ರಾಜಕೀಯ Archives » Dynamic Leader
November 21, 2024
Home Archive by category ರಾಜಕೀಯ

ರಾಜಕೀಯ

ರಾಜಕೀಯ

ಡಿ.ಸಿ.ಪ್ರಕಾಶ್

ಮುಂಬೈ: ಮಹಾರಾಷ್ಟ್ರದಲ್ಲಿ ಇದೇ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಇಂದು ಅಂತ್ಯವಾಗಲಿದೆ. ಮುಂಬೈನ ದಾದರ್ ಶಿವಾಜಿ ಪಾರ್ಕ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೋರಿ ಉದ್ಧವ್ ಠಾಕ್ರೆ ಅರ್ಜಿ ಸಲ್ಲಿಸಿದ್ದರು. ಆದರೆ ಪುರಸಭೆ ಆಡಳಿತ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ತರುವಾಯ, ಉದ್ಧವ್ ಠಾಕ್ರೆ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ಕೊನೆಯ ಚುನಾವಣಾ ಪ್ರಚಾರ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಉದ್ಧವ್ ಠಾಕ್ರೆ, ‘ಮೋದಿಯವರ ಭರವಸೆಯ ಮಾತುಗಳು ಪ್ರಯೋಜನವಾಗಿಲ್ಲ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಬಾಳ್ ಠಾಕ್ರೆ (Bal Thackeray) ಅವರ ಹೆಸರನ್ನು ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ.

ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಅದಾನಿ ಆಡಳಿತವನ್ನು ತರಲು ಪ್ರಯತ್ನಿಸುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಅದಾನಿ ಪರವಾದ ಎಲ್ಲಾ ಯೋಜನೆಗಳನ್ನು ರದ್ದುಗೊಳಿಸುತ್ತೇವೆ. ಅದಾನಿಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಧಾರಾವಿ (Dharavi) ಜನರಿಗೆ ಧಾರಾವಿಯಲ್ಲಿಯೇ ಮನೆ ನೀಡಲಾಗುವುದು. ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈನ ಸ್ಥಾನಮಾನಕ್ಕೆ ಬಿಜೆಪಿ ಮೈತ್ರಿಯಿಂದ ಅಪಾಯ ಎದುರಾಗಿದೆ. ದೇಶದ್ರೋಹಿಗಳು ಗೆಲ್ಲುತ್ತಾರೋ ಅಥವಾ ಮಹಾರಾಷ್ಟ್ರವನ್ನು ಪ್ರೀತಿಸುವವರು ಗೆಲ್ಲುತ್ತಾರೋ ಎಂಬುದನ್ನು ಈಗಿನ ಚುನಾವಣೆ ನಿರ್ಧರಿಸಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆದ್ದರೆ ಗುಜರಾತ್‌ನಲ್ಲಿ ಪಟಾಕಿ ಸಿಡಿಯುತ್ತಾರೆ. ಈಗ ಅಧಿಕಾರದಲ್ಲಿರುವವರ ಆಪ್ತರು ಮುಂಬೈಯನ್ನು ಲೂಟಿ ಮಾಡುತ್ತಿದ್ದಾರೆ.

ಈ ಆಡಳಿತದಲ್ಲಿ ಭ್ರಷ್ಟರು, ದೇಶದ್ರೋಹಿಗಳು ಮತ್ತು ದುರುಳರು ಮಾತ್ರ ಸುರಕ್ಷಿತವಾಗಿದ್ದಾರೆ. ಅಗತ್ಯವಿದ್ದರೆ, ಮುಂಬೈನ ಸ್ವಾಯತ್ತತೆಗೆ ಧಕ್ಕೆ ತರುವ ಮುಂಬೈ ಮಹಾನಗರ ಪಾಲಿಕೆಯ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗುವುದು. ಮುಂಬೈನ ಬೆಳವಣಿಗೆಯನ್ನು ಹೆಚ್ಚಿಸಲು ಮುಂಬೈ ಮೆಟ್ರೋಪಾಲಿಟನ್ ಪ್ರದೇಶವನ್ನು ಅಭಿವೃದ್ಧಿಪಡಿಸಲು ನೀತಿ ಆಯೋಗ ಯೋಜಿಸಿದೆ. ಈ ಮೂಲಕ ಮುಂಬೈಯನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಸಂಚು ನಡೆಯುತ್ತಿದೆ.

ಮಹಾರಾಷ್ಟ್ರದ ಎಲ್ಲಾ 90 ಸಾವಿರ ಮತಗಟ್ಟೆಗಳ ಮೇಲೆ ನಿಗಾ ಇಡಲು ಗುಜರಾತ್‌ನಿಂದ ಬಿಜೆಪಿ ಕಾರ್ಯಕರ್ತರನ್ನು ಕರೆತಂದಿದ್ದೇವೆ ಎಂದು ಬಿಜೆಪಿ ನಾಯಕರಲ್ಲಿ ಒಬ್ಬರಾದ ಪಂಕಜಾ ಮುಂಡೆ (Pankaja Munde) ಹೇಳಿದ್ದಾರೆ. ನಾಳೆ ಅವರು ಮುಂಬೈ ಮತ್ತು ಮಹಾರಾಷ್ಟ್ರವನ್ನು ಕಿತ್ತುಕೊಳ್ಳಲು ಯೋಜಿಸಬಹುದು. ನಾನು ಸುಳ್ಳು ಹೇಳುತ್ತಿಲ್ಲ. ಪಂಕಜಾ ಮುಂಡೆ ಹೇಳಿದ ನಂತರವೇ ಹೇಳುತ್ತೇನೆ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪ್ರಧಾನಿ ಮೋದಿಯೇ ಭಾರತ ರತ್ನ ನೀಡಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಾವಣ, ಕಂಸ, ಅಫ್ಜಲ್ ಖಾನ್ ಅವರನ್ನು ಕೊಂದಿದ್ದು ಕೂಡ ಪ್ರಧಾನಿ ಮೋದಿಯವರೇ ಎಂದು ನಾಳೆ ಹೇಳಿದರೂ ಹೇಳಬಹುದು” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ಮರಳಿ ತರುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು!

ಭಾರತದ ಸಂವಿಧಾನದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. 2019ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸೆಕ್ಷನ್ ಅನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿತು.

ಈ ಹಿನ್ನೆಲೆಯಲ್ಲಿ, ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ – ಕಾಂಗ್ರೆಸ್ ಮೈತ್ರಿಯು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಪ್ರಸ್ತಾಪಿಸಿತು.

ಉಪಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ ನಿರ್ಣಯವನ್ನು ಮಂಡಿಸಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಸುನೀಲ್ ಕುಮಾರ್ ಹಾಗೂ ಬಿಜೆಪಿಯ ಇತರ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಈ ಗದ್ದಲದ ನಡುವೆಯೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.

ರಾಜಕೀಯ

ಬೆಂಗಳೂರು: ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ರಾಜಕೀಯ ಪಕ್ಷಗಳು ತತ್ವ ಸಿದ್ದಾಂತವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿವೆ. ರಾಜಕೀಯದಲ್ಲಿ ನೈತಿಕತೆ ಮಾಯವಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಕಳವಳ ವ್ಯಕ್ತ ಪಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪ್ರಕ್ರಿಯೆ ಅತಿಯಾಗುತ್ತದೆ ಎಂಬುದು ವಾಸ್ತವ ಸತ್ಯ. ಪ್ರಜೆಗಳು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಪ್ರಜ್ಞೆ ರಾಜಕೀಯ ಪಕ್ಷಗಳು ಮರೆತಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ದಾಂತಗಳಿಗೆ ಯಾವುದೇ ಬೆಲೆ ಇಲ್ಲ ಎನ್ನಿಸುತ್ತಿದೆ. ಟಿಕೆಟ್ ಸಿಕ್ಕರೆ ಒಂದು ಪಕ್ಷ; ಇಲ್ಲದಿದ್ದರೆ ಇನ್ನೊಂದು ಪಕ್ಷ. ಬೆಳಿಗ್ಗೆ ಒಂದು ಪಕ್ಷ, ಸಂಜೆ ಒಂದು ಪಕ್ಷ ಎಂದು ಅಭ್ಯರ್ಥಿಗಳು ಹೀಗೆ ಜಿಗಿಯುತ್ತಾ ಹೋಗುತ್ತಾರೆ. ತತ್ವ ಸಿದ್ಧಾಂತದ ಬಗ್ಗೆ ಮಾತನಾಡುವ ಪಕ್ಷಗಳು, ಅಂತಹ ಅಭ್ಯರ್ಥಿಗಳಿಗೆ ಟಿಕೀಟ್ ನೀಡಿ ಪ್ರೋತ್ಸಾಹಿಸಿ ಇಂಥ ಅನೈತಿಕತೆಗೆ ಕುಮ್ಮಕ್ಕು ನೀಡುತ್ತಿವೆ.

ಎಲ್ಲಿದ್ದರೂ ಹೇಗಿದ್ದರೂ ಜನ ಓಟು ಹಾಕುತ್ತಾರೆ ಎಂಬ ಭಾವನೆ ಅವರಲ್ಲಿ ಅಡಕವಾಗಿವೆ. ಅಧಿಕಾರಕ್ಕಾಗಿ ಪಕ್ಷಾಂತರ ಪ್ರಕ್ರಿಯೆಯಲ್ಲಿ ಯಾವ ಪಕ್ಷವೂ ಕಡಿಮೆಯಿಲ್ಲ. ಆಪರೇಷನ್ ಕಮಲ/ಹಸ್ತ ಎಂಬ ಹೆಸರಲ್ಲಿ ನಡೆಯುವ ರಾಜಕೀಯ ಅನೈತಿಕತೆಗೂ ಇಲ್ಲಿ ಕೊರತೆಯಿಲ್ಲ. ಕುಟುಂಬ ರಾಜಕಾರಣದಲ್ಲೂ ಯಾರೂ ಕಮ್ಮಿಯಿಲ್ಲ.

ಪ್ರಿಯಾಂಕಾ ಗಾಂಧಿ ವಯನಾಡ್ ನಲ್ಲಿ ಚುನಾವಣಾ ಅಖಾಡಕ್ಕಿಳಿದಿರುವಾಗ ಅದರ ವಿರುದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಂಶಾಡಳಿತದ ಬಗ್ಗೆ ತೀವ್ರ ವಾಗ್ದಾಳಿ ನಡೆಸುತ್ತಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಬಸವರಾಜ್ಬೊ ಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಲ್ಲಿರುವುದು ಅವರ ಕಣ್ಣಿಗೆ ಕಾಣಿಸುದಿಲ್ಲ. ಇತರ ಪಕ್ಷಗಳ ಕಡೆಗೆ ಬಹಿರಂಗವಾಗಿ ಬೆರಳು ತೋರಿಸುವಾಗ ತಮ್ಮೆಡೆಗೆ ಉಳಿದ ಬೆರಳು ತೋರುತ್ತಿರುವ ಬಗ್ಗೆ ಅವರು ಚಿಂತಿಸುವುದಿಲ್ಲ. ಯಡಿಯೂರಪ್ಪ ಪುತ್ರನಿಗೆ ರಾಜ್ಯದ ಬಿಜೆಪಿ ಅಧ್ಯಕ್ಷ ಪಟ್ಟ ಒಲಿದು ಬಂದಾಗ ಇವರು ಕಣ್ಣು ಮುಚ್ಚಿ ಕುಳಿತಿದ್ದರು.

ದೇಶದಲ್ಲಿ ಜಾತ್ಯತೀತ ಪಕ್ಷ ಎಂದು ಗುರುತಿಸಲ್ಪಡುವ ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್ ನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಇದರ ವಿರುದ್ದ ಕಾಂಗ್ರೆಸ್ ನಿಂದಲೂ ಅಪಸ್ವರ ಕೇಳಿ ಬರುತ್ತಿಲ್ಲ. ಶಿಸ್ತು ಕ್ರಮ, ಶೋಕಾಸ್ ನೊಟೀಸ್ ಎಚ್ಚರಿಕೆ ಯಾವುದೂ ಕಂಡು ಬರುತ್ತಿಲ್ಲ. ಪ್ರತಿಯೊಂದು ಪಕ್ಷಗಳಿಗೂ ಒಂದು ತತ್ವ ಸಿದ್ಧಾಂತ ಅನ್ನೋದು ಇರುತ್ತದೆ. ಆದರೆ, ಅದನ್ನು ಗಾಳಿಗೆ ತೂರಲಾಗುತ್ತದೆ.  ಅಧಿಕಾರ, ಹಣದ ಮುಂದೆ ಯಾವ ತತ್ವ ಸಿದ್ದಾಂತವೂ ಗಣನೆಗೆ ಬರುವುದಿಲ್ಲ.

ರಾಜಕೀಯ ಪಕ್ಷಗಳು ನೈತಿಕ ರಾಜಕಾರಣದಿಂದ ದೂರ ಸರಿಯುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದನ್ನು ತಡೆಗಟ್ಟಲು ಪ್ರಜ್ಞಾವಂತ ನಾಗರಿಕರು ಮುಂದೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.

ರಾಜಕೀಯ

ಬೆಂಗಳೂರು: ರಾಜ್ಯದಲ್ಲಿ ಖಾಲಿಯಾಗಿದ್ದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 13 ರಂದು ಚುನಾವಣೆ ನಡೆಯಲಿದೆ.   

ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಪಟ್ಟಂತೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಳಾದ ಡಿ.ಕೆ.ಶಿವಕುಮಾರ್ ಅವರು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಶಾಸಕರು, ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮುಖಂಡರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಅವರು ಕೂಡ ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜಕೀಯ

ನವದೆಹಲಿ: ಕೇರಳದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಮತ್ತು ಪತಿಯ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ!

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, “ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಪತಿ/ಪತ್ನಿ ಮತ್ತು ಅವಲಂಬಿತರ ಆಸ್ತಿ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು. ಇದು ಸುಪ್ರೀಂ ಕೋರ್ಟ್‌ನ ಆದೇಶ. ಈ ಆದೇಶವನ್ನು ಪ್ರಿಯಾಂಕಾ ಗಾಂಧಿ ಧಿಕ್ಕರಿಸಿದ್ದಾರೆ. ವಯನಾಡ್ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಮತ್ತು ಪತಿಯ ಆಸ್ತಿ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ.

ಸುಪ್ರೀಂ ಕೋರ್ಟ್ ಆದೇಶವು ಎಲ್ಲಾ ನಾಗರಿಕರನ್ನು ಸಹ ನಿಯಂತ್ರಿಸುತ್ತದೆ. ಗಾಂಧಿ ಕುಟುಂಬ ಕಾನೂನಿಗಿಂತ ಮೇಲಲ್ಲ. ಯಾರಾದರೂ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದರೆ ಅವರು ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ. ಯಂಗ್ ಇಂಡಿಯಾ ಕಂಪನಿಯ ಮೂಲಕ ನ್ಯಾಷನಲ್ ಹೆರಾಲ್ಡ್ ಅನ್ನು ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಕಂಪನಿಯ ಆಸ್ತಿಯನ್ನು ಗಾಂಧಿ ಕುಟುಂಬ ಕಬಳಿಕೆ ಮಾಡಿಕೊಂಡಿತು. ಗಾಂಧಿ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್‌ನಿಂದ ಈ ಆಸ್ತಿಗಳನ್ನು ಕಬಳಿಕೆ ಮಾಡಲಾಗಿದೆ. ಇದರಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾಗೆ ಸೇರಿರುವ ಷೇರುಗಳ ವಿವರಗಳನ್ನು ಅವರು ಉಲ್ಲೇಖಿಸಿಲ್ಲ. ಇದು ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸದಿರುವುದಕ್ಕೆ ಸಮ.

ಈ ವಿಚಾರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರಿಸಬೇಕಿದೆ. ಕಾಂಗ್ರೆಸ್ ಕಾನೂನಿಗೆ ಬದ್ಧವಾಗಿರಬೇಕು. ಇಲ್ಲದಿದ್ದರೆ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸಂವಿಧಾನ ಮತ್ತು ಕಾನೂನಿಗೆ  ಒಳಪಟ್ಟು ಈ ವಿಚಾರದಲ್ಲಿ ಬಿಜೆಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಗಾಂಧಿ ಕುಟುಂಬವು ಕಾನೂನನ್ನು ಕಡೆಗಣಿಸಿ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದೆ. ಇದನ್ನು ಎಂದಿಗೂ ಅನುಮತಿಸಲಾಗುವುದಿಲ್ಲ” ಎಂದು ಅವರು ಹೇಳಿದರು.

ವಯನಾಡ್ ಉಪಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ಇದೇ 28 ರಂದು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ.

ರಾಜಕೀಯ

ನವದೆಹಲಿ,
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಆದೇಶದ ಮೇರೆಗೆ ಮುಖ್ಯಮಂತ್ರಿ ಅತಿಶಿ ಅವರ ಅಧಿಕೃತ ನಿವಾಸ 6, ಫ್ಲಾಗ್‌ಸ್ಟಾಫ್ ರಸ್ತೆಯಿಂದ ಲಗೇಜ್ ಮತ್ತು ಇತರ ವಸ್ತುಗಳನ್ನು ಹೊರಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು, “ಈ ಕ್ರಮವು ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನು ವಶಪಡಿಸಿಕೊಳ್ಳುವ ಬಿಜೆಪಿಯ ಯೋಜನೆಯ ಒಂದು ಭಾಗವಾಗಿದೆ” ಎಂದು ಹೇಳಿಕೊಂಡಿದೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕೇಸರಿ ಪಕ್ಷದ ನಾಯಕನಿಗೆ ಹಂಚಲು ಬಯಸಿದ್ದರಿಂದ ದೆಹಲಿಯ ಸಿವಿಲ್ ಲೈನ್ಸ್ 6, ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ದೆಹಲಿ ಮುಖ್ಯಮಂತ್ರಿ ನಿವಾಸವನ್ನು ಬಿಜೆಪಿಯ ಆಜ್ಞೆಯ ಮೇರೆಗೆ ಬಲವಂತವಾಗಿ ಖಾಲಿ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿಯ ಕಛೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

“ಬಿಜೆಪಿ ದೆಹಲಿಯಲ್ಲಿ 27 ವರ್ಷಗಳಿಂದ ಅಧಿಕಾರದಿಂದ ಹೊರಗುಳಿದಿದೆ. ಸಾರ್ವಜನಿಕರಿಂದ ಚುನಾವಣಾ ಬೆಂಬಲವನ್ನು ಪಡೆಯಲು ಸಾಧ್ಯವಾಗದ ಕಾರಣ ಅವರು ಸಿಎಂ ನಿವಾಸದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಎಎಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ಕೆಲವು ಪ್ರಮುಖ ಬಿಜೆಪಿ ನಾಯಕರಿಗೆ ಬಂಗಲೆ ಮಂಜೂರು ಮಾಡುವ ಯೋಜನೆ ಇತ್ತು ಎಂದು ಎಎಪಿ ಹೇಳಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸದರಿ ಮನೆಯನ್ನು ಖಾಲಿ ಮಾಡಿದ ಕೆಲವು ದಿನಗಳ ನಂತರ ಆ ಮನೆಗೆ ಮುಖ್ಯಮಂತ್ರಿ ಅತಿಶಿ ಸ್ಥಳಾಂತರಗೊಂಡಿದ್ದರು ಎಂಬುದು ಗಮನಾರ್ಹ.

ರಾಜಕೀಯ

ಬೆಂಗಳೂರು: ಕರ್ನಾಟಕದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮಿತಿಯ ಬಹುನಿರೀಕ್ಷಿತ ಜಾತಿಗಣತಿ ವರದಿ ಅತಿ ಶೀಘ್ರದಲ್ಲಿ ಜಾರಿಗೆ ಬರಲಿ ಎಂದು ವಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಡ್ವಕೇಟ್ ತಾಹೇರ್ ಹುಸೇನ್ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಅವರು, “ರಾಜ್ಯದಲ್ಲಿ ಕನಿಷ್ಟ ಪಕ್ಷ ಗ್ರಾಮ ಪಂಚಾಯತಿ ಸದಸ್ಯರೂ ಆಗದ ಸಮುದಾಯವಿದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಬದ್ದವಾಗಿ ಆಡಳಿತ, ಶೈಕ್ಷಣಿಕ, ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲೂ ಸಮಾನ ಪ್ರಾತಿನಿಧ್ಯತೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹದ್ದೊಂದು ವರದಿ ಸಿದ್ದಪಡಿಸಿರುವುದು ಸ್ವಾಗತಾರ್ಹ. ಆದರೆ ಆ ವರದಿಗಳನ್ನು ಪೆಟ್ಟಿಗೆಯಲ್ಲಿಟ್ಟು ಕಾಲಹರಣ ಮಾಡುತ್ತಿರುವುದು ಆಕ್ಷೇಪಾರ್ಹ” ಎಂದು ಹೇಳಿದ್ದಾರೆ.

“ಈ ವರದಿಯ ಬಿಡುಗಡೆ ಕುರಿತು ಆತಂಕ ವ್ಯಕ್ತಪಡಿಸುವವರ ಸ್ವಾರ್ಥತೆ ಗಮನಿಸಬಹುದು. ಇದನ್ನು ಜನಹಿತಕ್ಕಿಂತ ರಾಜಕೀಯ ಲಾಭಕ್ಕಾಗಿ ಬಳಸಲು ಕೆಲವರು ಪ್ರಯತ್ನಿಸುತ್ತಿರುವುದು ಅಕ್ಷಮ್ಯ. ರಾಜ್ಯದ ಜನರ ಸಮಸ್ಯೆಗಳನ್ನು ನ್ಯಾಯಬದ್ದ ರೀತಿಯಲ್ಲಿ ನಿಭಾಯಿಸುವ ಮೂಲಕ ಜನಪ್ರತಿನಿಧಿಗಳು ತಮ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದಿದ್ದಾರೆ.

“ಕಳೆದ ಬಾರಿಯ ಸಿದ್ದರಾಮಯ್ಯರ ಸರ್ಕಾರ ಈ ವರದಿ ತಯಾರಿಸಲು ಆಗಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜುರವರನ್ನು ನೇಮಿಸಿತ್ತು. ನಂತರ ಅದರ ಹೊಣೆಗಾರಿಕೆ ಜಯಪ್ರಕಾಶ್ ಹೆಗ್ಡೆಯವರ ಪಾಲಿಗೆ ದೊರೆತಿತ್ತು. ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಮರ್ಪಸಿದ್ದಾರೆ. ಅದು 48 ಸಂಪುಟ ಹೊಂದಿದ್ದು 200 ಪುಟಗಳಷ್ಟು ವರದಿಯಿದೆ. 1351 ವಿವಿಧ ಜಾತಿಗಳ ಸಮೀಕ್ಷೆ ನಡೆಸಲಾಗಿದೆ” ಎಂದು ವಿವರಿದಿದ್ದಾರೆ.

“5.98 ಕೋಟಿ ಜನರನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. 3.98 ಕೋಟಿಗೂ ಹೆಚ್ಚು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳಿದ್ದು 1.87 ಕೋಟಿ ಲಿಂಗಾಯುತರು, ಒಕ್ಕಲಿಗರು, ಬ್ರಾಹ್ಮಣ ಮತ್ತಿತರ ಜಾತಿಗಳಿವೆ. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕೋಟಾ ಶಿಫಾರಸು ಮಾಡಿದೆ. ವೀರೇಶೈವ ಮತ್ತು ಲಿಂಗಾಯತರು ಒಂದೇ ಎಂದು ಸಮಿತಿ ಒತ್ತುಕೊಟ್ಟು ಹೇಳಿದೆ.

ಆರು ಕೋಟಿ ಜನರಲ್ಲಿ ಯಾವ ಯಾವ ಜಾತಿಯ ಜನರು ಎಷ್ಟೆಷ್ಟು ಮಂದಿಯಿದ್ದಾರೆಂದು ವರದಿಯಲ್ಲಿ ಹೇಳಲಾಗಿದ್ದು, ಈ ಎಲ್ಲಾ ಜಾತಿಯ ಜನರಿಗೆ ಅವರವರ ಅನುಪಾತಕ್ಕೆ ಅನುವಾಗಿ ಪ್ರಾತಿನಿಧ್ಯ ದೊರೆಯಬೇಕಾಗಿದೆ” ಎಂದು ಹೇಳಿರುವ ಅಡ್ವಕೇಟ್ ತಾಹೇರ್ ಹುಸೇನ್ ಅವರು, “ಕಾಂಗ್ರೆಸ್ ಪಕ್ಷ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿ ವರದಿ ಜಾರಿ ಮಾಡುತ್ತೇವೆಂದಾಗ ಸುಮ್ಮನಿದ್ದವರು ಇದೀಗ ತಗಾದೆ ತೆಗೆಯುತ್ತಿರುವುದು ಸರಿಯಲ್ಲ” ಎಂದು ವಿರೋಧಪಕ್ಷಗಳನ್ನು ಟೀಕಿಸಿದ್ದಾರೆ.

ರಾಜಕೀಯ

ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಾಗಿದೆ!

ಅಮರಾವತಿ,
‘ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದ್ದು, ಈ ಲಡ್ಡುಗಳನ್ನು ಅಯೋಧ್ಯೆಗೂ ಕಳುಹಿಸಿಕೊಡಲಾಗಿತ್ತು’ ಎಂದು ಆಂಧ್ರ ಉಪ ಮುಖ್ಯಮಂತ್ರಿ ಹಾಗೂ ತೆಲುಗು ನಟ ಪವನ್ ಕಲ್ಯಾಣ್ ಆರೋಪಿಸಿ ವಿವಾದ ಸೃಷ್ಟಿಸಿದ್ದರು.

ಇದರ ಬೆನ್ನಲ್ಲೇ, ಪ್ರಜಾ ಶಾಂತಿ ಪಕ್ಷದ ನಾಯಕ ಕೆ.ಎ.ಪಾಲ್ (K.A.Paul) ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎ.ಪಾಲ್,

“ಪವನ್ ಕಲ್ಯಾಣ್ ಅವರ ಹೇಳಿಕೆ ಹುಚ್ಚುತನದಿಂದ ಕೂಡಿದೆ. ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಒಂದು ಲಕ್ಷ ಲಡ್ಡನ್ನು ಅಯೋಧ್ಯೆಯ ರಾಮಮಂದಿರಕ್ಕೆ ಸಿದ್ಧಪಡಿಸಿ ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿದ್ದಾರೆ. ಅಯೋಧ್ಯೆ ರಾಮಮಂದಿರ ಕಾರ್ಯಕ್ರಮ ಜನವರಿಯಲ್ಲಿ ನಡೆದಿತ್ತು. ಆದರೆ ಜುಲೈನಲ್ಲೇ ಚಂದ್ರಬಾಬು ನಾಯ್ಡು ಲಡ್ಡುವಿನಲ್ಲಿ ಕಲಬೆರಕೆ ಮಾಡಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಹೀಗಿರುವಾಗ, ಜನವರಿಯಲ್ಲಿ ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ನಡೆದಿರುವುದು ಇವರಿಗೆ ಹೇಗೆ ಗೊತ್ತು? ಹಾಗಾಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಪವನ್ ಕಲ್ಯಾಣ್ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು. ಇದನ್ನು ಒತ್ತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಮನವಿ ಪತ್ರ ಕಳುಹಿಸಿದ್ದೇನೆ” ಎಂದು ಹೇಳಿದ್ದಾರೆ.  

ರಾಜಕೀಯ

ಲಕ್ನೋ: ಉತ್ತರ ಪ್ರದೇಶದ ಜಾಟ್ ಸಮುದಾಯದ ಜಾತೀಯತೆಯಿಂದಾಗಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ಹರಿಯಾಣದಲ್ಲಿ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ, ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 3ನೇ ಬಾರಿಗೆ ಸರ್ಕಾರ ರಚಿಸಲಿದೆ. ಸೋಲಿಗೆ ಚುನಾವಣಾ ಆಯೋಗದ ಚಟುವಟಿಕೆಗಳೇ ಕಾರಣ ಎಂದು ಕಾಂಗ್ರೆಸ್ ದೂರಿದೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ಭಾರತೀಯ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತು.

ಚುನಾವಣೆಯ ಅಂತ್ಯಕ್ಕೆ ಬಹುಜನ ಸಮಾಜ ಪಕ್ಷ ಶೇ.1.82 ಮತಗಳನ್ನು ಪಡೆದಿದ್ದು, ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷ ಶೇ.4.14 ಮತಗಳನ್ನು ಪಡೆದಿವೆ. ಈ ಹಿನ್ನೆಲೆಯಲ್ಲಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಹರಿಯಾಣ ಚುನಾವಣೆಯ ಸೋಲಿಗೆ ಜಾಟ್ ಸಮುದಾಯದ ಜಾತೀಯತೆ ಕಾರಣ ಎಂದು ಆರೋಪಿಸಿದ್ದಾರೆ.

ಈ ಕುರಿತು, ತಮ್ಮ ‘ಎಕ್ಸ್’ ಸೈಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, “ನಾವು ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆವು. ಆದರೆ ಚುನಾವಣಾ ಫಲಿತಾಂಶ ನಮಗೆ ವಿರುದ್ಧವಾಗಿ ಬಂದಿದೆ. ಜಾಟ್ ಸಮುದಾಯದ ಜಾತಿ ಮನಸ್ಥಿತಿಯೇ ನಮ್ಮ ಸೋಲಿಗೆ ಕಾರಣ. ಕೆಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಅಲ್ಪ ಮತಗಳ ಅಂತರದಿಂದ ಗೆಲುವನ್ನು ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಜಾಟ್ ಸಮುದಾಯದವರು ತಮ್ಮ ಜಾತಿ ತಾರತಮ್ಯವನ್ನು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ನಮ್ಮ ಪಕ್ಷದಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹರಿಯಾಣದ ಜಾಟ್ ಸಮುದಾಯದವರೂ ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ರಾಜಕೀಯ

ಹರಿಯಾಣ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಇದು ಒಳಸಂಚಿಗೆ ಸಂದ ಜಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ನವದೆಹಲಿ: ಹರಿಯಾಣದಲ್ಲಿ ಒಂದೇ ಹಂತದಲ್ಲಿ ಕಳೆದ 5 ರಂದು ನಡೆದ ಚುನಾವಣೆಯ ಮತಗಳನ್ನು ಇಂದು ಎಣಿಕೆ ಮಾಡಲಾಗುತ್ತಿದೆ. ಅಲ್ಲಿನ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಹೆಚ್ಚಿನ ಅವಕಾಶವಿದೆ ಎಂದು ಹೇಳಿತ್ತು. ಆದರೆ, ಈಗ ಅಲ್ಲಿನ ದೃಶ್ಯಗಳು ಬದಲಾಗಿವೆ.

90 ಕ್ಷೇತ್ರಗಳನ್ನು ಹೊಂದಿರುವ ಹರಿಯಾಣದಲ್ಲಿ ಸರ್ಕಾರ ರಚಿಸಲು 46 ಕ್ಷೇತ್ರಗಳ ಅಗತ್ಯವಿದೆ. ಪ್ರಸ್ತುತ ಅಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ, 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಹುತೇಕ ಬಿಜೆಪಿ ಹರಿಯಾಣದಲ್ಲಿ ಸರ್ಕಾರ ರಚನೆ ಖಚಿತ ಎಂದು ಆ ಪಕ್ಷದವರು ಹೇಳುತ್ತಿದ್ದಾರೆ.

ಈ ಬಾರಿ ಬಿಜೆಪಿ ಹರಿಯಾಣದಲ್ಲಿ ಸರ್ಕಾರ ರಚಿಸಿದರೆ ಅದು ಐತಿಹಾಸಿಕ ಸಾಧನೆಯಾಗಲಿದೆ. ಇದರ ಪ್ರಕಾರ ಬಿಜೆಪಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ, “ಹರಿಯಾಣ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಇದು ಒಳಸಂಚಿಗೆ ಸಂದ ಜಯ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹರಿಯಾಣ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಒಳಸಂಚಿಗೆ ಸಂದ ಜಯ. ಇದು ಮೂಲಭೂತ ವಾಸ್ತವಕ್ಕೆ ವಿರುದ್ಧವಾಗಿದೆ. ಚುನಾವಣಾ ಫಲಿತಾಂಶ ರಾಜ್ಯದ ಜನತೆಯ ಇಚ್ಛೆಗೆ ವಿರುದ್ಧವಾಗಿದೆ. ಹರಿಯಾಣದ 3 ಜಿಲ್ಲೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ದೂರುಗಳು ಬಂದಿವೆ. ಇದು ಪಾರದರ್ಶಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ವೈಫಲ್ಯ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.