ದೇಶ Archives » Dynamic Leader
November 21, 2024
Home Archive by category ದೇಶ

ದೇಶ

ದೇಶ

ನವದೆಹಲಿ: ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಂದ ಮಣಿಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಅದರಲ್ಲೂ ಜಿರಿಬಾಮ್ ಜಿಲ್ಲೆಯಲ್ಲಿ 6 ಮಂದಿಯನ್ನು ಕೊಂದ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಮಣಿಪುರದ ಇಂಫಾಲ್ ನಲ್ಲಿ ಅನಿರ್ದಿಷ್ಟ ಕರ್ಫ್ಯೂ ಮತ್ತು ಇಂಟರ್ನೆಟ್ ಸೇವೆಯನ್ನು ಅಮಾನತುಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ‘ಮಣಿಪುರಕ್ಕೆ ಕಾಲಿಡದ ಪ್ರಧಾನಿ ಮೋದಿಯನ್ನು ಆ ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಈ ಬಗ್ಗೆ ಅವರು  ‘ಎಕ್ಸ್’ ಸೈಟ್‌ನಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ,

‘ನಿಮ್ಮ ಡಬಲ್ ಇಂಜಿನ್ ಸರ್ಕಾರದಲ್ಲಿ, ಮಣಿಪುರವು ಏಕೀಕೃತವಾಗಿಯೂ ಇಲ್ಲ, ಸುರಕ್ಷಿತವಾಗಿಯೂ ಇಲ್ಲ. ಮೇ 2023 ರಿಂದ ನಡೆಯುತ್ತಿರುವ ಊಹಿಸಲಾಗದ ನೋವು, ವಿಭಜನೆ ಮತ್ತು ಹಿಂಸಾಚಾರವು ಮಣಿಪುರದ ಜನರ ಭವಿಷ್ಯವನ್ನು ನಾಶಮಾಡಿದೆ.

ಮಣಿಪುರವು ತನ್ನ ದ್ವೇಷಪೂರಿತ ವಿಭಜಕ ರಾಜಕೀಯಕ್ಕೆ ಸಹಾಯ ಮಾಡುವುದರಿಂದ ಉದ್ದೇಶಪೂರ್ವಕವಾಗಿ ಸುಟ್ಟುಹೋಗಬೇಕೆಂದು ಬಿಜೆಪಿ ಬಯಸುತ್ತಿರುವಂತೆ ತೋರುತ್ತಿದೆ ಎಂದು ನಾವು ಅತ್ಯಂತ ಜವಾಬ್ದಾರಿಯಿಂದ ಹೇಳುತ್ತಿದ್ದೇವೆ. ಕಳೆದ 7 ರಿಂದ ಮಣಿಪುರದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಗಡಿಭಾಗದ ಈಶಾನ್ಯ ರಾಜ್ಯಗಳಿಗೂ ಹಿಂಸಾಚಾರ ವ್ಯಾಪಿಸುತ್ತಿದೆ.

ಸುಂದರವಾದ ಗಡಿ ರಾಜ್ಯವಾದ ಮಣಿಪುರವನ್ನು ಪ್ರಧಾನಿ ಮೋದಿ ಕೈಬಿಟ್ಟರು. ಭವಿಷ್ಯದಲ್ಲಿ ಮೋದಿ ಮಣಿಪುರಕ್ಕೆ ಭೇಟಿ ನೀಡಿದರೂ, ಇಂತಹ ಸಂಕಷ್ಟದ ಸಮಯದಲ್ಲಿ ಸಮಸ್ಯೆ ಬಗೆಹರಿಸಲು ತಮ್ಮ ರಾಜ್ಯಕ್ಕೆ ಕಾಲಿಡದಿರುವುದನ್ನು ಆ ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೇಶ

ನವದೆಹಲಿ: ಮತಾಂತರ ಸೇರಿದಂತೆ ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಎನ್‌ಜಿಒಗಳ ನೋಂದಣಿ ರದ್ದುಪಡಿಸಲಾಗುವುದು ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಸರ್ಕಾರೇತರ ಸಂಸ್ಥೆಗಳು (NGO) ವಿದೇಶಗಳಿಂದ ಹಣವನ್ನು ಪಡೆಯುತ್ತವೆ. ಇದನ್ನು ಪಡೆಯಲು, ಎಲ್ಲಾ ಎನ್‌ಜಿಒಗಳು ಎಫ್‌ಸಿಆರ್‌ಎ (FCRA) ಎಂದು ಕರೆಯಲ್ಪಡುವ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ, ಗೃಹ ಸಚಿವಾಲಯ ಹೊರಡಿಸಿರುವ ಹೇಳಿಕೆಯಲ್ಲಿ, ಕೆಲವು ಎನ್‌ಜಿಒಗಳು ಧಾರ್ಮಿಕ ಮತಾಂತರದಲ್ಲಿ ತೊಡಗಿದ್ದು, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವನ್ನೂ ಹೊಂದಿದೆ. ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಲು ಪ್ರಚೋದನೆ ನೀಡುತ್ತಿವೆ ಎಂಬ ದೂರುಗಳಿವೆ.

ಎನ್‌ಜಿಒಗಳು ಅಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ, ಅವರಿಗೆ ನೀಡಲಾದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ನೀಡಲಾದ ಅನುಮೋದನೆಯನ್ನು ರದ್ದುಗೊಳಿಸಲಾಗುವುದು ಎಂದು ಅದರಲ್ಲಿ ಹೇಳಿದೆ.

ದೇಶ

ನವದೆಹಲಿ: “ರಾಜಕೀಯ ಪಕ್ಷಗಳು ಮಾತ್ರವಲ್ಲ, ಖಾಸಗಿ ಸಂಸ್ಥೆಗಳೂ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿವೆ” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕೆಲವು ಖಾಸಗಿ ಸಂಸ್ಥೆಗಳು ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನ್ಯಾಯಾಧೀಶರಿಗೆ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸುತ್ತಿವೆ. ಇಂದಿನ ಮುಕ್ತ ಯುಗದಲ್ಲಿ ಒಬ್ಬರು ಟೀಕೆಗೆ ಒಳಗಾಗುತ್ತಾರೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ‘ಟ್ರೋಲ್’ ಆಗುತ್ತಾರೆ.

ನ್ಯಾಯಾಂಗದ ಸ್ವಾತಂತ್ರ್ಯವನ್ನು ಸರ್ಕಾರದ ಇಚ್ಛೆಗೆ ವಿರುದ್ಧವಾಗಿ ತೀರ್ಪು ನೀಡುವ ದೃಷ್ಟಿಯಿಂದ ಮಾತ್ರ ನೋಡಬಾರದು.

ಆಡಳಿತಾತ್ಮಕವಾಗಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು. ನ್ಯಾಯಾಂಗ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದೊಂದಿಗೆ ಸಮಾಲೋಚಿಸುವುದು ಮುಖ್ಯವಾಗಿದೆ. ನ್ಯಾಯಮೂರ್ತಿಗಳ ಆಯ್ಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ-ಕೇಂದ್ರದ ಜಗಳದಲ್ಲಿ ನನ್ನ ಕತ್ತು ಹಲವಾರು ಬಾರಿ ಸುದ್ದಿ ಮಾಡಿದೆ. ಇದರಲ್ಲಿ ಪ್ರಾಮಾಣಿಕತೆಯಿಂದಲೇ ಕಾರ್ಯನಿರ್ವಹಿಸಿದ್ದೇನೆ. ಎಲ್ಲಾ ಸಮಸ್ಯೆಗಳನ್ನು ಮಾತುಕತೆಯಿಂದ ಬಗೆಹರಿಸಬಹುದು” ಎಂದು ಅವರು ಹೇಳಿದರು.

10 ಸಾವಿರ ಪ್ರಕರಣಗಳ ಇತ್ಯರ್ಥ:
ಮುಂದುವರಿದು ಮಾತನಾಡಿದ ಚಂದ್ರಚೂಡ್, “ಪ್ರತಿ ವರ್ಷವೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದು ನ್ಯಾಯಾಲಯಗಳಿಗೆ ಸವಾಲಾಗಿಯೇ ಪರಿಣಮಿಸಿದೆ. ಜನವರಿ 1, 2020 ರಂತೆ 79,528 ಪ್ರಕರಣಗಳು ಬಾಕಿ ಇದ್ದವು. ಜನವರಿ 1, 2022 ರಂದು 93,011 ಪ್ರಕರಣಗಳು ಬಾಕಿ ಉಳಿದಿತ್ತು. ನವೆಂಬರ್ 1, 2024 ರಂತೆ 82,885 ಪ್ರಕರಣಗಳು ಬಾಕಿ ಉಳಿದಿವೆ. 10 ಸಾವಿರ ಪ್ರಕರಣಗಳು ಕಡಿಮೆಯಾಗಿವೆ” ಎಂದು ಹೇಳಿದರು.

ದೇಶ ಸಿನಿಮಾ

ಕೊಯಮತ್ತೂರು: ನಟ ಶಿವಕಾರ್ತಿಕೇಯನ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ‘ಅಮರನ್’ ಚಿತ್ರವು ತಮಿಳುನಾಡಿನ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಯೋಧ ಮುಕುಂದ್ ಅವರ ಜೀವನದ ಕಥೆಯನ್ನು ಹೇಳುವ ಈ ಚಿತ್ರವು ಭಾರತದ ಬಹುತೇಕ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಈ ಹಿನ್ನೆಲೆಯಲ್ಲಿ, ಚಿತ್ರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವ ಹಾಗೂ ಧಾರ್ಮಿಕ ಸಾಮರಸ್ಯ ಹಾಳು ಮಾಡುವ ದೃಶ್ಯಗಳಿವೆ ಎಂದು ಆಪಾಧಿಸಿ, ಎಸ್‌ಡಿಪಿಐ (SDPI) ಪಕ್ಷದ ಕಾರ್ಯಕರ್ತರು, ತಮಿಳುನಾಡಿನ ವಿವಿಧೆಡೆ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್‌ಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಅದರ ಒಂದು ಭಾಗವಾಗಿ ಕೊಯಮತ್ತೂರು ಜಿಲ್ಲೆಯ ಎಸ್‌ಡಿಪಿಐ ಪಕ್ಷವು ಕೊಯಮತ್ತೂರು ರೈಲ್ವೆ ನಿಲ್ದಾಣದ ಶಾಂತಿ (ಖಾಸಗಿ) ಥಿಯೇಟರ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

ನೂರಾರು ಮಂದಿ ಕಾರ್ಯಕರ್ತರು ಜಮಾಯಿಸಿ ಥಿಯೇಟರ್ ಬಳಿ ಬರುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದವರನ್ನು ಪೊಲೀಸರು ತಡೆದು ನಿಲ್ಲಿಸಿದರು. ಇದರಿಂದ ನಡು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ನಂತರ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು. ಇದರಿಂದ ಈ ಭಾಗದಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಬಿರುಸಿನ ವಾತಾವರಣ ನಿರ್ಮಾಣವಾಗಿತ್ತು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌ಡಿಪಿಐ ರಾಜ್ಯ ಉಪ ಕಾರ್ಯದರ್ಶಿ ರಾಜಾ ಹುಸೇನ್, “ಅಮರನ್ ಚಿತ್ರದಲ್ಲಿ, ಒಬ್ಬ ವ್ಯಕ್ತಿಯನ್ನು ಗುಣಗಾನ ಮಾಡಲಿಕ್ಕಾಗಿ ಸಮಾಜದಲ್ಲಿರುವ ಎಲ್ಲರನ್ನು ಅಪರಾಧ ವಂಶಸ್ಥರೆಂದು ಬಿಂಬಿಸಲಾಗಿದೆ” ಎಂದರು.

“ಈ ಚಿತ್ರದಲ್ಲಿ ಯೋಧನ ಕಥೆಯನ್ನು ತೋರಿಸುವ ಚಿತ್ರರಂಗ ಕಾಶ್ಮೀರದ ಇನ್ನೊಂದು ಮಗ್ಗುಲನ್ನು ತೋರಿಸುವಲ್ಲಿ ವಿಫಲವಾಗಿದೆ” ಎಂದು ಆಪಾದಿಸಿದರು. “ನಿಜವಾದ ಇತಿಹಾಸ ಎಂದು ಹೇಳುವ ಈ ಕಥೆಯಲ್ಲಿ ಅಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ಮರೆಮಾಚಿ ತೋರಿಸಲಾಗಿದೆ” ಎಂದು ಟೀಕಿಸಿದರು.

“ಕಾಶ್ಮೀರದಲ್ಲಿ ವಿವಿಧ ಮಹಿಳೆಯರು ಯುವ ವಿಧವೆಯರಾಗಿ ಬದುಕುತ್ತಿದ್ದಾರೆ ಎಂಬ ಮಾಹಿತಿ ನೀಡಿದ ಅವರು, ಅಲ್ಲಿರುವ ಪೊಲೀಸ್ ಇಲಾಖೆ ಮತ್ತು ಸೇನೆ ಅಲ್ಲಿರುವವರನ್ನು ಬಂಧಿಸಿ ಜೈಲಿಗಟ್ಟಬಹುದನ್ನೇ ಮಾಡುತ್ತಿದೆ” ಎಂದು ಹೇಳಿದರು.

“ಅಮರನ್ ಚಿತ್ರವು ತಮಿಳುನಾಡಿನ ಜನರಲ್ಲಿ ಧಾರ್ಮಿಕ ದ್ವೇಷವನ್ನು ಪ್ರಚೋದಿಸುವಂತೆ ಮೂಡಿಬಂದಿದ್ದು, ಅಲ್ಪಸಂಖ್ಯಾತರ ಕಾವಲುಗಾರ ಎಂದು ಹೇಳಿಕೊಳ್ಳುವ ತಮಿಳುನಾಡು ಮುಖ್ಯಮಂತ್ರಿ ಸಿನಿಮಾವನ್ನು ಬ್ಯಾನ್ ಮಾಡುವ ಬದಲು ಅದನ್ನು ಹಾಡಿಹೊಗಳಿರುವುದು ವಿಷಾದನೀಯ” ಎಂದು ರಾಜಾ ಹುಸೇನ್ ಕಿಡಿಕಾರಿದ್ದಾರೆ.

ದೇಶ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿಗೆ 21 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಘಾತವನ್ನು ಉಂಟು ಮಾಡಿದೆ.

ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಇಂದು (ನವೆಂಬರ್ 09) ಬಾಂಬ್ ಸ್ಫೋಟ ಸಂಭವಿಸಿದೆ. ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದ 21 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಸ್ಫೋಟ ಸಂಭವಿಸಿದಾಗ ಪೇಶಾವರಕ್ಕೆ ಹೋಗುವ ಪ್ಯಾಸೆಂಜರ್ ರೈಲು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಸ್ಫೋಟದ ಶಬ್ದ ಕೇಳಿ ರೈಲಿನಲ್ಲಿದ್ದ ಜನರು ಕಿರುಚಿಕೊಂಡು ಓಡುತ್ತಿರುವ ವಿಡಿಯೋವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಕ್ವೆಟ್ಟಾದ ಎಸ್‌ಎಸ್‌ಪಿ ಮೊಹಮ್ಮದ್ ಬಲೂಚ್, ‘ಇದು ಆತ್ಮಹತ್ಯಾ ದಾಳಿಯಂತೆ ಕಾಣುತ್ತಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು. ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ದೇಶ ರಾಜಕೀಯ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ಮರಳಿ ತರುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು!

ಭಾರತದ ಸಂವಿಧಾನದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. 2019ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸೆಕ್ಷನ್ ಅನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿತು.

ಈ ಹಿನ್ನೆಲೆಯಲ್ಲಿ, ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ – ಕಾಂಗ್ರೆಸ್ ಮೈತ್ರಿಯು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಪ್ರಸ್ತಾಪಿಸಿತು.

ಉಪಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ ನಿರ್ಣಯವನ್ನು ಮಂಡಿಸಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಸುನೀಲ್ ಕುಮಾರ್ ಹಾಗೂ ಬಿಜೆಪಿಯ ಇತರ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಈ ಗದ್ದಲದ ನಡುವೆಯೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.

ದೇಶ

ಡಿ.ಸಿ.ಪ್ರಕಾಶ್

2004ರಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ಮದರಸಾ ಶಿಕ್ಷಣ ಕಾಯ್ದೆ 2004’ ಅನ್ನು ಜಾರಿಗೆ ತಂದಿತ್ತು. ಇದೀಗ ಸುಪ್ರೀಂ ಕೋರ್ಟ್, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿ ‘ಮದ್ರಸಾ ಶಿಕ್ಷಣ ಕಾಯಿದೆ 2004’ ಅನ್ನು ಸಾಂವಿಧಾನಿಕ ಎಂದು ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಪಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಿಸಿ ಈ ಪ್ರಕರಣದಲ್ಲಿ ತೀರ್ಪು ನೀಡಿದೆ. 2004ರಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ಮದ್ರಸಾ ಶಿಕ್ಷಣ ಕಾಯ್ದೆ 2004’ ಅನ್ನು ಜಾರಿಗೆ ತಂದಿತು. ಹಲವು ವರ್ಷಗಳ ನಂತರ, ಅಲಹಾಬಾದ್ ಹೈಕೋರ್ಟ್ ಕಳೆದ ಮಾರ್ಚ್‌ನಲ್ಲಿ ಮದರಸಾ ಶಿಕ್ಷಣ ಕಾಯ್ದೆಯನ್ನು ಅಸಂವಿಧಾನಿಕ ಮತ್ತು ಜಾತ್ಯತೀತತೆಗೆ ವಿರುದ್ಧವಾದದ್ದು ಎಂದು ಹೇಳಿ ರದ್ಧುಗೊಳಿಸಿತು.

ಹೈಕೋರ್ಟ್ ತೀರ್ಪಿನಿಂದ 17 ಲಕ್ಷ ಮದರಸಾ ವಿದ್ಯಾರ್ಥಿಗಳ ಬದುಕು ಪ್ರಶ್ನಾರ್ಹವಾಗಿತ್ತು. ಇದೀಗ ಆ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದರಿಂದ ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಏಪ್ರಿಲ್‌ನಿಂದ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಏಪ್ರಿಲ್ 5 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, “ಜಾತ್ಯತೀತತೆ ಎಂದರೆ ‘ಬದುಕು ಮತ್ತು ಬದುಕಲು ಬಿಡು’ ಎಂಬುದೇ ಆಗಿದೆ” ಎಂದು ನ್ಯಾಯಾಲಯ ಹೇಳಿತ್ತು.

“ಮದರಸಾ ಶಿಕ್ಷಣ ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸಿದೆ ಎಂದು ಅಲಹಾಬಾದ್ ನ್ಯಾಯಾಲಯವು ತಪ್ಪಾಗಿ ಹೇಳಿದೆ. ಈ ಕಾಯ್ದೆಯು ಮದರಸಾಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಪ್ರಮಾಣೀಕರಿಸುತ್ತದೆ” ಸುಪ್ರೀಂ ಕೋರ್ಟ್ ಹೇಳಿದೆ.

12ನೇ ತರಗತಿಯ ನಂತರ ಮದರಸಾಗಳಲ್ಲಿ ನೀಡಲಾಗುವ ಫಾಝಿಲ್ ಮತ್ತು ಕಾಮಿಲ್ ಪದವಿಗಳು ಯುಜಿಸಿ ಕಾಯ್ದೆಗೆ ವ್ಯತಿರಿಕ್ತವಾಗಿದೆ ಎಂದೂ ಸುಪ್ರೀಂ ಕೋರ್ಟ್ ಗಮನಸೆಳೆದಿದೆ. ಇದಲ್ಲದೆ, ಮದರಸಾ ಶಿಕ್ಷಣ ಕಾಯ್ದೆಯು ಅಲ್ಪಸಂಖ್ಯಾತರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದು, ಶಿಕ್ಷಣದ ಜೊತೆಗೆ ಕೆಲವು ಧಾರ್ಮಿಕ ಆಚರಣೆಗಳನ್ನು ಕಲಿಸುವ ಕಾರಣ ಮದರಸಾಗಳನ್ನು ಅಸಂವಿಧಾನಿಕವೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮದರಸಾಗಳು ಮುಸ್ಲಿಮರು ಅರೇಬಿಕ್, ಉರ್ದು, ಪರ್ಷಿಯನ್, ಇಸ್ಲಾಮಿಕ್ ಅಧ್ಯಯನಗಳು, ಟಿಬ್ (ಸಾಂಪ್ರದಾಯಿಕ ಔಷಧ), ತತ್ವಶಾಸ್ತ್ರ ಮತ್ತು ಇತರ ಕೆಲವು ವಿಷಯಗಳನ್ನು ಕಲಿಯುವ ಶಾಲೆಗಳಾಗಿವೆ.

ಉತ್ತರ ಪ್ರದೇಶದಲ್ಲಿ 23,500 ಮದರಸಾಗಳಿವೆ. ಅದರಲ್ಲಿ ಕೇವಲ 16,513 ಮಾತ್ರ ಸರ್ಕಾರದಿಂದ ನೋಂದಣಿ ಮತ್ತು ಮಾನ್ಯತೆ ಪಡೆದಿದೆ. ಇವುಗಳಲ್ಲಿ 560 ಮದರಸಾಗಳು ಉತ್ತರ ಪ್ರದೇಶ ಸರ್ಕಾರದಿಂದ ಸ್ಥಾಪಿಸಲಾಗಿದೆ ಎಂಬುದು ಗಮನಾರ್ಹ.

ದೇಶ

ನವದೆಹಲಿ,
ನವೆಂಬರ್ 1, 1956ರಲ್ಲಿ ಭಾರತದಾದ್ಯಂತ ಭಾಷಾವಾರು ರಾಜ್ಯಗಳು ರೂಪುಗೊಂಡಿತು. ಅದರ ಆಧಾರದ ಮೇಲೆ ಕರ್ನಾಟಕ, ಆಂಧ್ರ ಮತ್ತು ಕೇರಳದ ಭಾಗಗಳು ಆಗಿನ ಮದ್ರಾಸ್ ಪ್ರಾಂತ್ಯದಿಂದ ಬೇರ್ಪಟ್ಟವು. ಭಾರತದ ವಿವಿಧ ರಾಜ್ಯಗಳು ತಮ್ಮ ರಾಜ್ಯವನ್ನು ಬೇರೆ ರಾಜ್ಯದಿಂದ ಬೇರ್ಪಡಿಸಿದ ದಿನವನ್ನು ತಮ್ಮ ರಾಜ್ಯದ ದಿನವಾಗಿ ಆಚರಿಸುತ್ತಾರೆ.

ಈ ಹಿನ್ನೆಲೆಯಲ್ಲಿ, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳ ರಚನೆಯ ದಿನವಾದ ಇಂದು ಪ್ರಧಾನಿ ಮೋದಿ ಅವರು ತಮ್ಮ ‘ಎಕ್ಸ್’ ಸೈಟ್ ನಲ್ಲಿ “ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ” ಎಂದು ಹೇಳಿರುವ ಅವರು ಆಯಾ ರಾಜ್ಯಗಳ ಜನತೆಗೆ ಆಯಾ ಭಾಷೆಗಳಲ್ಲೇ ಅಭಿನಂದಿಸಿದ್ದಾರೆ.

ಅದೇ ರೀತಿ, ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ ಅಭಿನಂದಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್‌ಗಢ, ಚಂಡೀಗಢ, ದೆಹಲಿ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಪಂಜಾಬ್, ಪುದುಚೇರಿ, ಲಕ್ಷದ್ವೀಪ ಮತ್ತು ಅಂಡಮಾನ್ ನಿಕೋಬಾರ್ ಮುಂತಾದ ರಾಜ್ಯಗಳು ಇಂದು ಭಾಷಾವಾರು ರಾಜ್ಯಗಳಾಗಿ ರೂಪುಗೊಂಡ ದಿನವಾಗಿದೆ.

ಬಹುಭಾಷಾ, ರೋಮಾಂಚಕ ಸಂಸ್ಕೃತಿ ಮತ್ತು ಸಮೃದ್ಧಿ ಇತಿಹಾಸವು ಭಾರತದ ಪ್ರಬಲ ಹೃದಯವಾಗಿದೆ. ಪ್ರತಿಯೊಂದು ರಾಜ್ಯದ ಅನನ್ಯ ಕೊಡುಗೆಯು ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಬಂಧಗಳನ್ನು ಉತ್ಕೃಷ್ಟಗೊಳಿಸುತ್ತದೆ ಮತ್ತು ಬಲಪಡಿಸುತ್ತದೆ ಎಂಬುದನ್ನು ಅರಿತುಕೊಂಡು ಈ ಒಗ್ಗಟ್ಟನ್ನು ಆಚರಿಸೋಣ ಮತ್ತು ರಕ್ಷಿಸೋಣ” ಎಂದು ಹೇಳಿದ್ದಾರೆ.

ಕ್ರೈಂ ರಿಪೋರ್ಟ್ಸ್ ದೇಶ

ನವದೆಹಲಿ: ‘ಡಿಜಿಟಲ್ ಅರೆಸ್ಟ್’ಗಳ ಮೂಲಕ ಜನರನ್ನು ವಂಚಿಸುವ ಸೈಬರ್ ಅಪರಾಧಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳೆಯುತ್ತಿರುವ ಇಂತಹ ಸಮಸ್ಯೆಗಳನ್ನು ಎದುರಿಸಲು ಅನೇಕ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅವರು ಒತ್ತಿ ಹೇಳಿದರು. ಇದು ಮಹತ್ವದ ಕಾಳಜಿ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ, ಇಂತಹ ಹಗರಣಗಳನ್ನು ಎದುರಿಸುವಾಗ ‘ನಿರೀಕ್ಷಿಸಿ, ಯೋಚಿಸಿ ಮತ್ತು ಕ್ರಮ ಕೈಗೊಳ್ಳಿ’ ಎಂಬ ವಿಧಾನವನ್ನು ಅನುಸರಿಸುವಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ.

‘ಡಿಜಿಟಲ್ ಅರೆಸ್ಟ್’ ಒಂದು ರೀತಿಯ ಸೈಬರ್ ಕ್ರೈಮ್ ಅನ್ನು ಉಲ್ಲೇಖಿಸುತ್ತದೆ, ಅಲ್ಲಿ ಸ್ಕ್ಯಾಮರ್‌ಗಳು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಾರೆ. ಬಲಿಪಶುಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸದಿದ್ದಾಗ ಬಂಧನದ ಬೆದರಿಕೆ ಹಾಕುತ್ತಾರೆ. ಈ ಹಗರಣದ ಹಲವಾರು ಪ್ರಕರಣಗಳು ಇತ್ತೀಚೆಗೆ ದೇಶಾದ್ಯಂತ ವರದಿಯಾಗಿವೆ.

ಕಾನೂನಿನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ. ಇದು ಕೇವಲ ವಂಚನೆ, ಸುಳ್ಳು, ಅಪರಾಧಿಗಳ ಗುಂಪು ಮತ್ತು ಇದನ್ನು ಮಾಡುತ್ತಿರುವವರು ಸಮಾಜದ ಶತ್ರುಗಳು. ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ಎದುರಿಸಲು ವಿವಿಧ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಿ ಮೋದಿ ತಮ್ಮ ‘ಮನ್ ಕಿ ಬಾತ್’ ಪ್ರಸಾರದಲ್ಲಿ ಹೇಳಿದರು.

ಜನರ ಭಯವನ್ನು ಬೇಟೆಯಾಡಲು ಸ್ಕ್ಯಾಮರ್‌ಗಳು ತನಿಖಾ ಸಂಸ್ಥೆ ಅಧಿಕಾರಿಗಳಂತೆ ಹೇಗೆ ನಟಿಸುತ್ತಾರೆ ಎಂಬುದನ್ನು ತೋರಿಸುವ ಪ್ರಾತಿನಿಧಿಕ ವಿಡಿಯೊವನ್ನು ಸಹ ಅವರು ಪ್ಲೇ ಮಾಡಿದರು. ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಪ್ರಧಾನಿ ಹೇಳಿದರು. ಅಂತಹ ತನಿಖೆಗಾಗಿ ಯಾವುದೇ ತನಿಖಾ ಸಂಸ್ಥೆಯು ನಿಮ್ಮನ್ನು ಫೋನ್ ಅಥವಾ ವಿಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ.

ಬೆದರಿಕೆ ಕರೆ ಮಾಡುವ ಸೈಬರ್ ವಂಚಕರನ್ನು ಎದುರಿಸಲು ಮೂರು ಹಂತದ ವಿಧಾನವನ್ನು ಪ್ರಧಾನಿ ವಿವರಿಸಿದರು.

ಒಬ್ಬರು ಕರೆಯನ್ನು ಸ್ವೀಕರಿಸಿದಾಗ, ಮೊದಲು ‘ನಿರೀಕ್ಷಿಸಿ’ ಎಂದು ಹೇಳಿ. ಭೀತಿಗೊಳಗಾಗಬೇಡಿ; ಶಾಂತವಾಗಿರಿ ಮತ್ತು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಧ್ಯವಾದರೆ, ಸ್ಕ್ರೀನ್‌ಶಾಟ್ ತೆಗೆದುಕೊಂಡು ಕರೆಯನ್ನು ರೆಕಾರ್ಡ್ ಮಾಡಿ ಎಂದು ಪ್ರಧಾನಿ ಹೇಳಿದರು.

ನಂತರ, ‘ಯೋಚಿಸಿ’ ಯಾವುದೇ ಸರ್ಕಾರಿ ಏಜೆನ್ಸಿಯು ನಿಮಗೆ ಫೋನ್‌ನಲ್ಲಿ ಬೆದರಿಕೆ ಹಾಕುವುದಿಲ್ಲ, ವಿಡಿಯೊ ಕರೆ ಮೂಲಕ ನಿಮ್ಮನ್ನು ವಿಚಾರಿಸುವುದಿಲ್ಲ ಅಥವಾ ಈ ರೀತಿಯಲ್ಲಿ ಹಣವನ್ನು ಬೇಡಿಕೆಯಿಡುವುದಿಲ್ಲ. ನೀವು ಭಯಭೀತರಾಗಿದ್ದರೆ, ಏನಾದರೂ ತಪ್ಪಾಗಿದೆಯೇ ಎಂದು ಗುರುತಿಸಿ.

ಅಂತಿಮವಾಗಿ, ‘ಕ್ರಮ ತೆಗೆದುಕೊಳ್ಳಿ’. ರಾಷ್ಟ್ರೀಯ ಸೈಬರ್ ಸಹಾಯವಾಣಿಗೆ (1930)  ಕರೆ ಮಾಡಿ, ಅಧಿಕೃತ ಪೋರ್ಟಲ್‌ನಲ್ಲಿ ಘಟನೆಯನ್ನು ವರದಿ ಮಾಡಿ ಮತ್ತು ನಿಮ್ಮ ಕುಟುಂಬದವರಿಗೆ ಮತ್ತು ಪೊಲೀಸರಿಗೆ ತಿಳಿಸಿ. ಯಾವುದೇ ಪುರಾವೆಗಳನ್ನು ಸುರಕ್ಷಿತವಾಗಿರಿಸಲು ಮರೆಯದಿರಿ ಎಂದು ಪ್ರಧಾನಿ ಸಲಹೆ ನೀಡಿದರು.

ಈ ರೀತಿಯ ಹಗರಣಗಳನ್ನು ತನಿಖೆ ಮಾಡುವ ವಿವಿಧ ಏಜೆನ್ಸಿಗಳ ನಡುವೆ ಸಮನ್ವಯವನ್ನು ರಚಿಸಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ದೇಶ

ಟಾಟಾ ಸನ್ಸ್ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರಿಗೆ 2008ರಲ್ಲಿ ಭಾರತದ 2ನೇ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನವದೆಹಲಿ,
ಭಾರತದ ಖ್ಯಾತ ಉದ್ಯಮಿ ಮತ್ತು ಟಾಟಾ ಸನ್ಸ್ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಅನಾರೋಗ್ಯದ ಕಾರಣದಿಂದ ಮುಂಬೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ನಿನ್ನೆ ರಾತ್ರಿ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 12 ಗಂಟೆಗೆ ಕೊನೆಯುಸಿರೆಳೆದರು. ಅವರಿಗೆ 86 ವರ್ಷ.

ಅವರ ನಿಧನಕ್ಕೆ ವಿವಿಧ ರಾಜಕೀಯ ನಾಯಕರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಅವರ ನಿಧನದ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ‘ಎಕ್ಸ್’ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ, “ಭಾರತವನ್ನು ಉತ್ತಮ ದೇಶವನ್ನಾಗಿ ಮಾಡುವ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದರು” ಎಂದು ಹೇಳಿದ್ದಾರೆ.

“ಗೂಗಲ್ ಸಂಸ್ಥೆಯಲ್ಲಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ನಾವು ವೈಮೊ (Waymo) ಪ್ರಗತಿಯ ಬಗ್ಗೆ ಮಾತನಾಡಿದ್ದೇವೆ. ಅವರ ದೂರದೃಷ್ಟಿ ಕೇಳಲು ಸ್ಪೂರ್ತಿದಾಯಕವಾಗಿತ್ತು. ಅವರು ಅಸಾಮಾನ್ಯ ಉದ್ಯಮಶೀಲತೆ ಮತ್ತು ಉದಾರತೆಯ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಅವರು ಭಾರತದಲ್ಲಿ ಆಧುನಿಕ ಉದ್ಯಮವನ್ನು ಮುನ್ನಡೆಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು” ಎಂದು ಹೇಳಿದ್ದಾರೆ.

ಅವರ ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ರತನ್ ಟಾಟಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. 2008ರಲ್ಲಿ ಭಾರತದ 2ನೇ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಯಿತು.