ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಜಲ ವಿವಾದ Archives » Dynamic Leader
November 23, 2024
Home Posts tagged ಜಲ ವಿವಾದ
ರಾಜಕೀಯ

ಬೆಂಗಳೂರು: ಕಾವೇರಿ ಜಲವಿವಾದ ಕುರಿತಂತೆ ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು:

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ ದುರದೃಷ್ಟವಶಾತ್‌ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ನಾವು ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ. ಈ ವರೆಗೆ 99 ಟಿಎಂಸಿ ನೀರು ಕೊಡಬೇಕಾಗಿತ್ತು. 37.7 ಟಿಎಂಸಿ ನೀರು ಬಿಡಲಾಗಿದೆ. ಈಗಲೂ ನೀರು ಬಿಡಲಾಗದೆ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. 33 ಟಿಎಂಸಿ ಕುಡಿಯುವ ನೀರಿಗಾಗಿ ಬೇಕು. ಜೊತೆಗೆ 3 ಟಿಎಂಸಿ ಕೈಗಾರಿಕೆಗಳಿಗೆ ಬೇಕು. ಆದರೆ ಈಗ ನಾಲ್ಕೂ ಜಲಾಶಯಗಳಿಂದ ಲಭ್ಯವಿರುವುದು 53 ಟಿಎಂಸಿ ನೀರು ಮಾತ್ರ. ಬೆಳೆಗಳಿಗೆ ಕಟ್ಟುನೀರು ಬಿಡಲಾಗುತ್ತಿದೆ. ಇದರಲ್ಲಿ ನಾವು 33 ಟಿಎಂಸಿ ಕುಡಿಯುವ ನೀರಿಗೆ ಹಾಗೂ 3 ಟಿಎಂಸಿ ಕೈಗಾರಿಕೆಗಳಿಗೆ ಒದಗಿಸಬೇಕಾಗುತ್ತದೆ. ಬೆಳೆಗಳಿಗೆ ಸಾಕಾಗುವುದಿಲ್ಲ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಸಮಿತಿ ನಿನ್ನೆ ಐದು ಸಾವಿರ ಕ್ಯೂಸೆಕ್ಸ್‌ ನೀರು ಬಿಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆ ಕರೆದಿದ್ದೆವು. ತುರ್ತಾಗಿ ಆಯೋಜನೆಯಾದ ಈ ಸಭೆಗೆ ಕೆಲವರು ಪೂರ್ವನಿರ್ಧಾರಿತ ಕಾರ್ಯಕ್ರಮಗಳ ಕಾರಣ ಗೈರಾಗಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಲಾಗುವುದು. ಅಲ್ಲಿಯೂ ವಾಸ್ತವಾಂಶ ತಿಳಿಸುವ ಕೆಲಸ ಮಾಡಲಾಗುವುದು. ಈಗ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಬಗ್ಗೆ ಹಾಗೂ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಇದನ್ನೂ ಓದಿ: ನೆಲ, ಜಲ, ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ; ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು! – ಹೆಚ್.ಡಿ.ಕುಮಾರಸ್ವಾಮಿ

ಸರ್ವಪಕ್ಷ ನಿಯೋಗ ತೆರಳಲು ಅನುವು ಮಾಡಿಕೊಡುವಂತೆ ಪ್ರಧಾನಮಂತ್ರಿಯವರ ಸಮಯ ಕೇಳಿ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಸಂಸದರೂ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. 18 ರಿಂದ ಸಂಸತ್‌ ಅಧಿವೇಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಚರ್ಚಿಸಿ, ದೇಶದ ಗಮನ ಸೆಳೆಯಲಾಗುವುದು. ಇದಕ್ಕೆ ಎಲ್ಲರೂ ಸಹಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.