ಡಿ.ಸಿ.ಪ್ರಕಾಶ್ ಸಂಪಾದಕರು
ಮೋದಿ ಆಡಳಿತವನ್ನು ಕಿತ್ತೊಗೆಯಲು ನಿರ್ಧರಿಸಿರುವ ಪಕ್ಷಗಳ ನಾಯಕರು ಜೂನ್ 23 ರಂದು ಪಾಟ್ನಾದಲ್ಲಿ ಸಭೆ ಸೇರಲಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪೂರ್ವ ಪ್ರಯತ್ನದಲ್ಲಿ ನಡೆಯಲಿರುವ ಸಭೆಯಾಗಿರುವುದರಿಂದ ಇದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ.
ನಿತೀಶ್ ಕುಮಾರ್ ಅವರೇ ಪಾಟ್ನಾ ಸಭೆಯ ಹೀರೋ. ಏಕೆಂದರೆ ಒಂದಾಗಲು ಸಾದ್ಯವೇ ಇಲ್ಲವೆಂದ ಪಕ್ಷಗಳನ್ನೆಲ್ಲ ಒಟ್ಟುಗೂಡಿಸಿ, ಒಂದೇ ವೇದಿಕೆಗೆ ಕರೆತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹಾಗೂ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮುಂತಾದವುಗಳನ್ನು ಹೇಳಬಹುದು. ಕಳೆದ ತಿಂಗಳವರೆಗೆ ಕಾಂಗ್ರೆಸ್ ಜೊತೆ ಕೈಜೋಡಿಸುವ ಅವಕಾಶವೇ ಇಲ್ಲವೆಂದು ಹೇಳಿಕೊಂಡಿದ್ದ ಆ ಪರಿಸ್ಥಿತಿ ಈಗ ಸಂಪೂರ್ಣವಾಗಿ ಬದಲಾಗಿದೆ. ಅದಕ್ಕೆ ನಿತೀಶ್‌ಕುಮಾರ್ ಅವರ ಪ್ರಯತ್ನವೇ ಕಾರಣವಾಗಿದೆ.
ಸತತ ಎರಡು ಅವಧಿಗೆ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವ ಬಿಜೆಪಿಯ್ ವಿರುದ್ಧ, ಬಹುತೇಕ ಪಕ್ಷಗಳು ಒಗ್ಗೂಡಿರುವುದು ರಾಷ್ಟ್ರ ರಾಜಕಾರಣದ ಪ್ರಮುಖ ಘಟನೆಯಾಗಿದೆ. ಅದೇ ಸಮಯದಲ್ಲಿ, ಈ ಕಾರ್ಯಕ್ರಮ ದೊಡ್ಡ ಪರಿಣಾಮ ಬೀರಬೇಕಾದರೆ, ಭಾಗವಹಿಸುವ ಪಕ್ಷಗಳ ಪ್ರಮುಖ ನಾಯಕರು ಮಾತ್ರ ಸಭೆಯಲ್ಲಿ ಭಾಗವಹಿಸಬೇಕೆಂಬುದು ಷರತ್ತಾಗಿದೆ. ಆದರೆ ಬಿಜೆಪಿಗೆ ಪರ್ಯಾಯವಾಗಿರುವ ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈ ಸಭೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದರು. ಆದರೆ ಸಭೆಯಲ್ಲಿ ಪಕ್ಷಗಳ ನಾಯಕರು ಮಾತ್ರ ಭಾಗವಹಿಸಬೇಂಬ ನಿತೀಶ್ ಕುಮಾರ್ ಅವರ ಷರತ್ತನ್ನು ಒಪ್ಪಿಕೊಳ್ಳುವ ಮೂಲಕ ಖರ್ಗೆಯವರ ಭಾಗವಹಿಸುವಿಕೆಯನ್ನು ಖಚಿತಪಡಿಸಲಾಗಿದೆ.
ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಟಿ.ರಾಜಾ, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಉದ್ಧವ್) ಅಧ್ಯಕ್ಷ ಉದ್ಧವ್ ಠಾಕ್ರೆ, ಜಾರ್ಖಂಡ್ ಮುಕ್ತಿ ಮೋಚಾ ಅಧ್ಯಕ್ಷರೂ ಆಗಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರನ್ ಸೇರಿದಂತೆ 16 ರಿಂದ 20 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಕೆಲವು ನಾಯಕರನ್ನು ಹೊರತುಪಡಿಸಿ ಉಳಿದೆಲ್ಲ ವಿರೋಧ ಪಕ್ಷಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ನಾಯಕರಾಗಲೀ ಅಥವಾ ಬೇರೆ ಪಕ್ಷಗಳ ಮುಖಂಡರೇ ಆಗಲಿ ಇಂತಹ ಪ್ರಯತ್ನ ನಡೆಸಿದ್ದರೆ, ಇಷ್ಟು ಪಕ್ಷಗಳ ಒಪ್ಪಿಗೆ ಸಿಗುತ್ತಿತ್ತೇನೋ ಎಂಬ ಅನುಮಾನ ಮೂಡುತ್ತಿದೆ. ಹಿರಿಯ ರಾಜಕಾರಣಿ ನಿತೀಶ್ ಕುಮಾರ್ ಅವರು ಎಲ್ಲಾ ಪಕ್ಷಗಳ ನಾಯಕರೊಂದಿಗೆ ನಿಕಟ ಸ್ನೇಹವನ್ನು ಹೊಂದಿರುವುದರಿಂದ ಇದು ಸಾಧ್ಯವಾಗಿದೆ.
ಸಭೆಯ ದಿನಾಂಕವನ್ನು ಮೊದಲು ಜೂನ್ 12 ಎಂದು ಘೋಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಸಭೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡುವಂತೆ ಮನವಿ ಮಾಡಿದರು. ಜೂನ್ 23 ರಂದು ಸಭೆ ನಡೆಯಲಿದೆ ಎಂದು ನಿತೀಶ್ ಕುಮಾರ್ ಘೋಷಿಸಿದ್ದಾರೆ. ಸಭೆ ನಡೆಯುವ ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ನಂತರ ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದ ಶಿಮ್ಲಾವನ್ನು ಆಯ್ಕೆ ಮಾಡಬಹುದು ಎಂಬ ವರದಿಯೂ ಪ್ರಕಟವಾಗಿತು.
ಈ ಹಿನ್ನಲೆಯಲ್ಲಿ, ಪಾಟ್ನಾದಲ್ಲಿ ಸಭೆ ನಡೆಯಲಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಖಚಿತಪಡಿಸಿದ್ದಾರೆ. ವಿರೋಧ ಪಕ್ಷಗಳ ಸಭೆಗೆ ಹಲವು ನಾಯಕರ ಹಾಜರಾತಿಯನ್ನು ಖಚಿತಪಡಿಸಿರುವುದಕ್ಕೆ ನಿತೀಶ್ ಕುಮಾರ್ ಅವರ ಪ್ರಯತ್ನಕ್ಕೆ ಇದು ಮೊದಲ ಯಶಸ್ಸು ಎಂದು ಪರಿಗಣಿಸಲಾಗಿದೆ.