ಬೆಂಗಳೂರು: ರಾಜಧಾನಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಇಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮತ್ತು ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ವಿಸ್ತೃತ ಚರ್ಚೆ ನಡೆಸಿದರು.
ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಚಾರ ಹಂಚಿಕೊಂಡ ಸಚಿವರು, “ನೂತನ ವಿಮಾನ ನಿಲ್ದಾಣಕ್ಕೆ ಐಡೆಕ್ ಸಂಸ್ಥೆಯು 7 ಜಾಗಗಳನ್ನು ಗುರುತಿಸಿದೆ. ವಿಮಾನ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎನ್ನುವುದನ್ನು ಬೆಂಗಳೂರು ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ತೀರ್ಮಾನಿಸಲಾಗುವುದು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜತೆ ಮಂಗಳವಾರ ಅಥವಾ ಬುಧವಾರ ಚರ್ಚಿಸಿ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕ್ಷಿಪ್ರಗತಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಹೇಳಿದರು.
“ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮಾತನಾಡಿ, “ನೂತನ ವಿಮಾನ ನಿಲ್ದಾಣದ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಈಗಾಗಲೇ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ, ಅವಕಾಶ ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಾಗುವುದು” ಎಂದರು.
ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, BBMP ಆಯುಕ್ತರಾದ ತುಷಾರ್ ಗಿರಿನಾಥ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಟಿ ಮುಂತಾದವರು ಉಪಸ್ಥಿತರಿದ್ದರು.