ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಲೋಕಸಭಾ ಚುನಾವಣೆ Archives » Dynamic Leader
November 26, 2024
Home Posts tagged ಲೋಕಸಭಾ ಚುನಾವಣೆ
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ; ಹಾಗಾಗಿ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಇದೆ. ಆದರೆ, ಯಾರೇ ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು; ಮರೆಯಬಾರದು.

ಅಖಿಲ ಕಾಂಗ್ರೆಸ್ ಸಮಿತಿಯು ಚುನಾವಣಾ ಭರವಸೆಗಳನ್ನು ಸಿದ್ಧಪಡಿಸಲು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ದೇಶದೆಲ್ಲೆಡೆ ಸಂಚರಿಸಿ ಹಲವರಿಂದ ಸಲಹೆ ಪಡೆಯಲಾಯಿತು. ವೆಬ್‌ಸೈಟ್ ಮೂಲಕವೂ ಪ್ರತಿಕ್ರಿಯೆಗಳನ್ನು ಪಡೆಯಲಾಯಿತು. ಅದರ ಆಧಾರದ ಮೇಲೆ ಭರವಸೆಗಳನ್ನು ಸಿದ್ಧಪಡಿಸಿ ಮೊನ್ನೆ ಪ್ರಕಟಿಸಲಾಯಿತು.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಆಗ ಮಾತನಾಡಿದ ಪಿ.ಚಿದಂಬರಂ, “ಕಳೆದ 10 ವರ್ಷಗಳಲ್ಲಿ ಯಾರನೆಲ್ಲ ಹೊರಗಿಡಲಾಯಿತೋ ಅಂತಹವರಿಗೆಲ್ಲ ನ್ಯಾಯ ಕೊಡಿಸಲು ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ” ಎಂದರು.

ಪ್ರಣಾಳಿಕೆಯಲ್ಲಿ, ದೇಶಾದ್ಯಂತ ಸಾಮಾಜಿಕ-ಆರ್ಥಿಕ ಮತ್ತು ಜಾತಿವಾರು ಸಮೀಕ್ಷೆ ನಡೆಸಲಾಗುವುದು. ರಾಜ್ಯ ಸರ್ಕಾರಗಳು ಬಯಸಿದಲ್ಲಿ NEET, CUET ನಂತಹ ಪರೀಕ್ಷೆಗಳನ್ನು ನಡೆಸಿಕೊಳ್ಳಬಹುದು. ಪ್ರತಿ ಕುಟುಂಬದಲ್ಲಿ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ನೀಡಲಾಗುವುದು. ಎಲ್ಲ ಜಾತಿಗಳಿಗೂ ಶೇ.10ರಷ್ಟು ಮೀಸಲಾತಿಯನ್ನು ವಿಸ್ತರಿಸಲಾಗುವುದು. ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರಲಾಗುವುದು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿದ ನಂತರವೇ ಜಾರಿಗೆ ತರಲಾಗುವುದು. 12ನೇ ತರಗತಿವರೆಗೆ ಕಡ್ಡಾಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಒಂದು ದೇಶ, ಒಂದು ಚುನಾವಣಾ ವ್ಯವಸ್ಥೆಯನ್ನು ತರುವುದಿಲ್ಲ. ಚುನಾವಣಾ ಪತ್ರಗಳ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು. ಎಂ.ಎಸ್.ಸ್ವಾಮಿನಾಥನ್ ಅವರ ಶಿಫಾರಸ್ಸು ಜಾರಿಗೆ ತರಲಾಗುವುದು. ಸರ್ಕಾರಿ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗುವುದು.

ಪಾಂಡಿಚೇರಿಗೆ ರಾಜ್ಯ ಸ್ಥಾನಮಾನ ನೀಡಲಾಗುವುದು. ಮಾಧ್ಯಮ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. 10 ವರ್ಷಗಳಲ್ಲಿ ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ಬಿಜೆಪಿ ಜಾರಿಗೊಳಿಸಿದ ಕಾನೂನುಗಳನ್ನು ವಿಶ್ಲೇಷಿಸಿ ಬದಲಾವಣೆಗಳನ್ನು ಮಾಡಲಾಗುವುದು. ನೋಟು ಅಮಾನ್ಯೀಕರಣ, ರಫೇಲ್ ಡೀಲ್, ಪೆಗಾಸಸ್ ಬೇಹುಗಾರಿಕೆ, ಚುನಾವಣಾ ಬಾಂಡ್ ಯೋಜನೆ ಕುರಿತು ತನಿಖೆ ನಡೆಸಲಾಗುವುದು. ಬಿಜೆಪಿ ಸೇರುವ ಮೂಲಕ ಕ್ರಿಮಿನಲ್ ಪ್ರಕರಣಗಳಿಂದ ಪಾರಾದವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು.

ಜನರ ಆಹಾರ, ಉಡುಗೆ, ಪ್ರೇಮ ವಿವಾಹ ಮತ್ತು ಭಾರತದ ಯಾವುದೇ ಭಾಗದಲ್ಲಿ ಪ್ರಯಾಣ ಬೆಳಸಿ ವಾಸಿಸುವಂತಹ ಜನರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಸೇನಾ ನೇಮಕಾತಿಗಾಗಿ ‘ಅಗ್ನಿಪತ್’ ಯೋಜನೆಯನ್ನು ರದ್ದುಗೊಳಿಸಲಾಗುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ನೀಡಲಾಗುವ ವೇತನವನ್ನು ರೂ.400ಕ್ಕೆ ಹೆಚ್ಚಿಸಲಾಗುವುದು. ಚೀನಾ ಆಕ್ರಮಿಸಿಕೊಂಡಿರುವ ನಮ್ಮ ನೆಲದ ಭಾಗವನ್ನು ಪುನಃಸ್ಥಾಪಿಸಲು ಕ್ರಮ. ಜಮ್ಮು ಮತ್ತು ಕಾಶ್ಮೀರಕ್ಕೆ ತಕ್ಷಣವೇ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲಾಗುವುದು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು.

ಕಳೆದೆರಡು ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್‌ಗೆ ಈ ಭರವಸೆಗಳು ಫಲ ನೀಡುತ್ತವೆಯೇ?
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ, ಬಯಸಿರುವ ರಾಜ್ಯಗಳಲ್ಲಿ ಮಾತ್ರ ನೀಟ್ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ. ಇದು ದೇಶಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಹಾಗಲ್ಲ; ಶಾಲೆಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕೂಡ ಅಕ್ರಮ ನಡೆಸಲಾಗುತ್ತದೆ. ಇದನ್ನು ಸಾಕ್ಷರ ಕುಟುಂಬಗಳು ಸ್ವಾಗತಿಸಿವೆ. ಜನರ ಆಹಾರ, ಉಡುಗೆ, ಪ್ರೇಮ ವಿವಾಹ ಮತ್ತು ಭಾರತದ ಯಾವುದೇ ಭಾಗದಲ್ಲಿ ಪ್ರಯಾಣ ಬೆಳಸಿ ವಾಸಿಸುವಂತಹ ಜನರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಹಾಗಾಗಿ ಇದು ಎಲ್ಲಾ ವರ್ಗದ ಜನರನ್ನು ಆಕರ್ಷಿಸಲಿದೆ. ಅದೇ ರೀತಿ ಒಂದು ಭಾಷಾ ನೀತಿಯನ್ನು ಜಾರಿಗೆ ತರಲು ಬಿಜೆಪಿ ಯೋಜಿಸಿದೆ. ಅದನ್ನು ತಡೆಯಲಿಕ್ಕಾಗಿ ಒಂದು ದೇಶ ಒಂದು ಚುನಾವಣೆಯನ್ನು ತರುವುದಿಲ್ಲ ಎಂದು ಹೇಳಲಾಗಿದೆ. ಕರ್ನಾಟಕದಂತಹ ರಾಜ್ಯಗಳಿಂದ ಹೆಚ್ಚಿನ ಯುವಕರು ಸೇನೆಗೆ ಸೇರುತ್ತಿದ್ದರು. ಅವರನ್ನು ತಡೆಯಲಿಕ್ಕಾಗಿಯೇ ‘ಅಗ್ನಿಪತ್’ ಯೋಜನೆಯನ್ನು ಜಾರಿಗೆ ತರಲಾಯಿತು.

ಅದನ್ನು ರದ್ದುಪಡಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಒಂದು ತಿಂಗಳ ಹಿಂದೆ ಪ್ರಕಟವಾದ ಸಮೀಕ್ಷೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ಹೇಳಲಾಗಿತ್ತು. ಆಗ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಗಿತ, ಕೇಜ್ರಿವಾಲ್ ಬಂಧನದಂತಹ ಸಮಸ್ಯೆಗಳಿರಲಿಲ್ಲ. ಹಾಗಾಗಿ ಈಗ ಬಿಜೆಪಿ ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ; ಹಾಗಾಗಿ “ಇಂಡಿಯಾ” ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಇದೆ. ಆದರೆ ಯಾರೇ ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು; ಮರೆಯಬಾರದು.