ಭುಜ್: ಗುಜರಾತ್ನ ಕಚ್ ಜಿಲ್ಲೆಯಲ್ಲಿ 12 ವರ್ಷದೊಳಗಿನ ನಾಲ್ವರು ಮಕ್ಕಳು ಸೇರಿದಂತೆ 12 ಜನರು ನಿಗೂಢ ಜ್ವರದಿಂದ ಸಾವನ್ನಪ್ಪಿದ್ದಾರೆ.
ಗುಜರಾತ್ನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ರಾಜ್ಯದ ವಿವಿಧೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ, ಕಚ್ ಜಿಲ್ಲೆ ವ್ಯಾಪ್ತಿಯ ಲಖ್ಪತ್ ತಾಲೂಕಿನಲ್ಲಿ 12 ಮಂದಿ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ. ಇದು ನ್ಯುಮೋನಿಯಾ (Pneumonia) ಆಗಿರಬಹುದು ಎಂದು ಹೇಳಲಾಗುತ್ತಿದ್ದರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಕಛ್ ಜಿಲ್ಲಾಧಿಕಾರಿ ಅಮಿತ್ ಅರೋರಾ, ‘ಆರೋಗ್ಯ ಇಲಾಖೆಯ 22 ಸದಸ್ಯರ ತಂಡ ಪೀಡಿತ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದು, ರೋಗದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವೈದ್ಯಕೀಯ ಸೇವೆಯನ್ನು ತೀವ್ರಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ‘ರೋಗಿಗಳು ಜ್ವರ, ನೆಗಡಿ, ಕೆಮ್ಮು, ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ’ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಜಿಲ್ಲಾ ಪಂ.ಸದಸ್ಯರೊಬ್ಬರು ‘ವೈದ್ಯರಿಗೆ ರೋಗವನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.