ರಾಜಕೀಯ
ರಾಯ್‌ಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಾವಿನ ನಂತರವೂ ಜನರಿಂದ ತೆರಿಗೆ ಸಂಗ್ರಹಿಸಲು ಕಾಂಗ್ರೆಸ್ ಯೋಜಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಛತ್ತೀಸ್‌ಗಢದ ಸರ್ಗುಜಾದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಧಃಪತನಕ್ಕೆ ಕಾಂಗ್ರೆಸ್‌ನ ದುರಾಡಳಿತ ಮತ್ತು ನಿರಾಸಕ್ತಿಯೇ ಕಾರಣ. ಇಂದು ಬಿಜೆಪಿ, ಭಯೋತ್ಪಾದನೆ ಮತ್ತು ನಕ್ಸಲಿಸಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಹಿಂಸಾಚಾರವನ್ನು ಹರಡುವ ಜನರನ್ನು ಧೈರ್ಯಶಾಲಿ ಎಂದು ಕರೆಯುವ ಮೂಲಕ ಕಾಂಗ್ರೆಸ್ ಬೆಂಬಲಿಸುತ್ತದೆ. ಭಯೋತ್ಪಾದಕರು ಹತರಾದಾಗ ಕಣ್ಣೀರು ಸುರಿಸುತ್ತಿದ್ದು, ಇಂತಹ ಕೃತ್ಯಗಳಿಂದ ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ.
ಆಂಧ್ರಪ್ರದೇಶದಲ್ಲಿ ಧಾರ್ಮಿಕ ಮೀಸಲಾತಿ ಕಲ್ಪಿಸಲು ಕಾಂಗ್ರೆಸ್ ಹಲವು ವರ್ಷಗಳ ಹಿಂದೆಯೇ ಪ್ರಯತ್ನಿಸಿತ್ತು. ನಂತರ ಇದನ್ನು ದೇಶಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಯೋಜಿಸಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಅಪಾಯಕ್ಕೆ ಸಿಲುಕಲಿದೆ. ದೇಶದಲ್ಲಿ ಕೆಳವರ್ಗದವರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ಕೊಡುತ್ತಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಧಾರ್ಮಿಕ ಮೀಸಲಾತಿಗೆ ಅವಕಾಶ ನೀಡುವುದಿಲ್ಲ.
ಸಾವಿನ ನಂತರವೂ ಜನರಿಂದ ತೆರಿಗೆ ಸಂಗ್ರಹಿಸಲು ಕಾಂಗ್ರೆಸ್ ಯೋಜಿಸಿದೆ. ಕಾಂಗ್ರೆಸ್ ಪಕ್ಷ ದೇಶದ ಜನರ ಆಸ್ತಿ ಕಿತ್ತುಕೊಳ್ಳಲು ಪ್ಲಾನ್ ಮಾಡಿದೆ. ಪಕ್ಷವು ದೇಶದ ಬಡವರ ಆಸ್ತಿ ಪಾಸ್ತಿಗಳ ಮೇಲೆ ಕಣ್ಣಿಟ್ಟಿದೆ. ಜನರ ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಮತ್ತು ಹಣವನ್ನು ಕಸಿದುಕೊಳ್ಳಲು ಯೋಜಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.
ಬೆಂಗಳೂರು: ಮುಸ್ಲಿಂ ಸಮುದಾಯದ ವಿರುದ್ಧ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ದ್ವೇಷ ಭಾಷಣ ಅವರ ಹತಾಶ ಮನಸ್ಥಿತಿಯನ್ನು ತೋರಿಸುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ‘ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ’ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಮೊದಲ ಹಂತದ ಮತದಾನದ ಬಳಿಕ ಪ್ರಧಾನಿಗಳಿಗೆ ಸೋಲಿನ ವಾಸನೆ ಬಡಿದಿರಬಹುದು. ಸುಳ್ಳು ಹೇಳಿ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಧಾನಿಗಳ ಬಗ್ಗೆ ಜನರಿಗೆ ಅರಿವಾಗತೊಡಗಿದೆ. ಬೇರೆ ದಾರಿ ಕಾಣದೆ ಚುನಾವಣಾ ಪ್ರಚಾರ ಸಭೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸತೊಡಗಿದ್ದಾರೆ.
ಮುಸ್ಲಿಮರು ನುಸುಳುಕೋರರು ಅವರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಅವರಿಗೆ ದೇಶದ ವೈಯಕ್ತಿಕ ಸಂಪತ್ತನ್ನು ಕಾಂಗ್ರೆಸ್ ಹಂಚುತ್ತಿದೆ ಎಂಬ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿ ಪ್ರಧಾನಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ. ಇದೆಂತಹಾ ಸಬ್ಕಾ ಸಾತ್ ಸಬ್ ಕಾ ವಿಕಾಸ್? ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರಗಿಸಬೇಕು. ಚುನಾವಣಾ ಆಯೋಗವು ನ್ಯಾಯೋಚಿತ ರೀತಿಯಲ್ಲಿ ವರ್ತಿಸಬೇಕು. ದೇಶದ ಸ್ವಾಸ್ಥ್ಯ ಕೆಡಿಸುವ ಪ್ರಧಾನಿಗಳ ಶ್ರಮ ಅಪಾಯಕಾರಿ. ಅಲ್ಪಸಂಖ್ಯಾತ ಸಮುದಾಯದ ಜನರನ್ನು ನಿಂಧಿಸಿ ಬಹುಸಂಖ್ಯಾತ ಸಮುದಾಯವನ್ನು ಎತ್ತಿ ಕಟ್ಟುವ ಈ ಪ್ರಧಾನಿಗಳಿಂದ ದೇಶ ಹೇಗೆ ಉದ್ದಾರವಾದೀತು? ಮತದಾರರು ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೋಲಾರ: ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಆಯೋಜಿಸಿದ್ದ ರೋಡ್ ಶೋನಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರಿಗೆ ಮತ ನೀಡುವಂತೆ ಮನವಿ ಮಾಡಿ ಮಾತನಾಡಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಇಡೀ ದೇಶದ ಯುವಕ, ಯುವತಿಯರಿಗೆ ನಂಬಿಸಿದರು. ನರೇಂದ್ರ ಮೋದಿ ಅವರ ಮಾತನ್ನು ನಂಬಿ ಯುವ ಸಮೂಹ ಮತ ಹಾಕಿತು. ಹೀಗೆ ಮತ ಹಾಕಿದವರೆಲ್ಲಾ ಡಿಗ್ರಿ ಮುಗಿಸಿ ಕೆಲ್ಸ ಕೊಡಿ ಎಂದು ಕೇಳಿದರೆ, “ಹೋಗಿ ಪಕೋಡ ಮಾರಾಟ ಮಾಡಿ” ಅಂದರು. ನಿರುದ್ಯೋಗಿ ಯುವಕ, ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿಯೇ ಪ್ರಧಾನಿ ಆಗಬೇಕಿತ್ತಾ? ಎಂದು ಕಿಡಿ ಕಾರಿದರು.
ಮೋದಿಯವರು ಪ್ರಧಾನಿಯಾಗಿರಲು ನಾಲಾಯಕ್ ಎಂದು ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ. ಇಂಥಾ ನಾಲಾಯಕ್ ಗೆ ಮತ ಹಾಕ್ತೀರಾ? ಹತ್ತತ್ತು ವರ್ಷ ಮತ ಹಾಕಿದ್ದೀರ ನಿಮಗೆ, ದೇಶಕ್ಕೆ ಏನಾದ್ರೂ ಸಿಕ್ಕಿತಾ? ಈ ಹತ್ತು ವರ್ಷದಲ್ಲಿ ಏನೇನೂ ಕೊಡದವರು ಈ ಬಾರಿ ನಿಮ್ಮ ಮತ ಕೇಳುತ್ತಿದ್ದಾರೆ, ಹೀಗೆ ಮತ ಕೇಳುವ ಯೋಗ್ಯತೆಯಾಗಲೀ, ಅರ್ಹತೆಯಾಗಲೀ ಬಿಜೆಪಿ ಅವರಿಗೆ ಇದೆಯೇ? ಪ್ರಶ್ನಿಸಿದರು.
ನಾಲಾಯಕ್ ನರೇಂದ್ರಮೋದಿ ಅವರು ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ? ಹೀಗಾಗಿ ಬಿಜೆಪಿಯ ಖಾಲಿ ಚೊಂಬಿಗೆ ಮತ ಹಾಕ್ತೀರಾ? ನಿಮ್ಮ ಜೇಬು ತುಂಬಿಸುವ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿ ನುಡಿದಂತೆ ನಡೆಯುವ ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ತೀರೋ? ಎನ್ನುವುದನ್ನು ಯೋಚಿಸಿ ತೀರ್ಮಾನಿಸಿ ಎಂದು ಹೇಳಿದರು.
ಮೊದಲ ಹಂತದ ಮತದಾನದಲ್ಲೇ ಬಿಜೆಪಿಯ ಚಿತ್ರ ವಿಫಲವಾಗಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
18ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಿನ್ನೆ 21 ರಾಜ್ಯಗಳಲ್ಲಿ 102 ಕ್ಷೇತ್ರಗಳಲ್ಲಿ ನಡೆದಿದೆ. ತಮಿಳುನಾಡು (39), ಪುದುಚೇರಿ (1), ಅರುಣಾಚಲ ಪ್ರದೇಶ (2), ಅಸ್ಸಾಂ (5), ಬಿಹಾರ (4), ಛತ್ತೀಸ್‌ಗಢ (1), ಮಧ್ಯಪ್ರದೇಶ (6), ಮಹಾರಾಷ್ಟ್ರ (5), ಮಣಿಪುರ (2), ಮೇಘಾಲಯ (2), ಮಿಜೋರಾಂ (1), ನಾಗಾಲ್ಯಾಂಡ್ (1), ರಾಜಸ್ಥಾನ (12), ಸಿಕ್ಕಿಂ (1), ತ್ರಿಪುರ (1), ಉತ್ತರ ಪ್ರದೇಶ (8), ಉತ್ತರಾಖಂಡ್ (5) , ಪಶ್ಚಿಮ ಬಂಗಾಳ (3), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಜಮ್ಮು ಮತ್ತು ಕಾಶ್ಮೀರ (1) ಮತ್ತು ಲಕ್ಷದ್ವೀಪ (1) ಮುಂತಾದ ರಾಜ್ಯಗಳಲ್ಲಿ ನಿನ್ನೆ ಮೊದಲ ಹಂತದ ಮತದಾನ ನಡೆದಿತ್ತು. ಒಟ್ಟು ಶೇ.64ರಷ್ಟು ಮತಗಳು ದಾಖಲಾಗಿವೆ.
ತಮಿಳುನಾಡಿನಲ್ಲಿ ನಿನ್ನೆ ಬೆಳಗ್ಗೆ 7 ಗಂಟೆಯಿಂದ ಬಿರುಸಿನಿಂದ ಮತದಾನ ನಡೆದಿದೆ. ಬೆಳಗ್ಗೆಯಿಂದಲೇ ಜನರು ಉತ್ಸಾಹದಿಂದ ಮತದಾನ ಮಾಡಿದರು. ತಮಿಳುನಾಡಿನಲ್ಲಿ ಶೇ.69ರಷ್ಟು ಮತದಾನವಾಗಿದೆ. ಅದೇ ರೀತಿ ಬಿಹಾರದ 4 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.47.49ರಷ್ಟು ಮತದಾನವಾಗಿದೆ.
ಈ ಹಿನ್ನಲೆಯಲ್ಲಿ, ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಅವರು ಮೊದಲ ಹಂತದ ಮತದಾನದಲ್ಲಿಯೇ ಬಿಜೆಪಿಯ ಚಿತ್ರ ಸೋತಿದೆ ಎಂದು ಹೇಳಿದ್ದಾರೆ. ತೇಜಸ್ವಿ ಯಾದವ್ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, “400 ಸ್ಥಾನಗಳು ಎಂದ ಬಿಜೆಪಿಯ ಚಿತ್ರ ಮೊದಲ ಹಂತದ ಮತದಾನದಲ್ಲೇ ವಿಫಲವಾಗಿದೆ. ಅವರ ಸುಳ್ಳಿನ ಪರ್ವತಗಳು ಮತ್ತು ವರದಿಗಳೆಲ್ಲವೂ ಕುಸಿದೋಗಿವೆ. ಬಿಜೆಪಿಯ ದಿನಗಳು ಈಗ ಮುಗಿದಿವೆ” ಎಂದು ಹೇಳಿದ್ದಾರೆ.
ಅಂತೆಯೇ, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ “ಭಾರತಕ್ಕೆ ಜಯವೇ” ಎಂದು ಹೇಳಿರುವುದು ಗಮನಾರ್ಹ.
ಕೊಯಮತ್ತೂರು: ‘ಕೊಯಮತ್ತೂರು ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ’ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಕೊಯಮತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣಾಮಲೈ, “ಕೊಯಮತ್ತೂರು ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ. ಚುನಾವಣಾ ವೀಕ್ಷಕರು, ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬಿಜೆಪಿ ವತಿಯಿಂದ ದೂರು ನೀಡಲಾಗಿದೆ. ಆದರೂ ಈ ಒಂದು ಲಕ್ಷ ಮತಗಳಿಗೆ ಯಾರು ಹೊಣೆ. ಇದು ಡಿಎಂಕೆಯ ರಾಜಕೀಯ ಷಡ್ಯಂತ್ರ” ಎಂದು ಹೇಳಿದ್ದಾರೆ.
ಕೊಯಮತ್ತೂರು ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ ಎಂದು ಚುನಾವಣೆ ಮುಗಿಯುವ ಸಂದರ್ಭದಲ್ಲಿ ಹೇಳುತ್ತಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ನಗೆಪಾಟಿಲಿಗೆ ಕಾರಣವಾಗಿದೆ.
ಈ ಹಿಂದೆಯೇ ಪೋಲಿಂಗ್ ಏಜೆಂಟರನ್ನು ನೇಮಕಮಾಡಿ ಯಾವ ಮತದಾರರು ಬದುಕಿದ್ದಾರೆ, ಎಷ್ಟು ಜನ ಸತ್ತಿದ್ದಾರೆ, ಎಷ್ಟು ಜನ ತಮ್ಮ ಮನೆಯನ್ನು ಬದಲಾಯಿಸಿಕೊಂಡಿದ್ದಾರೆ, ಎಷ್ಟು ಜನರು ಕ್ಷೇತ್ರಕ್ಕೆ ಹೊಸದಾಗಿ ಬಂದಿದ್ದಾರೆ ಎಂದೆಲ್ಲಾ ಸರ್ವೆ ಮಾಡಿಸಲಾಗಿದೆ. ಚುನಾವಣಾ ದಿನಾಂಕ ಘೋಷಣೆ ಮಾಡಿದ ನಂತರವೂ ಮತದಾರರನ್ನು ಸೇರಿಸಲು ಮತ್ತು ತೆಗೆದುಹಾಕಲು ಚುನಾವಣಾ ಆಯೋಗ ಸಾಕಷ್ಟು ಕಾಲಾವಕಾಶವನ್ನೂ ನೀಡಿತ್ತು? ಕೊಯಮತ್ತೂರು ಬಿಜೆಪಿ ಅದನ್ನು ಯಾಕೆ ಸದುಪಯೋಗ ಪಡಿಸಿಕೊಂಡಿಲ್ಲ? ಅಂತಿಮ ಮತದಾರರ ನೋಂದಣಿ, ಪರಿಶೀಲನೆ ಮತ್ತು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದಾಗ ಪಕ್ಷದ ಸದಸ್ಯರು ಏನು ಮಾಡುತ್ತಿದ್ದರು? ಆಗ ನಿಮಗೆ ಗೊತ್ತಿಲ್ಲವೇ ಒಂದು ಲಕ್ಷ ಮತದಾರರು ಮತ ಹೊಂದಿಲ್ಲದ ವಿಚಾರ? ರಾಷ್ಟ್ರೀಯ ಪಕ್ಷವಾದ ಬಿಜೆಪಿ ಇದನ್ನು ಆಗಲೇ ಯಾಕೆ ಸರಿಪಡಿಸಲಿಲ್ಲ? ಈ ವಿಚಾರದಲ್ಲಿ ಬಿಜೆಪಿ ಬಹಳ ಎಚ್ಚರಿಕೆ ವಹಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ನೀವು ಹೇಳುತ್ತಿರುವುದು ಸುಳ್ಳು.
ಈ ಮೂಲಕ ನೀವು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲೂ ಕೂಡ ಯೋಗ್ಯರಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಇದು ಚುನಾವಣೆಯಲ್ಲಿ ಸ್ಪರ್ಧಿಸುವ ಒಂದು ಪಕ್ಷದ ನಾಯಕನಿಗಿರುವ ಮೂಲ ಅರ್ಹತೆಯೇ? ಚುನಾವಣೆ ಗೆಲ್ಲಲು ಏನನ್ನೂ ಮಾಡದೇ ಬರೀ ಒಂದು ಲಕ್ಷ ಮತಗಳ ಅಂತರದಿಂದೆ ಗೆಲ್ಲುತ್ತೇನೆ ಎಂದೆಲ್ಲ ಬಡಾಯಿಕೊಚ್ಚಿಕೊಂಡು ಈಗ ಒಂದು ಲಕ್ಷ ಮತದಾರರು ಮತ ಹೊಂದಿಲ್ಲ; ಮತದಾನದಿಂದ ವಂಚಿತರಾಗಿದ್ದಾರೆ ಎಂದು ಕಥೆ ಹೇಳುತ್ತಿರುವುದು ನಾಚಿಕೆಗೇಡು. ಒಂದು ವೇಳೆ ಚುನಾವಣೆ ಸೋತಾಗ ಇದನ್ನೇ ಕಾರಣವಾಗಿ ಹೇಳಲು ಈಗಲೇ ತಯಾರಿ ಮಾಡಿಕೊಂಡಂತಿದೆ.
ಮತದಾನ ಮುಗಿಯುವ ಮುನ್ನವೇ ನಿಮ್ಮ ಮೂರನೇ ಸ್ಥಾನಕ್ಕೆ ಕಾರಣವನ್ನು ಕಂಡುಕೊಂಡಿದ್ದೀರಿ. ಇದನ್ನೇ ಜೂನ್ 4 ರಂದು ಹೇಳಲು ತಯಾರಾಗಿದ್ದಿರೀ…. ನಿಮ್ಮ ಸ್ನೇಹಿತರಿಗೂ ಇದೇ ಟೆಕ್ನಿಕಲ್ ಹೇಳಿಕೊಡಿ.
ಬೆಂಗಳೂರು: ನಮ್ಮ ದೇಶ ಚುನಾವಣೆಯ ಹೊಸ್ತಿಲಿನಲ್ಲಿದೆ. ಈ ಬಾರಿ ನಡೆಯುವಂತಹ ಚುನಾವಣೆಯು ಪ್ರಜಾಪ್ರಭುತ್ವ ಭಾರತದ ಭವಿಷ್ಯವನ್ನು ನಿರ್ಣಯಿಸುವ ಚುನಾವಣೆಯಾಗಿದೆ ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಹೇಳಿದ್ದಾರೆ.
“ಕಳೆದ ಹತ್ತು ವರ್ಷಗಳ ಆಡಳಿತ ಇಲ್ಲಿನ ಸಂವಿಧಾನದ ಆಶಯವನ್ನು ದುರ್ಬಲ ಪಡಿಸುವಂತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮುಂದೆ ಏನಾದರೂ ಈ ಅಧಿಕಾರ ಮುಂದುವರಿದರೆ ಸಂವಿಧಾನವನ್ನೇ ಬದಲಾಯಿಸುವ ಸಾಧ್ಯತೆ ಇದೆ. ಅವರು ಅದನ್ನು ಹೇಳುತ್ತಲೂ ಇದ್ದಾರೆ. ಮುಂದಿನ ದಿನಗಳು ನಿಜಕ್ಕೂ ಜಾತ್ಯಾತೀತ ತತ್ವಗಳಿಗೆ ಮಾರಕವಾಗಲಿದೆ. ಕೋಮುಪ್ರಚೋದನೆ ಮಾತ್ರ ಇವರ ಬಂಡವಾಳ. ಅದನ್ನು ಬಳಸಿಕೊಂಡು ಜನರನ್ನು ದಾರಿಗೆಡಿಸುತ್ತಿದ್ದಾರೆ.
ಧಾರ್ಮಿಕ ಭಾವನೆ ಕೆರಳಿಸುವ ಭಾಷಣದ ಮುಖಾಂತರ ಮತಪೆಟ್ಟಿಗೆ ಭದ್ರ ಪಡಿಸುತ್ತಿದ್ದಾರೆ. ಕಾರ್ಪೊರೇಟ್ ದಿಗ್ಗಜರ ಕೈಗೆ ದೇಶವನ್ನು ನೀಡುತ್ತಿದ್ದಾರೆ. ರೈತರನ್ನು ಕಡೆಗಣಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿ ಯುವಕರ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಾಗಿದೆ. ಅಡುಗೆ ಅನಿಲ ಗ್ರಹ ಬಳಕೆ ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಹೀಗೆ ದೇಶದ ಎಲ್ಲಾ ಮೂಲಭೂತ ಸಮಸ್ಯೆಗಳನ್ನೂ ಕಡೆಗಣಿಸಲಾಗುತ್ತಿದೆ. ಆದರೂ ಆಡಳಿತಾರೂಡರು ದೇಶದ ಅಭಿವೃದ್ಧಿಯ ಮಾತನಾಡುತ್ತಿದ್ದಾರೆ.
ದೇಶದ ಅಲ್ಪ ಸಂಖ್ಯಾತರಿಗೆ ಮತ್ತು ದಲಿತ, ಹಿಂದುಳಿದ ವರ್ಗಗಳಲ್ಲಿ ಅಭದ್ರತಾ ಭಾವನೆ ಹೆಚ್ಚಾಗುತ್ತಿದೆ. ಮಣಿಪುರದಲ್ಲಿ ಕ್ರೈಸ್ತರ ವಿರುದ್ಧ ನಡೆಯುತ್ತಿರುವಂತಹ ದಾಳಿಯ ಬಗ್ಗೆ ಕೇಂದ್ರ ಮೌನವಾಗಿದೆ. ಪ್ರತಿ ಪಕ್ಷಗಳ ಮೇಲೆ ಇಡಿ, ಐಟಿ ದಾಳಿಯ ಮೂಲಕ ಬೆದರಿಸಿ ಬಾಯ್ಮುಚ್ಚಿಸುವ ಶ್ರಮ ನಡೆಯುತ್ತಿವೆ. ತಮ್ಮ ಪಕ್ಷಕ್ಕೆ ಸೇರುವವರಿಗೆ ಕ್ಲೀನ್ ಚಿಟ್ ನೀಡುತ್ತಿದೆ. ಹೀಗೆ ಆಡಳಿತವು ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಹೀಗಿರುವಾಗ ಪ್ರತಿಪಕ್ಷಗಳ ಒಕ್ಕೂಟದ ಅಗತ್ಯ ಈ ದೇಶಕ್ಕೆ ಅಗತ್ಯವಿದೆ.
ಈ ದೇಶವನ್ನು ಈ ಸ್ವಾರ್ಥ ಹಿತಾಸಕ್ತಿಗಳಿಂದ ಕಾಪಾಡಬೇಕಾಗಿದೆ. ಮತದಾನ ಎಂಬ ಮೂಲಭೂತ ಹಕ್ಕುಗಳನ್ನು ಚಲಾಯಿಸುವ ಸಮಯ ಕೂಡಿ ಬಂದಿದೆ. ಇದನ್ನು ಸಮರ್ಪಕವಾಗಿ ಬಳಸಬೇಕಾಗಿದೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರೂ ಇದರಲ್ಲಿ ಭಾಗಿಯಾಗುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಇದರ ಅಗತ್ಯವಿದೆ. ಭಾರತ ಉತ್ತಮ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಇದರಲ್ಲಿ ಕೈಜೋಡಿಸಬೇಕಾಗಿದೆ” ಎಂದು ವೆಲ್‌ಫೇರ್ ಪಾರ್ಟಿಯ ತಾಹೇರ್ ಹುಸೇನ್ ಹೇಳಿದ್ದಾರೆ.
• ಡಿ.ಸಿ.ಪ್ರಕಾಶ್, ಸಂಪಾದಕರು
ಪ್ರಧಾನಿ ಮೋದಿಯವರು, ‘ಈ ಬಾರಿ 370 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಲಿದೆ’ ಎಂದು ಹೇಳಿದ ಮೇಲೆ ಬಿಜೆಪಿ ಸದಸ್ಯರು ಉತ್ಸಾಹದಿಂದ ‘ಮತ್ತೊಮ್ಮೆ ಮೋದಿ… ಮತ್ತೊಮ್ಮೆ ಮೋದಿ ‘ ಎಂಬ ಘೋಷಣೆಯನ್ನು ಎತ್ತುತ್ತಿದ್ದಾರೆ. ಆದಾಗ್ಯೂ, ಭಾರತದಾದ್ಯಂತ ನೆಲದ ವಾಸ್ತವತೆ (Ground Reality) ಹೇಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮೂರನೇ ಬಾರಿ ಗೆದ್ದು ಆಡಳಿತ ಮುಂದುವರಿಸುವ ಹಠಕ್ಕೆ ಬಿದ್ದಿರುವ ಬಿಜೆಪಿ, ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಕ್ಷೇತ್ರದಲ್ಲಿ ಗಂಭೀರತೆ ತೋರಿಸುತ್ತಿದೆ. ಒಟ್ಟು 370 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅದನ್ನು ಹೇಗಾದರೂ ಮಾಡಿ ಈಡೇರಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಗಂಭೀರತೆ ತೋರಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರು 370, 400 ಎಂಬ ಸಂಖ್ಯೆಗಳನ್ನು ಹೇಳಿದ ಮೇಲೆ ಬಿಜೆಪಿಯವರು ‘ಮತ್ತೊಮ್ಮೆ ಮೋದಿ… ಮತ್ತೊಮ್ಮೆ ಮೋದಿ ‘ ಎಂಬ ಘೋಷಣೆಯನ್ನು ಎಲ್ಲಡೆಯೂ ಎತ್ತುತ್ತಿದ್ದಾರೆ. ಆದಾಗ್ಯೂ, ಭಾರತದಾದ್ಯಂತ ಗ್ರೌಂಡ್ ರಿಯಾಲಿಟಿ ಹೇಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸುತ್ತದೆಯೇ? ಮೋದಿ ಪ್ರಧಾನಿ ಕುರ್ಚಿ ಉಳಿಸಿಕೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳು ಒಂದೆಡೆಯಾದರೇ ಬಿಜೆಪಿಗೆ ಎಷ್ಟು ಸ್ಥಾನ ಸಿಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
2014 ಮತ್ತು 2019ರ ಲೋಕಸಭಾ ಚುನಾವಣೆಗಿಂತ 2024ರ ಚುನಾವಣೆ ಅಖಾಡ ಭಿನ್ನವಾಗಿದೆ. 2014ರಲ್ಲಿ ಮೋದಿ ಅಲೆ ಭಾರತವನ್ನು ಆವರಿಸಿದ್ದು ಸ್ಪಷ್ಟವಾಗಿತ್ತು. ಆದರೆ, 2019ರಲ್ಲಿ ಮೋದಿ ಪರ ಅಲೆ ಎದ್ದಂತೆ ಕಾಣಲಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಎರಡು ಕೋಟಿ ಜನರಿಗೆ ಉದ್ಯೋಗದ ಭರವಸೆಗಳನ್ನು ಈಡೇರಿಸದಿರುವುದು ಮತ್ತು ರೈತರ ಆಕ್ರೋಶದ ಹಿನ್ನೆಲೆಯಲ್ಲಿ 2019ರ ಚುನಾವಣೆ ನಡೆಯಿತು. ಅದರಲ್ಲಿ ಬಿಜೆಪಿ 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಆ ಯಶಸ್ಸಿಗೆ ಕಾರಣ ಮೋದಿ ಅಲೆಯಲ್ಲ ಎಂಬುದು ಎಲ್ಲರ ಅಭಿಪ್ರಾಯ.
ಪುಲ್ವಾಮಾ ದಾಳಿಯಲ್ಲಿ ಅರೆಸೇನಾ ಪಡೆ ಯೋಧರ ಹತ್ಯೆಯ ಘಟನೆಯನ್ನು ಬಿಜೆಪಿ ತನ್ನ ಚುನಾವಣಾ ಗೆಲುವಿಗೆ ಬಳಸಿಕೊಂಡಿತು ಎಂದು ವಿರೋಧ ಪಕ್ಷಗಳು ಇನ್ನೂ ಟೀಕಿಸುತ್ತಿವೆ. ಆ ವಿಷಯದಲ್ಲಿ ಪುಲ್ವಾಮಾ ದಾಳಿಯ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸತ್ಯಪಾಲ್ ಮಲಿಕ್ ಮಾಡಿರುವ ಆರೋಪಗಳು ಕೂಡ ಆರೋಪಕ್ಕೆ ಪುಷ್ಟಿ ನೀಡಿವೆ.
ಹತ್ತು ವರ್ಷಗಳ ಕಾಲ ನಿರಂತರವಾಗಿ ಸರ್ಕಾರ ಅಧಿಕಾರದಲ್ಲಿದ್ದರೆ ನಾನಾ ಕಾರಣಗಳಿಂದ ಜನರಲ್ಲಿ ಆಡಳಿತ ವಿರೋಧಿ ಭಾವನೆ ಮೂಡುವುದು ಸಹಜ. ಅಲ್ಲದೆ ಕರ್ನಾಟಕ ಹೊರತುಪಡಿಸಿ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ವಿವಿಧ ಸಮೀಕ್ಷೆಗಳು ಹೇಳುತ್ತಿವೆ.
ಈ ಹಿನ್ನಲೆಯಲ್ಲಿ, ಉತ್ತರ ಭಾರತದಲ್ಲಿ ಬಿಜೆಪಿಯ ಗೆಲುವಿನ ಮೇಲೆ ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿರ್ಧಾರವಾಗಲಿದೆ. ಬಿಜೆಪಿ ಹೇಳುವಂತೆ ಉತ್ತರ ಭಾರತದಲ್ಲಿ ಮೋದಿ ಅಲೆ ಬೀಸಿದರೆ ಬಿಜೆಪಿ ಗಮನಾರ್ಹ ಸ್ಥಾನಗಳನ್ನು ಗೆಲ್ಲಲಿದೆ. ಆದರೆ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಸದ್ಯದ ಗ್ರೌಂಡ್ ರಿಯಾಲಿಟಿ ನೋಡಿದರೆ ಬಿಜೆಪಿ ಹೇಳುವಷ್ಟು ಸೀಟು ಪಡೆಯಲು ತೀವ್ರ ಪೈಪೋಟಿ ಇರಲಿದೆ ಎಂದೇ ತೋರುತ್ತದೆ.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲೇ ಪರಿಸ್ಥಿತಿಯು ಪ್ರಸ್ತುತ ಸವಾಲುಗಳನ್ನು ಎದುರಿಸುವಂತಾಗಿದೆ. ಗುಜರಾತ್‌ನಲ್ಲಿ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಅಲ್ಲಿನ ಎಲ್ಲಾ 26 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಂಡಿತು. ಆದರೆ, ಈ ಬಾರಿ ಬಿಜೆಪಿಯ ಆಂತರಿಕ ಸಂಘರ್ಷ ಗಂಭೀರವಾಗಿ ನಡೆಯುತ್ತಿವೆ. ಹಲವು ಕ್ಷೇತ್ರಗಳಲ್ಲಿ ವರಿಷ್ಠರು ಘೋಷಿಸಿದ ಅಭ್ಯರ್ಥಿಗಳಿಗೆ ಸ್ವ ಪಕ್ಷದಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಭ್ಯರ್ಥಿಗಳನ್ನು ಬದಲಾಯಿಸಬೇಕಾಯಿತು.
ಗುಜರಾತ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಸಚಿವ ಪರಶೋತ್ತಮ್ ರೂಪಲಾ, ರಜಪೂತ ಮಹಿಳೆಯರನ್ನು ಅವಮಾನಿಸಿ ಮಾತನಾಡಿದ್ದರು ಎಂಬ ಕಾರಣಕ್ಕೆ ಇಡೀ ರಜಪೂತ ಸಮುದಾಯವು ಬಿಜೆಪಿ ವಿರುದ್ಧ ಒಗ್ಗೂಡಿ ನಿಂತಿದೆ. ಬಿಜೆಪಿ ಕಚೇರಿ ಎದುರು ರಜಪೂತ ಸಮುದಾಯದ ಮಹಿಳೆಯರು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ಸಂಚಲನ ಮೂಡಿಸಿದೆ.
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೇ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಆಗಾಗ ಮೈತ್ರಿ ಬದಲಾವಣೆಯಿಂದ ನಿತೀಶ್ ಕುಮಾರ್ ಅವರನ್ನು ಎಲ್ಲರೂ ‘ಪಲ್ಟುಕುಮಾರ್’ ಎಂದು ಮೂದಲಿಸುತ್ತಿರುವ ಹಿನ್ನಲೆಯಲ್ಲಿ, ಆ ಮೈತ್ರಿಗೆ ಹೆಚ್ಚಿನ ಯಶಸ್ಸು ಸಿಗುವುದಿಲ್ಲವೆಂದು ಹೇಳಲಾಗುತ್ತಿದೆ. ತೇಜಸ್ವಿ ಯಾದವ್‌ಗೆ ಬೆಂಬಲ ಹೆಚ್ಚಾಗುತ್ತಿದ್ದಂತೆ, ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಮಹತ್ವದ ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ ಎಂಬ ವರದಿಗಳಿವೆ. ಉತ್ತರ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇದೆ.
ಉತ್ತರಪ್ರದೇಶದಲ್ಲಿ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎನ್ನುತ್ತಾರೆ ರಾಷ್ಟ್ರ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜಕೀಯ ವೀಕ್ಷಕರು. ಯುಪಿಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆಯಲ್ಲಿ ಸ್ವಲ್ಪ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅದು ಬಿಜೆಪಿಗೆ ಹಿನ್ನಡೆಯಾಗಲಿದೆ.
ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರದಲ್ಲಿ ಅವರ ಸಾಧನೆಗಳನ್ನು ಪ್ರಸ್ತಾಪಿಸಿ ಮತ ಕೇಳದೇ ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಜೊತೆ ಹೋಲಿಕೆ ಮಾಡುತ್ತಿದ್ದು, ಉತ್ತರಾಧಿಕಾರ ರಾಜಕಾರಣದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಇದು ಕೂಡ ಅವರಿಗೆ ಹಿನ್ನಡೆಯಾಗಿದೆ. ಸದ್ಯ ಬಿಜೆಪಿ ಹೇಳಿಕೊಳ್ಳುವಂತಹ ಸಂಖ್ಯಾಬಲ ಗೆಲ್ಲಲು ಬಿಜೆಪಿ ತೀವ್ರ ಪೈಪೋಟಿ ಎದುರಿಸಬೇಕಾಗಿದೆ.
ಮುಂಬೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ “ಇಂಡಿಯಾ” ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮಗೊಂಡಿದೆ. ದೇಶದ 18ನೇ ಸಂಸದೀಯ ಲೋಕಸಭೆ ಚುನಾವಣೆಯ ದಿನಾಂಕಗಳು ಪ್ರಕಟಗೊಂಡಿದ್ದು, ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷಗಳಾದ “ಇಂಡಿಯಾ” ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಹಿನ್ನಲೆಯಲ್ಲಿ, ಮಹಾರಾಷ್ಟ್ರದಲ್ಲಿ “ಇಂಡಿಯಾ” ಮೈತ್ರಿ ಪಕ್ಷಗಳ ನಡೆವೆ ಸೀಟು ಹಂಚಿಕೆ ಅಂತಿಮಗೊಂಡಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್, ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲ್ ಜಂಟಿಯಾಗಿ ಸೀಟು ಹಂಚಿಕೆ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು 17 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪ್ರಕಟಣೆ ಹೊರಡಿಸಿದೆ.
“ಇಂಡಿಯಾ” ಮೈತ್ರಿಕೂಟದ ಒಪ್ಪಂದದ ನಂತರ ಶರದ್ ಪವಾರ್ ಅವರ ಎನ್‌ಸಿಪಿ ಮಹಾರಾಷ್ಟ್ರದ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ರಾಜ್ಯದ 21 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಏತನ್ಮಧ್ಯೆ, ದೆಹಲಿ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ “ಇಂಡಿಯಾ” ಮೈತ್ರಿಕೂಟದ ನಡುವೆ ಸೀಟು ಹಂಚಿಕೆ ಈಗಾಗಲೇ ಪೂರ್ಣಗೊಂಡಿದೆ ಎಂಬುದು ಗಮನಾರ್ಹ.
ಚುನಾವಣಾ ಬಾಂಡ್‌ಗಳ ಮೂಲಕ 45 ಸಂಶಯಾಸ್ಪದ ಕಂಪನಿಗಳಿಂದ ಬಿಜೆಪಿ 1,068 ಕೋಟಿ ರೂ. ಸಂಗ್ರಹ: ತನಿಖೆಗೆ ಆಮ್ ಆದ್ಮಿ ಆಗ್ರಹ!
ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಯು 45 ಸಂಶಯಾಸ್ಪದ ಕಂಪನಿಗಳಿಂದ 1,068 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ನಿನ್ನೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಜಾಸ್ಮಿನ್ ಶಾ ಅವರು, “ಬಿಜೆಪಿಗೆ 45 ಸಂಶಯಾಸ್ಪದ ಕಂಪನಿಗಳು ರೂ.1,068 ಕೋಟಿಯವರೆಗೆ ದೇಣಿಗೆ ನೀಡಿದೆ. ಅವು ನಷ್ಟದ ಕಂಪನಿಗಳಾಗಿವೆ. ಅಥವಾ ಅವರು ತೆರಿಗೆಗಳನ್ನು ಪಾವತಿಸದವರು ಅಥವಾ ಲಾಭಕ್ಕಿಂತ ಹೆಚ್ಚಾಗಿ ದೇಣಿಗೆ ನೀಡಿದವರಾಗಿದ್ದಾರೆ.
ಏಳು ವರ್ಷಗಳಲ್ಲಿ 33 ಕಂಪನಿಗಳು ಒಟ್ಟು ಒಂದು ಲಕ್ಷ ಕೋಟಿ ರೂಪಾಯಿಯವರೆಗೆ ನಷ್ಟ ಅನುಭವಿಸಿದ ಕಂಪನಿಗಳಾಗಿರುತ್ತವೆ. ಈ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 450 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿರುತ್ತವೆ. ಈ ಪೈಕಿ 17 ಕಂಪನಿಗಳು ಶೂನ್ಯ ತೆರಿಗೆ ಅಥವಾ ಋಣಾತ್ಮಕ ತೆರಿಗೆ ಪಾವತಿಸಿದ ಕಂಪನಿಗಳಾಗಿವೆ.
ಇದಲ್ಲದೆ, ಈ ಕಂಪನಿಗಳು ತೆರಿಗೆ ವಿನಾಯಿತಿಗಳನ್ನು ಸಹ ಪಡೆದಿರುತ್ತವೆ. ಅಲ್ಲದೆ, ಆರು ಕಂಪನಿಗಳು ಬಿಜೆಪಿಗೆ 600 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿವೆ. ಆ ಮೊತ್ತವು ಆ ಕಂಪನಿಗಳ ಲಾಭಕ್ಕಿಂತ ಹೆಚ್ಚಿನ ಮೊತ್ತವಾಗಿರುತ್ತದೆ. ಇನ್ನೊಂದು ಕಂಪನಿ ಅವರ ಲಾಭಕ್ಕಿಂತ 93 ಪಟ್ಟು ಹೆಚ್ಚು ನೀಡಿದೆ. ಮೂರು ಕಂಪನಿಗಳು 28 ಕೋಟಿ ದೇಣಿಗೆ ನೀಡಿ ಶೂನ್ಯ ತೆರಿಗೆ ಪಾವತಿಸಿವೆ. ಉದಾಹರಣೆಗೆ, ನಷ್ಟದ ನಡುವೆಯೂ ಅನೇಕ ಕಂಪನಿಗಳು ಉದಾರವಾಗಿ ಬಿಜೆಪಿಗೆ ದೇಣಿಗೆ ನೀಡಿದವು. ಅದರಲ್ಲಿ ಪ್ರಮುಖವಾದದ್ದು ಭಾರ್ತಿ ಏರ್‌ಟೆಲ್ ಕಂಪೆನಿ.
77,000 ಕೋಟಿ ನಷ್ಟ ಅನುಭವಿಸಿದರೂ ಕಂಪನಿ 200 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದಕ್ಕೆ ಪ್ರತಿಯಾಗಿ ರೂ.8,200 ಕೋಟಿ ತೆರಿಗೆ ರಿಯಾಯಿತಿ ಪಡೆದುಕೊಂಡಿದೆ. ಇನ್ನೊಂದು ಕಂಪನಿ DLF. 7 ವರ್ಷಗಳಲ್ಲಿ 130 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಆದರೂ 25 ಕೋಟಿ ರೂಪಾಯಿ ದೇಣಿಗೆ ನೀಡಿ, 20 ಕೋಟಿ ರೂಪಾಯಿ ತೆರಿಗೆ ಲಾಭವನ್ನು ಪಡೆದುಕೊಂಡಿದೆ. ಧರಿವಾಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ 115 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿ, ಬಿಜೆಪಿಗೆ ಸುಮಾರು 24.96 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ. ಈ ಕಂಪನಿಯ ನಷ್ಟ ರೂ.299 ಕೋಟಿಯಾಗಿದೆ. ಹೀಗಾಗಿ ಅವರು ಶೂನ್ಯ ತೆರಿಗೆ ಪಾವತಿಸಿದ್ದಾರೆ.
ಅದೇ ರೀತಿ ಪಿಆರ್‌ಎಲ್ ಡೆವಲಪರ್ಸ್ 20 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, 10 ಕೋಟಿ ರೂಪಾಯಿ ದೇಣಿಗೆ ನೀಡಿ 4.7 ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ. ಈ ಕಂಪನಿ 1550 ಕೋಟಿ ನಷ್ಟವನ್ನು ಅನುಭವಿಸಿದ ಕಂಪನಿಯಾಗಿದೆ. ಯುಜಿಯಾ ಫಾರ್ಮಾ ಲಿಮಿಟೆಡ್ ಶರತ್ ಚಂದ್ರ ರೆಡ್ಡಿ ಅವರ ಕಂಪನಿಯಾಗಿದೆ. 7 ವರ್ಷದಲ್ಲಿ 28 ಕೋಟಿ ನಷ್ಟ ಅನುಭವಿಸಿದ್ದರೂ ಚುನಾವಣಾ ಬಾಂಡ್ ನಿಧಿಯಾಗಿ 15 ಕೋಟಿ ನೀಡಿ, ರೂ.7.20 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.
7 ವರ್ಷದಲ್ಲಿ ರೂ.86 ಕೋಟಿ ನಷ್ಟವನ್ನು ಉಂಟುಮಾಡಿಕೊಂಡಿದ್ದ ಮೈತ್ರಾ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿ, 19 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ, 9.99 ಕೋಟಿ ಪಾವತಿಸುವ ಮೂಲಕ ರೂ.126 ಕೋಟಿ ತೆರಿಗೆ ವಿನಾಯಿತಿ ಪಡೆದುಕೊಂಡಿದೆ.
ಪಿರಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 10 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಮೂಲಕ 16,376 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದರೂ 10 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ. ಇದಕ್ಕೆ ರೂ.5178.50 ಕೋಟಿ ರೂ. ತೆರಿಗೆ ವಿನಾಯಿತಿ ಸಿಕ್ಕಿದೆ.
ಓರಿಯಂಟಲ್ ಸೌತ್ ದೆಹಲಿ ಹೊಟೇಲ್ ಪ್ರೈವೇಟ್ ಲಿಮಿಟೆಡ್ 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದು, 5 ಕೋಟಿ ದೇಣಿಗೆಯನ್ನೂ ನೀಡಿದೆ. ಕಂಪನಿ 49 ಕೋಟಿ ನಷ್ಟವನ್ನು ಅನುಭವಿಸಿದ್ದು, ಶೂನ್ಯ ತೆರಿಗೆ ಪಾವತಿಸಿದೆ. ವಿಲೇಜ್ ಡಿ ನಂದಿ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್‌ಗಳನ್ನು ರೂ.5 ಕೋಟಿಗೆ ಖರೀದಿಸಿದೆ. ಮತ್ತು ರೂ.48 ಕೋಟಿ ನಷ್ಟದ ಹೊರತಾಗಿಯೂ, ಸಂಪೂರ್ಣ ಮೊತ್ತವನ್ನು ದೇಣಿಗೆಯಾಗಿ ನೀಡಿದೆ.
ರೂ.167 ಕೋಟಿ ನಷ್ಟವನ್ನು ಅನುಭವಿಸಿದ ಟಕಿಡೋ ಲೀಸಿಂಗ್ ಆಪರೇಟರ್ಸ್ ಪ್ರೈವೇಟ್ ಲಿಮಿಟೆಡ್ 4 ಕೋಟಿ ಮೌಲ್ಯದ ಬಾಂಡ್ ಖರೀದಿಸಿ ಸಂಪೂರ್ಣ ಹಣವನ್ನು ನೀಡಿದೆ. ಇದಲ್ಲದೇ ಇನ್ನೂ ಹಲವು ಕಂಪನಿಗಳು ತಮ್ಮ ಲಾಭದ ಆರು ಪಟ್ಟು ಹಣವನ್ನು ಉದಾರವಾಗಿ ನೀಡಿದೆ. ಇದೆಲ್ಲವೂ ಅತ್ಯಂತ ಅನುಮಾನಾಸ್ಪದವಾಗಿದೆ. ಈ ಕಂಪನಿಗಳು ಮತ್ತು ಸಂಬಂಧಪಟ್ಟ ಬಿಜೆಪಿ ಮುಖಂಡರ ವಿರುದ್ಧ ಕೂಡಲೇ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.