಸಹಚರರು, ಅಲ್ಲಿನ ನಿವಾಸಿಗಳ ಹೆಸರುಗಳನ್ನು ಕೇಳಿ, ಅದು ಇಸ್ಲಾಮಿಕ್ ಹೆಸರಾಗಿದ್ದರೆ ಅವರ ಮೇಲೆ ದಾಳಿ ಮಾಡಿ, ಅವರ ಗುಡಿಸಲುಗಳನ್ನು ಧ್ವಂಸಗೊಳಿಸಿ, ‘ಬಾಂಗ್ಲಾದೇಶಿ’ ಎಂದು ಕಿರುಚಾಡುತ್ತಾ ಅವರ ಮೇಲೆ ದಾಳಿ ನಡೆಸಿದ್ದಾರೆ.

ಇದು ಭಾರೀ ಸಂಚಲನ ಮೂಡಿಸಿರುವಾಗಲೇ, ದೆಹಲಿಯಲ್ಲಿ ಬಾಂಗ್ಲಾದೇಶಿಯರ ಮೇಲೆ ದಾಳಿ ನಡೆಸಿದ ತನ್ನ ಸಹಚರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪಿಂಕಿ ಚೌಧರಿ ವಿಡಿಯೋ ಮೂಲಕ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದ್ದಾನೆ. ಅಲ್ಲದೇ “ಭಾರತದಲ್ಲಿರುವ ಯಾವ ಬಾಂಗ್ಲಾದೇಶಿಯನ್ನೂ ಬಿಡುವುದಿಲ್ಲ, 24 ಗಂಟೆಗಳ ಒಳಗೆ ನಾನು ಯಾರನ್ನೂ ಬಿಡುವುದಿಲ್ಲ, ಅವರು ಉಳಿದುಕೊಂಡಿರುವ ಸ್ಥಳಗಳೆಲ್ಲವೂ ನನಗೆ ಗೊತ್ತಿದೆ” ಎಂದು ಬೆದರಿಕೆ ಹಾಕಿದ್ದಾನೆ.

ಹಿಂದೂ ರಕ್ಷಾ ದಳದ ಪಿಂಕಿ ಚೌಧರಿ ಮತ್ತು ಆತನ ಸಹಚರರು ಅಮಾಯಕ ಮುಸ್ಲಿಮರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಖಂಡನೆ ವ್ಯಕ್ತವಾಗುತ್ತಿದೆ. ಪಿಂಕಿ ಚೌಧರಿ ದಾಳಿ ನಡೆಸಿದ ಜಾಗದಲ್ಲಿ, ಬಾಂಗ್ಲಾದೇಶಿಗರು ಯಾರೂ ಇಲ್ಲ ಎಂದು ಪೊಲೀಸರು ಈಗಾಗಲೆ ವಿವರಣೆ ನೀಡಿದ್ದಾರೆ. ಪೊಲೀಸರು ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.

ವಿದೇಶ

ಢಾಕಾ: “ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಕ್ರೂರವಾಗಿದೆ. ವಿದ್ಯಾರ್ಥಿಗಳ ಕಾರ್ಯಗಳು ಎಲ್ಲಾ ಧರ್ಮದ ಜನರನ್ನು ರಕ್ಷಿಸುವಂತಿರಬೇಕು” ಎಂದು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಅಧ್ಯಕ್ಷ ಮುಹಮ್ಮದ್ ಯೂನಸ್ (Muhammad Yunus) ಹೇಳಿದ್ದಾರೆ.

ಮೀಸಲಾತಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರದಲ್ಲಿ ಕೊನೆಗೊಂಡಿದೆ. ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶವನ್ನು ತೊರೆದರು. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ (84), ನೇತೃತ್ವದಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅಧಿಕಾರ ವಹಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಹಮ್ಮದ್ ಯೂನಸ್, “ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಕ್ರೂರವಾಗಿದೆ. ವಿದ್ಯಾರ್ಥಿಗಳು ಹಿಂದೂ, ಕ್ರೈಸ್ತ, ಬೌದ್ಧ ಧರ್ಮ ಸೇರಿದಂತೆ ಎಲ್ಲ ಧರ್ಮದ ಜನರನ್ನು ರಕ್ಷಿಸಬೇಕು.

ಅನೇಕ ಜನರು ನಿಮ್ಮ ಪ್ರಯತ್ನಗಳನ್ನು ವ್ಯರ್ಥ ಮಾಡಲು ಯೋಜಿಸುತ್ತಾರೆ. ಈ ಬಾರಿ ವಿಫಲರಾಗಬೇಡಿ. ಬಾಂಗ್ಲಾದೇಶವನ್ನು ಅಭಿವೃದ್ಧಿಪಡಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು” ಎಂದರು.

ರಾಜಕೀಯ

ಮೈಸೂರು: ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಮತ್ತು ಅಧಿಕಾರ ದುರ್ಬಳಕೆ, ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಿಜೆಪಿ, ಜೆಡಿಎಸ್ ನ ಜನತಂತ್ರ ವಿರೋಧಿ ನಡೆಯನ್ನು ವಿರೋಧಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಜನಾಂದೋಲನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

“ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ. ಇವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಈ ನಾಡಿನ‌ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಬಿಜೆಪಿ, ಜೆಡಿಎಸ್ ಎಷ್ಟೇ ಕಪಟ ಉದ್ದೇಶದ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ. ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಹೆದರುವುದಿಲ್ಲ. ನಾನು ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ” ಎಂದು ಹೇಳಿದರು.

“ನೀವೆಲ್ಲಾ ಪ್ರಜಾಪ್ರಭುತ್ವದ ಸೇನಾನಿಗಳು. ಸಂವಿಧಾನ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತ ನಾಡಿನ ಏಳುಕೋಟಿ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಕೂಡ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ. ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ.

ಜೆಡಿಎಸ್ ನ ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಯಾವತ್ತೂ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಲ್ಲ. ‘ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸಿದರೆ ನನ್ನ ಶವದ ಮೇಲೆ ನಡೆಸಬೇಕು’ ಎಂದು ದೇವೇಗೌಡರು ಹೇಳಿದ್ದರು. ‘ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ’ ಎಂದು ಹೇಳಿದ್ದ ದೇವೇಗೌಡರೇ ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ” ಎಂದು ಕಿಡಿಕಾರಿದರು.

“ನಾನು ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೀನಿ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ ನನಗೆ ಹಣ ಮಾಡುವ ಆಸೆ ಬಂದಿಲ್ಲ, ನನ್ನ ಪತ್ನಿ ಇವತ್ತಿನವರೆಗೂ ಸಾರ್ವಜನಿಕವಾಗಿ ಕಾಣಿಸಿಲ್ಲ. ಎರಡು ಬಾರಿ ಸಿಎಂ ಆದರೂ ಪ್ರಮಾಣ ವಚನಕ್ಕೂ ಬರಲಿಲ್ಲ.

ನಾವು ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ನಿಮ್ಮ ನಂಬಿಕೆಗೆ ದ್ರೋಹ ಎಸಗಲು ಸಾಧ್ಯವಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ಯಾವತ್ತೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನಾನು ಸೊನ್ನೆಯಿಂದ ರಾಜಕೀಯ ಪ್ರಾರಂಭಿಸಿದೆ. 1983ರಲ್ಲಿ ಮೊದಲ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ 250ರೂ ಡೆಪಾಸಿಟ್ ಕಟ್ಟಿದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದರು. ಆ ಚುನಾವಣೆಯಲ್ಲಿ ಜನರೇ 63 ಸಾವಿರ ರೂಪಾಯಿ ಖರ್ಚು ಮಾಡಿ ನನ್ನನ್ನು ಆರಿಸಿದರು. ನನ್ನ ಒಂಬತ್ತು ಚುನಾವಣೆ ಗೆಲುವಲ್ಲೂ ಜನರೇ ಹಣ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ‌. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ.

ಬಿಜೆಪಿ, ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ. ಹಿಂದುಳಿದ ವರ್ಗಗಳಲ್ಲಿ ದೇವರಾಜ ಅರಸು ಬಿಟ್ಟರೆ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಿದ್ದು ನಾನು ಮಾತ್ರ. ಇದನ್ನು ಬಿಜೆಪಿ, ಜೆಡಿಎಸ್ ಸಹಿಸುತ್ತಿಲ್ಲ. ಆದರೆ ಎಲ್ಲಿಯವರೆಗೂ ಸೇನಾನಿಗಳಾದ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಯಾವ ಪಾದಯಾತ್ರೆಗಳೂ ಅಲುಗಾಡಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

“ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿವೆ. ಸರ್ಕಾರಕ್ಕೂ ನಿಗಮದ ಹಗರಣಕ್ಕೂ ಸಂಬಂಧ ಇಲ್ಲ ಎನ್ನುವುದು ದಾಖಲೆಗಳಲ್ಲಿದೆ.

ವಾಲ್ಮೀಕಿ ನಿಗಮದ ಹಗರಣ ಹೊರಗೆ ಬಂದ ತಕ್ಷಣ ನಾವು ವಿಶೇಷ ತನಿಖಾ ದಳ ರಚಿಸಿದೆವು. ತನಿಖೆ ನಡೆದು ಹಣ ವಾಪಾಸ್ ವಸೂಲಾಗಿದೆ. 50 ಕೋಟಿ ರೂಪಾಯಿಯನ್ನು ಎಸ್‌ಐಟಿ ರಿಕವರಿ ಮಾಡಿ ಆಗಿದೆ. 46 ಕೋಟಿ ಹಣ ಖಾಸಗಿ ಬ್ಯಾಂಕ್ ನಲ್ಲಿದ್ದು ಫ್ರೀಜ್ ಮಾಡಿದ್ದಾರೆ. ಇಷ್ಟು ಪರಿಣಾಮಕಾರಿಯಾಗಿ ಎಸ್‌ಐಟಿ ಯವರು ತನಿಖೆ ನಡೆಸಿದ್ದಾರೆ. ಆದರೂ, ಇಡಿಯವರು ಸ್ವಯಂಸ್ಫೂರ್ತಿಯಿಂದ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದರೂ ಸರ್ಕಾರದ ವಿರುದ್ಧ ಏನೂ ದಾಖಲೆ ಸಿಗಲಿಲ್ಲ. ಹೀಗಾಗಿ ಹಗರಣವೇ ಅಲ್ಲದ ಮೂಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಟ್ಟರು.

ನನ್ನದೊಂದು ಪತ್ರ ಇಲ್ಲ, ನನ್ನದೊಂದು ಸಹಿ ಇಲ್ಲ, ಆಗ ನಮ್ಮ ಸರ್ಕಾರ ಅಧಿಕಾರದಲ್ಲೂ ಇರಲಿಲ್ಲ. ಆದರೂ ಹಗರಣ, ಹಗರಣ ಎಂದು ಬೊಬ್ಬೆ ಹಾಕುತ್ತಾ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಇದಕ್ಕೆ ನೀವ್ಯಾರೂ ಸೊಪ್ಪು ಹಾಕಬೇಡಿ, ನಂಬಬೇಡಿ” ಎಂದರು.

“ಯಡಿಯೂರಪ್ಪ ಅವರು ಈ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೋ ಕೇಸಲ್ಲಿ ಇದ್ದಾರೆ. ನಾಚಿಕೆ ಆಗಲ್ವಾ? ಬಿಜೆಪಿ, ಜೆಡಿಎಸ್ ಅಧಿಕಾರಿದಲ್ಲಿ ಇದ್ದಾಗ ನಡೆಸಿದ್ದು ಒಂದಾ, ಎರಡಾ ಹಗರಣಗಳು? ಸುಪ್ರೀಂಕೋರ್ಟ್ ನಲ್ಲಿ ತಮ್ಮ ಹಗರಣಗಳಿಗೆ ತಡೆಯಾಜ್ಞೆ ತಂದಿದ್ದಾರೆ. ಇವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ವಾ?

ಯಡಿಯೂರಪ್ಪ ಅವರು ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ಆರ್.ಅಶೋಕ್, ವಿಜಯೇಂದ್ರ ಇವರೆಲ್ಲರೂ ಜೈಲಿಗೆ ಹೋಗಬೇಕಾದವರು. ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ”? ಎಂದು ಆಕ್ರೋಶ ವ್ಯಕ್ತಪಡಿಸಿದರು.

“15 ಬಜೆಟ್ ಮಂಡಿಸಿದ್ದೇನೆ. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ, ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ತಗೊಂಡು ಕಟ್ಟಿಸಿದ್ದೆ. ಸಾಲ ತೀರಿಸಲಾಗದೆ ಆ ಮನೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಿ” ಎಂದು ಸವಾಲೆಸದರು.

ಈಗ ರಾಜಭವನವನ್ನು ದುರುಪಯೋಗಪಡಿಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಸೇರಿದ್ದಾರೆ. ಕುಮಾರಸ್ವಾಮಿ ವಿರುದ್ಧ, ನಿರಾಣಿ ವಿರುದ್ಧ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದರೂ ರಾಜಭವನದಿಂದ ಇದುವರೆಗೂ ನೋಟಿಸ್ ಹೋಗಿಲ್ಲ. ಆದರೆ ನನಗೆ ಮಾತ್ರ ನೋಟಿಸ್ ಬಂದಿದೆ. ಇದು ಪರಮದ್ರೋಹ ಅಲ್ಲವೇ?” ಎಂದು ಕಿಡಿಕಾರಿದರು.  

“ಮುಡಾ ವಿಚಾರದಲ್ಲಿ ನನ್ನ ತಪ್ಪು ಎಲ್ಲಿದೆ? ಮುಡಾದ ಯಾವ ಸದಸ್ಯರಿಗೂ ನಾನು ಕರೆ ಮಾಡಿಲ್ಲ, ಬೇಡಿಕೆ ಇಟ್ಟಿಲ್ಲ, ಶಿಫಾರಸ್ಸು ಮಾಡಿಲ್ಲ. ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಹೀಗಿದ್ದಾಗ ಇದರಲ್ಲಿ ನನ್ನ ಪಾತ್ರ ಏನಿದೆ?

ನಮ್ಮ ಜಮೀನು ಅಕ್ರಮವಾಗಿ ವಶಕ್ಕೆ ಪಡೆದು ಸೈಟು, ಪಾರ್ಕ್, ರಸ್ತೆ ಮಾಡಿ ಹಂಚಿಬಿಟ್ಟರು. ಇಲ್ಲಿ ತಪ್ಪು ಮಾಡಿರುವುದು ಮುಡಾ. ತಪ್ಪು ಒಪ್ಪಿಕೊಂಡು ನಂತರ ನನ್ನ ಕುಟುಂಬಕ್ಕೆ ಬದಲಿ ನಿವೇಶನ ನೀಡಿದ್ದಾರೆ. ನನ್ನ ಪತ್ನಿ ಬದಲಿ ಜಮೀನು ಕೊಡಿ ಎಂದು ಅರ್ಜಿ ಹಾಕಿದ್ದರೇ ವಿನಃ ಯಾವುದೇ ನಿರ್ಧಿಷ್ಟ ಜಾಗದಲ್ಲಿ ನಿವೇಶನ ಕೊಡಿ ಎಂದು ಕೇಳಿರಲಿಲ್ಲ.

ನಿವೇಶನ ಕೊಟ್ಟವರು ಜಿಜೆಪಿ ಸರ್ಕಾರದವರು. ಈಗ ಹಗರಣ ನಡೆದಿದೆ ಎನ್ನುತ್ತಿರುವವರು ಅವರೇ. ಇದರಲ್ಲೇ ಅವರ ಉದ್ದೇಶ ಏನಿದೆ ಎಂಬುದನ್ನು ರಾಜ್ಯದ ಜನ ಅರ್ಥಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

ದೇಶ

ಚೆನ್ನೈ: ಸಾಮಾಜಿಕ ಮಾಧ್ಯಮಗಳು ಜನರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿರುವುದರಿಂದ ಅದನ್ನು ನಿಷ್ಕ್ರಿಯಗೊಳಿಸಬಾರದು ಎಂದು ಚೆನ್ನೈ ಹೈಕೋರ್ಟ್ ಹೇಳಿದೆ.

ಗೂಂಡಾ ಕಾಯ್ದೆಯನ್ನು ಪ್ರಶ್ನಿಸಿ ಯೂಟ್ಯೂಬರ್ ‘ಸವುಕ್ಕು’ ಶಂಕರ್ ಅವರ ತಾಯಿ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸಾಮಾಜಿಕ ಮಾಧ್ಯಮಗಳಿಗೆ ನಿಯಂತ್ರಣದ ನಿಯಮಗಳನ್ನು ತರುವುದು ಅವಶ್ಯಕ. ಅದನ್ನು ನಿಷ್ಕ್ರಿಯಗೊಳಿಸಲು ಯೋಚಿಸುವುದು ಸರಿಯಲ್ಲ.

ಅದು ಬಂದ ನಂತರ, ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಚರ್ಚೆಗಳು ಹೆಚ್ಚುತ್ತಿವೆ; ಆರೋಗ್ಯಕರವಾಗಿದೆ. ಸಾಮಾಜಿಕ ಮಾಧ್ಯಮಗಳು ಜನರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿರುವುದರಿಂದ ಅದನ್ನು ನಿಷ್ಕ್ರಿಯಗೊಳಿಸಬಾರದು. 77ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿರುವ ಈ ಸಂದರ್ಭದಲ್ಲಿ ಮತ್ತೆ ಜನರ ದನಿ ದಮನ ಮಾಡಬೇಕೆ? ಎಂದು ನ್ಯಾಯಾಧೀಶರು ಹೇಳಿದ್ದಾರೆ.

ದೇಶ

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಒಂದೂವರೆ ವರ್ಷದ ಬಳಿಕ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ದೆಹಲಿ ಆಮ್ ಆದ್ಮಿ ಸರ್ಕಾರದ ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಆಮ್ ಆದ್ಮಿ ಪಕ್ಷದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 2023ರಲ್ಲಿ ಜಾರಿ ಇಲಾಖೆ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಅಲ್ಲಿ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನಂತರ, ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿಯನ್ನು ಕೂಡ ಮೇ 21 ರಂದು ವಜಾಗೊಳಿಸಲಾಯಿತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಗವಾಯಿ ಮತ್ತು ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯ ಪೀಠವು ದಿನಾಂಕವನ್ನು ಸೂಚಿಸದೆ ಕಳೆದ 6 ರಂದು ಮುಂದೂಡಿದ್ದರು.

ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾಗೆ ಇಂದು (ಆಗಸ್ಟ್ 09) ಜಾಮೀನು ಮಂಜೂರಾಗಿದೆ. ರೂ.10 ಲಕ್ಷ ಪಾವತಿಸುವುದರೊಂದಿಗೆ, ಪಾಸ್‌ಪೋರ್ಟ್ ಒಪ್ಪಿಸುವಂತೆಯೂ ಆದೇಶಿಸಲಾಗಿದೆ.

ಬೆಂಗಳೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

“ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 8 ರಿಂದ 19 ರವರೆಗೆ ಏರ್ಪಡಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನಸಾಧನೆ, ದೇಶಕ್ಕೆ ನೀಡಿದ ಕೊಡುಗೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಬೌದ್ಧ ಮತ ಸ್ವೀಕಾರ, ಸಂವಿಧಾನ ರಚನಾ ಸಮಿತಿಯಲ್ಲಿ ಪಾತ್ರ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಆಧರಿಸಿದ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.

“ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜನರು ಸಂವಿಧಾನಗಳ ಆಶಯಗಳನ್ನರಿಯಲು ಅಪೂರ್ವ ಅವಕಾಶ ಒದಗಿಸಿದೆ. ಜನರು ಸಂವಿಧಾನದ ಬಗ್ಗೆ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ” ಎಂದು ಹೇಳಿದರು.

“ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶಗಳಿಗೆ ಸೇರಿದ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂಬುದರಲ್ಲಿ ನಂಬಿಕೆಯಿರಿಸಿದ್ದರು. ಅಂಬೇಡ್ಕರ್ ರವರು ಬಾಲ್ಯದಿಂದ ತಮ್ಮ ಜೀವಿತಾವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶನದಲ್ಲಿ ಬಿಂಬಿಸಲಾಗಿದ್ದು, ಜನರು ಅವರ ಆಶಯಗಳ ಬಗ್ಗೆ ಅರಿಯಬಹುದಾಗಿದೆ” ಎಂದು ಹೇಳಿದರು.

ತೋಟಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ.