ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ಹೊರಮಾವು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು ಮತಗಳ್ಳತನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹೊರಮಾವು ಬ್ಲಾಕ್ ಉಸ್ತುವಾರಿಯಾದ ಶ್ರೀಧರ್ ರವರು ಭಾಗವಹಿಸಿದ್ದರು.
ಹೊರಮಾವು ವಾರ್ಡ್ನ ಮಾಜಿ ಬಿಬಿಎಂಪಿ ಸದಸ್ಯರಾದ ರಾಧಮ್ಮ ವೆಂಕಟೇಶ್ ಅವರ ಗೃಹ ಕಛೇರಿಯಲ್ಲಿ ಬೆಳಿಗ್ಗೆ ಸುಮಾರು 11 ಗಂಟೆಯ ಸಮಯಕ್ಕೆ ಪ್ರಾರಂಭವಾದ ಸಭೆಗೆ ಹೊರಮಾವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ವೆಂಕಟೇಶ್ ರವರು ಸ್ವಾಗತ ಕೋರಿದರು. ನಂತರ ಹಿರಿಯ ಕಾಂಗ್ರೆಸ್ ಮುಖಂಡರುಗಳು, ಘಟಕದ ಮುಂಚೂಣಿ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರುಗಳು, ಮಹಿಳಾ ಅಧ್ಯಕ್ಷರುಗಳು, ಬಿಎಲ್ಎ-2 ಅಧ್ಯಕ್ಷರುಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಮಾತನಾಡಿದರು.
ಮತಗಳ್ಳತನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಧರ್ ರವರು “ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಮೂಲಕ ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿತು ಎಂಬುದನ್ನು ದಾಖಲೆ ಸಮೇತ ಸಾಬೀತುಪಡಿಸಿ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಈ ಕುರಿತು ದೇಶಾದ್ಯಂತ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆಪಿಸಿಸಿ ವತಿಯಿಂದಲೂ ಮತಗಳ್ಳತನದ (ಓಟ್ ಚೋರಿ) ಕುರಿತು ಎಲ್ಲಡೆ ಜಾಗೃತಿ ಅಭಿಯಾನ, ಸಹಿ ಶಿಬಿರಗಳನ್ನು (Signature Camp) ನಡೆಸಲಾಗುತ್ತಿದೆ.
ಇದರ ಭಾಗವಾಗಿ ಹೊರಮಾವು ಬ್ಲಾಕ್ ವಾಪ್ತಿಯ ವಾರ್ಡ್ಗಳಲ್ಲೂ ಮತಗಳ್ಳತನದ (ಓಟ್ ಚೋರಿ) ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಬೂತ್ ಮಟ್ಟದ ಏಜೆಂಟ್ ಗಳು (ಬಿಎಲ್ಎ-2) ಇದರ ಜವಾಬ್ದಾರಿಯನ್ನು ವಹಿಸಿಕೊಂಡು ಮನೆಮನೆಗೆ ತೆರಳಿ, ಮತದಾರರನ್ನು ಭೇಟಿಯಾಗಿ ಅವರ ಕುಂದು ಕೊರತೆಗಳನ್ನು ಆಲಿಸುವುದರ ಜೊತೆಗೆ, ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ಹೆಸರು ಮತ್ತು ವಿಳಾಸ ತಿದ್ದುಪಡಿ, ಬಿಟ್ಟೋಗಿರುವ ಹೆಸರುಗಳನ್ನು ಸೇರಿಸುವುದು, ಮರಣ ಹೊಂದಿರುವವ ಹೆಸರನ್ನು ತೆಗೆಯುವುದು. ಮೆನೆ ಖಾಲಿ ಮಾಡಿ ದೂರದ ಪ್ರದೇಶಗಳಿಗೆ ಹೋದವರ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು ಇತ್ಯಾದಿ.
ಮತದಾರ ಹೆಸರು, ಓಟರ್ ಐಡಿ ಸಂಖ್ಯೆ, ಮೊಬೈಲ್ ನಂಬರ್ ಮತ್ತು ಅವರ ಸಹಿಯನ್ನು ಬೂತ್ ಮಟ್ಟದ ಏಜೆಂಟ್ ಗಳು ಸಂಗ್ರಹಿಸುವ ಮೂಲಕ, ವಿರೋಧಿ ಪಕ್ಷದವರು ಮತದಾರ ಪಟ್ಟಿಯಲ್ಲಿ ಸೇರಿಸಿರುವ ನಕಲಿ ಮತದಾರರನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಇದರಿಂದ ಮತಗಳ್ಳತನವನ್ನು (ಓಟ್ ಚೋರಿ) ತಡೆಯಬಹುದು. ಇದರ ಮೂಲಕ ಜನವಿರೋಧಿಯಾಗಿರುವ ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಬಹುದು” ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹೊರಮಾವು ಬ್ಲಾಕ್ ಉಸ್ತುವಾರಿಯಾದ ಶ್ರೀಧರ್ ರವರು ಮಾತನಾಡಿದರು.