ನವೀನ್ ಸೂರಿಂಜೆ., ಕರ್ನಾಟಕದ ಮದರಸ – ಕನ್ನಡ ಕಲಿಕೆ – ಕೋಮುವ್ಯಾದಿ ನುಸುಳುವಿಕೆ ಕುರಿತು ನಿಮ್ಮ ನೀಲುವನ್ನು ಬದಲಾವಣೆ ಮಾಡಿಕೊಳ್ಳಲು, ನೀವು ಇತ್ತೀಚೆಗೆ ಪ್ರಕಟಿಸಿದ ಎರಡು ಲೇಖನಗಳ ಎರಡು ಭಾಗಗಳಿಗೆ ನನ್ನ ಪ್ರಶ್ನೆ – ಪ್ರತಿಕ್ರಿಯೆಗಳು!
• ‘ಮದರಸಗಳಲ್ಲಿ ಕನ್ನಡ ಜಾರಿ’ ಸುತ್ತೋಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.
• ‘ವಿರೋಧ ಪ್ರಕಟವಾದ್ದರಿಂದ ಈ ವಿಷಯನ್ನು ಕೈ ಬಿಡಲಾಗಿದೆ’ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಅಧ್ಯಕ್ಷರು, ಪುರುಷೋತ್ತಮ ಬಿಳಿಮಲೆ.
ಈ ಪ್ರಾಧಿಕಾರಕ್ಕೆ ಮನವಿಸಲ್ಲಿಸಿದ್ದು ಯಾರು? ಇದಕ್ಕೆ ವಿರೋಧವ್ಯಕ್ತ ಪಡಿಸಿದ್ದು ಯಾರು?
ನವೀನ್ ಸೂರಿಂಜೆ: ‘ಮದರಸದಲ್ಲಿ ಕನ್ನಡ ಜಾರಿ’ ಇದು ಸರ್ಕಾರವೊಂದು ಮಾಡಬೇಕಾದ ಆಧ್ಯತೆಯ ಕೆಲಸವಲ್ಲ. ಮದರಸ ಮಾತ್ರವಲ್ಲ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ನರ ಆರಾಧನೆ (Adoration) ಕೇಂದ್ರಗಳಲ್ಲೂ ಕನ್ನಡ ಕಡ್ಡಾಯ ಮಾಡುವುದು ಸರ್ಕಾರಿ ಪ್ರಾಧಿಕಾರದ ಕೆಲಸವಲ್ಲ.
ಖಾಸಿಂ ಸಾಬ್: ಮದರಸದಲ್ಲಿ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್, ಬುದ್ಧಿಸ್ಟ್, ಪಾರ್ಸಿ, ಜೈನ್… ಇತರೆ ಧರ್ಮಗಳ ಆರಾಧನಾ ಧಾರ್ಮಿಕ ವಿದ್ಯಾಭ್ಯಾಸ ಕೇಂದ್ರಗಳಲ್ಲಿ ಕನ್ನಡ ಜಾರಿ ಏಕೆ ಆಗ ಬಾರದು?
ನವೀನ್ ಸೂರಿಂಜೆ: ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸ ಕಾರಣವಾಗಿರುವಂತೆ ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣವಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಂಡಿದ್ದು ವಿಪರ್ಯಾಸ!
ಖಾಸಿಂ ಸಾಬ್: ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸಾ ಕಾರಣವಾಗಿದೆ ಎಂದು ಯಾವ ವರದಿಗಳು ಹೇಳಿವೆ? ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣವಾಗಿ… ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾವಾಗ ಹೇಳಿದ್ದು , ಅದನ್ನು ಅಧಿಕೃತವಾಗಿ ಹೇಳಿದ್ದು ಯಾರು, ಯಾವ ಸರ್ಕಾರ, ಯಾವ ಆಯೋಗ, ಯಾವ ಸಮಿತಿ?
ನವೀನ್ ಸೂರಿಂಜೆ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪುರುಷೋತ್ತಮ ಬಿಳಿಮಲೆಯವರು ಇಂದು ಮದರಸದೊಳಗೆ ಕಾಳಜಿಯಿಂದ ನುಗ್ಗಿ ಕೆಲಸ ಮಾಡುತ್ತಾರೆ ಎಂದಿಟ್ಟುಕೊಳ್ಳೊಣಾ. ಮುಂದೆ ಬರುವ ಬಿಜೆಪಿ ಸರ್ಕಾರಕ್ಕೆ ಇದು ರಹದಾರಿ ಆಗಿರುವುದಿಲ್ಲವೇ?
ಖಾಸಿಂ ಸಾಬ್: ನಿಮ್ಮ ಈ ಗುಮಾನಿ ‘ಮುಸ್ಲಿಮರ ಕಲ್ಯಾಣದ ಕುರಿತಾದ ಮುಸ್ಲಿಂ ಏತರ ಜಾತ್ಯತೀತ ಬುದ್ದಿಜೀವಿಗಳ’ ಗುಮಾನಿಯೆ ಆಗಿದೆ. ಇಂತಹ ಬುದ್ದಿಜೀವಿಗಳ ಗುಮಾನಿಗಳಿಂದ ಮುಸ್ಲಿಂ ಸಮುದಾಯಕ್ಕೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು.
ನವೀನ್ ಸೂರಿಂಜೆ: ಉತ್ತರಾಖಂಡ ಸರ್ಕಾರ ಈಗಾಗಲೇ ಮದರಸಾದಲ್ಲಿ ಶ್ರೀರಾಮ ಕತೆ ಪಾಠ ಮಾಡಲು ವಕ್ಫ್ ಇಲಾಖೆಯ ಮೂಲಕ ಚಿಂತನೆ ನಡೆಸಿದೆ ಎಂಬ ಸುದ್ದಿ ಇದೆ. ಜನವರಿ 25, 2024 ರಂದು ಸುದ್ದಿಗೋಷ್ಠಿ ನಡೆಸಿರುವ ಉತ್ತರಾಖಂಡ ವಕ್ಫ್ ಅಧ್ಯಕ್ಷ ಶಾದಾಬ್ ಅವರು “ಮದರಸ ಆಧುನೀಕರಣ ಕಾರ್ಯಕ್ರಮದ ಭಾಗವಾಗಿ ಉತ್ತರಾಖಂಡ ವಕ್ಫ್ ಮಂಡಳಿಗೆ ಸಂಯೋಜಿತವಾಗಿರುವ ಮದರಸಗಳಿಗೆ ಭಗವಾನ್ ಶ್ರೀರಾಮನ ಅಧ್ಯಯನವನ್ನು ಹೊಸ ಪಠ್ಯಕ್ರಮದಲ್ಲಿ ಪರಿಚಯಿಸಲಾಗುವುದು” ಎಂದು ತಿಳಿಸಿದ್ದಾರೆ.
ಖಾಸಿಂ ಸಾಬ್: ಅಲ್ಲಿನ ರಾಜ್ಯ ಸರಕಾರ ಶ್ರೀರಾಮ ಕತೆ, ಹನುಮಾನ್ ಚಾಲೀಸಾ, ಸಂವಿಧಾನದ ಪೂರ್ವ ಪೀಠಿಕೆ, ಅಂಬೇಡ್ಕರ್ ಅವರ ಜೀವನ ಚರಿತ್ರೆ, ಟಿಪ್ಪುವಿನ ಹುತಾತ್ಮ ಕಥೆಗಳನ್ನು ಭೋದಿಸುತ್ತಿದೆಯೇ ಎಂಬುದು ಸಮಸ್ಯೆಯಲ್ಲ. ಅಲ್ಲಿ ಕಲಿತ ಮಕ್ಕಳಿಗೆ ಅವರು ಕಲಿಯುತ್ತಿರುರ ಅರೇಬಿಕ್ ಭಾಷೆಯಲ್ಲಿ ಆದುನಿಕ, ಕಾಂಪಿಟೇಟಿವ್ ವಿದ್ಯಾಭ್ಯಾಸದ ಜೊತೆಗೆ ನೇಟಿವ್ ಅಧಿಕೃತ ನಾಡ ಭಾಷೆ ಕಲಿಸಲಾಗುತ್ತಿದೆಯೇ ಎಂಬುದು ಮುಖ್ಯವಾಗಬೇಕು.
ನವೀನ್ ಸೂರಿಂಜೆ: ಕರ್ನಾಟಕ ಸರ್ಕಾರವೂ ಭವಿಷ್ಯದಲ್ಲಿ ಇಂತದ್ದೊಂದು ಕೃತ್ಯಕ್ಕೆ ಈಗಲೇ ಅಡಿಪಾಯ ಹಾಕಿಕೊಡುತ್ತದೆಯೇ?
ಖಾಸಿಂ ಸಾಬ್: ಇಲ್ಲಿ ಮುಖ್ಯವಾಗಬೇಕಾದದ್ದು ಕರ್ನಾಟಕದಲ್ಲಿ ಕೋಮುವಾದ ತಡೆಯುವ, ಅದು ನುಸುಳಲು ಅವಕಾಶವಿರುವ ಎಲ್ಲಾ ತೊರೆಗಳನ್ನು ಮುಚ್ಚುವ ಜವಾಬ್ದಾರಿ. ಅವಕಾಶಗಳಿಗಿಂತ, ಮದರಸಗಳಲ್ಲಿ ಓದಿ ಶಿಕ್ಷಣ / ಸರ್ಟಿಫಿಕೇಟ್ ಪಡೆದ ಮಕ್ಕಳ ಭವಿಷ್ಯ ಮುಖ್ಯವಾಗಬೇಕಿದೆ.
ನವೀನ್ ಸೂರಿಂಜೆ: ಮದರಸಾದಲ್ಲಿ ಕನ್ನಡ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಬಿಳಿಮಲೆ ಸಿದ್ದಗೊಳಿಸಿದ್ದಾರೆ?
ಖಾಸಿಂ ಸಾಬ್: ದಯವಿಟ್ಟು ಈ ನೀತಿಯ ಕರಡು ಪ್ರತಿಯನ್ನು ಬಹಿರಂಗ ಪಡಿಸಲಿ; ಇದರ ಆಗು-ಹೋಗುಗಳ ಕುರಿತು ಸಾರ್ವಜನಿಕ ಚರ್ಚೆಯಾಗಲಿ. ಪ್ರಮುಖವಾಗಿ ಮುಸ್ಲಿಂ ಏತರ ಜಾತ್ಯತೀತ ಬುದ್ದಿಜೀವಿಗಳು ಇದರಲ್ಲಿ ಹೆಚ್ಚು ಪಾತ್ರ ವಹಿಸುವುದು ಬೇಡ. ಒಟ್ಟಾರೆ ಸಮಗ್ರ ಮುಸ್ಲಿಂ ಸಮುದಾಯದ ನಡುವೆ ಚರ್ಚೆ, ಅಭಿಪ್ರಾಯಕ್ಕೆ ಬಿಡಿ.
ನವೀನ್ ಸೂರಿಂಜೆ: ನೀತಿಯ ಕರಡು ಪ್ರತಿಯ ಮದರಸ ಧಾರ್ಮಿಕ ಶಿಕ್ಷಣದಲ್ಲಿ ಕಡ್ಡಾಯ ಕಲಿಕೆ ಎನ್ನುವುದು ಸರ್ಕಾರಿ ನೀತಿಯಾದರೆ ಮುಂದೊಂದು ದಿನ ಬಿಜೆಪಿ ಸರ್ಕಾರ ಬಂದಾಗ ‘ಮದರಸಾ ಕೇಸರಿಕರಣದ ವಿರುದ್ದ ಹೋರಾಟ’ ಎಂದು ಮುಸ್ಲಿಂ ಮಕ್ಕಳು ಹೊಸ ಸಂಘರ್ಷ ಎದುರಿಸಲು ಸಿದ್ದರಾಗಬೇಕು.
ಖಾಸಿಂ ಸಾಬ್: ಹೊಸ ಸಂಘರ್ಷ ಹುಟ್ಟುತ್ತದೆ ಎಂಬ ಕಾರಣಕ್ಕೆ ಅವಕಾಶ, ಸವಲತ್ತು, ನ್ಯಾಯಗಳನ್ನು ಕಳೆದು ಕೊಳ್ಳಲು ಸಾಧ್ಯವಿಲ್ಲ. ಹೋರಾಟ ಮಾಡೋಣ ಇದನ್ನು ಎದುರಿಸಲು ನಿಮ್ಮಂತ ಜಾತ್ಯತೀತ ವ್ಯಕ್ತಿಗಳು ಹೇಗೂ ಇರುತ್ತಿರಿ.
ನವೀನ್ ಸೂರಿಂಜೆ: ಮುಸ್ಲೀಮರಿಗೆ ಕನ್ನಡ ಬರಲ್ಲ ಎನ್ನುವುದಕ್ಕೂ ಮದರಸಕ್ಕೂ ಏನು ಸಂಬಂಧ? ಕನ್ನಡ ಬಾರದೇ ಇರುವ ಮುಸ್ಲಿಮರು ಇದ್ದಾರೆ ಎಂದರೆ ಅದಕ್ಕೆ ಕಾರಣ ಶಿಕ್ಷಣದ ಕೊರತೆಯೇ ಹೊರತು ಮದರಸಾವಲ್ಲ. ಕನ್ನಡ ಬಾರದ ತುಳುವರೂ, ಹಿಂದೂಗಳೂ, ಕ್ರಿಶ್ಚಿಯನ್ನರೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ಭಯೋತ್ಪಾದನೆ, ಹವಾಲ ಹಣ, ಲವ್ ಜಿಹಾದ್, ಆಯುಧ ಸಂಗ್ರಹ, ಕೋಮುಗಲಭೆ ಹೀಗೆ ಎಲ್ಲದಕ್ಕೂ ಮದರಸ ಕಾರಣ ಎಂಬ ಆರೋಪದ ಬಳಿಕ ಈಗ ಮುಸ್ಲಿಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸವೇ ಕಾರಣ ಎಂದು ಪ್ರಾಧಿಕಾರ ಘೋಷಿಸಿದಂತಿದೆ.
ಖಾಸಿಂ ಸಾಬ್: ನಿಜಕ್ಕೂ ಇದನ್ನು ಪ್ರಧಿಕಾರ ಘೋಷಣೆ ಮಾಡಿದೆಯೇ…!?
ನವೀನ್ ಸೂರಿಂಜೆ: ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಅನಗತ್ಯ ಮೂಗು ತೂರಿಸಿ ರಾಡಿ ಎಬ್ಬಿಸಬಾರದು.
ಖಾಸಿಂ ಸಾಬ್: ಮದರಸ (.. ಅಥವಾ ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ ಧಾರ್ಮಿಕ ಪಾಠ ಶಾಲೆ) ಗಳ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳ ಭವಿಷ್ಯ, ಸ್ಕಿಲ್ ಡೆವಲಪ್ಮೆಂಟ್, ಮಾಡ್ರನ್ ಎಜುಕೇಶನ್ ಸಿಸ್ಟಮ್, ಕನ್ನಡ, ಇಂಗ್ಲಿಷ್ ಕಲಿಕೆ ಮುಂತಾದ ಮೂಲ ಭೂತ ವಿಶೇಷಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದರಲ್ಲಿ ತಪ್ಪೇನು.
ನವೀನ್ ಸೂರಿಂಜೆ: ಧಾರ್ಮಿಕ ಸಂಸ್ಥೆಗಳು ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದಷ್ಟೇ ಸರ್ಕಾರದ ಕೆಲಸವೇ ಹೊರತು ಅವರ ಮೂಲಭೂತ ಹಕ್ಕುಗಳನ್ನು ಕಸಿಯುವುದಲ್ಲ.
ಖಾಸಿಂ ಸಾಬ್: ಮದರಸ ಎಂಬುದು ಒಂದು ಸಂಪೂರ್ಣ ಧಾರ್ಮಿಕ ಸಂಸ್ಥೆಯಲ್ಲ; ಅದು ಧಾರ್ಮಿಕ ಸಂಸ್ಥೆಯ ಒಂದು ಭಾಗವಾದ ಕಲಿಕಾ ಅಂಗ. ಎಜುಕೇಶನಲ್ ವಿಂಗ್ ಅಷ್ಟೇ. ಮದರಸವೇ ಮುಸ್ಲಿಮರ ಎಲ್ಲವನ್ನೂ ತೀರ್ಮಾನಿಸುವ ಕೇಂದ್ರವಲ್ಲ. ಖಾತ್ರಿ – ಗ್ಯಾರಂಟಿ ಪಡಿಸಿಕೊಳ್ಳುವುದಷ್ಟೇ ಸರ್ಕಾರದ ಕೆಲಸವೇ… ಇವುಗಳ ಪ್ರಗತಿ – ಅಭಿವೃದ್ಧಿ – ಆದುನಿಕರಣಗಳು ಬೇಡವೇ. ಇದು ಸರ್ಕಾರದ ಹೊಣೆಗಾರಿಕೆ ಅಲ್ಲವೇ?
ನವೀನ್ ಸೂರಿಂಜೆ: ಸಂಸ್ಕೃತ ವೇದ ಪಾಠ ಶಾಲೆಯನ್ನು ಬಿಟ್ಟು ಮದರಸಾವನ್ನೇ ಗುರಿ ಮಾಡಿರುವ ಹಿಂದೆ ‘ಅವರು ಲೆಫ್ಟಿಸ್ಟ್, ಕಾಂಗ್ರೆಸ್ ಆದರೂ ಮುಸ್ಲೀಮರನ್ನೂ ಬಿಟ್ಟಿಲ್ಲ ಮಾರಾಯ್ರೆ’ ಎಂದು ಅನ್ನಿಸಿಕೊಳ್ಳುವ ಇರಾದೆಗಳು ಮುಸ್ಲೀಮರನ್ನು ಭವಿಷ್ಯದಲ್ಲಿ ಅಪಾಯಕ್ಕೆ ದೂಡುತ್ತದೆ.
ಖಾಸಿಂ ಸಾಬ್: ಕರ್ನಾಟಕ ರಾಜ್ಯ ಸರ್ಕಾರದ ಈ ನಿಲುವಿನಿಂದ ರಾಜ್ಯ ಮದರಸಗಳಿಗೆ ಯಾವುದೇ ಇರಾದೆಗಳು, ಗುಮಾನಿಗಳು ಇಲ್ಲ ಮಾರಾಯ್ರೆ.
ನವೀನ್ ಸೂರಿಂಜೆ: ಮದರಸಾಗಳು ಕನ್ನಡ ಸೇರಿದಂತೆ ಯಾವ ಭಾಷೆಯನ್ನಾದರೂ ಕಲಿಸಲಿ. ಪ್ರಾಧಿಕಾರಕ್ಕೆ ಆಸಕ್ತಿ ಇದ್ದರೆ ಅಂತಹ ಮದರಸಾಗಳಿಗೆ ಅನುದಾನ, ಪ್ರೋತ್ಸಾಹ, ಪ್ರಶಸ್ತಿ ನೀಡಲಿ. ಬದಲಾಗಿ, ಸರ್ಕಾರವೇ ನೀತಿಯ ಮೂಲಕವಾಗಿ ಮದರಸ ಪ್ರವೇಶ ಮಾಡುವುದು ಮುಸ್ಲೀಮರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.
ಖಾಸಿಂ ಸಾಬ್: ಇದು ಹೇಗೆ ಮುಸ್ಲಿಮರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯೋ,..ಅರ್ಥವಾಗುತ್ತಿಲ್ಲ.
ಈ ಚರ್ಚೆಯ ಸಾರಾಂಶ: ಕರ್ನಾಟಕ ರಾಜ್ಯದಲ್ಲಿನ ಎಲ್ಲ ಮದರಸಗಳಲ್ಲಿ ಕನ್ನಡ ಕಲಿಕೆ ಜಾರಿಯಾಗಲಿ ಎಂಬುದಷ್ಟೇ ಆಗಿದೆ!
• ಖಾಸಿಂ ಸಾಬ್ ಎ. ಬೆಂಗಳೂರು.