ದೇಶ Archives » Page 13 of 54 » Dynamic Leader
November 24, 2024
Home Archive by category ದೇಶ (Page 13)

ದೇಶ

ದೇಶ

ನವದೆಹಲಿ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಜ್ಮಾರ್ ನಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಪ್ರಾಣ ಕಳೆದುಕೊಂಡು ಇನ್ನಿಬ್ಬರು ಗಾಯಗೊಂಡಿದ್ದಾರೆ.

ಮಾದ್ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ನಾರಾಯಣಪುರ-ಕೊಂಡಗಾಂವ್-ಕಂಕೇರ್-ದಂತೇವಾಡ ಡಿಆರ್‌ಜಿ, ಎಸ್‌ಟಿಎಫ್ ಮತ್ತು ಐಟಿಬಿಪಿ 53ನೇ ಬೆಟಾಲಿಯನ್ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿವೆ.

ಭದ್ರತಾ ಪಡೆಗಳು “ರೆಡ್ ಕಾರಿಡಾರ್” ನಲ್ಲಿ ನಕ್ಸಲೀಯರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಬಲಪಡಿಸಿವೆ. ಕಳೆದ ತಿಂಗಳು ದೀರ್ಘಾವಧಿಯ ಗುಂಡಿನ ಕಾಳಗ ಮುಂದುವರಿಸಿ, ಪ್ರಕ್ಷುಬ್ಧ ಬಿಜಾಪುರ ಜಿಲ್ಲೆಯ ಅರಣ್ಯದಲ್ಲಿ ಪಡೆಗಳು ಕನಿಷ್ಠ 12 ನಕ್ಸಲೀಯರನ್ನು ನಿರ್ಮೂಲನೆ ಮಾಡಿದೆ.

ಗಂಗಲೂರು ಪ್ರದೇಶದ ಪಿಡಿಯಾ ಗ್ರಾಮದ ಬಳಿ ಬೆಳಿಗ್ಗೆ ನಕ್ಸಲೀಯರೊಂದಿಗೆ ಎನ್‌ಕೌಂಟರ್ ನಡೆದಾಗ ಭದ್ರತಾ ಸಿಬ್ಬಂದಿಯ ತಂಡವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಪಡೆಗಳು ಹಿಂತಿರುಗುವ ಮೊದಲು ಸಂಜೆಯವರೆಗೆ ಹನ್ನೊಂದು ಗಂಟೆಗಳ ಕಾಲ ಎನ್‌ಕೌಂಟರ್ ನಡೆದಿದೆ.

ಈ ಹಿನ್ನೆಲೆಯಲ್ಲಿ, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳು ಮತ್ತು ಅಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

“ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ನಕ್ಸಲೀಯರ ವಿರುದ್ಧ ಕ್ರಮಗಳು ಹೆಚ್ಚಿವೆ ಮತ್ತು ನಾವು ಅವರಿಗೆ ಪ್ರಬಲ ಹೋರಾಟ ನೀಡುತ್ತಿದ್ದೇವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ನಕ್ಸಲಿಸಂ ಕೊನೆಗೊಳ್ಳಲಿ ಎಂದು ಬಯಸಿದ್ದಾರೆ ಮತ್ತು ಜನರು ಡಬಲ್ ಇಂಜಿನ್ ಸರ್ಕಾರದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ” ಎಂದು ಸಾಯಿ ಹೇಳಿದರು.

ಏಪ್ರಿಲ್ 16 ರಂದು, ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 29 ನಕ್ಸಲೀಯರನ್ನು ಹೊಡೆದುರುಳಿಸಿದರೆ, ಅದೇ ನಾರಾಯಣಪುರ ಜಿಲ್ಲೆಯ ಅಬುಜ್ಮಾರ್ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಹತ್ತು ನಕ್ಸಲೀಯರು ಕೊಲ್ಲಲ್ಪಟ್ಟರು ಎಂಬುದು ಗಮನಾರ್ಹ.

ದೇಶ

ನವದೆಹಲಿ: 14 ವರ್ಷಗಳ ಹಿಂದೆ ಖ್ಯಾತ ಲೇಖಕಿ ಅರುಂಧತಿರಾಯ್ ಮಾಡಿದ ವಿವಾದಾತ್ಮಕ ಭಾಷಣದ ವಿಚಾರಣೆಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನುಮೋದನೆ ನೀಡಿದ್ದಾರೆ.

ಪ್ರಸಿದ್ಧ ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಅರುಂಧತಿರಾಯ್, 2010ರಲ್ಲಿ ದೆಹಲಿಯಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಕಾಶ್ಮೀರ ಸಮಸ್ಯೆ ಮತ್ತು ಮಾವೋವಾದಿಗಳ ಪರವಾದ ನಿಲುವಿನ ಕುರಿತು ಮಾತನಾಡಿದ್ದರು. ಅವರ ಮಾತು ರಾಷ್ಟ್ರಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಈ ಸಂಬಂಧ ಅರುಂಧತಿರಾಯ್ ಹಾಗೂ ಪ್ರೊಫೆಸರ್ ಸೌಕತ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ದೆಹಲಿ ಮೆಟ್ರೋಪಾಲಿಟನ್ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಈ ಹಿನ್ನೆಲೆಯಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣದ ವಿಚಾರಣೆಗೆ ಇಂದು ಅನುಮೋದನೆ ನೀಡಿದ್ದಾರೆ.

ದೇಶ

ತಿರುವನಂತಪುರಂ: ಕೇಂದ್ರದಲ್ಲಿ 3ನೇ ಬಾರಿಗೆ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆ ಸಮಾಲೋಚನೆ ನಡೆಸಲು ನಿರ್ಧರಿಸಿವೆ. ಜುಲೈ 31 ರಿಂದ ಆಗಸ್ಟ್ 2ರ ವರೆಗೆ ನಡೆಯುವ ಈ ಸಮಾಲೋಚನಾ ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಸಮ್ಮಿಶ್ರ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ 3ನೇ ಅವಧಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ್ದಾರೆ. ಕೇರಳದಿಂದ ಪ್ರಥಮ ಬಾರಿಗೆ ಸುರೇಶ್ ಗೋಪಿ ಬಿಜೆಪಿ ಪರವಾಗಿ 74 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ತ್ರಿಶೂರ್ ಪೂರಂ ನಡೆಯುವ ಈ ನಗರದಲ್ಲಿ ಬಿಜೆಪಿಯ ಗೆಲುವನ್ನು ಆರ್‌ಎಸ್‌ಎಸ್‌ ಪ್ರಮುಖವಾಗಿ ಪರಿಗಣಿಸುತ್ತಿದೆ. ಆರ್‌ಎಸ್‌ಎಸ್‌ಗೆ ಕೇರಳದಲ್ಲಿ ಹಲವು ಶಾಖೆಗಳಿವೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪದಾಧಿಕಾರಿಗಳು ವರ್ಷಕ್ಕೊಮ್ಮೆ ಸಭೆ ಸೇರಿ ಮಾತನಾಡುವುದು ವಾಡಿಕೆ.

ಈ ಹಿನ್ನೆಲೆಯಲ್ಲಿ, ಜುಲೈ 31 ರಿಂದ ಆಗಸ್ಟ್ 2 ರವರೆಗೆ 3 ದಿನಗಳ ಕಾಲ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ಪಾಲಕ್ಕಾಡ್‌ನಲ್ಲಿ ನಡೆಯುವ ಈ ಸಭೆಯಲ್ಲಿ ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ದೇಶ

ಕೊಚ್ಚಿ: ಕುವೈತ್‌ನ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಕೊಚ್ಚಿಗೆ ತರಲಾಯಿತು.

ಕುವೈತ್‌ನ ಮಂಗಾಬ್‌ನಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ನಿನ್ನೆ (ಜೂನ್ 12) ಮುಂಜಾನೆ ಬೆಂಕಿ ಕಾಣಿಸಿಕೊಂಡಿತು. ಈ ಅಪಘಾತದಲ್ಲಿ 49 ಮಂದಿ ಸಾವನ್ನಪ್ಪಿದ್ದರು. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುವೈತ್ ಅಧಿಕಾರಿಗಳು ಮೃತರ ಶವಗಳನ್ನು ಗುರುತಿಸಿ ಅವರ ಸ್ವಗ್ರಾಮಕ್ಕೆ ಕಳುಹಿಸುವಲ್ಲಿ ತೊಡಗಿದ್ದಾರೆ. ಅವರ ಮೃತದೇಹಗಳನ್ನು ಭಾರತಕ್ಕೆ ತರಲು ವಾಯುಪಡೆಯ ಸಿ130 ವಿಮಾನವು ನಿನ್ನೆ ಕುವೈತ್‌ಗೆ ಹಾರಿದೆ. ಅಲ್ಲಿಂದ ಮೃತರ ಶವ ಹೊತ್ತ ವಿಮಾನ ಕೊಚ್ಚಿ ತಲುಪಿದೆ. 31 ಶವಗಳನ್ನು ವಿಮಾನದಿಂದ ಕೆಳಗೆ ತರಲಾಯಿತು. ಉಳಿದ 14 ಶವಗಳನ್ನು ದೆಹಲಿಗೆ ಕೊಂಡೊಯ್ಯಲಾಗುತ್ತದೆ.

ಕೇಂದ್ರ ಸಚಿವರಾದ ಕೀರ್ತಿ ವರ್ಧನ್ ಸಿಂಗ್, ಸುರೇಶ್ ಗೋಪಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯ ಸಚಿವರು ಮತ್ತು ನಾಯಕರು ಹಾಗೂ ತಮಿಳುನಾಡು ಸರ್ಕಾರದ ಪರವಾಗಿ ಸಚಿವ ಸೆಂಜಿ ಮಸ್ತಾನ್ ಮುಂತಾದವರು ವಿಮಾನ ನಿಲ್ದಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಸರ್ವಧರ್ಮ ಪ್ರಾರ್ಥನೆಯೂ ನಡೆಯಿತು.

ಬಳಿಕ ಮೃತರ ಶವಗಳನ್ನು ಅವರವರ ಊರಿಗೆ ರವಾನಿಸಲಾಯಿತು. ಏಳು ಮಂದಿ ತಮಿಳರ ಮೃತದೇಹಗಳನ್ನು ಪ್ರತ್ಯೇಕ ಆಂಬ್ಯುಲೆನ್ಸ್‌ಗಳಲ್ಲಿ ಅವರ ಊರುಗಳಿಗೆ ರವಾನಿಸಲಾಯಿತು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, “ಕುವೈತ್‌ಗೆ ಹೋಗಲು ಅನುಮತಿ ಸಿಗದಿರುವುದು ದುರದೃಷ್ಟಕರ. ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಕೇರಳದವರು ಮತ್ತು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹೆಚ್ಚಿನವರು ಕೂಡ ನಮ್ಮ ರಾಜ್ಯದವರು” ಎಂದು ಹೇಳಿದರು.

ದೇಶ

ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸ್ಪೀಕರ್ ಹುದ್ದೆಯನ್ನು ತೆಲುಗು ದೇಶಂ, ಶಿವಸೇನೆ ಮತ್ತು ಮಾರ್ಕ್ಸ್‌ವಾದಿ ಪಕ್ಷಗಳಿಗೆ ನೀಡಲಾಗಿತ್ತು

ಈ ಬಾರಿ ಲೋಕಸಭಾ ಸ್ಪೀಕರ್ ಹುದ್ದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೈಗೆ ಸಿಕ್ಕರೆ ತೆಲುಗು ದೇಶಂ ಮತ್ತು ಸಂಯುಕ್ತ ಜನತಾದಳ ಪಕ್ಷಗಳ ಸಂಸದರ ನಡುವೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಅಶೋಕ್ ಗೆಹ್ಲೋಟ್ ತಮ್ಮ ಅಧಿಕೃತ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ, “ಒಂದು ವೇಳೆ ಬಿಜೆಪಿ ಸ್ಪೀಕರ್ ಹುದ್ದೆಯನ್ನು ಉಳಿಸಿಕೊಂಡರೆ, ತೆಲುಗು ದೇಶಂ ಮತ್ತು ಸಂಯುಕ್ತ ಜನತಾದಳದ ಸಂಸದ ಬಳಿ ಬಿಜೆಪಿ ಚೌಕಾಸಿ ಮಾಡುವುದನ್ನು ನೋಡಬೇಕಾಗುತ್ತದೆ” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಹಲವಾರು ರಾಜ್ಯ ವಿಧಾನಸಭೆಗಳಲ್ಲಿ ಸ್ಪೀಕರ್ ನಿರ್ಧಾರದಿಂದ ಸರ್ಕಾರಗಳು ಉರುಳಿ ಪಕ್ಷಗಳು ಮುರಿದುಹೋಗಿವೆ ಎಂಬುದನ್ನು ಎರಡೂ ಪಕ್ಷಗಳು ಅರಿತುಕೊಳ್ಳಬೇಕು ಎಂದು ಅಶೋಕ್ ಗೆಹ್ಲೋಟ್ ತಮ್ಮ ಪೋಸ್ಟ್‌ನಲ್ಲಿ ಎಚ್ಚರಿಸಿದ್ದಾರೆ.

“ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ನಡೆಯಬಾರದು ಎಂದರೆ, ಎರಡು ಸಮ್ಮಿಶ್ರ ಪಕ್ಷಗಳಲ್ಲಿ (ತೆಲುಗು ದೇಶಂ-ಜೆಡಿಯು) ಯಾವುದಾದರೂ ಒಂದಕ್ಕೆ ಸ್ಪೀಕರ್ ಸ್ಥಾನವನ್ನು ಕೊಡಬೇಕು” ಎಂದು ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.

ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸ್ಪೀಕರ್ ಹುದ್ದೆಯನ್ನು ತೆಲುಗು ದೇಶಂ, ಶಿವಸೇನೆ ಮತ್ತು ಮಾರ್ಕ್ಸ್‌ವಾದಿ ಪಕ್ಷಗಳಿಗೆ ನೀಡಲಾಗಿತ್ತು ಎಂಬುದನ್ನು ಅಶೋಕ್ ಗೆಹ್ಲೋಟ್, ತೆಲುಗು ದೇಶಂ ಮತ್ತು ಜೆಡಿಯು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ದೇಶ

ನವದೆಹಲಿ: ಮೊಬೈಲ್ ಮತ್ತು ಲ್ಯಾಂಡ್‌ಲೈನ್‌ಗೆ ಕರೆ ಮಾಡಲು ರೀಚಾರ್ಜ್ ಹೊರತುಪಡಿಸಿ ಮೊಬೈಲ್ ಸಂಖ್ಯೆಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕೆಲವು ಟೆಲಿಕಾಂ ಕಂಪನಿಗಳು ಸಿಮ್ ಕಾರ್ಡ್‌ಗಳನ್ನುಉಚಿತವಾಗಿ ಒದಗಿಸಿದ್ದರೂ, ಇತರರೊಂದಿಗೆ ಸಂವಹನ ನಡೆಸಲು ಮೊಬೈಲ್ ಫೋನ್‌ಗಳಿಗೆ ರೀಚಾರ್ಜ್ ಮಾಡುವುದು ಕಡ್ಡಾಯವಾಗಿರುತ್ತದೆ. ಪ್ರತಿಯೊಂದು ಕಂಪನಿಯು ವಿಭಿನ್ನ ದರಗಳು ಮತ್ತು ರೀಚಾರ್ಜ್ ಶುಲ್ಕಗಳನ್ನು ವಿಧಿಸುತ್ತದೆ. ಇದಲ್ಲದೆ, ಇಂಟರ್ನೆಟ್ ಸೇವೆಗೆ ಹೆಚ್ಚುವರಿಯಾಗಿ ರೀಚಾರ್ಜ್ ಮಾಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ, ಇನ್ನು ಮುಂದೆ ಭಾರತದಲ್ಲಿ ಬಳಕೆಯಾಗುವ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳಿಗೆ ಶುಲ್ಕ ವಿಧಿಸಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಂಗೀಕರಿಸಿದ ಹೊಸ ಟೆಲಿಕಾಂ ಕಾಯಿದೆ ಅಡಿಯಲ್ಲಿ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಾರ್ವಜನಿಕರು ಬಳಸುವ ಮೊಬೈಲ್ ಸಂಖ್ಯೆಗಳಿಗೆ ಶುಲ್ಕ ವಿಧಿಸಲು ಪರಿಗಣಿಸುತ್ತಿದೆ. ಈ ಶುಲ್ಕವನ್ನು ಟೆಲಿಕಾಂ ಕಂಪನೆಗಳ ಮೇಲೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ. ಈ ಕಂಪನಿಗಳು ಗ್ರಾಹಕರಿಂದ ಈ ಶುಲ್ಕವನ್ನು ಸಂಗ್ರಹಿಸುತ್ತವೆ. ಇದಕ್ಕಾಗಿ ಒಂದು ಬಾರಿ ಶುಲ್ಕ ಅಥವಾ ವಾರ್ಷಿಕ ಶುಲ್ಕ ಅಥವಾ ಪ್ರೀಮಿಯಂ ಸಂಖ್ಯೆಗಳಿಗೆ ಬಿಡ್ಡಿಂಗ್‌ನಂತಹ ವಿಧಾನಗಳನ್ನು ಟ್ರಾಯ್ ಅನ್ವೇಷಿಸುತ್ತಿದೆ.

ಸಂಖ್ಯೆಗಳಿಗೆ ಶುಲ್ಕ ವಿಧಿಸುವ ಪದ್ಧತಿ ಈಗಾಗಲೇ ಆಸ್ಟ್ರೇಲಿಯಾ, ಸಿಂಗಾಪುರ, ಬೆಲ್ಜಿಯಂ, ಫಿನ್‌ಲ್ಯಾಂಡ್, ಇಂಗ್ಲೆಂಡ್, ಲಿಥುವೇನಿಯಾ, ಗ್ರೀಸ್, ಹಾಂಗ್ ಕಾಂಗ್, ಬಲ್ಗೇರಿಯಾ, ಕುವೈತ್, ನೆದರ್‌ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್, ಪೋಲೆಂಡ್, ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ಡೆನ್ಮಾರ್ಕ್‌ನಲ್ಲಿ ಜಾರಿಯಲ್ಲಿದೆ ಎಂಬುದು ಗಮನಾರ್ಹ.

ದೇಶ

ವಿಜಯವಾಡ: ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಸನ್ನಿವೇಶದಲ್ಲಿ, ಆಂಧ್ರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರಾಗಿರುವ ತೆಲುಗು ದೇಶಂ ಪಕ್ಷವು ತನ್ನ ವಿಜಯವನ್ನು ದಾಖಲಿಸಿದೆ.

175 ಸ್ಥಾನಗಳ ಆಂಧ್ರ ಪ್ರದೇಶ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತೆಲುಗು ದೇಶಂ, ಜನಸೇನಾ ಮತ್ತು ಬಿಜೆಪಿ ಒಳಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 164 ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ 11.30ಕ್ಕೆ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಅಬ್ದುಲ್ ನಜೀರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಲ್ಲದೆ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್, ಚಂದ್ರಬಾಬು ಪುತ್ರ ನಾರಾ ಲೋಕೇಶ್ ಸೇರಿದಂತೆ 24 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ವಿಜಯವಾಡ ಬಳಿಯ ಗನ್ನಾವರಂ ಪ್ರದೇಶದ ಟೆಕ್ನಾಲಜಿ ಪಾರ್ಕ್ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ, ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, ನಟರಾದ ರಜನಿಕಾಂತ್, ಚಿರಂಜೀವಿ, ಬಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ಆಂಧ್ರಪ್ರದೇಶದ ಕಿಂಗ್ ಮೇಕರ್, ರಾಜಕೀಯದಲ್ಲಿ ಮುತ್ಸದ್ದಿ, ಜಾಣ ಎಂದು ಗುರುತಿಸಿಕೊಂಡಿರುವ ಚಂದ್ರಬಾಬು ನಾಯ್ಡು ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ!

ದೇಶ

ನವದೆಹಲಿ: ಭಾರತೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸರಕಾರದ ಸಂಪುಟದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಸಂಸದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಹಂಚಿಕೆ ಮಾಡಲಾಗಿದೆ.

ಈ ಕುರಿತು ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು “ಸತತವಾಗಿ 3ನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಭಾರತೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಸರಕಾರದ ಸಂಪುಟದಲ್ಲಿ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ನನಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಹಂಚಿಕೆ ಮಾಡಿದ್ದು, ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು” ಎಂದು ಹೇಳಿದ್ದಾರೆ.

I am deeply grateful to the Hon’ble Prime Minister, Shri.Narendramodi for appointing me as the Minister of Steel and Heavy Industries in the National Democratic Alliance (NDA) government, in its third consecutive term.

ದೇಶ

ನವದೆಹಲಿ: ನರೇಂದ್ರ ಮೋದಿ ಅವರು ಸತತ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿದೆ. ಇದಾದ ಬಳಿಕ ಇಂದು (ಜೂನ್ 09) ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಕೇಂದ್ರ ಸಚಿವರ ಪದಗ್ರಹಣ:
ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ವ್ಯಕ್ತಿಯಲ್ಲಿ ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು. ಅವರ ನಂತರ ಅಮಿತ್ ಶಾ, ನಿತಿನ್ ಗಡ್ಕರಿ, ಜೆ.ಪಿ.ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಜೈಶಂಕರ್, ಮನೋಹರ್ ಲಾಲ್ ಖಟ್ಟರ್, ಹೆಚ್.ಡಿ.ಕುಮಾರಸ್ವಾಮಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಜಿತನ್ ರಾಮ್ ಮಾಂಝಿ, ಲಾಲಸಿಂಗ್, ಸರ್ಬಾನಂದ ಸೋನಾವಾಲ್, ವೀರೇಂದ್ರ ಕುಮಾರ್, ರಾಮ್ ಮೋಹನ್ ನಾಯ್ಡು, ಪ್ರಹ್ಲಾದ ಜೋಶಿ, ಜ್ಯುವೆಲ್ ಓರಂ, ಗಿರಿರಾಜ್ ಸಿಂಗ್, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಗಜೇಂದ್ರ ಸಿಂಗ್ ಶೇಖಾವತ್, ಅನ್ನಪೂರ್ಣ ದೇವಿ, ಕಿರಣ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವಿಯಾ, ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್, ಸಿ.ಆರ್.ಪಾಟೀಲ್, ರಾವ್ ಇಂದ್ರಜಿತ್ ಸಿಂಗ್, ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಪ್ರತಾಪ್ ರಾವ್, ಜಯಂತ್ ಚೌಧರಿ, ಜಿತಿನ್ ಪ್ರಸಾದ, ಶ್ರೀಪಾದ್ ನಾಯಕ್, ಪಂಕಜ್ ಚೌಧರಿ, ಕ್ರಿಶನ್ ಪಾಲ್ ಗುರ್ಜರ್, ರಾಮದಾಸ್ ಅಥವಾಲೆ ಮೊದಲಾದವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತೆಲುಗು ದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು, ಸಂಯುಕ್ತ ಜನತಾದಳದ ವರಿಷ್ಠ ನಿತೀಶ್ ಕುಮಾರ್ ಮುಂತಾದವರು ಭಾಗವಹಿಸಿದ್ದು ಗಮನಾರ್ಹ.

ವಿದೇಶಿ ನಾಯಕರ ಭಾಗವಹಿಸುವಿಕೆ:
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗೌತ್, ಸೆಶೆಲ್‌ನ ಅಧ್ಯಕ್ಷ ವಾವೆಲ್ ರಾಮ್‌ಕಲವನ್, ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಿನಿಮಾ ಸೆಲೆಬ್ರಿಟಿಗಳ ಭಾಗವಹಿಸುವಿಕೆ:
ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ತೆಲುಗು ನಟ ನಾಗೇಂದ್ರಬಾಬು, ನಟ ರಜನಿಕಾಂತ್ ಮತ್ತು ಅವರ ಪತ್ನಿ ಲತಾ ಇತರರು ಉಪಸ್ಥಿತರಿದ್ದರು.

ರಾಜ್ಯಪಾಲರ ಭಾಗವಹಿಸುವಿಕೆ:
ಪುದುಚೇರಿ ಮತ್ತು ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಕೇರಳ ರಾಜ್ಯಪಾಲ ಆರಿಪ್ ಖಾನ್ ಭಾಗವಹಿಸಿದ್ದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಿಮಿತ್ತ ದೆಹಲಿಯಲ್ಲಿ ಭರದ ಸಿದ್ಧತೆ ನಡೆಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಸುಮಾರು 8000ಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸಿದ್ದರು.

ದೇಶ

ಕೊಯಮತ್ತೂರು: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದ ನಟಿ ಕಂಗನಾ ರಣಾವತ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳಲು ಚಂಡೀಗಢ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕಂಗನಾ ರಣಾವತ್ ಕೆನ್ನೆಗೆ ಬಾರಿಸಿದ್ದರು.

ರೈತರ ಬಗ್ಗೆ ತಪ್ಪು ಹೇಳಿಕೆ ನೀಡಿದ್ದಕ್ಕಾಗಿ ಕಂಗನಾ ರಣಾವತ್ ಕೆನ್ನೆಗೆ ಬಾರಿಸಿದ್ದಾಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಹೇಳಿದರು. ತರುವಾಯ, ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಈ ಕುರಿತು ಮಾತನಾಡಿದ ಕುಲ್ವಿಂದರ್ ಕೌರ್, “100 ರೂಪಾಯಿ ಪಡೆದುಕೊಂಡು ಮಹಿಳಾ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ರಣಾವತ್ ಹೇಳಿದ್ದಾರೆ. ಆ ಪ್ರತಿಭಟನೆಯಲ್ಲಿ ನನ್ನ ತಾಯಿ ಕೂಡ ಭಾಗವಹಿಸಿದ್ದರು” ಎಂದು ಅವರು ಹೇಳಿದರು. “ರೈತರನ್ನು ಅವಮಾನಿಸುವ ಕಂಗನಾ ರಣಾವತ್ ಪ್ರತಿಭಟನೆಯ ನೇತೃತ್ವ ವಹಿಸುತ್ತಾರೆಯೇ” ಎಂದು ಅವರು ಪ್ರಶ್ನಿಸಿದ್ದರು ಎಂಬುದು ಗಮನಾರ್ಹ.

ಈ ಹಿನ್ನೆಲೆಯಲ್ಲಿ, ತಮಿಳುನಾಡಿನ ತಂದೆ ಪೆರಿಯಾರ್ ದ್ರಾವಿಡರ್ ಕಳಗಂ ಪ್ರಧಾನ ಕಾರ್ಯದರ್ಶಿ ಕು.ರಾಮಕೃಷ್ಣನ್ ನಿನ್ನೆ ಮಾಧ್ಯಮದವರನ್ನು ಭೇಟಿಯಾದರು. ನಂತರ ಮಾತನಾಡಿದ ಅವರು, ರೈತರ ಬೆಂಬಲಕ್ಕೆ ನಿಂತ ಕುಲ್ವಿಂದರ್ ಕೌರ್ ಅವರನ್ನು ಶ್ಲಾಘಿಸಲು ಸೋಮವಾರ ಎಂಟು ಗ್ರಾಂ ಚಿನ್ನದ ಉಂಗುರವನ್ನು ಕಳುಹಿಸಲು ಯೋಜಿಸಲಾಗಿದೆ ಎಂದರು.

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಅವರ ತಾಯಿಯೂ ಇದ್ದಾರೆ ಆಗಾಗಿ ಕುಲ್ವಿಂದರ್ ಕೌರ್ ಮನೆ ವಿಳಾಸಕ್ಕೆ ಉಂಗುರವನ್ನು ಕಳುಹಿಸಲಿದ್ದೇವೆ ಎಂದು ಕು.ರಾಮಕೃಷ್ಣನ್ ಹೇಳಿದರು. ಕೊರಿಯರ್ ಸೇವೆಗಳು ಚಿನ್ನದ ಉಂಗುರವನ್ನು ಸ್ವೀಕರಿಸದಿದ್ದರೆ, ತಮ್ಮ ಸದಸ್ಯರಲ್ಲಿ ಒಬ್ಬರನ್ನು ರೈಲು ಅಥವಾ ವಿಮಾನದ ಮೂಲಕ ಅವರ ಮನೆಗೆ ಕಳುಹಿಸಿ, ಕೆಲವು ಪುಸ್ತಕಗಳೊಂದಿಗೆ ಪೆರಿಯಾರ್ ಅವರ ಮುಖವುಳ್ಳ ಉಂಗುರವನ್ನು ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.