ಕ್ರೈಂ ರಿಪೋರ್ಟ್ಸ್ Archives » Dynamic Leader
November 21, 2024
Home Archive by category ಕ್ರೈಂ ರಿಪೋರ್ಟ್ಸ್

ಕ್ರೈಂ ರಿಪೋರ್ಟ್ಸ್

ಕ್ರೈಂ ರಿಪೋರ್ಟ್ಸ್ ದೇಶ

ನವದೆಹಲಿ: ‘ಡಿಜಿಟಲ್ ಅರೆಸ್ಟ್’ಗಳ ಮೂಲಕ ಜನರನ್ನು ವಂಚಿಸುವ ಸೈಬರ್ ಅಪರಾಧಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳೆಯುತ್ತಿರುವ ಇಂತಹ ಸಮಸ್ಯೆಗಳನ್ನು ಎದುರಿಸಲು ಅನೇಕ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಅವರು ಒತ್ತಿ ಹೇಳಿದರು. ಇದು ಮಹತ್ವದ ಕಾಳಜಿ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ, ಇಂತಹ ಹಗರಣಗಳನ್ನು ಎದುರಿಸುವಾಗ ‘ನಿರೀಕ್ಷಿಸಿ, ಯೋಚಿಸಿ ಮತ್ತು ಕ್ರಮ ಕೈಗೊಳ್ಳಿ’ ಎಂಬ ವಿಧಾನವನ್ನು ಅನುಸರಿಸುವಂತೆ ನಾಗರಿಕರನ್ನು ಒತ್ತಾಯಿಸಿದ್ದಾರೆ.

‘ಡಿಜಿಟಲ್ ಅರೆಸ್ಟ್’ ಒಂದು ರೀತಿಯ ಸೈಬರ್ ಕ್ರೈಮ್ ಅನ್ನು ಉಲ್ಲೇಖಿಸುತ್ತದೆ, ಅಲ್ಲಿ ಸ್ಕ್ಯಾಮರ್‌ಗಳು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಾರೆ. ಬಲಿಪಶುಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸದಿದ್ದಾಗ ಬಂಧನದ ಬೆದರಿಕೆ ಹಾಕುತ್ತಾರೆ. ಈ ಹಗರಣದ ಹಲವಾರು ಪ್ರಕರಣಗಳು ಇತ್ತೀಚೆಗೆ ದೇಶಾದ್ಯಂತ ವರದಿಯಾಗಿವೆ.

ಕಾನೂನಿನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ. ಇದು ಕೇವಲ ವಂಚನೆ, ಸುಳ್ಳು, ಅಪರಾಧಿಗಳ ಗುಂಪು ಮತ್ತು ಇದನ್ನು ಮಾಡುತ್ತಿರುವವರು ಸಮಾಜದ ಶತ್ರುಗಳು. ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ಎದುರಿಸಲು ವಿವಿಧ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಿ ಮೋದಿ ತಮ್ಮ ‘ಮನ್ ಕಿ ಬಾತ್’ ಪ್ರಸಾರದಲ್ಲಿ ಹೇಳಿದರು.

ಜನರ ಭಯವನ್ನು ಬೇಟೆಯಾಡಲು ಸ್ಕ್ಯಾಮರ್‌ಗಳು ತನಿಖಾ ಸಂಸ್ಥೆ ಅಧಿಕಾರಿಗಳಂತೆ ಹೇಗೆ ನಟಿಸುತ್ತಾರೆ ಎಂಬುದನ್ನು ತೋರಿಸುವ ಪ್ರಾತಿನಿಧಿಕ ವಿಡಿಯೊವನ್ನು ಸಹ ಅವರು ಪ್ಲೇ ಮಾಡಿದರು. ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಪ್ರಧಾನಿ ಹೇಳಿದರು. ಅಂತಹ ತನಿಖೆಗಾಗಿ ಯಾವುದೇ ತನಿಖಾ ಸಂಸ್ಥೆಯು ನಿಮ್ಮನ್ನು ಫೋನ್ ಅಥವಾ ವಿಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ.

ಬೆದರಿಕೆ ಕರೆ ಮಾಡುವ ಸೈಬರ್ ವಂಚಕರನ್ನು ಎದುರಿಸಲು ಮೂರು ಹಂತದ ವಿಧಾನವನ್ನು ಪ್ರಧಾನಿ ವಿವರಿಸಿದರು.

ಒಬ್ಬರು ಕರೆಯನ್ನು ಸ್ವೀಕರಿಸಿದಾಗ, ಮೊದಲು ‘ನಿರೀಕ್ಷಿಸಿ’ ಎಂದು ಹೇಳಿ. ಭೀತಿಗೊಳಗಾಗಬೇಡಿ; ಶಾಂತವಾಗಿರಿ ಮತ್ತು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಧ್ಯವಾದರೆ, ಸ್ಕ್ರೀನ್‌ಶಾಟ್ ತೆಗೆದುಕೊಂಡು ಕರೆಯನ್ನು ರೆಕಾರ್ಡ್ ಮಾಡಿ ಎಂದು ಪ್ರಧಾನಿ ಹೇಳಿದರು.

ನಂತರ, ‘ಯೋಚಿಸಿ’ ಯಾವುದೇ ಸರ್ಕಾರಿ ಏಜೆನ್ಸಿಯು ನಿಮಗೆ ಫೋನ್‌ನಲ್ಲಿ ಬೆದರಿಕೆ ಹಾಕುವುದಿಲ್ಲ, ವಿಡಿಯೊ ಕರೆ ಮೂಲಕ ನಿಮ್ಮನ್ನು ವಿಚಾರಿಸುವುದಿಲ್ಲ ಅಥವಾ ಈ ರೀತಿಯಲ್ಲಿ ಹಣವನ್ನು ಬೇಡಿಕೆಯಿಡುವುದಿಲ್ಲ. ನೀವು ಭಯಭೀತರಾಗಿದ್ದರೆ, ಏನಾದರೂ ತಪ್ಪಾಗಿದೆಯೇ ಎಂದು ಗುರುತಿಸಿ.

ಅಂತಿಮವಾಗಿ, ‘ಕ್ರಮ ತೆಗೆದುಕೊಳ್ಳಿ’. ರಾಷ್ಟ್ರೀಯ ಸೈಬರ್ ಸಹಾಯವಾಣಿಗೆ (1930)  ಕರೆ ಮಾಡಿ, ಅಧಿಕೃತ ಪೋರ್ಟಲ್‌ನಲ್ಲಿ ಘಟನೆಯನ್ನು ವರದಿ ಮಾಡಿ ಮತ್ತು ನಿಮ್ಮ ಕುಟುಂಬದವರಿಗೆ ಮತ್ತು ಪೊಲೀಸರಿಗೆ ತಿಳಿಸಿ. ಯಾವುದೇ ಪುರಾವೆಗಳನ್ನು ಸುರಕ್ಷಿತವಾಗಿರಿಸಲು ಮರೆಯದಿರಿ ಎಂದು ಪ್ರಧಾನಿ ಸಲಹೆ ನೀಡಿದರು.

ಈ ರೀತಿಯ ಹಗರಣಗಳನ್ನು ತನಿಖೆ ಮಾಡುವ ವಿವಿಧ ಏಜೆನ್ಸಿಗಳ ನಡುವೆ ಸಮನ್ವಯವನ್ನು ರಚಿಸಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಕ್ರೈಂ ರಿಪೋರ್ಟ್ಸ್

ಮುಂಬೈ: ತಾಯಿಯನ್ನು ಕೊಂದು ದೇಹದ ಭಾಗಗಳನ್ನು ಹುರಿದು ತಿಂದ ವ್ಯಕ್ತಿಯೊಬ್ಬನ ಮರಣದಂಡನೆಯನ್ನು ಮುಂಬೈ ಹೈಕೋರ್ಟ್ ಎತ್ತಿ ಹಿಡಿದಿದೆ.

ಸುನೀಲ್ ಮಹಾರಾಷ್ಟ್ರದ ಕೊಲ್ಲಾಪುರದವನು. ಈತ 2017ರಲ್ಲಿ ತನ್ನ ತಾಯಿ ಎಲ್ಲಮ್ಮನನ್ನು ಹತ್ಯೆ ಮಾಡಿ, ಅವರ ದೇಹದ ಭಾಗಗಳನ್ನು ಬೇರ್ಪಡಿಸಿ ಹುರಿದು ತಿಂದಿದ್ದಾನೆ. ಕುಡಿತಕ್ಕೆ ಹಣ ನೀಡದ ಕಾರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರದ ಪರವಾಗಿ ಆರೋಪಿಸಲಾಗಿತ್ತು.

ತನಿಖೆ ನಡೆಸಿದ ವಿಚಾರಣಾ ನ್ಯಾಯಾಲಯ ಇದೊಂದು ಅಪರೂಪದ ಪ್ರಕರಣ ಎಂದು ಹೇಳಿ ಸುನಿಲ್‌ಗೆ 2021ರಲ್ಲಿ ಮರಣದಂಡನೆ ವಿಧಿಸಿತ್ತು. ಸದ್ಯ ಆರೋಪಿಯನ್ನು ಪುಣೆ ಜೈಲಿನಲ್ಲಿ ಇರಿಸಲಾಗಿದೆ. ಇದರ ವಿರುದ್ಧ ಸುನೀಲ್ ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೇವತಿ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠವು, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

‘ಈ ಪ್ರಕರಣ ಬಹಳ ಅಪರೂಪದಲ್ಲೂ ಅಪುರೂಪವಾಗಿದೆ. ಆರೋಪಿಯು ತಾಯಿಯನ್ನು ಕೊಂದಿದ್ದಲ್ಲದೆ ಆಕೆಯ ಕಿಡ್ನಿ, ಮೆದುಳು, ಹೃದಯ, ಲಿವರ್ ಮುಂತಾದವುಗಳನ್ನು ಹುರಿದು ತಿಂದಿದ್ದಾರೆ. ಇದು ನರಭಕ್ಷಕತೆಯನ್ನು ತೋರಿಸುತ್ತದೆ. ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರೆ ಜೈಲಿನಲ್ಲಿಯೂ ಇದೇ ರೀತಿಯ ಅಪರಾಧಗಳನ್ನು ಮಾಡುತ್ತಾರೆ’ ಎಂದು ಹೇಳಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.

ಕ್ರೈಂ ರಿಪೋರ್ಟ್ಸ್ ದೇಶ

ಕೋಲ್ಕತ್ತಾ: ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ 26 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಅದನ್ನು ಚಿತ್ರೀಕರಿಸಿದ ಆಸ್ಪತ್ರೆ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್‌.ಜಿ.ಕರ್ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದಲ್ಲಿ ಯುವ ಟ್ರೈನಿ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ನ್ಯಾಯ ಕೇಳಿ ವೈದ್ಯರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಲೈಂಗಿಕ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮಹಿಳಾ ವೈದ್ಯೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಕೋಲಾಹಲ, ಉದ್ವೇಗ ಕಡಿಮೆಯಾಗುವ ಮುನ್ನ, ಇದೇ ಕೋಲ್ಕತ್ತಾದಲ್ಲಿ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದು ಭಾರೀ ಆಘಾತವನ್ನುಂಟು ಮಾಡಿದೆ.

ಆ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 26 ವರ್ಷದ ಮಹಿಳೆಯೊಬ್ಬರು ತಮ್ಮ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಿದ್ದರು. ರಾತ್ರಿ ಮಗುವಿನ ಪಕ್ಕದಲ್ಲಿ ಮಲಗಿದ್ದ ಅವರಿಗೆ, ಅಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿರುವ ತನಯ್ ಪಾಲ್ (26) ಎಂಬುವನು ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ, ಅದನ್ನು ತನ್ನ ಮೊಬೈಲ್‌ನಲ್ಲೂ ಚಿತ್ರೀಕರಿಸಿಕೊಂಡಿದ್ದಾನೆ.

ಇದರಿಂದ ಆಘಾತಕ್ಕೊಳಗಾದ ಮಹಿಳೆ ದೌರ್ಜನ್ಯದ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾರ್ಡ್ ಬಾಯ್ ತನಯ್ ಪಾಲ್ ನನ್ನು ಬಂಧಿಸಿ ಆತನ ಸೆಲ್ ಫೋನ್ ಜಪ್ತಿ ಮಾಡಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.

ಅಂತೆಯೇ, ಕಳೆದ ತಿಂಗಳು, ಬಿರ್ಬಮ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ನರ್ಸ್‌ಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪಶ್ಚಿಮ ಬಂಗಾಳದ ಆಸ್ಪತ್ರೆಗಳಲ್ಲಿ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಬಲವಾಗುತ್ತಿದೆ.

ಕ್ರೈಂ ರಿಪೋರ್ಟ್ಸ್

ಉತ್ತರ ಪ್ರದೇಶ: 17 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿ, ಮತ್ತೆ ಅದೇ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮತ್ತೆ ಬಂಧನಕ್ಕೊಳಗಾಗಿರುವ ಘಟನೆ ಆಘಾತವನ್ನು ಉಂಟು ಮಾಡಿದೆ.

ವಿರನಾಥ್ ಪಾಂಡೆ, ಬಿಹಾರ ರಾಜ್ಯದ ಭೋಜ್‌ಪುರ ಜಿಲ್ಲೆಯವನು. ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದವನು.

ಈ ಹಿನ್ನೆಲೆಯಲ್ಲಿ, ಸಂತ್ರಸ್ತೆಯ ತಂದೆ ಕಳೆದ ಮೇನಲ್ಲಿ ತನ್ನ ಮಗಳು ಮತ್ತೆ ಕಾಣೆಯಾಗಿದ್ದಾಳೆ ಎಂದು ಕೊಯ್ರಾವುನಾ (Koirauna) ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ನಂತರ ಪೊಲೀಸರು ಪ್ರಥಮ ಮಾಹಿತಿ ವರದಿ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಹೆಚ್ಚಿನ ತನಿಖೆಯಲ್ಲಿ ಬಾಲಕಿಯನ್ನು ರಕ್ಷಿಸಿದ್ದು, ಪಾಂಡೆಯನ್ನು ಜೈಲಿಗೆ ಕಳುಹಿಸಲಾಗಿದೆ.

ಈ ಕುರಿತು ಮಾತನಾಡಿದ ಕೊಯ್ರಾವುನಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ‘ಪಾಂಡೆ ಜಾಮೀನಿನ ಮೇಲೆ ಹೊರಬಂದ ಕೆಲವು ದಿನಗಳ ನಂತರ ಅಂದರೆ, ಆಗಸ್ಟ್ 5 ರಂದು ಹುಡುಗಿಯನ್ನು ಅಪಹರಿಸಿ, ಒಂದು ತಿಂಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನಂತರ ಸೆಪ್ಟೆಂಬರ್ 2 ರಂದು ಜಂಗಿಗಂಜ್ (Jangiganj) ರೈಲ್ವೆ ನಿಲ್ದಾಣದ ಬಳಿ ಬಾಲಕಿಯನ್ನು ಬಿಟ್ಟು ಪಾಂಡೆ ಪರಾರಿಯಾಗಿದ್ದಾನೆ. ಇದರ ನಂತರ ಸಂತ್ರಸ್ತೆ ಕಳೆದ ಒಂದು ತಿಂಗಳಿನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದಳು.

ಪಾಂಡೆ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಪೋಕ್ಸೋ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮಹಿಳೆಯ ವೈದ್ಯಕೀಯ ಪರೀಕ್ಷೆಯಲ್ಲಿ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ’ ಎಂದು ಅವರು ಹೇಳಿದರು.

ಪಾಂಡೆ ಅವರನ್ನು ನಿನ್ನೆ (ಸೆ.9) ಇಟಹರಾ ಚೌರಾಹಾ (Itahara Chaura)ದಲ್ಲಿ ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಕ್ರೈಂ ರಿಪೋರ್ಟ್ಸ್

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಅಲ್ಲಿದ್ದವರು ಆ ಮಹಿಳೆಯನ್ನು ರಕ್ಷಿಸದೆ ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದಾರೆ.

ಉಜ್ಜಯಿನಿಯ ಕೊಯಿಲಾ ಪಾಠಕ್ ನಲ್ಲಿ ಮಹಿಳೆಯೊಬ್ಬರು ಕಸ ಸಂಗ್ರಹಿಸುತ್ತಿದ್ದರು. ಆ ಪ್ರದೇಶದಲ್ಲಿದ್ದ ಲೋಕೇಶ್ ಎಂಬುವನು, ಮಹಿಳೆಯನ್ನು ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ಆಸೆ ಮಾತು ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ಆತನೊಂದಿಗೆ ತೆರಳಿದ್ದಾಳೆ. ಮಹಿಳೆಗೆ ಲೋಕೇಶ್ ರಸ್ತೆಯಲ್ಲೇ ಅರಿವಳಿಕೆ ಮಿಶ್ರಿತ ಮದ್ಯ ನೀಡಿದ್ದಾನೆ. ಇದನ್ನು ಅರಿಯದೆ ಕುಡಿದು ಅಲ್ಲೆ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಇದನ್ನು ಕಂಡ ಅಲ್ಲಿದ್ದ ಕೆಲವರು ಮಹಿಳೆಗೆ ಸಹಾಯ ಮಾಡದೆ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಪೊಲೀಸರ ಗಮನಕ್ಕೆ ಬಂದಾಗ ಲೋಕೇಶ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ 4800 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು 24ನೇ ಎಸಿಎಂಎಂ ಕೋರ್ಟ್‌ಗೆ ಇಂದು ಸಲ್ಲಿಸಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಅವರನ್ನು 2ನೇ ಆರೋಪಿ ಎಂದೇ ದಾಖಲಿಸಲಾಗಿದ್ದು, ಪವಿತ್ರಾ 1ನೇ ಆರೋಪಿಯಾಗಿದ್ದಾರೆಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಜೂನ್ 9 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್ 11 ರಂದು ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಕೊಲೆಯಂತಹ ಘೋರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸರು 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿದೆ.

ಕ್ರೈಂ ರಿಪೋರ್ಟ್ಸ್

ಬೆಂಗಳೂರು: ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಲವು ಆರೋಪಿಗಳನ್ನು ಸಹ ಇದೀಗ ಬೇರೆ ಬೇರೇ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಚೀಫ್ ಸೂಪರಿಡೆಂಟ್ ರಿಂದ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.

ಅದರಂತೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ನ್ಯಾಯಾಲಯದ ಆದೇಶದ ಪ್ರತಿ ಸಿಗುತ್ತಿದ್ದಂತೆ ಜೈಲು ಸಿಬ್ಬಂದಿ ದರ್ಶನ್ ರನ್ನು ಸ್ಥಳಾಂತರಿಸಲಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ನಟನಿಗೆ ಸಂಕಷ್ಟ ಎದುರಾಗಿದೆ.

ಯಾರ‍್ಯಾರು ಯಾವ-ಯಾವ ಜೈಲಿಗೆ ಶಿಫ್ಟ್​: ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್​ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಆರೋಪಿ ಪವನ್, ರಾಘವೇಂದ್ರ ನಂದೀಶ್ ನನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಆರೋಪಿ ಜಗದೀಶ್ ಅವರನ್ನು ಶಿವಮೊಗ್ಗಕ್ಕೆ ಹಾಗೂ ಧನರಾಜ್​ನನ್ನು ಧಾರವಾಡ ಜೈಲಿಗೆ ಸ್ಥಳಾಂತರಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ತಿದ್ದಾರೆ.

ಕೊಲೆ ಪ್ರಕರಣದ ಆರೋಪಿ ವಿನಯ್​ನನ್ನು ವಿಜಯಪುರ ಜೈಲಿಗೆ, ನಾಗರಾಜನನ್ನು ಗುಲ್ಬರ್ಗ ಹಾಗೂ ಲಕ್ಷ್ಮಣನನ್ನು ಶಿವಮೊಗ್ಗ, ಆರೋಪಿ ಪ್ರದೂಶ್ ನನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ. ಈಗಾಗಲೇ ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲೆ ಇದ್ದರು. ಅವರು ಅಲ್ಲೇ ಇರಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆಗಿರುವ ನಟಿ ಪವಿತ್ರಾ ಗೌಡ ಅವರು ಪರಪ್ಷನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ಅನುಕುಮಾರ್ ಹಾಗೂ ದೀಪಕ್ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ದರ್ಶನ್ ಅವರನ್ನು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಸದ್ಯ ದರ್ಶನ್ ಕರೆದೊಯ್ಯುವ ಸಮಯದ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.

ರೌಡಿಶೀಟರ್ ಗಳ ಜೊತೆ ದರ್ಶನ್ ಸಂಪರ್ಕ ಬೆಳೆಸಿದ್ದು ಹೇಗೆ? ಲಾನ್ ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು. ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧವಿದ್ದರೂ ನಿಷೇಧಿತ ಸ್ಥಳದಲ್ಲಿ ಸಿಗರೇಟ್ ಸೇದಲು ಸೇರಿದ್ದರ ಬಗ್ಗೆ ತನಿಖೆ ನಡೆಸಲಿದ್ದಾರೆ.

ಹುಳಿಮಾವು ಇನ್ಸ್​ಪೆಕ್ಟರ್​ ಕುಮಾರಸ್ವಾಮಿ ನೇತೃತ್ವದಲ್ಲಿ ಎರಡನೇ ಪ್ರಕರಣದ ತನಿಖೆ ನಡೆಯಲಿದೆ. ಮೊಬೈಲ್ ಫೋನ್ ನಲ್ಲಿ ಪೋಟೊ ತೆಗೆದಿದ್ದು ಯಾರು? ಹೇಗೆ ಇದೆಲ್ಲಾ ಸಾಧ್ಯವಾಯ್ತು. ಮೊಬೈಲ್ ಕೊಟ್ಟವರು ಯಾರು? ವಿಡಿಯೊ ಕರೆ ಮಾಡಿದ್ದು ಹೇಗೆ ಎನ್ನುವ ಬಗ್ಗೆ ಈ ಟೀಮ್ ತನಿಖೆ ನಡೆಸಲಿದೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದೆ. ಜಾಮರ್ ಅಳವಡಿಸಿರುತ್ತಾರೆ. ನೆಟ್ ವರ್ಕ್ ಕನೆಕ್ಷನ್ ಹೇಗಿದೆ ಸಿಕ್ಕಿದೆ. ಫೋಟೋ ಸೆಂಡ್ ಮಾಡಿದ್ದು ಹೇಗೆ? ವಿಡಿಯೋ ಕಾಲ್ ಬಂದಿದ್ದು ಹೇಗೆ? ಎನ್ನುವ ಬಗ್ಗೆ ತನಿಖೆ ನಡೆಯಲಿದೆ.

ಕ್ರೈಂ ರಿಪೋರ್ಟ್ಸ್ ದೇಶ

ಕಳೆದ ಶುಕ್ರವಾರ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು. ಕಣ್ಣು, ಬಾಯಿ, ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದ್ದು, ಎಡಗಾಲು, ಕುತ್ತಿಗೆ, ಬಲಗೈ ಮತ್ತು ತುಟಿಗಳಿಗೆ ಗಾಯಗಳಾಗಿದ್ದವು. ಶವಪರೀಕ್ಷೆ ವರದಿಯ ಪ್ರಕಾರ, ಕೊಲೆಯ ನಂತರ ಯುವ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ತನಿಖೆಯಲ್ಲಿ, ಕೊಲೆ ಆರೋಪಿ ಆಸ್ಪತ್ರೆಗೆ ಆಗಾಗ್ಗೆ ಬರುತ್ತಿದ್ದ ಭದ್ರತಾ ಸ್ವಯಂಸೇವಕ ಎಂಬುದು ಬಹಿರಂಗವಾಗಿದೆ. ಅಲ್ಲದೇ ಕೊಲೆಯಾದ ಬಳಿಕ ಯಾವುದೇ ಟೆನ್ಷನ್ ಇಲ್ಲದೇ, ಓಡಿ ಹೋಗದೆ ರಕ್ತಸಿಕ್ತ ಬಟ್ಟೆಗಳನ್ನು ಒಗೆದ ಆ ವ್ಯಕ್ತಿ, ಪಕ್ಕದ ಭದ್ರತಾ ಕೊಠಡಿಗೆ ಹೋಗಿ ನೆಮ್ಮದಿಯಿಂದ ಮಲಗಿ ನಿದ್ರಿಸಿದ್ದಾನೆ.

ಆ ವ್ಯಕ್ತಿಯ ಶೂ ಮೇಲಿದ್ದ ರಕ್ತದ ಕಲೆಗಳಿಂದ ಆತನೇ ಕೊಲೆಗಾರ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಘಟನೆ ನಡೆದ ದಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಪಶ್ಚಿಮ ಬಂಗಾಳವನ್ನು ಬೆಚ್ಚಿಬೀಳಿಸಿದ ಕೊಲೆ ಘಟನೆಯ ನಂತರ ಪಶ್ಚಿಮ ಬಂಗಾಳದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅಭ್ಯಾಸ ವೈದ್ಯರು ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಆರಂಭಗೊಂಡು ದೇಶಾದ್ಯಂತ ವಿವಿಧ ಆಸ್ಪತ್ರೆಗಳ ವೈದ್ಯರು ಆರೋಪಿಗಳಿಗೆ ತಕ್ಷಣದ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ವಿವಾದ ಎದ್ದ ಬೆನ್ನಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇಂದು (ಆಗಸ್ಟ್ 13) ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅಧಿವೇಶನದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಹೆಚ್ಚುತ್ತಿರುವ ರಾಜಕೀಯ ಒತ್ತಡದ ನಡುವೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹತ್ಯೆಗೀಡಾದ ವಿದ್ಯಾರ್ಥಿಯ ಕುಟುಂಬವನ್ನು ಭೇಟಿ ಮಾಡಿ, “ಮುಂದಿನ ಶನಿವಾರದೊಳಗೆ ತನಿಖೆ ಪೂರ್ಣಗೊಳಿಸದಿದ್ದರೆ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಶಿಫಾರಸು ಮಾಡಲಾಗುವುದು” ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ, ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ವೈದ್ಯರು ತಿಳಿಸಿದ್ದಾರೆ.

ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಪ್ರತಿಭಟನಾ ನಿರತ ವೈದ್ಯಕೀಯ ಸಂಘಗಳ ಜತೆ ಮಾತುಕತೆ ನಡೆಸಿದ್ದಾರೆ. ಆ ಸಮಯದಲ್ಲಿ, “ಘಟನೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆ ತನಿಖೆ ನಡೆಸಬೇಕು ಮತ್ತು ಕರ್ತವ್ಯದಲ್ಲಿರುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂಬ ಬೇಡಿಕೆಗಳನ್ನು ವೈದ್ಯಕೀಯ ಸಂಘದಿಂದ ಮುಂದಿಡಲಾಗಿದೆ.

ಆದರೆ, ಕೇಂದ್ರ ಸಚಿವರ ಜತೆಗಿನ ಮಾತುಕತೆಯಲ್ಲಿ ಸೌಹಾರ್ದಯುತ ಪರಿಹಾರ ಸಿಗದ ಕಾರಣ ಪ್ರತಿಭಟನೆ ಮುಂದುವರಿಸುವುದಾಗಿ ವೈದ್ಯಕೀಯ ಸಂಘಗಳು ಘೋಷಿಸಿವೆ.

ಈ ಹಿನ್ನೆಲೆಯಲ್ಲಿ, ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿ ಹತ್ಯಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತು ಪ್ರಕಟಿಸಿರುವ ಹೇಳಿಕೆಯಲ್ಲಿ, “ಕೋಲ್ಕತ್ತಾದ ಘಟನೆ ನಿರ್ಭಯಾ 2.0. ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ವೈದ್ಯಕೀಯ ಸಂಘಗಳು ಇಂದಿನಿಂದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ, ಒಪಿಡಿ ಎಂಬ ಹೊರರೋಗಿ ವಿಭಾಗದಲ್ಲಿ ವೈದ್ಯರು ನಿರ್ದಿಷ್ಟ ಸೇವೆಗಳಲ್ಲಿ ಕೆಲಸ ಮಾಡುವುದಿಲ್ಲ.

ಈ ಹೋರಾಟವನ್ನು ಬಲಪಡಿಸಲು ಎಲ್ಲಾ ವೈದ್ಯರು, ತರಬೇತಿ ವೈದ್ಯರು, ಡೀನ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಕೈಜೋಡಿಸಬೇಕು” ಎಂದು ಹೇಳಲಾಗಿದೆ. ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ಮುಷ್ಕರವನ್ನು ಘೋಷಿಸಿರುವುದರಿಂದ ದೇಶಾದ್ಯಂತ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳು ಪರಿಣಾಮ ಬೀರುವ ವಾತಾವರಣವಿದೆ.

ಕ್ರೈಂ ರಿಪೋರ್ಟ್ಸ್

ಡಿ.ಸಿ.ಪ್ರಕಾಶ್

ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿ ತಿರುವೆಂಗಟಂ ಎಂಬಾತನನ್ನು ಇಂದು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅನ್ನು ಜುಲೈ 5ರ ರಾತ್ರಿ ಪೆರಂಬೂರಿನ ಅವರ ನಿವಾಸದ ಬಳಿ ಆರು ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆ ಮಾಡಲಾಗಿತ್ತು. ಆ ನಂತರ, ಈ ಘಟನೆಗೆ ಸಂಬಂಧಿಸಿದಂತೆ ಸೆಂಬಿಯಂ ಪೊಲೀಸರು 11 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿಯೇ 33 ವರ್ಷದ ತಿರುವೆಂಕಟಂ.

ಆರ್ಮ್ ಸ್ಟ್ರಾಂಗ್

ಏತನ್ಮಧ್ಯೆ, ತಿರುವೆಂಗಟಂನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ಪರಂಗಿಮಲೈ ಸಶಸ್ತ್ರ ಪಡೆಗಳ ಸಂಕೀರ್ಣದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕೊಡುಂಗೈಯೂರ್ ಕಾನೂನು ಸುವ್ಯವಸ್ಥೆ ಇನ್ಸ್‌ಪೆಕ್ಟರ್ ಸರವಣನ್ ಅವರು ಇಂದು ಬೆಳಗ್ಗೆ ಮಾಧವರಂ ಅಡುತೊಟ್ಟಿ ಬಳಿ ತನಿಖೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ರೌಡಿ ತಿರುವೆಂಗಟಂ ಪರಾರಿಯಾಗಿದ್ದನು ಎನ್ನಲಾಗುತ್ತಿದೆ.

ತರುವಾಯ, ತಂಡೈಯಾರ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮುಹಮ್ಮದ್ ಬುಖಾರಿ ಮಾಧವರಂ ಆಡುತೊಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಂತರ ರೌಡಿ ತಿರುವೆಂಗಟಂ ಪುಳಲ್ ವೆಜಿಟೇರಿಯನ್ ವಿಲೇಜ್ ಪ್ರದೇಶದ ಖಾಲಿ ಜಾಗದಲ್ಲಿ ಟಿನ್ ಶೆಡ್‌ನಲ್ಲಿ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿತ್ತು.

ತಿರುವೆಂಗಟಂ ಎನ್‌ಕೌಂಟರ್ ಸ್ಪಾಟ್

ಇದಾದ ಬಳಿಕ ವಿಶೇಷ ಪಡೆ ಪೊಲೀಸರು ಟಿನ್ ಶೆಡ್ ಅನ್ನು ಸುತ್ತುವರಿದು ತಿರುವೆಂಗಟಂ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಆಗ ತಿರುವೆಂಗಟಂ ತನ್ನ ಬಳಿಯಿದ್ದ ನಾಡ ಪಿಸ್ತೂಲ್ ನಿಂದ ಪೊಲೀಸರತ್ತ ಗುಂಡು ಹಾರಿಸಿದ್ದ ಎನ್ನಲಾಗಿದೆ. ಆಗ ಆತ್ಮರಕ್ಷಣೆಗಾಗಿ ಇನ್ಸ್​ಪೆಕ್ಟರ್​ ಮುಹಮ್ಮದ್ ಬುಖಾರಿ ತಿರುವೆಂಗಟಂ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿಯ ಬಲ ಭಾಗದ ಹೊಟ್ಟೆ ಮತ್ತು ಎಡ ಭಾಗದ ಎದೆಗೆ ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಪೊಲೀಸರು ಆತನನ್ನು ರಕ್ಷಿಸಿ ಮಾಧವರಂನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ ಅಲ್ಲಿ ತಪಾಸಣೆ ನಡೆಸಿದ ವೈದ್ಯರು ತಿರುವೆಂಗಟಂ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ತಿರುವೆಂಗಟಂ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಅಲ್ಲಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ತಿರುವೆಂಗಟಂ

ಅಲ್ಲದೆ, ತಿರುವೆಂಗಟಂ ಅವರ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆರ್ಮ್‌ಸ್ಟ್ರಾಂಗ್ ಆಪ್ತ ಬಾಮ್ ಸರವಣನ್ ಸಹೋದರ ತೆನ್ನರಸು ಹತ್ಯೆ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಈತನ ವಿರುದ್ಧ 2014ರಲ್ಲಿ ಕುಂಡ್ರತ್ತೂರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆರ್ಮ್‌ಸ್ಟ್ರಾಂಗ್ ಘಟನೆಯಲ್ಲಿ ನೇರವಾಗಿ ಚಾಕುವಿನಿಂದ ಇರಿದ ಅಪರಾಧಿಯೂ ಇವನೇ ಆಗಿದ್ದಾನೆ. ಸದ್ಯ ಈತನ ವಿರುದ್ಧ ಅಪಹರಣ, ಕೊಲೆ ಯತ್ನ ಪ್ರಕರಣಗಳು ಬಾಕಿ ಇವೆ.

ಕ್ರೈಂ ರಿಪೋರ್ಟ್ಸ್

ಕಲ್ಲಕುರಿಚಿ: ನೀರಿನಲ್ಲಿ ಮೆಥನಾಲ್ (Methanol) ಬೆರೆಸಿ ಮಾರಾಟ ಮಾಡಿರುವುದು ಸಿಬಿಸಿಐಡಿ ಹಾಗೂ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ಕಲ್ಲಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಅಸ್ವಸ್ಥರಾದ 229 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ 150 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ 65 ಮಂದಿ ಸಾವನ್ನಪ್ಪಿದ್ದಾರೆ; 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಸಿಬಿಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮದ್ಯ ಮಾರಾಟಗಾರರು, ಮೆಥನಾಲ್ ಪೂರೈಕೆದಾರರು ಸೇರಿ 21 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಪೈಕಿ ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗಿರುವ ಕನ್ನುಕುಟ್ಟಿ ಗೋವಿಂದರಾಜ್ (50), ಅವರ ಪತ್ನಿ ವಿಜಯಾ (44), ಚಿನ್ನದೊರೈ (36) ಹಾಗೂ ಜೋಸೆಫ್ (40) ಸೇರಿ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ತನಿಖೆಯಲ್ಲಿ, ಚೆನ್ನೈನ ಗೌತಮ್ ಚಂದ್ ಮತ್ತು ಪನ್ಶಿಲಾಲ್ ಮುಂತಾದವರು ಪರವಾನಗಿ (License) ಪಡೆದು, ಹೊರ ರಾಜ್ಯಗಳಿಂದ ಮೆಥನಾಲ್ ಆಮದು ಮಾಡಿ ಮಾರಾಟ ಮಾಡುತ್ತಿದ್ದು, ಯಾವುದೇ ಪರವಾನಗಿ ಇಲ್ಲದ ಚೆನ್ನೈನ ಶಿವಕುಮಾರ್ ಮತ್ತು ಮಡುಕರೈ ಮಾದೇಶ್ ಎಂಬುವವರಿಗೆ ಮಾರಾಟ ಮಾಡಿದ್ದು, ಅದನ್ನು ಕರುಣಾಪುರಂ, ಮಾಧವಚೇರಿ, ಶೇಷಸಮುದ್ರಂ ಭಾಗದ ಮದ್ಯ ಮಾರಾಟಗಾರರು ಖರೀದಿಸಿ ನೀರು ಬೆರೆಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಬಂಧನಕ್ಕೊಳಗಾದ 11 ಜನರಲ್ಲಿ ಐದು ಜನರನ್ನು ನಿನ್ನೆ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತರ ಆರು ಜನರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಉಳಿದವರನ್ನು ಇಂದು ಸಂಜೆ  ನ್ಯಾಯಾಲಯದಲ್ಲಿ ಹಾಜರು ಪಡಿಸುವ ನಿರೀಕ್ಷೆಯಿದೆ.