ರಾಯ್‌ಪುರ: 170 ನಕ್ಸಲರು ಶರಣಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢದ ಉತ್ತರ ಬಸ್ತಾರ್‌ನಲ್ಲಿರುವ (North Bastar) ಅಬುಜ್ಮರ್ ಬೆಟ್ಟದ ಅರಣ್ಯ (Abujmarh Forest) ಪ್ರದೇಶವನ್ನು ನಕ್ಸಲ್ ಮುಕ್ತ ಪ್ರದೇಶವೆಂದು ಘೋಷಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಒಂದು ಕಾಲದಲ್ಲಿ ಭಯೋತ್ಪಾದನೆಯ ಕೇಂದ್ರವಾಗಿದ್ದ ಛತ್ತೀಸ್‌ಗಢದ ಅಬುಜ್ಮರ್ ಮತ್ತು ಉತ್ತರ ಬಸ್ತಾರ್ ಇಂದು ನಕ್ಸಲೀಯ ಹಿಂಸಾಚಾರದಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಘೋಷಿಸಿರುವುದು ಅತ್ಯಂತ ಸಂತೋಷದ ವಿಷಯ. ಈಗ, ದಕ್ಷಿಣ ಬಸ್ತಾರ್‌ನಲ್ಲಿ ಕೆಲವೇ ಕೆಲವು ನಕ್ಸಲರಿದ್ದಾರೆ, ಅವರನ್ನೂ ಸಹ ನಮ್ಮ ಭದ್ರತಾ ಪಡೆಗಳು ಶೀಘ್ರದಲ್ಲೇ ನಿರ್ಮೂಲನೆ ಮಾಡುತ್ತವೆ.
ಜನವರಿ 2024ರಲ್ಲಿ ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2,100 ನಕ್ಸಲರು ಶರಣಾಗಿದ್ದಾರೆ, 1,785 ಜನರನ್ನು ಬಂಧಿಸಲಾಗಿದೆ ಮತ್ತು 477 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮಾರ್ಚ್ 3, 2026 ರೊಳಗೆ ನಕ್ಸಲೀಯರನ್ನು ನಿರ್ಮೂಲನೆ ಮಾಡಬೇಕು. ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಭಾರಿ ಗೆಲುವಾಗಿದೆ. ನಿನ್ನೆ ಛತ್ತೀಸ್‌ಗಢದಲ್ಲಿ 27 ನಕ್ಸಲರು ಶರಣಾಗಿದ್ದರು. ಇಂದು 170 ನಕ್ಸಲರು ಶರಣಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ನಿನ್ನೆ 61 ನಕ್ಸಲರು ಶರಣಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಟ್ಟು 258 ಎಡಪಂಥೀಯ ಭಯೋತ್ಪಾದಕರು ಹಿಂಸಾಚಾರವನ್ನು ತ್ಯಜಿಸಿದ್ದಾರೆ. ಹಿಂಸಾಚಾರವನ್ನು ತ್ಯಜಿಸಿ ಭಾರತೀಯ ಸಂವಿಧಾನದಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸುವ ನಿರ್ಧಾರಕ್ಕಾಗಿ ನಾನು ಎಲ್ಲರನ್ನೂ ಶ್ಲಾಘಿಸುತ್ತೇನೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸರ್ಕಾರದ ನಿರಂತರ ಪ್ರಯತ್ನಗಳ ಫಲವಾಗಿ ಇದು ಸಾಧ್ಯವಾಗಿದೆ.
ನಕ್ಸಲರ ವಿರುದ್ಧ ನಮ್ಮ ನೀತಿ ಸ್ಪಷ್ಟವಾಗಿದೆ. ಶರಣಾಗಲು ಬಯಸುವವರಿಗೆ ಸ್ವಾಗತ, ಆದರೆ ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ಮುಂದುವರಿಸುವವರು ನಮ್ಮ ಭದ್ರತಾ ಪಡೆಗಳಿಂದ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಎಲ್ಲಾ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗುವಂತೆ ನಾನು ಮನವಿ ಮಾಡುತ್ತೇನೆ” ಎಂದು ಅಮಿತ್ ಶಾ ಹೇಳಿದ್ದಾರೆ.