CPIM Pushpan: 24ನೇ ವಯಸ್ಸಿನಲ್ಲಿ ಹಾರಿದ ಬಂದೂಕು ಬುಲೆಟ್.. 30 ವರ್ಷಗಳ ಕಾಲ ಹಾಸಿಗೆಯಲ್ಲಿ ಹೋರಾಡಿದ ಕಾಮ್ರೇಡ್ ಇನ್ನಿಲ್ಲ! » Dynamic Leader
October 22, 2024
ರಾಜಕೀಯ

CPIM Pushpan: 24ನೇ ವಯಸ್ಸಿನಲ್ಲಿ ಹಾರಿದ ಬಂದೂಕು ಬುಲೆಟ್.. 30 ವರ್ಷಗಳ ಕಾಲ ಹಾಸಿಗೆಯಲ್ಲಿ ಹೋರಾಡಿದ ಕಾಮ್ರೇಡ್ ಇನ್ನಿಲ್ಲ!

ಕೇರಳದ ರಾಜಕೀಯ ಕ್ಷೇತ್ರವು ಹಲವು ಹೋರಾಟಗಳ ಮೇಲೆ ನಿರ್ಮಾಣವಾದದ್ದು. ಯುದ್ಧಭೂಮಿಯಲ್ಲೂ, ರಾಜಕೀಯ ಸೇಡಿನ ದಾಳಿಯಲ್ಲೂ ರಕ್ತಸಾಕ್ಷಿಗಳಾದ ಅನೇಕ ಒಡನಾಡಿಗಳು ಅಲ್ಲಿದ್ದಾರೆ. ಅಂತವರಲ್ಲಿ ಪುಷ್ಪನ್ ಕೂಡ ಒಬ್ಬರು!

ಪುಷ್ಪನ್ ಕೇರಳದ ಕಣ್ಣೂರು ಜಿಲ್ಲೆಯ ಸೋಕ್ಲಿಯಲ್ಲಿ ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದರು. ಅವರು ಓದಿದ್ದು 8ನೇ ತರಗತಿವರೆಗೆ ಮಾತ್ರ. ಸಿಪಿಎಂನ ಯುವ ಘಟಕವಾದ ಡಿವೈಎಫ್‌ಐನಲ್ಲಿ ಸಕ್ರಿಯರಾಗಿದ್ದರು. ಕೌಟುಂಬಿಕ ಬಡತನದಿಂದ ಬೆಂಗಳೂರಿಗೆ ಬಂದು ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

1994ರಲ್ಲಿ, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಸಿಪಿಎಂ ಪಕ್ಷ ಮತ್ತು ಅದರ ಯುವ ಸಂಘಟನೆ ಡಿವೈಎಫ್‌ಐ ಕೇರಳ ರಾಜ್ಯದಲ್ಲಿ ಅನುದಾನ ರಹಿತ ಕಾಲೇಜುಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿತ್ತು. ರಜೆಗೆಂದು ಊರಿಗೆ ಬಂದಿದ್ದ ಪುಷ್ಪನ್ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು.

ಪುಷ್ಪನ್

ನವೆಂಬರ್ 25, 1994 ರಂದು, ಆಗಿನ ಮಂತ್ರಿಗಳಾದ ರಾಧಾಕೃಷ್ಣನ್ ಮತ್ತು ಎಂ.ವಿ.ರಾಘವನ್ ಅವರು ಕೂತ್ತುಪ್ಪರಂಬು ಪ್ರದೇಶದಲ್ಲಿ ಅರ್ಬನ್ ಬ್ಯಾಂಕ್ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಘೋಷಿಸಲಾಯಿತು. ಅವರನ್ನು ತಡೆಯಲು ಸಿಪಿಎಂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.

ನವೆಂಬರ್ 25 ರಂದು ಕೂತ್ತುಪ್ಪರಂಬಿನಲ್ಲಿ ಸುಮಾರು 2000 ಸಿಪಿಎಂ ಕಾರ್ಯಕರ್ತರು ಪ್ರತಿಭಟನೆಗೆ ಜಮಾಯಿಸಿದ್ದರು. ಪೊಲೀಸರೂ ಜಮಾಯಿಸಿದ್ದರು. ಸಚಿವರು ಬಂದರೆ ತೊಂದರೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಹಾಗಾಗಿ ಸಚಿವ ರಾಧಾಕೃಷ್ಣನ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಅಂದಿನ ಸಹಕಾರಿ ಸಚಿವರಾಗಿದ್ದ ಎಂ.ವಿ.ರಾಘವನ್ ಮಾತ್ರ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿ ಅಲ್ಲಿಗೆ ಬಂದಿದ್ದರು. ಆಗ ಸಿಪಿಎಂ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಸಚಿವರತ್ತ ತೆರಳಿದರು. ಪೊಲೀಸರು ತಡೆದು ಲಾಠಿ ಚಾರ್ಜ್ ಮಾಡಿದರು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಕೆ.ಕೆ.ರಾಜೀವನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ.ರೋಷನ್, ಪದಾಧಿಕಾರಿಗಳಾದ ಶಿಬುಲಾಲ್, ಮಧು, ಬಾಬು ಅವರು ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದರು.

ಅದರಲ್ಲಿ ಒಂದು ಗುಂಡು ಪುಷ್ಪನ್ ಕುತ್ತಿಗೆಯ ಮೂಲಕ ಬೆನ್ನುಹುರಿಯೊಳಗೆ ಹರಿಯಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆನ್ನುಹುರಿಗೆ ಹಾನಿಯಾಗಿ ಕತ್ತಿನ ಕೆಳಗಿನ ಭಾಗ ನಿಷ್ಕ್ರಿಯಗೊಂಕೊಂಡು ಪುಷ್ಪನ್ ಹಾಸಿಗೆ ಹಿಡಿದರು. ಪುಷ್ಪನ್ ಗೆ  ಗುಂಡು ತಗುಲಿ ಹಾಸಿಗೆ ಹೀಡಿದಾಗ ಅವರ ವಯಸ್ಸು 24. ಅವರು 30 ವರ್ಷಗಳನ್ನು ಹಾಸಿಗೆಯಲ್ಲಿ ಕಳೆದರು. ಸಿಪಿಎಂ ಪಕ್ಷದವರು ಅವರನ್ನು ನೋಡಿಕೊಂಡರು.

ನಂತರ ರಾಜಕೀಯದಲ್ಲಿ ಹಲವು ಬದಲಾವಣೆಗಳಾದವು. ಗುಂಡಿನ ದಾಳಿಗೆ ಕಾರಣರಾದ ಸಚಿವ ಎಂ.ವಿ.ರಾಘವನ್ ಮತ್ತೆ ಸಿಪಿಎಂ ಪಕ್ಷಕ್ಕೆ ಸೇರ್ಪಡೆಯಾದರು. ಈ ಹಿಂದೆ ಸಿಪಿಎಂನಲ್ಲಿದ್ದ ಎಂ.ವಿ.ರಾಘವನ್, ಅದರಿಂದ ಬೇರ್ಪಟ್ಟು ಸಿಎಂಪಿ (ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷ) ಎಂಬ ಪಕ್ಷವನ್ನು ಆರಂಭಿಸಿ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಹಕಾರಿ ಸಚಿವರಾಗಿದ್ದಾಗಲೇ ಈ ಗುಂಡಿನ ದಾಳಿ ನಡೆದಿತ್ತು ಎಂಬುದು ಗಮನಾರ್ಹ.

ಎಂ.ವಿ.ರಾಘವನ್ ಅವರು ಸಿಪಿಎಂಗೆ ಮರುಸೇರ್ಪಡೆಯಾಗುವುದನ್ನು ಪುಷ್ಪನ್ ವಿರೋಧಿಸಲಿಲ್ಲ. ಅಂತೆಯೇ, ಸಿಪಿಎಂ ಕೂಡ ತನ್ನ ಅನುದಾನ ರಹಿತ ಕಾಲೇಜುಗಳಿಗೆ ಸಂಬಂಧಿಸಿದ ತಮ್ಮ ನೀತಿಯನ್ನು ಪರಿಷ್ಕರಿಸಿತು. ಆಗಲೂ ಪುಷ್ಪನ್ ಪಕ್ಷದ ಬೆಂಬಲಕ್ಕೆ ನಿಂತಿದ್ದರು. ಆಗಿನ ಸಚಿವ ಎಂ.ವಿ.ರಾಘವನ್ ಪುತ್ರನಿಗೆ ಸಿಪಿಎಂ ಪಕ್ಷದಲ್ಲಿ ಸ್ಥಾನ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೂಡ ನೀಡಲಾಗಿತ್ತು. ಆದರೂ, ಪುಷ್ಪನ್ ಅವರು ಭಿನ್ನಾಭಿಪ್ರಾಯದ ಧ್ವನಿ ಎತ್ತದೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದರು.

ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ನೆನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವರದಿಗಳ ಪ್ರಕಾರ, ಅವರನ್ನು ಆಗಸ್ಟ್ 2 ರಂದು ಗಂಭೀರ ಸ್ಥಿತಿಯಲ್ಲಿ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಹೃದಯಾಘಾತದ ನಂತರ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿತ್ತು.

ಇಂದು ಬೆಳಗ್ಗೆ ಅವರ ದೇಹವನ್ನು ಕೋಳಿಕ್ಕೋಡ್ ಆಸ್ಪತ್ರೆಯಿಂದ ಕಣ್ಣೂರಿನ ತಲಸ್ಸೆರಿಗೆ ಕೊಂಡೊಯ್ಯಲಾಗಿದೆ. ಸಾರ್ವಜನಿಕ ಗೌರವಾರ್ಥವಾಗಿ ಅಲ್ಲಿ ಇರಿಸಲಾಗಿದೆ. ಇಂದು ಸಂಜೆ ಪುಷ್ಪನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಒಡನಾಡಿ ಪುಷ್ಪನ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಹಾಗೂ ಸಿಪಿಎಂ ಸಂತಾಪ ಸೂಚಿಸಿದೆ.

Related Posts