'ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ' » Dynamic Leader
November 21, 2024
ರಾಜ್ಯ

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‍ಗೆ ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ.

‘ಶ್ರೀ.ಸಿದ್ದಗಂಗಾ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿ, ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪ್ರತಿಭಾನ್ವಿತರಿಗೆ ಪ್ರತಿವರ್ಷವೂ ‘ಶ್ರೀ.ಸಿದ್ದಗಂಗಾ ಸಿರಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ವರ್ಷ ಕನ್ನಡದ ಪ್ರಸಿದ್ದ ವಿದ್ವಾಂಸರಾದ, ಸಿದ್ದಗಂಗಾ ಮಠದ ಹಿರಿಯ ವಿದ್ಯಾರ್ಥಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ನೀಡಲಾಗುತ್ತಿದೆ’. ಎಂದು ಬಸವ ಅಂತರಾಷ್ಟ್ರೀಯ ಪ್ರತಿಷ್ಟಾನ, ಲಂಡನ್‍ನ ಪದಾಧಿಕಾರಿಗಳು ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರಿ. ಎಸ್.ಮಹಾದೇವಯ್ಯ,    

‘ದಿನಾಂಕ: 24.12.2022 ರಂದು ಬೆಂಗಳೂರು ಉತ್ತರ ತಾಲ್ಲೂಕಿನ ಕನ್ನಲ್ಲಿ ಗ್ರಾಮದ ಶ್ರೀ.ವೀರಭದ್ರಸ್ವಾಮಿ ಸುಕ್ಷೇತ್ರದ ಆವರಣದಲ್ಲಿ ಶ್ರೀ.ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು, ಡಾ.ಗೊ.ರು.ಚನ್ನಬಸಪ್ಪ, ಶ್ರೀ.ಎಸ್.ಟಿ.ಸೋಮಶೇಖರ್ ಹಾಗೂ ಶ್ರೀ.ಎಸ್.ಮಹಾದೇವಯ್ಯ ಇವರುಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಹದಿನೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಗುವುದು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಧ್ಯಾಪಕರಾಗಿ, ಕುಲಸಚಿವರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಕನ್ನಡ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾಗಿ, ಕರ್ನಾಟಕದ ಮೊದಲ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಸೇವೆಸಲ್ಲಿಸಿದ್ದಾರೆ. ಶ್ರೀಯುತರು ಬಹುಶೃತ ವಿದ್ವಾಂಸರು. ಈಗಾಗಲೇ ನೂರಾರು ಅತ್ಯಂತ ವಿದ್ವತ್‍ಪೂರ್ಣ ಕೃತಿಗಳು ಇವರಿಂದ ರಚನೆಯಾಗಿದೆ. ಕನ್ನಡ, ಸಂಸ್ಕೃತ ಹಾಗೂ ಪಾಲಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿರುವ ಶ್ರೀ.ವೆಂಕಟೇಶ್ ರವರ ಸಂಪಾದಕತ್ವದಲ್ಲಿ ಅನೇಕ ಮಹತ್ವದ ಕೃತಿಗಳು ಹೊರಬಂದಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯವಾಗಿರುವ ಗ್ರಂಥಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅನೇಕ ಮಹತ್ವದ ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿರುವ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ರವರಿಗೆ ಪ್ರಸ್ತುತ ಶ್ರೀ.ಸಿದ್ದಗಂಗಾ ಮಠದ ಪೂಜ್ಯರಾಗಿದ್ದ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಗಳವರ ಪುಣ್ಯಸ್ಮರಣೆಯಲ್ಲಿ ನೀಡಲಾಗುವ ‘ಶ್ರೀ.ಸಿದ್ದಗಂಗಾ ಸಿರಿ’ ಪ್ರಶಸ್ತಿಯನ್ನು ನೀಡಲಾಗುತ್ತದೆ’ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ.ನಾಗರಾಜಮೂರ್ತಿ, ಟ್ರಸ್ಟಿಗಳಾದ ಮಂಜುಳ ಶಿವಾನಂದ, ದಯಾನಂದ್ ಪಾಟೀಲ್ ಉಪಸ್ಥಿತರಿದ್ದರು.

Related Posts