ಹೊಸ 2000 ರೂಪಾಯಿ ನೋಟು ಮತ್ತೆ ಬಿಡುಗಡೆಯಾಗಲಿದೆಯೆ? » Dynamic Leader
October 21, 2024
ದೇಶ

ಹೊಸ 2000 ರೂಪಾಯಿ ನೋಟು ಮತ್ತೆ ಬಿಡುಗಡೆಯಾಗಲಿದೆಯೆ?

2000 ರೂಪಾಯಿ ನೋಟು ಚಲಾವಣೆಗೆ ಬಂದಂದಿನಿಂದ ಈ ನೋಟಿನ ಸುತ್ತ ಹಲವು ವಿವಾದಗಳು ಹರಡುತ್ತಲೇ ಇವೆ. ಇತ್ತೀಚೆಗೆ ಯಾವುದೇ ಎಟಿಎಂನಿಂದ 2000 ರೂಪಾಯಿ ಸಿಗುತ್ತಿಲ್ಲ. ಒಂದುವೇಳೆ 2000 ರೂಪಾಯಿ ನಮಗೆ ಸಿಕ್ಕಿ ಅದನ್ನು ಅಂಗಡಿಗಳಿಗೆ ಕೊಟ್ಟರೆ, ನಮ್ಮನ್ನು ಆಶ್ಚರ್ಯದಿಂದ ಮತ್ತು ಅನುಮಾನದಿಂದ ಕಾಣುತ್ತಾರೆ.

ಈ ಹಿನ್ನಲೆಯಲ್ಲಿ ಸಂಸತ್ತಿನಲ್ಲಿ ರಾಜ್ಯಸಭಾ ಸದಸ್ಯೆ ರಜನಿ ಪಾಟೀಲ್ ಅವರು 2000 ರೂಪಾಯಿ ನೋಟಿನ ಬಗ್ಗೆ ಸರ್ಕಾರ ಮತ್ತು ಹಣಕಾಸು ಸಚಿವಾಲಯಕ್ಕೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಆರ್‌ಬಿಐ ಹೊಸ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲು ಹೊರಟಿದೆಯೇ ಮತ್ತು 2000 ರೂಪಾಯಿ ನೋಟುಗಳನ್ನು ವಿತರಿಸದಂತೆ ಸರ್ಕಾರ ಬ್ಯಾಂಕ್‌ಗಳಿಗೆ ಆದೇಶಿಸಿದೆಯೇ ಎಂದು ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಕ್ಕೆ ಹಣಕಾಸು ಸಚಿವಾಲಯವು ಉತ್ತರ ನೀಡಿದೆ.

ರಜನಿ ಪಾಟೀಲ್

ಇದಕ್ಕೆ ಉತ್ತರ ನೀಡಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ‘ಭಾರತೀಯ ರಿಸರ್ವ್ ಬ್ಯಾಂಕ್ 2016ರಲ್ಲಿ ಹೊಸ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿತು. ಅಲ್ಲದೆ, 2000 ರೂಪಾಯಿ ನೋಟುಗಳನ್ನು ವಿತರಿಸದಂತೆ ಬ್ಯಾಂಕ್‌ಗಳಿಗೆ ಸರ್ಕಾರದಿಂದ ಯಾವುದೇ ಸೂಚನೆ ನೀಡಲಾಗಿಲ್ಲ’ ಎಂದು ಅವರು ಹೇಳಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಬ್ಯಾಂಕ್ ಎಟಿಎಂಗಳ ಮೂಲಕ 2000 ರೂಪಾಯಿ ನೋಟುಗಳನ್ನು ವಿತರಿಸುವುದಕ್ಕೆ ಆರ್‌ಬಿಐ ಯಾವುದೇ ನಿಷೇಧ ಹೇರಿಲ್ಲ. ಅಂತಹ ಯಾವುದೇ ನಿರ್ದೇಶನವನ್ನು ಬ್ಯಾಂಕ್‌ಗಳಿಗೆ ನೀಡಲಾಗಿಲ್ಲ. ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, 2019-20ರ ಆರ್ಥಿಕ ವರ್ಷದಿಂದ 2000 ರೂಪಾಯಿ ನೋಟುಗಳಿಗೆ ಯಾವುದೇ ಬೇಡಿಕೆ ಇಲ್ಲದ ಕಾರಣದಿಂದ, 2000 ರೂಪಾಯಿ ನೋಟುಗಳನ್ನು ಮುದ್ರಿಸಿಲ್ಲ’ ಎಂದರು.

2000 ರೂಪಾಯಿ ನೋಟಿನ ಬಗ್ಗೆ ನಾನಾ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ, ‘ಆ ಅಧಿಕ ಮೌಲ್ಯದ ನೋಟುಗಳನ್ನು ನಮ್ಮ ಕೈಯಲ್ಲಿ ಹೆಚ್ಚಾಗಿ ಇಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.

Related Posts