‘ರಾಮೇಶ್ವರಂ ಕೆಫೆ’ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ವ್ಯಕ್ತಿಯ ಫೋಟೋ ಬಿಡುಗಡೆ!
ಬೆಂಗಳೂರು: ಬೆಂಗಳೂರಿನ ಜನಪ್ರಿಯ ‘ರಾಮೇಶ್ವರಂ ಕೆಫೆ’ಯಲ್ಲಿ ನೆನ್ನೆ ನಡೆದ ಬಾಂಬ್ ಸ್ಫೋಟದ ಶಂಕಿತ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಇಂದು ಬಿಡುಗಡೆಗೊಳಿಸಿದ್ದಾರೆ.
ಬೆಂಗಳೂರಿನ ‘ವೈಟ್ ಫೀಲ್ಡ್’ ಪ್ರದೇಶದಲ್ಲಿರುವ ‘ರಾಮೇಶ್ವರಂ ಕೆಫೆ’ಯಲ್ಲಿ ನಿನ್ನೆ ಮಧ್ಯಾಹ್ನ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ 10 ಮಂದಿ ಗಾಯಗೊಂಡಿದ್ದರು. ಮಾಹಿತಿ ತಿಳಿದ ಡಿಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಅಲ್ಲದೆ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನೂ ಪರಿಶೀಲಿಸಲಾಯಿತು. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು 4 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ, ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಇಂದು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸ್ಫೋಟಕ್ಕೆ ಕಾರಣವಾದ ಶಂಕಿತ ವ್ಯಕ್ತಿಯ ಫೋಟೋವನ್ನು ಸೇರಿಸಲಾಗಿದೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಕನ್ನಡಕ, ಟೋಪಿ ಹಾಕಿಕೊಂಡು ತಿರುಗಾಡುತ್ತಿರುವ ಮತ್ತು ಸ್ಫೋಟಕ್ಕೂ ಮುನ್ನ ಹೊಟೇಲ್‌ಗೆ ತೆರಳುವ ವೇಳೆ ಬ್ಯಾಗ್ ಇಟ್ಟು ಅಲ್ಲಿಂದ ತೆರಳುವ ದೃಶ್ಯಗಳು ಅದರಲ್ಲಿ ದಾಖಲಾಗಿರುತ್ತವೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ದೃಢೀಕರಿಸದ ವರದಿಗಳು ರಾರಾಜಿಸುತ್ತಿವೆ. ಆದರೆ, ಪೊಲೀಸರು ಇದನ್ನು ಖಚಿತಪಡಿಸಿಲ್ಲ.