ಡಿ.ಸಿ.ಪ್ರಕಾಶ್ ಸಂಪಾದಕರು
ಹೊಸದೆಹಲಿ: ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಕೇಂದ್ರ ಕಾನೂನು ಆಯೋಗ ಮತ್ತೊಮ್ಮೆ ಅಭಿಪ್ರಾಯವನ್ನು ಕೇಳಿದೆ.
‘ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಧಾರ್ಮಿಕ ಸಂಘಟನೆಗಳು 30 ದಿನಗಳೊಳಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಿಕೊಳ್ಳಬಹುದು’ ಎಂದು ನಿನ್ನೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಬಿಜೆಪಿಯ ಪ್ರಮುಖ ಚುನಾವಣಾ ಘೋಷಣೆಯಾಗಿದೆ. ಇತ್ತೀಚೆಗಷ್ಟೇ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಇದು ಪ್ರಸ್ತಾಪವಾಗಿತ್ತು.
ಉತ್ತರಾಖಂಡ ಮುಂತಾದ ರಾಜ್ಯಗಳಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ಮತ್ತೆ ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಆರಂಭವಾಗಿದೆ. 2016ರಲ್ಲಿ 21ನೇ ಕಾನೂನು ಆಯೋಗವು ಈ ಕುರಿತು ಚರ್ಚೆ ನಡೆಸಿ, ವಿವಿಧ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಿ, 31 ಆಗಸ್ಟ್, 2018 ರಂದು, ತನ್ನ ಸಲಹಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.
ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ನೇತೃತ್ವದ ಕಾನೂನು ಆಯೋಗ ಸಲ್ಲಿಸಿದ ವರದಿಯಲ್ಲಿ, ‘ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಶ್ಲಾಘಿಸುವುದು ನಮ್ಮ ದೇಶದ ಅಡಿಪಾಯವಾಗಿದೆ ಅದೇ ಸಂದರ್ಭದಲ್ಲಿ ಒಂದು ನಿರ್ದಿಷ್ಟವಾದ ಸಮುದಾಯ ಅಥವಾ ಅವಕಾಶ ವಂಚಿತರು ಇದರಿಂದ ತೊಂದರೆ ಅನುಭವಿಸಬಾರದು.
ಆಯೋಗವು ತಾರತಮ್ಯ ಕಾನೂನುಗಳನ್ನು ಪರಿಶೀಲಿಸಿದೆ. ಪ್ರಸ್ತುತ ಸ್ಥಿತಿಯಲ್ಲಿ ಸಾಮಾನ್ಯ ನಾಗರಿಕ ಸಂಹಿತೆ ಅಗತ್ಯವಿಲ್ಲ; ಅಂತಹ ಪರಿಸ್ಥಿತಿಯೂ ಇಲ್ಲ’ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ‘ಹಲವು ದೇಶಗಳು ವಿವಿಧತೆಯಲ್ಲಿ ಏಕತೆಯನ್ನು ಒಪ್ಪಿಕೊಳ್ಳಲು ಆರಂಭಿಸಿವೆ. ನಮ್ಮ ದೇಶದಲ್ಲಿ ವಿವಿಧ ಭಿನ್ನತೆಗಳು ಅಸ್ತಿತ್ವದಲ್ಲಿದೆ. ಅದನ್ನು ತಾರತಮ್ಯ ಎಂದು ತೆಗೆದುಕೊಳ್ಳಬಾರದು; ಇದು ಬಲಿಷ್ಠ ಪ್ರಜಾಪ್ರಭುತ್ವದ ಸಂಕೇತ’ ಎಂದು ಅವರ ವರದಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬ ವಕೀಲರು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣದಲ್ಲಿ ಕಳೆದ ವರ್ಷ ಅಕ್ಟೋಬರ್ 13 ರಂದು ಕೇಂದ್ರ ಕಾನೂನು ಸಚಿವಾಲಯ ಸಲ್ಲಿಸಿರುವ ಅಫಿಡವೇಟ್‌ನಲ್ಲಿ, ‘ಸಂವಿಧಾನದ 44ನೇ ವಿಧಿಯು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸೂಚಿಸುತ್ತದೆ.
ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ, ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣತಂತ್ರದ ಉದ್ದೇಶವನ್ನು ಸಾಧಿಸುವ ಈ ಕಾಯಿದೆಯು ಅದನ್ನು ಖಚಿತಪಡಿಸುತ್ತದೆ. ಈ ಕಾಯಿದೆಯ ಪ್ರಕಾರ, ಯಾವುದೇ ತಾರತಮ್ಯವಿಲ್ಲದೆ ಇಡೀ ದೇಶ, ಎಲ್ಲಾ ಜನರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಖಚಿತಪಡಿಸಬೇಕು ಎಂದು ಕೇಂದ್ರ ಸರ್ಕಾರ ಬಯಸುತ್ತದೆ’ ಎಂದು ಉಲ್ಲೇಖಿಸಲಾಗಿದೆ.
ಅನೇಕ ಧರ್ಮಗಳು ಮತ್ತು ಪಂಗಡಗಳಿಗೆ ಸೇರಿದ ಜನರು, ಮದುವೆ ಮತ್ತು ಆಸ್ತಿಯಂತಹ ವಿಷಯಗಳಲ್ಲಿ ವಿಭಿನ್ನ ವೈಯಕ್ತಿಕ ಕಾನೂನುಗಳನ್ನು ಅನುಸರಿಸುವುದು ದೇಶದ ಏಕತೆಗೆ ವಿರುದ್ಧವಾಗಿದೆ. ಏಕರೂಪ ನಾಗರಿಕ ಸಂಹಿತೆ ಎಂದರೆ ಮದುವೆ, ವಿಚ್ಛೇದನ, ಜೀವನಾಂಶ, ಮಕ್ಕಳ ರಕ್ಷಣೆ ಮತ್ತು ನಿರ್ವಹಣೆ, ಕುಟುಂಬದ ಆಸ್ತಿ ಹಕ್ಕುಗಳು, ದತ್ತು ಮುಂತಾದ ಅನೇಕ ವೈಯಕ್ತಿಕ ಕಾನೂನುಗಳನ್ನು ಸೂಚಿಸುತ್ತದೆ.
ವಿವಿಧ ವೈಯಕ್ತಿಕ ಕಾಯಿದೆಗಳಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ತಿದ್ದುಪಡಿ ಮಾಡಿ, ಸಂವಿಧಾನದ 44ನೇ ವಿಧಿಯು ಎಲ್ಲಾ ಜನರನ್ನು ಒಂದು ಸಾಮಾನ್ಯ ನೆಲೆಯಲ್ಲಿ ಒಟ್ಟಿಗೆ ತರುವುದನ್ನು ಉಲ್ಲೇಖಿಸುತ್ತದೆ. ಸಂವಿಧಾನದ ಪ್ರಕಾರ ದೇಶಕ್ಕಾಗಿ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಈ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕೆ ಅಥವಾ ಬೇಡವೇ ಎಂಬುದನ್ನು ಜನರಿಂದ ಆಯ್ಕೆಯಾದ ಪ್ರತಿನಿಧಿಗಳನ್ನು ಒಳಗೊಂಡಿರುವ ಸಂಸತ್ತು ನಿರ್ಧರಿಸುತ್ತದೆ. ಈ ಸನ್ನಿವೇಶದಲ್ಲಿ, 21ನೇ ಕಾನೂನು ಆಯೋಗವು 2018ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಆ ಕಾನೂನು ಆಯೋಗದ ಅವಧಿ ಈಗಾಗಲೇ ಮುಗಿದಿದೆ.
ಆದ್ದರಿಂದ, ಅಸ್ತಿತ್ವದಲ್ಲಿರುವ 22ನೇ ಕಾನೂನು ಆಯೋಗದ ಮೂಲಕ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರ ಬಗ್ಗೆ ವಿವರವಾಗಿ ಅಧ್ಯಯನ ಮಾಡಲಾಗುತ್ತದೆ’ ಎಂದು ಹೇಳಿದೆ. ಇದರ ಆಧಾರದ ಮೇಲೆ ಇದೀಗ 22ನೇ ಕಾನೂನು ಆಯೋಗ, ಸಾರ್ವಜನಿಕರು ಮತ್ತು ಧಾರ್ಮಿಕ ಸಂಘಟನೆಗಳ ಅಭಿಪ್ರಾಯಗಳನ್ನು ಕೇಳಿದೆ.